ಇತಿಹಾಸದ ಪುಟದಲ್ಲಿ ‘ದುರ್ಗಾಸ್ತಮಾನ’..
ಇತಿಹಾಸ ಎಂದರೆ ಬೇಸರ ಪಟ್ಟುಕೊಳ್ಳುವ ಈ ಕಾಲಘಟ್ಟದಲ್ಲಿ ಐತಿಹಾಸಿಕ ಕಾದಂಬರಿ ಓದುವ ಚಪಲದೊಂದಿಗೆ ಪ್ರಾರಂಭಿಸಿದ್ದು ತ.ರಾ.ಸು.ರವರ ಕೊನೆಯ ಕಾದಂಬರಿ ಹಾಗೂ ಮರಣೋತ್ತರ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕೃತಿ “ದುರ್ಗಾಸ್ತಮಾನ”. ಚಿತ್ರದುರ್ಗ ಎಂದರೆ ಒಂದು ಸಣ್ಣ ಜಿಲ್ಲೆ ಎಂಬ ಕನಿಷ್ಠ ಜ್ಞಾನ ಹೊಂದಿದ್ದ ನನಗೆ, ಆ ಸ್ಥಳದ ಇತಿಹಾಸ ಪೂರ್ಣ ಪ್ರಮಾಣದಲ್ಲಿ ತಿಳಿದು ಕೊಳ್ಳುವ ಆಸಕ್ತಿ ಈ ತನಕ ಏಕೆ ಮೂಡಿರಲಿಲ್ಲವೋ ತಿಳಿಯದು.
ಚಿತ್ರದುರ್ಗ ಕೇವಲ ಒಂದು ಕೋಟೆಯ ಬೀಡಾಗಿರಲಿಲ್ಲ.ಅಲ್ಲಿನ ಜನರ ಕರುಳಿಗೆ ಹೊಂದಿಕೊಂಡು ಬೆಳೆದ ಜೀವಂತ ವಸ್ತು. ಸ್ವಾತಂತ್ರಪೂರ್ವದ ಅರಸರ ಆಡಳಿತದ ಆಳ-ಅಗಲ ವನ್ನು ಸವಿಸ್ತಾರವಾಗಿ ಕೃತಿಯ ಮೂಲಕ ಹೊರಹಾಕುವುದು ನಿಜಕ್ಕೂ ದುಸ್ತರ. ಆದರೆ ಈ ಕಾದಂಬರಿಯ ಲಹರಿಗೆ ಎಲ್ಲೂ ಲೋಪವಾಗದಂತೆ ದುರ್ಗದ ಇತಿಹಾಸ ವಿಜೃಂಭಿಸಿದೆ. ದುರ್ಗವನ್ನಾಳಿದ ಹಲವಾರು ಮದಕರಿನಾಯಕರಲ್ಲಿ ಶಾಶ್ವತವಾಗಿ ಹೃದಯದಲ್ಲಿ ನಿತ್ಯ ವಾಸಿಯಾಗಿರುವ ಕೊನೆಯ ದೊರೆ ಚಿಕ್ಕಮದಕರಿನಾಯಕನ ಶೌರ್ಯ, ಸಾಹಸ, ಕ್ರೌರ್ಯ, ಕಾಮಲೋಲುಪತೆ ಹಾಗೂ ಜೀವನದ ದುರಂತದ ಚಿತ್ರಣ ಎಂತಹ ಓದುಗನನ್ನು ವಿಚಲಿತಗೊಳಿಸದೆ ಇರದು. ಚಿತ್ರದುರ್ಗದ ಮಣ್ಣಿನ ಮಗನಾದ ತ.ರಾ.ಸು.ರವರ ಕನಸಿನ ಕೂಸಾದ ಈ ಕೃತಿ ಅವರ ಸುದೀರ್ಘ ಅಧ್ಯಯನ, ಆಕರ ಗ್ರಂಥಗಳ ಧಾಖಲೆಗಳು, ಸಂಶೋಧನೆಗಳಿಗೆ ಸಾಕ್ಷಿಯಾಗಿದೆ. ಫಲಶ್ರೀಮಂತವಾದ ಅನುಭವ,ಸೂಕ್ಷ್ಮ ರಾಜಕಾರಣದ ಭೌದ್ಧಿಕ ಸಮಸ್ಯೆಗಳು, ಧರ್ಮ ಸೂಕ್ಷ್ಮಗಳು ಸೇರಿ ಅಪೂರ್ವ ಕೃತಿಯನ್ನಾಗಿ ಮಾಡಿದೆ.ರಾಜಕೀಯ ವ್ಯವಹಾರಗಳ ಕುಶಲತೆ, ಚದುರಂಗದಾಟದ ನಡೆಗಳು, ಪಿತೂರಿಗಳು,ಕಪಟಿಗಳ ಕುತಂತ್ರಗಳು, ಅದ್ಭುತ ಪ್ರಪಂಚವೇ ಕಣ್ಣೆದುರು ನಿಂತಂತಾಗುತ್ತದೆ. ಹೈದರಾಲಿಯ ಸಮಯ ಸಂಚುತನ, ನಂಬಿದ ತನ್ನವರೇ ವಿಶ್ವಾಸದ್ರೋಹವೆಸಗಿ, ದುರ್ಗ ಬಲಿಯಾಗಬೇಕಾದ ಸಂದರ್ಭ ನಿಜಕ್ಕೂ ಓದುಗರಲ್ಲಿ ಭಾವೋದ್ವೇಗ ಉಂಟಾಗಿ ಕಣ್ಣು ಮಂಜಾಗುತ್ತದೆ.
ಓಬವ್ವಳ ಸಾಹಸಗಾಥೆ ಅನನ್ಯ. ಮಾತೃ ಹೃದಯದ ಕಂಪನ ಓದುಗರಲ್ಲಿ ತಲ್ಲಣಗೊಳಿಸುತ್ತದೆ. ಯುದ್ಧ ಸನ್ನಿವೇಶಗಳು, ಭಾತೃ ಸಂವೇದನೆ, ಪುಳಕಿತಗೊಳಿಸುತ್ತದೆ. ಒಟ್ಟಿನಲ್ಲಿ, ಕಾದಂಬರಿಯ ಹೆಸರು ಧ್ವನಿಪೂರ್ಣವಾಗಿದ್ದು, ಮದಕರಿನಾಯಕನ ಅಂತ್ಯದಲ್ಲಿ ನಾಡಿನ ದುರಂತವೇ ಅಡಗಿದೆ. ದುರ್ಗದ ಜನರ ಬದುಕಿನ ಪತನ, ಸ್ವಾರ್ಥಗಳ ಸಂಘರ್ಷಗಳಿಂದ ಜೀವನದ ಮೌಲ್ಯಗಳೇ ಅಸ್ತಂಗತವಾಗುತ್ತದೆ. ಈ ಕಥೆಯ ಮೂಲಕ ಜೀವನದ ಮೂಲ ಸಾರವಾದ ನಿಸ್ವಾರ್ಥ ಬದುಕಿನ ಮಾರ್ಗವನ್ನು ಸಹಜವಾಗಿ ಚಿತ್ರಿಸಿದ್ದಾರೆ. ಕೃತಿ ಓದಿದ ನನಗೆ ಉತ್ಪ್ರೇಕ್ಷೆಯ ಮಾತೂ ಕೂಡ ಮೌನವಾಗಿ ನಿಂತಂತಾಗಿದೆ. ಒಟ್ಟಿನಲ್ಲಿ, ಇತಿಹಾಸ ನೀರಸ ವರದಿಯಲ್ಲ. ನವರಸದಿಂದ ಮಿಂದ ಕಾವ್ಯಗಂಗೆ.
-ವತ್ಸಲ
ಚೆನ್ನಾಗಿದೆ ಪುಸ್ತಕ ಪರಿಚಯ
ತ.ರಾ.ಸು.ಅವರ ಐತಿಕಾದಂಬರಿಗಳೆಂದರೆ ನನಗಿಷ್ಟ.. ಇದನ್ನೂ ಓದಿರುವೆ..ಬಹಳ ಹಿಂದೆ. ಕಥೆಯನ್ನು ಮತ್ತೊಮ್ಮೆ ನೆನಪಿಸಿದಿರಿ..ಸೊಗಸಾದ ಪುಸ್ತಕ ಪರಿಚಯ.
ವಿಮರ್ಶೆ ಸಂಕ್ಷಿಪ್ತವಾಗಿದ್ದರೂ ಚೆನ್ನಾಗಿದೆ