ಹೀಗೊಂದು ಬಾಲ್ಯದ ಆಟ
ಬೆಳಿಗ್ಗೆ ಏಳುತ್ತಿದ್ದ ಹಾಗೆಯೇ ಬಾಲ್ಯದಲ್ಲಿ ನಾವಾಡುತ್ತಿದ್ದ ಒಂದು ಆಟದ ನೆನಪಾಯಿತು. ಮೊಬೈಲ್, ದೂರದರ್ಶನ ಇಲ್ಲದ ಕಾಲ. ಪಾಠದ ಜೊತೆ ಆಟಗಳಿಗೇನು ಕಡಿಮೆ ಇರಲಿಲ್ಲ. ಒಟ್ಟಿನಲ್ಲಿ ಸಮೃದ್ಧ ಬಾಲ್ಯ ಕಳೆದ ಅದೃಷ್ಟವಂತರು ನಾವೆಂದು ಎದೆ ತಟ್ಟಿ ಹೇಳಬಹುದು. ಇದ್ದುದರಲ್ಲಿಯೇ ತೃಪ್ತಿಪಟ್ಟುಕೊಂಡು, ಅದಕ್ಕೆ ತಕ್ಕುದಾದ ಹಲವು ಆಟಗಳು. ಕಲ್ಲಾಟ, ಪಲ್ಲೆಯಾಟ, ಲಗೋರಿ ಆಟ,…ಇದೆಲ್ಲಾ ಆಡಿ ಸುಸ್ತಾಗುವಾಗ ಕುಳಿತುಕೊಂಡು ಮೆದುಳಿಗೆ ಮೇವು ಕೊಡುವ ಪದ ಬಂಧ, ಮೋಜಿನ ಗಣಿತ, ಪದಗಳ ಅಂತ್ಯಾಕ್ಷರಿ, ಹಾಡುಗಳ ಅಂತ್ಯಾಕ್ಷರಿ, ವ್ಯಕ್ತಿ/ವಸ್ತು/ಪ್ರಾಣಿ/ಪಕ್ಷಿ/ಹೂವು/ ಇತ್ಯಾದಿಗಳ ಹೆಸರು ಬರೆಯುವ ಆಟಗಳಿದ್ದವು. ಹೀಗೆ ಆಟಗಳನ್ನು ಆಡುತ್ತಾ ಖುಷಿ ಖುಷಿಯಾಗಿ ದಿನಗಳನ್ನು ಕಳೆಯುತ್ತಿದ್ದೆವು. ಸುಮ್ಮನೇ ಕಾಲ ಹರಣ ಮಾಡುತ್ತಲೇ ಇರಲಿಲ್ಲ. “ಬೋರ್” ಅಂದರೇನೆಂದೇ ಗೊತ್ತಿರದ ದಿನಗಳು.
ನಾವಾಡುತ್ತಿದ್ದ ಹೆಸರು ಬರೆಯುವ ಆಟದ ಬಗ್ಗೆ ಈ ಲೇಖನ. ಪ್ರತಿಯೊಂದು ವಸ್ತು- ಸಜೀವವಿರಲಿ, ನಿರ್ಜೀವವಿರಲಿ ಆ ವಸ್ತುವನ್ನು ಗುರುತಿಸಲು ಅದಕ್ಕೊಂದು ನಿರ್ದಿಷ್ಟ ಪದದಿಂದ ಕರೆಯುವೆವು ತಾನೇ? ಒಂದು ರೀತಿ ನೋಡಿದರೆ ಎಲ್ಲಾ ವಸ್ತುಗಳಿಗೂ ಒಂದು ನಾಮಕರಣ ಆಗಿರುತ್ತದೆ. ನಮಗೆಷ್ಟು ವ್ಯಕ್ತಿ/ವಸ್ತು/ಪ್ರಾಣಿ/ಪಕ್ಷಿ/ಹೂವುಗಳ ಹೆಸರು ಗೊತ್ತಿದೆ ಅನ್ನುವುದನ್ನು ಒರೆಗೆ ಹಚ್ಚುವಂತಹ ಆಟ. ಈ ಆಟ ಯಾರು ಹೇಳಿಕೊಟ್ಟದ್ದು ಅಂತ ನೆನಪಿಲ್ಲ. ಆದರೆ ತುಂಬಾ ಸಲ ಆಡುತ್ತಿದ್ದ ನೆನಪಿದೆ. ಬೇಸಿಗೆ ರಜೆಯಲ್ಲಿ ಬಂಧುಗಳ ಮಕ್ಕಳೆಲ್ಲಾ ಒಟ್ಟಿಗೆ ಸೇರಿದಾಗಲೂ ಆಡುತ್ತಿದ್ದೆವು. ಈ ಆಟಕ್ಕೆ ಬೇಕಾದುದು ಕನಿಷ್ಟ ಇಬ್ಬರು, ಗರಿಷ್ಟ ಎಷ್ಟು ಜನರು ಬೇಕಾದರೂ ಇರಬಹುದು. ಈ ಆಟ ಆಡಲು ಬೇಕಾದುದು ಇಷ್ಟೇ: ಪುಸ್ತಕದ ಒಂದು ಹಾಳೆ, ಪೆನ್ನು ಅಥವಾ ಪೆನ್ಸಿಲ್ ಮತ್ತು ಮುಖ್ಯವಾಗಿ ಯೋಚಿಸಲು ತಲೆ!
ಮೊದಲಿಗೆ ಆಟದಲ್ಲಿ ಭಾಗಿಯಾಗುವ ಎಲ್ಲರೂ ಅವರವರ ಹಾಳೆಯಲ್ಲಿ ಒಂದು ಕೋಷ್ಟಕ ತಯಾರಿಸಿ ಆ ಆಟದಲ್ಲಿ ಸೇರಿಸಿಕೊಳ್ಳುವ ವಿಷಯಗಳ ಪಟ್ಟಿ ಮಾಡಬೇಕು. ಆ ಆಟದಲ್ಲಿ ಸೇರಿಸಿಕೊಳ್ಳುವ ವಿಷಯಗಳು ಅಂದರೆ ವ್ಯಕ್ತಿ, ಪ್ರಾಣಿ, ಸ್ಥಳ, ತರಕಾರಿ, ಹಣ್ಣು, ಮರ, ಪಕ್ಷಿ, ವಸ್ತು ಮುಂತಾದುವುಗಳು. ಈ ಆಟದಲ್ಲಿ ಸೇರಿಸಿಕೊಳ್ಳಲು ಇಷ್ಟಪಡುವ ವಿಷಯಗಳನ್ನು ಪಟ್ಟಿ ಮಾಡಿಕೊಂಡರಾಯಿತು (ಒಟ್ಟಿಗೆ ಕೊಟ್ಟಿರುವ ಚಿತ್ರದಲ್ಲಿ ಗಮನಿಸಬಹುದು).
ಅನಂತರ ಕಾಗದದ ಸಣ್ಣ ಸಣ್ಣ ಚೀಟಿ ಮಾಡಿ, ಆ ದಿನ ಆಟದಲ್ಲಿ ಬಳಸಲು ಉದ್ದೇಶಿಸಿಕೊಂಡಿರುವ ಕೆಲವು ಅಕ್ಷರಗಳನ್ನು ಬರೆದು ಮಡಚಿ ಇಟ್ಟುಕೊಳ್ಳುವುದು. ಈ ಚೀಟಿಗಳು ಆಯ್ಕೆಗಾಗಿ, ಒಂದು ರೀತಿ ಹೇಳಬೇಕೆಂದರೆ ಸಂಭಾವ್ಯ ಜಗಳವನ್ನು ತಪ್ಪಿಸಲಿಕ್ಕಾಗಿ. “ನಿನಗೆ ಬೇಕಾದ ಅಕ್ಷರ ಕೊಟ್ಟಿದ್ದೀಯಾ” ಅಂತ ಯಾರೂ ಮತ್ತೆ ಹೇಳುವ ಹಾಗಿಲ್ಲ. ಯಾವ ಅಕ್ಷರದಿಂದ ಶುರುವಾಗುವ ಹೆಸರುಗಳನ್ನು ಬರೆಯಬೇಕು ಅನ್ನುವುದನ್ನು ಚೀಟಿ ಎತ್ತಿ ನಿರ್ಧಾರ ಮಾಡುವ ಪಾರದರ್ಶಕ ವ್ಯವಸ್ಥೆ! ಒಂದು ಅಕ್ಷರದಿಂದ ಶುರುವಾಗುವ ಹೆಸರುಗಳನ್ನು ಬರೆಯಲು ಸಮಯಾವಕಾಶವನ್ನು ಕೂಡಾ ನಿಗದಿಪಡಿಸಿಕೊಳ್ಳುತ್ತಿದ್ದೆವು.
ಸರಿ, ಆಟ ಶುರುವಾಗುತ್ತಿತ್ತು. ಚೀಟಿ ಎತ್ತುವಾಗ “ಕ” ಅಕ್ಷರ ಬಂತು ಅಂತಿಟ್ಟುಕೊಳ್ಳೋಣ. ಆಗ ವ್ಯಕ್ತಿಯ ಹೆಸರು-ಕಮಲ, ಪ್ರಾಣಿ- ಕರಡಿ, ತರಕಾರಿ- ಕುಂಬಳಕಾಯಿ, ಪಕ್ಷಿ- ಕೆಂಬೂತ, ಹಣ್ಣು- ಕದಳಿ ಬಾಳೆ ಹಣ್ಣು, ಗಿಡ- ಕರವೀರ, ಸ್ಥಳ- ಕಾರ್ಕಳ,... ಹೀಗೆ ಅವರವರಿಗೆ ನೆನಪು ಬಂದ ಹೆಸರು ಬರೆ ಯುವುದು. ಮುಂದಿನ ಅಕ್ಷರದ ಚೀಟಿ ಎತ್ತುವ ಮೊದಲು, ಕೊಟ್ಟ ಅಕ್ಷರಕ್ಕೆ ಯಾರು ಯಾರು ಏನು ಬರೆದಿದ್ದಾರೆ ಅಂತ ಪರಾಮರ್ಶಿಸಿ, ಅಂಕಗಳನ್ನು ಕೊಡುವ ಕ್ರಮ ಕೂಡಾ ನಮ್ಮ ಆಟದಲ್ಲಿತ್ತು. ಬರೆದ ಪ್ರತಿ ಹೆಸರಿಗೆ, ಹತ್ತು ಅಂಕ ಅಂತ ನಿಗದಿ ಮಾಡಿದ್ದರೆ, ನಿಗದಿಪಡಿಸಿದ ಅಂಕಗಳನ್ನು ಹಾಕುತ್ತಿದ್ದೆವು. ಒಂದು ವೇಳೆ ಇಬ್ಬರು ಒಂದೇ ಹೆಸರನ್ನು ಬರೆದಿದ್ದರೆ, ಆ ಶಬ್ದಕ್ಕೆ ಪೂರ್ತಿ ಅಂಕ ಕೊಡದೆ, ತಲಾ ಐದು ಅಂಕ, ಮೂವರು ಒಂದೇ ಹೆಸರನ್ನು ಬರೆದಿದ್ದರೆ ಮೂರು ಅಂಕ, ನಾಲ್ವರು ಒಂದೇ ರೀತಿ ಬರೆದಿದ್ದರೆ ಎರಡೂವರೆ ಅಂಕ! ಹೀಗೆ ಆಟ ಮುಂದುವರಿಯುತ್ತಿತ್ತು. ಆ ದಿನದ ಆಟಕ್ಕೆ ನಿಗದಿಪಡಿಸಿದ ಅಕ್ಷರಗಳೆಲ್ಲವೂ ಖಾಲಿ ಆದ ನಂತರ ಪ್ರತಿಯೊಬ್ಬರೂ ಪಡೆದ ಅಂಕಗಳನ್ನು ಕೂಡಿಸಿ ಅಂತಿಮ ಮೊತ್ತವನ್ನು ಹೇಳಬೇಕು. ಅತಿ ಹೆಚ್ಚು ಅಂಕ ಗಳಿಸಿದವರು ಅಂದಿನ ಆಟದ ವಿಜೇತರು.
ಯಾವುದಾದರೂ ಹೆಸರು ನೆನಪಿಗೆ ಬರದೆ ಬರೆಯದಿದ್ದರೆ ಅಂಕ ತಪ್ಪಿ ಹೋಗುವ ಭೀತಿ. ಹಾಗೆಯೇ ಸಾಮಾನ್ಯವಾಗಿ ನೆನಪಿಗೆ ಬರುವ ಪದಗಳನ್ನೇ ಬರೆದರೆ ಅಂಕ ಕಡಿಮೆ ಆಗುವುದು ಅಂತ ಆದಷ್ಟು ಕಡಿಮೆ ಬಳಕೆ ಆಗುವ ಪದಗಳನ್ನು ಬರೆಯುವ ಪೈಪೋಟಿ ನಮ್ಮೊಳಗೆ ನಡೆಯುತ್ತಿತ್ತು. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ, ಶಬ್ದಕೋಶ ಚೆನ್ನಾಗಿ ಗೊತ್ತಿದ್ದರೆ ಮಾತ್ರ ಆಟದಲ್ಲಿ ಗೆಲ್ಲಲು ಸಾಧ್ಯ. ಹಾಗೆಯೇ ಆಟದಲ್ಲಿ ಇನ್ನೊಬ್ಬರು ಬರೆದುದನ್ನು ನೋಡಿ, ಗೊತ್ತಿಲ್ಲದ ಶಬ್ದಗಳನ್ನು ಕಲಿತುಕೊ ಳ್ಳುವ ಅವಕಾಶ. ಆಟದೊಂದಿಗೆ ಕಲಿಕೆಯೂ ಜೊತೆಯಾಗುವುದು ಮಾತ್ರವಲ್ಲ, ಮುಂದಿನ ಸಲ ಆಟವಾಡುವಾಗ ನಾನು ಕೂಡಾ ಗೆಲ್ಲಬೇಕು ಅನ್ನುವ ಉಮೇದಿನಿಂದ ಗೊತ್ತಿಲ್ಲದ ಹೊಸ ಪದಗಳನ್ನು ಹುಡುಕಿ ಕಲಿಯುವ ಪ್ರಯತ್ನವೂ ಸಾಗುತ್ತಿತ್ತು. ಒಟ್ಟಿನಲ್ಲಿ ಆಟದ ಜೊತೆ, ಸಮಯವೂ ಸರಿಯುವಂತಹ, ಕಲಿಕೆಗೂ ಸಹಾಯವಾಗುವಂತಹ ಇಂತಹ ಹಲವು ಆಟಗಳು ನಮ್ಮ ಜೊತೆಯಾಗಿದ್ದವು. ನಮಗೆ ಎಷ್ಟು ಆಂಗ್ಲ ಭಾಷಾ ಪದಗಳು ಗೊತ್ತಿವೆ ಅಂತ ಆ ಆಟಗಳನ್ನು ಆಡಿ ಆಂಗ್ಲ ಭಾಷಾ ಶಬ್ದ ಭಂಡಾರವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆವು.
ಸರ್ವಕಾಲಕ್ಕೂ ಅನ್ವಯವಾಗುವ ಆಟಗಳಿವು. ಆಟದ ನಿಯಮಗಳನ್ನು ಬದಲಾಯಿಸುತ್ತಿದ್ದರೆ ಆಯಿತು. ಕಷ್ಟ ಬೇಕಾದರೆ ಕಷ್ಟ, ಸುಲಭ ಬೇಕಾದರೆ ಸುಲಭ. ಹೆತ್ತವರು ಸಣ್ಣ ಮಕ್ಕಳ ಶಬ್ದಭಂಡಾರ ಯಾವ ಮಟ್ಟದಲ್ಲಿದೆ ಅನ್ನುವುದನ್ನು ತಿಳಿಯಲು ಈ ಆಟವನ್ನು ಆಡಿಸಬಹುದು. ಈ ಆಟವನ್ನು ನೀವೆಲ್ಲರೂ ಕೂಡಾ ಆಡಿರಬಹುದು ಅಂತ ನನ್ನ ಭಾವನೆ. ಹೌದಾದರೆ ಹೌದೆನ್ನಿ!
-ಡಾ. ಕೃಷ್ಣಪ್ರಭ ಎಂ, ಮಂಗಳೂರು
Very nice article madam
Thank you Aruna madam
ನಿಮ್ಮ ಲೇಖನ ಓದಿದೆ ಕೂಡಲೇ ನಮ್ಮ ಬಾಲ್ಯದ ದಿನಗಳತ್ತ ಓಡಿತು ನಮ್ಮ ಚಿತ್ತ.ಈಗ ಅದೇ ಹಳೇ ತಂತ್ರಗಳನ್ನು ಬಳಸಿಕೊಂಡು ಹೊಸದಾಗಿ ನಾವೇ ಕಂಡುಹಿಡಿದವರೆಂದು ಬೀಗುತ್ತಿರುವ ಇಂದಿನ ವರಿಗೆ ಏನು ಹೇಳೋಣ.. ಒಂದೆ ರೌಂಡು ಉದಾಹರಿಸುವುದಾದರೆ. ನ ಯಿಂದ ಕೊನೆಗೊಳ್ಳಬೇಕು.. ಅದಕ್ಕಾಗಿ ಕೆಲವು ಸೂಚನೆಗಳನ್ನು ಕೊಟ್ಟಿರುತ್ತಾರೆ ಅದಕ್ಕಾಗಿ ಸರ್ಕಸ್ಸು ಮಾಡಿ ಮಾಡಿ ದಣಿಯುತ್ತಾರೆ.. ಏಕೆಂದರೆ ಅವರು ಶಬ್ದ ಭಂಡಾರ.
ಅಷ್ಟೇ.. ಒಟ್ಟಿನಲ್ಲಿ ಮುಂದೆ ಕೊಟ್ಟ ಲೇಖನ ಚೆನ್ನಾಗಿದೆ ಮೂಡಿ ಬಂದಿದೆ ಮೇಡಂ.
ಆಗ ಪೆನ್ನು/ಪೆನ್ಸಿಲು ಮತ್ತು ಪುಸ್ತಕದ ಮೂಲಕ ಆಟ. ಈಗ ಮೊಬೈಲ್ ಮೂಲಕವೇ ಎಲ್ಲವೂ. ನಿಮ್ಮ ಬಿಚ್ಚು ಮನಸ್ಸಿನ ಅನಿಸಿಕೆಗೆ ಧನ್ಯವಾದಗಳು ಮೇಡಂ
ನಾವೂ ಹೆಚ್ಚು ಕಡಿಮೆ ಹೀಗೆ ಇರುವ ಆಟ ಆಡುತ್ತಿದ್ದೆವು. ಕೆಲವೊಮ್ಮೆ ಸಮಾನ ಪದ, ವಿರುದ್ದ ಪದ ಬರೆಯುವ ಆಟವೂ ಇತ್ತು. ಉದಾ: ಗುಡ್ಡ-ಬೆಟ್ಟ, ಹಗಲು-ಇರುಳು .
ಕೆರೆ-ದಡ, ಕಳ್ಳ-ಪೋಲೀಸ್, ಹುಲಿ-ದನ ಅಂತ ಅತ್ತಿತ್ತ ಲಾಗ ಹಾಕಿರಲಿಲ್ವಾ? ಹಳೆಯದನೆಲ್ಲಾ ನೆನಪಿಸಿದ ಚೆಂದದ ಬರಹ .
ಪ್ರತಿಯೊಂದು ವಸ್ತುವಿನಲ್ಲೂ ಆಟ ಹುಡುಕುತ್ತಿದ್ದೆವು. ಗೇರು ಬೀಜ ಕುಟ್ಟುವ ಆಟ, ಚಗಟೆ ಕೋಡಿನಲ್ಲಿ ಕೋಳಿ ಜಗಳ, ಕುಂಟಲದ ಎಲೆಯಲ್ಲಿ ಪೀಪೀ, ಹಿಡಿಸೂಡಿ ಕಡ್ಡಿಯಲ್ಲಿ, ಐಸ್ಕ್ಯಾಂಡಿ ಕಡ್ಡಿಯಲ್ಲಿ ಕಡ್ಡಿ ಆಟ, …… ಒಟ್ಟಿನಲ್ಲಿ ಸದಾ ಕ್ರಿಯಾಶೀಲರಾಗಿರುತ್ತಿದ್ದೆವು. ಮೆಚ್ಚುಗೆಗೆ ಧನ್ಯವಾದಗಳು ಅಕ್ಕ
ಆಪ್ತ ಬರಹ. ಸವಿ ನೆನಪುಗಳು ಈಗ ಮನಸಿನ ತುಂಬಾ.
ಹೌದು. ಮೊಗೆದಷ್ಟೂ ಮುಗಿಯದ ಸವಿ ನೆನಪುಗಳು. ಧನ್ಯವಾದಗಳು ನಯನಾ
ಆಡಿದ್ದೇವೆ ಮಾತ್ರವಲ್ಗ ಈಗ್ಲೂ ಮೊಮ್ಮಕ್ಳ ಜತೆ ಆಡ್ತಾ ಇದ್ದೇನೆ ,ನಗ್ಬೇಡಿ
ಹೌದಾ? ನಿಜವಾಗಿಯೂ ಈ ವಿಷಯ ತಿಳಿದು ಸಂತಸವಾಯಿತು
ಹೌದಾ? ನಿಜವಾಗಿಯೂ ಈ ವಿಷಯ ತಿಳಿದು ಸಂತಸವಾಯಿತು
ಬಾಲ್ಯದ ಆಟ, ಆ ಹುಡುಗಾಟ..ಎಂದೂ ಕೆಡಿಸಿಲ್ಲ.
ಕಲಿತದ್ದೆ ಎಲ್ಲಾ.. ❤️
ಹೌದು..ಆಟವಾಡುತ್ತಲೇ ಜೀವನದ ಪಾಠ ಕಲಿತು ದೊಡ್ಡವರಾಗಿ, ಈಗ ಕಳೆದ ಬಾಲ್ಯದ ನೆನಪಿಸಿಕೊಳ್ಳುವುದು ಮಾತ್ರ ನಮಗೆ ಸಾಧ್ಯ
ಮೊದಲಿನ ಒಳಾಂಗಣ, ಹೊರಾಂಗಣ ಆಟಗಳೆಲ್ಲಾ ಶರೀರಕ್ಕೆ, ಮನಸ್ಸಿಗೆ ಒಳ್ಳೆ ವ್ಯಾಯಾಮ ಒದಗಿಸುತ್ತಿದ್ದುವು. ಕಲ್ಲಾಟ, ಚೆನ್ನೆಮಣೆ, ಕವಡೆ, ಜುಬುಲಿ…ಎಲ್ಲಾ. ಚಂದದ ಬರಹ.
ಹೌದು….ಎಷ್ಟೆಲ್ಲಾ ಆಟಗಳನ್ನು ಆಡಿದ ಸಮೃದ್ಧ ಬಾಲ್ಯ ನಮ್ಮದು…ಮೆಚ್ಚುಗೆಗೆ ಧನ್ಯವಾದಗಳು ಅಕ್ಕ
ಹೌದು ಪ್ರಭಾ ನಾವೂ ಆಡುತ್ತಿದ್ದೆವು …ಚಂದದ ಬರಹ
ಮತ್ತೆ ಬಾಲ್ಯಕ್ಕೆ ಹೋದೆನೇ ಅನ್ನಿಸಿತು..
ನೀವು ನಿಮ್ಮ ಪುಳ್ಳಿಗಳ ಜೊತೆ ಬಾಲ್ಯಕ್ಕೆ ಹೋಗಬಹುದು ಅಕ್ಕ
ಶಬ್ಧಕೋಶ ಹಿಗ್ಗಿಸುವ, ಬುದ್ದಿಗೆ ಕಸರತ್ತು ನೀಡುವ, ನಾವೂ ಆಡಿರುವ ಆಟದ ವರ್ಣನೆ ಬಾಲ್ಯಕ್ಕೆ ಕರೆದೊಯ್ಯಿತು. ನನ್ನೊಂದಿಗೆ ಆಡುತ್ತಿದ್ದ ಹಲವಾರು ಗೆಳತಿಯರ ಫೋನ್ ನಂಬರ್ ಹುಡುಕಿ ಮಾತನಾಡುವಷ್ಟು ಮುದ ನೀಡಿತು ಲೇಖನ. ಅಭಿನಂದನೆಗಳು.
ನಿಮ್ಮ ಪ್ರತಿಕ್ರಿಯೆ ಮನಸ್ಸಿಗೆ ಮುದ ನೀಡಿತು…ಲೇಖನ ಬರೆದಿದ್ದಕ್ಕೆ ಮನದಲ್ಲಿ ಸಾರ್ಥಕ ಭಾವ
ಒಟ್ಟಿನಲ್ಲಿ ಎಲ್ಲರನ್ನೂ ಒಂದು ಸುತ್ತು ಬಾಲ್ಯಕ್ಕೆ ಕರೆದುಕೊಂಡು ಹೋಗಿ ಬಂದ ಹಾಗಿದೆ,,,ಹೀಗೆ ಉತ್ತಮ ಲೇಖನಗಳು ಹೆಚ್ಚು ಬರುತ್ತಿರಲಿ.