ಕೌಟುಂಬಿಕ ಸಾಮರಸ್ಯ ಸಾರುವ ‘ಸಂಧಿಕಾಲ’, ಲೇ: ಶ್ರೀಮತಿ ವಸುಮತಿ ಉಡುಪ.
ಶ್ರೀಮತಿ ವಸುಮತಿ ಉಡುಪರವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನವರು. ಇವರು ಹುಟ್ಟಿದ್ದು 18 ಏಪ್ರಿಲ್ರ 1948 ಲ್ಲಿ. ತಂದೆ ಶ್ರೀ ರಂಗಾಭಟ್ಟರು, ತಾಯಿ ಶ್ರೀಮತಿ ತ್ರಿಪುರಾಂಬ. ಇವರದ್ದು ಜಮೀನ್ದಾರಿ ಕುಟುಂಬ. ಇವರ ವಿದ್ಯಾಭ್ಯಾಸ ತಿರ್ಥಹಳ್ಳಿಯಲ್ಲಿ ಆಯಿತು. ಬಾಲ್ಯದಿಂದಲೇ ಕಥೆಗಳನ್ನು ಕೇಳುವ, ಸಿಕ್ಕಿದ ಕಥೆ ಪುಸ್ತಕಗಳನ್ನು ಆಸಕ್ತಿಯಿಂದ ಓದುವ ಹವ್ಯಾಸವಿತ್ತು. ತಮ್ಮ ಶಾಲಾ ದಿನಗಳಲ್ಲೇ ಬರೆಯಲು ಪ್ರಾರಂಭಿಸಿದ್ದರು. ಇವರ ಪತಿ ಶ್ರೀ ಪಾಂಡುರಂಗ ಉಡುಪರು ನಿವೃತ್ತ ಕಾಲೇಜು ಪ್ರಾಂಶುಪಾಲರು. ವಿವಾಹಾನಂತರ ಇವರ ಬರವಣಿಗೆಗೆ ಪ್ರೋತ್ಸಾಹ ನೀಡಿದರು. ವಸುಮತಿಯವರು ಕಥೆ, ಕಾದಂಬರಿ, ಪ್ರಬಂಧ, ನಾಟಕ, ಅಂಕಣಬರಹ ಹೀಗೆ ಎಲ್ಲ ಪ್ರಕಾರಗಳಲ್ಲಿಯೂ ಬರೆದು ಯಶಸ್ವಿಯಾದವರು. ಇವರ ಕಥೆಗಳು, ಕಾದಂಬರಿಗಳು ಬಹಳ ಕಾಲದಿಂದ ಪ್ರಸಿದ್ಧ ನಿಯತಕಾಲಿಕ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ. ಇವುಗಳು ನಂತರ ಕೃತಿಗಳಾಗಿ ಪುಸ್ತಕ ರೂಪದಲ್ಲಿಯೂ ಪ್ರಕಟಗೊಂಡಿವೆ. ಇವರು ಮಲೆನಾಡಿನ ಕೃಷಿಜೀವನದ ನಿಕಟ ಪರಿಚಯ ಹೊಂದಿದ್ದು ಅಲ್ಲಿನ ದೃಶ್ಯಗಳನ್ನು, ಪಾತ್ರಗಳನ್ನು ತಮ್ಮ ಬರಹಗಳಲ್ಲಿ ಹೃದಯಂಗಮವಾಗಿ ಚಿತ್ರಿಸುವ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ. ತಮ್ಮ ಬರಹಗಳ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ತೋರುವ ವೈಶಿಷ್ಟ್ಯತೆ ಹೊಂದಿದ್ದಾರೆ. ಇವರ ಸಾಹಿತ್ಯ ಸೇವೆಗಾಗಿ ಹಲವಾರು ಪ್ರಶಸ್ತಿ, ಸನ್ಮಾನಗಳು ಸಂದಿವೆ. ಬಹು ಮುಖ್ಯವಾದವುಗಳೆಂದರೆ 1) ಅಳಸಿಂಗ ಪ್ರಶಸ್ತಿ, 2) ಎಂ.ಕೆ.ಇಂದಿರಾ ಪ್ರಶಸ್ತಿ, 3) ಉಗ್ರಾಣ ಪ್ರಶಸ್ತಿ, 4) ಗೀತಾದೇಸಾಯಿ ದತ್ತಿನಿಧಿ ಬಹುಮಾನ, 4) ಮುಂಬೈ ಕನ್ನಡ ಕಲಾಕೇಂದ್ರದಿಂದ ಮಕ್ಕಳ ನಾಟಕ ರಚನಾ ಸ್ಫರ್ಧೆಯ ಪ್ರಥಮ ಬಹುಮಾನ ಮುಂತಾದವು.
ಸಂಧಿಕಾಲ: ಕಾದಂಬರಿ.
ಇದೊಂದು ಮನೋಜ್ಞ ಸಾಮಾಜಿಕ ಕಾದಂಬರಿ. ಸಂಸಾರಗಳಲ್ಲಿ ಒಟ್ಟಾಗಿ ವಾಸಿಸುವ ಕೂಡು ಕುಟುಂಬಗಳ ಒಂದು ಚಿತ್ರಣದ ಜೊತೆಗೆ ಕೌಟುಂಬಿಕ ಸಾಮರಸ್ಯ ಹೇಗಿರಬೇಕು ಎಂಬುದನ್ನು ಎತ್ತಿ ತೋರುವ ಕಥೆಯನ್ನು ಹೊಂದಿದೆ.
ಅವಿಭಕ್ತ ಕುಟುಂಬದಲ್ಲಿ ತಾಯಿ ರಾಧಮ್ಮ ತನ್ನಿಬ್ಬರು ಪುಟ್ಟ ಗಂಡು ಮಕ್ಕಳೊಂದಿಗೆ ತನ್ನ ಹದಿ ವಯಸ್ಸಿನಲ್ಲೇ ಪತಿ ತೀರಿಹೋದಾಗ ತೋರುವ ಧೈರ್ಯ, ಸಾಹಸವನ್ನು ಮೆಚ್ಚಬೇಕಾದದ್ದೆ. ಕೃಷಿಯನ್ನೇ ವೃತ್ತಿಯನ್ನಾಗಿ ಅಪ್ಪಿಕೊಂಡು ಬದುಕನ್ನು ಮುನ್ನಡೆಸುತ್ತಾಳೆ. ಗಂಡಸರಿಗೆ ಯಾವ ರೀತಿಯಲ್ಲೂ ಕಡಿಮೆಯಿಲ್ಲ ಎಂದು ಎಲ್ಲರೂ ಅಚ್ಚರಿಪಡುವಂತೆ ದುಡಿಯುತ್ತಾ ಮಕ್ಕಳನ್ನು ಬೆಳೆಸಿ, ಸಂಸ್ಕಾರವಂತರನ್ನಾಗಿ ಮಾಡುತ್ತಾಳೆ. ಈ ಚಿತ್ರಣವನ್ನು ಲೇಖಕಿ ಸೊಗಸಾಗಿ ಮಾಡಿಕೊಟ್ಟಿದ್ದಾರೆ. ಪರಿಶ್ರಮವಿದ್ದರೆ ಯಾವ ಕೆಲಸವೂ ಅಸಾಧ್ಯವಲ್ಲ ಎಂಬುದನ್ನು ರಾಧಮ್ಮನ ಪಾತ್ರದ ಮೂಲಕ ನಿರೂಪಿಸಿದ್ದಾರೆ.
ದೊಡ್ಡಮಗ ರಘುರಾಮ ತಾನೇ ಹೆಣ್ಣೊಂದನ್ನು ಪ್ರೀತಿಸಿದ ಎಂಬ ಕಾರಣಕ್ಕೆ ಬಡ ಕುಟುಂಬದ ಭವಾನಿಯನ್ನು ಸೊಸೆಯಾಗಿ ಸ್ವೀಕರಿಸುತ್ತಾಳೆ. ರಾಧಮ್ಮನ ಒಳಮನಸ್ಸಿನಲ್ಲಿ ಅನುಕೂಲ ಮನೆತನದಿಂದ ಹೆಣ್ಣನ್ನು ತರಬೇಕೆಂಬ ಆಸೆಯಿದ್ದರೂ ಮನೆಗೆ ಬಂದ ಸೊಸೆಯ ಗುಣವನ್ನು ಮೆಚ್ಚಿಕೊಳ್ಳುತ್ತಾಳೆ. ಸದಾ ಚಟುವಟಿಕೆಯಿಂದ ಎಲ್ಲ ಕೆಲಸಗಳನ್ನು ನಿರ್ವಹಿಸುವ ಭವಾನಿಯನ್ನು ಒಪ್ಪಿಕೊಳ್ಳುತ್ತಾಳೆ. ಅನತಿ ಕಾಲದಲ್ಲೇ ಮುದ್ದಾದ ಮೊಮ್ಮಗ ಪ್ರದೀಪನನ್ನು ಹೆತ್ತು ಕೊಟ್ಟಾಗ ಅವಳ ಬಾಣಂತನಕ್ಕಾಗಿ ತಾನೇ ನೆರವಾಗುತ್ತಾಳೆ. ಮೊಮ್ಮಗನ ಆಟಪಾಟಗಳಲ್ಲಿ ಕರಗಿಹೋಗುತ್ತಾಳೆ.
ಎರಡನೆಯ ಮಗನಿಗಾದರೂ ಅನುಕೂಲವಂತ ಕುಟುಂಬದಿಂದ ಸೊಸೆಯನ್ನು ತರಬೇಕೆನ್ನುವ ರಾಧಮ್ಮನ ಆಸೆಯು ತಾನಾಗಿಯೇ ಕೈಗೂಡುತ್ತದೆ. ಕಿರಿಯಮಗ ರಾಮಚಂದ್ರನಿಗೆ ಸಂಪಿಗೆಹಳ್ಳಿಯ ಜಮೀನುದಾರರಾದ ಶೀನಪ್ಪಯ್ಯನವರ ಏಕೈಕ ಪುತ್ರಿ ನಾಗಶ್ರೀ (ನಾಗಮ್ಮ) ಸೊಸೆಯಾಗಿ ಬರುತ್ತಾಳೆ. ರಾಧಮ್ಮ ಸಹಜವಾಗಿಯೇ ಶ್ರೀಮಂತರ ಪುತ್ರಿ ನಾಗಮ್ಮನಿಗೆ ಭವಾನಿಗಿಂತ ಹೆಚ್ಚಿನ ರಿಯಾಯಿತಿ ನೀಡುತ್ತಾಳೆ. ಆದರೆ ಶೀನಪ್ಪಯ್ಯ ಪಕ್ಕಾ ವ್ಯಾವಹಾರಿಕ ಮನುಷ್ಯ. ಅವನು ಅಳಿಯನನ್ನು ತಮ್ಮಲ್ಲಿಗೇ ಮನೆವಾಳ್ತನಕ್ಕೆ ಬಂದಿರಲು ಬಯಸಿದ್ದ. ಆದರೆ ರಾಮಚಂದ್ರ ಅದಕ್ಕೆ ಒಪ್ಪದ್ದಕ್ಕೆ ಮತ್ತು ಮಗಳು ಆಗಲೇ ಮನಸ್ಸುಕೊಟ್ಟಿದ್ದಾಳೆ ಎಂಬ ಕಾರಣದಿಂದ ಪ್ರಸ್ತಾವವನ್ನು ಕೈಬಿಟ್ಟ. ನಾಗಮ್ಮನಿಗೆ ಎರಡು ಮಕ್ಕಳಾದವು. ಮೊದಲನೆಯದು ಮಗಳು ಪೂರ್ಣಿಮಾ, ಎರಡನೆಯ ಗಂಡುಮಗ ಅನಂತಪದ್ಮನಾಭ. ನಾಗಮ್ಮನ ಬಾಣಂತನದ ಅವಧಿಗಳೂ ದೀರ್ಘವಾಗಿದ್ದರೂ ರಾಧಮ್ಮ ತನ್ನ ಅಸಮಾಧಾನವನ್ನು ಬಹಿರಂಗಗೊಳಿಸದೆ ಸುಮ್ಮನಿದ್ದಳು. ಎರಡನೆಯ ಬಾಣಂತನಕ್ಕೆ ಹೋಗಿದ್ದ ಸೊಸೆ ತವರಿನಲ್ಲಿದ್ದಾಗಲೇ ರಾಧಮ್ಮನ ಕುಟುಂಬದ ಮೇಲೆ ಕ್ರೂರ ವಿಧಿ ಪ್ರಹಾರಮಾಡಿತು. ಅಡಿಕೆ ವ್ಯಾಪಾರದ ವ್ಯವಹಾರ ಮುಗಿಸಿ ಊರಿಗೆ ಹಿಂದಿರುಗುತ್ತಿರುವಾಗ ದುರಾದೃಷ್ಟವಶಾತ್ ರಘುರಾಮ ಬಸ್ಸಿನ ಚಕ್ರಕ್ಕೆ ಸಿಕ್ಕಿ ಅಸುನೀಗುತ್ತಾನೆ. ಈ ದುರ್ಘಟನೆ ತಾಯಿ ರಾಧಮ್ಮ,. ಪತ್ನಿ ಭವಾನಿ, ತಮ್ಮ ರಾಮಚಂದ್ರನಿಗೆ ಭರಿಸಲಾಗದ ದುಃಖವನ್ನು ಕೊಡುತ್ತದೆ. ಮುಂದೇನು ಗತಿ ಎಂದು ಆಲೋಚಿಸುವಷ್ಟರಲ್ಲಿ ಭವಾನಿಯ ಭಾವ ಭವಾನಿ ಮತ್ತು ಅವಳ ಮಗ ಪ್ರದೀಪನನ್ನು ಬೆಂಗಳೂರಿಗೆ ಕರೆದೊಯ್ದು ಅವರ ಯೋಗಕ್ಷೇಮವನ್ನು ಮಗುವಿನ ವಿದ್ಯಾಭ್ಯಾಸವನ್ನು ನೋಡಿಕೊಳ್ಳುವುದಾಗಿ ಮುಂದೆ ಬರುತ್ತಾರೆ. ಹಿರಿಯಣ್ಣ ಅತ್ತಿಗೆಯ ಬಗ್ಗೆ ತುಂಬ ಪ್ರೀತಿ, ವಿಶ್ವಾಸ ಇರಿಸಿಕೊಂಡಿದ್ದ ರಾಮಚಂದ್ರ ಅತ್ತಿಗೆಯ ಭಾವನವರ ಕೋರಿಕೆಯಂತೆ ಭವಾನಿಯ ಪಾಲಿಗೆ ಬರಬಹುದಾದ ವಂಶಪಾರಂಪರ್‍ಯದ ಆಸ್ತಿಯ ಮೌಲ್ಯವನ್ನು ತಿಳಿದವರಿಂದ ನಿಗದಿಪಡಿಸಿಸಿ ಅದನ್ನು ಹಣದ ರೂಪದಲ್ಲಿ ಭವಾನಿಗೆ ಕೊಟ್ಟು ಕರ್ತವ್ಯಮುಕ್ತನಾಗುತ್ತಾನೆ. ಇದಕ್ಕಾಗಿ ಅವನು ದುಬಾರಿ ಬಡ್ಡಿ ತೆತ್ತು ಸಾಲ ಪಡೆಯುತ್ತಾನೆ. ಋಣಭಾರ ತೀರಿಸಲು ವ್ಯವಸಾಯದಲ್ಲಿ ಹೆಚ್ಚಿನ ಶ್ರಮವಹಿಸಿ ದುಡಿಯುತ್ತಾನೆ. ಮುಂದೆ ಬೆಳೆಬಂದಾಗ ಅದನ್ನು ಮಾರಿ ಸಾಲ ಚುಕ್ತಾ ಮಾಡಬಹುದೆನ್ನುವ ಭರವಸೆ ಹೊಂದಿರುತ್ತಾನೆ.
ಇಂತಹ ಸಮಯದಲ್ಲಿ ಅಳಿಯನ ಕಷ್ಟ ಸುಖ ವಿಚಾರಿಸದ ಶೀನಪ್ಪಯ್ಯ ತನ್ನ ವ್ಯವಹಾರ ದೃಷ್ಟಿಯಲ್ಲಿಯೇ ವಿಚಿತ್ರವಾಗಿ ಆಲೋಚಿಸುತ್ತಾನೆ. ಅಳಿಯ ಆಸ್ತಿ ವಿಭಾಗ ಮಾಡುವಾಗ ತನ್ನ ಸಲಹೆ ಪಡೆಯಲಿಲ್ಲದ್ದು ಅವನ ಪ್ರಕಾರ ದೊಡ್ಡ ಅಪರಾಧವಾಗುತ್ತದೆ. ತಾನು ಹೋಗಿದ್ದರೆ ಇನ್ನಷ್ಟು ಚೌಕಾಶಿ ಮಾಡಿ ಭವಾನಿಗೆ ಕೊಡುವ ಹಣದಲ್ಲಿ ಕಡಿಮೆ ಮಾಡಿಸುತ್ತಿದ್ದೆ ಎಂಬುದು ಅವನ ಲೆಕ್ಕಚಾರ. ಒಡಹುಟ್ಟಿದ ಸೊದರರ ನಡುವಿನ ವ್ಯವಹಾರದಲ್ಲಿ ಮೂಗು ತೂರಿಸಲು ಬಯಸುವ ಶೀನಪ್ಪಯ್ಯ ತನ್ನನ್ನು ಕರೆಯಲಿಲ್ಲವೆಂಬ ಕಾರಣವನ್ನೇ ಮುಂದಿಟ್ಟುಕೊಂಡು ಅಳಿಯನ ಬಗ್ಗೆ ಅಸಡ್ಡೆ ತೋರುತ್ತಾನೆ. ಮಗಳು ನಾಗಮ್ಮನಿಗೂ ಇದನ್ನೇ ಬೋಧಿಸಿ ಅವಳ ಮನಸ್ಸಿಗೂ ಹುಳಿ ಹಿಂಡುತ್ತಾನೆ.
ಸ್ವಸ್ಥವಾಗಿದ್ದ ಕುಟುಂಬ ಮುರಿಯಲು ಈ ಸಣ್ಣ ಕಾರಣ ಟಿಸಿಲೊಡೆದು ಹೆಮ್ಮರವಾಗುತ್ತದೆ. ಶೀನಪ್ಪಯ್ಯನ ಅತಿಯಾದ ಸ್ವಪ್ರತಿಷ್ಠೆ, ಮತ್ತು ತಂದೆಯ ಮಾತುಗಳಿಂದ ಪ್ರಭಾವಿತಳಾದ ನಾಗಮ್ಮನ ಅವಿವೇಕತನ ಇದಕ್ಕೆ ಕಾರಣವಾಗುತ್ತದೆ. ತನ್ನ ಪ್ರೀತಿಯ ಪತಿ ಮಗುವನ್ನು ನೋಡಲು ಬಂದಾಗ ಚುಚ್ಚುಮಾತುಗಳಿಂದ ಅವನನ್ನು ಹಂಗಿಸುತ್ತಾಳೆ. ಅಲ್ಲದೆ ಅವನಣ್ಣ ರಘುರಾಮ ತಾನೇ ನಿರ್ಲಕ್ಷ್ಯದಿಂದ ತನ್ನ ಸಾವಿಗೆ ಕಾರಣನೆಂದೂ ಮಾತನಾಡುತ್ತಾಳೆ. ಇದರಿಂದ ರಾಮಚಂದ್ರನ ಮನಸ್ಸು ತುಂಬ ನೊಂದು ಸಂಕಟಪಡುತ್ತದೆ. ದುಃಖದಿಂದ ಮಾವನ ಮನೆಯಿಂದ ಹಿಂದಿರುಗುತ್ತಾನೆ.
ರಾಮಚಂದ್ರ ಮಾಡಿದ ಸಾಲಕ್ಕೆ ಅತಿಯಾದ ಬಡ್ಡಿ ಕಟ್ಟುವುದನ್ನು ತಪ್ಪಿಸಲೋಸುಗ ರಾಧಮ್ಮ ತನ್ನಲ್ಲಿದ್ದ ಹಳೆಯ ಒಡವೆಗಳನ್ನು ಮಗನಿಗೆ ಕೊಟ್ಟು ಮಾರಿ ಬಂದಹಣದಿಂದ ಸಾಲ ತೀರಿಸಲು ತಿಳಿಸುತ್ತಾಳೆ. ಆಕೆ ಹಿರಿಮಗನ ಸಾವಿನಿಂದ ಝರ್ಝರಿತಳಾಗಿ ಹಾಸಿಗೆ ಹಿಡಿಯುತ್ತಾಳೆ ಸಾಲದ್ದಕ್ಕೆ ಆಕೆಯ ಕಾಲುಗಳು ಶಕ್ತಹೀನವಾಗಿ ಓಡಾಡಲು ಸಾಧ್ಯವಾಗದೆ ಮೂಲೆಗುಂಪಾಗುತ್ತಾಳೆ. ಮಗ ರಾಮಚಂದ್ರ ಎಷ್ಟೇ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದರೂ ಅವಳಿಗೆ ಮಗ ಸೊಸೆ ಬೇರೆಬೇರೆಯಾಗಿ ದಳ್ಳುರಿಯಲ್ಲಿ ಬೇಯುವುದನ್ನು ಸಹಿಸಲಾಗಲಿಲ್ಲ. ಕೊನೆಗೆ ತನ್ನ ಅಂತಿಮ ನಿರ್ದಾರವಾಗಿ ಶೀನಪ್ಪಯ್ಯ ಮೊದಲು ಬಯಸಿದಂತೆ ಅಲ್ಲಿಯ ಆಸ್ತಿಯನ್ನೆಲ್ಲ ಮಾರಿ ಮಾವನ ಮನೆಗೇ ಹೋದರೆ ಸಮಸ್ಯೆ ಪರಿಹಾರವಾದೀತೆಂದು ಆಲೋಚಿಸುತ್ತಾಳೆ. ಮಗ ಒಪ್ಪದಿದ್ದರೂ ಒತ್ತಾಯಮಾಡಿ ಇದರ ಬಗ್ಗೆ ಮಾವನೊಡನೆ ಚರ್ಚಿಸಿ ಇತ್ಯರ್ಥ ಮಾಡಿಕೊಂಡು ಬಾರೆಂದು ಸಂಪಿಗೆ ಹಳ್ಳಿಗೆ ಕಳಿಸುತ್ತಾಳೆ.
ಆದರೆ ಮಾವನ ಮನೆಗೆ ಹೋದ ರಾಮಚಂದ್ರನಿಗೆ ಆದ ಅನುಭವವೇ ಬೇರೆ. ಅತ್ತೆ, ಮಾವ ಊರಲ್ಲಿರಲಿಲ್ಲ. ಮಡದಿ ಮನೆಯಲ್ಲಿದ್ದು ದೂರದಿಂದಲೇ ಗಂಡ ಬರುತ್ತಿರುವುದನ್ನು ನೋಡಿ ಮುಂದಿನ ಬಾಗಿಲು ಕಿಟಕಿಗಳನ್ನು ಬೇಕೆಂತಲೇ ಮುಚ್ಚಿ ಅವನನ್ನು ಸ್ವಾಗತಿಸುವುದಿಲ್ಲ. ಅಷ್ಟೇ ಅಲ್ಲ ಮನೆಯಲ್ಲಿದ್ದೂ ಕೂಗಿದಾಗ ಉತ್ತರಕೊಡದೆ ಆತನ ಆಗಮನ ತನಗೆ ಇಷ್ಟವಿಲ್ಲವೆಂಬಂತೆ ನಡೆದುಕೊಂಡು ಆತನನ್ನು ಅವಮಾನಿಸುತ್ತಾಳೆ. ಇದರಿಂದ ಬಲುನೊಂದ ರಾಮಚಂದ್ರನ ಮನಸ್ಸಿನಲ್ಲೂ ಆತ್ಮಾಭಿಮಾನ ಹೆಡೆಯೆತ್ತುತ್ತದೆ. ಇನ್ನೆಂದೂ ಆ ಮನೆಯ ಮೆಟ್ಟಿಲು ಹತ್ತಬಾರದೆಂಬ ನಿರ್ಧಾರ ತೆಗೆದುಕೊಂಡು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ತನ್ನೂರಿಗೆ ಹಿಂದಿರುಗುತ್ತಾನೆ. ತಾಯಿ ರಾಧಮ್ಮನೂ ತೀರಿಹೋದಾಗ ಒಂಟಿಯಾಗಿ ಜೀವನ ನಡೆಸುತ್ತಾನೆ.
ಇದಾದ ಹದಿನೇಳು ವರ್ಷಗಳ ನಂತರ ರಾಮಚಂದ್ರನನ್ನು ಹುಡುಕಿಕೊಂಡು ಆತನ ಮಗ ಅನಂತಪದ್ಮನಾಭ ಬರುತ್ತಾನೆ. ಅವನ ಪರಿಚಯ ಹೇಳಿಕೊಂಡಾಗ ರಾಮಚಂದ್ರ ಮಗನನ್ನು ತುಂಬ ಪ್ರೀತಿಯಿಂದ ಮಾತನಾಡಿಸಿ ಅಪ್ಪಿಕೊಳ್ಳುತ್ತಾನೆ. ಅಡುಗೆ ಮಾಡಿ ಊಟಕ್ಕಿಡುತ್ತಾನೆ. ಅಕ್ಕ ಪೂರ್ಣಿಮಾಳಿಗೆ ಮದುವೆ ಗೊತ್ತಾಗಿದೆ, ಅಪ್ಪನೇ ಬಂದು ನಿಶ್ಚಿತಾರ್ಥ ಮತ್ತು ಮದುವೆಯ ದಿನ ಕನ್ಯಾದಾನದ ಶಾಸ್ತ್ರವನ್ನು ಮಾಡಿಕೊಡಬೇಕೆಂದು ಮಗ ಕೋರುತ್ತಾನೆ. ಮಕ್ಕಳು ಯಾವ ತಪ್ಪೂ ಮಾಡದಿದ್ದುರಿಂದ ಅವರ ಮೇಲೇಕೆ ತಾನು ಸಿಟ್ಟಾಗಬೇಕು ಎಂದು ವಿವೇಕಿಯಂತೆ ರಾಮಚಂದ್ರ ಆಲೋಚಿಸುತ್ತಾನೆ. ಈ ಬೇಡಿಕೆ ಭಾವೀ ಬೀಗರ ಕಡೆಯಿಂದ ಬಂದಿದ್ದು ಅದನ್ನು ಈಡೇರಿಸದೇ ಇದ್ದರೆ ಒಳ್ಳೆಯ ಸಂಬಂಧ ತಪ್ಪಿಹೋಗಬಹುದೆಂದು ಮಗ ಹೇಳಿದಾಗ ರಾಮಚಂದ್ರ ಹೇಳುವ ಮಾತು ಕಾದಂಬರಿಯ ಜೀವಾಳ ಎನಿಸುತ್ತದೆ. ಹೌದೌದು ಒಂದು ಒಳ್ಳೆಯ ಸಂಬಂಧ ಸಿಗೋದು ಎಷ್ಟು ಕಷ್ಟ ಅಂತ ನನ್ನಷ್ಟು ಚೆನ್ನಾಗಿ ಇನ್ಯಾರಿಗೆ ಅನುಭವ ಆಗಿರುತ್ತೆ. ಸಂಬಂಧ ಒಳ್ಳೆಯದೇ ಆಗಿದ್ದರೂ ಅದನ್ನು ಎಂಥಹ ಪರಿಸ್ಥಿತಿಯಲ್ಲೂ ನಿಭಾಯಿಸಿಕೊಂಡು ಹೋಗೋಕೆ ಮನಸ್ಸು ದೊಡ್ಡದಾಗಿರಬೇಕು. ಹಿತ್ತಾಳೆ ಕಿವಿ ಆಗಿದ್ರೆ ಭಾರಿ ಕಷ್ಟ. ರಾಧಮ್ಮ ಹಾಸಿಗೆ ಹಿಡಿದಿದ್ದ ಸಂದರ್ಭದಲ್ಲಿ ಅವಳ ಸೇವೆಗಾಗಿ ನೇಮಿಸಿಕೊಂಡಿದ್ದ ಹೆಣ್ಣಾಳು ರಾಮಚಂದ್ರನ ಮನೆಯಲ್ಲಿ ಎಲ್ಲವೂ ತಾನೇ ಆಗಿದ್ದಾಳೆ ಎಂಬ ಗಾಳಿಸುದ್ಧಿಯೊಂದನ್ನು ಯಾರೋ ಹರಡಿರುತ್ತಾರೆ. ಸಾಲದ್ದಕ್ಕೆ ಈ ರೀತಿಯ ಅನಾಮಧೇಯ ಪತ್ರವೊಂದನ್ನು ಬರೆದಿರುತ್ತಾರೆ. ಇವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಪ್ರಯತ್ನವನ್ನೇ ಮಾಡದೇ ಶೀನಪ್ಪಯ್ಯ, ಮತ್ತು ನಾಗಮ್ಮ ಇದನ್ನು ನಿಜವೆಂದೇ ನಂಬಿಬಿಡುತ್ತಾರೆ. ಹಾಗಾಗಿ ರಾಮಚಂದ್ರನೊಡನೆ ಸಂಬಂಧವನ್ನೇ ಕಡಿದುಕೊಂಡಿರುತ್ತಾರೆ. ಅಂತೂ ಮಗನ ಕೋರಿಕೆಯಂತೆ ಮಗಳ ನಿಶ್ಚಿತಾರ್ಥಕ್ಕೆ ಸರಿಯಾದ ಸಮಯಕ್ಕೆ ಹಾಜರಾಗಿ ಕರ್ತವ್ಯಗಳನ್ನು ಮಾಡಿಕೊಡುವುದೇ ಅಲ್ಲದೆ ಮದುವೆಯಲ್ಲಿಯೂ ಬಂದು ಮಗಳನ್ನು ಧಾರೆಯೆರೆದು ಕೊಡುತ್ತಾನೆ. ಇಂತಹ ಸಂದರ್ಭವನ್ನೇ ಉಪಯೋಗಿಸಿಕೊಂಡು ಕುಹಕ ಮಾತುಗಳನ್ನಾಡುವ ಬಂಧುಗಳ ಬಾಯಿಗೆ ಬೀಗ ಬೀಳುತ್ತದೆ.
ಊರಿಗೆ ಹೊರಡುವ ಮೊದಲು ಮನೆಗೆ ಬಂದಾಗ ನಾಗಮ್ಮನನ್ನು ಬಿಟ್ಟು ಇನ್ಯಾರೂ ಇಲ್ಲದಂತೆ ಅನಂತಪದ್ಮನಾಭ ಮತ್ತು ಅವನ ಭಾವ ಉಪಾಯ ಮಾಡಿರುತ್ತಾರೆ. ಆಗ ಕೆಲವು ಮಾತುಗಳು ಅವರಿಬ್ಬರ ನಡುವೆ ಅನಿವಾರ್ಯವಾಗಿ ನಡೆಯುತ್ತವೆ. ಕೆಲವು ಬಿಸಿ ಮಾತುಗಳ ಚಟಾಕಿಯ ನಂತರ ಆಣೆ ಭಾಷೆಗಳಾಗುತ್ತವೆ. ಆಗ ನಾಗಮ್ಮನಿಗೆ ತಾನು ಸುಳ್ಳು ಸುದ್ಧಿಗೆ ಬಲಿಯಾಗಿದ್ದು ಅರಿವಾಗುತ್ತದೆ. ತನ್ನ ಪತಿ ಪರಿಶುದ್ಧವಾದವನು ಎಂದು ಖಚಿತವಾದಾಗ ಅವಳು ಕರಗುತ್ತಾಳೆ. ಪರಸ್ಪರ ತಾವೆಂತಹ ತಪ್ಪು ಮಾಡಿ ತಮ್ಮ ಸುಖೀದಾಂಪತ್ಯವನ್ನು ಕಳೆದುಕೊಂಡೆವು ಎಂದು ಪಶ್ಚಾತ್ತಾಪ ಪಡುತ್ತಾರೆ. ಆಗ ಮೊದಲಿನಂತೆ ಪ್ರೇಮ ಮರುಕಳಿಸುತ್ತದೆ ಮತ್ತು ದಂಪತಿಗಳಲ್ಲಿ ಶಾಂತಿ ಸಂಧಾನವೇರ್ಪಡುತ್ತದೆ. ಕಾದಂಬರಿ ಸುಖಾಂತ್ಯದಲ್ಲಿ ಮುಕ್ತಾಯಗೊಳ್ಳುತ್ತದೆ.
ಈಗಿನ ಕುಟುಂಬಗಳಲ್ಲಿ ಸಣ್ಣಸಣ್ಣ ಮಾತಿನ ಕಲಹಗಳು, ವೈಯಕ್ತಿಕ ಹಮ್ಮುಬಿಮ್ಮುಗಳು, ಪ್ರತಿಷ್ಠೆಗಳ ತಾಕಲಾಟ, ನನ್ನ ಮಾತೇ ನಡೆಯಬೇಕೆಂಬ ಕೆಟ್ಟಹಠ, ಇವುಗಳಿಂದ ಸಾಮರಸ್ಯ ಕೆಡುತ್ತಲಿದೆ. ಗಂಡಹೆಂಡತಿಯ ಮಧ್ಯೆ ಇವೇ ಒಡಕಿಗೆ ಕಾರಣವಾಗಿ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇಂತಹ ಸಮಸ್ಯೆಗಳನ್ನು ವಿಶ್ಲೇಷಣೆ ಮಾಡಿ ಆಲೋಚಿಸಿದರೆ ಸಾಮರಸ್ಯ, ಹೊಂದಾಣಿಕೆ ಮತ್ತೆ ಮೂಡುವ ಸಂಭವ ಖಂಡಿತ ಇದೆ. ಆತುರದ ನಿರ್ಧಾರ ಒಳ್ಳೆಯದಲ್ಲ ಎಂಬ ಸಾಮಾಜಿಕ ಕಳಕಳಿಯ ಸಂದೇಶವನ್ನು ಕಾದಂಬರಿಯ ಮೂಲಕ ನೀಡಿರುವ ಶ್ರೀಮತಿ ವಸುಮತಿ ಉಡುಪರು ಅಭಿನಂದನೀಯರು.
–ಬಿ.ಅರ್.ನಾಗರತ್ನ, ಮೈಸೂರು.
ಕಾದಂಬರಿಯ ಕಥಾವಸ್ತುವೂ ಚೆನ್ನಾಗಿದೆ…ವಿಮರ್ಶೆಯೂ ತುಂಬಾ ಸುಂದರವಾಗಿ ಮೂಡಿಬಂದಿದೆ
ಧನ್ಯವಾದಗಳು ಮೇಡಂ
Very nice
ಧನ್ಯವಾದಗಳು ನಯನಾ ಮೇಡಂ
ಸುಂದರ ಕಾದಂಬರಿಯೊಂದರ ವಿಮರ್ಶಾತ್ಮಕ ಸೂಕ್ಷ್ಮ ಪರಿಚಯ ಬಹಳ ಚೆನ್ನಾಗಿ ಮೂಡಿಬಂದಿದೆ…ಧನ್ಯವಾದಗಳು…ನಾಗರತ್ನ ಮೇಡಂ ಅವರಿಗೆ.
ಧನ್ಯವಾದಗಳು ಶಂಕರಿಶರ್ಮ ಮೇಡಂ.
ಕಾದಂಬರಿಯೊಂದರ ಪರಿಚಯ ಚೆನ್ನಾಗಿದೆ
ಧನ್ಯವಾದಗಳು ಮೇಡಂ
ಲೇಖಕಿಯ ಹಾಗೂ ಸೊಗಸಾದ ಸಂದೇಶವನ್ನು ಹೊತ್ತ ಸೊಗಸಾದ ಕೃತಿಯ ಸುಂದರ ಪರಿಚಯಾತ್ಮಕ ಲೇಖನಕ್ಕಾಗಿ ಗೆಳತಿ ನಾಗರತ್ನ ಅವರಿಗೆ ಅಭಿನಂದನೆಗಳು.
ಧನ್ಯವಾದಗಳು ಗೆಳತಿ ಪದ್ಮಾ
बहु उत्तमम अस्ति