ಋಷಿಗಳಲ್ಲಿ ಅದ್ವಿತೀಯರೆನಿಸಿದ ಅಗಸ್ತ್ಯರು

Share Button

ಪುರಾಣ ಕಾಲದಲ್ಲಿ ದೇವತೆಗಳು ಹಾಗೂ ರಾಕ್ಷಸರಿಗೆ ಆಗಾಗ ಯುದ್ಧ ನಡೆಯುತ್ತಲೇ ಇತ್ತು. ಶುಕ್ರಾಚಾರ್ಯರಿಂದ ರಾಕ್ಷಸರಿಗೆ ಮೃತಸಂಜೀವಿನಿ ವಿದ್ಯೆ ತಿಳಿದಿತ್ತು. ಇದರಿಂದಾಗಿ ನಿಧನ  ಹೊಂದಿದ ರಾಕ್ಷಸರು ಪುನರಪಿ ಬದುಕಿ ಬರುತ್ತಿದ್ದರು. ದಾನವರ ಮುಖಂಡನಾದ ವೃತ್ತಾಸುರನನ್ನು ಇಂದ್ರನು ವಧೆ ಮಾಡಿದ ಮೇಲೆ ಕಾಲೇಯರೆಂಬ ಕ್ರೂರ ಅಸುರರು  ಅಡಗಿ ಕುಳಿತು ರಾತ್ರಿಯಾಗುತ್ತಲೇ ಋಷಿಮುನಿಗಳ ಆಶ್ರಮವನ್ನು ಪ್ರವೇಶಿಸಿ ಹಲವಾರು ರೀತಿಯಲ್ಲಿ ಹಿಂಸೆ ಕೊಡುತ್ತಿದ್ದರು. ಮಹಾವಿಷ್ಣು ದಶಾವತಾರವೆತ್ತಿ ದುಷ್ಟ ನಿಗ್ರಹ ಶಿಷ್ಟ ರಕ್ಷಣೆ ಮಾಡಿದರೂ ಕೆಲವು ದಾನವರ ಉಪಟಳ ಸಹಿಸಲಾರದೆ ಸಮನಸರು ತೀರಾ ಕಂಗೆಟ್ಟು ಹೋಗುತ್ತಿದ್ದರು. ದೇವತೆಗಳಿಗೆ ದಾನವರಿಂದಾಗುವ ಪೀಡನೆಯನ್ನು ಪರಿಹರಿಸುವುದಕ್ಕಾಗಿ ಅಗಸ್ಯನು ಕೆಲವು ಉಪಾಯಗಳನ್ನು ಹೂಡಿದನು. ಈ ಅಗಸ್ತ್ಯನೆಂದರೆ ಯಾರು ?  ಅವನು ಕೈಗೊಂಡ ಉಪಾಯಗಳೇನು ? ಎಂಬುದನ್ನು ನೋಡೋಣ.

ಅಗಸ್ತ್ಯನು ಬ್ರಹ್ಮರ್ಷಿ. ಈತನು ಮಿತ್ರವರುಣರ ಮಗ, ಮಿತ್ರವರುಣರಿಗೆ ಊರ್ವಶಿಯ ದರ್ಶನದಿಂದ ವೀರ್ಯಪಾತವಾಗಿ ಕುಂಭದಲ್ಲಿ ಬೀಳಲು ಅಲ್ಲಿಂದ ಉತ್ಪತ್ತಿಯಾದ ಅಗಸ್ಯನು ಕುಂಭಜನೆನಿಸಿದನು. ವಸಿಷ್ಠನು ಇವನ ಸಹೋದರನು. ವಿದರ್ಭರಾಜನ ಸುಕುಮಾರಿ ಲೋಪಾಮುದ್ರೆಯೊಡನೆ ಈತನ ವಿವಾಹವಾಯಿತು. ಈತನ ಮಗನ ಹೆಸರು ಇದ್ಮವಾಹನ. ಇವನು ಅತ್ಯಧಿಕ ಶಕ್ತಿಯುಳ್ಳವ. ಈತನು ಬಾಲ್ಯದಲ್ಲೇ ಹಲವಾರು ಮಂದಿ ಹೊತ್ತು ತರುವಷ್ಟು (ಇದ್ಮ) ಕಟ್ಟಿಗೆಯನ್ನು ಹೊತ್ತು ತರುತ್ತಿದ್ದರಿಂದ ಇವನಿಗೆ ಇದ್ಮವಾಹನನೆಂಬ ಹೆಸರು ಬಂತು. ವಸಿಷ್ಠನು ಅಗಸ್ತ್ಯನ ಸಹೋದರ.

ಹಲವಾರು ಯೋಜನ ಉದ್ದಗಲವುಳ್ಳ ಸಮುದ್ರದ ನೀರನ್ನು ಅಗಸ್ತ್ಯರು ಆಪೋಶನವಾಗಿ ಕುಡಿದು ಬರಿದು ಮಾಡಿದರು. ಇದರಿಂದಾಗಿ ರಾಕ್ಷಸರು ಅಡಗಿ ಕುಳಿತ ಠಾವನ್ನು ದೇವತೆಗಳಿಗೆ ಹುಡುಕಿ ಹಿಡಿಯಲು ಸುಲಭವಾಗಿ ದಾನವರನ್ನು ಬೇಗನೆ ಸಂಹಾರ ಮಾಡುತ್ತಿದ್ದರು.

ಇಲ್ವಲ ಮತ್ತು ವಾತಾಪಿ ಎಂಬ ಇಬ್ಬರು ರಾಕ್ಷಸರಿದ್ದರು. ಇವರಿಬ್ಬರೂ ದೂರ್ವಾಸರ ಕುವರರಾಗಿದ್ದರು. ಅದೂ ಒಂದು ಕಾರಣದಿಂದ! ಇವರ ತಾಯಿ, ಅಜೋಮುಖಿಯು ಶೂರಪದ್ಮನೆಂಬ ರಾಕ್ಷಸನ ತಂಗಿ, ತನ್ನ ಕುಟಿಲೋಪಾಯದಿಂದ ದೂರ್ವಾಸರ ಮನವೊಲಿಸಿ ಈರ್ವರು ಸಂತಾನನ್ನು ಪಡೆದಿದ್ದಳು. ಅಮ್ಮನ ಸ್ವಾಭಾವವೇ ಮಕ್ಕಳಲ್ಲಿ ಮನೆ ಮಾಡಿದ್ದರಿಂದ ಇಬ್ಬರೂ ನೀಚಗುಣದವರಾಗಿದ್ದರು. ಸಹೋದರರಿಬ್ಬರೂ ಒಂದು ವಿಚಿತ್ರವಾದ ವಿಧಾನದಿಂದ ದಾರಿಹೋಕರನ್ನು  ತಮ್ಮ ಆಹಾರವನ್ನಾಗಿ ಮಾಡಿಕೊಂಡಿದ್ದರು. ಅವರು ಮೃತ ಸಂಜೀವಿನಿ ವಿದ್ಯೆಯು ಕರಗತಮಾಡಿಕೊಂಡಿದ್ದರಷ್ಟೆ  ? ಇಬ್ಬರಲ್ಲಿ ಒಬ್ಬನು ಬ್ರಾಹ್ಮಣ ವೇಷದಲ್ಲಿ ಬಂದು ದಾರಿ ಹೋಗುವವರನ್ನು ಆಶ್ರಮಕ್ಕೆ ಕರೆತಂದು ಗುಟ್ಟಾಗಿ ಇನನೋರ್ವನನ್ನು ಕೊಂದು ಅಡಿಗೆ ಮಾಡಿ ಬಡಿಸಿ ಉಪಚರಿಸುವುದು. ಆಗಂತುಕನ ಭೋಜನವಾದ ಕೂಡಲೇ ಮೃತ ಸಂಜೀವಿನಿ ಪಠಣ ಮಾಡಿ ಅವನನ್ನು ಬದುಕಿಸುವುದು. ಊಟ ಮಾಡಿದ ಅತಿಥಿಯ ಹೊಟ್ಟೆ ಸೀಳಿಕೊಂಡು ಆತ ಹೊರಗೆ ಬರುತ್ತಾನೆ. ಊಟ ಮಾಡಿದ ಅತಿಥಿ ಸಾಯುತ್ತಾನೆ.ಆ ನಂತರ ಇಬ್ಬರೂ ಆತನ ಮಾಂಸವನ್ನು ಭೋಜನ ಮಾಡುವುದು. ಅದು ಅವರಿಬ್ಬರು ಆಗಂತುಕರನ್ನು ಕೊಲ್ಲುವ ಪದ್ಧತಿ ಹೇಗಿದೆ?  ಒಂದು ರೀತಿಯ ವಿಚಿತ್ರವೂ, ರೋಚಕವೂ ಆಗಿದೆಯಲ್ಲವೇ?

ಇದನ್ನು ತಿಳಿದ ಅಗಸ್ತ್ಯರು ಒಮ್ಮೆ ಆ ದಾರಿಯಾಗಿ ಬಂದರು. ಆ ದಿನವೂ ಅದೇ ರೀತಿಯಾಯಿತು. ರಾಕ್ಷಸ ಸಹೋದರರು ಬ್ರಾಹ್ಮಣ ವೇಷದಿಂದ ಬಂದು ಅಗಸ್ತ್ಯರನ್ನು ಅಡ್ಡಗಟ್ಟಿ ಈದಿನ ಪಿತೃಶ್ರಾದ್ಧವಾಗಿದ್ದರಿಂದ ನಾವು ಕರೆಯುತ್ತಿದ್ದೇವೆ. ಯಾವ ಬ್ರಾಹ್ಮಣೋತ್ತಮನೂ ಸಿಗಲಿಲ್ಲ. ತಾವು ಬರಬೇಕೆಂದು ಒತ್ತಾಯಿಸಿದರು. ಅಗಸ್ತ್ಯರು ಮನದಲ್ಲೇ ಲೆಕ್ಕ ಹಾಕುತ್ತಾ ಬಂದರು. ಅಗಸ್ತ್ಯರನ್ನು ಹೊರಗೆ ಕುಳಿತುಕೊಳಿಸಿದ ಇಲ್ವಲನು ಗುಟ್ಟಾಗಿ ವಾತಾಪಿಯನ್ನು ಕೊಂದು ಅಡಿಗೆ ಮಾಡಿ ಅಗಸ್ತ್ಯರಿಗೆ ಉಣಬಡಿಸಿದನು.

ಈ ಕುತಂತ್ರವನ್ನು ಮೊದಲೇ ಅರಿತಿದ್ದ ಅಗಸ್ತ್ಯರು ತಮ್ಮ ತಪೋಶಕ್ತಿಯನುಪಯೋಗಿಸಿ ವಾತಾಪಿಯನ್ನು ಅಲ್ಲೇ ಜೀರ್ಣವಾಗುವಂತೆ ವಾತಾಪಿ ಜೀರ್ಣೋಭವ:  ಎಂದು ಶಪಿಸಿದರು. ಅಲ್ಲದೆ ಇಬ್ಬರನ್ನೂ ಭಸ್ಮಿಭೂತವಾಗುವಂತೆ ಮಾಡಿದರು. ಆ ರಾಕ್ಷಸರಿಬ್ಬರನ್ನು ಅಳಿಯುವಂತೆ ಮಾಡಿದ ಅಗಸ್ತ್ಯರನ್ನು ಊರ ಜನರು ಕೊಂಡಾಡಿದರು. ಹಾಗೆಯೇ ಲಲಿತಾ ಸಹಸ್ರನಾಮ ಹಯಗ್ರೀವ-ಅಗಸ್ತ್ಯ ಸಂವಾದ ರೂಪವಾಗಿ ಲೋಕಾರ್ಪಣೆಗೊಂಡಿದೆ.

ಅಗಸ್ತ್ಯನು ಗರ್ವಿಷ್ಠನಾದ ನಹುಷನಿಗೆ ಹೆಬ್ಬಾವು ಆಗುವಂತೆ ಶಾವಿತ್ತನು. ಸೂರ್ಯನ ಗತಿಗೆ ವಿಘ್ನ ಉಂಟುಮಾಡಿದ ವಿಂಧ್ಯ ಪರ್ವತದ ಎತ್ತರವನ್ನು ಕುಗ್ಗಿಸಿದನು. ಮಂತ್ರ ಜಲಪ್ರೋಕ್ಷಣದಿಂದ ಮೃಗಗಳನ್ನು ನಿರ್ಮಾಣ ಮಾಡುವ ಶಕ್ತಿಯನ್ನೂ ಹೊಂದಿದ್ದನು. ಅರಣ್ಯವಾಸಕ್ಕೆ ಬಂದ ರಾಮ, ಲಕ್ಷ್ಮಣಾದಿಗಳು ಅಗಸ್ತ್ಯನ ಆಶ್ರಯದಲ್ಲಿ ಎರಡು ದಿನಗಳವರೆಗೆ ಇದ್ದರು. ಇವರನ್ನು ಬೀಳ್ಕೊಡುವಾಗ ಅಗಸ್ತ್ಯನು ಇಂದ್ರನಿಂದ ಕಳುಹಿಸಲ್ಪಟ್ಟ ದಿವ್ಯಾಸ್ತ್ರಗಳನ್ನೂ ಅಕ್ಷಯ ಬಾಣಗಳನ್ನೂ ಉತ್ತಮವಾದ ಎರಡು ಧನಸ್ಸುಗಳನ್ನು ಶ್ರೀರಾಮನಿಗೆ ಕೊಟ್ಟನು. ರಾಮಾದಿಗಳು ಬಂದಂತಹ ಈ ಅಗಸ್ತ್ಯಾಶ್ರಮಕ್ಕೆ ಯುಧಿಷ್ಠಿರನು ಲೋಮಶ ಮುನಿಯೊಡನೆ ಇಲ್ಲಿಗೆ ಬಂದಿದ್ದನಂತೆ. ನಾಸಿಕದಿಂದ 24 ಮೈಲು ಅಗ್ನೆಯದಲ್ಲಿದ್ದ ಪುಣ್ಯ ಕ್ಷೇತ್ರಕ್ಕೆ ಸಮೀಪ ಪಂಚವಟಿ ಇದೆ. ಇದಕ್ಕೆ ಈಗ ಅಗಸ್ತ್ಯಪುರಿ  ಎನ್ನುತ್ತಾರೆ. ಕೆಲವು ಕಡೆ ತೀರ್ಥಕ್ಷೇತ್ರಗಳಲ್ಲಿ, ಜಲಾಶಯ, ಪರ್ವತ ಮುಂತಾಗಿ (ಅಗಸ್ತ್ಯತೀರ್ಥ, ಅಗಸ್ತ್ಯ ಪರ್ವತ) ಅಗಸ್ತ್ಯನ ಹೆಸರಿನಿಂದ ಕರೆದು ಆತನ ಪವಿತ್ರತೆಯನ್ನೂ  ಶ್ರೇಷ್ಠತೆಯನ್ನು ಸಾರುತ್ತವೆ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ 

8 Responses

  1. ಬರಹ ಚೆನ್ನಾಗಿದೆ.ಧನ್ಯವಾದಗಳು

    • Vathsala says:

      ಅಗಸ್ತ್ಯ ಋಷಿಗಳ ಪರಿಚಯ ಮಾಡಿಸುವ ನಿಮ್ಮ
      ಲೇಖನ ಚೆನ್ನಾಗಿದೆ, ವಿಜಯ ಸುಬ್ರಹ್ಮಣ್ಯರವರೆ.

  2. ಪ್ರಕಟಿಸಿದ ಹೇಮಮಾಲಾ ಹಾಗೂ ಓದಿ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು.

  3. ನಾಗರತ್ನ ಬಿ. ಅರ್. says:

    ಎಂದಿನಂತೆ ಪೌರಾಣಿಕ ಕಥೆ ತುಂಬಾ ಇಷ್ಟವಾಯ್ತು.ಧನ್ಯವಾದಗಳು ಮೇಡಂ.

  4. ನಯನ ಬಜಕೂಡ್ಲು says:

    ಸೊಗಸಾಗಿದೆ

  5. ಆಕರ್ಷಕವಾದ ನಿರೂಪಣೆ

  6. ಓದಿ ಇಷ್ಟಪಟ್ಟ ಎಲ್ಲಾ ಮಿತ್ರರಿಗೂ ವಂದನೆಗಳು.

  7. ಶಂಕರಿ ಶರ್ಮ, ಪುತ್ತೂರು says:

    ಅಗಸ್ತ್ಯರ ಕುರಿತು ಬಹಳ ತಿಳಿದುಕೊಂಡಂತಾಯ್ತು..ಚಂದದ ನಿರೂಪಣೆ ವಿಜಯಕ್ಕ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: