ಮರಳಿ ಗೂಡಿಗೆ

Share Button

ಪ್ರಖ್ಯಾತ ನಿರ್ದೇಶಕ, ನಾಟಕಕಾರ  ಶ್ರೀ ಎನ್.ಎಸ್.ಸೇತುರಾಂ ವಿರಚಿತ “ಅತೀತ” ನಾಟಕ ವೀಕ್ಷಿಸಿದ ಶಕುಂತಲಾಳ ಮನಸಿನಲ್ಲಿ ಏನೋ ಒಂದು ತರಹದ ಹಪಾಹಪಿ. ತಾನೂ ಏಕೆ ಆತ್ಮಚರಿತೆಯನ್ನು ಬರೆಯಬಾರದು ಎಂಬ ಪ್ರಶ್ನೆ ಮೂಡಿತು. ತನ್ನಷ್ಟಕ್ಕೆ ನಕ್ಕು ಹಾಸಿಗೆ ಏರಿದಳು. ನಿದ್ರೆ ಕಣ್ಣಿಗೆ ಹತ್ತಲು ಹರಸಾಹಸ ಮಾಡಿದಳು, ದೇವರ ಶ್ಲೋಕ ಜಪಿಸಿದಳು. ಏನು  ಮಾಡಿದರೂ ಮನಸು  ಗೊಂದಲದ ಗೂಡಾಗಿತ್ತು. ತನ್ನ ಆತ್ಮಚರಿತೆ ಬರೆಯುವಂತ ದೊಡ್ಡ ಘನಂದಾರಿ ಸಾಹಸವೇನಿದೆ ತನ್ನಬದುಕಿನಲ್ಲಿ?

ತಾನೇನೂ ಕೃತಯುಗದ ವಿಷ್ಣು ಅವತಾರಿಯೇ, ತ್ರೇತಾಯುಗದ ಆದರ್ಶ ಪುರುಷ ರಾಮನೇ, ದ್ವಾಪರಯುಗದ ಶ್ರೀಕೃಷ್ಣನೇ ಅಥವಾ ಜಗತ್ತಿಗೆ ನಿಜ ಬೆಳಕು ತೋರಿದ ಮಹಾಜ್ಞಾನಿ ಬುದ್ದನೆ! ತನ್ನ ಚರಿತ್ರೆ ಅಂಗುಲಿಮಾಲನ ಕಥೆಯಂತಾಗಬಹುದಷ್ಟೇ ಎಂದು ಮತ್ತೆ ನಿದ್ರೆಗೆ ಜಾರಲು ಪ್ರಯತ್ನಿಸಿದಳು.ಇಲ್ಲ, ನಿದ್ದೆ ಹತ್ತಿರ ಸುಳಿಯಲಿಲ್ಲ. ತನ್ನ ವ್ಯಾಕುಲ ಮನಸ್ಸು ಜಾಗೃತಗೊಳ್ಳುತ್ತಲೇ ಹೋಯಿತು. ವಾತಾವರಣ ಅವಳ ಯೋಚನಾ ಲಹರಿಗೆ ಸಾತ್ ಕೊಡುವಂತಿತ್ತು. ರಾತ್ರಿಯ ಮೌನ, ಬರಬರ ತಿರುಗುತ್ತಿದ್ದ ಫ್ಯಾನ್ ಶಬ್ಧ, ತನ್ನ ಸುಪ್ತ ಮನಸ್ಸನ್ನು ಎಚ್ಚರಗೊಳಿಸುತ್ತಿತ್ತು. ಇದ್ದಕ್ಕಿದ್ದ ಹಾಗೆ ಒಂದು ಸುಂದರ ಕಥಾವಸ್ತು ಅವಳ ಮನಸಿನ ಪರದೆಯಲ್ಲಿ ಹಾದು ಹೋಯಿತು.

ಹೌದು, ಸರ್ವಕಾಲಕ್ಕೂ ನೂತನ, ವಿನೂತನ ಈ ತಾಯ್ತನ.ಇದನ್ನೇ ಏಕೆ ಕಥೆಯ ಕೇಂದ್ರವನ್ನಾಗಿ ಮಾಡಿಕೊಳ್ಳಬಾರದು ಎಂಬ ಯೋಚನೆ ಗುಯ್ ಗುಡಲು ಶುರುವಾಯಿತು. ನಿರ್ಧರಿಸಿಯೇ ಬಿಟ್ಟಳು ಶಕುಂತಳಾ. ಆದರೆ, ಬರೆಯುವ ಕಲೆ ತನಗಿದೆಯೇ ಎಂದು ತನ್ನನ್ನೇ ಪ್ರಶ್ನೆ ಮಾಡಿಕೊಂಡಳು.  ಬರವಣಿಗೆಯ ಹವ್ಯಾಸ ಮುಂಚಿನಿಂದಲೂ ಇದ್ದ  ಅವಳಿಗೆ ಇದು ಕಷ್ಟಸಾಧ್ಯ ಎಂದು ಅನಿಸಿತು. ಆದರೂ ತಾನೇನೂ ಬರೆಯಬಲ್ಲೆನು? ಸಾಹಿತ್ಯ ಅನಭಿಷಕ್ತರು, ಲೇಖಕರು ಬರೆಯದೆ ಉಳಿದ ವಿಷಯವೇ? ತನ್ನ ಮುಂದಿನ ಹಾದಿ ಏನಿದ್ದರೂ ಅವರ ಬರಹಗಳನ್ನು ಮಂಥನ ಮಾಡಲಿಕ್ಕೆ ಶುರು ಮಾಡಿದರೆ ತನ್ನ ಆಯುಷ್ಯವೇ ಮುಗಿದುಬಿಡ ಬಹುದು ಎಂದು ತನ್ನ ಪ್ರಯತ್ನವನ್ನು ಕೈ ಬಿಡಲು ಯೋಚಿಸಿದಳು.  ಇಲ್ಲ, ತನ್ನ ಒಳ ಮನಸು  ಬರೆಯುವಂತೆ ಪ್ರಚೋದಿಸುತ್ತಿದೆ ಎಂಬ ಅರಿವು ಬಲವಾಗುತ್ತಾ ಹೋಯಿತು. ಹೀಗೆ, ತನ್ನ ಆತ್ಮಚರಿತ್ರೆಯನ್ನು ತಾಯ್ತನದ ತಳಹದಿಯ ಮೇಲೆ ದಾಖಲಿಸಲು ಪ್ರಾರಂಭಿಸಿಯೇ ಬಿಟ್ಟಳು.

ಶಕುಂತಳಾ ಸಾಮಾನ್ಯ ಮಧ್ಯಮ ವರ್ಗದ ಮಹಿಳೆ.ವಯಸ್ಸು 55ರ ಗಡಿ ದಾಟಿತ್ತು.ಆರೋಗ್ಯದಲ್ಲಿ ಏರು-ಪೇರು ಶುರುವಾಗಿತ್ತು. ಮನಸಿನ ಆಲೋಚನಾ ಲಹರಿಗಳು ವಯೋಸಹಜ ಗತಿಯಲ್ಲಿ ಬದಲಾವಣೆ ಹೊಂದುತ್ತಿತ್ತು. ತನ್ನ ನಿಲುವುಗಳು, ಅಭಿಪ್ರಾಯಗಳು ಕ್ರಮೇಣ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವುದು ಅವಳಿಗೆ ಗ್ರಾಹ್ಯವಾಗ ತೊಡಗಿದವು. ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ನಿಯತ್ತಿನ ಸೇವೆ ಸಲ್ಲಿಸುತ್ತಾ ಬಂದಿದ್ದಳು.ತನ್ನಂತೆ ಬೇರೊಂದು ಸರ್ಕಾರಿ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿರುವ ಪ್ರಕಾಶನಿಗೆ ಅನುರೂಪದ ಹೆಂಡತಿ ಎಂದು ಸಂಬಂಧದವರಿಂದ ಪ್ರಶಂಸೆ ಪಡೆದ್ದಿದ್ದಳು.

ಇವರ ಪ್ರೀತಿಯ ಕುರುಹಾಗಿ ತಾಯಿಯ ಪದವಿ ದಕ್ಕಿಸಿಕೊಂಡ ಶಕುಂತಳಾ ಅಪೂರ್ವದ ಗಂಡು ಮಗುವಿಗೆ ಜನ್ಮಕೊಟ್ಟಳು. ಮಗನೊ, ರೂಪಿನಲ್ಲಿ ಹೊಯ್ಸಳೇಶ್ವರ ವಿಷ್ಣುವರ್ಧನಿಗೇನೂ ಕಮ್ಮಿ ಇರಲಿಲ್ಲ. ಅವಳ ಕನಸಿನ ಗೋಪುರ ಇಲ್ಲೇ ಸಾಕಾರಗೊಳ್ಳಲು ಶುರುವಾಗಿದ್ದು. ಅಜ್ಜಿ- ತಾತನ ಸಡಗರದ ಅಪ್ಪುಗೆ, ತಂದೆ-ತಾಯಿಯ ಪ್ರೀತಿಯ ಆಶ್ರಯದಲ್ಲಿ ಬೆಳೆದ ಪ್ರದೀಪ ಓದಿನಲ್ಲಿ ಚತುರ. ಶಾಲೆ-ಕಾಲೇಜುಗಳಲ್ಲಿ ಗಳಿಸಿದ ಪ್ರಶಂಸನೀಯ ಪತ್ರಗಳೆಷ್ಟೋ, ಅವರಿಗೆ ಲೆಕ್ಕವಿಲ್ಲ. ಈ ಖುಷಿಯಲ್ಲಿ ತನ್ನ ಮಗುವಿನ ಭವಿಷ್ಯದ ಕನಸಿನ ಸೌಧ ಗಟ್ಟಿಯಾಗತೊಡಗಿತು. ತಾಯಿಯ ಲೋಲುಪತೆಯೊಂದಿಗೆ ಮಗನಿಗೆ ಆರೈಕೆ ಮಾಡಿದಳು. ಮಗನ ವಿದ್ಯಾಭ್ಯಾಸ ನಿರಾತಂಕವಾಗಿ ನಡೆಯುವಂತೆ ಆಗೊಮ್ಮೆ- ಈಗೊಮ್ಮೆ ಒರೆ ಹಚ್ಚಿ ನೋಡುತ್ತಿದ್ದಳು. ಪ್ರದೀಪನೂ ತನ್ನ ಸ್ವಸಾಮರ್ಥ್ಯದಿಂದ ಶೈಕ್ಷಣಿಕವಾಗಿ ಒಂದು ಗಟ್ಟಿ ಅಡಿಪಾಯವನ್ನು ರೂಪಿಸಿದ್ದ.ತನ್ನ ಮಗನ ಗುರಿ ಅಸಮಾನ್ಯವಾಗಿರಬೇಕೆಂದು ಪ್ರತಿಷ್ಠಿತ  ವಿದ್ಯಾಸಂಸ್ಥೆಯಲ್ಲಿ ಓದಿಸಲು ಆಸೆಪಟ್ಟಿದ್ದ ಶಕುಂತಳಾ-ಪ್ರಕಾಶ ದೂರದ ಊರಿನಲ್ಲಿ ಓದಿಸಲು ಭಾರವಾದ ಮನಸ್ಸಿನಿಂದ ನಿರ್ಧರಿಸಿದ್ದರು. ಮಗನ ಬುದ್ಧಿಮತ್ತೆ ಅವರ ಆಸೆಗೆ ಇನ್ನಷ್ಟು ನೀರೆಯುತ್ತಿತ್ತು.ಮಗನನ್ನು ಬಿಟ್ಟಿರಲಾರದೆ ಹೃದಯ ಭಾರ ಎನಿಸಿದರೂ ಅವನ ಭವಿಷ್ಯ ನೆನೆದು ಸಮಾಧಾನ ಪಟ್ಟುಕೊಳ್ಳುವಂತ ಪರಿಸ್ಥಿತಿ ಅವರದ್ದಾಗಿತ್ತು. ಹಾಸ್ಟೇಲ್ ಸಂಸ್ಕೃತಿಗೆ ಹೊಂದಿಕೊಳ್ಳಲು ಅವನಿಗೆ ಸ್ವಲ್ಪ ಕಷ್ಟವಾಯಿತು. ಅಪ್ಪ-ಅಮ್ಮನ ಬಿಸಿ ಅಪ್ಪುಗೆಯಲ್ಲಿ ಬೆಳೆದಿದ್ದ ಪ್ರದೀಪ  ತನ್ನ ಮನಸಿನ ಭಾವನೆಗಳನ್ನು, ತೊಯ್ದಾಟಗಳನ್ನು ಅದುಮಿಡುತ್ತಲೇ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಪ್ರಯತ್ನಪಟ್ಟ. ತನ್ನ ಮನೆ-ತನ್ನವರ ಮನಗಳಿಂದ ದೂರ ಉಳಿದ ಅವನ ಸ್ಥಿತಿಗೂ, ಶಕುಂತಳಾ-ಪ್ರಕಾಶನ ಪರಿಸ್ಥಿತಿಗೂ ಹೆಚ್ಚೇನೂ ಭಿನ್ನತೆ ಇರಲಿಲ್ಲ. ಮಗನನ್ನು ದೂರ ಕಳಿಸಿದ ಶಕುಂತಳಾ ಮನಸ್ಸು ಹೆಪ್ಪುಗಟ್ಟಲು ಶುರುವಾಗಿದ್ದು ಇಲ್ಲಿಂದಲೇ ಎಂಬುದು ಯಾರ ಗಮನಕ್ಕೂ ಬರಲಿಲ್ಲ. ನೆರೆಹೊರೆಯ, ಸಹೋದ್ಯೋಗಿಗಳ ಮಕ್ಕಳನ್ನು ನೋಡಿದ ಮರುಕ್ಷಣವೇ ಕಣ್ಣಂಚಿನಿಂದ ನೀರು ಸುರಿಯುತ್ತಿತ್ತು. ತಕ್ಷಣವೇ, ಮಗುವಿನ ಚಿತ್ರಣ ತನ್ನ ಮುಂದೆ ಬಂದು ವಿಲ-ವಿಲಗೊಳ್ಳುತ್ತಿದ್ದಳು. ತನ್ನ ಅಂತರಂಗದ ತುಮುಲಗಳನ್ನು ಯಾರೊಡನೆ ಹಂಚಿಕೊಳ್ಳದ ಅನಿವಾರ್ಯತೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಳು.

ಮಗನ ಓದು ಸಾಂಗವಾಗಿ ನಡೆದು ಪ್ರಸಿದ್ಧ ವಿದ್ಯಾಸಂಸ್ಥೆಯಲ್ಲಿ ಸೀಟು ಸಿಕ್ಕಾಗ, ಅವಳ ನೋವೆಲ್ಲಾ ಹರಿದು ನೀರಾಗಿ ಕರಗಿ ಹೋಯಿತು.ಮತ್ತೆ ಮಗನ ಭವಿಷ್ಯದ ಕನಸು ಗರಿಗೆದರಿತು. ಮಗ ಎಂಜಿನೀರಿಂಗ್ ಪದವಿ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿ ಮುಂದಿನ ದಾರಿ ಏನೆಂದು ತೀರ್ಮಾನಿಸುವ ಆಯ್ಕೆಯನ್ನು ಪ್ರದೀಪನಿಗೆ ಬಿಡೋಣವೆಂದು ತೀರ್ಮಾನಿಸಿದ್ದರು. ಕೈಯಲ್ಲಿ ಒಳ್ಳೆಯ ಕೆಲಸದ ಆದೇಶ ಪತ್ರ, ಮತ್ತೊಂದೆಡೆ ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯದ ಉನ್ನತ ವ್ಯಾಸಂಗದ ಮನ್ನಣೆ ಪತ್ರ-ನಿರ್ಧಾರ ಪ್ರದೀಪನದಾಗಿತ್ತು. ಅಪ್ಪ-ಅಮ್ಮನೊಡನೆ ರಾಯರ ದರ್ಶನಕ್ಕೆಂದು  ಮಂತ್ರಾಲಯಕ್ಕೆ ಹೋಗಿದ್ದ ಪ್ರದೀಪನ ಮನಸ್ಸಿನಲ್ಲೂ ದ್ವಂದ್ವ ಬೀಡುಬಿಟ್ಟಿತ್ತು. ಕೆಲಸಕ್ಕೆ ಹೋದರೆ, ಮಗ ತಮ್ಮೊಡನೆ ಇರಬಹುದು ಎಂದು ಮನಸ್ಸು ಹಗುರಾದರೂ, ತಮಗೆ ಸಿಗದ ಅವಕಾಶ ಮಗನಿಗೆ ಲಭ್ಯವಾಗಿರುವಾಗ ಪ್ರದೀಪ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲಿ ಎಂದು ಬಯಸುತ್ತಿತ್ತು. ಪ್ರದೀಪ ತೆಗೆದುಕೊಳ್ಳುವ ನಿರ್ಧಾರ ಏನಿರಬಹುದು ಎಂಬ ತೊಳಲಾಟದಲ್ಲಿ ಶಕುಂತಳಾ ಹಿಂದಿನ ರಾತ್ರಿ ನಿದ್ದೆ ಮಾಡದೆ ಕಣ್ಣು ಮಂಜಾಗಿತ್ತು. ಏನಾದರಾಗಲಿ, ರಾಯರು ಮಾಡಿಸಿದ ಹಾಗೆ ಎನ್ನುತ್ತಾ ರಾತ್ರಿ ಕಳೆದಳು.ಇನ್ನು ಪ್ರಕಾಶನೋ, ಮಗ ಯಾವ ನಿರ್ಧಾರ ತೆಗೆದುಕೊಂಡರೂ ಸರಿಯೇ ಎಂದು ಸಮಾಧಾನದ ಸ್ಥಿತಿಯಲ್ಲಿ ರಾತ್ರಿ ಕಳೆದ.

ಪ್ರದೀಪ ಉನ್ನತ ವ್ಯಾಸಂಗಕ್ಕೆ ವಿಲಾಯಿತಿಗೆ ಹೋಗಲು ನಿರ್ಧರಿಸಿದ್ದ. ಅವನ ಮನಸಿನ ಹೋರಾಟವನ್ನು ಅವನೊಬ್ಬನೇ ಎದುರಿಸಬೇಕಾದ ಸಂಧಿಗ್ಧ ಪರಿಸ್ಥಿತಿ.  ಈ ವಿಷಯ ಕೇಳಿದ ಶಕುಂತಳಾ-ಪ್ರಕಾಶರ ಸಂತೋಷದ ಬುಗ್ಗೆ ಚಿಮ್ಮಿತು. ಪ್ರಕಾಶ ಮಗನನ್ನು ವಿದೇಶಕ್ಕೆ ಕಳಿಸಲು ಅವಶ್ಯಕವಾದ ಸಾಲದ ವ್ಯವಸ್ಥೆಯನ್ನು ಸುಸೂತ್ರವಾಗಿ ಮಾಡಿಮುಗಿಸಿದ. ಶಕುಂತಳಾ ತನ್ನ ಉದ್ವೇಗವನ್ನು ತಡೆಹಿಡಿದು ಮಗನನ್ನು ಸಾಗರದಾಚೆಗಿನ ಪ್ರಯಾಣಕ್ಕೆ ಕಳಿಸಲು ಮುಂದಾದಳು. ಯಾರೊಬ್ಬರೂ ಮನಸಿನ ಭಾವ ತರಂಗವನ್ನು  ಹೊರಹಾಕಲು ತಯಾರಿರಲಿಲ್ಲ. ಪ್ರದೀಪನನ್ನು ವಿಮಾನ ನಿಲ್ದಾಣದಲ್ಲಿ ಬೀಳ್ಕೊಡುವಾಗಲೂ, ನಗು ನಗುತ್ತಾ ವಿದಾಯ ಹೇಳಲು ಮನಸನ್ನು ಸಜ್ಜುಗೊಳಿಸಿದ್ದರು.

ವಿಮಾನ ಆಕಾಶದೆತ್ತರಕ್ಕೆ ಹಾರುತ್ತಿದ್ದಂತೆ ಶಕುಂತಲಾಳ  ದುಃಖದ ಕಟ್ಟೆ ಒಡೆಯಿತು. ಪ್ರಕಾಶ-ಶಕುಂತಳಾ ಪರಸ್ಪರ ಸಮಾಧಾನ ಮಾಡಿಕೊಂಡು ಮನೆಗೆ ಹಿಂತಿರುಗಿದರು. ಮನೆ ಈಗ ಬಣ ಗುಟ್ಟುತ್ತಾ ಇದೆ. ಮಗನ ಧ್ವನಿ ಪ್ರತಿಧ್ವನಿಸುತ್ತಿದೆ. ಆದರೂ ಮಗ ಬದುಕನ್ನು ಕಟ್ಟಿಕೊಳ್ಳಲು ಹೋಗಿದ್ದಾನೆ ಎಂಬ ವಾಸ್ತವ ಇಬ್ಬರನ್ನು ಸುಮ್ಮನಾಗಿಸಿತು. ಪ್ರದೀಪ ಎರಡು ವರ್ಷದ ವ್ಯಾಸಂಗವನ್ನು ಉನ್ನತ ದರ್ಜೆಯಲ್ಲಿ ಮುಗಿಸಿ, ಈಗ ಒಳ್ಳೆಯ ಕೆಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಸಾರ್ಥಕ ಭಾವನೆ ಮೂಡಿದೆ ಎಲ್ಲರಲ್ಲೂ. ಪ್ರದೀಪ ವಿಲಾಯಿತಿಯ ಬದುಕಿನ ಸ್ವರೂಪಕ್ಕೆ ಹೊಂದಿಕೊಂಡು ಅವಕಾಶಗಳ ಆಗರವನ್ನು ತನ್ನದಾಗಿಸಿಕೊಳ್ಳುವ ಚಾತುರ್ಯವನ್ನು ಮೈ ದುಂಬಿಸಿಕೊಳ್ಳುವ ಜಾಣ್ಮೆ ಬೆಳೆಸಿಕೊಂಡಿದ್ದಾನೆ. ಕಂಪನಿಯಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾನೆ.ತನ್ನ ಅಭಿರುಚಿಗೆ ಸರಿಹೊಂದುವಂತಹ ವಿಚಾರಗಳನ್ನು ಅರಿಯಲು ಪ್ರಾರಂಭಿಸಿದ್ದಾನೆ. ಪುಸ್ತಕಗಳ ಗೀಳು ಹಿಡಿಸಿಕೊಂಡಿದ್ದಾನೆ. ರಾಜಕೀಯ, ಹಣದ ಹೂಡಿಕೆ, ಸಂಬಂಧಗಳ ಸೂಕ್ಷ್ಮತೆ ಬಗ್ಗೆ ಗಂಟಾನುಗಟ್ಟಲೆ ಚರ್ಚೆ ಮಾಡುವ ಸಾಮರ್ಥ್ಯ ಹೊಂದಿದ್ದಾನೆ. I am fed up with middle class  ಅನ್ನುವಷ್ಟು ಬೆಳೆದುಬಿಟ್ಟಿದ್ದಾನೆ. ಭವಿಶ್ಯದ ಬಗ್ಗೆ ಕಂಡ ಕನಸಿನ ಹಿಂದೆ ನಡೆದಿದ್ದಾನೆ. ಡೋಲ್ಲರ್ಸ್ ಸಂಪಾದನೆಯ ರುಚಿ ಹಚ್ಚಿಸಿಕೊಂಡಿದ್ದಾನೆ. ಸಂಸ್ಕಾರ-ಸಾಧನೆ ಜೊತೆ ಜೊತೆಯಲ್ಲಿ ಕೊಂಡೊಯ್ಯುತ್ತಿದ್ದಾನೆ. ಚಿಕ್ಕ ವಯಸ್ಸಿನಲ್ಲಿ ಕಂಪನಿ ಡೈರೆಕ್ಟರ್ ಆಗುವ ತಯಾರಿಯಲ್ಲಿದ್ದಾನೆ. ಸಿಕ್ಕ ಅವಕಾಶಗಳನ್ನು ಅಪ್ಪಿ ಕೊಳ್ಳುತ್ತಿದ್ದಾನೆ.

ಇತ್ತ, ಶಕುಂತಳಾ, ಮಗನ ಬೆಳವಣಿಗೆಯನ್ನು ಕಂಡು ಹಿಗ್ಗಿದರೂ, ಆ ಸಂತೋಷ ತುಂಬಾ ಕ್ಷಣಿಕ ಎಂಬ ಮನಸ್ಥಿತಿಯಲ್ಲಿ ಸಿಲುಕಿದ್ದಾಳೆ. Successful mother ಆಗುವ ತರಾತುರಿಯಲ್ಲಿ Happy mother ಆಗಲಿಲ್ಲವ? – ಎಂಬ ಭ್ರಮೆಯಲ್ಲಿ ಬಿದ್ದಿದ್ದಾಳೆ. ದೊಡ್ಡ ಕನಸಿನ ಮುಂದೆ ಸಣ್ಣ-ಸಣ್ಣ ಸಂತೋಷಗಳು ಕಾಣೆಯಾಗಿವೆ ಎಂಬ ನಿರಾಶೆ ತುಂಬಿದೆ ಅವಳ ಬಾಳಲ್ಲಿ. ಮನಸು ಖಿನ್ನತೆಗೆ ಒಳಗಾಗಿದೆ. ಮಗನ ಸಮಾಧಾನದ ಮಾತುಗಳು, ಮನಸ್ಸನ್ನು ತಹಬಂದಿಗೆ ತರಲಾರದಾಗಿದೆ. ಏಕಾಂಗಿಯಾಗಿರದಿದ್ದರೂ, ಮನಸ್ಸಿನೊಡನೆ ಸಂಭಾಷಣೆ ತೀವ್ರವಾಗಿ ಕಾಡುತ್ತಿದೆ. ಸಂಘರ್ಷಗಳನ್ನು ಹತ್ತಿಕ್ಕಲು ಪುಸ್ತಕದ ಗೀಳು ಹಚ್ಚಿಕೊಂಡಿದ್ದಾಗಿದೆ.  ಮಗನಿಗೆ ಎಣ್ಣೆ ಮಜ್ಜನ ಮಾಡಿಸುವ, ಅವನಿಗೆ ರುಚಿಸುವ ಪೂರಿ-ಸಾಗು ಮಾಡಿಕೊಡುವ , ಹಬ್ಬ-ಹರಿದಿನಗಳಲ್ಲಿ ಮಾಡುವ ಭಕ್ಷ್ಯಗಳು ನೀಡುವ ಸಣ್ಣ ಸಂತೋಷದಿಂದ ವಂಚಿತೆಯಾದೆನಲ್ಲ ಎಂಬ ಕೊರಗು ಕಾಡಲಿಕ್ಕೆ ಶುರುವಾಗಿದೆ.. ಅವನಿಗೆ ತಾಯಿಯ ಪ್ರೀತಿ ಅಪ್ಪುಗೆ ನೀಡಲಾರೆನೆಂಬ ನೋವು ವಿಪರೀತವಾಗಿದೆ. ಅವನ ಸಣ್ಣ ನೋವು ಕೂಡ ಕರುಳು ಕಿವುಚಿದಂತಾಗಿ ತಾನೇನೂ ಮಾಡಲಾಗದ ಅಸಹಾಯಕ ಸ್ಥಿತಿ ತನ್ನದಾಯಿತಲ್ಲ ಎಂಬ ವೇದನೆ. ಮಗನ ಮನಸಿನ ಬೇಕು-ಬೇಡಗಳನ್ನುತಿಳಿಯಲು ಅಸಮರ್ಥಳಾದ ನೋವಿನ ಛಾಯೆ. ಅವನ ಏಳಿಗೆ ತನಗೆ ಮುದ ತರುವಂತಹುದಾದರೂ ತನ್ನಿಂದ ದೂರವಾಗುತ್ತಿದ್ದಾನೆಂಬ ಅಂಜಿಕೆ. ಮಗನನ್ನು ಎದೆ ಗವಚಿ ಕ್ಷಮೆ ಕೇಳಬೇಕೆಂದೆನಿಸುತ್ತಿದೆ.

ಅವನ ಯೋಚನಾ ದೃಷ್ಟಿ ಈಗಿನ ಮಕ್ಕಳ ಪೀಳಿಗೆಗೆ ಸರಿಯೆನಿಸಿದರೂ, ಅದಕ್ಕೆ ಹೊಂದಿಕೊಳ್ಳಲು ತುಂಬಾ ಸಮಯವೇ ಹಿಡಿದೀತು. ಆದರೂ, ಅದನ್ನು ದಕ್ಕಿಸಿಕೊಳ್ಳುವತ್ತ ತನ್ನ ಪ್ರಯತ್ನ ಇದ್ದೆ ಇರುತ್ತದೆ ಎಂಬ ವಿಶ್ವಾಸ ಶಕುಂತಲಳಲ್ಲಿ ಬಲವಾಗಿ ಇದೆ. ಈಗೀಗ ಅವಳಲ್ಲಿ ಗುರುತರ ಬದಲಾವಣೆಗಳು ಯೋಚನೆಯ ದೃಷ್ಟಿಕೋನಗಳು ಬದಲಾಗುತ್ತಾ ಹೋಗುತ್ತಿರುವುದು ಅವಳ ಅರಿವಿಗೆ ಬರುತ್ತಿದೆ.ಈ ನಿಟ್ಟಿನಲ್ಲಿ ಅವಳ ಪ್ರಯತ್ನಕ್ಕೆ ಪ್ರಕಾಶ ಹಾಗೂ ಪ್ರದೀಪನ ಸಲಹೆಗಳು ಸಹಕಾರಿಯಾಗಿವೆ. ತನ್ನ ಎದೆಗೂಡಿಂದ ಸ್ವಚ್ಛಂದ ಬದುಕ ಅರಸಿ ಹಾರಿದ ಹಕ್ಕಿ ಮುಂದೆ ಎಂದಾದರೂ ತನ್ನ ಗೂಡಿಗೆ ಮರಳಿ ಬರಬಹುದೆಂಬ ನಿರೀಕ್ಷೆಯಲ್ಲಿ ದಿನ ಕಳೆಯುವುದನ್ನು ಬಿಟ್ಟು ಬೇರಾವ ದಾರಿಯು ಕಾಣಿಸುತ್ತಿಲ್ಲ ಶಕುಂತಲಾಳಿಗೆ.

-ಹೆಬ್ಬಾಲೆ ವತ್ಸಲ.

6 Responses

  1. ನಾಗರತ್ನ ಬಿ. ಅರ್. says:

    ತಾಯಿಯತುಮುಲ ಮಕ್ಕಳ ಏಳಿಗೆಗಾಗಿ ಮಿಡಿದು ಖಾಲಿಯಾಗುವ ಮನಮತ್ತೆಂದಾದರು ಆನಂದ ಮರಳಿ ಸಿಕ್ಕೀತೆಂಬ ಭರವಸೆಯ ನಿರೀಕ್ಷೆ … ಸೊಗಸಾದ ನಿರೂಪಣೆ ಯ ಕಥೆ ಎನ್ನಬಹುದು.. ಚಿಂತನೆಗೆ ಹಚ್ಚಿದ ನಿಮಗೆ ಧನ್ಯವಾದಗಳು ಮೇಡಂ

  2. Padma Anand says:

    ಜನರೇಷನ್ ಗ್ಯಾಪ್ ನಿಂದ ಉಂಟಾಗುವ ವಿಭಿನ್ನತೆಗಳ ಸಶಕ್ತ ಅನಾವರಾಣ.

  3. ಶಂಕರಿ ಶರ್ಮ says:

    ತಾಯಿ ಹೃದಯದ ತುಮುಲಗಳನ್ನು ಸಮರ್ಥವಾಗಿ, ಬಹು ಸೊಗಸಾಗಿ ಬಿಂಬಿಸಿದ ಕಥೆ ಚೆನ್ನಾಗಿದೆ ಮೇಡಮ್.

  4. ಶಿವಮೂರ್ತಿ.ಹೆಚ್. says:

    ವಿಭಿನ್ನ ಕಥಾಹಂದರವು…

  5. ಎಲ್ಲಾ ತಾಯಿಯಂದಿರ ಮನದ ತುಮುಲ ಚೆನ್ನಾಗಿ ಮೂಡಿಬಂದಿದೆ

  6. padmini says:

    Nice presentation. Mother’s autobiography cannot be too limited like this!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: