ಮಣಿಪಾಲದ ಮಧುರ ನೆನಪುಗಳು..ಭಾಗ 5
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಹರಿಹರ ಮಂದಿರ
ಹರ್ಕೂರು ಮನೆಯಲ್ಲಿರುವ ತಂಜಾವೂರು ಚಿತ್ರಕಲಾ ವೈಭವವನ್ನು ವೀಕ್ಷಿಸಿ ಹೊರ ಬರುತ್ತಿದ್ದಂತೆಯೇ ಎದುರುಗಡೆಗೆ ಕಾಣುತ್ತಿದೆ… ಹರಿಹರ ಮಂದಿರ.
ನೆಲ ಮಟ್ಟದಿಂದ ನಾಲ್ಕೈದು ಮೆಟ್ಟಲೇರಿ ಹೋದರೆ ದೇವ ಮಂದಿರದೊಳಗೆ ಪ್ರವೇಶಿಸಿದ ದಿವ್ಯ ಅನುಭವ! ಸುಮಾರು 30ಅಡಿ ಉದ್ದ ಮತ್ತು15 ಅಡಿ ಅಗಲದ ಪುಟ್ಟ ಜಾಗದಲ್ಲಿ ಕಟ್ಟಲ್ಪಟ್ಟ, ದೇವರ ಮೂರ್ತಿ, ಪೂಜೆ ಪುನಸ್ಕಾರವಿಲ್ಲದ ಕಲಾತ್ಮಕ ಮಂದಿರವು ಮನಸೆಳೆಯುತ್ತದೆ. ಮಡಿಕೇರಿಯ ಸರಹದ್ದಿನಲ್ಲಿರುವ ಒಂದು ಪುಟ್ಟ ಗ್ರಾಮದಲ್ಲಿ, ಕೇರಳ ಶೈಲಿಯಲ್ಲಿ ಕಟ್ಟಲ್ಪಟ್ಟ ವಿಷ್ಣು, ಶಿವ, ಪಾರ್ವತಿಯರ, ಈ ಮಂದಿರವು ಸುಮಾರು 1216 ನೇ ಇಸವಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟದ್ದಾಗಿದ್ದು, 800ವರ್ಷಗಳಷ್ಟು ಹಳೆಯದಾಗಿದೆ. ಇಲ್ಲಿಗೆ ಇದರ ಆಗಮನದ ರೀತಿಯು, ಇನ್ನೂ ಬಹಳ ವಿಶೇಷದ್ದಾಗಿದೆ.
ಅಲ್ಲಿದ್ದ ಈ ಹರಿಹರ ಮಂದಿರದ ಬಗ್ಗೆ ತಿಳಿದ ಶೆಣೈಯವರು ಅದನ್ನು ನೋಡಲು ಹೋದಾಗ, ಅದಾಗಲೇ ಅವನತಿಯ ಹಂತವನ್ನು ತಲಪಿತ್ತು. ಯಾವುದೇ ದೇವರ ಮೂರ್ತಿಯೂ ಅಲ್ಲಿರಲಿಲ್ಲ.. ಹಾಗೆಯೇ ಪೂಜೆಯೂ ನಡೆಯುತ್ತಿರಲಿಲ್ಲ. ಅಲ್ಲಿಯ ಗ್ರಾಮಸ್ಥರು ಕೂಡಾ ಅದರ ಬಗ್ಗೆ ಯಾವುದೇ ಕಾಳಜಿಯನ್ನು ವಹಿಸಿರಲಿಲ್ಲ. ಶೆಣೈಯವರು ಅದನ್ನು ಕಂಡು ತುಂಬಾ ಬೇಸರಗೊಂಡು, ಅಲ್ಲಿಯ ಜನಕ್ಕೆ ಸ್ವಲ್ಪ ದುಡ್ಡು ಕೊಟ್ಟು ಅಲ್ಲಿಂದ ದೇವಾಲಯವನ್ನು ತರುವ ಪ್ರಯತ್ನ ಮಾಡಿದರು. ಆದರೆ ಅವರಿಗೆ ಅಲ್ಲಿ ದೊರೆತುದು ಮುಂಭಾಗದ ಬಾಗಿಲು, ಮೇಲಿನ ಛಾವಣಿಯ ಅರ್ಧಭಾಗ ಮತ್ತು ಕೆಲವು ಕಂಬಗಳು ಮಾತ್ರ. ಆದರೆ ನಮಗಲ್ಲಿ ಪೂರ್ತಿ ರೂಪದಲ್ಲಿ ಕಾಣುವ ದೇಗುಲದಲ್ಲಿ, ಸ್ವಲ್ಪ ಹೊಸತರಂತೆ ಕಾಣುವ ಛಾವಣಿಯ ಅರ್ಧಭಾಗ, ಕೆಲವು ಕಂಬಗಳು, ಹಿಂಬದಿಯ ಬಾಗಿಲು ಇತ್ಯಾದಿಗಳು, ಶೆಣೈಯವರ ಊಹೆಯಂತೆ ರಚಿಸಲಾದ ಕೃತಿಗಳಾಗಿವೆ.
ಮಂದಿರದ ಮುಂಭಾಗದ ಬಾಗಿಲು ಹಾಗೂ ಕಂಬಗಳು ನೂರಾರು ವರ್ಷಗಳಷ್ಟು ಹಳೆಯದಾದರೂ ಸುಂದರವಾಗಿ ಗಟ್ಟಿಮುಟ್ಟಾಗಿದೆ. ಮುಖ್ಯವಾಗಿ ಮುಖ ಮಂಟಪದ ಮೇಲ್ಛಾವಣಿಯ ಮರದಲ್ಲಿಯ ಅತ್ಯದ್ಭುತ ಕುಸುರಿ ಕೆತ್ತನೆಯ ಚಿತ್ರಗಳು ಗಮನಸೆಳೆಯುತ್ತವೆ. ಮೇಲ್ಛಾವಣಿಯ ಒಂದು ಭಾಗದಲ್ಲಿ ಮಹಾವಿಷ್ಣುವಿನ ವಿವಿಧ ರೂಪಗಳ ಕೆತ್ತನೆಗಳಿದ್ದರೆ, ಇನ್ನೊಂದು ಭಾಗದಲ್ಲಿ ಮಹಾಶಿವನ ವಿವಿಧ ರೀತಿಯ ಮನಮೋಹಕ ಕುಸುರಿ ಕಲೆಯು ನಮ್ಮನ್ನು ಕಣ್ಣೆವೆ ಮುಚ್ಚದಂತೆ ಹಿಡಿದಿಟ್ಟುಕೊಳ್ಳುತ್ತದೆ. ಮಂದಿರದ ಎರಡೂ ಪಾರ್ಶ್ವಗಳಲ್ಲಿ, ಕೇರಳದ ಶೈಲಿಯ ಮರದ ಕೆತ್ತನೆಯ, ಸೊಗಸಾದ ಉದ್ದನೆಯ ಆಸನಗಳಿವೆ. ವಿಜಯನಾಥ ಶೆಣೈಯವರ ಸೃಜನಶೀಲತೆ ಹಾಗೂ ಕಲಾತ್ಮಕ ದೃಷ್ಟಿ ಕೋನಕ್ಕೆ ಅವರ ಈ ಸೃಷ್ಟಿ, ಜೀವಂತ ಸಾಕ್ಷಿಯಂತಿದೆ.. ಈ ಹರಿಹರ ಮಂದಿರ!
ಅದಾಗಲೇ ಮಧ್ಯಾಹ್ನ ಗಂಟೆ 11:30. ತಲೆಯ ಮೇಲ್ಗಡೆ ಪ್ರಖರ ಸುಡುಬಿಸಿಲು ಬೇರೆ. ನಮ್ಮ ಮೊದಲ ಹಂತದ ವೀಕ್ಷಣೆಯ ಸಮಯವೂ ಮುಗಿದಿತ್ತು. ಕುತೂಹಲಕ್ಕಾಗಿ ನಮ್ಮ ಗೈಡ್ ಬಳಿ ಕೇಳಿದೆ, “ಇಷ್ಟು ಚಂದದ ಸ್ಥಳದಲ್ಲಿ ಸಿನಿಮಾ ಶೂಟಿಂಗ್ ಏನಾದರೂ ನಡೆದಿದೆಯಾ? ಹಾಗೇನಾದರೂ ಆಗಿದ್ದರೆ, ಈ ವಿಶೇಷ ಸ್ಥಳಕ್ಕೆ ಪ್ರಚಾರ ಸಿಗುತ್ತಿತ್ತು ಅಲ್ಲವೇ?” ಎಂದು. ಅದಕ್ಕವರು, “ಇಲ್ಲ, ಶೂಟಿಂಗ್ ಪ್ರಾರಂಭಿಸಿದರೆ ಎಲ್ಲವೂ ಹಾಳಾಗುವ ಸಾಧ್ಯತೆ ಇರುವುದರಿಂದ ಶೆಣೈಯವರು ಅದಕ್ಕೆ ಅನುಮತಿಸಲಿಲ್ಲ” ಎಂದರು. ನನಗೂ ಅದು ಹೌದೆನ್ನಿಸಿತು.. ಜೊತೆಗೇ ಯಾವುದೇ ಆಮಿಷ, ಪ್ರಲೋಭನೆಗೆ ಒಳಗಾಗದ ಶೆಣೈಯವರ ನಿಸ್ವಾರ್ಥ ಕಾರ್ಯದ ಬಗ್ಗೆ ಹೆಮ್ಮೆ ಎನಿಸಿತು. ಎರಡನೇ ಹಂತದ ವೀಕ್ಷಣೆಗಾಗಿ ಮಧ್ಯಂತರ ವಿರಾಮದಲ್ಲಿ ನಮಗಾಗಿ ರುಚಿಕಟ್ಟಾದ, ತಂಪಾದ ಪುನರ್ಪುಳಿ ಹಣ್ಣಿನ ತಾಜಾ ಶರಬತ್ತು, ಲೋಟಗಳಲ್ಲಿ ತುಂಬಿ ಕಾಯುತ್ತಿತ್ತು. ಅದನ್ನು ಬೇಕಾದಷ್ಟು ಕುಡಿದು ತಯಾರಾದಾಗ, ಮುಂದಿನ ಹಂತದ ವೀಕ್ಷಣೆಗಾಗಿ ಇನ್ನೊಬ್ಬರು ಮಾರ್ಗದರ್ಶಿ ನಮಗಾಗಿ ಕಾಯುತ್ತಿದ್ದರು..ಬೇರೆ ಆರು ಮಂದಿ ಪ್ರವಾಸಿಗರ ಜೊತೆಗೆ.
………ಮುಂದುವರಿಯುವುದು.
ಈ ಲೇಖನಸರಣಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=33524
–ಶಂಕರಿ ಶರ್ಮ, ಪುತ್ತೂರು
ತುಂಬಾ ಸೊಗಸಾಗಿದೆ ಲೇಖನ. ಇತಿಹಾಸ ಸಂಬಂಧಿ ವಿಚಾರ ಗಳು ಬಹಳ ಮುದ ನೀಡುತ್ತವೆ ಚೆನ್ನಾಗಿದೆ
ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.
ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು.ಸಾಂದರ್ಭಿಕ ಚಿತ್ರಗಳು ನಿರೂಪಣೆ ಸೂಗಸಾಗಿ ಬಂದಿದೆ ಧನ್ಯವಾದಗಳು ಮೇಡಂ.
ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು ನಾಗರತ್ನ ಮೇಡಂ ಅವರಿಗೆ.
ಲೇಖನ,ಚಿತ್ರ,ವಿವರಣೆ ಚೆನ್ನಾಗಿತ್ತು ಅಭಿನಂದನೆಗಳು
ಓದಿ, ಮೆಚ್ಚಿ, ಸ್ಪಂದಿಸಿದ ತಮಗೆ ಹೃತ್ಪೂರ್ವಕ ನಮನಗಳು ..ಅಕ್ಕಾ
ಸೊಗಸಾದ ಚಿತ್ರದಿಂದೊಡಗೂಡಿದ ಸುಂದರ ಲೇಖನ.
ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು..ಪದ್ಮಾ ಮೇಡಂ
‘ಮಣಿಪಾಲದ ಮನೆಗಳ ದರ್ಶನ’ ಬಹಳ ಸೊಗಸಾಗಿ ಮೂಡಿ ಬರುತ್ತಿದೆ..