ಕೃತಿ ಪರಿಚಯ : ದೇವರು ಎಚ್ಚರಗೊಂಡಾಗ
ಕೃತಿ: ದೇವರು ಎಚ್ಚರಗೊಂಡಾಗ
ಲೇಖಕರು: ಶಶಿಧರ ಹೆಬ್ಬಾರ ಹಾಲಾಡಿ.
ಬದರಿ ಕೇದಾರಗಳ ಪದತಲದಲ್ಲಿ
ದೇಶ ಸುತ್ತಬೇಕು ಕೋಶ ಓದಲೇಬೇಕು. ನಿಜ, ಆದರೆ ದೇಶ ಸುತ್ತಲಿಕ್ಕಾಗದಿದ್ದರೆ ಏನು ಮಾಡಬೇಕು? ಸುತ್ತಿದವರ ಅನುಭವದ ಕಥೆಗಳನ್ನಾದರೂ ಕೇಳಬೇಕು. ಸುತ್ತಿದ ಅನುಭವಗಳನ್ನು ಬರೆದಿಟ್ಟಿದ್ದರೆ ಆ ಕಥನಗಳನ್ನಾದರೂ ಓದಿ ತಣಿಯಬೇಕು. ಹೌದು! ಹೀಗೆ ತಣಿಯಲಿಕ್ಕಾಗಿಯೇ ಹಿಮಾಲಯದ ಚಿತ್ರಣವನ್ನು ಕಣ್ತುಂಬಿಕೊಳ್ಳಲಿಕ್ಕಾಗಿಯೇ ನಾನು ಅನೇಕ ಪುಸ್ತಕಗಳನ್ನು ಓದಿದೆ. ಶಿವರುದ್ರಪ್ಪನವರ ‘ಗಂಗೆಯ ಶಿಖರಗಳಲ್ಲಿ’ ಬಹಳ ಚಿಕ್ಕಂದಿನಲ್ಲಿ ಓದಿದ್ದು. ಭೈರಪ್ಪನವರ ‘ನಿರಾಕರಣ’ ಬಹಳ ಹಿಂದೆ ಮತ್ತು ಇತ್ತೀಚೆಗೊಮ್ಮೆ ಓದಿದ್ದು. ಸ್ವಾಮಿ ರಾಮರವರ ‘ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ’ ಒಮ್ಮೆ ಓದಿದ್ದು. ಕೆಲವು ಅಮೂಲ್ಯ ಪುಸ್ತಕಗಳನ್ನು ಓದಿದ್ದೆ.
ದಿನಾಂಕ. 27.04.21 ರಂದು ವಿಶ್ವವಾಣಿಯ `ಶಶಾಂಕಣ’ದ ಶ್ರೀ ಶಶಿಧರ ಹಾಲಾಡಿಯವರ ಪುಸ್ತಕ ಕಾಲಕೋಶ ಬಿಡುಗಡೆಯಾಯಿತು. ಅದನ್ನೀಗ ಕೊಂಡುಕೊಳ್ಳಬೇಕು. ಅವರನ್ನು ಭೇಟಿಯಾದಾಗ ಅವರದೇ ಮೂರು ಕೃತಿ ಗಳನ್ನು ನನಗೆ ಕೊಟ್ಟಿದ್ದರು. ಅದರಲ್ಲೊಂದರ ಶೀರ್ಷಿಕೆ `ದೇವರು ಎಚ್ಚರಗೊಂಡಾಗ’. ಕೇವಲ ತೊಂಭತ್ತು ಪುಟಗಳಿರುವ ಈ ಪುಸ್ತಕ ನಿಜಕ್ಕೂ ಒಂದು ಸುಂದರ ಅನುಭವವನ್ನು ನೀಡುತ್ತದೆ. ನಿಮಗೆ ಶೀರ್ಷಿಕೆಯೇ ವಿಶೇಷ ಎನ್ನಿಸುವುದಿಲ್ಲವೇ? ಬಹುಶಃ ಕೇದಾರ ಬದರೀನಾಥಗಳ ಪ್ರವಾಸ ಮಾಡಿದವರಿಗೆ ಈ ಹೆಸರಿನ ಹೊಳಹು ತಕ್ಷಣ ಬುದ್ಧಿಗೊಮ್ಮೆ ತಾಕಿ ಬಿಡುತ್ತದೆ. ಆರು ತಿಂಗಳು ಹಿಮಾಚ್ಛಾದಿತವಾಗುವ ಈ ತಾಣಗಳು ಮತ್ತಾರು ತಿಂಗಳು ತೀರ್ಥಯಾತ್ರಿಕರಿಗೆ, ಪ್ರವಾಸಿಗರಿಗೆ ದರ್ಶನ ನೀಡುವ ದೇಗುಲಗಳಾಗಿ ಭಕ್ತಿ ಪರಾಕಾಷ್ಠೆಯ ಬೀಡಾಗುತ್ತವೆ. ಈ ಭಕ್ತಿ ಪರವಶತೆಯಲ್ಲಿ ಮಿಂದವರ ಮೈಮರೆತವರ ಕೂಲಂಕಷವಲ್ಲದಿದ್ದರೂ, ಕಣ್ಣಿಗೆ ಕಟ್ಟುವಂತೆ ಸಂಕ್ಷಿಪ್ತವಾಗಿ ಬರೆದಿಟ್ಟಿರುವ ಈ ಪುಟ್ಟ ಕೃತಿ ಅಲ್ಲಿಗೆ ಭೇಟಿ ನೀಡುವವರ ಕೈಪಿಡಿಯಾಗುವುದಂತೂ ಖಂಡಿತ. ಹಾಗೆಂದು ಇದೇನು ಇತ್ತೀಚೆಗೆ ಬಿಡುಗಡೆಯಾದದ್ದಲ್ಲ. ದಕ್ಕಿದವರೆಲ್ಲರೂ ಓದಿಕೊಂಡು ಮುಗಿಸಿದ ಪುಸ್ತಕ. ನನಗೀಗ ತಾನೇ ದೊರೆತು, ಓದಿ ಇಷ್ಟವಾಗಿ ನಾಲ್ಕು ಮಾತು ಬರೆಯಲೇ ಬೇಕೆಂಬ ತುಡಿತ ಮಿಡಿದು, ಬರೆಯಲು ಕುಳಿತೆ.
ಪ್ರವಾಸಕಥನಗಳು ಬಣ್ಣಬಣ್ಣದ ರಂಗಿನ ಲೋಕವನ್ನೂ ಸೃಷ್ಟಿಸುತ್ತವೆ. ರೋಚಕತೆಯನ್ನೂ ತುಂಬಿಕೊಡುತ್ತವೆ, ಸಂಕಟ ದುಃಖಗಳನ್ನೂ ನೀಡುತ್ತವೆ, ಕುತೂಹಲ ಮೂಡಿಸುತ್ತವೆ. ಇಂತಹ ಸನ್ನಿವೇಶದಲ್ಲಿ ದೇವರು ಎಚ್ಚರಗೊಂಡಾಗ ಎಂಬ ಈ ಕೃತಿ, ಇತಿಹಾಸದ ಪುಟಗಳನ್ನು ತಿರುವುತ್ತಾ, ಮತಧರ್ಮಗಳ ಮಹತ್ವ ,ಸಾಧಕಬಾಧಕಗಳನ್ನು ತಿಳಿಸುತ್ತಾ, ಒಂದು ಪ್ರದೇಶದ ಜನಜೀವನವನ್ನು ಕಟ್ಟಿಕೊಡುತ್ತಾ ಶಾಂತವಾಗಿ ಹರಿವ ನದಿಯಂತೆ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಸಧ್ಯ! ನನಗೀಗ ಈ ಪುಸ್ತಕ ಸಿಕ್ಕಿದ್ದು ಬಹಳ ಒಳ್ಳೆಯದಾಯಿತೆನ್ನಿಸಿತು. ಕಾರಣ, ನಾನೂ ಅಲ್ಲಿಗೆ ಭೇಟಿ ನೀಡಬೇಕಿದೆ. ಕೇದಾರದ ಪದತಲದಲ್ಲಿ ನಿಂತು ಹಿಮಾಲಯವನ್ನು ಕಣ್ತುಂಬಿಕೊಳ್ಳಬೇಕಿದೆ, ಬದರಿಯ ಪುಣ್ಯದರ್ಶನದಿಂದ ಅಲ್ಲಿಯ ಮಹತ್ವವನ್ನರಿಯಬೇಕಿದೆ.
ಈ ಹೊತ್ತಗೆಯಲ್ಲಿ ಕೇದಾರ ಬದರಿಗಳ ಸಂದರ್ಶನವೆಂದರೆ ಸಲೀಸಲ್ಲ, ಅದಕ್ಕಾಗಿ ನಾವು ಅನುಭವಿಸಬೇಕಾದ ಪ್ರಕೃತಿವಿಕೋಪಗಳ, ಅದಕ್ಕೆ ತಯಾರಾಗಬೇಕಾದ ಜಾಣತನದ ಸಮಯಪ್ರಜ್ಞೆಯ ವಾಸ್ತವ ಚಿತ್ರಣವಿದೆ. ಇಲ್ಲಿ ಕೃತಿಕಾರರು ಯಾತ್ರಿಗಳಾಗಿ ಒಳಗೊಂಡಂತಿರದೆ, ದೂರದಿಂದ ಎಲ್ಲವನ್ನೂ ನಿಂತು ನೋಡುವ ಪ್ರೇಕ್ಷಕನಾಗಿ ಆ ಸ್ಥಳದ ವಿಶೇಷಗಳನ್ನು ಹಿನ್ನೆಲೆಗಳನ್ನು, ಐತಿಹಾಸಿಕ ಸತ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಭಕ್ತಿ ಪರಾಕಾಷ್ಠೆಯಲ್ಲಿ ಮುಳುಗದೆ, ಎಲ್ಲವನ್ನೂ ಪರೀಕ್ಷಕ ದೃಷ್ಟಿಯಿಂದ ನೋಡಿ ದಾಖಲಿಸಿರುವುದು ಮಹತ್ವದ ವಿಷಯವಾಗುತ್ತದೆ. ಇಂಥ ಹಿಮವಂತದಲ್ಲಿ ಈ ಕಲ್ಲುಗಳನ್ನು ಮೇಲಕ್ಕೇರಿಸಿ ತಂದು ದೇವಾಲಯಗಳನ್ನು ಕಟ್ಟಿದ್ದಾದರೂ ಹೇಗೆ? ಯಾರು ಕಟ್ಟಿದರು? ಎಂಬುದಕ್ಕೆಲ್ಲ ಇಲ್ಲಿ ತಕ್ಕಮಟ್ಟಿಗೆ ಉತ್ತರವಿದೆ.
ಗೌರಿಕುಂಡದ ಬಿಸಿನೀರಿನ ಸ್ನಾನದ, ತುಣುಕು ತುಣುಕಾಗಿ ಉದುರಿ ಮೈಮೇಲೆ ಬೀಳುವ ಹಿಮವನ್ನು ಅನುಭವಿಸುತ್ತಾ , ಮಳೆಯ ತುಂತುರಿಗೆ ರೋಮಾಂಚನಗೊಳ್ಳುತ್ತಾ, ಕೌತುಕದ ಹಿಮಾಲಯವನ್ನು ಆನಂದದಿಂದ ಕಣ್ತುಂಬಿಕೊಳ್ಳುವ ಲೇಖಕರು, ಕವಿಯಂತೆ ಭಾಸವಾಗುತ್ತಾರೆ. ಗದಗುಟ್ಟುವ ಚಳಿಗೆ ಮನಸ್ಸು ತೆರೆದುಕೊಂಡರೂ ಮೈ ತೆರೆದುಕೊಳ್ಳಲಾಗದ ಭಯದ ಬಗ್ಗೆ ವಿವರಿಸುತ್ತಾರೆ. ನಂಬಿಕೆಯ ಮೇಲೆ ನಡೆಯುವ ವ್ಯಾಪಾರ, ವ್ಯವಹಾರಗಳನ್ನು ವಿವರಿಸುತ್ತಾ, ಅಲ್ಲಿಯ ಜನರ ಪ್ರಾಮಾಣಿಕತೆಯ ಬಗ್ಗೆ ಮನದುಂಬಿಬರುವ ಭಾವನೆಯನ್ನು ಪ್ರಾಮಾಣಿಕವಾಗಿ ವಿವರಿಸುತ್ತಾರೆ. ಒಂದು ಪ್ರವಾಸವು ಮನಷ್ಯನಿಗೆ ಏನೆಲ್ಲ ಕೌತುಕಗಳನ್ನು ತಣಿಸಬೇಕೋ ಅಷ್ಟನ್ನೂ ಲೇಖಕರು ಬರೆದಿದ್ದಾರೆ. ಧಾರ್ಮಿಕವಾಗಿ, ರಾಜಕೀಯವಾಗಿ, ಚಾರಿತ್ರಿಕವಾಗಿ ಎಲ್ಲವಿಷಯಗಳನ್ನೂ ತಮ್ಮ ಪ್ರವಾಸದ ಅವಧಿಯಲ್ಲಿ ಸೂಕ್ಷ್ಮವಾಗಿ ಗಮನಿಸಿ ಓದುಗನ ಮುಂದಿಟ್ಟಿದ್ದಾರೆ. ಮಂದಾಕಿನಿ, ಸರಸ್ವತಿ ನದಿಗಳ ಹರಹು, ಅವುಗಳ ಇತಿಹಾಸ , ಧಾರ್ಮಿಕ ಮಹತ್ವ, ಸರಸ್ವತಿ ಗುಪ್ತಗಾಮಿನಿಯಾದ ಸಂದರ್ಭ, ಅವಳ ಆರ್ಭಟದ ಬಗ್ಗೆ ತಿಳಿಸುತ್ತಲೇ , ವ್ಯಾಸಗುಹೆಯ ವಿನ್ಯಾಸ, ಜೋಷಿಮಠ, ಅಲ್ಲಿಯ ಅರ್ಚಕರ ಇತಿಹಾಸ, ಮಹಾಭಾರತದ ಇತಿಹ್ಯಗಳು ಹೀಗೆ, ತಮ್ಮ ಪ್ರಯಾಣದ ಜೊತೆಜೊತೆಗೆ ಆ ಸ್ಥಳಪುರಾಣದ ವಿವರಗಳನ್ನು ಅನಾವರಣಗೊಳಿಸುವುದು ಓದುಗನಿಗೊಂದು ಮಾಹಿತಿ ಒದಗಿಸಿದಂತಾಗುತ್ತದೆ. ಗೌರಿಕುಂಡ, ನೀಲಕಂಠ ಪರ್ವತ, ನರಪರ್ವತ, ನಾರಾಯಣ ಪರ್ವತಗಳನ್ನು ವಿವರಿಸುತ್ತಾ ನೀಲಕಂಠದ ಮೇಲೆ ಬೀಳುವ ಸೂರ್ಯನ ಪ್ರಥಮ ಕಿರಣಗಳು ಆ ಪರ್ವತಕ್ಕೆ ಚಿನ್ನದ ಹೊಳಪು ನೀಡುವ ಅದರ ಸೌಂದರ್ಯ ಇಮ್ಮಡಿಯಾಗುವ ಕ್ಲುಪ್ತಕಾಲದ ಬಗ್ಗೆ ನಿಜಕ್ಕೂ ಸೋಜಿಗವೆನಿಸುತ್ತದೆ.
ಪ್ರವಾಸಿಗನಿಗೆ ವಿಭಿನ್ನ ದೃಷ್ಟಿಕೋನವಿರಬೇಕೆಂದು , ತಾನು ಗಮಿಸುವ ಎಲ್ಲ ಪ್ರದೇಶಗಳ ಸಾಮಾನ್ಯವಾದ ಅಥವಾ ವಿಶಿಷ್ಟವಾದ ವಿಷಯಗಳನ್ನು ಅರಿಯುವ ಕುತೂಹಲ ಮತ್ತು ಶ್ರದ್ಧೆಯಿರಬೇಕೆಂದು ನನಗಾದರೂ ಈ ಪುಸ್ತಕದ ಓದಿನಿಂದ ಸಾಬೀತಾಯಿತು. ಪರಕೀಯರು ಕಟ್ಟಿಕೊಟ್ಟ ಸಂಶೋಧನೆಗಳನ್ನೇ ಪರಾಂಬರಿಸಿಕೊಂಡು, ನೈಜ ವಸ್ತುವಿಷಯಗಳನ್ನೇ ಮರೆತುಹೋಗುತ್ತಿರುವ ನಮ್ಮ ಬುದ್ಧಿಜೀವಿಗಳ ಬಗ್ಗೆ ಲೇಖಕರು ಕನಿಕರಗೊಂಡಿರುವುದು ಸ್ಪಷ್ಟವಾಗುತ್ತದೆ. ಕೇವಲ ನೂರಿನ್ನೂರು ವರ್ಷಗಳ ಹಿಂದೆ ಬಂದು ಸಾವಿರಾರು ವರ್ಷಗಳ ಇತಿಹಾಸವನ್ನು ಸಂಶೋಧಿಸಿ, ನೀವು ತಿಳಿದಿರುವುದು ಸತ್ಯವಲ್ಲ, ಇದು ಸತ್ಯ ಎಂದು ನಮ್ಮ ಧರ್ಮದ ಬೇರುಗಳನ್ನೇ ಕತ್ತರಿಸುವ, ಸತ್ಯಾಸತ್ಯತೆಗಳ ಪಾರಮರ್ಶೆಗೂ ಅವಕಾಶವಿಲ್ಲದಂತೆ ನಂಬಿಸುವ ಜನರ ಬಗ್ಗೆ ಇವರಿಗೊಂದು ತಣ್ಣನೆಯ ಸಿಟ್ಟಿದೆ.
ಆದಿಗುರು ಶಂಕರಾಚಾರ್ಯರು ಕೈಗೊಂಡ ಅನೇಕ ಕೆಲಸಗಳನ್ನು ವಿಶ್ಲೇಷಿಸಿ , ಅವರ ಶ್ರಮದ ಸಾರ್ಥಕತೆಗೆ ಅನೇಕ ಉದಾಹರಣೆಗಳನ್ನು ನೀಡಿ ಬದರಿ ಕೇದಾರಗಳೆಂದರೆ ನೋಡಿ ಕೈಮುಗಿದು ಬರುವುದಲ್ಲ, ಇನ್ನೂ ತಿಳಿಯದಿರುವುದೆಷ್ಟೋ ಇದೆ ಎಂದು ಎಚ್ಚರಿಸುತ್ತದೆ ಈ ಪುಸ್ತಕ. ಮನ ಕಲಕುವ ಘಟನೆಗಳು ಕೂಡ ಇಲ್ಲಿವೆ. ಶ್ರೀನಗರದ ಸುದರ್ಶನ ಶಹಾನ ದಾರುಣ ಸ್ಥಿತಿಗೆ , ಅವನನ್ನು ಆ ಸ್ಥಿತಿಗೆ ತಳ್ಳಿದ ಬ್ರಿಟಿಷರ ಬಗ್ಗೆ ಕ್ರೋಧದ ಅಲೆಯೆದ್ದು ಮನಸ್ಸು ಒಂದುರೀತಿ, ಖಿನ್ನಗೊಳ್ಳುತ್ತದೆ. ಒಂದು ಲಹರಿಯಲ್ಲಿ ಓದಿಕೊಂಡು ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಗಂಭೀರ ವಿಷಯಗಳ ಪ್ರಸ್ತಾಪದಿಂದ ಕುತೂಹಲಗೊಳ್ಳುವ ಮನಸ್ಸು ಇನ್ನೊಂದಿಷ್ಟು ಇದರ ಬಗ್ಗೆ ಬರೆದಿದ್ದರಾಗುತ್ತಿತ್ತು ಎನ್ನಿಸುವುದಂತೂ ಸುಳ್ಳಲ್ಲ.
ಸರಳವಾದ ವಿಷಯ ಮಂಡನೆ , ತಮ್ಮ ಪ್ರವಾಸದ ಅನುಭವಗಳ ವಾಸ್ತವ ಚಿತ್ರಣ , ತಾವು ನೋಡಿದ ಪ್ರದೇಶದ ವೈವಿಧ್ಯಮಯ ಕತೆಗಳ ನಿಷ್ಪಕ್ಷಪಾತ ನಿರೂಪಣೆ ಪುಸ್ತಕದ ಬಗ್ಗೆ ಬರೆಯುವಂತೆ ಮಾಡಿತು. ಈ ಪುಸ್ತಕ ಮರುಮುದ್ರಣಗೊಂಡು ಎಲ್ಲರಿಗೂ ತಲುಪಲಿ, ಎಲ್ಲರೂ ಓದಲಿ. ಇದು ನನ್ನ ಆಶಯ.
-ಬಿ.ಕೆ.ಮೀನಾಕ್ಷಿ, ಮೈಸೂರು.
ಕೃತಿಯ ಕುರಿತಾದ ಲೇಖನ ಕುತೂಹಲ ಮೂಡಿಸಿದೆ. ಶಶಿಧರ್ ಅವರ ಪುಸ್ತಕಗಳನ್ನು ತರಿಸಿಕೊಳ್ಳಬೇಕು
ಪ್ರವಾಸ ಕಥನದ ವಿಮರ್ಶೆ ಚೆನ್ನಾಗಿ ಮೂಡಿ ಬಂದಿದೆ
ಪುಸ್ತಕದ ಪರಿಚಯ ತಲಸ್ಪರ್ಶಯಾಗಿದೆ.ಈ ಕರೋನಾ ಕಬಂಧದಿಂದ ಬಿಡುಗಡೆ ಯಾದಮೇಲೆ ಹೋಗಬೇಕೆಂಬ ಪ್ರೇರಣೆ ನೀಡಿತು . ಅಭಿನಂದನೆಗಳು ಮೀನಾ.
ಚೆನ್ನಾಗಿದೆ ಪರಿಚಯ
ಕೃತಿ ವಿಮರ್ಶೆ ಸಹಿತದ ಸ್ಥೂಲ ಪರಿಚಯ ಬಹಳ ಚೆನ್ನಾಗಿ ಮೂಡಿಬಂದಿದೆ..ಧನ್ಯವಾದಗಳು ಮೇಡಂ.