ಸಾಂಸ್ಕೃತಿಕ ಹೊಳಲ್ಕೆರೆ : ಶೈಕ್ಷಣಿಕ ಪ್ರವಾಸ ಕಥನ-ಭಾಗ 1

Share Button

ಹೊಳಲ್ಕೆರೆ ತಾಲ್ಲೂಕಿನವರ ಧಾರ್ಮಿಕ ಜಾಗೃತಿಯನ್ನು ಕುರಿತ ಒಂದು ಅಧ್ಯಯನ ಮಾಡುವ ಪ್ರಾಜೆಕ್ಟನ್ನು ಕೈಗೆತ್ತಿಕೊಂಡಾಗ ಕ್ಷೇತ್ರಕಾರ್ಯ ಮಾಡಬೇಕಾಯಿತು. ಅದು ಪ್ರಶ್ನಾವಳಿಗೆ ಉತ್ತರವನ್ನು ಆಯ್ದ ವ್ಯಕ್ತಿಗಳಿಂದ ಪಡೆಯುವುದರ ಜೊತೆಗೆ ಪ್ರಬಂಧದ ಭಾಗವಾದ ದೈವಾರಾಧನೆಯ ಸ್ವರೂಪ, ದೈವಕೇಂದ್ರಿತ ಆಚರಣೆಗಳ ವೈಶಿಷ್ಟ್ಯ, ಧಾರ್ಮಿಕ ಒಳನೋಟವುಳ್ಳ ಐತಿಹ್ಯ, ಐತಿಹಾಸಿಕ ಮಹತ್ವವುಳ್ಳ ಸ್ಥಳಗಳ ಅಧ್ಯಯನವನ್ನೂ ಒಳಗೊಂಡಿತ್ತು. ಓಡಾಟವನ್ನು ಒಂದು ರೀತಿಯ ಶೈಕ್ಷಣಿಕ ಪ್ರವಾಸ ಕಥನ ಎನ್ನಬಹುದು.

1 ಪರಿಸರಾತ್ಮಕ ಹಿನ್ನೆಲೆ

ಚಿತ್ರದುರ್ಗ ಜಿಲ್ಲೆಯ ಪ್ರಮುಖ ತಾಲ್ಲೂಕುಗಳಲ್ಲಿ ಹೊಳಲ್ಕೆರೆಯೂ ಒಂದು. ಇದನ್ನು ಪೊಂಬೊಳಲು, ಪೊಳಲಕೆರೆ, ಹೊನ್ನ ಹೊಳೆಕೆರೆ ಎಂದೆಲ್ಲಾ ಕರೆಯುತ್ತಿದ್ದರು. ಹೊಳಲ್ಕೆರೆ ಚಿತ್ರದುರ್ಗದ ಪಾಳೆಯಗಾರರ ಕಾಲದಲ್ಲಿ ಮಾತ್ರವಲ್ಲದೆ ಕರ್ನಾಟಕವನ್ನು ಕದಂಬರು, ಹೊಯ್ಸಳರು, ಸೇವುಣರು, ಚಾಲುಕ್ಯರು, ನೊಳಂಬರು, ವಿಜಯನಗರದ ಅರಸರು ಆಳುತ್ತಿದ್ದಾಗಲೂ ಪ್ರಮುಖ ಸೀಮೆ. ಇಲ್ಲಿ ನೀರಿನ ಸಮೃದ್ಧಿ ಇತ್ತು, ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿದ್ದವು. ಅದರ ಸೂಚಕವಾದ ಕೆಲವು ಸ್ಥಳನಾಮಗಳು ಅಬ್ರದಾಸಿಕಟ್ಟೆ, ಉಡೇಗೆರೆ, ಕುಡಿನೀರಕಟ್ಟೆ, ಗುಂಡ ಸಮುದ್ರ, ಚಿಕ್ಕನಕಟ್ಟೆ, ದಾಸಿಕಟ್ಟೆ, ಸಾಸಲು ಹಳ್ಳ, ಹುಲಿಕೆರೆ, ಹೊನ್ನಕಾಲುವೆ. ಇವು ಈಗಲೂ ಸಮೃದ್ಧ ಜನವಸತಿಗಳೇ.

ಹೊಳಲ್ಕೆರೆಯ ಸುತ್ತಲಿನ ಗುಡ್ಡ ಬೆಟ್ಟ ಕಣಿವೆಗಳಲ್ಲಿ ಮ್ಯಾಂಗನೀಸ್, ಬಾಕ್ಸೈಟ್, ಕಬ್ಬಿಣದ ಅದಿರು ದೊರೆಯುತ್ತಿದ್ದವು. ಇವನ್ನು ಸಂಸ್ಕರಿಸುತ್ತಿದ್ದ ಜಾಗಗಳು ಘಟ್ಟಿಹೊಸಳ್ಳಿ, ಕೆಂಚಾಪುರ.

ಪೀಠೋಪಕರಣಗಳು, ಕೃಷಿ ಉಪಕರಣಗಳನ್ನು ಮಾಡುವುದಕ್ಕೆ ಬೇಕಾದ ತೇಗ, ಬಿದಿರು, ಹೊನ್ನೆ ಮರಗಳು ಧಾರಾಳವಾಗಿದ್ದವು. ಈ ಸ್ಥಳಗಳ ಕೆಲವು ಸೂಚಕಗಳು ಈಗಿನ ತ್ಯಾಗದ ಹಳ್ಳಿ, ಬಿದರಕೆರೆ, ಹೊನ್ನೆತಾವು. ಔಷಧೀಯ ಸಸ್ಯ ಸಂಪತ್ತಾದ ನೇರಲೆ, ನೆಲ್ಲಿಕಾಯಿ ಮರಗಳು ರಾಶಿ ರಾಶಿಯಾಗಿ ಇದ್ದವು. ಆ ಸ್ಥಳಗಳು ಈಗ ಬರಿಯ ನೇರಲಕಟ್ಟೆ, ನೆಲ್ಲಿಕಟ್ಟೆ! ವ್ಯಾಪಾರ ಕುದುರಿಸುವ ಹುಣಸೆಮರಗಳು, ವಸ್ತುಗಳನ್ನು ಜೋಪಾನವಾಗಿ ಸಾಗಿಸಲು ಬೇಕಾದ ಚೀಲಗಳನ್ನು ತಯಾರಿಸಲು ಬೇಕಾದ ಕತ್ತಾಳೆ ಗಿಡಗಳೂ ಬೇಕಾದಷ್ಟಿದ್ದವು. ಅದರ ಸೂಚಕವಾಗಿ ಈಗ ಕತ್ತಾಳೆ ಹಟ್ಟಿ, ಹುಣಸೆ ಪಂಚೆ ಹೆಸರಿನ ಗ್ರಾಮಗಳು ಇವೆ.

ಕತ್ತಾಳೆ

ಹೊಳಲ್ಕೆರೆ ಸೀಮೆ ರಾಜಕೀಯವಾಗಿಯೂ ಗಮನಾರ್ಹವಾಗಿತ್ತು. ಇಲ್ಲಿ ಸಾಕಷ್ಟು ಗುಡ್ಡ ಬೆಟ್ಟಗಳಿದ್ದವು. ಅದನ್ನು ನೆನಪಿಸುವ ಕೆಲವು ಸ್ಥಳಗಳು ಅರಬಘಟ್ಟ, ಅರಸನಘಟ್ಟ, ಈಚಘಟ್ಟ, ಕುಮ್ಮಿನಘಟ್ಟ, ಗುಡ್ಡದ ಸಾಂತೇನಹಳ್ಳಿ, ಮತಿಘಟ್ಟ, ರಾಮಘಟ್ಟ. ಇವು ಸ್ವಾಭಾವಿಕ ರಕ್ಷಣಾನೆಲೆಗಳು ಆಗಿದ್ದವು. ಹೊಳಲ್ಕೆರೆ ಸೀಮೆಯಲ್ಲಿ ಕೋಟೆಯೂ ಇತ್ತು, ಸೇನಾ ಕಾವಲು ಪಡೆಗಳು ಇದ್ದವು, ದಂಡಿನ ಪಾಳೆಯವೂ ಇತ್ತು. ಇವುಗಳ ಅವಶೇಷಗಳನ್ನು ಬಿ.ದುರ್ಗ, ಕೋಟೆಹಾಳ್, ತಾಳಿಕಟ್ಟೆ, ದಂಡಿಗೇನಹಳ್ಳಿಗಳಲ್ಲಿ ನೋಡಬಹುದು.

ಒಂದು ಪ್ರದೇಶ ಧಾರ್ಮಿಕವಾಗಿ ಗಮನಾರ್ಹವಾಗಿ ರೂಪುಗೊಳ್ಳಬೇಕಾದರೆ ಇಂಥ ಒಂದು ಅನುಕೂಲಕರ ಪ್ರಾಕೃತಿಕ ಪರಿಸರ ಇರಬೇಕಾಗುತ್ತದೆ. ಪ್ರಸಿದ್ಧವಾದ ಸಿಂಧೂ ಸಂಸ್ಕೃತಿ, ಹರಪ್ಪ ಸಂಸ್ಕೃತಿಗಳು ಸ್ವಾಭಾವಿಕ ಪ್ರಾಕೃತಿಕ ಪರಿಸರದಲ್ಲಿಯೇ ಅರಳಿದ್ದವು ಎನ್ನುವುದನ್ನು ನೆನಪಿಸಿಕೊಳ್ಳಬಹುದು.

2 ಪೌರಾಣಿಕ ಪ್ರಭೆ

ಹೊಳಲ್ಕೆರೆ ತಾಲ್ಲೂಕಿನಲ್ಲಿ ರಾಮಗಿರಿ ಎನ್ನುವ ಊರು ಇದೆ. ಶ್ರೀರಾಮ ವನವಾಸದಲ್ಲಿದ್ದಾಗ ಇಲ್ಲಿ ಸ್ವಲ್ಪಕಾಲ ಇದ್ದ, ಲಿಂಗವನ್ನು ಪ್ರತಿಷ್ಠಾಪನೆ ಮಾಡಿದ ಎಂದು ಜನ ನಂಬುತ್ತಾರೆ. ರಾಮ ಬಿಟ್ಟ ಬಾಣದ ರೇಖೆ ಹಾದು ಹೋದ ಸ್ಥಳವೇ ಬಾಣಗೆರೆ ಎನ್ನುತ್ತಾರೆ. ಪಾಂಡವರು ವನವಾಸ ಮಾಡುತ್ತಾ ಇದ್ದಾಗ ವಸತಿ ಹೂಡಿದ ಜಾಗ ಪಾಡಿಗಟ್ಟೆ ಎಂದೆನ್ನುವುದರ ಜೊತೆಗೆ ಪಾಂಡವರು ಅಡಿಗೆ ಮಾಡುವುದಕ್ಕೆ ಹೂಡಿದ ಕಲ್ಲುಗಳು ಸಿರಾಪನ ಹಳ್ಳಿಯವು ಎಂದೂ ಹೇಳಿಕೊಳ್ಳುತ್ತಾರೆ. ಪಾಂಡವರು ಅಜ್ಞಾತವಾಸ ಮಾಡುತ್ತಿದ್ದಾಗ ದುಗುರು=ಅವಳಿ=ನಕುಲ ಸಹದೇವ ಇದ್ದ ಸ್ಥಳ ದುಗ್ಗನೂರು ಎನ್ನುತ್ತಾ ಮೋಸದ ಜೂಜಾಟದಲ್ಲಿ ಎಲ್ಲವನ್ನೂ ಕಳೆದುಕೊಂಡು ಕಾಡುಪಾಲಾದ ಪಾಂಡವರ ಕಷ್ಟಕಾಲದಲ್ಲಿ ಆಸರೆಯಾದವರು ತಾವು ಎಂದು ಸಂತೋಷಪಡುತ್ತಾರೆ.

ಜನರ ಧಾರ್ಮಿಕ ಗ್ರಹಿಕೆಯ ಮೂಲರೂಪ ಪೌರಾಣಿಕ ಪ್ರಜ್ಞೆ. ಜನಸಾಮಾನ್ಯರಿಗೆ ರಾಮಾಯಣ, ಮಹಾಭಾರತಗಳು ಕೇವಲ ಕಾವ್ಯ, ಇತಿಹಾಸಗಳಲ್ಲ, ಅವರ ಬದುಕಿನ ಅವಿಭಾಜ್ಯ ಅಂಗ; ರಾಮಾಯಣದ ರಾಮ, ಮಹಾಭಾರತದ ಕೃಷ್ಣ ಪೌರಾಣಿಕ ದೈವಗಳು.

3 ಆಧ್ಯಾತ್ಮಿಕ ವಾತಾವರಣ

ಧಾರ್ಮಿಕತೆಯ ಮುಖ್ಯಭಾವ ಆಧ್ಯಾತ್ಮಿಕತೆ. ಇದು ತಪಸ್ಸು, ಯೋಗ, ವಿರಕ್ತಿ, ನೀತಿ-ತತ್ತ್ವ ಬೋಧನೆಗಳ ರೂಪದಲ್ಲಿ ಗಮನಕ್ಕೆ ಬರುತ್ತದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿರುವ ಆರ್. ನುಲೇನೂರು 12ನೇ ಶತಮಾನದ ನುಲಿಯ ಚಂದಯ್ಯ ತನ್ನ ಕೊನೆಗಾಲವನ್ನು ಕಳೆದ ಸ್ಥಳ. ಹಗ್ಗ ಹೊಸೆಯುವ ಕಾಯಕಯೋಗಿಯಾಗಿದ್ದ ಅವನು ಶಿವಸಾಯುಜ್ಯವನ್ನು ಪಡೆದದ್ದು ಇಲ್ಲಿಯೇ.

ಬನವಾಸಿಯ ದತ್ತಾತ್ರೇಯ ಸ್ವಾಮೀಜಿ ಎನ್ನುವ ಗುರುಗಳು ಇದ್ದದ್ದೂ ಆರ್. ನುಲೇನೂರಿನಲ್ಲಿಯೇ. ಅಲ್ಲ ಪೀರ್ ಬಾಬಾ ಎನ್ನುವ ಸೂಫಿ ಸಂತ ಇದ್ದ ಸ್ಥಳ ಕಾಗಳಗೆರೆಯಾದರೆ, ತಾಳಿಕಟ್ಟೆಯು ಹಜರತ್ ಇಸ್ಮಾಯಿಲ್ ಷಾವಲಿ ಎನ್ನುವ ಸೂಫಿ ಸಂತ ಇದ್ದ ಸ್ಥಳ.  ಕರಿಸಿದ್ಧೇಶ್ವರ ಯತಿಗಳು ರಾಮಗಿರಿಯಲ್ಲಿ ತಪಸ್ಸು ಮಾಡುತ್ತಾ ಲಿಂಗೈಕ್ಯರಾಗಿದ್ದರೆ ತೇಕಲು ಸ್ವಾಮಿಗಳು ತಪಸ್ಸು ಮಾಡುತ್ತಾ ಶಿವೈಕ್ಯರಾದದ್ದು ತೇಕಲವಟ್ಟಿಯಲ್ಲಿ. ಕಣಿವೇ ಜೋಗಿಹಳ್ಳಿಯ ಆಸುಪಾಸಿನಲ್ಲಿ ತಪಸ್ಸು ಮಾಡುತ್ತಿದ್ದವರು ಜೋಗಯ್ಯಗಳು. ಧೌಮ್ಯ ಮಹರ್ಷಿ ತಪಸ್ಸು ಮಾಡುತ್ತಿದ್ದ ಸ್ಥಳ ದುಮ್ಮಿ. ಹೀಗೆಲ್ಲಾ ಹೇಳಿಕೊಳ್ಳುತ್ತಾ ಜನ ತಮ್ಮದು ತಪೋಭೂಮಿ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಾರೆ.

ಹುಲಿಕೆರೆಯಲ್ಲಿದ್ದ ಕಂದಿಕೆರೆ ಶಾಖಾ ಮಠದ ಆಶ್ರಮದಲ್ಲಿ ಇದ್ದವರು ಶಾಂತಸ್ವಾಮಿಗಳು. ಕೊಡಗವಳ್ಳಿಯಲ್ಲಿದ್ದವರು ಗಾದ್ರಿಪಾಲ ಸ್ವಾಮಿ, ಕೊಳಾಳುವಿನಲ್ಲಿದ್ದವರು ಕೆಂಚಾವಧೂತರು. ಚಿತ್ರಹಳ್ಳಿಯಲ್ಲಿ ಶ್ರೀಶೈಲ ಮಠದ ಶಾಖೆ ಇದ್ದಿದ್ದರೆ, ನಂದನಹೊಸೂರಿನಲ್ಲಿ ಇದ್ದದ್ದು ಜಂಗಮ ಮಠ, ವೀರಪ್ಪ ಮಠ. ಲಿಂಗಾಯತ ಕುಟುಂಬದಲ್ಲಿ ಜನಿಸಿ ಆಧ್ಯಾತ್ಮಿಕ ಸಾಧನೆ ಮಾಡಿ ತಮ್ಮ ಕುರುಬ, ಆದಿವಾಸಿ, ದಲಿತ ಅನುಯಾಯಿಗಳಿಗೆ ವೇದಾಂತವನ್ನು ಬೋಧಿಸುತ್ತಿದ್ದವರು ಸಂತ ಚನ್ನವೀರಜ್ಜ. ಪ್ರತಿ ವರ್ಷ ಗಿಡ್ಡನಹಳ್ಳಿಯಲ್ಲಿ ಆಧ್ಯಾತ್ಮಿಕ ಪ್ರವಚನ ನೀಡುವವರು ಆಂಧ್ರದ ಅಲ್ಲ ಪೀರ್. ಸಿದ್ಧ ಸಮಾಧಿ ಯೋಗವನ್ನು ಕಲಿಸುವ ಸ್ಥಳ ರಂಗಾಪುರ.

-ಮುಂದುವರಿಯುವುದು

ಕೆ.ಎಲ್. ಪದ್ಮಿನಿ ಹೆಗಡೆ

3 Responses

  1. ನಯನ ಬಜಕೂಡ್ಲು says:

    ಇತಿಹಾಸಕ್ಕೆ ಸಂಬಂಧ ಪಟ್ಟ ವಿಚಾರಗಳೆಂದರೆ ಅದೇನೋ ಕುತೂಹಲ, ಚೆನ್ನಾಗಿದೆ ಪ್ರವಾಸ ಕಥನ.

  2. ಶಂಕರಿ ಶರ್ಮ says:

    ವಿಭಿನ್ನ ರೀತಿಯ ಪ್ರವಾಸ ಕಥನವು ಸ್ಥಳ ವಿಶೇಷಗಳನ್ನೊಳಗೊಂಡು ಕುತೂಹಲಕಾರಿಯಾಗಿದೆ.. ಧನ್ಯವಾದಗಳು ಮೇಡಂ

  3. Padma Anand says:

    ಮಾಹಿತಿಪೂರ್ಣ ಲೇಖನ. ಮನುಷ್ಯರಿಗೆ ಕುಲಕಸುಬಿನ ಹೆಸರಿದ್ದಂತೆ, ಊರ ಹೆಸರಿನಿಂದಲೇ ಅಲ್ಲಿಯ ವಿಶೇಷ ಗುರುತಿಸುವ ಪರಿ ವಿಶಿಷ್ಟವಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: