ಅಂತರಂಗದ ಆಲಾಪ

Share Button

ಜೀವನೋಪಾಯಕ್ಕೆಂದು ನಗರದ ಸೌಂದರ್ಯವರ್ಧಕ ಕಾರ್ಯಾಗಾರದಲ್ಲಿ ಕೆಲಸ ಮಾಡುತ್ತಿದ್ದ ಮಾಯಾಳಿಗೆ ಮೂರು ಮಕ್ಕಳು. ತನ್ನ ಗಂಡನ ದೌರ್ಜನ್ಯವನ್ನು ತಾಳದೆ ತಾಯಿಯ ಮನೆಯಲ್ಲೇ ಆಶ್ರಯ ಪಡೆದಿದ್ದಳು. ತನ್ನ ಮಕ್ಜಳೊಂದಿಗೆ ಹೊಸ ಜೀವನ ಕಟ್ಟಿಕೊಳ್ಳುವ ಅನಿವಾರ್ಯತೆ ಅವಳಿಗಿದ್ದ ಒಂದೇ ಒಂದು ದಾರಿ. ಅನಕ್ಷರಸ್ಥೆಯಾದ ಮಾಯ ಮೂರು ತಿಂಗಳ ಸೌಂದರ್ಯ ವರ್ಧಕ ಕೌಶಲ್ಯದ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿ ಪ್ರತಿಷ್ಠಿತ ಸೌಂದರ್ಯವರ್ಧಕ ಕಾರ್ಯಾಗಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ತನಗೆ ಬರುತ್ತಿದ್ದ ಅಲ್ಪಆದಾಯದಲ್ಲೇ ಮಕ್ಕಳ ಶಿಕ್ಷಣ ವೆಚ್ಚವನ್ನು ಸರಿತೂಗಿಸುತ್ತಿದ್ದಳು. ಮಕ್ಕಳ ಉತ್ಸಾಹದಲ್ಲಿ ತನ್ನ ನೋವನ್ನು ಮರೆಮಾಚಿ ಸಮಾಜದಲ್ಲಿ ಮುಖವಾಡದ ಬದುಕನ್ನು ಸಾಗಿಸುತ್ತಿದ್ದ ಹೆಣ್ಣು ಜೀವ.

ಆದರೆ, ಒಂದೂವರೆ ವರ್ಷದಿಂದ ಕರೊನಾ ಹೆಮ್ಮಾರಿ ಅವಳ ಸಂಪಾದನೆಗೂ ಕಡಿವಾಣ ಹಾಕಿಬಿಟ್ಟಿದೆ. ಅದಕ್ಕೆ ಪರ್ಯಾಯವಾಗಿ ಈಗ ಸಿದ್ಧ ಉಡುಪುಗಳ ಮಾರಾಟ ಮಾಡುವ ಕೆಲಸಕ್ಕೆ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ತನ್ನ ಕೆಲಸಕ್ಕೆಂದು ಹೊರಗಡೆ ಬಂದಾಗಲೆಲ್ಲಾ ಮಕ್ಕಳು ಅವಳಿಗೆ ಕರೆಮಾಡಿ “ಅಮ್ಮ, ನೀನು ಯಾವಾಗ ಮನೆಗೆ ಬರುತ್ತೀಯ, ನಾವು online ತರಗತಿಯಲ್ಲಿ ಭಾಗವಹಿಸಬೇಕು, ಇಲ್ಲದ್ದಿದ್ದಲ್ಲಿ, ಶಿಕ್ಷಕರು ಶಿಕ್ಷೆ ಕೊಡುತ್ತಾರೆ, ನಿನ್ನ ಮೊಬೈಲ್ ಬೇಕಮ್ಮ, please, ಬೇಗ ಬಾಮ್ಮಾ” ಎಂದು ನಿತ್ಯವೂ ಹೇಳಿದಾಗ ಅವಳಿಗೆ ತನ್ನ ಬದುಕಿನ ಬವಣೆ ಕಾಡುತ್ತದೆ. ತನ್ನ ಮಕ್ಕಳಿಗೆ ಜಂಗಮವಾಣಿಯ ಅವಶ್ಯಕತೆಯನ್ನು ಪೂರೈಸಲು ಅಶಕ್ತಳಾಗಿರುವುದು ಅವಳನ್ನು ಬಹಳವಾಗಿ ಕಾಡುತ್ತದೆ. ತನ್ನ ಅಸಹಾಯಕ ಪರಿಸ್ಥಿತಿಯನ್ನು ಯಾರಲ್ಲೂ ವಿನಂತಿಸದ ವಿಷಮ ಸಂಘರ್ಷ ಅವಳದಾಗಿರುತ್ತದೆ. ಜೀವನದಲ್ಲಿ ಉತ್ಸಾಹವನ್ನೇ ಕಳೆದುಕೊಂಡ ದಾರುಣ ಹೆಣ್ಣಾಗಿ ಕಾಣುತ್ತಾಳೆ. ತನ್ನ ಬದುಕಿನ ಗತಿ ನಿರ್ಗತಿಯತ್ತ ಸಾಗುತ್ತಿದೆಯಲ್ಲಾ ಎಂದು ಮನ ಹಿಂಡಿಕೊಳ್ಳುವ ಅವಳ ಪಾಡಿಗೆ ಸಾಂತ್ವನ ಹೇಳುವವರಾರು?

ಇಂತಹ ಎಷ್ಟೋ ಮಾಯಾಳಂತ ಹೆಣ್ಣು ಮಕ್ಕಳು ನಮ್ಮ ಸುತ್ತ-ಮುತ್ತ ಇರಬಹುದು. ಇದನ್ನು ಗಮನಿಸಿ ನಮ್ಮ ಸಹಾಯ ಹಸ್ತವನ್ನು ಚಾಚುವ ಮೇರು ಮನಸ್ಸು ನಮ್ಮದಾಗಬೇಕು. ಹಾಗಾದಲ್ಲಿ ಮಾತ್ರ, ಮಾನವೀಯತೆ ಉಳಿಯುವುದು ಎಂಬುದಷ್ಟೇ ನನ್ನ ಮನವಿ.

ಹೌದು, ಎಷ್ಟು ಸತ್ಯ ! ಈ ಒಂದೂವರೆ ವರ್ಷದಲ್ಲಿ ಕರೊನ ಹೆಮ್ಮಾರಿ ಬಡ ಮಕ್ಕಳಿಗೆ ಕಂಗಾಲು ಮಾಡಿದೆ. ಅವರ ಓದುವ ಹಸಿವನ್ನು ಶಾಶ್ವತವಾಗಿ ಕಸಿದುಕೊಂಡಿದೆ. ಕಾಡುತ್ತಿರುವ ಬಡತನ, ಅಪೌಷ್ಟಿಕತೆ,  ಸೌಲಭ್ಯದ ಕೊರತೆ, ಆರ್ಥಿಕ ಹೊರೆ, ಅವರ ಭವಿಷ್ಯವನ್ನು ಹಾಳುಗೆಡವಿದೆ. ಶಾಲೆಗಳು ಮುಚ್ಚಿರುವುದರಿಂದ ಮಕ್ಕಳು ಧೈಹಿಕ, ಮಾನಸಿಕವಾಗಿ ಕುಗ್ಗಿಹೋಗಿವೆ. ಶಾಲೆಗಳು ತೆರೆಯದೆ ಇವರ ಮಧ್ಯಾಹ್ನದ ಬಿಸಿಊಟ ಹಾಗೂ ಇತರೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ದೈಹಿಕ ಹಸಿವನ್ನು ಪೂರೈಸಲಾಗದೆ, ಕಲಿಯುವ ಹಸಿವು ಕ್ಷೀಣವಾಗುತ್ತಾ ಹೋಗುತ್ತಿರುವುದು ದಯನೀಯ ಸಂಗತಿ. ಇದರ ಪರಿಣಾಮವಾಗಿ, ಮಕ್ಕಳು ಕಲಿಕೆಯ ಸಮಯದಲ್ಲಿ ದುಡಿಯುವ ದಾರಿ ಕಂಡುಕೊಳ್ಳುತ್ತಿರುವುದು ವಿಷಾದನೀಯ.

ತಂದೆ-ತಾಯಿಯ ದುರ್ಗಮ ಪರಿಸ್ಥಿತಿಯಲ್ಲಿ ಓದನ್ನು ಮುಂದುವರಿಸದೆ ಮಕ್ಕಳು ಬಾಲಕಾರ್ಮಿಕರಾಗಿ ಕೃಷಿ, ಗಾರೆ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಪ್ರಮಾಣ ಹಳ್ಳಿಗಾಡಿನಲ್ಲಿ ಹೆಚ್ಚಾಗಿದೆ. ಆಟದಿಂದ ದೂರವಾದ ಮಕ್ಕಳು ಹೊಲ-ಗದ್ದೆಗಳಲ್ಲಿ ದುಡಿದು ತಂದೆ-ತಾಯಿಗಳಿಗೆ ನೆರವಾಗುವ ಸ್ಥಿತಿ ಶೋಚನೀಯ. ಪ್ರೀತಿ-ಸ್ನೇಹದ ಬಂಧನ, ಸ್ನೇಹದ ಬಯಕೆ ಕಮರಿಹೋಗಿದೆ. ಪಠ್ಯೇತರ ಚಟುವಟಿಕೆಗಳು ಸ್ಥಗಿತವಾಗಿ, ಅವರು ಧೈಹಿಕ ಹಾಗೂಮಾನಸಿಕವಾಗಿ ಸೊರಗಿ ಹೋಗಿದ್ದಾರೆ. ಅವರ ಭವಿಷ್ಯ ಕಾರ್ಮೋಡ ಕವಿದ ಹಾಗೆ ಮಾಸಿಹೋಗುತ್ತಿದೆ. ಮನೆಯಲ್ಲೇ ಭಂದಿಯಾಗಿರುವ ಮಕ್ಕಳು ಶಾಲಾ ಗೆಳೆತನಕ್ಕೆ ಹಂಬಲಿಸುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳೊಡನೆ ಆಡಿ ನಲಿಯುವ, ಸಹಪಾಠಿಗಳೊಂದಿಗೆ ಸಂಭ್ರಮ ಸವಿಯುವ ಬಯಕೆ ಬತ್ತಿ ಹೋಗಿದೆ.

ಸರ್ಕಾರ ಶಾಲೆ ಕಾಲೇಜುಗಳನ್ನು ಸಂಪೂರ್ಣ ಮುಚ್ಚಿ  e-ತರಗತಿಗಳನ್ನು ಮಾಡುವ ಸಾಹಸಕ್ಕೆ ತೀರ್ಮಾನಿಸಿದಾಗ ಸೃಷ್ಟಿಯಾದ ಸಮಸ್ಯೆಯೇ ಈ ಜಂಗಮವಾಣಿಯ ಕೊರತೆ, smart ಫೋನ್ ಸೌಲಭ್ಯರಹಿತರಾದ ಮಕ್ಕಳ ಪರಿಸ್ಥಿತಿ. ಬಹಳಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಪೋಷಕರ ತಾಂತ್ರಿಕ ಜ್ಞಾನದ ಕೊರತೆ, ವಿದ್ಯುತ್ ಸಮಸ್ಯೆ, ಸಂಪರ್ಕ ಸಿಗದ ಅವ್ಯವಸ್ಥೆ ರಾರಾಜಿಸತೊಡಗಿದೆ. ಬಹುಪಾಲು ಮಕ್ಕಳಿಗೆ ಜಂಗಮವಾಣಿಯೇ ಇಲ್ಲದೆ ಕಲಿಯುವಿಕೆ ಇಂದ ಹೊರಗುಳಿಯುವ ಸ್ಥಿತಿ ಬಹಳ ಗಂಭೀರವಾಗಿದೆ. ಪಾಲಕರ ದುಡಿಮೆ ಕುಂಠಿತವಾಗಿ ಮಕ್ಕಳಿಗೆ ಸೌಲಭ್ಯ ಒದಗಿಸಲು ಅಸಹಾಯಕರಾಗಿದ್ದಾರೆ. ಮಕ್ಕಳೆರಡು, ಫೋನ್ ಒಂದು ಎಂಬ ಪರಿಸ್ಥಿತಿಯಲ್ಲಿ ಅಣ್ಣ-ತಂಗಿ, ಅಕ್ಕ-ತಮ್ಮರಲ್ಲಿ ಅನಗತ್ಯ ತಾರತಮ್ಯ, ಅಶಾಂತಿ ಉಂಟಾಗುತ್ತಿದೆ. ಒಟ್ಟಿನಲ್ಲಿ, ಈ ಕರೊನದಿಂದ ಅಧಿಕ ಆರ್ಥಿಕ ಸಮಸ್ಯೆಗಳು ಹುಟ್ಟಿ ಕೊಂಡಿವೆ. ಮನೆ-ಮನಗಳು ನಿರಾಶೆಯ ಗೂಡಾಗಿವೆ ಎಂದು ಹೇಳಬಹುದಷ್ಟೇ. ಮಕ್ಕಳ ಪಾಲಿಗೆ ಶಿಕ್ಷಣ ಹಾಗೂ ಉತ್ತಮ ಭವಿಷ್ಯ ಕತ್ತಲ ದಾರಿಯಾಗಿದೆ. ಎಷ್ಟೋ ಮನೆಗಳಲ್ಲಿ ದೂರದರ್ಶನವಿರದೆ ಕಲಿಕೆಯಲ್ಲಿ ಭಾಗವಹಿಸುವ ಅವಕಾಶ ತಪ್ಪಿ ಹೋಗಿದೆ.  ಕಾಡಂಚಿನ ಹಳ್ಳಿಗಳು, ಗುಡಿಸಲು ನಿವಾಸಿಗಳಾದ ಮಕ್ಕಳಿಗೆ ದೂರದರ್ಶನ ಭಾಗ್ಯವೇ ಇಲ್ಲವಾಗಿದೆ .ದೂರದರ್ಶನವಿದ್ದರೂ, ಸಂಪರ್ಕ ಸಮಸ್ಯೆಯನ್ನು ಸರಿದೂಗಿಸಲು ಮನೆಯ ಛಾವಣಿ ಏರುವ, ಮರ ಏರುವ, ಗುಡ್ಡ ಏರುವ ಸ್ಥಿತಿ ಬಂದೊದಗಿದೆ.

ಮಕ್ಕಳಿಗೆ ಇ-ಕ್ಲಾಸ್, online ಕ್ಲಾಸ್ ಯಾವುದು ಎಟುಕದ ಮರೀಚಿಕೆಯಾಗಿದ್ದು, ಅವರ ಭವಿಷ್ಯ ಆತಂಕದಲ್ಲಿ ನಲುಗಿದೆ. ಪಾಠ ಪ್ರವಚನಗಳು ಅರ್ಥವಾಗದೆ, ಈ ಆಧುನಿಕ ಕಲಿಕಾ ವ್ಯವಸ್ಥೆ ನಮ್ಮ ದೇಶದ ಈಗಿನ ಪರಿಸ್ಥಿತಿಗೆ ಮಾರಕವಾಗಿದೆ. ಇದೊಂದು ವ್ಯರ್ಥ ಪ್ರಯತ್ನವಾಗಿ ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆ ಅತ್ಯ ಅವಶ್ಯಕ. ಪೂರ್ವ ತಯಾರಿ ಇಲ್ಲದ ಇ -ಶಾಲೆಯ ಪರಿವ್ಯಾಪ್ತಿ ಇನ್ನಷ್ಟು ವಿಸ್ತಾರವಾಗಬೇಕಾಗಿದೆ. ಮೂಲ ಸೌಕರ್ಯಗಳು ಬಡ ಮಕ್ಕಳಿಗೆ ಉಚಿತವಾಗಿ ದೊರೆಯಬೇಕಾಗಿದೆ. ಈ ನೂತನ ವ್ಯವಸ್ಥೆಯಿಂದ ರೋಸಿ ಹೋಗಿರುವ ಮಕ್ಕಳಿಗೆ ಆಶಾಕಿರಣವಾಗಿರುವ ವೇದಿಕೆಯನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕನದಾಗಿರುತ್ತದೆ.

ಈ ಸಂದರ್ಭದಲ್ಲಿ, ಭಾರತೀಯ ಪರಂಪರೆಯನ್ನು ಪೂಜಿಸುವ ನಾವೆಲ್ಲರೂ ಸರ್ಕಾರದೊಡನೆ ಕೈ ಜೋಡಿಸಿ, ನಮ್ಮ ಆನುಭವದ ನಿಟ್ಟಿನಲ್ಲಿ ಕಾರ್ಯತತ್ಪರರಾಗಿ ದುಡಿಯುವ ದೀಕ್ಷೆ ಹಾಗೂ ಸಂಕಲ್ಪ ಮಾಡಬೇಕೆಂಬುದೇ  ಈ ವಿಚಾರದ ಒಳನೋಟ ಹಾಗೂ ಒಳಾರ್ಥ. ಕವಾಲುದಾರಿಯಾಗಿರುವ ಎಷ್ಟೋ ಬಾಳಿಗೆ ದಾರಿದೀಪವಾಗುವತ್ತ ನಾವೆಲ್ಲಾ ಹೆಜ್ಜೆ ಹಾಕೋಣ ವೆಂಬುದೇ ನನ್ನ ಅಂತರಂಗದ ಆಲಾಪ.

ವತ್ಸಲ ಹೆಬ್ಬಾಲೆ.

11 Responses

  1. Samatha.R says:

    ನೂರಕ್ಕೆ ನೂರು ಸತ್ಯ ಮೇಡಂ…digital divide ಎಂಬುದು ಈ ಕರೋನ ಕಾಲದಲ್ಲಿ ಎದ್ದು ಕಾಣುತ್ತಿದೆ…ಉತ್ತಮ ಬರಹ..

  2. ಮಹೇಶ್ವರಿ ಯು says:

    ಹಬ್ಬ ಗಳ ಸಡಗರ ದೊಂದಿಗೆ ಮಾನವೀಯ ಕತ೯ವ್ಯಗಳನ್ನೂ ಪಾಲಿಸೋಣ ಎಂಬ ಕಳಕಳಿಯ ಸಕಾಲಿಕ ಬರಹ

  3. ನಯನ ಬಜಕೂಡ್ಲು says:

    ವಾಸ್ತವದ ಚಿತ್ರಣ

    • ವತ್ಸಲ says:

      ಮಹಿಳಾ ಸಬಲೀಕರಣ ಬಗ್ಗೆ ಗಂಭೀರ ಚಿಂತನೆಯ
      ಈ ಕಾಲಘಟ್ಟದಲ್ಲಿ ವಿದ್ಯಾವಂತ ಸಮುದಾಯ
      ಹೆಚ್ಚು ಹೆಚ್ಚು ಜಾಗ್ರತರಾಗಬೇಕೆಂಬುದೇ ನನ್ನ
      ಅಳಲು. ಇದನ್ನು ಪುಷ್ಟೀಕರಿಸಿದ ನಯನ ರವರಿಗೆ
      ಧನ್ಯವಾದಗಳು.

  4. ನಾಗರತ್ನ ಬಿ. ಅರ್. says:

    ಅಂತರಂಗದ ಆಲಾಪ ಚೆನ್ನಾಗಿದೆ ಸರ್ಕಾರದ ಜೊತೆ…ಅದಕ್ಕಿಂತ ನಾವು ಕಂಡಂತಹ ನಮ್ಮ ಕಡೆಯಿಂದ ಆಗುವ ಸಹಾಯಹಸ್ತ ಚಾಚುವುದು ಉತ್ತಮ ಎಂದು ನನ್ನ ಅನಿಸಿಕೆ.ಪರಿಸ್ಥಿತಿ ಸುಧಾರಿಸಲಿ ಎಂಬ ಆಶಯ ವೂ ನಮ್ಮದಾಗಿದೆ ಈ ನಿಟ್ಟಿನಲ್ಲಿ ಎಲ್ಲರೂ ಯೋಚಿಸುವಂತೆ ಮಾಡಿತು ಈ ಲೇಖನ ಧನ್ಯವಾದಗಳು ಮೇಡಂ

  5. ವತ್ಸಲ says:

    ಸಾಮಾಜಿಕ ಕಳಕಳಿ ಪ್ರತಿಯೊಬ್ಬನ ನೈತಿಕ ಜವಾಬ್ದಾರಿ
    ಎಂದು ಹೇಳಹೊರಟ ನನ್ನ ವಿಚಾರ ಧಾರೆಗೆ ಸ್ಪಂದಿಸಿದ
    ನಾಗರತ್ನರವರಿಗೆ ಧನ್ಯವಾದಗಳು.

  6. padmini says:

    ಕಳಕಳಿಯ ಬರಹ.

  7. ಶಂಕರಿ ಶರ್ಮ says:

    ಈ ಕೊರೊನ ಮಹಾಮಾರಿಯ ನಡುವೆ ನಲುಗಿದ ಜೀವಗಳೆಷ್ಟೊ! ಅತ್ಯಂತ ಮಹತ್ವಪೂರ್ಣ ಸಂದೇಶವನ್ನು ಹೊತ್ತ ಸಕಾಲಿಕ ಬರಹ.

  8. B c n murthy says:

    ಕಷ್ಟದ ಜನಗಳನ್ನು ನೋಡಿದಾಗ ಸಹಾಯ ಮಾಡಬೇಕಾದ ಕಾಲ ಘಟ್ಟ ಇದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: