ಅಕ್ಕಾ ಕೇಳವ್ವಾ…
ಕೌಶಿಕನ ತ್ಯಜಿಸಿ ದಿಗಂಬರೆಯಾಗಿ ಕಲ್ಯಾಣದತ್ತ ಹೆಜ್ಜೆಹಾಕಿದೆ. ನಿನ್ನಲ್ಲಿ ಆ ಆತ್ಮಸೈರ್ಯ, ಧೃಢ ಮನಸ್ಸು, ಆಧ್ಯಾತ್ಮಿಕ ಶಕ್ತಿ ಎಲ್ಲಿಂದ ಬಂತವ್ವ? ಕಲ್ಯಾಣದಲ್ಲಿ ಶರಣರ ಸಂಗದಲ್ಲಿ ಮುಗಿಲೆತ್ತರ ಬೆಳೆದೆ. ವಚನ ಸಾಹಿತ್ಯ ಲೋಕದಲ್ಲಿ ಧೃವತಾರೆಯಂತೆ ಮಿನುಗಿದೆ. ನಿನ್ನೊಲುಮೆಯ ಚನ್ನಮಲ್ಲಿಕಾರ್ಜುನನ ಅರಸುತ್ತಾ ಅಲ್ಲಿಂದ ಶ್ರೀಶೈಲದೆಡೆಗೆ ಸಾಗಿದೆ.
ಅಕ್ಕಾ, ನಿನ್ನಂತೆಯೇ ಈ ಲೋಕದ ಜಂಜಾಟಗಳಿಂದ ನೊಂದು ಬೆಂದವರು, ನಿನ್ನಂತೆಯೇ ಹೋರಾಡಿ ಪರಿಪಕ್ವವಾದವರ ಕಥೆ ಕೇಳುವೆಯಾ?
ಆದಿ ಇಲ್ಲದ ಅಂತ್ಯವಿಲ್ಲದ ಹೆಣ್ಣಿನ ಕಣ್ಣೀರಿನ ಕಥೆಯಿದು. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುವ ಹೆಣ್ಣಿನ ಕಥೆಯೂ ಹೌದು. ಫೀನಿಕ್ಸ್ ಪಕ್ಷಿಯಂತೆ ಸಮಾಜ ಹೊಸಕಿ ಹಾಕಿದಷ್ಟೂ ಮತ್ತೆ ಮತ್ತೆ ಚಿಗುರುವ ಬಾಲೆಯ ಬದುಕಿನ ಕಥೆಯಿದು. ಅಕ್ಕಾ ಕೇಳುವೆಯಾ..ಈ ಹುಡುಗಿಯ ಹೋರಾಟದ ಕಥೆಯನ್ನು?
ಕಳೆದ ಶತಮಾನದ ಎಪ್ಪತ್ತರ ದಶಕ. ನಾನು ಆಗ ತಾನೇ ಪಿ.ಯು.ಸಿ. ಸೇರಲಿಕ್ಕೆಂದು ಪಟ್ಟಣಕ್ಕೆ ಬಂದ ಸಮಯ. ಮಾವನ ಮನೆಯಲ್ಲಿ ನನ್ನ ವಾಸ್ತವ್ಯ. ಮಾವನ ಮಗಳು ದ್ವಿತೀಯ ಪಿ.ಯು.ಸಿ ಓದುತ್ತಿದ್ದಳು. ಇಬ್ಬರೂ ಜೊತೆಯಾಗಿಯೇ ಕಾಲೇಜಿಗೆ ಹೋಗುತ್ತಿದ್ದೆವು. ಹಾದಿಯಲ್ಲಿ ಒಂದು ಹಳೆಯ ಕಾಲದ ಹೆಂಚಿನ ಮನೆ, ಮನೆಯ ಸುತ್ತ ದೊಡ್ಡ ಕಾಂಪೌಂಡ್, ಅಲ್ಲಿಯೇ ದನಕರು ಕಟ್ಟದ್ದರು. ಮನೆಯ ತುಂಬ ಜನ ಇದ್ದ ಹಾಗೆ ಕಾಣುತ್ತಿದ್ದರು. ಒಂದು ದಿನ ನಾವು ಕಾಲೇಜಿಗೆ ಹೋಗುವಾಗ, ಆ ಮನೆಯಿಂದ ಒಬ್ಬ ಹುಡುಗಿಯ ಚೀರಾಟ, ದೊಡ್ಡವರ ಕೂಗಾಟ ಕೇಳುತ್ತಿತ್ತು. ನಾವು ಕುತೂಹಲದಿಂದ ಮೂಲೆಯಲ್ಲಿದ್ದ ಕಿಡಕಿಯಿಂದ ಇಣುಕಿ ನೋಡಿದೆವು. ಒಬ್ಬ ಗಂಡಸು ಹುಡುಗಿಯೊಬ್ಬಳಿಗೆ ಕಾಲಿನಿಂದ ಝಾಡಿಸಿ ಹೊಡೆಯುತ್ತಿದ್ದ. ಅವನ ಹೊಡೆತಕ್ಕೆ ಆ ಹುಡುಗಿ – ಈ ಗೋಡೆಯಿಂದ ಆ ಗೋಡೆಗೆ ಹಾರಿ ಬೀಳುತ್ತಿದ್ದಳು. ಬಿಡಿಸಿಕೊಳ್ಳಲು ಹೋದವರಿಗೂ ಪೆಟ್ಟು ಬೀಳುತ್ತಿತ್ತು. ಗೋಡೆಗೆ ಅಪ್ಪಳಿಸಿದ ಆ ಹುಡುಗಿಯ ತಲೆಗೆ ಏಟು ಬಿದ್ದು ರಕ್ತ ಬಂದ ಮೇಲೆಯೇ ಆ ನರ ರಾಕ್ಷಸ ಹೊಡೆಯುವುದನ್ನು ನಿಲ್ಲಿಸಿದ. ಬಹುಶಃ ಹುಡುಗಿ ಸತ್ತೇ ಹೋದಾಳೇನೋ ಎಂಬ ಹೆದರಿಕೆ ಹುಟ್ಟಿತೇನೋ ಅವನಲ್ಲಿ. ಅವನು ನಮ್ಮೆಡೆಗೆ ನೋಡಿದಾಗ ನಾವು ಹೆದರಿ ಅಲ್ಲಿಂದ ಓಟ ಕಿತ್ತೆವು. ಆ ದಿನ ಕಾಲೇಜಿನಲ್ಲಿ ಕೇಳಿದ ಯಾವ ಪಾಠವೂ ತಲೆಯೊಳಗೆ ಹೋಗಲಿಲ್ಲ.
ಆ ದುರ್ದೈವಿ ಹುಡುಗಿಯ ದೂರದ ಸಂಬಂಧಿಯೊಬ್ಬಳು ನನ್ನ ಸಹಪಾಠಿ. ಅವಳು ಹೇಳಿದ ಕಥೆ ಎಂತಹ ಕಲ್ಲನ್ನೂ ಕರಗಿಸುವಂತಿತ್ತು. ಈ ಹುಡುಗಿಯ ಹೆಸರು ಶೀಲಾ. ಅವಳು ಹುಟ್ಟಿದ್ದು ಒಂದು ರೈತ ಕುಟುಂಬದಲ್ಲಿ, ಮನೆ ತುಂಬಾ ಮಕ್ಕಳು. ಎಲ್ಲರೂ ಕಷ್ಟಜೀವಿಗಳೇ. ಸುತ್ತಮುತ್ತ ಇದ್ದ ಇಪ್ಪತ್ತು ಎಕರೆ ಜಮೀನನ್ನು ಗುತ್ತಿಗೆ ಹಿಡಿದು ಜೋಳ, ತೊಗರಿ, ಹೆಸರು, ಅವರೆ, ಹತ್ತಿ, ಸೇಂಗ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದರು. ಬೆಳಗಾಗುವ ಮೊದಲೇ ಎದ್ದು ಕೆಲಸ ಆರಂಭಿಸಿದರೆ, ಅವರ ಕೆಲಸ ಮುಗಿಯುತ್ತಿದ್ದುದು ಕತ್ತಲಾದ ಮೇಲೆಯೇ. ಗಂಡು ಮಕ್ಕಳು ಸಗಣಿ ಕಸ ಹೊಡೆದು, ದನ ಕರುಗಳ ಮೈ ತೊಳೆದು, ಹಾಲು ಹಿಂಡಿ ಹೊಲದ ಕಡೆ ಹೋದರೆ, ಹೆಣ್ಣು ಮಕ್ಕಳು ಮನೆ ಗುಡಿಸಿ, ನೀರು ತಂದು, ಪಾತ್ರೆ ತೊಳೆದು, ಅಡಿಗೆ ಮಾಡುತ್ತಿದ್ದರು. ನಿತ್ಯ ಎರಡರಿಂದ ಎರಡೂವರೆ ಸೇರು ಜೋಳದ ರೊಟ್ಟಿ ಸುಡಬೇಕಾಗಿತ್ತು. ಬಟ್ಟೆ ಒಗೆಯಲು ಹಳ್ಳದ ಬದಿಗೆ ಹೋದ ಹುಡುಗಿಯರು, ಅಲ್ಲಿ ಎಮ್ಮೆಯ ಬಾಲ ಹಿಡಿದು ಈಜಾಡುತ್ತಿದ್ದರು. ಅದೇ ಅವರ ಈಜುಕೊಳವಾಗಿತ್ತು. ಹುಡುಗರು ಹತ್ತು ಗಂಟೆಯ ಹೊತ್ತಿಗೆ ಕೆಲಸ ಮುಗಿಸಿ ಕಾಟನ್ ಮಿಲ್‌ನವರು ನಡೆಸುತ್ತಿದ್ದ ಶಾಲೆಗೆ ಓಡುತ್ತಿದ್ದರು. ಜೊತೆಯಲ್ಲಿ ಓದುತ್ತಿದ್ದ ಹುಡುಗರು -ಥೂ, ಸಗಣಿ ವಾಸನೆ’ ಎನ್ನುತ್ತಾ ದೂರ ಸರಿದಾಗಲೆಲ್ಲಾ, ಈ ಹುಡುಗರ ಮನಸ್ಸಿನಲ್ಲಿ ಒಂದು ಧೃಢ ನಿರ್ಧಾರ ನಿಧಾನವಾಗಿ ರೂಪುಗೊಳ್ಳುತ್ತಿತ್ತು. ‘ನಾವು ಚೆನ್ನಾಗಿ ಓದಿ, ಒಂದು ಸರ್ಕಾರಿ ನೌಕರಿ ಪಡೆಯಬೇಕೆಂಬ ಹಂಬಲ ಅವರದಾಗಿತ್ತು.’ ತಂದೆಯ ಶಿಸ್ತು, ಕಠಿಣ ಪರಿಶ್ರಮ, ತಾಯಿಯ ಮಮತೆ ಎಲ್ಲರನ್ನೂ ಒಂದಾಗಿ ಬೆಸೆದಿತ್ತು. ಜೇನುಗೂಡಿನಂತಿತ್ತು ಆ ಮನೆ.
ಹಿರಿಯ ಮಗಳಿಗೆ ಹತ್ತು ವರ್ಷಕ್ಕೇ ಮದುವೆ ಮಾಡಿ ಕಳುಹಿಸಿದರು. ಆಗ ಮದುವೆಗೆಂದು ಬಂದಿದ್ದ ಹೊಲದೊಡೆಯರು, ಚೂಟಿಯಾಗಿ ಓಡಾಡುತ್ತಿದ್ದ ಎರಡನೇ ಮಗಳನ್ನು ಕಂಡವರೇ ತಮ್ಮ ಮಗನಿಗೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದರು. ಬೇಡ ಎನ್ನುವ ಉಸಿರು ಯಾರಿಗೂ ಇರಲಿಲ್ಲ. ಆಗ ಈ ಹುಡುಗಿಗಿನ್ನೂ ಎಂಟು ವರ್ಷ. ಉಡಿ ತುಂಬುವ ಶಾಸ್ತ್ರ ಮುಗಿಸಿ ಹೊರಟೇ ಬಿಟ್ಟರು. ಇವರು ಹುಡುಗನನ್ನೇ ನೋಡಿರಲಿಲ್ಲ. ಕಂಡವರು ಹೇಳಿದರು -‘ಆ ಹುಡುಗ ರೋಗಿಷ್ಟ, ಗೂರಲು ಕೆಮ್ಮು, ಮದುವೆ ಮಾಡುವ ಬದಲು ಬಾವಿಗೆ ತಳ್ಳಿಬಿಡು ನಿನ್ನ ಮಗಳನ್ನು’ – ಆದರೆ ಅಪ್ಪನಿಗೋ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರತಿಷ್ಟೆ. ಹೊಲ ಮನೆ ಇರುವ ಆಸ್ತಿವಂತರು ಎಂಬ ಭಾವ ಅಮ್ಮನದು. ಒಂದೆರಡು ತಿಂಗಳಲ್ಲೇ ಗಂಡಿನವರೇ ಮದುವೆಯ ಶಾಸ್ತ್ರವನ್ನೂ ಮುಗಿಸಿಬಿಟ್ಟರು. ಮದುವೆಯ ಅರ್ಥವೇ ಗೊತ್ತಿಲ್ಲದ ಶೀಲಾಳ ಕೊರಳಿಗೊದು ತಾಳಿಯ ಉರುಳನ್ನು ಬಿಗಿದಿದ್ದರು. ಹನ್ನೆರಡು ವರ್ಷದ ಹುಡುಗಿ ಮೈ ನೆರೆದಾಗ ಆರತಿ ಮಾಡಿ ಗಂಡನ ಮನೆಗೆ ಕಳುಹಿಸಿಕೊಟ್ಟರು.
ತವರಿನಲ್ಲಿ ಅಕ್ಕ ತಂಗಿಯರ ಜೊತೆ ಆಟವಾಡಿಕೊಂಡು ಬೆಳೆದಿದ್ದ ಶೀಲಾಳ ಪರಿಸ್ಥಿತಿ ನೀರಿನಿಂದ ಹೊರಬಿದ್ದ ಮೀನಿನಂತಾಗಿತ್ತ್ತು. ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಆಗಲೇ ಇಲ್ಲ. ಮಾವನ ದರ್ಪ, ಅತ್ತೆಯ ಸಿಡುಕು, ಗಂಡನ ಅನಾರೋಗ್ಯ, ಭಾವನ ಕಾಮುಕ ದೃಷ್ಟಿ – ಇವುಗಳಿಂದ ಬೆಂದು ಹೋದಳು ಹುಡುಗಿ. ತವರಿಗೆ ಹೋದಾಗಲೆಲ್ಲ ಅಮ್ಮನ ಬಳಿ ಗುಸು ಗುಸು ಅಳುತ್ತಾ ತನ್ನ ನೋವನ್ನು ಹಂಚಿಕೊಳ್ಳುತ್ತಿದ್ದಳು. ಎಲ್ಲ ಅಮ್ಮಂದಿರು ಹೇಳುವ ಹಾಗೆ ಅವ್ವ –‘ಹೊಂದಿಕೊಂಡು ಹೋಗು, ಹುಡುಗಿ, ಹೆಣ್ಣಿನ ಬಾಳು ಅಂದರೆ ಇಷ್ಟೇ. ನೀನು ಗಂಡನ ಮನೆ ಬಿಟ್ಟು ಬಂದರೆ ನಿನ್ನ ಮೂರು ಜನ ತಂಗಿಯರ ಗತಿ ಏನಾದೀತು? ಯೋಚಿಸು’-ಎಂದು ಪ್ರತಿಬಾರಿ ಮಗಳಿಗೆ ಸಮಾಧಾನ ಹೇಳಿ ಕಳುಹಿಸುತ್ತಿದ್ದಳು. ಎರಡು ಮೂರು ವರ್ಷ ಗಂಡನ ಮನೆಯಲ್ಲಿ ನರಕವಾಸ ಅನುಭವಿಸಿದ ಶೀಲಾ ತಂಗಿಯ ಮದುವೆಗೆಂದು ಬಂದವಳು ಅಮ್ಮನಿಗೆ, ತನ್ನ ಮೈ ಮೇಲೆ ಬಿದ್ದ ಬಾಸುಂಡೆಗಳನ್ನು ತೋರಿಸಿದಳು. ಓರಗಿತ್ತಿ ಹೆರಿಗೆಗೆಂದು ತವರಿಗೆ ಹೋದಾಗ ಕಾಮುಕನಾದ ಭಾವ ಮೈಮೇಲೆ ಬಿದ್ದಿದ್ದ. ಅವನಿಂದ ತಪ್ಪಸಿಕೊಳ್ಳಲು ಕಿರುಚಾಡಿದಾಗ ತಮ್ಮ ಮನೆ ಮರ್ಯಾದೆ ಹೋಯಿತೆಂದು ಅತ್ತೆ, ಭಾವ ಸೇರಿ ಹೊಡೆದಿದ್ದರು. ದಿನ ನಿತ್ಯ ಏನಾದರೂ ಕಾರಣಕ್ಕೆ ಅತ್ತೆ, ಭಾವ ಹೊಡೆಯುತ್ತಲೇ ಇರುತ್ತಾರೆ. ಇನ್ನು ತಾನು ಆ ಮನೆಗೆ ಹೋಗುವುದಿಲ್ಲ. ಒತ್ತಾಯಿಸಿದರೆ ಮನೆಯ ಮುಂದಿನ ಬಾವಿಗೆ ಹಾರುತ್ತೇನೆ ಎಂದು ಹಠ ಹಿಡಿದು ಕುಳಿತಳು ಹುಡುಗಿ. ಕರೆಯಲು ಬಂದ ಗಂಡನ ಮನೆಯವರಿಗೆ ಹುಡುಗಿಯ ವರ್ತನೆಯಿಂದ ಮುಖಭಂಗವಾದಂತಾಗಿ -‘ನಿಮ್ಮ ಮಗಳು ನಡತೆಗೆಟ್ಟವಳು’- ಎಂದು ಘೋಷಿಸಿಯೇ ಬಿಟ್ಟರು. ಅದೇ ದಿನ ಮದುವೆಗೆಂದು ಬಂದಿದ್ದ ಅವರ ಹಿರಿಯ ಅಳಿಯ ಶೀಲಾಳಿಗೆ ಹೊಡೆಯುತ್ತಿದ್ದ ದೃಶ್ಯ ನೀವು ನೋಡಿದ್ದು.
ನಾವು ಕಾಲೇಜಿಗೆ ಹೋಗುವಾಗ ಆಗೊಮ್ಮೆ ಈಗೊಮ್ಮೆ ಶೀಲಾಳನ್ನು ನೋಡುತ್ತಿದ್ದೆವು. ಅವಳು ‘ಗಣೇಶ ಮಿಲ್‌ಗೆ’ ಕೆಲಸಕ್ಕೆ ಹೋಗುತ್ತಿದ್ದಳು. ಸುತ್ತ ಮುತ್ತಲಿನವರ ಕುಹಕದ ನುಡಿಗಳು, ಮಿಲ್ಲಿನ ಗಂಡಸರ ಕೆಣಕುವ ನೋಟ, ಬಂಧು ಬಾಂಧವರ ತಿರಸ್ಕಾರ ಅವಳನ್ನು ಕಂಗೆಡಿಸಿದ್ದವು. ಅಪ್ಪ ಎಂದೂ ಅವಳನ್ನು ಮಾತಾನಾಡಿಸಲಿಲ್ಲ. ಹೀಗೇ ಒಂದು ವರ್ಷ ಕಳೆದಿರಬಹುದೇನೋ. ತವರಿಗೆ ಹೆರಿಗೆಗೆಂದು ಬಂದ ನೆರೆಮನೆಯ ಹುಡುಗಿ ಲತಾ, ಶೀಲಾಳ ಓರಗೆಯವಳೇ. ಬಾಲ್ಯದಲ್ಲಿ ಒಟ್ಟಾಗಿ ಕುಂಟಪಿಲ್ಲೆ ಆಡಿ ಬೆಳೆದವರೇ. ತನ್ನ ಬಾಲ್ಯದ ಗೆಳತಿಯ ಸ್ಥಿತಿಯನ್ನು ಕಂಡು ಮರುಗಿದಳು. ಅವಳ ಗಂಡನ ಮನೆ ವಿಜಯರ. ಬರಗಾಲದಿಂದಾಗಿ ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದರು. ಅಲ್ಲಿ ಒಂದು ಖಾನಾವಳಿ ನಡೆಸುತ್ತಿದ್ದರು. ಮಗುವನ್ನು ನೋಡಲು ಬಂದ ಅತ್ತೆ ಮಾವನೊಂದಿಗೆ ಶೀಲಾಳ ಬಾಳಿನ ದುರಂತವನ್ನು ತಿಳಿಸಿದಳು. ಅವರು ಶೀಲಾಳ ತಾಯಿ ಒಪ್ಪುವುದಾದರೆ ತಾವು ಅವಳನ್ನು ಪೂನಾಕ್ಕೆ ಕರೆದೊಯ್ಯಲು ಸಿದ್ಧ ಎಂದರು. ಖಾನಾವಳಿಯಲ್ಲಿ ಅಡಿಗೆ ಕೆಲಸಕ್ಕೆ ಒಂದು ಹೆಣ್ಣು ಬೇಕಿತ್ತು ಅವರಿಗೆ. ಶೀಲಾಳಿಗಾದರೋ ಪರಿಚಿತ ಪರಿಸರದಿಂದ ದೂರ ಓಡಬೇಕಿತ್ತು. ತಾಯಿಗೆ ತನ್ನ ಮಗಳು ಈ ಕುಟುಂಬದ ಜೊತೆ ಸುರಕ್ಷಿತಳಾಗಿರಬಹುದು ಎಂಬ ಭಾವ. ಅದೇ ದಿನ ರಾತ್ರಿ ಯಾರಿಗೂ ಗೊತ್ತಾಗದ ಹಾಗೆ ತನ್ನ ತವರಿನವರು ಹಾಕಿದ್ದ ಚಿನ್ನದ ಬಳೆಯನ್ನು ಅಡವಿಟ್ಟು, ಬಂದ ಹಣವನ್ನು ಮಗಳಿಗೆ ಕೊಟ್ಟು ಲತಾಳ ಜೊತೆ ಕಳುಹಿಸಿಯೇ ಬಿಟ್ಟಳು. ಪೂನಾಕ್ಕೆ ಬಂದ ಶೀಲಾ ಬಲು ಬೇಗನೇ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ಬಿಟ್ಟಳು. ಅವಳು ಮಾಡುತ್ತಿದ್ದ ಮಲ್ಲಿಗೆ ಹೂವಿನ ಹಾಗಿರುತ್ತಿದ್ದ ಜೋಳದ ರೊಟ್ಟಿ, ಬದನೇಕಾಯಿ ಎಣ್ಣೆಗಾಯಿ, ಸೇಂಗ ಚಟ್ನಿಗೆ ಎಲ್ಲಿಲ್ಲದ ಬೇಡಿಕೆ. ಮರಾಠಿ ಭಾಷೆಯನ್ನೂ ಬಲು ಬೇಗ ಕಲಿತಳು. ಎಲ್ಲರ ಮೆಚ್ಚುಗೆ ಸಂಪಾದಿಸಿದಳು. ಲತಾಳ ಅತ್ತೆ, ಮಾವ, ಗಂಡ ಅವಳನ್ನು ಮನೆಯ ಮಗಳಂತೆಯೇ ಆತ್ಮೀಯತೆಯಿಂದ ಕಾಣುತ್ತಿದ್ದರು. ತಿಂಗಳಿಗೊಮ್ಮೆ ತಪ್ಪದೇ ಹುಡುಗಿ, ಲತಾಳ ಗಂಡನ ಕೈಲಿ ಅವ್ವನಿಗೊಂದು ಪತ್ರ ಬರೆಸುತ್ತಿದ್ದಳು. ಅವ್ವ, ತಂಗಿಯ ಕೈಲಿ ಬರೆಸುವ ಪತ್ರಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಗಂಡನ ಮನೆಯವರ ಕಬಂಧ ಬಾಹುಗಳಿಂದ ತಪ್ಪಿಸಿಕೊಂಡ ಹುಡುಗಿ ತನ್ನವ್ವನ ದೂರದೃಷ್ಟಿಯಿಂದ, ಗೆಳತಿಯ ನೆರವಿನಿಂದ ಒಂದು ನೆಲೆ ಕಂಡುಕೊಂಡಿದ್ದಳು.
ನಾನು ಓದು ಮುಗಿಸಿ, ಮದುವೆಯಾಗಿ ಗಂಡನ ಮನೆಗೆ ಹೋದವಳು ಶೀಲಾಳ ವಿಷಯವನ್ನು ಮರೆತೇಬಿಟ್ಟೆ. ಸುಮಾರು ಇಪ್ಪತ್ತೈದು ವರ್ಷ ಕಳೆದಿರಬಹುದು. ಮಾವನ ಮನೆಯ ಕಾರ್ಯಕ್ರಮವೊಂದಕ್ಕೆ ಬಂದವಳು – ಎದುರು ಮನೆಯಲ್ಲಿ ಶೀಲಾಳಂತೆಯೇ ಇದ್ದ ಹದಿನೈದರ ಹರೆಯದ ಹುಡುಗಿಯನ್ನು ನೋಡಿ ಚಕಿತಳಾದೆ. ಅದೇ ನಿಲುವು, ಹಾವಭಾವ ಕಂಡು ಬೆರಗಾಗಿ ಅವಳನ್ನು ಕೇಳಿದೆ – ‘ನೀನು ಶೀಲಾಳ ಮಗಳೇ’- ಹುಡುಗಿ ಹೌದೆಂದು ತಲೆಯಾಡಿಸಿದಳು. ಅಂದು ರಾತ್ರಿ, ಮಾವನ ಮಗಳು ಅವಳ ಬದುಕಿನ ಪುಟಗಳನ್ನು ನನ್ನ ಮುಂದೆ ತೆರೆದಿಟ್ಟಳು.
ಶೀಲಾಳ ಅದೃಷ್ಟವೋ ಎಂಬಂತೆ ಒಳ್ಳೆಯ ಮನೆಯನ್ನೇ ಸೇರಿದ್ದಳು. ಆದರೆ ಅವಳ ಬೆನ್ನು ಹತ್ತಿದ್ದ ಶನಿ ಬಿಡಬೇಕಲ್ಲ. ಖಾನಾವಳಿಗೆ ತಪ್ಪದೇ ಬರುತ್ತಿದ್ದ ಮಧ್ಯಮ ವಯಸ್ಸಿನ ಗಂಡಸೊಬ್ಬ ಅವಳನ್ನು ಪ್ರೀತಿಸುವ ನಾಟಕವಾಡಿದ. ತನ್ನ ಹೆಂಡತಿ ರೋಗಿಷ್ಟೆಯೆಂದೂ, ಅವಳನ್ನು ಶೀಘ್ರದಲ್ಲಿಯೇ ಡೈವೋರ್ಸ್ ಮಾಡಿ ಶೀಲಾಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ. ಗುಟ್ಟಾಗಿ ಅವಳಿಗೆ ಉಡುಗೊರೆಗಳನ್ನು ತಂದುಕೊಡುತ್ತಿದ್ದ. ಹದಿನೆಂಟರ ಹರೆಯದ ಹುಡುಗಿ, ಅವನ ಮಾತಿನ ಮೋಡಿಗೆ ಮರುಳಾಗಿ, ತನ್ನ ತನು ಮನವನ್ನು ಅರ್ಪಿಸಿಯೇ ಬಿಟ್ಟಳು. ಅವಳು ಗರ್ಭಿಣಿ ಎಂದು ತಿಳಿದಾಗ ಆ ಗಂಡು ನಾಪತ್ತೆಯಾಗಿದ್ದ. ಅವನನ್ನು ಹುಡುಕಿಕೊಂಡು ಹೋದ ಶೀಲಾಗೆ ಆಘಾತ ಕಾದಿತ್ತು. ಅವನು ಹೆಂಡತಿ ಮಕ್ಕಳೊಂದಿಗೆ ಸುಖವಾಗಿಯೇ ಇದ್ದ. ‘ನೀನೊಬ್ಬ ನಡತೆಗೆಟ್ಟ ಹೆಣ್ಣು, ನಿನ್ನ ಇತಿಹಾಸ ನನಗೆ ಗೊತ್ತು ಎಂದುಬಿಟ್ಟ.’ ತನಗೆ ಮೋಸ ಮಾಡಿದ ಅವನು ನೀತಿವಂತನು, ಅವನನ್ನು ನಂಬಿದ ತಾನು ನಡತೆಗೆಟ್ಟವಳು. ಇದೆಂತಹ ವಿಪರ್‍ಯಾಸ. ಮತ್ತೊಮ್ಮೆ ಶೀಲ ಕುಸಿದು ಬಿದ್ದಿದ್ದಳು. ತನಗೆ ಆಶ್ರಯ ಕೊಟ್ಟ ಗೆಳತಿಗೆ ಹೇಗೆ ಮುಖ ತೋರಿಸಲಿ? ತನ್ನನ್ನು ಮಗಳ ಹಾಗೇ ನೋಡಿಕೊಂಡ ಅವಳತ್ತೆ ಮಾವನಿಗೆ ಏನೆಂದು ಹೇಳಲಿ? ತನಗಾಗಿ ಎಲ್ಲರನ್ನೂ ಎದುರು ಹಾಕಿಕೊಂಡ ತನ್ನ ಹೆತ್ತವ್ವನ ಪ್ರಶ್ನೆಗಳಿಗೆ ಏನೆಂದು ಉತ್ತರಿಸಲಿ? ಅತ್ತೆ ಹೊರೆಸಿದ್ದ ಅಪವಾದ ನಿಜವೇ ಆಯಿತಲ್ಲ ಎಂದು ನೋವಿನಿಂದ ಹೊರಳಾಡಿದಳು. ಇನ್ನು ಈ ಕ್ರೂರ ಸಮಾಜವನ್ನು ಎದುರಿಸುವ ಚೈತನ್ಯ ತನ್ನಲ್ಲಿ ಉಳಿದಿಲ್ಲ, ತನಗೆ ಸಾವೇ ಗತಿ ಎಂದು ನಿರ್ಧರಿಸಿದಳು. ಊಟ ಸೇರುತ್ತಿರಲಿಲ್ಲ, ಇನ್ನು ನಿದ್ರೆ ಗಾವುದ ದೂರವೇ ಉಳಿದಿತ್ತು. ಲತಾಳ ಸೂಕ್ಷ್ಮ ದೃಷ್ಟಿಗೆ ಗೆಳತಿಯಲ್ಲಾಗುತ್ತಿದ್ದ ಬದಲಾವಣೆ ಕಂಡೇ ಬಿಟ್ಟಿತು. ಶೀಲಾ ಹೇಳಿದ ಸತ್ಯ ಅವಳಿಗೆ ನುಂಗಲಾರದ ತುತ್ತಾಯಿತು. ಅವಳಿಗೆ ದಿಕ್ಕೇ ತೋಚದಂತಾಯಿತು. ಹಡೆದವ್ವನಂತಿದ್ದ ಅತ್ತೆಯ ಬಳಿ ಎಲ್ಲವನ್ನೂ ಹೇಳಿದಳು. ಅನುಭವದಿಂದ ಮಾಗಿ ಪಕ್ವವಾಗಿದ್ದ ಜೀವ ಅವಳತ್ತೆಯದು. ಶೀಲಾಳ ಹತ್ತಿರ ಕುಳಿತು, ಅವಳ ಕೈ ಹಿಡಿದು ಬುದ್ಧಿ ಹೇಳಿದರು, ಮಗಳೇ, ನಿನ್ನದು ಇನ್ನೂ ಚಿಕ್ಕ ವಯಸ್ಸು. ಹರಯ ಹುಚ್ಚು ಹೊಳೆಯಂತೆ ಅದಕ್ಕೆ ಕಡಿವಾಣ ಹಾಕದಿದ್ದರೆ ನಿನ್ನನ್ನೇ ಮುಳುಗಿಸಿ ಬಿಡುತ್ತೆ. ನೀ ಮೋಸ ಹೋದ ಈ ನೆನಪನ್ನು ಅಳಿಸಿ ಹಾಕಿಬಿಡು. ಪಶ್ಚಾತ್ತಾಪ ಎಂಬ ಅಗ್ನಿಯಲ್ಲಿ ಬೆಂದು ನೀನು ಪರಿಶುದ್ಧಳಾಗಿರುವೆ. ಈ ಗುಟ್ಟು ನಮ್ಮ ಮೂವರ ಮಧ್ಯೆಯೇ ಇರಲಿ. ಗಂಡಸರು ಯಾವ ರೀತಿ ಪ್ರತಿಕ್ರಿಯೆ ತೋರಿಸುವರೋ ಗೊತ್ತಿಲ್ಲ.. ತನಗೆ ಪರಿಚಯವಿದ್ದ ವೈದ್ಯರ ಬಳಿ ಕರೆದೊಯ್ದು ಗರ್ಭಪಾತ ಮಾಡಿಸಿದರು.
ಅವರ ಮುಂದಿನ ಹೆಜ್ಜೆ – ಶೀಲಾಳಿಗೊಂದು ಯೋಗ್ಯ ಹುಡುಗನನ್ನು ಹುಡುಕಿ ಮದುವೆ ಮಾಡುವುದು. ಮೊದಲು ಅವಳ ತಾಯಿಯ ಒಪ್ಪಿಗೆ ಪಡೆದರು. ಅವಳಿಗಿನ್ನೂ ಡೈವೋರ್ಸ್ ಆಗಿಲ್ಲ. ಇರಲಿ, ಶೀಲಾ ಪೂನಾದಲ್ಲಿ ಇರುವ ಸುದ್ಧಿ ಅವಳ ತಾಯಿಗಷ್ಟೇ ಗೊತ್ತು. ಎರಡು ವರ್ಷದಿಂದ ನಿತ್ಯ ಖಾನಾವಳಿಗೆ ಬರುತ್ತಿದ್ದವನೊಬ್ಬನ ಹೆಂಡತಿ ಹೆರಿಗೆಯ ಸಮಯದಲ್ಲಿ ತೀರಿ ಹೋಗಿದ್ದಳು. ಹುಡುಗ ಸಂಭಾವಿತ, ಮಿತಭಾಷಿ. ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅವನೊಂದಿಗೆ ಮಾತುಕಥೆ ನಡೆಸಿದರು ಲತಾಳ ಅತ್ತೆ. ಶೀಲಾಳ ಮೊದಲನೆಯ ಮದುವೆಯ ಸುದ್ಧಿಯನ್ನು ತಿಳಿಸಿದರು, ಆದರೆ ಅವಳು ಮೋಸ ಹೋಗಿ ಪೆಟ್ಟು ತಿಂದ ಘಟನೆಯನ್ನು ಹೇಳಲಿಲ್ಲ. ಹತ್ತಿರದಲ್ಲಿದ್ದ ದೇವಾಲಯದಲ್ಲಿ ಮದುವೆ ಮಾಡಿದರು. ಶೀಲಾಳ ಅಮ್ಮ ಮಗಳನ್ನು ದೂರದಿಂದಲೇ ಹರಸಿದಳು. ಶೀಲಾಳ ಹಳಿ ತಪ್ಪ್ಪಿದ್ದ ಬದುಕನ್ನು ಮತ್ತೆ ನೇರ ಮಾಡಿದಳೊಬ್ಬ ಮಹಾತಾಯಿ, ನೊಂದ ಹುಡುಗಿಗೆ ಹೊಸ ಬದುಕನ್ನು ಕಟ್ಟಿಕೊಟ್ಟಳು.
ಅಕ್ಕಾ, ಎರಡು ಬಾರಿ ಸಾಯಲು ಹೊರಟಿದ್ದ ಹುಡುಗಿ, ನಿಂತಳು ಗಟ್ಟಿಯಾಗಿ, ಎಲ್ಲರಿಗೂ ಸವಾಲೆಸೆಯುವಂತೆ. ಅಮ್ಮನ ನೆರವಿನಿಂದ ಓಡಿಹೋಗಿದ್ದ ಹದಿನೆಂಟರ ಪೋರಿ, ಇಪ್ಪತ್ತೈದು ವರ್ಷಗಳ ಬಳಿಕ ತನ್ನ ಗಂಡ ಮಕ್ಕಳ ಜೊತೆ ಧುತ್ತೆಂದು ಅಪ್ಪ ಅಮ್ಮನ ಮುಂದೆ ನಿಂತಿದ್ದಳು. ಪಕ್ಕಾ ಮಹಾರಾಷ್ಟ್ರದ ಉಡುಗೆ ತೊಡುಗೆ, ಮೂಗಿಗೊಂದು ದೊಡ್ಡ ನತ್ತು, ಮೈತುಂಬಾ ಚಿನ್ನ ಧರಿಸಿದ ಹೆಣ್ಣು. ಸಲೀಸಾಗಿ ಮರಾಠೀ ಮಾತನಾಡುತ್ತಿದ್ದಳು. ಹಾಸಿಗೆ ಹಿಡಿದಿದ್ದ ಅಪ್ಪ ಕಣ್ಣಲ್ಲೇ ಕ್ಷಮೆ ಕೋರಿದ. ಶೀಲಾ ಅಪ್ಪನ ಕೈ ಹಿಡಿದು ಕೇಳಿಕೊಂಡಳು, ಅಪ್ಪಾ, ನನ್ನ ಮಗಳನ್ನು ನಿನ್ನ ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳುವೆಯಾ? ಅಪ್ಪ ತಲೆಯಾಡಿಸಿದ. ಅಮ್ಮನ ಸಡಗರ ಹೇಳತೀರದು.
ಅಕ್ಕಾ, ಈಗ ಹೇಳು, ‘ಹೆಣ್ಣಿಗೆ ಹೆಣ್ಣೇ ಶತ್ರು’- ಎನ್ನುವ ಮಾತು ಅದೆಷ್ಟು ಸರಿ? ಮಗಳ ಬೆನ್ನಿಗೆ ನಿಂತ ಹಡೆದವ್ವ, ಆಶ್ರಯ ನೀಡಿದ ಗೆಳತಿ, ಹೆತ್ತ ಮಗಳಂತೆಯೇ ಕಂಡು ಅವಳಿಗೆ ದಾರಿ ತೋರಿದ ಲತಾಳ ಅತ್ತೆ..ಇಂತಹ ನೂರಾರು ಮಂದಿ ತೆರೆ ಮರೆಯಲ್ಲಿ ನಿಂತಿಹರು. ಅವರನ್ನು ಕಾಣುವ ಕಣ್ಣು ಬೇಕಷ್ಟೇ.
-ಡಾ.ಗಾಯತ್ರಿದೇವಿ ಸಜ್ಜನ್
ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಅಪವಾದವನ್ನು ಅಳಿಸಿ ಹಾಕುವಂತಾಗಿದೆ ಈ ಪ್ರಕರಣ ಅದನ್ನು ನಿರೂಪಿಸಿ ರುವ ಬಗೆ ಹೃದಯ ಕಲಕುವಂತಿದೆ ಅಭಿನಂದನೆಗಳು ಮೇಡಂ.
ತಮ್ಮ ಅಭಿಮಾನದ ನುಡಿಗಳಿಗೆ ವಂದನೆಗಳು
ಬಹಳ ಚಂದದ ಬರಹ.
ಧನ್ಯವಾದಗಳು
a beautiful story.
Thanks
ಇದು ಕತೆಯಲ್ಲಿ ಜೀವನ. ಅಭಿನಂದನೆ ಗಳು
ವಂದನೆಗಳು
ಅಪರೂಪಕ್ಕೆ ಸಿಗುವ ಇಂತಹ ಸಹಾಯ ಹಸ್ತಗಳು ಶೀಲಾಳಂತಹ ಹುಡುಗಿಯರ ಬಾಳನ್ನು ಸರಿ ಪಡಿಸುವಲ್ಲಿ, ಮುಗ್ಗರಿಸಿದಾಗ ಮೇಲೆತ್ತುವಲ್ಲಿ ನೆರವಾಗಿರುವುದು ನಿಜಕ್ಕೂ ಶ್ಲಾಘನೀಯ. ಸೊಗಸಾದ ನಿರೂಪಣೆ ಮೇಡಂ.
ತಮ್ಮ ಪ್ರೋತ್ಸಾಹದ ನುಡಿಗಳಿಗೆ ವಂದನೆಗಳು