ನಾಲಿಗೆ ತುಂಬಾ ನೇರಳೆ ಬಣ್ಣ…

Share Button

ಕಳೆದ ಭಾನುವಾರ ಒಂದಷ್ಟು ಹಣ್ಣು ಕೊಳ್ಳೋಣ ಅಂತ ಮಾಮೂಲಿ ಹೋಗುವ ಹಣ್ಣಂಗಡಿಗೆ ಹೋಗಿದ್ದೆ. ಮಾವಿನ ಹಣ್ಣಿನ ಕಾಲದಲ್ಲಿ ಎಲ್ಲಾ ತರಹದ ಮಾವು ತಂದು ರುಚಿ ನೋಡದಿದ್ದರೆ ಹೇಗೆ! ಮಿಡಿಗಾಯಿ ಸಿಗಲು ಶುರುವಾದಾಗ ಮಾವು ತಿನ್ನಲು ಪ್ರಾರಂಭಿಸುವುದು ನಿಲ್ಲೋದೆ, ಇನ್ನು ಕೊಳ್ಳಲು ಸಾಧ್ಯವೇ ಇಲ್ಲ ಅನ್ನೋ ತರಹದ, ಸುಕ್ಕು ಗಟ್ಟಿದ ಸಿಪ್ಪೆಯ ಮಾವಿನಹಣ್ಣುಗಳು ಮಾತ್ರ ಅಂಗಡಿಯಲ್ಲಿ ಸಿಗುವ ಹಾಗಾದಾಗ.ಅವತ್ತು ಸೀಸನ್ ಕೊನೆ ಕೊನೆಗೆ ಬರುವ ನೀಲಂ ತಳಿಯ ಹಣ್ಣು ಕೊಳ್ಳುವಾಗ ಅಲ್ಲೇ ಒಂದು ಅಗಲವಾದ ಬೆತ್ತದ ಬುಟ್ಟಿಯಲ್ಲಿ ತುಂಬಿಸಿಟ್ಟಿದ್ದ ದುಂಡು ದುಂಡನೆ ರಸಭರಿತ,ದಟ್ಟ ಬಣ್ಣದ ನೇರಳೆ ಹಣ್ಣುಗಳು ಕಣ್ಣಿಗೆ ಬಿದ್ದವು.

“ನೇರಳೆ ಹಣ್ಣು ತಿಂದು ಯಾವ ಕಾಲವಾಯಿತು” ಅನ್ನಿಸಿ,ಕೊಳ್ಳೋಣ ಎಂದುಕೊಂಡು ದರ ಕೇಳಿದರೆ,”ಕೆಜಿ ಗೆ ಇನ್ನೂರೈವತ್ತು” ಅನ್ನೋ ಉತ್ತರ ಬಂತು.”ಅಯ್ಯೋ ದೇವ್ರೆ,ನೇರಳೆ ಹಣ್ಣು ಕೂಡ ಇಷ್ಟೊಂದು ದುಡ್ಡು ಕೊಟ್ಟು ಕೊಂಡು ತಿನ್ನೋ ಕಾಲ ಬಂತಲ್ಲಪ್ಪೋ,” ಅನ್ನಿಸಿ, ನನ್ನ ಕಂಜೂಸು
ಬುದ್ಧಿ “ರೇಟ್ ಜಾಸ್ತಿ ಆಯಿತು ತೋಗೊಬೇಡ” ಅಂತ ಬೇರೆ ಹೇಳಿದಾಗ ಸುಮ್ಮನೆ ಮಾವು ಕೊಂಡು ಮನೆಗೆ ಮರಳಿದೆ.

ಈಗಲೇ ನೇರಳೆ ಹಣ್ಣು ಈ ತರಹದ ಮಾರುವ ಹಣ್ಣಾಗಿ ಬಿಟ್ಟಿರೋದು. ನೇರಳೆ ಹಣ್ಣಿಗಿಂತ ಅದರ ಬೀಜಕ್ಕಿರೋ ಔಷಧೀಯ ಗುಣಗಳು,ಅದರಲ್ಲೂ ಸಕ್ಕರೆ ಕಾಯಿಲೆಯವರಿಗೆ ಬೀಜದ ಪುಡಿ ಒಳ್ಳೆಯ ಮದ್ದು ಅಂತ ಗೊತ್ತಾದಾಗಿನಿಂದ ನೇರಳೆ ಹಣ್ಣಿಗೂ ಮಾರುಕಟ್ಟೆ ಮೌಲ್ಯ ಬಂದು ಹೋಗಿದೆ.ಇದನ್ನ ಕೂಡ
ವಾಣಿಜ್ಯ ಬೆಳೆಯಾಗಿ ಬೆಳೆಯುವವರು ಹೆಚ್ಚಾಗುತ್ತಿದ್ದಾರೆ.

ನಾವು ಚಿಕ್ಕವರಿದ್ದಾಗ ನೇರಳೆ ಹಣ್ಣು ಅಂದ್ರೆ ರಸ್ತೆ ಬದಿಯಲ್ಲಿ ಇರೋ ಮರದಲ್ಲಿ ಸಿಗೋ ಒಂದು ಹಣ್ಣು ಅಷ್ಟೇ.ಆಗೆಲ್ಲ ಶಾಲೆಗೆ ಹೋಗೋ ರಸ್ತೆ ಬದಿಯ ಮರಗಳಲ್ಲಿ ನೇರಳೆ ಮರ ಒಂದು ಸಾಮಾನ್ಯವಾಗಿ ಕಂಡು ಬರುತ್ತಿದ್ದ ಮರ. ಆಗ ನಾವಿದ್ದ ಭದ್ರಾವತಿ ಒಂದು ಕೈಗಾರಿಕಾ ನಗರವಾದ್ದರಿಂದ ಎಲ್ಲೆಲ್ಲೂ ಕ್ವಾರ್ಟಸ್ ಗಳೇ.ಆಗಿನ ಕಾಲದ ಕ್ವಾರ್ಟಸ್ ಗಳೆಂದರೆ ಮನೆ ಎಷ್ಟೇ ಚಿಕ್ಕದಿದ್ದರೂ ಕೈತೋಟ,ಹಿತ್ತಲು ಮಾತ್ರ ಪ್ರತೀ ಮನೆಗೂ ಇದ್ದೇ ಇರುತ್ತಿದ್ದವು. ಆ ಹಿತ್ತಿಲು ತೋಟಗಳಲ್ಲಿ ನೇರಳೆ,ಮಾವು,ಹಲಸು,ಸೀಬೆ ಮರಗಳು ಬಹುತೇಕ ಎಲ್ಲಾ ಮನೆಗಳಲ್ಲಿ ಇದ್ದವು.ಅದು ಸಾಲದು ಅಂತ ರಸ್ತೆ ಬದಿಯಲ್ಲಿನ ಸಾಲು ಸಾಲು ಮರಗಳಲ್ಲಿ ಕೂಡ ಹೆಚ್ಚು ಕಡಿಮೆ ಹಣ್ಣಿನ ಮರಗಳೇ ಜಾಸ್ತಿ. ನೇರಳೆ ಮರಕ್ಕೇನು ಬರ, ಮಸ್ತಾಗಿ ಇರುತ್ತಿದ್ದೋ.

ಹೈಸ್ಕೂಲ್ ಗೆ ಅಂತ ಕಾಗದನಗರ ಪ್ರೌಢಶಾಲೆ ಸೇರಿದಾಗ,ನಾವಿದ್ದ ಹುಡ್ಕೋ ಕಾಲನಿ ಮನೆಯಿಂದ ,ಕಾಗದನಗರಕ್ಕೆ ಸುಮಾರು ಎರಡರಿಂದ ಮೂರು ಮೈಲಿ ದೂರ ನಡೆದು ಹೋಗಬೇಕಿತ್ತು .ಹೆಚ್ಚು ಕಡಿಮೆ ಎಲ್ಲಾ ಮಕ್ಕಳು ನಡೆದೋ ಇಲ್ಲವೇ ಸೈಕಲ್ ನಲ್ಲಿ ಶಾಲೆಗೆ ಹೋಗುತ್ತಿದ್ದರು. ಸ್ಕೂಲ್ ವ್ಯಾನ್ ಗೀನ್ ಅಂತ ಏನೂ ಇರ್ತಾ ಇರ್ಲಿಲ್ಲ .ಕಾನ್ವೆಂಟ್ ಗೆ ಹೋಗೊ ಮಕ್ಕಳು ಆಟೋಗಳಲ್ಲೊ ಇಲ್ಲವೇ ಜಟಕಾಗಾಡಿ ಹತ್ತಿಯೋ ಹೋಗುತ್ತಿದ್ದರು.

ಆದರೆ ನಡೆದು ಹೋಗುವ ಮಜವೇ ಬೇರೆ.ಸರಿಯಾಗಿ ನಡೆದರೆ ಇಪ್ಪತ್ತು ನಿಮಿಷವಾಗುತ್ತಿದ್ದ ಹಾದಿಯನ್ನು ನಾವು ಗೆಳತಿಯರು ಸೇರಿ ಒಂದು ಗಂಟೆ ಮಾಡುತ್ತಿದ್ದೊ. ಬೆಳಿಗ್ಗೆ ಶಾಲೆಯ ಬೆಲ್ ಒಂಬತ್ತೂವರೆಗಿದ್ದರೂ ನಾವು ಎಂಟುಕಾಲಿಗೆಲ್ಲ ಮನೆ ಬಿಡೋದೇ. ಅಮ್ಮಂದಿರು ಬೈದರೂ ಕೇಳ್ತಾ ಇರ್ಲಿಲ್ಲ. ದಾರಿಯುದ್ದಕ್ಕೂ ಸಿಗೋ ಮನೆಗಳಲ್ಲಿನ ಹೂಗಳ ನೋಡಿಕೊಂಡು, ದಾರಿಯಲ್ಲಿ ಕೂಡಿಕೊಳ್ಳುವ ಗೆಳತಿಯರ ಕಾಯ್ದು ಹೊರಡಿಸಿಕೊಂಡು ,ದಾರೀಲಿ ಸಿಗೋ ಮರಗಳ ಹೂ, ಇಲ್ಲ ಹಣ್ಣು ಆಯ್ದುಕೊಂಡು, ಮಳೆಗಾಲದಲ್ಲಿ ರಸ್ತೆಯಲ್ಲಿ ನಿಂತಿರುತ್ತಿದ್ದ ನೀರಿನಲ್ಲಿ ಆಕಾಶ ನೋಡಿ “ಎಷ್ಟೊಂದು ಆಳನಪ್ಪ” ಅಂದುಕೊಂಡು , ಕಿಚ ಪಿಚ ನೀರು ಹಾರಿಸಿಕೊಂಡು ಹೋಗೋವಷ್ಟರಲ್ಲಿ ಅಷ್ಟೋತ್ತಾಗುತ್ತಿತ್ತಪ್ಪ. ನಾವೇನ್ ಮಾಡೋದು ಹೇಳಿ.

ಅದರಲ್ಲೂ ನೇರಳೆ ಹಣ್ಣಿನ ಕಾಲದಲ್ಲಿ ದಾರಿ ಇನ್ನೂ ಸಾಗುತ್ತನೇ ಇರಲಿಲ್ಲ.ಆಗ ಹೋಗೋ ದಾರಿಯಲ್ಲಿ ಸಿಗುವ ಜೆಪಿಎಸ್ ಕಾಲೋನಿಯಲ್ಲಿದ್ದ ಎಷ್ಟೊಂದು ನೇರಳೆ ಮರಗಳಿಗೆ ಹಣ್ಣಿನ ಕಾಲದಲ್ಲಿ ಯಾರಾದರೂ ಒಬ್ಬರಿಬ್ಬರು ಮರಕ್ಕೆ ಹತ್ತಿಯೋ, ಕಲ್ಲು ಇಲ್ಲವೇ ಉದ್ದನೆಯ ಕೋಲಿನಲ್ಲಿ  ಹೊಡೆಯುತ್ತಲೋ ಹಣ್ಣು ಉದುರಿಸುತ್ತಿರುತ್ತಿದ್ದರು. ಹಣ್ಣಿಗೆ ಮುತ್ತಿಗೆ ಹಾಕೋದರಲ್ಲಿ ಮಕ್ಕಳು ಮಾತ್ರ ಅಲ್ಲ, ಮರದ ಮೇಲಿನ ಮಂಗಗಳು,ಅಳಿಲು ,ಪಕ್ಷಿಗಳು ಎಲ್ಲವಕ್ಕೂ ಹಣ್ಣು ಬೇಕು. ಮರದ ಬುಡದಲ್ಲಿನ ಕಟ್ಟಿರುವೆಗಳ ಕಾಟ ಬೇರೆ. ಹಣ್ಣು ಆಯುವಾಗ ಇರುವೆ ಕಚ್ಚಿ ಕೈ ಕಾಲು ಉರಿದರೂ ನಮಗೆ ಅದರ ಪರಿವೆಯೇ ಇರುತ್ತಿರಲಿಲ್ಲ.

ಒಮ್ಮೆ ನನ್ನ ಗೆಳತಿ ನೇತ್ರಳ ತಮ್ಮಸೀನನನ್ನು ನಾವೆಲ್ಲ ಪೂಸಿ ಹೊಡೆದು,”ನಿಂಗೇ ಜಾಸ್ತಿ ಹಣ್ಣು ಕೊಡ್ತೀವಿ ಕಣೋ,”ಅಂತ ಹೇಳಿ ಮರ ಹತ್ತಿಸಿದೆವು.ಅವನು ಹತ್ತಿ ಬೇಕಾದಷ್ಟು ಹಣ್ಣು ಉದುರಿಸಿ, ತನ್ನ ಅಂಗಿ,ಚಡ್ಡಿ ಜೋಬುಗಳಿಗೆ ರಡಕ್ಕು ಬಿರಿಯುವಂತೆ ತುಂಬಿಸಿಕೊಂಡು ಕೆಳಕ್ಕಿಳಿಯುತ್ತಿದ್ದ. ಅವನಿನ್ನೂ ನೆಲ ತಲುಪಿಲ್ಲ, ತೊಗೊ ಒಂದು ಮಂಗ ಮೇಲಿನಿಂದ ಹಾರಿ ಅವನ ಹೆಗಲ ಮೇಲೆ ಕುಳಿತು ಅವನ ಅಂಗಿ ಜೋಬಿನಿಂದ ಹಣ್ಣು ಕಿತ್ತು ಕೊಳ್ಳಲು ಜಗ್ಗತೊಡಗಿತು.
ನಾವೆಲ್ಲಾ ಕಿಟ್ಟನೆ ಕಿರುಚಿಕೊಂಡು, ಸಿಕ್ಕ ಸಿಕ್ಕ ಕಲ್ಲು ಕೋಲುಗಳಿಂದ ಮಂಗಕ್ಕೆ ಹೊಡೆಯಲು ಹೋಗಿ ಒಂದೆರಡು ಏಟು ಸೀನಂಗೂ ಬಿದ್ದವು. ನಮ್ಮ ಬೊಬ್ಬೆಗೆ ಮಂಗವೇನೋ ಓಡಿಹೋಯಿತು.ಆದರೆ ಸೀನನ ಮೈ ಮುಖ ಎಲ್ಲಾ ಪರಚಿ ಹೋಗಿ ರಕ್ತ ಬರಲು ಶುರುವಾಯಿತು.ಹೇಗೋ ಅವನ ಮುಖವರೆಸಿ, ಸಮಾಧಾನಿಸಿ ಶಾಲೆಗೆ ಕರೆದುಕೊಂಡು ಹೋದೆವು.ಸಂಜೆ ಮನೆ ಸೇರುವಷ್ಟರಲ್ಲಿ ಆತನ ಮುಖ ಊದಿಕೊಂಡು, ಅವರಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ರೇಬಿಸ್ ನ ಹದಿನಾಲ್ಕು ಇಂಜಕ್ಷನ್ ಚುಚ್ಚಿಸಿಕೊಳ್ಳಬೇಕಾಗಿ ಬಂತು. ಆಮೇಲೆ ಸೀನ ನಮ್ಮೊಟ್ಟಿಗೆ ಬರೋದೇ ಬಿಟ್ಟು ಬಿಟ್ಟ.

ಆಗ ಒಂದೆರಡು ದಿನ ನೇರಳೆ ಮರದ ಸುದ್ದಿಗೆ ಹೋಗದೆ ಇದ್ದರೂ ಮತ್ತೆ ಆಸೆ ತಾಳಲಾರದೆ ಕದ್ದು ಮುಚ್ಚಿ ಹಣ್ಣು ಹೆರಕಲು ನಾವೆಲ್ಲರು ಹೋಗಿದ್ದೇ. ನಾನು ನನ್ನ ಗೆಳತಿಯರು ಮರದ ಕೆಳಗೆ ಉದುರಿದ್ದ ಹಣ್ಣುಗಳಲ್ಲಿ ಚೆನ್ನಾಗಿರೋದನ್ನ ಆರಿಸಿಕೊಂಡು, ಹಂಗೇ ನಮ್ಮ ಮಂದವಾದ ಹತ್ತಿ ಬಟ್ಟೆಯ , ನೀಲಿ ಉದ್ದ ಲಂಗ ಯೂನಿಫಾರ್ಮ್ ಗೆ ಉಜ್ಜಿ ವರೆಸಿಕೊಳ್ಳುತ್ತ ದಾರಿಯುದ್ದಕ್ಕೂ ತಿನ್ನುತ್ತಾ ಹೋಗುತ್ತಿದ್ದೋ. ತಿಂದಾದ ಮೇಲೆ ಯಾರ ನಾಲಿಗೆ ಹೆಚ್ಚು ನೀಲಿಯಾಗಿದೆ ಅಂತ ನಾಲಿಗೆ ಹೊರಚಾಚಿ ನೋಡಿಕೊಳ್ಳೋದು. ನಮ್ಮ ನಮ್ಮ ನಾಲಿಗೆ ನಮಗೆ ಪೂರ್ತಿ ಏನೂ ಕಾಣೋದಿಲ್ಲವಷ್ಟೇ. ಇಷ್ಟುದ್ದ ನಾಲಿಗೆ ಚಾಚಿ ಕಣ್ಣು ಗುಡ್ಡೆ ಎಲ್ಲಾ ಮೂಗಿನ ಪಕ್ಕಕ್ಕೆ ತಂದು ನೋಡಿ ಕೊಳ್ಳೋದು.ಸಂಜೆ ಮನೆಗೆ ಹಿಂದಿರುಗಿದ ಮೇಲೆ ಕನ್ನಡಿ ಎದುರು ನಿಂತು ನಾಲಿಗೆ ಚಾಚಿ “ಇನ್ನೂ ಬಣ್ಣ ಇದೆಯ” ಎಂದು ನೋಡಿ ಕೊಳ್ಳೋದು ಒಂದು ಆಟವೇ ಆಗಿಬಿಟ್ಟಿತ್ತು.

ಕೆಲವರು ಅಕ್ಕಪಕ್ಕದ ಮನೆಯವರ ಹಿತ್ತಲ ಮರಗಳಲ್ಲಿ ಹಣ್ಣಾದಾಗ ಕುಯ್ಯಿಸಿ ನೆರೆ ಹೊರೆಯವರಿಗೆಲ್ಲಾ ಹಂಚಿಬಿಡುತ್ತಿದ್ದರು.ಆಗೆಲ್ಲ ಉಪ್ಪು ನೀರು ಹಾಕಿ ಚೆನ್ನಾಗಿ ತೊಳೆದು ಬೊಗಸೆಗಟ್ಟಲೇ ಹಣ್ಣು ತಿಂದದ್ದುಂಟು. ಅದೂ ಸಾಲದು ಅಂತ ಶಾಲೆ ಎದುರು ಬೇಲದ ಹಣ್ಣು, ಸೀಬೇಹಣ್ಣು, ಕಂಬರ್ಕಟ್, ಹಾಲ್ಕೋವ, ಚಾಕ್ಲೇಟ್ ಅಂತೆಲ್ಲ ಗುಡ್ಡೆ ಹಾಕ್ಕೊಂಡು ಮಾರ್ತ ಇದ್ದ ಅಜ್ಜಿಯರ ಹತ್ರನೂ ನೇರಳೆ ಹಣ್ಣು ಹತ್ತುಪೈಸೆಗೆ ಹತ್ತರಂತೆ ತೊಗೊಂಡು ಮುಕ್ಕುತ್ತಿದ್ದೋ. ಮನೇಲಿ ಗೊತ್ತಾದರೆ ಬೈಗುಳ ಗ್ಯಾರಂಟೀ. “ನೇರಳೆ ಹಣ್ಣು ಯಾರಾದ್ರೂ ದುಡ್ಡು ಕೊಟ್ಟು ತಗೊಳ್ತಾರಾ,ನಿಮಗೆಲ್ಲ ದುಡ್ಡು ಹೆಚ್ಚಾದಾಟ,” ಅಂತ ಅಮ್ಮ ಬೈದರೂ
ಕೇಳ್ತಾ ಇರಲಿಲ್ಲ.

ದೊಡ್ಡವರಾಗಿ ಕಾಲೇಜ್ ಗಿಲೇಜ್ ಸೇರಿ ಬಸ್ ನಲ್ಲಿ ಓಡಾಡೋ ಹಾಗೆ ಆದಾಗ ನೇರಳೆ ಮರಕ್ಕೆ ಕಲ್ಲು ಹೊಡೆಯೋದು ನಿಂತೇ ಹೋಯಿತು.ಆದರೂ ಯಾರಾದರೂ ಮರ ಇರೋರು ತಂದು ಕೊಡುತ್ತಾ, ಪ್ರತೀವರ್ಷದ ಸೀಸನ್ ನಲ್ಲಿ ತಿನ್ನಲು ಸಾಕಷ್ಟು ಸಿಕ್ಕೇ ಸಿಗುತ್ತಿತ್ತು.ಮಾರುಕಟ್ಟೆಯಲ್ಲಿ ಸಿಗುವ ದೊಡ್ಡ ಗಾತ್ರದ ಹಣ್ಣುಗಳು ತೋಟಗಳಲ್ಲಿ ಬೆಳೆದ ಹೈಬ್ರಿಡ್ ಜಾತಿಗಳದ್ದು.ರಸ್ತೆ ಬದಿಯ ನಾಡು ತಳಿಯ ಮರಗಳ ಹಣ್ಣು ಗಾತ್ರದಲ್ಲಿ ಚಿಕ್ಕದು ಮತ್ತು ತಿನ್ನಲು ಸ್ವಲ್ಪವೇ ಸ್ವಲ್ಪ ಒಗರು. ಆದರೆ ಹೈಬ್ರಿಡ್ ಆಗಲಿ ನಾಟಿ ಆಗಲಿ ನಾಲಿಗೆಗೆ ಹತ್ತುವ ಬಣ್ಣ ಮಾತ್ರ ಒಂದೇ.

ಕಾಲ ಕಳೆದಂತೆ, ನಾವೆಲ್ಲ ಬೆಳೆದಂತೆ,ವಾಸಿಸುವ ಊರುಗಳು ಬದಲಾದವು. ಉದ್ಯೋಗ ಹಿಡಿದು ಓಡಾಡುವಾಗ,ಕಾಲ್ನಡಿಗೆಯಲ್ಲಿ ಹೋಗಿ ಬರುವಷ್ಟು ಅನುಕೂಲದ ಕೆಲಸ ಸಿಗಲು ಸಾಧ್ಯವೇ?.ಹಾಗಾಗಿ ಎಲ್ಲರೂ ವಾಹನಧಾರಿಗಳಾಗಿ ರಸ್ತೆ ಬದಿಯ ನೇರಳೆ ಮರಕ್ಕೆ ಕಲ್ಲು ಹೊಡೆಯುವ
ಅವಕಾಶವಾಗಲಿ, ಪುರುಸೊತ್ತಾಗಲಿ ಯಾರಿಗಿದೆ?.ಎಲ್ಲದಕ್ಕಿಂತ ಹೆಚ್ಚಾಗಿ ರಸ್ತೆ ಬದಿಯಲ್ಲಿ ,ಹೊಸ ಬಡಾವಣೆಗಳ ಪಾರ್ಕ್ ಗಳಲ್ಲಿ ಬೆಳೆಸುವ ಮರಗಳು ಹೆಚ್ಚಾಗಿ ವಿದೇಶಿ ತಳಿಗಳ,ಬಣ್ಣ ಬಣ್ಣದ ಹೂಗಳ ,ಒಂದೆರಡು ವರ್ಷಗಳಲ್ಲೇ ಅಷ್ಟೆತ್ತರ ಬೆಳೆದು ನಿಲ್ಲುವ ಮರಗಳಾಗಿ ನೇರಳೆ ಮರಗಳು ಅಪರೂಪವೇ. ಸಾಮಾಜಿಕ ಅರಣ್ಯೀಕರಣ ಯೋಜನೆಯಲ್ಲಿ ಹಿಂಡು ಹಿಂಡಾಗಿ ಅಕೇಶಿಯಾ ಮರಗಳ ಬೆಳೆಯುವುದರಬದಲು ಒಂದಷ್ಟು ಕಾಡು ಹಣ್ಣುಗಳ ಮರಗಳನ್ನಾದರೂ ಬೆಳೆಸಬಾರದ..

ನಮ್ಮ ಶಾಲೆಯ ಮೈದಾನದ ಅಂಚಿನಲ್ಲಿದ್ದ ಒಂದು ಚಿಕ್ಕ ನೇರಳೆ ಗಿಡವನ್ನ ,ಯಾವುದೇ ದನ ಮೇಯದ ರೀತಿ ಒಂದು ಹಳೆಯ ಟಾರ್ ಡ್ರಮ್ ಹಾಕಿ ಕಾಪಾಡಿದ್ದಕ್ಕೆ ಅದು ಈಗ ಒಂದಾಳುದ್ದಕ್ಕೆ ಬೆಳೆದು ನಿಂತಿದೆ.ಅದರ ಹಣ್ಣಿಗೆ ಕಲ್ಲು ಹೊಡೆಯುವಷ್ಟರಲ್ಲಿ ನಾನು ರಿಟೈರ್ ಆಗಬಹುದೇನೋ.ಈಗ ನಾವು
ವಾಸಿಸುವ ಬಡಾವಣೆಯ ರಸ್ತೆಗಳ ಅಂಚಿನಲ್ಲಿನ ಸಾಲು ಮರಗಳಲ್ಲಿ ನೇರಳೆ ಮರಗಳೂ ಸಾಕಷ್ಟಿವೆ.

ದಿನಾ ಸಂಜೆ ನನ್ನ ವಾಕಿಂಗ್ ಗೆಳತಿ ಹರಿಣಿ ಯವರೊಂದಿಗೆ ಹೋಗುವಾಗ ರಸ್ತೆ ಅಕ್ಕಪಕ್ಕದ ಮರಗಿಡ ನೋಡುತ್ತ,ಮುಟ್ಟುತ್ತಾ, ಹೂ ಆರಿಸುತ್ತ, ಹೆಸರು ಗೊತ್ತಿರದ ಮರ ಸಿಕ್ಕಿದರೆ ಯಾರನ್ನಾದರೂ ಕೇಳುತ್ತಾ ಸಾಗುವುದೇ ಒಂದು ಸುಖ. ಒಂದು ದಿನ “ಈ ದಿನ ಬೇರೆ ದಾರಿಯಲ್ಲಿ ಹೋಗೋಣ,ದಿನಾ ಹೋದ ದಾರಿಲೇ ಹೋಗೋಕೆ ಬೇಜಾರು,” ಅಂತ ಹರಿಣಿ  ಹೇಳಿದರು.”ಹಾಗೆ ಆಗಲಿ” ಎಂದು ಮಾಮೂಲು ರಸ್ತೆ ಬಿಟ್ಟು ಬೇರೊಂದು ಕಡೆಗೆ ಹೊರಳಿಕೊಂಡೆವು. ಆ
ರಸ್ತೆಯಲ್ಲಿ ಇಕ್ಕೆಲಗಳಲ್ಲಿ ಗಿಡಮರಗಳು ಸ್ವಲ್ಪ ಜಾಸ್ತಿಯೇ ಇದ್ದವು.”ಬಂದ ದಾರಿಗೆ ಮೋಸವಿಲ್ಲ” ಎಂದುಕೊಂಡು ಖುಷಿಯಾಗಿ ಮುನ್ನಡೆದೆವು.

ಅಲ್ಲೊಂದು ರಸ್ತೆಯಲ್ಲಿ ದಾರಿಯುದ್ದಕ್ಕೂ ಬರಿ ನೇರಳೆ ಮರಗಳೇ. ಎಲ್ಲಾ ಮರಗಳು ಹಣ್ಣು ಕಚ್ಚದೆ ಅಲ್ಲೊಂದು ಇಲ್ಲೊಂದು ಮಾತ್ರ ಹಣ್ಣು ಹೊತ್ತು ನಿಂತಿದ್ದವು. ಮರದ  ತುಂಬಾ ಹಸಿರೆಲೆಗಳ ಮಧ್ಯೆ ಗೊಂಚಲು ಗೊಂಚಲಾಗಿ ಕಂಗೊಳಿಸೋ ಈ ನೇರಳೆ ಚೆಲುವೆಯನ್ನು ನೋಡೋದೇ ಒಂದು ಸಂಭ್ರಮ.
ಹರಿಣಿಯಂತೂ,”ಹೇಗಾದರೂ ಮಾಡಿ ಕೀಳುವ “ಅಂದು ಯಾವುದಾದ್ರೂ ಉದ್ದನೆಯ ಕೋಲು ಸಿಗುವುದೇ ಎಂದು ಹುಡುಕಿದರೆ ಏನೂ ಸಿಗಲಿಲ್ಲ. ಆದರೆ ಮರದ ಪಕ್ಕ ಒಂದು ಕಾರು ನಿಂತಿತ್ತು.ಅದರ ಮೇಲೆ ಹತ್ತಿ ಕೀಳುವ ಅಂತೇನೋ ಅನಿಸಿತು ಆದ್ರೆ ‘ಕಾರ್ ಓನರ್ ನೋಡಿದ್ರೆ ಜಗಳ ಗ್ಯಾರಂಟೀ ‘ಅನ್ನಿಸಿ
ತೆಪ್ಪಗಾದೆ.

“ಚಿಕ್ಕವಳಿದ್ದಾಗ ಎಷ್ಟೊಂದು ಮರ ಹತ್ತುತ್ತಿದ್ದೆ,ಈಗ ಎಡಗೈ ಫ್ರಾಕ್ಚರ್ ಆದ ಮೇಲೆ ಗ್ರಿಪ್ ಸಿಗೋಲ್ಲ, ನನ್ನ ಮಕ್ಕಳಿಬ್ಬರಿಗೂ ಮರ ಹತ್ತೋಕೆ ಬರೋಲ್ಲ,” ಅಂತ ಹರಿಣಿ ಕೊರಗಿದರು. ಇಬ್ಬರೂ ಕತ್ತು ನೋಯೊವಷ್ಟು ಹೊತ್ತು ಹಣ್ಣುಗಳ ನೋಡಿ,ಇನ್ನೇನು ದಾರಿ ಕಾಣದೆ ಮುಂದೆ ಹೋದೆವು. ಮತ್ತೆ ಮಾರನೇ ದಿನ ಹರಿಣಿ “ಬನ್ನಿ,ನಿನ್ನೆ ಹೋದ ದಾರೀಲಿ ಹೋಗೋಣ,”ಅಂತ ವಾಕ್ ಗೆ ಕರೆದುಕೊಂಡು ಹೋದರು. ಹೋಗುತ್ತಾ ನೋಡಿದರೆ, ಅಲ್ಲೊಂದು ನೇರಳೆ ಮರದ ಕೆಳಗೆ ಹೆಂಗಸೊಬ್ಬಳು ತನ್ನ ಸೀರೆಯ ಸೆರಗನ್ನು ಅಗಲವಾಗಿ ಚಾಚಿ ಮೇಲಿಂದ ಬೀಳುತ್ತಿದ್ದ ಹಣ್ಣುಗಳ ಆತುಕೊಳ್ಳುತ್ತಿದ್ದಳು.

ಕುತೂಹಲದಿಂದ ಹತ್ತಿರ ಹೋಗಿ ನೋಡಿದರೆ ಕಡುಬಣ್ಣದ ಮಾಗಿದ ನೇರಳೆ ಹಣ್ಣುಗಳು. ಮರ ಹತ್ತಿ ಹಣ್ಣು ಉದುರಿಸುತ್ತಿದ್ದವ ಅವಳ ಮಗನಂತೆ.”ಅದೇ ನಮ್ಮ ಶೆಡ್ಡು ಕಣಕ್ಕ”ಅಂತ ಹತ್ತಿರದಲ್ಲೇ ಕಟ್ಟುತ್ತಿದ್ದ ಮನೆಯೊಂದರ ಎದುರಿನ ಶೆಡ್ಡು ತೋರಿಸಿದಳು.”ಅಮ್ಮ,ಹಣ್ಣೆಲ್ಲಾ ಖಾಲಿಯಾದೋ,ಇಳಿಲಾ”ಎಂದು ಮಗ ಕೇಳಿದ.”ಹೂಂ ಕನಂತೆ, ಬಪ್ಪಾ,ಇನ್ನ ನಾಲ್ಕೈದು ದಿನ ಬುಟ್ಟು ಬಂದ್ರಾಯ್ತು”ಎಂದು ಅಮ್ಮ ಹೇಳಿದಳು. ಮಗ ಮರವಿಳಿದು ಬಂದ.ನಾವು ಸರಿ ಹೊರಡುವ ಎಂದು ಹೆಜ್ಜೆ ಕೀಳುವುದರಲ್ಲಿ ಇದ್ದೋ.ಆಗ ಆಕೆ “ಅಕ್ಕ ಹಿಡಿರಿ” ಅಂತ ಒಂದೊಂದು ಮುಷ್ಟಿ ಹಣ್ಣು ತೆಗೆದು ನಮ್ಮಿಬ್ಬರಿಗೂ ಕೊಟ್ಟಳು.ತಿನ್ನುವಾಗ ಬಾಯೆಲ್ಲ ನೇರಳೆ ನೇರಳೆ,ಮನಸ್ಸೆಲ್ಲ ಒದ್ದೆ ಒದ್ದೆ..

-ಸಮತಾ ಆರ್.

15 Responses

  1. Malavika.R says:

    Samathaji suuper

  2. Anonymous says:

    ನೇರಳೆಯಂತೆ ನೆನಪಿನ ಬುತ್ತಿಯಲ್ಲಿ ಎಷ್ಟೆಲ್ಲಾ ಬಣ್ಣದ ಹಣ್ಣು….ಅವುಗಳ ಕನಸು…..

  3. ನಾಗರತ್ನ ಬಿ. ಅರ್. says:

    ನಾಲಿಗೆ ತುಂಬಾ ನೇರಳೇ ಬಣ್ಣ ಸೊಗಸಾದ ಲೇಖನ.ಇದನ್ನು ಓದುತ್ತಾ ಹೋದಂತೆ ನಮ್ಮ ಬಾಲ್ಯದ ನೆನಪುಗಳು ಮರುಕಳಿಸಿ ಮೆಲುಕು ಹಾಕುವಂತಾಯಿತು.ನೇರಳೇ ಹಾದಿಯಲ್ಲಿ ಸಿಕ್ಕ ಮಾವಿನ ಕಾಯಿ ಸೀಬೆ ಬೋರೇಹಣ್ಣು ಕೊಬ್ಬರಿ ಕಾಯಿ ಕಿರನೆಲ್ಲಿಕಾಯಿ ಒಂದೇ ಎರಡೇ ಹುಣಸೇಕಾಯಿ ಒಂದೇ ಎರಡೇ ಉಪ್ಪು ಖಾರ ಹಾಕಿ ಚೆನ್ನಾಗಿ ತಿಂದು ಊಟ ಮಾಡುವಾಗ ಅಮ್ಮನಿಂದ ಬೈಗುಳದ ಸುರಿಮಳೆ.ತಿಂದದಕ್ಕಿಂತ ಹೆಚ್ಚಾಗಿ ಮರಹತ್ತಿ ಕೀಳುವ ಸಂಗತಿ ಕೇಳಿ ಬಿಡಿಸಲಾರದ ಷ್ಟು ಕೋಪ..
    ಗಂಡುಬೀರಿ ಎಂಬ ಬಿರುದು ವಾಹ್ ಅವೆಲ್ಲಾ ನೆನಪು ಬರಿಸಿದ ನಿಮಗೆ ಧನ್ಯವಾದಗಳು ಮೇಡಂ.

  4. Anonymous says:

    ಮಳೆ ಸುರಿತಾ ಇದ್ದಾಗ,ಒಳಗೆ ಬೆಚ್ಚಗೆ ಕುಳಿತು ನಿಮ್ಮ ಲೇಖನ ಓದಿದೆ. ಮನಸ್ಸು ಬಾಲ್ಯದ ಕಡೆ ಓಡಿ,ಬೆಚ್ಚನೆಯ ನೆನಪುಗಳು ಮೂಡಿದವು.ಅಭಿನಂದನೆಗಳು.

  5. Hema says:

    ಚೆಂದದ ಬರಹ…ನೇರಳ ಹಣ್ಣಿನ ಮರ ಹತ್ತಿ ಅಥವಾ ಕೋಲಿನಿಂದ ಬಡಿದು, ಕಲ್ಲು ಹೊಡೆದು..ಹೀಗೆ ನಾನಾ ವಿಧದಲ್ಲಿ ಹಣ್ಣಿನ ಜೊತೆಗೆ ಕಾಯಿಗಳನ್ನೂ ಉದುರಿಸಿ, ನಾಲಿಗೆ ನೀಲಿ ಮಾಡಿಕೊಂಡು ಬೈಸಿಕೊಂಡವರು ನಾವು ಕೂಡ.

  6. ನಯನ ಬಜಕೂಡ್ಲು says:

    ನೇರಳೆ ಹಣ್ಣಿನಷ್ಟೇ ಸಿಹಿ ಸಿಹಿ ನೆನಪುಗಳಿಂದ ಕೂಡಿದ ಬರಹ. ಹಿಂದೆ ಎಲ್ಲ ಧಾರಾಳವಾಗಿ ಮನೆ ಹಿತ್ತಲಲ್ಲೇ ಬೆಳೆಯುತ್ತಿದ್ದ ಹಣ್ಣುಗಳೆಲ್ಲ ಇವತ್ತು ಮಾರ್ಕೆಟ್ ನಲ್ಲಿ ದುಬಾರಿ ಬೆಲೆ ಪಡೆದು ಮಾರಾಟವಾಗುತ್ತಿವೆ. ಹಿಂದೆ ಎಲ್ಲ ಕೊಳೆತು ಹೋದರೂ ಅವು ಬೇಡವಾಗಿತ್ತು, ಇವತ್ತು ಎಷ್ಟೇ ದುಬಾರಿಯಾದರೂ ಬೆಲೆ ಕೊಟ್ಟು ಖರೀದಿಸುವ ಪರಿಸ್ಥಿತಿ.

  7. Padma Anand says:

    ನೇರಳೆಯ ರುಚಿ ನಾಲಿಗೆಗೆ ಸವಿಯೆನಿಸಿದಂತೆ ನಿಮ್ಮ ಲೇಖನವೂ ಮನಸ್ಸಿಗೆ ಮುದ ನೀಡಿತು. ನೇರಳೆ ನಾಲಿಗೆಗೆ ರಂಗು ನೀಡುವಂತೆಯೇ ಲೇಖನವೂ ಬಾಲ್ಯದ ನೆನಪುಗಳಿಂದ ವರ್ಣರಂಜಿತವಾಗಿತ್ತು.

  8. ಸುನೀತ says:

    ಮಾವಿನ ಹಣ್ಣಿನಿಂದ ಶುರುವಾಗಿ ನೇರಳೆ ಹಣ್ಣಿನ ಒಡನಾಟವನ್ನು ಹೇರಳವಾಗಿ ಹೇಳಿ ಬಾಲ್ಯದತ್ತ ಹೊರಳಿಸಿದಿರಿ ಸಮತಾ..ಸುರಹೊನ್ನೆಗೂ ನಿಮಗೂ ಪ್ರೀತಿ..

  9. Latha says:

    Chandada lekhana

  10. Samatha.R says:

    ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು

  11. Ashamani says:

    Super

  12. Anonymous says:

    Super

  13. ವಿದ್ಯಾ says:

    ಸೊಗಸಾದ ಲೇಖನ, ಇಂತಹ ಬರಹಗಳು ಹೆಚ್ಚಾಗಿ ಮೂಡಿ ಬರಲಿ ಮೇಡಂ

  14. Vathsala says:

    ಸಿಹಿ ಮಿಶ್ರಿತ ವೊಗಾಚಾದ ನೆರಳೆಹಣ್ಣು ಯಾರಿಗೆ
    ಇಷ್ಟವಿಲ್ಲ? ಹಣ್ಣು ತಿಂದಂತೆ ಆಯಿತು ನಿಮ್ಮ ಬಾಲ್ಯದ
    ಅನುಭವದ ಮೆಲುಕಿನ ಪರಿ.

  15. ಶಂಕರಿ ಶರ್ಮ says:

    ಆಹಾ…ನಮ್ಮ ನಾಲಗೆಯನ್ನು ನೇರಳೆ ಮಾಡಿದುದಲ್ಲದೆ, ಮನವನ್ನೂ ಒದ್ದೆ ಮಾಡಿದಿರಿ ..ಸಿಹಿ ನೆನಪುಗಳಿಂದ! ಸೊಗಸಾದ ಬರಹ ಮೇಡಂ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: