ಅಪ್ರತಿಮ ಗುರುಭಕ್ತ ಏಕಲವ್ಯ
‘ವಿದ್ಯಾವಿಹೀನಃ ಪಶುಃ’ ವಿದ್ಯೆ ಇಲ್ಲದವನು ಪಶುವಿಗೆ ಸಮಾನನೆಂಬ ಸೂಕ್ತಿ ಇದೆ. “ವಿದ್ಯೆ ಉಳ್ಳವನ ಮುಖವು ಮುದ್ದು ಬರುವಂತಿಕ್ಕು. ‘ವಿದ್ಯೆ ಇಲ್ಲದವನ ಬರಿಮುಖವು ಹಾಳೂರ ಹದ್ದಿನಂತಿಕ್ಕು’ ಎಂಬುದು ಸರ್ವಜ್ಞನ ವಚನ. ಮೇಲಿನ ಮಾತುಗಳೆಲ್ಲ ವಿದ್ಯೆ ಮಹತ್ವ, ಅಗತ್ಯಗಳನ್ನು ಸಾರುವ ಹಿತೋಕ್ತಿಗಳು. ಕಾರಣ ವಿದ್ಯೆ ಇಲ್ಲದವನು ಅನ್ಯರಿಂದ ಅಪಮಾನಿಸಲ್ಪಡುತ್ತಾನೆ. ವಂಚಿಸಲ್ಪಡುತ್ತಾನೆ.
ವಿದ್ಯೆಗಳಲ್ಲಿ 64 ವಿಭಾಗಗಳಿವೆ. ಯಾವುದೇ ಕಲಿಕೆಗೆ ಗುರು ಉಪದೇಶಬೇಕು. ಯೋಗ್ಯ ಗುರುವಿನ ಮಾರ್ಗದರ್ಶನದಿಂದ ಶಿಕ್ಷಣ ಪಡೆದಲ್ಲಿ ಸರಿಯಾದ ಗುರಿಮುಟ್ಟಲು ಸಾಧ್ಯ. ಗುರಿ ಮುಂದೆ ಇರಬೇಕು. ಗುರುವು ಹಿಂದಿನಿಂದ ಪ್ರೋತ್ಸಾಹಿಸುತ್ತಾ ಸಲಹೆ ಸೂಚನೆ ನೀಡುತ್ತಾ ಇರುತ್ತಾರೆ. ವಿದ್ಯಾರ್ಥಿಯಾದವನಿಗೆ ಗುರಿ ಹಾಗೂ ಸತತ ಸಾಧನೆ ಇದ್ದಲ್ಲಿ ವಿದ್ಯಾಸಂಪನ್ನನಾಗಬಹುದು. ಅದಕ್ಕೆ ದೇಶ, ಕಾಲ, ಜಾತಿ, ಮತದ ಅಡ್ಡಗೋಡೆ ಬರಲಾರದು.
ಯಾವುದೋ ಒಂದು ಕಲಿಕೆಗೆ, ಆಪೇಕ್ಷಿತನಿಗೆ ಒಂದು ವೇಳೆ ಯೋಗ್ಯ ಗುರು ಸಿಗದೇ ಹೋದರೆ… ಸಿಕ್ಕರೂ ಉಪದೇಶಿಸಲು ನಿರಾಕರಿಸಿದರೆ… ನಿರಾಸೆಯಿಂದ ಹಿಂದಿರುಗುವುದೇ ಉಳಿದಿರುವ ಮಾರ್ಗ ಎನ್ನಬೇಕೇ ಖಂಡಿತ ಹಾಗಲ್ಲ. ತಾನು ಕಲಿಯಲೇಬೇಕೆಂದು ದೃಢನಿರ್ಧಾರ ಮಾಡಿದ ಕಲಿಕೆಯನ್ನು ಶಿಕ್ಷಣಾರ್ಥಿ ಕಲಿತೇ ತೀರುತ್ತಾನೆ. ಆದರೆ ತಾನು ಬಯಸಿದ ಗುರುಗಳಿಂದಲೇ ಪಾಠ ಹೇಳಿಸಿಕೊಳ್ಳಬೇಕೆಂದು ಇಚ್ಛಿಸಿದರೆ, ಶಿಕ್ಷಕ ಒಪ್ಪದೇ ಹೋದರೆ ? ಅದೂ ಸ್ಥಾನಮಾನ ಇಲ್ಲವೆಂಬ ನೆಲೆಯಲ್ಲಿ!
ಅನ್ಯರು ಕದಿಯಲಾರದ ವಸ್ತುವೊಂದಿದ್ದರೆ ಅದು ವಿದ್ಯೆ ಎಂದು ಹೇಳುವ ಮಾತಿದೆಯಾದರೂ ಕೆಲವೊಂದು ಸಂದರ್ಭದಲ್ಲಿ ಅದು ಸುಳ್ಳಾಗಿದೆ. ಶಿಷ್ಯನ ಕಲಿಕೆಗೆ ಮೂಲವಾದ ಗುರುಗಳೇ ಅವನ ವಿದ್ಯೆಯನ್ನು ಅಪಹರಿಸಿದರೆ! ಅರ್ಥಾತ್ ಉಪಯೋಗಿಸಿಕೊಳ್ಳದಂತೆ ತಡೆ ಒಡ್ಡಿದರೆ! ಕೇವಲ ಗುರುದಕ್ಷಿಣೆ ನೆಪದಲ್ಲಿ ಶಿಷ್ಯನ ದೇಹದ ಒಂದು ಅಂಗವನ್ನೇ ಯಾಚಿಸುವುದೇ! ಹೌದು. ಅಂತಹ ಗುರುಗಳೊಬ್ಬರಿದ್ದರು. ಗುರುಭಕ್ತಿಯ ಪರಾಕಾಷ್ಠೆಯನ್ನು ಮೆರೆದ ಬಾಲಕನಿದ್ದ. ಎಷ್ಟೋ ಸಹಸ್ರ ವರ್ಷಗಳ ಹಿಂದಿನ ಘಟನೆಯಾದರೂ ಕೇಳುವುದಕ್ಕೆ ಈಗಲೂ ಅತೀವ ಸಂಕಟವೆನಿಸುತ್ತದೆ! ಆ ಗುರುಗಳು ಯಾರು ? ಅಂತಹ ಶಿಷ್ಯನಾರು…?
ಹಸ್ತಿನಾವತಿಯಲ್ಲಿ ಅರಸು ಮಕ್ಕಳಾದ ಪಾಂಡವ ಮತ್ತು ಕೌರವರಿಗೆ ಬಿಲ್ಲುವಿದ್ಯೆಯನ್ನು ಹೇಳಿಕೊಡುತ್ತಿದ್ದ ಗುರುಗಳೆಂದರೆ ದ್ರೋಣಾಚಾರ್ಯರು. ಉತ್ತಮ ಗುರುಗಳೆನಿಸಿದ ದ್ರೋಣಾಚಾರ್ಯರ ಬಳಿಗೆ ಇತರ ರಾಜಪುತ್ರರೂ ಶಿಷ್ಯರಾಗಿ ಬಂದು ಬಿಲ್ಲು ವಿದ್ಯೆಯನ್ನು ಕಲಿಯುತ್ತಿದ್ದರು. ಅದೇ ರಾಜ್ಯದಲ್ಲಿ ಹಿರಣ್ಯ ಧನುಷ ಎಂಬ ಒಬ್ಬ ಬೇಡರ ಒಡೆಯನಿದ್ದ. ಅವನಿಗೆ ಏಕಲವ್ಯನೆಂಬ ಒಬ್ಬ ಮಗನಿದ್ದ. ಕಾಡಿನಲ್ಲಿ ರಾಜಪುತ್ರರಿಗೆ ಬಿಲ್ಲುವಿದ್ಯೆಯನ್ನು ಹೇಳಿಕೊಡುತ್ತಿದ್ದ ದ್ರೋಣರನ್ನು ದೂರದಿಂದಲೇ ವೀಕ್ಷಿಸುತ್ತಿದ್ದ ಏಕಲವ್ಯ. ಹೀಗೆ ಕೆಲವು ಬಾರಿ ನೋಡಿದ ಬಾಲಕನಿಗೆ ತಾನೂ ಬಿಲ್ಲು ವಿದ್ಯೆ ಕಲಿಯಬೇಕು. ಅದೂ ದ್ರೋಣಾಚಾರ್ಯರಿಂದಲೇ ಕಲಿಯಬೇಕೆಂಬಾಸೆ ಮನದಲ್ಲಿ ಅಂಕುರಿಸಿತು. ಹೀಗೊಂದು ದಿನ ದ್ರೋಣರಲ್ಲಿಗೆ ಹೋದ ಬೇಡರ ಬಾಲಕ ಏಕಲವ್ಯ, ಗುರುಗಳಿಗೆ ದೂರದಿಂದಲೇ ಸಾಷ್ಟಾಂಗ ಪ್ರಣಾಮ ಮಾಡಿ ತನ್ನ ಮನದ ಇಂಗಿತವನ್ನು ಆಚಾರ್ಯರಲ್ಲಿ ಅರುಹಿದ.
ರಾಜಪುತ್ರರಿಗಾದರೋ ದೇಶದ ರಕ್ಷಣೆಗಾಗಿ ಬಿಲ್ಲುವಿದ್ಯೆ ಅಗತ್ಯ. ಆದರೆ ಮಾಂಸಕ್ಕಾಗಿ ಕಾಡಿನ ಮೃಗಗಳನ್ನು ಬೇಟೆಯಾಡುವ ಕಿರಾತವರ್ಗದ ಜನರಿಗೆ ಬಿಲ್ಲು ವಿದ್ಯೆ ಏಕೆ ಅದೂ ರಾಜಕುಮಾರರೊಂದಿಗೆ ಈ ಹುಡುಗನಿಗೆ ಕಲಿಸಬೇಕೇ? ಶಾಸ್ತ್ರೋಕ್ತವಾದ ಬಿಲ್ಲು ವಿದ್ಯೆಯನ್ನು ಬೇಟೆಗಾರ ಹುಡುಗರಿಗೆ ಕಲಿಸುವುದು ಅಂದಿನ ಕಾಲದಲ್ಲಿ ನಿಷಿದ್ಧವಾಗಿತ್ತು. ದ್ರೋಣರು ಅವನ ಬೇಡಿಕೆಯನ್ನು ನಿರಾಕರಿಸಿ ಹಿಂದೆ ಕಳುಹಿಸಿದರು.
ದ್ರೋಣರು ಒಪ್ಪದೆ ಹೋದರೂ ಏಕಲವ್ಯ ತನ್ನ ಮನದಿಂದ ಅವರನ್ನು ಬಿಡಲಿಲ್ಲ. ದ್ರೋಣರನ್ನೇ ತನ್ನ ಗುರುಗಳೆಂದು ದೃಢವಾಗಿ ನಂಬಿದ ಆತ ದೋಣರ ಮೂರ್ತಿಯನ್ನು ಮಣ್ಣಿನಿಂದ ಮಾಡಿ ಇಟ್ಟುಕೊಂಡು ಪ್ರತ್ಯಕ್ಷ ದ್ರೋಣರೆಂದೇ ನೆನೆದು ಒಂದು ಗುರಿ ಇಟ್ಟುಕೊಂಡು ಶ್ರದ್ದೆಯಿಂದ ತಾನೇ ಸ್ವತಃ ಕಲಿಯುತಿದ್ದ. ಗುರುವಿನ ಮೇಲಿನ ಶ್ರದ್ದೆ, ಬಾಣ ಬಿಡುವ ಗುರಿ, ನಿರಂತರ ಸಾಗುತ್ತಿತ್ತು. ತನಗೆ ತಾನೇ ‘ಶಬ್ದವೇದಿ’ಯನ್ನೂ ಕಲಿತ.
ಒಂದು ದಿನ ಪಾಂಡವರು ಬೇಟೆಯಾಡುತ್ತಾ ಕಾಡಿಗೆ ಬಂದಿದ್ದರು. ದೂರದಲ್ಲೆಲ್ಲೋ ಏಕಲವ್ಯ ಶಸ್ತ್ರಾಭ್ಯಾಸ ಮಾಡುತ್ತಿದ್ದ. ಅವನ ಬಿಲ್ಲಿನ ಶಬ್ದ ಕೇಳಿ ಪಾಂಡವರೊಂದಿಗೆ ಬಂದಿದ್ದ ನಾಯಿ ಬೊಗಳಿತು. ನಾಯಿ ಬೊಗಳಿದ ಶಬ್ದ ಬಂದ ಕಡೆಗೆ ಏಕಲವ್ಯ ಬಾಣ ಪ್ರಯೋಗಿಸಲಾರಂಭಿಸಿದ. ಅವನು ಹೂಡಿದ ಬಾಣಗಳು ನಾಯಿಯ ಬಾಯಿಯಲ್ಲಿ ತುಂಬಿಕೊಡವು. ಬಾಯಿಯಲ್ಲಿ ಬಾಣ ತುಂಬಿದ ನಾಯಿ ಹಿಂದಿರುಗಿತು.
ಶಬ್ದವೇದಿಯಿಂದ ಬಾಣ ಪ್ರಯೋಗಿಸಿದ ಬಿಲ್ಗಾರನಾರೆಂದು ರಾಜಕುಮಾರರಿಗೆ ಆಶ್ಚರ್ಯವಾಯಿತು. ಈ ವೀರನನ್ನು ಹುಡುಕುತ್ತಾ ಅವರು ಏಕಲವ್ಯನಿದ್ದೆಡೆಗೆ ಬಂದರು. ಅವನೆಡೆಗೆ ತಿರುಗಿದ ಅರ್ಜುನ “ನೀನಾರು? ನಿನ್ನ ಗುರುಗಳು ಯಾರು ?’ ಎಂದು ಪ್ರಶ್ನಿಸಿದ. ಬೇಡರ ನಾಯಕನಾದ ಹಿರಣ್ಯ ಧನುಷನು ನನ್ನ ತಂದೆ. ದ್ರೋಣಾಚಾರ್ಯರು ನನ್ನ ಗುರುಗಳು ಎಂದನು.
“ನೀನು ದ್ರೋಣಾಚಾರ್ಯರ ಶಿಷ್ಯನೇ” ಅರ್ಜುನ ಕಣ್ಣರಳಿಸಿ ಕೇಳಿದ.
ಹೌದು, ಅವರೇ ನನ್ನ ಗುರುಗಳು ಏಕಲವ್ಯನಿಂದ ಬಂತು ಉತ್ತರ.
”ನಿನ್ನನ್ನು ಲೋಕೈಕ ಬಿಲ್ಲುಗಾರ ವೀರನನ್ನಾಗಿ ಮಾಡುವೆನೆಂದು” ಗುರುಗಳು ಮಾತು ಕೊಟ್ಟಿದ್ದನ್ನು ನೆನಪಿಸಿಕೊಂಡ ಅರ್ಜುನನ ಮುಖ ಕಳೆಗುಂದಿತು.
ಎಲ್ಲಾ ರಾಜಕುಮಾರನೂ ಹಿಂತಿರುಗಿ ಬಂದು ತಾವು ನೋಡಿದ ಆಶ್ಚರ್ಯದ ಸಂಗತಿಯನ್ನು ದ್ರೋಣರಿಗೆ ತಿಳಿಸಿದರು. ಜೊತೆಗೆ ಕಳಾಹೀನ ಮುಖಮಾಡಿ ನಿಂತಿದ್ದ ಅರ್ಜುನನನ್ನು ನೋಡಿ ಅವರಿಗೂ ಸಮಸ್ಯೆಯಾಯಿತು.’ನೋಡೋಣ ಅವನಾರೆಂದು’ ಅರ್ಜುನನ ಜೊತೆಗೂಡಿ ದ್ರೋಣರು ಏಕಲವ್ಯನಿದ್ದೆಡೆಗೆ ಬಂದರು.
ಗುರುಗಳನ್ನು ಪ್ರತ್ಯಕ್ಷ ಕಂಡ ಏಕಲವ್ಯನ ಸಂತೋಷಕ್ಕೆ ಪಾರವೇ ಇಲ್ಲ. ಅವರ ಕಾಲಿಗೆ ಭಕ್ತಿಯಿಂದ ನಮಸ್ಕರಿಸಿದ, ತಮ್ಮ ಪ್ರತಿಮೆ ಅಲ್ಲಿದ್ದುದನ್ನು ದ್ರೋಣರು ಗಮನಿಸಿದರು. ‘ಶ್ರದ್ಧಾವಾನ್ ಲಭತೇ ಜ್ಞಾನಂ’ ಎಂಬ ಉಕ್ತಿ ನೆನಪಾಯಿತು.
ಅಂದು ಈ ಬಾಲಕನ್ನು ಶಿಷ್ಯನನ್ನಾಗಿ ಸ್ವೀಕರಿಸಲು ತಾನು ಒಪ್ಪಲಿಲ್ಲ. ಆದರೂ ಆತನ ಜಾಣ್ಮೆ, ಶ್ರದ್ಧೆ, ಗುರುವಿನ ಮೇಲಿನ ಭಕ್ತಿಗೆ ಮನದಲ್ಲೇ ಕೊಂಡಾಡಿದರು. ತಾನು ಅರ್ಜುನನಿಗೆ ಕೊಟ್ಟ ಮಾತನ್ನೂ ಉಳಿಸಿಕೊಳ್ಳುವ ಬಗೆ ಎಂತು ? ಎಂದು ಚಿಂತಿಸಿದರು. ಅವನೊಡನೆ ಹೇಳಿದರು ‘ಏಕಲವ್ಯ, ನೀನು ನನ್ನ ಶ್ರೇಷ್ಠ ಶಿಷ್ಯನೇ ಸರಿ, ನಿನ್ನ ಭಕ್ತಿ, ವಿದ್ಯಾ ನೈಪುಣ್ಯಕ್ಕೆ ಮೆಚ್ಚಿರುವೆನು. ಆದರೆ ನೀನು ನನಗೊಂದು ಗುರು ಕಾಣಿಕೆಯನ್ನು ಕೊಡುವುದು ಬೇಡವೇ? ‘ ಎಂದರು.
‘ಹೇಳಿ ಗುರುಗಳೇ ತಮಗಾಗಿ ತನ್ನ ಪ್ರಾಣ ಕೊಡಲೂ ಸಿದ್ದನಿರುವೆನು’ ಎಂದನು. “ನಿನ್ನ ಪ್ರಾಣ, ನಾನು ಕೇಳುವುದಿಲ್ಲ ಶಿಷ್ಯಾ, ಆದರೆ ನಿನ್ನ ಬಲಗೈ ಹೆಬ್ಬರಳನ್ನು ನನಗೆ ಕಾಣಿಕೆಯಾಗಿ ಕೊಡಬೇಕು’ ಎಂದರು. ಗುರುಗಳ ಬಾಯಿಯಿಂದ ಆ ಮಾತು ಬಿದ್ದ ಕೂಡಲೇ ಹಿಂದುಮುಂದು ನೋಡದೆ ಬಾಣದ ಮೊನೆಯಿಂದ ತನ್ನ ಬಲಗೈ ಹೆಬ್ಬೆರಳನ್ನು ತುಂಡರಿಸಿ ‘ಇದೋ ತೆಗೆದುಕೊಳ್ಳಿರಿ’ ಎಂದು ಗುರುಗಳು ಯಾಚಿಸಿದ ದಕ್ಷಿಣೆಯನ್ನು ನೀಡಿಯೇ ಬಿಟ್ಟ ಶಿಷ್ಯ, ಆತನ ಅಪ್ರತಿಮ ಗುರುಭಕ್ತಿಗೆ ದ್ರೋಣಾಚಾರ್ಯರಿಗೆ ಹೆಮ್ಮೆಯೆನಿಸಿತು. ಜೊತೆಗೆ ತನ್ನಿಂದಾದ ಅನ್ಯಾಯಕ್ಕೆ ಸಂಕಟವೂ ಆಯಿತು. ಹೀಗಾದೀತೆಂದು ನಿರೀಕ್ಷಿಸದ ಅರ್ಜುನನಿಗೂ ವಿಷಾದವಾಯಿತು. ಗುರುಭಕ್ತಿಯ ಪರಾಕಾಷ್ಠೆಯನ್ನು ಮೆರೆದ ಏಕಲವ್ಯನ ಮುಂದೆ ತಾವೆಲ್ಲ ಸಣ್ಣವರೆನಿಸಿತು. ಏಕಲವ್ಯ ಧನ್ಯತೆ ಪಡೆದು ಪುರಾಣ ಪುರುಷರತ್ನಗಳಲ್ಲಿ ಒಬ್ಬನೆನಿಸಿದ.
–ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಸುರಹೊನ್ನೆಯ ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ಧನ್ಯವಾದಗಳು.
ವಿದ್ಯೆಯ ಮಹತ್ವವನ್ನು ಮನದಟ್ಟಾಗಿಸುವ ಲೇಖನ
ಎಂದಿನಂತೆ ಪುರಾಣ ಕಥೆ ಅನಾವರಣದಲ್ಲಿ ಏಕಲವ್ಯನ ಕಥೆ ಚೆನ್ನಾಗಿ ಮೂಡಿ ಬಂದಿದೆ.ಧನ್ಯವಾದಗಳು ಮೇಡಂ.
ಚೆನ್ನಾಗಿದೆ
ಎಂದೆಂದಿಗೂ ಮನಕಲಕಿ ವಿಷಾದದ ಛಾಯೆಯನ್ನು ತುಂಬುವ ಪ್ರಸಂಗವನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದೀರಿ ಅಭಿನಂದನೆಗಳು.
ಗುರುಕಾಣಿಕೆ ಎಂದರೆ ಏಕಲವ್ಯನ ನೆನಪಾಗದಿರದು.. ಪೌರಾಣಿಕ ಕಥೆಯ ನಿರೂಪಣೆ ಬಹಳ ಚೆನ್ನಾಗಿದೆ ವಿಜಯಕ್ಕ.
ಓದುಗರಾದ ನಯನಾ ಬಜಕ್ಕೂಡ್ಳು,,ನಾಗರತ್ನ ಬಿ.ಆರ್,
ಬಿ.ಸಿ.ನಾರಾಯಣ ಮೂರ್ತಿ, ಪದ್ಮಾ ಆನಂದ್ ಎಲ್ಲರಿಗೂ ಧನ್ಯವಾದಗಳು.