ಮಣಿಪಾಲದ ಸುಂದರ ನೆನಪುಗಳು : ಭಾಗ 2

Share Button

ಅದಾಗಲೇ ಈ ಸಂಸ್ಕೃತಿ ಗ್ರಾಮದ ಪ್ರಖ್ಯಾತಿ ದೇಶದಗಲ ಹಬ್ಬಲಾರಂಭಿಸಿತ್ತು. ಹೆರಿಟೇಜ್ ವಿಲೇಜ್ ನ ನಿರ್ಮಾಣದ ಹಂತದಲ್ಲಿ ದೇಶ ವಿದೇಶಗಳ ವಾಸ್ತುಶಿಲ್ಪಿಗಳು, ಕಲಾಕಾರರು, ಲೇಖಕರು ಸಂದರ್ಶನ ನೀಡಲಾರಂಭಿಸಿದ್ದರು.ವಿರೋಧಾಭಾಸವೆಂಬಂತೆ, ಈ ಕನ್ನಡದ ನೆಲದ ಅದ್ಭುತ ಕೆಲಸದ ಬಗ್ಗೆ ಮೊದಲ ಬಾರಿಗೆ ವಿಸ್ತಾರವಾದ ಲೇಖನ ಪ್ರಕಟವಾದುದು ಮಾತ್ರ ಮಲಯಾಳ ಭಾಷೆಯ ಪತ್ರಿಕೆಯಲ್ಲಿ! ಆ ಬಳಿಕ ವಿವಿಧ ಭಾಷೆಯ ಪತ್ರಿಕಾವರದಿಗಾರರು ಬರಲಾರಂಭಿಸಿದರು.

ದೆಹಲಿಯ ಪಯೋನೀರ್, ಮುಂಬೈಯ ಇಕನಮಿಕ್ಸ್ ಟೈಮ್ಸ್, ವಿಜಯವಾಡದ ಸ್ವಾತಿ ತೆಲುಗು ಪತ್ರಿಕೆ, ಶ್ರೀಲಂಕಾದ ತಮಿಳು ಪತ್ರಿಕೆ ಕುಮುದಂ, ಪುಣೆಯ ಮರಾಠಿ ಪತ್ರಿಕೆ ನಕಾಶ್ ಇತ್ಯಾದಿ ಪತ್ರಿಕೆಗಳಲ್ಲಿ ಇಲ್ಲಿಯ ಕುರಿತ ನುಡಿಚಿತ್ರಗಳು ಪ್ರಕಟಗೊಂಡವು. ಇವುಗಳ ಮೇಲೆ ಗರಿ ಎಂಬಂತೆ, ಪಾಕಿಸ್ಥಾನದ ಉರ್ದು ಭಾಷೆಯ ಪತ್ರಿಕೆಯೊಂದು ಶೆಣೈಯವರನ್ನು ಸಂದರ್ಶಿಸಿ ಸೊಗಸಾದ ಲೇಖನವನ್ನು ಪ್ರಕಟಿಸಿತು. ಫಿನ್ಲೆಂಡ್, ಶ್ರೀಲಂಕಾ, ಹಾಂಗ್ ಕಾಂಗ್, ಫ್ರಾನ್ಸ್ , ಡೆನ್ಮಾರ್ಕ್ ಮುಂತಾದ ದೇಶಗಳ ಪತ್ರಿಕೆಗಳಲ್ಲಿ ಹೆರಿಟೇಜ್ ವಿಲೇಜ್ ನ ವಿವರಗಳು ಪ್ರಕಟವಾದುವು. ಈಗಿರುವಂತೆ ಅಂತರ್ಜಾಲದಂತಹ ಯಾವುದೇ ಸೌಲಭ್ಯವಿಲ್ಲದ ಕಾಲದಲ್ಲಿಯೂ ಇಂತಹ ವಿಶೇಷ ಪ್ರಚಾರ ಲಭಿಸಿರುವುದು ಇದರ ಔನ್ನತ್ಯವನ್ನು ಸೂಚಿಸುತ್ತದೆ. ಆ ದೇಶಗಳಿಂದ ಹಿರಿಯ ಅಧಿಕಾರಿಗಳು ಬಂದು ಭೇಟಿ ಮಾಡಿ ತುಂಬಾ ಪ್ರಭಾವಿತರಾಗಿ ಇಲ್ಲಿಯ ಕಾರ್ಯಗಳಿಗೆ ಸಾಕಷ್ಟು ಧನ ಸಹಾಯವನ್ನೂ ಮಾಡಿದರು. ನಿರಂತರ 19 ವರ್ಷಗಳ ಶ್ರಮದಿಂದ ತಮ್ಮ ಈ ಯೋಜನೆಯನ್ನು ಪೂರ್ತಿಗೊಳಿಸಿದರು, ಶೆಣೈಯವರು. 

ತಮ್ಮ ಹಸ್ತಶಿಲ್ಪ ಮನೆಯಂತಹ ಹಲವಾರು ಮನೆಗಳನ್ನು ಪುನರ್ನಿಮಾಣಕಾರ್ಯದಿಂದ ಸಂರಕ್ಷಿಸಿದರು.  ನೋವಿನ ಸಂಗತಿ ಎಂದರೆ, ನಮ್ಮ ಸರಕಾರದಿಂದ ಆರೂವರೆ ಎಕರೆಯಷ್ಟು  ಜಾಗ ಗುತ್ತಿಗೆ ಮೇರೆಗೆ ಸಿಕ್ಕಿದುದು ಬಿಟ್ಟರೆ ಬೇರೇನೂ ಸಹಾಯ ಸಿಗಲಿಲ್ಲ. ಪ್ರವಾಸಿಗರು ನೀಡುವ ದೇಣಿಗೆ, ಅವರ ಪ್ರವೇಶ ಶುಲ್ಕ ಇತ್ಯಾದಿಗಳಿಂದಲೇ ಇಲ್ಲಿಯ ನಿರ್ವಹಣೆ ಆಗಬೇಕಿದೆ. ಎರಡು ವರ್ಷಗಳ ಹಿಂದೆ, ಅಂದರೆ, 2018ರಲ್ಲಿ ಇಂತಹ ಮಹಾನ್ ವ್ಯಕ್ತಿ ವಿಜಯನಾಥ ಶೆಣೈಯವರ ದೇಹಾಂತ್ಯವಾದರೂ, ಇಂದಿಗೂ ಅವರ ಈ ಸಾಧನೆಯು ಎಲ್ಲರಿಗೂ ಸದಾ ಸ್ಫೂರ್ತಿದಾಯಕವಾಗಿರುವುದು ಸುಳ್ಳಲ್ಲ.

  ಸಾಂಸ್ಕೃತಿಕ ಗ್ರಾಮದೊಳಗಡಿಯಿಟ್ಟು..

           ಗ್ರಾಮ ಸಂಸ್ಕೃತಿಯ ವಿಸ್ತೃತ ಜಗತ್ತಿನ ಪ್ರವೇಶ ದ್ವಾರವೇ ಸುಮಾರು ಏಳಡಿ  ಎತ್ತರವಿದ್ದು, ಎರಡು ಬೃಹತ್ ಬಾಗಿಲುಗಳನ್ನು ಹೊಂದಿದೆ. ಅದರ ಒಂದೊಂದು ಬಾಗಿಲನ್ನು ಕೂಡಾ ಸಾಮಾನ್ಯನಿಗೆ ಸ್ವಲ್ಪ ಸರಿಸಲೂ ಸಾಧ್ಯವಾಗದಷ್ಟು ಭಾರ, ದೃಢ! ಮೊದಲಿಗೆ ನಮ್ಮ ಮಾರ್ಗದರ್ಶಿಯು ಮುಚ್ಚಿದ ಕದವನ್ನು  ತೆರೆಯಲು ಸೂಚಿಸಿದರು. ಆದರೆ, ತೆರೆಯಲು ಏನು ಮಾಡಿದರೂ ಸಾಧ್ಯವಾಗಲಿಲ್ಲ! ಆಮೇಲೆ ಅವರೇ ಅದನ್ನು ತೆರೆದು ತೋರಿಸಿದಾಗ ತಿಳಿಯಿತು.. ಕಳ್ಳ ಚಿಲಕವೊಂದು ಅದರೊಳಗಿತ್ತು! ನಾನು ಚಿಕ್ಕಂದಿನಲ್ಲಿದ್ದ ನಮ್ಮ ಹಳ್ಳಿ ಮನೆಯ ಬಾಗಿಲುಗಳಿಗೆ ಇಂತಹುದೇ ಚಿಲಕಗಳಿದ್ದುದು ನೆನಪಾಯಿತು. ಮುಂದಕ್ಕೆ, ನಮ್ಮ ಮಾರ್ಗದರ್ಶಿಯು  ಆ ಮನೆಯ ವಿಶೇಷತೆಗಳ ಬಗೆಗೆ ತಿಳಿಸತೊಡಗಿದರು.  

ಸುಮಾರು 1866ನೇ ಇಸವಿಯಲ್ಲಿ  ನೇರಾ ಎಂಬ ಊರಿನಲ್ಲಿದ್ದ ಮಾಧ್ವ ವೈಷ್ಣವ, ತುಳು ಮಾತೃಭಾಷೆಯಾಗಿದ್ದ ಬ್ರಾಹ್ಮಣರಿಗೆ ಸೇರಿದುದಾಗಿತ್ತು, ನಾವು ಹೊಕ್ಕ  ಮನೆ. ಆ ಮನೆಯನ್ನು ಕೆಡಹುವರೆಂದು ಯಾರ ಮೂಲಕವೋ ತಿಳಿದು, ಶೆಣೈಯವರು ಎಲ್ಲವನ್ನೂ ಇಲ್ಲಿಗೆ ತಂದು ಹಂತ ಹಂತವಾಗಿ ಪುನರ್ನಿಮಿಸಿದರು. ಎದುರು ಭಾಗದಲ್ಲಿರುವುದೇ ದಪ್ಪ ಕಂಬಗಳ ಚಾವಡಿ.  ಈ ಬಲಿಷ್ಠ ಕಂಬಗಳು ಮನೆಯ ಮುಂಭಾಗಕ್ಕೆ ವಿಶೇಷ ಕಳೆಯನ್ನು ನೀಡಿವೆ. ಯಾವುದೋ ಕಾರಣದಿಂದ, ಈ ಮನೆಯು ಪೂರ್ತಿಯಾಗಿ ಸ್ಥಳಾಂತರಿಸಲಾಗಿಲ್ಲ. ಅಂದರೆ, ಒಳ ಕೋಣೆಗಳಾವುವೂ ಇಲ್ಲಿಲ್ಲ. ಇರುವ ಚಾವಡಿ ಮತ್ತು ಸುಂದರ ವಿನ್ಯಾಸದ ಕೆತ್ತನೆಗಳಿಂದ ಕೂಡಿದ ಕಿಟಿಕಿಗಳುಳ್ಳ ಅದರ ಮೇಲುಪ್ಪರಿಗೆಯು ತುಂಬಾ ಸೊಗಸಾಗಿದೆ. ಮುಖ್ಯ ದ್ವಾರದ ಮೇಲ್ಗಡೆಗೆ ಬೀಜಾಕಾರದ ಕೆತ್ತನೆಯಿದೆ. ಜೀವದ ಜೀವನವು ಪ್ರಾರಂಭವಾಗುವುದು ಒಂದು ಪುಟ್ಟ ಬೀಜದಿಂದ ಎಂಬುದನ್ನು ಅದು ಸಾಂಕೇತಿಸುತ್ತದೆ. ಅದರ ಪಕ್ಕದಲ್ಲಿ, ಐಶ್ವರ್ಯ ವೃದ್ಧಿಗಾಗಿ ಗಜಲಕ್ಷ್ಮಿ ಹಾಗೂ ಕೆಟ್ಟ ದೃಷ್ಟಿಯಿಂದ ರಕ್ಷಿಸುವ ಸಲುವಾಗಿ ಕೀರ್ತಿಮುಖವಿದೆ. ಮಣ್ಣಿನೊಂದಿಗೆ ಕಹಿಬೇವು ಮತ್ತು ಕಬ್ಬಿನ ರಸ ಸೇರಿಸಿ, ಕಲಸಿ ಕಟ್ಟಿದ ದಟ್ಟ ಕೆಂಪಿನ ಮಣ್ಣಿನ ಗೋಡೆಯಲ್ಲಿ, ಬಿಳಿ ಬಣ್ಣದಲ್ಲಿ ಬಿಡಿಸಿದ ಸುಂದರ ರಂಗೋಲಿಗಳು ಕಣ್ಮನ ಸೆಳೆಯುತ್ತವೆ.  ಇದೇ ಜಗಲಿಯ ಮೇಲೆ ಪ್ರವಾಸಿಗರಿಗೆ ಬೇಕಾದ ಮಾಹಿತಿಗಳನ್ನು ಒದಗಿಸಲಾಗುತ್ತದೆ ಮತ್ತು ಡಬ್ಬವನ್ನಿರಿಸಿ, ಉದಾರ ದೇಣಿಗೆಗಾಗಿ ಮನವಿಯನ್ನು ಮಾಡಲಾಗಿದೆ.

ಇನ್ನು ಮುಂದಕ್ಕಿದೆ….

ಶೃಂಗೇರಿ ಭಾರತೀ ಬೀದಿಯ ಮನೆ

          ಸುಮಾರು150 ವರ್ಷ ಹಳೆಯದಾದ ಶೃಂಗೇರಿ ಬ್ರಾಹ್ಮಣರ  ಈ ದೊಡ್ಡ ಹಂಚಿನ ಮನೆಯು ಹಿಂದೆ, ಶೃಂಗೇರಿಯ ಭಾರತೀ ಬೀದಿಗೆ ಉತ್ತಮ ಆಧ್ಯಾತ್ಮ ಮೆರುಗನ್ನು ಕೊಟ್ಟಿತ್ತು. ಹೊರಗಡೆಗೆ ತೆರೆದ ವಿಶಾಲವಾದ ಮೊಗಸಾಲೆಯನ್ನು ದಾಟಿ ಒಳಗೆ ಪ್ರವೇಶಿಸಿದರೆ, ಮನೆ ಇಷ್ಟೊಂದು ದೊಡ್ಡದಿದೆಯೇ  ಎಂದು ಅಚ್ಚರಿಯಾಗುವಂತೆ ಹಂತ ಹಂತವಾಗಿ ತೆರೆದುಕೊಳ್ಳುತ್ತದೆ. ಮನೆಯ ಹೊರಗೋಡೆಯ ಸುತ್ತಲೂ ಹಣ್ಣುಕಾಯಿ, ದೇವರಮೂರ್ತಿ, ಕರಕುಶಲ ವಸ್ತುಗಳು ಮುಂತಾದ ಸಾಂಪ್ರದಾಯಿಕ ಸಾಮಗ್ರಿಗಳ ಅಂಗಡಿಗಳಲ್ಲದೆ, ಸ್ವತ: ಸೋಡ ತಯಾರಿಸಿ ಮಾರುವಂತಹ ಪುಟ್ಟ ಸೋಡ ತಯಾರಿಕಾ ಯಂತ್ರವೂ ಇರುವುದು ಸೋಜಿಗ. ಈ ಎಲ್ಲಾ ಅಂಗಡಿಗಳನ್ನೂ ಆ ಕಾಲದಲ್ಲಿ ಮನೆಯವರೇ ನಡೆಸುತ್ತಿದ್ದು, ಅಂಗಡಿಗಳಿಗೆ ಮನೆಯ ಒಳಗಿನಿಂದಲೇ  ಪ್ರವೇಶಿಸುವಂತಹ ವ್ಯವಸ್ಥೆಯು ಅಪ್ಪಟ ಹಳೆಯ ಭಾರತೀಯ ಬೀದಿಯನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಪ್ರತೀ ವರ್ಷ ಮರದೆಣ್ಣೆ, ಪಾಲಿಶ್ ಹಾಗೂ ದಿನಾಲೂ ಧೂಳು ಒರಸಿ, ಎಲ್ಲವನ್ನೂ ಚೆನ್ನಾಗಿ ನಿರ್ವಹಣೆ ಮಾಡುತ್ತಿರುವುದರಿಂದ ಇಲ್ಲಿಯ ಬಲವಾದ ದೊಡ್ಡ ಕಂಬಗಳು ಹೊಸತರಂತೆ ಫಳಫಳ ಹೊಳೆಯುತ್ತಿವೆ. ಇಲ್ಲಿರುವ ಎಲ್ಲಾ ಮನೆಗಳಿಗಿಂತಲೂ ಹೆಚ್ಚು ತಂಪಾಗಿರುವ ಮನೆ ಇದಾಗಿದೆ.  ಮನೆಯವರು ಉಪಯೋಗಿಸುತ್ತಿದ್ದ ವೀಣೆ, ಗಡಿಯಾರ, ಬರೆಯುವ ಮೇಜು, ಅದಕ್ಕಿರುವ ಬೆಳಕಿನ ವ್ಯವಸ್ಥೆ ಎಲ್ಲವನ್ನೂ ಸುವ್ಯವಸ್ಥಿತವಾಗಿ ಜೋಡಿಸಿ ಇಡಲ್ಪಟ್ಟಿದೆ. ಮುಂದಕ್ಕೆ ಹೋಗುತ್ತಿದ್ದಂತೆ ಪುಟ್ಟ ಹಜಾರ, ಅಲ್ಲಿಯೇ ಪಕ್ಕದಲ್ಲಿದೆ ಗಟ್ಟಿ ಮುಟ್ಟಾದ ಮರದ ಮಂಚ. ಇನ್ನೊಂದು ಪಕ್ಕದಲ್ಲಿ  ಮೇಲುಪ್ಪರಿಗೆ ಹೋಗಲು ಚಂದದ ಮರದ ಮೆಟ್ಟಿಲುಗಳು ನಮ್ಮನ್ನು ಮೇಲಕ್ಕೆ ಹೋಗಲು ಪ್ರೇರೇಪಿಸಿದರೂ  ಮೇಲೇನೂ ನೋಡಲು ವಿಶೇಷವಿರಲಿಲ್ಲ. ಮುಂದಿನ ಕೋಣೆಯ ಮೂಲೆಯಲ್ಲಿದೆ, ಉಪ್ಪು ಇತ್ಯಾದಿಗಳನ್ನು ಸುರಕ್ಷಿತವಾಗಿಡಲು ದೊಡ್ಡದಾದ ಮಣ್ಣಿನಜಾಡಿ. ಎದುರುಗಡೆಗಿರುವ ಚಂದದ ಕುಸುರಿ ಚಿತ್ರವಿರುವ ಮರದ ಚೆನ್ನೆಮಣೆಯು “ಬನ್ನಿ ಆಟವಾಡೋಣ..” ಎಂದು ಕರೆಯುತ್ತಿದೆ! ಪಕ್ಕದ ಪುಟ್ಟ ಕೋಣೆಯಲ್ಲಿ ಕಟ್ಟಿರುವ ತೊಟ್ಟಿಲು, ಪುಟ್ಟ ಕಂದನ ಬರುವಿಕೆಗೆ ಕಾದುಕುಳಿತಂತಿದೆ. ಅದರ ಪಕ್ಕದ ಸಣ್ಣ ಮಂಚದಲ್ಲಿ ಅದೆಷ್ಟು ಮಕ್ಕಳ ಜನನಕ್ಕೆ ಕಾರಣರಾದ ತಾಯಂದಿರ ಸಂಭ್ರಮಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆಯೋ ಏನೋ! ಈ ಕೋಣೆಯ ಎರಡೂ ಪಕ್ಕದ ತಾರಸಿ ಸಮೀಪವಿದ್ದ ಸಾಮಾನು ಇರಿಸುವ ಹಲಿಗೆಗಳಲ್ಲಿ ಮನೆಯಲ್ಲಿ ಉಪಯೋಗಿಸಲ್ಪಡುವ ಸಾಮಾನುಗಳನ್ನು ಇರಿಸಲಾಗಿದೆ. ಅವುಗಳಲ್ಲಿ, ಚಿತ್ರ ಚಿತ್ತಾರವಿರುವ, ಗಟ್ಟಿ ಮುಟ್ಟಾದ ದೊಡ್ಡ ಸಂದೂಕವೊಂದು ಗಮನಸೆಳೆಯುವಂತಿದೆ. ಈ ಅಚ್ಚುಕಟ್ಟಾದ ಹೆರಿಗೆಕೋಣೆ ದಾಟಿದರೆ ಇನ್ನೊಂದು ಸಣ್ಣ ಹಜಾರದಲ್ಲಿ ಬೀಸುವ ಕಲ್ಲೊಂದು ರಾಗಿ ಬೀಸಲು ಸಿದ್ಧವಾಗಿದ್ದರೆ, ಇನ್ನೊಂದು ಕಡೆಗೆ ದೊಡ್ಡದಾದ ಕಡೆಯುವ ಕಲ್ಲು “ನನ್ನನ್ನು ಅಲ್ಲಾಡಿಸು ನೋಡೋಣ!” ಎಂದು ಪಂಥಾಹ್ವಾನ ಮಾಡುವಂತಿದೆ.

            ಮುಂದಿನ ಪುಟ್ಟ ಹಜಾರದಲ್ಲಿ ಹೋಮಕುಂಡವೊಂದು  ಆ ಸ್ಥಳದ ಪಾವಿತ್ರ್ಯತೆಯನ್ನು ಅರುಹುತ್ತಿದ್ದರೆ. ಒಳಗಡೆಗೆ ಅಚ್ಚುಕಟ್ಟಾದ ಅಡಿಗೆಕೋಣೆಯು ಅಟ್ಟು ಉಣಬಡಿಸಲು ಸಂಭ್ರಮದಿಂದ ಕಾಯುವಂತಿದೆ. ಅಲ್ಲಿಯೇ ನೆಲದಲ್ಲಿರುವ ಮಣ್ಣಿನ ಒಲೆಗಳು, ಅಡಿಗೆಗೆ ಉಪಯೋಗಿಸುತ್ತಿದ್ದ ಅವರದೇ ಮಣ್ಣಿನ, ಲೋಹದ ಪಾತ್ರೆ ಪಗಡಿಗಳು ಗೋಡೆ ಪಕ್ಕದ ಕಪಾಟಲ್ಲಿ ಶಿಸ್ತಿನಲ್ಲಿ ಕೂತಿವೆ. ಮುಂದಕ್ಕೆ ದೇವರಕೋಣೆಯು ಅಂದಿನ ಕಾಲದ ಪೂಜಾ ಸಾಮಗ್ರಿಗಳನ್ನೊಳಗೊಂಡು ಶೋಭಿಸುತ್ತಿರುವುದು ಮನಸ್ಸಿಗೆ ಸಂತೋಷ ಕೊಡುತ್ತದೆ. ಅಲ್ಲೇ ಎಡ ಪಕ್ಕಕ್ಕಿದೆ ಊಟದ ಕೋಣೆ. ಊಟದ ಮಣೆಗಳು ಸಾಲು ಭಟರಂತೆ ಗೋಡೆಗೊರಗಿ ನಿಂತು ಊಟದ ತಟ್ಟೆ ಲೋಟಗಳ ಸದ್ದಿಗಾಗಿ ಕಾದು ಕುಳಿತಿವೆ! ಇಲ್ಲಿರುವ ಪ್ರತಿಯೊಂದು ವಸ್ತುವೂ, ಅದೇ ಮೂಲ ಮನೆಯಿಂದ ತಂದಿರಿಸಿರುವುದು ಬಹಳ ವಿಶೇಷ.

       ಮನೆಯ ಹೊರಗಡೆಗೆ, ರಕ್ತೇಶ್ವರಿ ಗುಡಿ, ಅಕ್ಕಿ, ಭತ್ತಗಳನ್ನು ಹಾಕಿಟ್ಟು ವರ್ಷಗಟ್ಟಲೆ ಕಾಪಿಡುವಂತಹ, ಉಡುಪಿ ಜಿಲ್ಲೆಯ ಹಾವಂಜೆಯಿಂದ ತಂದಂತಹ ಮರದ ಪತ್ತಾಯ. ಸುಂದರವಾದ ಕೆತ್ತನೆಯ ಚಂದದ ರಥವು ಹಿಂದಿನ ವೈಭವವನ್ನು ನೆನೆದು ನಿಟ್ಟುಸಿರು ಬಿಡುತ್ತಾ ನಿಂತಿವೆ. ಆ ಕಾಲದಲ್ಲಿ ಪ್ರಯಾಣಕ್ಕೆ ಅಥವಾ ವಸ್ತು ಸಾಗಾಣಿಕೆಗೆ ಉಪಯೋಗಿಸುತ್ತಿದ್ದ ಕುದುರೆ ಸಾರೋಟು ತನ್ನನ್ನು ಎಳೆಯಲು ಬರುವ ಕುದುರೆಗಾಗಿ ಹಾಗೂ ತಾನು ಕರೆದೊಯ್ಯಲಿರುವ ಯಜಮಾನನಿಗಾಗಿ ಕಾದು ನಿಂತಂತಿದೆ. ….

…ಮುಂದುವರಿಯುವುದು.

ಈ ಲೇಖನ ಸರಣಿಯ ಹಿಂದಿನ ಪುಟ ಇಲ್ಲಿದೆ: http://surahonne.com/?p=33370

– ಶಂಕರಿ ಶರ್ಮ, ಪುತ್ತೂರು.

8 Responses

  1. ನಯನ ಬಜಕೂಡ್ಲು says:

    Beautiful

  2. ASHA nooji says:

    ಹಳೆಕಾಲದ ಮನೆಗಳನ್ನು ನೋಡಲು ಖುಷಿ
    ಚೆನ್ನಾಗಿ ವಿವರಿಸಿ ದಿರಿ ಅಕ್ಕಾ
    ನನಗಂತೂ ನೋಡಿದಂತೆ ಆಯಿತು

  3. ಜಲಜಾರಾವ್ says:

    ಹೋದ ತಿಂಗಳ ಕೊನೆ ವಾರದಲ್ಲಿ ಉಡುಪಿಯಲ್ಲೇ ಇದ್ದೆವು. ಮಣಿಪಾಲದಲ್ಲಿರುವ ಅನಾಟಮಿ ಮ್ಯೂಸಿಯಂ ಅನ್ನು ನೋಡಿ ಬಂದೆವು. ಈ ಲೇಖನ ಓದಿದ್ದರೆ ಹೆರಿಟೇಜ್ ವಿಲೇಜ್ ಅನ್ನೂ ನೋಡಬಹುದಿತ್ತು. .. ಚೆಂದದ ಲೇಖನ

  4. Padma Anand says:

    ಸವಿಸ್ತಾರವಾಗಿ, ಆಪ್ತವಾದ ವರ್ಣನೆಯಿಂದಾಗಿ ಲೇಖನ ಮುದನೀಡುತ್ತಿದೆ.

  5. ನಾಗರತ್ನ ಬಿ. ಅರ್. says:

    ವಾವ್ ಚೆನ್ನಾಗಿ ಮೂಡಿ ಬರುತ್ತಿದೆ ಮಣಿಪಾಲದ ಸುಂದರ ನೆನಪು ಅಭಿನಂದನೆಗಳು ಮೇಡಂ.

  6. sudha says:

    heritage should be preserved

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: