*ಆ ಪ್ರಶ್ನೆ*

Share Button

A teacher is a teacher, mother, guide, philosopher and a psychologist ಎಂಬ ಮಾತಿದೆ. ಹೌದು ಈ ಎಲ್ಲ ಪಾತ್ರಗಳನ್ನು ಉಪಾಧ್ಯಾಯ ವೃತ್ತಿಯಲ್ಲಿದ್ದವರು ಸಂದರ್ಭಕ್ಕೆ ತಕ್ಕಂತೆ ಧರಿಸಬೇಕಾಗುತ್ತದೆ.

ಪ್ರಾಥಮಿಕ ತರಗತಿಯಲ್ಲಿ ಮಕ್ಕಳಿಗೆ ಶಿಕ್ಷಕಿಯ ಮಾತೇ ವೇದ ವಾಕ್ಯ. ತಮ್ಮ ಶಿಕ್ಷಕಿ‌ ಸರ್ವಜ್ಞಳು. ಅವಳೇ ಆದರ್ಶ, ಅನುಕರಣೀಯ.  ಆಕೆ ಒಬ್ಬ ಏಂಜಲ್.  ಆದ್ದರಿಂದ ಶಿಕ್ಷಕ ವೃತ್ತಿಯಲ್ಲಿರುವವರು ತಮ್ಮ  ಮಾತು ಕತೆ ನಡೆ ನುಡಿ, ವ್ಯವಹಾರ ಎಲ್ಲದರಲ್ಲೂ ತುಂಬಾ ತುಂಬಾ ಎಚ್ಚರಿಕೆಯಾಗಿರಬೇಕು. ಇಲ್ಲದಿದ್ದರೆ ಮಕ್ಕಳಿಗೆ ತಪ್ಪು ಸಂದೇಶ ರವಾನೆಯಾಗುವುದು ಖಂಡಿತಾ. ಕಲಿಸುವುದರಲ್ಲಿ‌  ಆಸಕ್ತಿ‌, ಪ್ರಾಮಾಣಿಕತೆ,  ಶ್ರದ್ಧೆ, ಕಲಿಸುವ ವಿಷಯಗಳ ತಲಸ್ಪರ್ಶಿಯಾದ ಅರಿವು, ಸ್ನೇಹಮಯ ಮಾತೃಹೃದಯ ಜೊತೆಗೇ ಬಿಗಿಯಾಗಿರಬೇಕಾದ ಕಡೆ ಬಿಗಿಯ ನಡೆ… ಒಂದೇ ಎರಡೇ ಶಿಕ್ಷಕ ವೃತ್ತಿಗೆ ಬೇಕಾದ ಗುಣಗಳೇ ಬೇರೆ.‌ ಎಳೆಯ ಮಕ್ಕಳಿಗೆ ಬೆರಗು ಕುತೂಹಲ ಜಾಸ್ತಿ‌. ಅವರ ಪುಟ್ಟ ಮುಗ್ಧ ಮನಸ್ಸಿನಲ್ಲಿ ಏಳುವ ಪ್ರಶ್ನೆಗಳೂ ವೈವಿಧ್ಯಮಯ. ನಿಮ್ಮ ಮನೆಗಳಲ್ಲೂ ನಿಮಗೆ ಅದರ ಅನುಭವ ಇರುತ್ತದೆ. ಕೆಲವೊಮ್ಮೆ ನಮಗೆ ಉತ್ತರಿಸಲು‌ ತೋಚದಂತಹ ಪ್ರಶ್ನೆಗಳೂ ಮಕ್ಕಳ‌ ಮನಸ್ಸಿನಲ್ಲಿ‌ ಏಳುವುದುಂಟು.

ಮೂರನೆಯ ತರಗತಿಯಲ್ಲಿದ್ದ ಆ ಬಾಲೆ ಗುಂಡು ಮುಖದ ಬಟ್ಟಲು ಕಂಗಳ ಗುಂಗುರು ಕೂದಲ ಪುಟ್ಟ ಹುಡುಗಿ. ಸಾಕಷ್ಟು ಸ್ಥಿತಿವಂತರ ಮನೆಯ ಮಗಳು. ಸ್ವಲ್ಪ ಮೊಂಡುತನ ಜಾಸ್ತಿ. ನನ್ನನ್ನು ಕಂಡರೆ ಪ್ರಾಣ. ಮನೆಯಲ್ಲಿ ನಾಗರತ್ನ ಮಿಸ್‌ನ ಬಗ್ಗೆ ಮಾತು ಬಿಟ್ಟರೆ ಅವಳಿಗೆ ಬೇರೆ ಜಗತ್ತೇ ಇಲ್ಲ ಎನ್ನುವಂತೆ.

ಒಂದು‌ ದಿನ ದುಗುಡ ತುಂಬಿದ ಮುಖದಿಂದ ಶಾಲೆಗೆ ಬಂದಾಗ ನನಗೆ ತುಂಬಾ ಆಶ್ಚರ್ಯವಾಯಿತು. ಕೆನ್ನೆಯ ಮೇಲೆ ಬೆರಳ ಗುರುತು. ನ‌ನ್ನ ಕರುಳೇ ಚುರುಗುಟ್ಟಿದಂತಾಗಿ *ಯಾಕೇ ಪುಟ್ಟಿ ಏನಾಯಿತು?* ಎಂದು ವಾತ್ಸಲ್ಯದಿಂದ ಕೇಳಿದ್ದೇ ತಡ ಅವಳ ಅಳುವಿನ ಅಣೆಕಟ್ಟೆಯೊಡೆಯಿತು. ನನ್ನನ್ನು ತಬ್ಬಿಕೊಂಡು *ಮಿಸ್ ನಮ್ಮಮ್ಮ ಕೆಟ್ಟೋರು. ನಂಗೆ ತುಂಬಾ ಹೊಡೆದುಬಿಟ್ರು* ಎಂದು ಭೋರೆಂದು ಅಳತೊಡಗಿದಳು.

ಅವಳನ್ನು ಮೃದುವಾಗಿ ಅಪ್ಪಿಕೊಂಡು, *ಯಾಕೆ ಹೊಡೆದ್ರು? ನೀನೇನ್ಮಾಡ್ದೆ ಪುಟ್ಟೀ?* ಎಂದು ಮೃದುವಾಗಿ ಕೇಳಿದೆ. ಏನೋ‌ ತಪ್ಪು ಮಾಡಿ ಹೊಡೆಸಿಕೊಂಡು ಬಂದು ಅಮ್ಮನ ಮೇಲೆ ದೂರು ಹೇಳುವ ಸಂಗತಿ ಹೊಸತೇನಾಗಿರಲಿಲ್ಲವಾದ್ದರಿಂದ ಸ್ವಲ್ಪ ನಗುಬರುವಂತಾಗಿತ್ತು.
*ನಾನೇನೋ ಕೇಳ್ದೆ. ಅದಕ್ಕೆ ಹೊಡೆಬಿಟ್ರು ಮಿಸ್* ಎಂದಳು ಬಿಕ್ಕುತ್ತಾ.
* ಹೊಡೆಯೋ ಅಂತ ಪ್ರಶ್ನೆ ನೀನೇನ್ ಕೇಳ್ದೆ ಪುಟ್ಟಿ?* ಎಂದು ಅನುನಯದಿಂದ ಕೇಳಿದೆ. ಅವಳ ಅಳುವ ಮುದ್ದು ಮುಖವೂ ಸೊಗಸೆನಿಸುತ್ತಾ‌ ಪ್ರೀತಿ ಉಕ್ಕಿಸುತ್ತಿತ್ತು.

* ಮಕ್ಳು ಹೇಗೆ ಹುಟ್ತಾರೆ ಅಂತ ಕೇಳ್ದೆ ಮಿಸ್. ಮೊದ್ಲು ಅಮ್ಮ ನನ್‌ ಪ್ರಶ್ನೆ ಕೇಳಿಸ್ಕೊಳ್ಳೇ ಇಲ್ಲಾ. ನಾನು ಬಿಡ್ತೀನಾ??.. ಅಮ್ಮನ ಸೀರೆ ಜಗ್ಗಿ ಮತ್ತೆ ಮತ್ತೆ ಕೇಳ್ದೆ ಮಿಸ್. ಅದಕ್ಕೆ  “ನಡೀ ಆಚೆ. ಇನ್ನೊಂದ್ಸಲ ಕೇಳಿದ್ರೆ ಬಾರಿಸಿ ಬಿಡ್ತೀನಿ” ಅಂದ್ರು.
“ನಾನು ಯಾಕೆ ಕೇಳ್ಬಾರ್ದು?? ಮಕ್ಳು ಹೇಗೆ ಹುಟ್ತಾರೆ ನೀನು ಹೇಳ್ಲೇ ಬೇಕು ಅಂತ ಹಠ ಹಿಡ್ದೆ ಮಿಸ್., ಸ್ಕೂಲ್ಗೆ ಹೊತ್ತಾಗ್ತಿದೆ ಹೊರಡೇ*. ಅಂತ ಬೆನ್ನಿಗೆ ಜೋರಾಗಿ ಗುದ್ದಿದ್ರು ಮಿಸ್. ನಂಗೆ ಸಿಟ್ ಬಂದು, “ನಿಂಗೇನೂ ಗೊತ್ತಿಲ್ಲ ಅದಕ್ಕೆ‌ ಹೊಡಿತೀಯ ನಮ್ಮ ನಾಗರತ್ನಾ ಮಿಸ್ಗೆ ಕೇಳ್ತೀನಿ‌. ಅವರ್ಗೆ ಎಲ್ಲಾ ಗೊತ್ತಿರುತ್ತೆ ಅವ್ರು ಮಕ್ಳು‌ಹೇಗೆ ಹುಟ್ತಾರೆ ಅಂತ ಹೇಳೇಹೇಳ್ತಾರೆ* ಅಂದೆ ಮಿಸ್.

ಅದಕ್ಕೆ “ನಾಚಿಕೆಟ್ಟೋಳೆ ನಿಮ್ಮ ಮಿಸ್ಗೆ ಹಾಗಂತ ಕೇಳಿ ನಮ್ಮ ಮರ್ಯಾದೆ ಕಳೀಬೇಡ. ಹುಷಾರ್” ಅಂತ ಕೆನ್ನೆಗೇ ಟಪಾರನೆ ಹೊಡೆದು ಬಿಟ್ರು ಮಿಸ್. ನಿಮಗೆಲ್ಲಾ ಗೊತ್ತಿರುತ್ತೆ ನೀವೇ ಹೇಳಿ ಮಿಸ್* ಎಂದು ಇಷ್ಟನ್ನು ನಡು ನಡುವೆ ಬಿಕ್ಕುತ್ತಾ ಹೇಳಿದಳು.

ಕೇಳಿ ನನ್ನ ಎದೆ ಧಸಕ್ಕೆಂದಿತು. *ಆಗ ನಾನಿನ್ನೂ ಅವಿವಾಹಿತೆ*. ಅದು 70 ರ ದಶಕದ ಕಡೆಯ ಭಾಗ. ನಾನು ಸಣ್ಣ ಊರಿನ ಮಧ್ಯಮವರ್ಗ ಕುಟುಂಬದ ಹೆಣ್ಣು ಮಗಳು‌. ಸತ್ಯವಾಗಿಯೂ ಹೇಳಬೇಕೆಂದರೆ ನನಗೇ ವೈವಾಹಿಕ ಜೀವನ ಇತ್ಯಾದಿಗಳ ಬಗ್ಗೆ ಏನೂ ತಿಳುವಳಿಕೆಯೇ ಇರಲಿಲ್ಲ ಎಂದರೂ ನಡೆದೀತು. ಚಿಕ್ಕವಯಸ್ಸಿನಿಂದ ಆಟೋಟ, ಹಾಡು, ಚರ್ಚಾಸ್ಪರ್ಧೆ, ಚಿತ್ರಕಲೆ, ತೋಚುತ್ತಿದ್ದ ಸಾಹಿತ್ಯ ರಚನೆ ;– ಸಮವಯಸ್ಕರು, ಚಿಕ್ಕ ಮಕ್ಕಳು ಇವರನ್ನು ಗುಂಪುಗೂಡಿಸಿಕೊಂಡು ಕಥೆ ಹೇಳೋದು, ಮಕ್ಕಳಿಗೆ ಹಾಡು ಕಲಿಸೋದು, ನಾಟಕ ರಚಿಸಿ ಮಾಡಿಸೋದು, ಕರಕುಶಲವಸ್ತುಗಳ ತಯಾರಿಕೆ ಇತ್ಯಾದಿ ಇತ್ಯಾದಿ ಇತ್ಯಾದಿ……… ಮತ್ತು ಉಪಾಧ್ಯಾಯಿನಿಯಾದ ಮೇಲೆ ಇವುಗಳ ಜೊತೆಗೆ ಪಾಠ ಪ್ರವಚನ ಇದರಲ್ಲಿಯೇ ಮುಳುಗಿದ್ದವಳು.

ನನಗೇ ಸರಿಯಾದ ಜ್ಞಾನವಿರದ ನಾನು ಅದನ್ನು ಎಲ್ಲಿಂದ ಯಾರಿಂದ ಹೇಗೆ ತಿಳಿದುಕೊಳ್ಳಲಿ. ಹೇಗೆ ಹೇಳಲಿ? ತಲೆ ಗಿಮ್ಮೆನ್ನತೊಡಗಿತು. ಆದರೆ ಅಪಾರವಾದ ಅಸ್ಖಲಿತ ನಂಬಿಕೆಯಿಂದ ಆ ಬಾಲೆ ಕೇಳುತ್ತಿರುವಾಗ ನಾನೂ ಅವರಮ್ಮನಂತೆ ಗದರಿಸಿ ಅಥವಾ ಏಟು ಬಿಗಿದು ಬಾಯಿ ಮುಚ್ಚಿಸಲು ಸಾಧ್ಯವೇ? ಹಾಗೆ ಮಾಡಿದರೆ ಮಗುವಿನ ಮನಸ್ಸು ಒಡೆದು ಹೋಗುವುದಿಲ್ಲವೇ? ಹೊಡೆದು ಹೆದರಿಸಿದ ತಕ್ಷಣ ಪ್ರಶ್ನೆ ಅಲ್ಲಿಗೇ ಸತ್ತುಹೋಗುತ್ತದೆಯೇ? ಮುಗ್ಧ ಬಾಲೆ ಛಲ ಬಿಡದೆ ಇನ್ಯಾರನ್ನೋ ಕೇಳದಿರುತ್ತಾಳೆಯೇ????

ನನ್ನನ್ನು, ಅವಿವಾಹಿತಳನ್ನು‌ ಇವಳು ಇದೇನು ಕೇಳಿಬಿಟ್ಟಳು!!?? ವಿವಾಹಿತರಿಗೂ ಉತ್ತರಿಸಲು ಮುಜುಗರವಾಗಬಹುದಾದ ಪ್ರಶ್ನೆಗೆ ನಾನೇನು ಹೇಳಬಹುದು!??? ಭಯವಾಯಿತು!. ಸಧ್ಯಕ್ಕೆ ಹೇಗಾದರೂ ಸಮಾಧಾನ ಮಾಡಿ,  ನಿಧಾನವಾಗಿ ಉತ್ತರಿಸುವೆನೆಂಬ ಭರವಸೆ ಕೊಟ್ಟು ಅವಳ ಜಾಗಕ್ಕೆ ಕಳಿಸುವುದು. ಬೀಸುವ ದೊಣ್ಣೆ ತಲೆ ತಪ್ಪಿದರೆ ಸಾವಿರ ವರ್ಷ ಆಯುಸ್ಸು ತಾನೇ? ಆಮೇಲೆ ನೋಡೋಣ. ಕ್ರಮೇಣ ಮರೆಯಲೂ ಬಹುದು ಎನಿಸಿ *ಆಯಿತು ಪುಟ್ಟಿ ಹೇಳ್ತೀನಿ. ನೋಡಿಲ್ಲಿ ಎಷ್ಟೊಂದು ನೋಟ್ ಬುಕ್  ಕರೆಕ್ಷನ್‌ ಮಾಡೋದು ಇದೆ. ಈಗ‌ ಟೈಮಿಲ್ಲ. ನಿಧಾನವಾಗಿ ಹೇಳ್ತೀನಿ. ನಿನ್ನ ಜಾಗಕ್ಕೆ ಹೋಗು ಮರಿ* ಎಂದು ರಮಿಸಿ ಕಳಿಸಿದೆ.

ಕ್ರಮೇಣ ತನ್ನ ಪ್ರಶ್ನೆಯನ್ನೇ ಮರೆಯಬಹುದು, ಮರೆಯಲಿ ಎಂಬ ನನ್ನ ನಿರೀಕ್ಷೆ, ಅಪೇಕ್ಷೆ ಎರಡೂ ಹುಸಿಯಾಯಿತು. ತನ್ನ ಪ್ರಶ್ನೆಗೆ ಉತ್ತರ ಪಡೆಯಲೇಬೇಕೆಂದು ಪಟ್ಟು ಹಿಡಿದವಳಂತೆ ದಿನಾ ಕೇಳತೊಡಗಿದಳು.   ನಾನೂ ಸಬೂಬುಗಳನ್ನು ಹುಡುಕಿ ಹುಡುಕಿ ಉತ್ತರಿಸಬೇಕಾದ ಸಂದಿಗ್ಧ ಘಳಿಗೆಯನ್ನು ಮುಂದೂಡುತ್ತಾ ಬರುತ್ತಿದ್ದೆ. ಹೌದು. ನಾನಾದರೂ ಎಲ್ಲಿಂದ ಯಾರಿಂದ ತಿಳಿದುಕೊಳ್ಳಲಿ???. ವಿವಾಹಿತರು ಬೇಕಾದಷ್ಟು ಬಂಧುಗಳು ಗೆಳತಿಯರಿದ್ದರೂ ಅವರನ್ನು ಕೇಳಲು ಸಾಧ್ಯವೇ???

ಬಸ್ ಸ್ಟಾಂಡಿನ ಬುಕ್ ಸ್ಟಾಲ್ನಲ್ಲಿ ನಾವು ಕೊಳ್ಳಬಹುದಾದ ಹಲವಾರು‌ ವೈವಿಧಮಯ ಪುಸ್ತಕಗಳ ಜೊತೆ ಲೈಂಗಿಕ ಸಾಹಿತ್ಯದ ಪುಸ್ತಕಗಳೂ ಇರುತ್ತಿದ್ದರೂ ಮಧ್ಯಮವರ್ಗದ ಮನೆಯ ಯುವತಿ, ಅದೂ ಮಕ್ಕಳಿಗೆ ಪಾಠ ಕಲಿಸುವ ಶಿಕ್ಷಕಿ ಅಂತಹ ಪುಸ್ತಕಗಳನ್ನು ಕೊಳ್ಳುವುದಿರಲಿ,  ಆ ಕಾಲದಲ್ಲಿ ಹರಿಹರದಂತಹ ಅತೀ ಪುಟ್ಟ ಊರಿನಲ್ಲಿ ಅಂತಹ ಪುಸ್ತಕಗಳ ಮೇಲೆ ಕಣ್ಣು ಹಾಯಿಸುವುದೂ ನಮಗೆ‌ ಸಾಧ್ಯವಿರಲಿಲ್ಲ. ಹಾಗಾದರೆ ಏನು ಮಾಡಲಿ???

ನನಗೆ ಗೊತ್ತಿದ್ದ ಹೈಸ್ಕೂಲು  ವಿದ್ಯಾರ್ಥಿಗಳಿಂದ ಅವರ ಜೀವ ಶಾಸ್ತ್ರದ ಪಠ್ಯ ಪುಸ್ತಕಗಳನ್ನು ಪಡೆದು ಕಣ್ಣಾಡಿಸಿದೆ. ಪ್ರಯೋಜನವೆನಿಸಲಿಲ್ಲ.  ಪುಟ್ಟ ಬಾಲೆಯ ಕುತೂಹಲದ ಪ್ರಶ್ನೆ ಉತ್ತರಕ್ಕಾಗಿ ಪಟ್ಟು ಹಿಡಿದು ಕೂತಿತ್ತು. ತನ್ನ ಅಚ್ಚುಮೆಚ್ಚಿನ ನಾಗರತ್ನ ಮಿಸ್ ಖಂಡಿತಾ ಉತ್ತರ ಹೇಳುತ್ತಾರೆ ಎಂಬ ಅತೀವ ವಿಶ್ವಾಸದಿಂದ  ಕಾಯುತ್ತಲೇ‌ ಇದ್ದಳು. ನನಗೂ ದಿಕ್ಕು ‌ತೋಚದಂತಾಗಿ ಅವಳ ಪ್ರಶ್ನೆ ನನ್ನ ನಿದ್ದೆಗೆಡಿಸುತ್ತಿತ್ತು.

ಕಡೆಗೆ ಒಂದು ದಿನ  ದಾವಣಗೆರೆಯ ಮೆಡಿಕಲ್ ಕಾಲೇಜಿಗೆ ಹೋದೆ. ಅಂತೂ ಇಂತೂ ಒಬ್ಬ ಸೀನಿಯರ್ ಹುಡುಗಿಯ ಪರಿಚಯ ಮಾಡಿಕೊಂಡು ಬಹಳ ಸಂಕೋಚದಿಂದ ನನ್ನ ಸಮಸ್ಯೆ ತಿಳಿಸಿದೆ. ಆಕೆ ಮೊದಲಿಗೆ ಗೊಳ್ಳೆಂದು‌ ಜೋರಾಗಿ ನಕ್ಕು ಬಿಟ್ಟರೂ, ನಂತರ ಬಹಳ ಸಹೃದಯತೆಯಿಂದ ನನ್ನ ಸಮಸ್ಯೆ ಬಗೆಹರಿಸುವಂತೆ‌ ಮೆಡಿಕಲ್ ಪುಸ್ತಕ ತೋರಿಸಿ ವಿವರಿಸುತ್ತಿದ್ದರೆ ನಾನು ಸಂಕೋಚದಿಂದ ಮುದುಡಿ ಹೋಗುತ್ತಿದ್ದೆ.  ಆ ಬಾಲೆಯ ಕುತೂಹಲದ ಪ್ರಶ್ನೆಗೆ ಉತ್ತರವನ್ನಂತೂ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೆ.

ಆದರೆ ಆದರೆ ಆದರೆ … ಆ ಮಗುವಿನ  ಕುತೂಹಲ ತಣಿಸಿ ಕೆಟ್ಟ ಕುತೂಹಲ ಮೂಡದಂತೆ ಇದನ್ನು ನಿಭಾಯಿಸುವ ಪರಿ ಹೇಗೆ??? ವಿಜ್ಞಾನ ಗಣಿತದ ಶಿಕ್ಷಕಿಯಾಗಿದ್ದ  ನನಗೀಗ ಅವಳ ಪ್ರಶ್ನೆಗೆ ಶುದ್ಧ ವೈಜ್ಞಾನಿಕವಾಗಿ  ಉತ್ತರಿಸುವ ಮಹತ್ತರವಾದ ಮತ್ತು‌ ಅತ್ಯಂತ ಕಠಿಣವಾದ ಜವಾಬ್ದಾರಿ ನನ್ನ ಮೇಲಿತ್ತು.

ಬಹಳ‌ ಬಹಳ ಯೋಚಿಸಿದೆ. ಕಡೆಗೆ ಒಂದೆರಡು ದಿನ ಹೇಗೆ ಹೇಳಬೇಕು ಎಂಬುದನ್ನು ಕೂಲಂಕುಷವಾಗಿ ರಿಹರ್ಸಲ್ ಮಾಡಿಕೊಂಡೆ. ಅವಳಿಂದ ಮತ್ತೆ ಬರಬಹುದಾದ ಪ್ರಶ್ನೆಗಳನ್ನೂ ಊಹಿಸಿಕೊಂಡು ಅವಕ್ಕೂ ಉತ್ತರ ಸಿದ್ಧ ಮಾಡಿಕೊಂಡೆ.
ಅಂತೂ ಇಂತೂ ಆ ಪುಟ್ಟ ಜಿಜ್ಞಾಸುವಿನ ಪ್ರಶ್ನೆಗೆ ತೃಪ್ತಿಯಾಗುವಂತೆ ಸೂಕ್ಷ್ಮದಲ್ಲಿಯೇ ಆದರೆ ಮತ್ತೆ ಹೊಸ ಪ್ರಶ್ನೆಗಳೇಳದಂತೆ ಉತ್ತರಿಸುವಲ್ಲಿ‌ ಜಯಶೀಲಳಾಗಿದ್ದೆ.

*ಹೌದಾ.. ಮೀಸ್?!!! ನಂಗೊತ್ತೇ…ಇರ್ಲಿಲ್ಲಾ*  ಎಂದು ಮುಖವನ್ನೇ ಆಶ್ಚರ್ಯಸೂಚಕ ಚಿಹ್ನೆಯಾಗಿಸಿ ಕಣ್ಣುಗಳನ್ನು ಕಮಲದಂತೆ ಅರಳಿಸಿ ಅವಳು ಮುಗ್ಧತೆಯ ಪರಾಕಾಷ್ಠೆಯಿಂದ ನುಡಿದಾಗ ಉಕ್ಕಿ ಬಂದ ನಗುವನ್ನು ತಡೆಯಲು‌ ಸಾಧ್ಯವಿತ್ತೇ??

ಮಿಸ್, ನೀವು ತುಂಬಾ ಒಳ್ಯೋರು. I love you miss ಎಂದು ಆ ಬಾಲೆ ನನ್ನನ್ನು ಅಪ್ಪಿ ಕೆನ್ನೆಗೆ  ಹೂ  ಮುತ್ತನ್ನಿಕ್ಕಿದಾಗ…… .ಅತ್ಯಂತ ಕಠಿಣವಾದೊಂದು ಪರೀಕ್ಷೆಯಲ್ಲಿ ತೇರ್ಗಡೆಯಾದ ಧನ್ಯತೆಯ ನಿರಾಳದ ನಿಟ್ಟುಸಿರು ಬಿಟ್ಟೆ.

– ರತ್ನ

5 Responses

  1. Samatha.R says:

    ಹೌದು ಶಿಕ್ಷಕರಾಗಿ ಕೆಲಸ ಮಾಡುವುದು, ಅತ್ಯಂತ ಸವಾಲಿನ ಕೆಲಸವೇ ಸರಿ,ಅದರಲ್ಲೂ ಇಂತಹ ಪೇಚಿನ ಪ್ರಶ್ನೆಗಳಿಗೆ ಉತ್ತರಿಸುವುದು ಇನ್ನೂ ದೊಡ್ಡ ಸವಾಲು.ಆದರೆ ಸರಿಯಾದ ರೀತಿಯಲ್ಲಿ ಉತ್ತರಿಸುವುದು ನಮ್ಮ ಕರ್ತವ್ಯ. ಇಲ್ಲದೇ ಹೋದರೆ ಬೇರೆ ಯಾವುದಾದರೂ ಅನಾರೋಗ್ಯಕರ,ಅಪಾಯಕರ ದಾರಿಗಳ ಉತ್ತರಕ್ಕಾಗಿ ಮಕ್ಕಳು ಹಿಡಿದರೆ ಅಪಾಯ…as being a teacher I can relate myself with this write up…well written mam..

  2. ನಯನ ಬಜಕೂಡ್ಲು says:

    ಇಲ್ಲಿ ಮಕ್ಕಳ ಮನಸ್ಸನ್ನು ಅರಿತು ಅವರೊಡನೆ ಬೆರೆಯುವ ಶಿಕ್ಷಕಿ ಬಹಳ ಇಷ್ಟವಾದ್ರು. ಮಕ್ಕಳ ಮನಸ್ಸು ಹಸಿ ಮಣ್ಣಿನ ಮುದ್ದೆ ಇದ್ದಂತೆ ಅದಕ್ಕೆ ಒಳ್ಳೆಯ ಆಕಾರ ಕೊಡುವುದು ಗುರುವಿನ ಕೈಯಲ್ಲಿ ಇದೆ. ಮಕ್ಕಳು ಮನೆಯಲ್ಲಿ ಹೆತ್ತವರ ಮಾತನ್ನು ನಂಬುವುದಕ್ಕಿಂತ ಹೆಚ್ಚಾಗಿ ಗುರುವನ್ನು ನಂಬುತ್ತಾರೆ, ಹಾಗಾಗಿ ಒಂದು ಗುರುತರವಾದ ಜವಾಬ್ದಾರಿ ಗುರುವಿನ ಮೇಲಿರುತ್ತದೆ.

  3. ಬಿ.ಆರ್.ನಾಗರತ್ನ says:

    ಗುರುತರವಾದ ಜವಾಬ್ದಾರಿ ನಿರ್ವಹಿಸಲು ಎಲ್ಲರಿಗೂ ಬರುವುದಿಲ್ಲ ಹಾಗೂ ಅದರ ಬಗ್ಗೆ ಅಷ್ಟೊಂದು ಯೋಚಿಸಲೂ ಹೋಗುವುದಿಲ್ಲ ತಮ್ಮ ಅನುಭವದ ಬುತ್ತಿ ಯಿಂದ ಹೊರಬರುತ್ತಿರುವ ಮುಗ್ದ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಎದುರಿಸುತ್ತಿರುವ ಸಮಸ್ಯೆಗಳಿಗೆ ನೀವು ಪರಿಹರಿಸಿದರೀತಿ ಬಹಳ ಚೆನ್ನಾಗಿದೆ ಮೇಡಂ ಇದಕ್ಕೆ ನನ್ನ ದೊಂದು ನಮಸ್ಕಾರ.

  4. Padma Anand says:

    ಶಿಕ್ಷಕಿಯ ಸವಾಲುಗಳು ಮತ್ತು ಜವಾಬ್ದಾರಿಯನ್ನು ನಿರೂಪಿಸುವ ಸೊಗಸಾದ ಲೇಖನ. ಬದ್ಧತೆಯಿದ್ದಲ್ಲಿ ಎಲ್ಲಕ್ಕೂ ಪರಿಹಾರವಿರುತ್ತದೆ ಎಂಬಂತೆ ನಡೆದುಕೊಂಡ ನಿಮ್ಮ ವ್ಯಕ್ತಿತ್ವ ಅನುಕರಣೀಯ. ಅಭಿನಂದನೆಗಳು

  5. ಶಂಕರಿ ಶರ್ಮ says:

    ಶಿಕ್ಷಕಿಯಾಗಿ, ಅವರಿಗಿರುವ ಸೂಕ್ಷ್ಮವಾದ ಜವಾಬ್ದಾರಿಗಳನ್ನು ತಿಳಿಸುವ ಲೇಖನ ಬಹಳ ಚೆನ್ನಾಗಿದೆ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: