‘ಈ ಸಮಯದ ಕರೋನಾಮಯ..’
ಈಗ ಎಲ್ಲೆಲ್ಲಿ ನೋಡಿದರೂ ‘ಈ ಸಮಯ ಕೊರೋನಮಯ…’ ಎನ್ನುವ ರಾಗವೇ ಕೇಳಿ ಬರುತ್ತಿದೆ. ರಾಗವೋ ರೋಗವೋ ಅಂತೂ ಅಪಸ್ವರದ ಆಲಾಪನೆ.
ನನ್ನಂತಹ ನಿವೃತ್ತ ಗಂಡಸರಿಗೆ ಮನೆಯೇ ಮೊದಲ ಪಾಠಶಾಲೆ. ಮಡದಿಯೇ ಏಕೈಕ ಗುರುವು. ಆದರೆ ಈ ಗುರುಗಳಿಗೆ ಈ ಶಿಷ್ಯಂದಿರ ಮೇಲೆ ಕರುಣೆಯಿರುವ ಮಾತಂತೂ ಇಲ್ಲವೇ ಇಲ್ಲ. ಇನ್ನು ಗೌರವನೀಡುವ ಮಾತನ್ನು ಕೇಳಲೇಬೇಡಿ. ಏಕೆಂದರೆ, ಗುರುವಿಗೇ ಶಿಷ್ಯರು ಗೌರವ ಅರ್ಪಿಸುವುದು ಈಗಿನ ಲೋಕರೂಢಿಯಲ್ಲವೇ…
ಮೊನ್ನೆ ನಮ್ಮ ಮನೆಯಲ್ಲಿ ನಡೆದ ಒಂದು ಘಟನೆಯನ್ನು ನಿಮ್ಮೊಡನೆ ಹಂಚಿಕೊಂಡರೆ ನನಗೊಂದಷ್ಟು ಸಮಾಧಾನ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಏಕೆ ಹಂಚಿಕೊಳ್ತೀನಿ ಅಂದ್ರೇ…, ನನ್ನ ಹೆಂಡತಿಗೆ ಸಮಾಧಾನವಾಗಿ ಓದುವ ಖಯಾಲಿ ಇಲ್ಲ! ಹಾಗಾಗಿ ಈ ಧೈರ್ಯ.
‘’ಇತಿಹಾಸ ಅಭ್ಯಾಸ ಮಾಡುವ ಮಕ್ಕಳನ್ನು ನೆನಪಿಸಿಕೊಂಡರೆ ಪಾಪ ಅನ್ಸುತ್ತೆ’.’
ಗುರುವಾರ ಬೆಳಗ್ಗೆಯ ಬಿಸಿ ಕಾಫಿ ಜೊತೆಗೆ ತೂರಿ ಬಂದ ಮಾತು ನನ್ನ ದಿನಪತ್ರಿಕೆಯ ಓದಿಗೆ ತಡೆ ಒಡ್ಡಿತು.
ಆತಂಕಿತವದನಳಾದ ಮಡದಿಯತ್ತ ವಿಷಯ ಏನೆಂದು ಕೇಳುವಂತೆ ಮುಖ ಮಾಡಿದೆ. ನನಗೆ ಆಕೆ ಹೇಳುವ ಎಷ್ಟೋ ವಿಚಾರಗಳಲ್ಲಿ ಕಿಂಚಿತ್ತೂ ಆಸಕ್ತಿ ಇಲ್ಲದಿದ್ದರೂ ಸಹ ತೋರಿಕೆಗಾಗಿಯಾದರೂ ಕಿವಿಗೊಡಬೇಕು. ಇಲ್ಲದಿದ್ದರೆ ಮನೇಲಿ ಕುಳಿತಿರುವ ನನಗೆ ಬಿಟ್ಟಿ ಸಿಗುವ ಹಲವು ಸೇವೆ ಸವಲತ್ತುಗಳು ಕಡಿತಗೊಳ್ಳುತ್ತವೆ. ಇದು ಹಲವಾರು ಬಾರಿ ಅನುಭವ ವೇದ್ಯವಾಗಿರುವುದರಿಂದ, ಮಡದಿಯ ಸುಸ್ವರ ಕೇಳುತ್ತಿದ್ದಂತೇ ಪೇಪರ್ ಮಡಚಿಟ್ಟು ಕಾಫಿ ಬಟ್ಟಲಿಗೆ ಕೈ ಚಾಚಿದೆ.
“ಏನು ಅಮ್ಮಾವ್ರು ಬೆಳಗ್ಗೆ ಬೆಳಗ್ಗೆಯೇ ಯಾರ ಯಾರದೋ ಮಕ್ಕಳ ಬಗ್ಗೆ ಮರುಕ ಪಡುವಂತಿದೆ!ಏನು ಸಮಾಚಾರ?”
“ರೀ, ಮಕ್ಕಳು ಯಾರದ್ದಾದ್ರೇನ್ರೀ, ಮಕ್ಕಳೇ ಅಲ್ವಾ? ನಮ್ಮ ಮಕ್ಕಳು ಓದು ಮುಗ್ಸಿ ಕೆಲ್ಸ ಹಿಡ್ದಿದ್ದಾರೇಂತ ಪಾಪ, ಬೇರೆಯವರ ಮಕ್ಕಳ ಬಗ್ಗೆ ಮರುಕ ಪಡೋದು ಬೇಡ್ವಾ? ನೀವು ಅದ್ಹೇಗೆ ಕಲ್ಲುಗುಂಡು ಥರ ಇರ್ತೀರೋ…”
ನನಗೆ ಚೆನ್ನಾಗಿಯೇ ಅಂದಳು. ಬೆಳಗ್ಗೆ ಬೆಳಗ್ಗೆಯೇ ನನಗೆ ಇದು ಬೇಕಿರಲಿಲ್ಲ. ಅಲ್ವೇ….
ಇಲ್ಲಾ ಇವ್ರೇ, ಅಂದ್ರೆ ಓದುಗರೇ, ಈಕೆ ನನ್ನಾಕೆ ಹೇಳುವಂತೆ ನಾನು ಗುಂಡುಕಲ್ಲಿನಂತೆ ಜಡವೇನಲ್ಲ. ಭಾವರಹಿತ ಜೀವಿಯೂ ಅಲ್ಲ. ಈಗಾಗ್ಲೆ ನೆರೆಮನೆ, ಸಂಬಂಧಿಕರು, ಕೆಲಸ ಮಾಡುವ ಜಾಗದಲ್ಲಿನ ಉದ್ಯೋಗಿಗಳ ಕಷ್ಟ ಸುಖಗಳಿಗೆ ಸ್ಪಂದಿಸಲು ಹೋಗಿ ಪಡಿಪಾಟಲು ಪಟ್ಟು ಈಕೆಯಿಂದಲೇ ‘’ಸಾಕು ಮಾರಾಯ, ಧರ್ಮರಾಯ. ಸುಮ್ಮನೆ ಇಲ್ಲದ ತಾಪತ್ರಯ ಮೈಮೇಲೆ ಎಳ್ಕೊಂಡು ಮನೆಗೆ ಬರಬೇಡಿ. ತೆಪ್ಪಗೆ ನಿಮ್ಮ ಕೆಲಸ ನೋಡ್ಕೊಂಡು ಬಿದ್ದಿರಿ’’ ಎಂದು ಮಂಗಳಾರತಿ ಮಾಡಿಸಿಕೊಂಡೂ ಆಗಿದೆ.
“ಆಯ್ತು ಕಣೇ. ಅದೇನು ಹೇಳೋಕೆ ಹೊರಟಿದ್ದೀಯೋ ಹೇಳು. ನೀನು ಹೇಳೋದ್ರಲ್ಲೂ ಏನಾದ್ರು ಪಾಯಿಂಟ್ ಇರುತ್ತೆ.” ಪೂಸಿ ಹೊಡೆದು ಗಾಳ ಹಾಕಿದೆ.
ನನ್ನ ಗಾಳಕ್ಕೆ ಬೀಳೋ ಮೀನಾ ಇದು? ತಿಮಿಂಗಿಲ. ನನ್ನನ್ನೇ ನುಂಗುತ್ತಾಳೆ.
“ರೀ, ಈ ಟೀವೀ ನ್ಯೂಸುಗಳ್ನ ನೋಡ್ತಿದ್ರೆ, ಪೇಪರ್ಗಳ್ನ ಓದುತಿದ್ರೆ ಜೀವ ಝಲ್ ಅನ್ನುತ್ರೀ..”
ಭಲಾ ಅಂತೂ ನಿನ್ನನ್ನು ನಡುಗಿಸೋ ಒಂದು ವಸ್ತು ಇದೆ ಅಂತಾಯ್ತು ಎಂದು ಸಮಾಧಾನ ಪಟ್ಟುಕೊಂಡು ಮಾಧ್ಯಮ ಮಿತ್ರರಿಗೆ ಮನಸ್ಸಲ್ಲೇ ಒಂದು ಸಲಾಂ ಹೊಡೆದೆ. ಆದರೂ, “ಅಯ್ಯೋ ನಿನ್ನನ್ನು ಟಿ ವಿ ನೋಡು ಅಂತ ಬಲವಂತ ಮಾಡ್ತಿರೋರು ಯಾರೇ? ಪೇಪರ್ ಓದು ಅಂತ ದುಂಬಾಲು ಬಿದ್ದಿರೋರು ಯಾರೇ? ರಿಮೋಟು ನಿನ್ನ ಕೈಲೇ ಇರುತ್ತೆ. ಆಫ್ ಮಾಡು. ಪೇಪರು ಟೇಬಲ್ ಮೇಲೇ ಬಿದ್ದಿರುತ್ತೆ. ಕೈಗೆ ತಗೋಬೇಡ, ಕಣ್ಣೆತ್ತಿಯೂ ನೋಡಬೇಡ.” ಪುಕ್ಕಟೆ ಸಲಹೆ ಕೊಟ್ಟೆ.
ಮಿತ್ರೋಂ… ನನ್ನ ಯಾವ ಸಲಹೆಗಳನ್ನಾದ್ರೂ ಈಕೆ ಕಿವಿ ಮೇಲೆ ಹಾಕ್ಕೊಂಡಿದ್ರೆ ಕೇಳಿ. ಈಗ್ಲೂ ಹಾಗೆ ಮಾಡಿದ್ಲು.
“ನೀವೊಳ್ಳೆ, ಟಿ ವಿ ನೋಡ್ಬೇಡ, ಪೇಪರ್ ಓದಬೇಡ ಅಂದ್ರೆ ನನ್ನ ನಾಲೆಜ್ಡ್ ಇಂಪ್ರೂ ಆಗೋದು ಹೇಗೆ? ಆನ್ಲೈನ್ ಚಾಟ್ನಲ್ಲಿ ನಾನು ಹಿಂದುಳಿದು ಬಿಡ್ತೀನಿ ಅಷ್ಟೇ. ಜರ್ಮನಿ, ನ್ಯೂಜಿಲೆಂಡಿನಲ್ಲಿ ಲೇಡಿ ರಾಜಕಾರಣಿಗಳು ಕೊರೋನಾ ಕಂಟ್ರೋಲ್ ಮಾಡಿ ನಂಬರ್ ಒನ್ ಸ್ಥಾನದಲ್ಲಿರೋದು ನಂಗೆ ಗೊತ್ತಾಗದೇ ಮೊನ್ನೆ ಆನ್ಲೈನ್ ಕ್ವಿಜ಼್ ನಲ್ಲಿ ಪಾಯಿಂಟು ಕಳಕೊಂಡೆ ಗೊತ್ತಾ ” ಎಂದು ಮುಖ ಸಪ್ಪಗೆ ಮಾಡಿದಳು.
ಇವಳ ಆನ್ಲೈನ್ ಚಾಟಿಂಗ್ ಬಗ್ಗೆ ಏನ್ ಕೇಳ್ತೀರ ಸ್ವಾಮೀ…
ಈ ಮೊದ್ಲು ಕಿಟಿಪಾರ್ಟಿ, ಲೇಡಿಸ್ ಕ್ಲಬ್, ಲಾಫಿಂಗ್ ಕ್ಲಬ್ ಅಂತ ಈಕೆ ಮನೆ ಸೇರ್ತಿದ್ದದ್ದೇ ಕಡಿಮೆ. (ಆಗಲೇ ನನಗೆ ನೆಮ್ಮದಿ ಇತ್ತು) ಪಾಪ, ಕರೋನ ಬಂದ ಮೇಲೆ ಹೊರಗೆ ಹೋಗೋ ಹಾಗಿಲ್ಲ. ಯಾರನ್ನೂ ಕರೆಯೋ ಹಾಗಿಲ್ಲ ನೋಡಿ, ನೀರಿಂದ ತೆಗೆದ ಮೀನಿನ ಹಾಗೆ ಈ ಮಹಿಳಾ ಸಂಘದ ರಮಣಿಯರು ಮಿಲುಗುಡುತ್ತಿದ್ದಾರೆ.
ಅದ್ಯಾರು ಈಕೆಗೆ ವಾಟ್ಸಪ್ ವೀಡಿಯೋ ಕಾಲ್, ಫೇಸ್ಬುಕ್ ಲೈವ್ ಬಗ್ಗೆ ಹೇಳಿದ್ರೋ ಶುರುವಾಯ್ತು ನೋಡಿ ಇವರ ರಾಜ್ಯಭಾರ. ಗಳಿಗೆಗೊಂದು ಸೀರೆ ಬದಲಿಸಿಕೊಂಡು ವೀಡಿಯೋ ಚಾಟಿಂಗ್ ಶುರು ಮಾಡ್ತಾಳೆ. ಮನೇಲಿ ಕೂತು ನನಗೆ ಇವಳ ಅವತಾರ ನೋಡೀನೋಡೀ ತಲೆ ಸಿಡಿಯೋದೊಂದು ಬಾಕಿ
ಉಳಿದಿದೆ. ಆ ಕಡೆ ಬಂದಿರುವ ಇವಳ ಸ್ನೇಹಿತರು ಹೇಗಿದ್ದಾರೆ ಅಂತ ನೋಡೋಣ ಎಂದು ಸುಮ್ಮನೆ ಕಣ್ಣು ಹಾಯಿಸಲೂ ಮಾರಾಯ್ತಿ ಬಿಡೋಲ್ಲ.
ಏನೂ ಮಾಡೋಕಾಗಲ್ಲ ಸ್ವಾಮೀ…., ಅಸಲಿಗೆ ನಾವು ಗಂಡಸರು ತಾಳಿ ಕಟ್ಟಿದ್ರೂ, ನಮ್ಮ ಮೂಗುದಾರ/ ಲಗಾಮು ಅವರ ಕೈಲಿರುತ್ತೆ.
ಈಗ ನೋಡಿ, ಮನೇಲಿ ಕಾಲ ಕಳೆಯುತ್ತಿರೋದ್ರಿಂದ (ಕೊಳೆಯುತ್ತಿರೋದು ಅಂತಾನೇ ನಾನು ಹೇಳಿಕೊಳ್ಳೋದು) ಮೊನ್ನೆ ಮನೆಮುಂದೆ ಬಂದ ತರಕಾರಿಯವನ ಹತ್ತಿರ ಐದು ಕೆ ಜಿ ಅವರೆಕಾಯಿ ತೆಗೆದುಕೊಂಡು ಪ್ರೀತಿಯಿಂದ ಸುಲಿದು ಕೊಟ್ಟಿದ್ದೆ. ಆದರೆ ಸುಲಿದ ಕಾಳುಗಳು ಮಾತ್ರ ಟಪ್ಪರ್
ವೇರ್ ಬಾಕ್ಸಿನ ಬಂಧನಕ್ಕೊಳಗಾಗಿ ಫ್ರಿಜ್ಡಿನೊಳಗೆ ತಣ್ಣಗೆ ಮಲಗಿದ್ದಾವೆ.
ಬಹಳ ಆಸೆಯಿಂದ ಬಾಯಲ್ಲಿ ನೀರೂರಿಸುತ್ತಾ ಉಗುರು ನೊಂದರೂ ಕಾಳು ಸುಲಿದುಕೊಟ್ಟದ್ದು ನನ್ನಿಷ್ಟದ ಅವರೆಕಾಳುಪ್ಪಿಟ್ಟನ್ನು ಬಿಸಿಬಿಸಿ ಸವಿಯುವುದಕ್ಕಾಗಿ. ಆದರೆ ಬಾಕ್ಸಿನ ಬಂಧನಕ್ಕೆ ಒಳಗಾಗಿ ಕ್ವಾರಂಟೈನ್ ನಲ್ಲಿರುವ ಅವುಗಳಿಗೆ ಮುಕ್ತಿ ಸಿಕ್ಕಿಲ್ಲ. ಹೇಗೋ ಒಂದು ಮೋಕ್ಷ ಕಾಣಿಸುವ ಸಲುವಾಗಿ ಈಗ ನಾನಿವಳ ಯಾವತ್ತೂ ಮಾತುಗಳಿಗೆ ಕಿವಿಗೊಡಲೇಬೇಕಾಗಿ ಬಂದಿದೆ ನೋಡಿ..
“ಜಲಜೂ.., ಅವರೆಕಾಯಿ ಉಪ್ಪಿಟ್ಟು ಎಷ್ಟು ಚೆನ್ನಾಗಿರುತ್ತೆ ಅಲ್ವೇನೆ?” ರಾಗ ಎಳೆದೆ. ಅವರೆಕಾಯಿಗಳನ್ನು ಎಲ್ಲಿ ಮರೆತು ಬಿಟ್ಟಿದ್ದಾಳೋ ಎಂದು ಭಯದಿಂದೆ.
“ನೋಡ್ರೀ, ನೀವು ಕೇಳಿದಾಗೆಲ್ಲಾ ನಿಮಗೆ ಬೇಕಾದ ಪದಾರ್ಥ ಮಾಡಿಕೊಡೋಕೆ ನನಗೆ ಆಗೋಲ್ಲ. ನಾನೇನು ಬಿಟ್ಟಿ ಬಿದ್ದಿಲ್ಲ ರೀ… ಐ ಮೀನ್ ಫ್ರೀ ಆಗಿಲ್ಲ. ಇವತ್ತು ಆನ್ಲೈಲ್ ಫೇಷಿಯಲ್ ಕ್ಲಾಸ್ ಇದೆ. ಸೌತೇಕಾಯಿ, ನಿಂಬೆ ಹಣ್ಣು , ಪಪ್ಪಾಯ ಎಲ್ಲಾ ಫ್ರಿಜ್ಡ್ ನಿಂದ ತೆಗೆದಿಟ್ಟು ಬೇರೆ ಬೇರೆ ಪೇಸ್ಟ್ ಮಾಡಿ ಇಟ್ಟಿರಿ. ಸ್ನಾನ ಮುಗಿಸಿ ಬರ್ತೀನಿ” ಎಂದು ಎದ್ದಳು.
ಇವಳ ಫೇಶಿಯಲ್ ಕ್ಲಾಸು ಅಂದ್ಮೇಲೆ ತಕ್ಕೊಳ್ಳಿ ನನಗೂ ಮಜವೇ…. ಏಕಂದ್ರೆ ನನ್ನಾಕೆಯ ನುಣುಪು ಕೆನ್ನೆಗಳಿಗೆ ಪಪ್ಪಾಯ ಪೇಸ್ಟು ಉಜ್ಜುತ್ತಾ… ಆ ಕಡೆಯಿಂದ ಫೇಶಿಯಲ್ ಹೇಗೆ ಮಾಡಬೇಕೆಂದು ಹೇಳಿಕೊಡುವ ಲಲನಾಮಣಿಯ ಲಾವಣ್ಯವನ್ನು ಸವಿಯಬಹುದು ನೋಡಿ.
‘ಮಡದಿಯ ಮುಖ ಹೊಳೆದರೆ
ಲಕಲಕಾ
ನನಗೆ ಬಿಸಿ ಉಪ್ಪಿಟ್ಟು ತಿನ್ನುವ
ಸುಖವೋ ಸುಖ’
ಹೀಗೆ ಸಮಯದ ಸದುಪಯೋಗ ಮಾಡಿಕೊಂಡು ನಾನೂ ಆಶು ಕವಿಯಾದ ಖುಷಿಗೆ ಅಮ್ಮಾವರು ಹೇಳಿದ್ದನ್ನು ತಯಾರಿ ಮಾಡಲು ಅಡುಗೆ ಮನೆಯತ್ತ ಕಾಲು ಹಾಕುವೆ..
ಇದೆಲ್ಲದರ ನಡುವೆ ಇತಿಹಾಸ ಓದುವ ಮಕ್ಕಳ ಕಷ್ಟ ಏನೂಂತ ನಾನೂ ಕೇಳಲಿಲ್ಲ. ಅದರ ರಾಗ ತೆಗೆದಿದ್ದ ನನ್ನ ಮಡದಿಯೂ ಪುನಃ ಸೊಲ್ಲೆತ್ತಲಿಲ್ಲ. ಮುಂದಿನ ಬಾರಿ ಅದೇನೂಂತ ವಿವರವಾಗಿ ಕೇಳಿ ಹೇಳ್ತೀನಿ ಬಿಡಿ…
– ವಸುಂಧರಾ ಕದಲೂರು
ಅರ್ಥಪೂರ್ಣ ಲೇಖನ ಆಭಿನಂದನೆಗಳು ಮೇಡಮ್
ಅರ್ಥಪೂರ್ಣ ಬರಹ. ಓದಿ ಖುಷಿ ಆಯ್ತು. ಧನ್ಯವಾದಗಳು
ಲವಲವಿಕೆ ಮೂಡಿಸುವ ಲೇಖನ ಮೇಡಂ.
ಸುಂದರವಾದ ಲಹರಿ..ಚೆನ್ನಾಗಿದೆ.
ತುಂಬಾ ಚೆನ್ನಾಗಿದೆ.
ನವಿರಾದ ಭಾವನೆಗಳಿಗೆ ಕಚಗುಳಿಯಿಡುವ ಲೇಖನ. ಸುಲಲಿತವಾಗಿ ಓದಿಸಿಕೊಂಡಿತು.
ಅಯ್ಯೋ..ಪಾಪಾರೀ..!!
ನವಿರು ಹಾಸ್ಯದ ಲಘುಬರಹ ಚೆನ್ನಾಗಿದೆ