ಮಂಥರೆಯ ಮಂಥನ

Share Button

ರಾಮನಿಗೆ ಪಟ್ಟಾಭಿಷೇಕವಂತೆ !!
ರಾಮನಿಗೆ ಪಟ್ಟಾಭಿಷೇಕವಂತೆ !!

ಇಡೀ ಅಯೋಧ್ಯೆ ಸಂತಸದಲಿ, ತೇಲುತಿಹುದು
ಸಂಭ್ರಮವು ಹಬ್ಬಗಳಂದ, ಮೀರುತಿಹುದು
ಸಂತಸವು ತುರೀಯಾವಸ್ಥೆ, ತಲುಪಲಿಹುದು
ನನ್ನ ಹೊಟ್ಟೆಯಾಳವು ಏಕೋ, ಕಲಸುತಿಹುದು.

ಹೊಸದಲ್ಲ ಈ ಸುದ್ದಿ, ಮೊದಲೇ ತಿಳಿದುದುದು
ಈಗ ಬರೀ ಘಳಿಗೆ, ಮುಹೂರ್ತ ನಿರ್ಧರಿಸಿದುದು
ಸುತ್ತಲಿನ ಸಂಭ್ರಮವು, ಏಕೋ ಸಹಿಸದಲ್ಲ
ನನ್ನ ಸಂಕಟವು ಸಂತಸವ, ಮೀರಿ ಹರಿದಿದೆಯಲ್ಲ !

ಹಾ! ನನ್ನ ಕೈಕೆಯೀ, ಹಾ! ನನ್ನ ಭರತಾ
ರಾಣಿ ಯಾದರೂ ಇಲ್ಲ, ಪಟ್ಟದ ಮೇಲೆ ಹಿಡಿತ
ಅವಳ ಪ್ರೀತಿಗೆ ಇದು, ಎಂಥಹ ಹೊಡೆತ ?
ಯೋಚನೆಗೇ ಏರಿಳಿಯುತಿದೆ, ನನ್ನ ನಾಡಿಮಿಡಿತ.

ಕೈಕೇಯಿ ನಾನೆತ್ತಿ, ಆಡಿಸಿದ ಕೂಸು
ಭರತ ನನ್ನ ಪ್ರೀತಿಯ, ಮುದ್ದಿನ ಮರಿ ಕೂಸು
ರಾಮನನೂ ಆಡಿಸಿವೆ, ನನ್ನ ಕೈಗಳೂ ತುಸು ತುಸು
ಕೌಸಲ್ಯೆಯನು ಒಪ್ಪದು, ಎಂದೂ ನನ್ನ ಮನಸು.

ಕೈಕೇಯಿ ರಾಣಿಯಿರೆ, ನಾ ರಾಣಿಯಾ ದಾಸಿ
ದಾಸಿಯಾದರೆ ರಾಣಿ, ಆ ದಾಸಿಗೆ ನಾ ದಾಸಿ
ಕೂಡಿ ಕಳೆಯುತಿದೆ ಮನವು, ಮಾಡಿ ಚೌಕಾಸಿ
ಕೈಕೇಯಿ ಬಳಿ ನಡೆದು, ಬುದ್ಧಿ ಹೇಳುವುದೇ ವಾಸಿ.

ಕೈಕೇಯಿಗೆ ಎಲ್ಲವನು, ತಿಳಿಸಿ ಒಪ್ಪಿಸಬೇಕು
ಮೊದಲು ಮನದಲ್ಲಿ, ಯೋಜನೆ ನೇಯಬೇಕು
ಅವಳಲ್ಲಿಹ ಭರತನ, ಎತ್ತಿಹಿಡಿಯಲು ಬೇಕು
ಅವಳ ಪ್ರೀತಿಗಾದ ಅನ್ಯಾಯವನು, ಆಡಿ ತೋರಲು ಬೇಕು.

ಸಾಮಾನ್ಯಳೇ ನನ್ಮಗಳು, ಮುದ್ದು ಕೈಕೇಯಿ
ದಶರಥನ ಪ್ರೀತಿ ರತಿ, ಹೃದಯದಾ ಸಾರಥಿ
ಹಾ!! ಸ್ಮೃತಿಗೆ ಹೊಳೆಯಿತು, ದಶರಥನ ವರವು
ಸಾರಥಿ ಕೈಕೇಯಿಗೆ, ಕಡ ಕೊಟ್ಟ ವರವು.

ಎಂಥ ಸದಾವಕಾಶ!! ಹುಚ್ಚಿ ಮರೆತಿಹಳು
ನೆನಪಿಸುವೆನು ಈಗಲೇ, ಅವಳಿಗೆ ಅರಳು ಮರುಳು
ಆಳಾದರೇನು ನಾ ಅವಳ, ಮನವನಾಳ್ವೆ
ಹರಸುವಳು ಕೊನೆವರೆಗೆ, ನಾ ನಲಿದು ಬಾಳ್ವೆ.

ಹರುಷ ಹೆಜ್ಜೆಯಲಿ, ಲೆಕ್ಕ ಮನದ ಮೂಲೆಯಲಿ
ಸಾರಿದೆನು ರಾಣಿಗೆ, ರಾಮ ಪಟ್ಟಾಭಿಷೇಕವನು
ಹಾಕಿದಳು ನನ್ನ ಕೊರಳಿಗೆ, ರತ್ನದಾಭರಣವನು
ಬೆಚ್ಚಿದಳು !! ನಾನದನು ಕಿತ್ತು, ಬಿಸುಟಿದೆನು

ಒಡಲಾಳದ ಸಂಕಟವು, ಹೃದಯಕ್ಕೆ ಬಂದಿತ್ತು
ಮನದಾಳದಲಿ ಎಲ್ಲ, ಲೆಕ್ಕದಾಟ ಮುಗಿದಿತ್ತು
ಮಾತುಗಳು ಹದವಾಗಿ, ಬೆಂದು ಹರಿದಿತ್ತು
ಕೈಕೇಯಿಯ ಒಡಲಿಗೆ, ಕಿಚ್ಚ ಹಚ್ಚಿತ್ತು.

ಹುಚ್ಚಿ ನೀ ನನ್ನ ಮಗಳೇ, ಮಂಕು ಹಿಡಿಯಿತೆ ನಿನಗೆ?
ಪಟ್ಟದರಸಿ ನೀನಲ್ಲ,ಹೃದಯದರಸಿ ನೀ, ಕಿರೀಟವಿಲ್ಲ
ನಿನ್ನ ಬಾಳು ಕಳೆಯಿತು ಹೀಗೆ, ಮಗನನುದ್ಧರಿಸು
ಇಳಿಸು ರಾಮನ ಕೆಳಗೆ, ಕಾಡಿಗೆ ಕಳಿಸು.

ತುಳಿವಳು ನಿನ್ನ ಕೌಸಲ್ಯೆ, ರಾಮನಾಳ್ವ ಭರತನನು
ಯಾವ ಮಂಕು ಮುಸುಕಿದೆ, ನನ್ನ ಪ್ರೀತಿಯ ರಾಣಿಯನು!
ನನ್ಗಿಂತ ಹಿತೈಷಿಗಳೇ ಇಲ್ಲ , ಕೇಳು ನನ್ನ ಮಾತ್ಗಳ
ನಡೆ ರಾಜನಾ ಬಳಿ, ಕೇಳು ಮರೆತ ವರಗಳ

ಸಂದೇಹವ ಮುರಿ! ನೀ ಮಾಡುತಿರುವುದೆಲ್ಲ ಸರಿ
ನೀ ರಾಮನ ಹೆತ್ತಮ್ಮನಲ್ಲ, ಭರತ ರಾಜನಾಗುವುದೇ ಸರಿ
ದಶರಥನ ಮುದ್ದಿನ ಅರಸಿ ನೀ, ಕೊಡದಿರನು ಆತ ವರಗಳ
ಎಂಥ ತಾಯಿಕರುಳು ನಿಂದು, ತೊಟ್ಟಿಹೆ ರಾಮನಾಮದ ಉರುಳ.

ಕೋಪ ಗ್ರಹದಿ ಕೈಕೇಯಿಯು, ವರವಗಳಿಸಿ ಜಯಿಸಿರೆ
ದಶರಥನ ಮನದ ತುಂಬಾ, ದುಃಖವೇ ವಿಜೃಂಭಿಸಿರೆ
ಅಯೋಧ್ಯೆಯ ಜನಸಾಗರ, ಶೋಕದಲ್ಲಿ ಮುಳುಗಿರೆ
ನನ್ನ ಎದೆಯ ಬಡಿತವು, ವಿಜಯದ ನಗಾರಿಯಾಗಿದೆ.

ರಾಮನುಡಲು ಕಾವಿಬಟ್ಟೆ, ಲಕ್ಷ್ಮಣನೂ ಜಟೆಯ ಕಟ್ಟೆ
ಸೀತೆ ನೂಲಿನ ಸೀರೆಯುಡಲು, ಬಡಿಯಿತೆಲ್ಲರಿಗೂ ದಿಗಿಲು
ದಶರಥನ ಒಡಲು ಊಳಿಡಲು, ಜೊತಗೆ ಅಯೋಧ್ಯೆ ಗೋಳಿಡಲು
ಜನಸಾಗರ ಮೊರೆಯುತ್ತಿದೆ, ಹೇ ರಾಮಾ ಅರಮನೆಗೆ ಮರಳು.

ಧೃಡತೆ ನನ್ನ ಮನದಲಿ, ಎಲ್ಲವೂ ಸರಿ ಹೋಗುವುದು
ರಾಮ ಕಾಡಿಗೆ ತೆರಳಿ ದೊಡನೆ, ಭರತ ರಾಜನಾಗುವದು
ನನ್ನ ಕೂಸು ಭರತನನು, ಅಯೋಧ್ಯೆ ಕೊಂಡಾಡುವುದು
ವರ್ಷ ಹದಿನಾಲ್ಕು ಉರುಳುತಿರೆ, ರಾಜ್ಯ ರಾಮನನೇ ಮರೆವುದು.

ಕಾವಿಯುಟ್ಟ ಮೂರು ಜನರು, ದಶರಥನ ಪಾದಕೆರಗುತಿಹರು
ರಾಜನ ಕರುಳ ಆರ್ತನಾದ, ಕಲ್ಪನೆಗೂ ಅಸಾಧ್ಯವಿಹುದು
ಎಲ್ಲರನು ಬೀಳ್ಕೊಟ್ಟ ರಾಮ, ನನ್ನಡೆಗೇ ನಡೆಯುತಿಹನು
ಕೈಜೋಡಿಸಿ-ಕಣ್ ಕೂಡಿಸೆ, ಸಣ್ಣನೆ ನಾ ನಡುಗುತಿಹೆನು.

ಪಿತೃವಾಕ್ಯ ಪರಿಪಾಲಕ, ತೊಟ್ಟ ವಚನ ಸಾಧಕ
ಮಾತೆಯರ ಆರಾಧಕ, ಮರ್ಯಾದೆಯ ರೂಪಕ
ರಘುವಂಶದ ಕುಲ ತಿಲಕ, ಜನರ ಮನದ ಧನಕನಕ
ತ್ಯಜಿಸಿದ ಪಟ್ಟಾಭಿಷೇಕ, ದಾರಿ ಹಿಡಿದ ಕಾನನಕ

ಮರಳಿದ ಭರತ ಅರಮನೆ ತನಕ, ಕೇಳ್ದ ನಡೆದುದ ಇಲ್ಲಿಯ ತನಕ
ಆದ ಕೋಪ-ತಾಪ ದ್ವೇಷಗಳ ಕೂಪ, ಸಿಗದು ಅವನ ಮನ ಹಿಡಿತಕ
ಮಾತೆಯ ಮೇಲೆ ದೋಷಾರೋಪ, ನನ್ನ ಮೇಲೆ ರುದ್ರ ಕೋಪ
ಬೇಡಿದ ಕ್ಷಮೆಯ ಸಿಂಹಾಸನಕ, ದೀನ ರಾಮನಾರಾಧಕ

ಭ್ರಾತ್ರ ಪ್ರೇಮಿ ಭರತ ತೊಟ್ಟ, ಪಟ್ಟಾಭಿಷೇಕ ಸಲ್ಲದು
ಕಾವಿ ತೊಟ್ಟು ನಡೆದೇ ಬಿಟ್ಟ, ರಾಮನನ್ನು ಹುಡುಕಲು
ಪಾದುಕೆ ಸಿಂಹಾಸನವನೇರೆ, ನನ್ನ ಕನಸು ಕಸದ ತೊಟ್ಟಿಲು
ರಾಜ್ಯದಲಿ ಗಗನಕೇರುತಿದೆ, ನನಗೆ ಧಿಕ್ಕಾರದ ಹುಯಿಲು.

ರಾಣಿಯೆಡೆಯ ಪ್ರೀತಿ ತಪ್ಪಿದ್ದು ಹೇಗೆ?
ಭರತನೆಡೆಗೆ ಮೋಹ ಒಪ್ಪದಾಯ್ತು ಹೇಗೆ?
ಮದವು ಮಸ್ತಕ ಏರಿತ್ತು , ಮಾತ್ಸರ್ಯ ನನ್ನ ಹರಸಿತ್ತು
ಅಹಂಕಾರ ಅಂಧತ್ವ ನೀಡೆ, ಬುದ್ಧಿ, ಭ್ರಮೆಗೆ ಬಲಿಯಾಗಿತ್ತು
ನನ್ನ ಮತಿ, ಮನದ ಕುಹಕ, ಮಾತಿಗೆ ಮರುಳಾಗಿತ್ತು

ರಾಮ ದ್ವೇಷಿ ನಾನಲ್ಲ, ಭರತ ಪ್ರೇಮ ಮೀರಿತ್ತು
ಯಾವುದೋ ಗತ ಘಟನೆಗಳ ಭೂತ, ನನ್ನ ಬೆನ್ನನೇರಿತ್ತು
ರಾಣಿಯ ಮನಕೆ ಮಂತ್ರಿ ನಾ!, ಅಹಂಕಾರವೂ ಮೊಳೆದಿತ್ತು
ಸಂಚಿತ ಪಾಪ ಕರ್ಮದ ಫಲವೊ, ದುಷ್ಟಬುದ್ಧಿ ನನ್ನ ಆಳಿತ್ತು.

ನನ್ನ ಕಾರ್ಯ, ನನ್ನ ಕರ್ಮ, ನನಗೆ ಛೀಮಾರಿ ಹಾಕುತ್ತಿದೆ
ಹುಟ್ಟ ಗೂನಬೆನ್ನ ಭಾರ, ನೂರು ಪಾಲು ಹೆಚ್ಚಿದೆ
ಮನದ ಕನ್ನಡಿ ನನ್ನ ಬಿಂಬವ, ಗ್ರಹಣದಂತೆ ಪ್ರತಿಬಿಂಬಿಸಿದೆ
ಅಯೋಧ್ಯೆಗೆ ನನ್ನ ಅಸ್ತಿತ್ವವೇ, ಶಾಪದಂತೆ ತೋರಿದೆ.

ಪಶ್ಚಾತ್ತಾಪದ ಉರಿ ಹೆಚ್ಚಿದೆ, ಕಿಚ್ಚಿನಂತೆ ಸುಡುತಿದೆ
ಮನದ ಬೇಗೆ ತಾಳಲಾರೆ, ಮಂಥನವು ಮೇರೆ ಮೀರಿದೆ
ಮನದ ಕತ್ತಲ ಕೂಪದಾಳವು, ಕೋಣೆ ಕತ್ತಲ ಮೀರಿದೆ
ಮೋಹ ಮಾತ್ಸರ್ಯದ ಉಚ್ಛ್ರಾಯ ಸ್ಥಿತಿಯ, ನನ್ನ ಅಧೋಗತಿಯು ಸಾರಿದೆ

ಆ ರಾಮನನೆಂತು ಕಾಣ್ವೆನು? ಅವನ ಪಾದಕೆಂದು ಎರಗ್ವೆನು
ಆಡಿಸಿದ ಈ ಕೈಗಳಿಂದಲೇ, ಕಣ್ಣೀರ ಅಭಿಷೇಕ ಮಾಡ್ವೆನು
ಕಗ್ಗತ್ತಲ ಈ ಕೋಣೆಯಲ್ಲಿ, ಕಲ್ಲಿನಂದದಿ ಕಾಯ್ವೆನು
ಪಶ್ಚಾತ್ತಾಪದ ಪ್ರತಿಏಟಿಗೂ, ನೈವೇದ್ಯ ರೂಪಿಯಾಗ್ವೆನು.

ನನ್ನ ಕಾಣಲಿಚ್ಛಿಸುವನೇ ಆ ರಾಮ? ಅವನ ಹಿತಶತ್ರು ನನ್ನ ನಾಮ
ಹದಿನಾಲ್ಕು ವರ್ಷ ಕಳೆದಿಹುದು, ವರ್ಷಗಳಂತೆ ನಿಮಿಷ, ಹೇ ರಾಮ
ಮನದಿ ಹತ್ತಿದೆ ಆಶಾಕಿರಣ, ಮುಕ್ತಿ ಬಯಸಿದೆ ದಿನದಿನದ ಮರಣ
ಬರುವನೇ ಶ್ರೀ ರಾಮ? ನನ್ನ ಕ್ಷಮಿಸುವನೆ ಶ್ರೀರಾಮ?

ಅದೋ ಬಾಗಿಲು ತೆರೆದಿದೆ!!, ಬೆಳಕು ಕತ್ತಲೆ ಓಡಿಸುತಿದೆ
ರಾಮನ ಚಿತ್ರಣ ಕಣ್ಮುಂದಿದೆ, ನಾನು ಸಣ್ಣನೆ ನಡುಗಿದೆ
ಕಾಲುಗಳೇ ಏಳುತಿಲ್ಲ, ಧರೆಗೆ ಭಾರ ಬದುಕಿಹೆನಲ್ಲ
ನನ್ನ ಕ್ಷೀಣ ಧ್ವನಿಯು ಕೂಗಿದೆ, ಕ್ಷಮಿಸು ಹೇ ರಾಮ
ಮುಕ್ತಿ ನೀಡು ಹೇ ರಾಮ

ಮೆಲ್ಲನೆತ್ತಿ ನಿಲ್ಲಿಸಿಹನು, ಮಂದಹಾಸ ಮೆರೆಯುತಿಹನು
ಅಭಯದಾಯಕ ಮೇರು ಅವನು, ಮ್ರದು ಮಾತಲುಲಿದ ಶ್ರೀರಾಮ
“ಕ್ಷಮಿಸಲು ನೀ ಪಾಪಿಯಲ್ಲ, ಮೋಹ ಮಾತ್ಸರ್ಯಗಳ ಕರ್ಮವೆಲ್ಲ
ಪಶ್ಚಾತಾಪ ನಿನ್ನ ತೊಳೆದಿದೆಯಲ್ಲ, ನಿಮಿತ್ತ ನೀ ಈ ರಾಮಾಯಣಕೆಲ್ಲ”.

ರಘುವಂಶ ಕಾಲದ ನಾನೇ ಧನ್ಯ, ರಾಮನ ದರ್ಶನ ನನ್ನ ಪುಣ್ಯ
ಕೆಟ್ಟ ಬುದ್ಧಿಯ ಕುಲಟೆ ನಾನು, ಹರಸಿದಾ ಪುರುಷೋತ್ತಮನು ನೀನು
ಪಾವನ ವಾಗಲಿ ಮನುಜಕುಲ, ರಾಮ ನಾಮ ಭಜಿಪ ಕುಲ
ರಘುಪತಿ ಶ್ರೀರಾಮ, ಜಯ ಜಯ ಹೇ ರಾಮ.

-ವಂದನಾ ಹೆಗಡೆ

7 Responses

  1. ವಿದ್ಯಾ says:

    ನಮಸ್ಕಾರ, ಅಬ್ಬಾ,, ರಾಮಾಯಣ ಎಷ್ಟು ಸುಂದರವಾಗಿ ಸುಲಲಿತವಾಗಿ ಓದಿಸಿಕೊಂಡು ಮನವನ್ನು ಕಲಕುವಂತೆ
    ರಚಿಸಿದ್ದೀರಾ,,ಹೊಗಳಲು ನನಗೆ ಪದಗಳು ಸಾಲಾದಾಗಿದೆ

  2. ಶಂಕರಿ ಶರ್ಮ, ಪುತ್ತೂರು says:

    ರಾಮಾಯಣದಲ್ಲಿ ಕುಖ್ಯಾತಿಗೆ ಒಳಗಾದ ಪಾತ್ರ ಮಂಥರೆಯದು. ಅವಳ ಮನದಾಳದ ಮಾತುಗಳನ್ನು ಕವನ ರೂಪದಲ್ಲಿ ಬಿಂಬಿಸಿದ ಪರಿ ಅನನ್ಯ. ಸಕಾಲಿಕ ಕವನ..ಧನ್ಯವಾದಗಳು.

  3. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ

  4. ಮಂಥರೆಯ ಅಳಲನ್ನು ಸೊಗಸಾಗಿ ಕವನದಲ್ಲಿ ಚಿತ್ರಿಸಿದ್ದೀರಿ ವಂದನೆಗಳು

  5. ಬಿ.ಆರ್.ನಾಗರತ್ನ says:

    ಮಂಥರೆಯ ಮಂಥನ ಕವನ ಅರ್ಥಪೂರ್ಣ ವಾಗಿದೆ.ಅಭಿನಂದನೆಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: