ಬಿಡಲಾಗದ ಚಾಳಿಗಳು…
ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದ್ದ ದಿನಗಳು. ಪರೀಕ್ಶಾ ವ್ಯವಸ್ಥೆಯಲ್ಲಿ ಕೆಲವು ಹೊಸ ಬದಲಾವಣೆಗಳಿದ್ದವು. ಏನೇನು ಬದಲಾವಣೆಗಳಾಗಿವೆ ಅಂತ ಪರೀಕ್ಷೆಯ ಉಸ್ತುವಾರಿ ಹೊತ್ತಿದ್ದ ಉಪನ್ಯಾಸಕರು ವಿವರಿಸುತ್ತಿದ್ದರು. ಅದನ್ನು ಅರ್ಥೈಸಿಕೊಂಡ, ಸಹೋದ್ಯೋಗಿಯೊಬ್ಬರು ತನಗೆ ತಿಳಿದ ವಿಷಯವನ್ನು ಮರುದಿನ ಇನ್ನು ಕೆಲವರಿಗೆ ವಿವರಿಸುತ್ತಿದ್ದರು. ಹಾಗೆ ವಿವರಿಸುವಾಗ, ಧರಿಸಿದ್ದ ಮುಖಕವಚವನ್ನು ಸರಿಸಿ, ತನ್ನ ಬೆರಳನ್ನು ನಾಲಿಗೆಗೆ ಮುಟ್ಟಿಸಿ ಅಂದರೆ ಎಂಜಲು ತಾಗಿಸಿ ವಿವರಿಸುವುದನ್ನು ಕಂಡಾಗ “ಅಯ್ಯೋ, ಈ ಕೊರೋನಾ ಕಾಲದಲ್ಲೂ ಇವರಿಗೆ ತನ್ನ ಚಾಳಿ ಬಿಡಲಾಗುತ್ತಿಲ್ಲವಲ್ಲ” ಅಂತ ಮನಸ್ಸಿಗೆ ಖೇದವಾಯಿತು. ಅಲ್ಲಿಯೇ ಮನಸ್ಸಿಗೆ ಹೊಳೆದ ಶಿರೋನಾಮೆ “ಬಿಡಲಾಗದ ಚಾಳಿಗಳು”.
ಚಾಳಿ ಅಂದರೇನು? ಚಾಳಿ ಅನ್ನುವ ಶಬ್ದಕ್ಕೆ ಅಭ್ಯಾಸ, ಪರಿಪಾಠ, ರೂಢಿ, ವಾಡಿಕೆ, ಸಂಪ್ರದಾಯ, ಬಳಕೆ, ಪದ್ಧತಿ, ಆಚರಣೆ, ಚಟ, ನಡವಳಿಕೆ ಮುಂತಾದ ನಾನಾರ್ಥಗಳಿದ್ದರೂ ಆಡುಭಾಷೆಯಲ್ಲಿ ಚಾಳಿ ಅನ್ನುವ ಪ್ರಯೋಗವನ್ನು ನಿಯಮಿತವಾಗಿ ಮೈಗೂಡಿಸಿಕೊಂಡ ಕೆಟ್ಟ ಅಭ್ಯಾಸವನ್ನು ಧ್ವನಿಸಲು ಬಳಸುವರು. ಒಳ್ಳೆಯ ಚಾಳಿ, ಒಳ್ಳೆಯ ಚಟ ಅಂತ ಯಾರೂ ಶಬ್ದಪ್ರಯೋಗ ಮಾಡುವುದಿಲ್ಲ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಅನ್ನುವ ಗಾದೆಯೂ ಪ್ರತಿಧ್ವನಿಸುವುದು ಕೆಟ್ಟ ಚಾಳಿಯನ್ನೇ ಹೊರತು, ಒಳ್ಳೆಯ ಅಭ್ಯಾಸವನ್ನಲ್ಲ.
ಉಗುರು ಕಚ್ಚುವುದು, ಮೂಗಿನ ಹೊಳ್ಳೆಯೊಳಗೆ ಬೆರಳು ತೂರಿಸುವುದು, ತಲೆ ಕೆರೆಯುವುದು, ಪುಸ್ತಕದ ಪುಟಗಳನ್ನು ಮಗುಚುವಾಗ ಬೆರಳಿನ ತುದಿಯನ್ನು ನಾಲಿಗೆಗೆ ಮುಟ್ಟಿಸುವುದು, ಸುಮ್ಮನೆ ಕುಳಿತಿದ್ದಾಗ ಕಾಲುಗಳನ್ನು ಅಲ್ಲಾಡಿಸುವುದು, ಸದಾ ಸಿಡಿಮಿಡಿಗುಟ್ಟುವುದು, ಕಾರಣವಿಲ್ಲದೇ ವಾಚಾಮಗೋಚರ ಬೈಯ್ಯುವುದು, ಸಣ್ಣ ಮಕ್ಕಳನ್ನು ಬೇಕೆಂದೇ ಗೋಳು ಹುಯ್ದುಕೊಳ್ಳುವುದು,…. ಇತ್ಯಾದಿ. ಯಾರು ಎಷ್ಟೇ ಬೈದರೂ, ತಮಾಷೆ ಮಾಡಿದರೂ, ಬುದ್ಧಿ ಹೇಳಿದರೂ ರೂಢಿಸಿಕೊಂಡಿರುವ ಚಾಳಿಗಳನ್ನು ಬಿಟ್ಟುಬಿಡಲು ಸುತರಾಂ ಸಿದ್ಧವಿಲ್ಲದಂತಹ ಮನಸ್ಥಿತಿ. ಕೆಲವು ತರದ ಚಾಳಿಗಳಿಂದ ಬೇರೆಯವರಿಗೆ ಉಪದ್ರವಿರುವುದಿಲ್ಲ, ಆದರೆ ನೋಡಲು ಅಸಹ್ಯ ಕಾಣುತ್ತದೆ. ಮೈಗೂಡಿಸಿಕೊಂಡ ಚಾಳಿಗಳೇ ಕಾರಣವಾಗಿ, ನಗೆಪಾಟಲಿಗೀಡಾಗುವವರಿದ್ದಾರೆ. ಹಾಗೆಯೇ ಅಡ್ಡ ಹೆಸರಿನಿಂದ ಕರೆಸಿಕೊಳ್ಳಲ್ಪಡುವವರೂ ಇದ್ದಾರೆ.
ಮೊದಲೇ ಹೇಳಿದಂತೆ ಪುಸ್ತಕದ ಪುಟ ತಿರುವಲು, ನಾಲಿಗೆಗೆ ಬೆರಳ ತುದಿ ತಾಗಿಸುವ ಚಾಳಿ ಹಲವರಿಗಿದೆ. ವಿದ್ಯಾರ್ಥಿಗಳು ಯಾರಾದರೂ ಆ ರೀತಿ ಮಾಡುವುದನ್ನು ಕಂಡರೆ ನಾನು ಹೇಳುವುದುಂಟು “ಪುಸ್ತಕ ಅಂದರೆ ಶಾರದಾಮಾತೆ. ಭಕ್ತಿಯಿಂದ ಪೂಜಿಸುವ ವಿದ್ಯಾದೇವತೆ. ದೇವರಿಗೆ ಎಂಜಲು ಮುಟ್ಟಿಸುವುದು ಸರಿಯೇ? ಬೇಡ ಬಿಡಿ, ನೀವು ದೇವರನ್ನು ನಂಬುವುದಿಲ್ಲ ಎಂದು ಇಟ್ಟುಕೊಳ್ಳೋಣ, ನಿಮ್ಮ ಪುಸ್ತಕವನ್ನು ಇನ್ನೊಬ್ಬರು ಕೇಳಿದರೆ ಕೊಡುತ್ತೀರಿ, ಆರೋಗ್ಯದ ದೃಷ್ಟಿ, ಸ್ವಚ್ಛತೆಯ ದೃಷ್ಟಿಯಿಂದಲಾದರೂ ಆಲೋಚನೆ ಮಾಡಿ” ಅಂತ. ಆದರೆ ಹೆಚ್ಚಿನವರು ತಮ್ಮನ್ನು ತಾವು ಬದಲಾಯಿಸಿಕೊಳ್ಳುವುದೇ ಇಲ್ಲ. ಆ ರೀತಿ ಮಾಡುವವರನ್ನು ಕಂಡಾಗ ಅಸಹ್ಯ ಅನಿಸಿದರೂ, ಅದನ್ನು ಗಮನಿಸದಂತೆ ಇದ್ದುಬಿಡಬೇಕಾಗುವ ಸಂದರ್ಭಗಳೇ ಜಾಸ್ತಿ.
ಇನ್ನು ಕೆಲವರಿಗೆ ವಿಪರೀತ ಮಾತನಾಡುವ ಚಾಳಿ. ಯಾರಾದರೂ ಎದುರು ಸಿಕ್ಕಿದರೆ ಸಾಕು ಬೈರಿಗೆ ಕೊರೆಯಲು ಶುರು ಹಚ್ಚಿಕೊಳ್ಳುತ್ತಾರೆ. ನಿಲುಗಡೆಯಿಲ್ಲದ ವೇಗದೂತ ಬಸ್ಸಿನಂತೆ ಇವರ ಮಾತುಗಳು! ತಮ್ಮ ಮಾತಿನಿಂದಲೇ ವಿಮಾನ ಹತ್ತಿಸಿಬಿಡುವ ಚಾಕಚಕ್ಯತೆ ಇವರದು. ಅಂತಹವರಿಗೆ ಮಾತನಾಡದಿದ್ದರೆ ಏನನ್ನೋ ಕಳೆದುಕೊಂಡ ಅನುಭವ. ಕೆಲವರಿಗೆ ಇನ್ನೊಂದು ರೀತಿಯ ಚಾಳಿ– ಅದೆಂದರೆ ಅವರು ಎಷ್ಟು ಬೇಕಾದರೂ ಮಾತನಾಡುತ್ತಾರೆ, ಅವರ ಮಾತನ್ನು ಎಲ್ಲರೂ ಕೇಳಬೇಕು, ಆದರೆ ಅವರು ಯಾರ ಮಾತುಗಳನ್ನು ಕೇಳಿಸಿಕೊಳ್ಳಲು ಸಿದ್ಧರಿರುವುದಿಲ್ಲ.
ಹಾಗಾದರೆ ಈ ಚಾಳಿಗಳನ್ನು ಬಿಡಲು ಸಾಧ್ಯವಿಲ್ಲವೇ? ಮನಸ್ಸು ಮಾಡಿದರೆ ಕೆಟ್ಟ ಚಾಳಿಗಳನ್ನು ಬಿಡಲು ಸಾಧ್ಯ. ನನ್ನ ವಿದ್ಯಾರ್ಥಿನಿಯೊಬ್ಬಳು ನೆನಪಿಗೆ ಬರುತ್ತಿದ್ದಾಳೆ. ದಿನಾಲೂ ಉಗುರು ಕಚ್ಚಿ, ಕೈ ಬೆರಳುಗಳನ್ನು ಗಾಯಗೊಳಿಸಿಕೊಳ್ಳುತ್ತಿದ್ದ ನನ್ನ ವಿದ್ಯಾರ್ಥಿನಿ ಒಬ್ಬಳಿಗೆ ಸವಾಲು ಕೊಟ್ಟೆ “ನೀನು ಏನು ಮಾಡುವೆ, ಹೇಗೆ ಮಾಡುವೆ ಅಂತ ನಾನು ಕೇಳುವುದಿಲ್ಲ. ಎರಡು ವಾರ ಸಮಯ ಕೊಡುತ್ತೇನೆ. ಎರಡು ವಾರಗಳ ಬಳಿಕ, ನಿನ್ನ ಕೈಬೆರಳುಗಳ ತುದಿಯಲ್ಲಿ ಬೆಳೆದ ಉಗುರುಗಳನ್ನು ನನಗೆ ತೋರಿಸಬೇಕು“. ನಾನೊಡ್ಡಿದ ಸವಾಲನ್ನು ಧನಾತ್ಮಕವಾಗಿ ಸ್ವೀಕರಿಸಿದ ಆಕೆ ಎರಡು ವಾರಗಳ ಬಳಿಕ ನನ್ನ ಬಳಿ ಬಂದು ಅವಳ ಕೈಬೆರಳುಗಳಲ್ಲಿ ಬೆಳೆದ ಉಗುರನ್ನು ತೋರಿಸುವಾಗ ಅವಳ ಕಣ್ಣುಗಳಲ್ಲಿ ಹಿಮಾಲಯ ಪರ್ವತ ಏರಿ ನಿಂತಾಗ ಉಂಟಾಗುವಷ್ಟೇ ಪುಳಕ!
ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ರೂಢಿಸಿಕೊಂಡಿರುವ ಋಣಾತ್ಮಕ ಅಭ್ಯಾಸಗಳನ್ನು ಬಿಟ್ಟುಬಿಡೋಣ ಆಗದೆ? ಉಳಿದವರಿಗೆ ಅಸಹ್ಯ ಎನ್ನಿಸುವ ಚಾಳಿಗಳಿಂದ ದೂರವಿರೋಣ. ಎಲ್ಲರ ಭಾವನೆಗಳನ್ನು ಗೌರವಿಸುವ ಪರಿಪಾಠ ಎಲ್ಲರದಾಗಲಿ. ಚಾಳಿ ಎಂದು ಕರೆಸಿಕೊಳ್ಳುವ ಕೆಟ್ಟ ಅಭ್ಯಾಸಗಳಿಂದ ದೂರವಿರೋಣ ಏನಂತೀರಾ?
-ಡಾ. ಕೃಷ್ಣಪ್ರಭ ಎಂ, ಮಂಗಳೂರು
ಈ ಬರಹದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರಿ.
ಮೆಚ್ಚುಗೆಗೆ ಧನ್ಯವಾದಗಳು
ಬಹಳ ಚೆನ್ನಾಗಿ ಹೇಳಿದ್ರಿ ಮೇಡಂ. ಕೆಲವು ಚಾಳಿಗಳನ್ನು ಪ್ರಯತ್ನ ಪಟ್ಟು ಬಿಡಲೇ ಬೇಕು. ನಿಜ ಯಾವುದೂ ಇಲ್ಲಿ ಅಸಾಧ್ಯ ವಲ್ಲ. ಪುಸ್ತಕದ ಪೂಜ್ಯತೆಯ ಬಗ್ಗೆ ಬರೆದ ಸಾಲುಗಳು ಬಹಳ ಇಷ್ಟವಾದವು.
ನಿರಂತರವಾಗಿ ನೀವು ನೀಡುವ ಪ್ರೋತ್ಸಾಹಕ್ಕೆ ಧನ್ಯವಾದಗಳು ನಯನಾ. ಪುಸ್ತಕಕ್ಕೆ ಎಂಜಲು ಹಚ್ಚಿ ಓದುವವರ ಸಂಖ್ಯೆ ಕಡಿಮೆ ಏನಲ್ಲ.
ಬೆಳಬೆಳಗ್ಗೆ status ನೋಡುವ ನನ್ನ ಚಾಳಿ ಕೆಟ್ಟದಲ್ಲ ವೆಂದು ಅರಿವಾಯಿತು. ನಿಮ್ಮ ಬರಹ ಓದಿ ಸಂತಸವಾಯಿತು.
ಸರಳ ಭಾಷೆಯಲ್ಲಿ ಬರೆದ ಸುಂದರ ಲೇಖನ
ಪ್ರತಿಯೊಂದರಲ್ಲಿ ಇರುವ ಹೊಸತನವನ್ನು ಸವಿಯುವುದರಲ್ಲಿ ತಪ್ಪಿಲ್ಲ. ಸ್ಟೇಟಸ್ ನೋಡುವುದನ್ನು ಚಾಳಿ ಅಂದುಕೊಳ್ಳಬೇಡಿ. ಮೆಚ್ಚುಗೆಗೆ ಧನ್ಯವಾದಗಳು
ಚೆನ್ನಾಗಿದೆ ಬರಹ…
ಮೆಚ್ಚುಗೆಗೆ ಧನ್ಯವಾದಗಳು
ಹೌದು ಪ್ರಭಾ ಚಾಳಿ ಎಂದರೆ …ಅದುನೋಡುವಾಗಲೇ ನನಗಂತೂ ವಾಕರಿಕೆ ಬರುವುದು ..ನನ್ನ ಅಪ್ಪನಿಗೆ ಈಚಾಳಿಗಳುಯಾವುದೂ ಹಿಡಿಸದೆಹಾಗೆ ಮಾಡುವುದು ನೋಡಿದರೆ ಕೈಗಂಟಿಗೆ ಹೊಡೆಯುವರು …ನಿನ್ನಲೇಖನ
ಓದಿದಾಗ ನನಗೂ ನೆನಪಾಯಿತು.ಸುಂದರ ಬರಹ ಪ್ರಭಾ .
ನಮ್ಮನ್ನೆಲ್ಲಾ ತಿದ್ದಿ ತೀಡಿ ಬೆಳೆಸಿದ ನಮ್ಮ ಹಿರಿಯರಿಗೆ ನಾವು ಎಷ್ಟು ಧನ್ಯವಾದ ಹೇಳಿದರೂ ಸಾಲದು. ಮೆಚ್ಚುಗೆಗೆ ಧನ್ಯವಾದಗಳು ಅಕ್ಕ
ನಿಮ್ಮ ಬರಹದ ಚಾಳಿಗಳೇನೋ ಕೆಟ್ಟದ್ದು.ಮೊಬೈಲ್ ಹಿಡಿದರೆ ಬಿಡದಿರುವ ಚಾಳಿಯೊಂದು ನಮ್ಮ ಬೆನ್ನು ಬಿದ್ದಿದೆ ಮೇಡಂ.ಏನು ಮಾಡುವಾ
ಮೊಬೈಲ್ ಅಂದರೆ ಹಾಗೆ. ಅದೊಂದು ಮಾಯೆ. ಅದರ ಪಾಶದಿಂದ ಬಿಡಿಸಿಕೊಳ್ಳುವುದು ಕಷ್ಟ. ಮನೆಯ ಕೆಲಸಗಳನ್ನು ಮುಗಿಸಿ, ಮೊಬೈಲ್ ನೋಡಿದರೆ ತಪ್ಪೇನು ಇಲ್ಲ.
ಹೌದು.. ಕೆಲವು ಚಾಳಿಗಳು ಬಹಳ ವಿಚಿತ್ರವೆನಿಸುತ್ತವೆ.. ಮುಜುಗರವಾಗುತ್ತದೆ. ‘ಬಿಡು’ ಎಂದರೂ ‘ಬಿಡೆನು’ ಎನ್ನುವ ಇವುಗಳಿಗೆ ಏನೆನ್ನಲಿ ದೇವಾ!!? ಸೊಗಸಾದ ಲೇಖನ.
ಹೌದು. ಕೆಲವು ವಿಚಿತ್ರ ಚಾಳಿಗಳು ಕೆಲವರಲ್ಲಿ ಮನೆ ಮಾಡಿರುತ್ತವೆ. ಯಾರು ಎಷ್ಟು ಬುದ್ಧಿ ಮಾತು ಹೇಳಿದರೂ, ಅಂತಹ ಚಾಳಿಗಳನ್ನು ಜಪ್ಪಯ್ಯ ಅಂದರೂ ಬಿಡುವುದಿಲ್ಲ.
ಉತ್ತಮ ಲೇಖನ…ಚಾಳಿಯನ್ನು ಆದಷ್ಟು ನಿಲ್ಲಿಸಲು ಪ್ರಯತ್ನಪಡಬೇಕು
ಅನ್ಯರು ನೋಡಿ ಅಸಹ್ಯಪಡುವ ಚಾಳಿಗಳು ನಮ್ಮಲ್ಲಿ ಇವೆ ಎಂದಾದರೆ, ಅವುಗಳನ್ನು ಬಿಡುವ ನಿರ್ಧಾರ ಗಟ್ಟಿಯಾಗಬೇಕು
ಬಿಡಲಾಗದ ಚಾಳಿಗಳನ್ನು ಬಿಡಲು ಪ್ರೇರೇಪಿಸುವಂಥಹ ಲೇಖನ. ವೇಗದೂತ ಬಸ್ಸನ್ನಾದರೂ ಹತ್ತಿ, ವಿಮಾನವನ್ನಾದರೂ ಏರಿಯಾದರೂ ಚಾಳಿಯಿದ್ದರೆ ಬಿಡುವುದೇ ಲೇಸು.
ಒಂದು ಉತ್ತಮ ಲೇಖನ.
ಉಳಿದವರು ನೋಡಿ, ಅಸಹ್ಯ ಪಡುತ್ತಾರೆ ಅಂತ ಆ ಚಾಳಿಗಳನ್ನು ರೂಢಿಸಿಕೊಂಡವರಿಗೆ ಅರ್ಥ ಆಗಬೇಕು….
ಮೆಚ್ಚುಗೆಗೆ ಧನ್ಯವಾದಗಳು
ಹೌದು, ಕೆಟ್ಟ ಚಾಳಿಯನ್ನು ಬಿಡಬೇಕು,ಉತ್ತಮ ಲೇಖನ
ಮೆಚ್ಚುಗೆಗೆ ಧನ್ಯವಾದಗಳು…ಕೆಟ್ಟ ಚಾಳಿಗಳನ್ನು ಬಿಟ್ಟರೆ ನಮಗೆ ಒಳ್ಳೆಯದು