ದಕ್ಷಿಣ ಆಫ್ರಿಕಾ: ಕಗ್ಗತ್ತಲ ಖಂಡವೋ ಅಥವಾ ದೇವರ ನಾಡೋ? ಪುಟ 7

Share Button

ಆದಿ ಮಾನವನ ತೊಟ್ಟಿಲು – (CRADLE OF HUMANS)
ನಮ್ಮ ಪ್ರವಾಸದ ಕೊನೆಯ ದಿನ. ನಮ್ಮ ನಿಮ್ಮೆಲ್ಲರ ತವರೂರನ್ನು ನೋಡೋಣವೇ. ದಕ್ಷಿಣ ಆಫ್ರಿಕಾವನ್ನು ‘ಆದಿ ಮಾನವನ ತೊಟ್ಟಿಲು’ ಎನ್ನುವರು. ನಮ್ಮಜ್ಜ, ನಿಮ್ಮಜ್ಜ, ಮುತ್ತಜ್ಜನ ಜನ್ಮಸ್ಥಳ ದಕ್ಷಿಣ ಆಫ್ರಿಕಾದಲ್ಲಿದೆ ಎಂದರೆ ನಂಬುವಿರಾ? ಸುಮಾರು ಎರಡು ಲಕ್ಷ ವರ್ಷಗಳ ಹಿಂದಿನ ಮಾತು. ಮೊಟ್ಟಮೊದಲ ಮಾನವ ಇಲ್ಲಿಯೇ ಹುಟ್ಟಿದ್ದು, ನಡೆದಾಡಿದ್ದು, ಮಾತನಾಡಿದ್ದು. ಅವನು ಅಂದು ತಾನು ವಾಸಿಸುತ್ತಿದ್ದ ಗುಹೆಗಳ ಗೋಡೆಗಳ ಮೇಲೆ ಬಿಡಿಸಿದ್ದ ಆಕೃತಿಗಳು – ಅವನ ಜೀವನ ಶೈಲಿ ಹಾಗೂ ಬದುಕನ್ನು ದಾಖಲಿಸಿವೆ. ಇಂತಹ ಹಲವಾರು ಗುಹೆಗಳನ್ನು ಇಲ್ಲಿ ಪ್ರಾಕ್ತನಶಾಸ್ತ್ರಜ್ಞರು ದಾಖಲಿಸಿದ್ದಾರೆ. ಮಾನವ ಜನಾಂಗದ ಬೇರು ಇಲ್ಲಿದ್ದರೆ ಇದರ ರೆಂಬೆ ಕೊಂಬೆಗಳು ಭೂಮಿಯ ಉದ್ದಗಲಕ್ಕೂ ಚಾಚಿಕೊಂಡಿವೆ.

ಜೊಹಾನ್ಸ್ ಬಗ್ ನಿಂದ ಐವತ್ತು ಕಿ.ಮೀ.ದೂರದಲ್ಲಿರುವ ‘ಆದಿ ಮಾನವನ ತೊಟ್ಟಿಲು’ಎಂಬ ಗುಹೆಗೆ ನಮ್ಮ ಪೂರ್ವಜರ ಇತಿಹಾಸ ತಿಳಿಯುವ ಕುತೂಹಲದಿಂದ ಹೋದೆವು. ‘ಯುನೆಸ್ಕೊ’ ದಿಂದ ‘ವಿಶ್ವದ ಸ್ಮಾರಕ’ ಎಂದು ಮಾನ್ಯತೆ ಪಡೆದಿರುವ ಈ ಸುಣ್ಣದ ಕಲ್ಲಿನ ಗುಹೆಗಳಲ್ಲಿ ನಮ್ಮ ಪೂರ್ವಜರ ಪಳೆಯುಳಿಕೆಗಳು ದೊರೆತಿವೆ. ‘ಹೋಮೋ ಎರೆಕ್ಟಸ್’ ನಿಂದ ವಿಕಾಸ ಹೊಂದಿ ‘ಹೋಮೋ ಸೆಪಿಯನ್’ ಆಗಿ ಮಾರ್ಪಾಡಾಗಿದ್ದ್ದು ಈ ರಂಗಮಂದಿರದಲ್ಲಿಯೇ. ಪ್ರಾಕ್ತನಶಾಸ್ತ್ರಜ್ಞರ ದಾಖಲೆಗಳ ಪ್ರಕಾರ ಹದಿನಾಲ್ಕು ಬಿಲಿಯನ್ ವರ್ಷಗಳ ಹಿಂದೆ ಈ ಜಗತ್ತಿನ ಸೃಷ್ಟಿಯಾಯಿತು. ಏಳರಿಂದ ಎಂಟು ಬಿಲಿಯನ್ ವರ್ಷಗಳ ಹಿಂದೆ ಜೀವ ಉದಯಿಸಿತು. ಹಾಗೂ ಎರಡರಿಂದ ಮೂರು ಬಿಲಿಯನ್ ವರ್ಷಗಳ ಹಿಂದೆ ಆದಿ ಮಾನವನ ವಿಕಾಸವಾಯಿತು. ಅಲ್ಲಿದ್ದ ಗೈಡ್ ಆ ಗುಹೆಯ ಪ್ರತಿಯೊಂದು ಭಾಗವನ್ನು ತೋರಿಸುತ್ತಾ, ಜಗತ್ತಿನ ಸೃಷ್ಟಿ, ಜೀವದ ಉಗಮ, ಮಾನವನ ವಿಕಾಸ ಹೀಗೆ ಎಲ್ಲದರ ಮಾಹಿತಿ ನೀಡಿದನು.

CRADLE OF HUMANS, AFRICA PC: Internet

ಜೀವ ವಿಕಾಸದ ಬಗ್ಗೆ ಸಂಶೋಧನೆ ನಡೆಸಿದ ವಿಜ್ಞಾನಿ ಚಾರ್ಲಸ್ ಡಾರ್ವಿನ್‌ನ ವಾದ ಏನೆಂದರೆ- ‘ಮಾನವನ ಹತ್ತಿರದ ಬಂಧುಗಳಾದ ಚಿಂಪಾನ್‌ಜೀ ಹಾಗೂ ಗೊರಿಲ್ಲಾಗಳ ಮೂಲ ವಾಸಸ್ಥಾನ ದಕ್ಷಿಣ ಆಫ್ರಿಕಾ ಆಗಿರುವುದರಿಂದ ಮಾನವನ ಉಗಮವೂ ಅಲ್ಲೇ ಆಗಿರಬಹುದು’. ಆದರೆ ನಂತರದ ದಿನಗಳಲ್ಲಿ ಸಂಶೋಧಕರು ಮಾನವನ ಉಗಮವು ಏಷ್ಯಾ ಅಥವಾ ಯುರೋಪ್ ಖಂಡಗಳಲ್ಲಿ ಆಗಿರಬಹುದು ಎಂಬ ವಾದವನ್ನು ಮಂಡಿಸಿದರು. 1924 ರಲ್ಲಿ ಒಂದು ವಿಶೇಷ ಘಟನೆ ನಡೆಯಿತು. ರೇಮಂಡ್ ಡಾರ್ಟ್ ಎಂಬ ಸಂಶೋಧಕ ಮದುವೆಗೆ ಹೋಗಲು ಪತ್ನಿಯೊಡನೆ ಸಿದ್ಧನಾಗಿ ನಿಂತಿರುತ್ತಾನೆ. ಆಗ ಸುಣ್ಣದ ಗಣಿಯಲ್ಲಿ ಕೆಲಸ ಮಾಡುತ್ತಿದ್ದವರು ಎರಡು ಪೆಟ್ಟಿಗೆಗಳನ್ನು ಅವನ ಮುಂದೆ ತಂದಿಡುತ್ತಾರೆ. ಅದನ್ನು ತೆರೆದು ನೋಡಿದವನಿಗೆ ಒಂದು ಅಚ್ಚರಿ ಕಾದಿರುತ್ತದೆ. ಒಂದು ಮಗುವಿನ ತಲೆಬುರುಡೆಯ ಪಳೆಯುಳಿಕೆ ಆ ಪೆಟ್ಟಿಗೆಯಲ್ಲಿ ಇರುತ್ತದೆ. ಆಗ ಡಾರ್ಟ್ -‘ಇದು ನನಗೆ ದೊರೆತ ಅತ್ಯುತ್ತಮ ಕ್ರಿಸ್‌ಮಸ್ ಉಡುಗೊರೆ’ ಎಂದು ಉದ್ಗಾರ ಮಾಡುತ್ತಾನೆ. ಇದಕ್ಕೆ ‘ಟ್ವಾಂಗ್’ ಎಂದೂ, ವೈಜ್ಞಾನಿಕವಾಗಿ ‘ಆಸ್ಟ್ರಲೋಪಿತಕಸ್ ಆಫ್ರಿಕಾನಸ್’- ಎಂದು ಹೆಸರಿಸುತ್ತಾನೆ. ಈ ತಲೆಬುರುಡೆಯು ಮೂರು ಅಥವಾ ನಾಲ್ಕು ವರ್ಷದ ಮಗುವಿನದೆಂದೂ ಹಾಗೂ ಒಂದು ಹದ್ದು ಆ ಮಗುವನ್ನು ತಿಂದು ಅವನ ತಲೆಬುರುಡೆಯನ್ನು ಆ ಗುಹೆಯಲ್ಲಿ ಬೀಳಿಸಿದೆ. ಈ ಪಳೆಯುಳಿಕೆ ಮೂರು ಮಿಲಿಯನ್ ವರ್ಷಗಳ ಹಿಂದಿನದು ಎಂಬ ವಾದವನ್ನು ಮಂಡಿಸುತ್ತಾನೆ. ಆದರೆ ಹಲವು ಸಂಶೋಧಕರು ಇವನನ್ನು ಅಪಹಾಸ್ಯ ಮಾಡುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಅವನ ವಾದವನ್ನು ಎಲ್ಲರೂ ಒಪ್ಪಲೇ ಬೇಕಾಗುತ್ತದೆ. ಕಾರಣ ಅಂತಹ ನೂರಾರು ಮಾನವನ ಪಳೆಯುಳಿಕೆಗಳು ಆ ಸುಣ್ಣದ ಕಲ್ಲಿನ ಗಣಿಗಳಲ್ಲಿ ದೊರೆಯುತ್ತವೆ. ಇಂತಹ ಪಳೆಯುಳಿಕೆಗಳು ಗ್ವಾಟೆಂಗ್ ಪ್ರಾಂತ್ಯದಲ್ಲಿ ದೊರೆತಿವೆ .ಶ್ರೀಮತಿ ಪ್ಲೆಸ್ ಮತ್ತು ಲಿಟಲ್ ಫುಟ್ ಎಂದು ಇವುಗಳಿಗೆ ಹೆಸರಿಸಿದ್ದಾರೆ. ಇಲ್ಲಿ ಹದಿಮೂರಕ್ಕೂ ಹೆಚ್ಚು ಗುಹೆಗಳಲ್ಲಿ ಸಂಶೋಧಕರು ಕೆಲಸ ಮಾಡುತ್ತಿದ್ದಾರೆ.

CRADLE OF HUMANS, AFRICA, Limestone caves PC: Internet

ಆದಿ ಮಾನವನು ಉಪಯೋಗಿಸುತ್ತಿದ್ದ ಕೆಲವು ಆಯುಧಗಳೂ ದೊರೆತಿವೆ. ಅಷ್ಟೇ ಅಲ್ಲ ಅವನು ಬೆಂಕಿಯನ್ನು ಮೊದಲಿಗೆ ಇಲ್ಲೇ ಉರಿಸಿದ ಎಂಬುದಕ್ಕೆ ಸಾಕ್ಷ್ಯಾಧಾರಗಳೂ ದೊರೆತಿವೆ. ದಕ್ಷಿಣ ಆಫ್ರಿಕ ಮಾನವನ ಉಗಮ ಸ್ಥಾನವಷ್ಟೇ ಅಲ್ಲ, ಅವನು ಪ್ರಗತಿ ಪಥದಲ್ಲಿ ಹೆಜ್ಜೆ ಮೂಡಿಸಿದ ಪವಿತ್ರ ತಾಣವೂ ಆಗಿದೆ. ಈ ಸ್ಥಳದ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ವಿವಿಧ ಬಗೆಯ ಸಸ್ಯಗಳ ಹಾಗೂ ಪ್ರಾಣಿಗಳ ಉಗಮ ಸ್ಥಾನವೂ ಆಫ್ರಿಕಾ ಖಂಡವೇ ಆಗಿದೆ.

ಈ ವಿವರಗಳನ್ನು ಕೇಳುತ್ತಾ ನಮಗೆ ಈ ಸುಣ್ಣದ ಕಲ್ಲಿನ ಗುಹೆ ಸೃಷ್ಟಿಕರ್ತನ ಆಲಯವಾಗಿ ಕಾಣತೊಡಗಿತು. ಅದರ ಛಾವಣಿಯಿಂದ ಕೆಲವು ಆಕಾರಗಳು ತೂಗುತ್ತಿದ್ದವು. ಕೆಲವು ಆಕಾರಗಳು ಭೂಮಿಯ ಮೇಲೆ ಬಿದ್ದ ಮಿನರಲ್ಸ್‌ನಿಂದ ಆಗಿದ್ದವು. ಇವುಗಳಿಗೆ ‘ಸ್ಟಾಲಕ್‌ಟೈಟ್’ (Stalactite).ಹಾಗೂ ‘ಸ್ಟಾಲಗ್‌ಮೈಟ್’ (Stalagmite).ಎನ್ನುವರು. ನಾವು – ಇಲ್ಲೊಂದು ಹಾವು ತೂಗಾಡುತ್ತಿದೆ, ಇದರ ಆಕಾರ ಗಣಪತಿಯಂತಿದೆ, ಇದು ಶಿವಲಿಂಗದಂತಿದೆ ಎಂದು ಉದ್ಗಾರ ಮಾಡುತ್ತಿದ್ದರೆ ಆ ಗೈಡ್ ಬೈಬಲ್ಲಿನಲ್ಲಿ ಬರುವ ದೇವತೆಗಳ ಹಾಗೂ ದೆವ್ವಗಳ ಹೆಸರು ಹೇಳುತ್ತಿದ್ದ. ಅದಕ್ಕೇ ತಿಳಿದವರು ಹೇಳುವುದು – ನೋಡುವುದಕ್ಕೂ, ಕಾಣುವುದಕ್ಕೂ ತುಂಬಾ ಅಂತರವಿದೆ. ನೋಡುವುದು ಕೇವಲ ಬಾಹ್ಯ ಕಣ್ಣುಗಳಿಂದ ಆಗುವ ಕ್ರಿಯೆ. ಆದರೆ ಕಾಣುವುದು ಅಂತರ್ ದೃಷ್ಟಿಯಿಂದ ಮೂಡುವ ಒಂದು ಭಾವ.
ಅವರವರ ಭಾವಕ್ಕೆ, ಅವರವರ ಭಕುತಿಗೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ

ದಕ್ಷಿಣ ಆಫ್ರಿಕ ಕೆಲವರಿಗೆ ಕಗ್ಗತ್ತಲ ಖಂಡವಾಗಿ ಕಂಡರೆ ಮತ್ತೆ ಕೆಲವರಿಗೆ ದೇವರ ನಾಡಾಗಿ ಕಾಣುತ್ತದೆ. ಇದು ನನ್ನ ಅನುಭವಕ್ಕೆ ದಕ್ಕಿದ ಮಾಹಿತಿ. ನಿಮಗೆ ಏನನ್ನಿಸುವುದೋ ಗೊತ್ತಿಲ್ಲ.

(ಮುಗಿಯಿತು)

ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ :  http://surahonne.com/?p=32831

-ಡಾ.ಗಾಯತ್ರಿದೇವಿ ಸಜ್ಜನ್

9 Responses

  1. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿತ್ತು ಪ್ರವಾಸ ಕಥನ especially ಈ ಭಾಗ ಇಂಟೆರೆಸ್ಟಿಂಗ್ ಅನ್ನಿಸಿತು.

  2. Hema says:

    ಅಪರೂಪದ ಪ್ರವಾಸಕಥನ ಬಹಳ ಕೌತುಕಮಯವಾಗಿ, ಸೊಗಸಾಗಿ ಓದಿಸಿಕೊಂಡು ಹೋಯಿತು. ಧನ್ಯವಾದಗಳು

  3. Manjularaju Raju says:

    ಆಪ್ರಿಕಾ ಕುರಿತು ಕನ್ನಡದಲ್ಲಿ ಅಪರೂಪದ ಕುತೂಹಲ ದ ಲವಲವಿಕೆಯ ಬರಹ

  4. ಶಂಕರಿ ಶರ್ಮ says:

    ಆಫ್ರಿಕಾ ಖಂಡವನ್ನು ಸುತ್ತಿಸಿದ ತಮ್ಮ ಪ್ರವಾಸ ಕಥನ ಬಹಳ ಚೆನ್ನಾಗಿದೆ. ತಮ್ಮ ಲೇಖನಿಯಿಂದ ಇನ್ನೂ ಚಂದದ ಲೇಖನಗಳ ನಿರೀಕ್ಷೆಯಲ್ಲಿ…ಧನ್ಯವಾದಗಳು.

  5. ನಾಗರತ್ನ ಬಿ. ಅರ್. says:

    ಅಪರೂಪದ ಪ್ರವಾಸ ಕಥನ ಚನ್ನಾಗಿ ಮೂಡಿ ಬಂತು. ಧನ್ಯವಾದಗಳು ಮೇಡಮ್.

  6. Padma Anand says:

    ಪ್ರತಿಯೊಂದು ಕಂತೂ ಕುತೂಹಲದಿಂದ ಓದಿಸಿಕೊಳ್ಳುತ್ತಾ ಉಪಯುಕ್ತ ಮಾಹಿತಿಗಳನ್ನು ನೀಡಿತು. ಸೊಗಸಾದ ಪ್ರವಾಸ ಕಥನ ನೀಡಿದ್ದಕ್ಕಾಗಿ ಅಭಿನಂದನೆಗಳು ತಮಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: