ಮತ್ತೆ ಶಾಲೆ…..ಮತ್ತೆ ಪಾಠ…..ಮತ್ತೆ ಊಟ!
ಶಾಲೆ ಪುನರಾರಂಭವಾಗಿದ್ದಕ್ಕೆ;
ತಾಯಿಗೆ…… ಸಧ್ಯ ಬಚಾವಾದೆ ಎನಿಸಿಬಿಟ್ಟಿದೆ
ತಂದೆಗೆ…… ಅಬ್ಬಾ! ಇನ್ನು ಈ ಮಕ್ಕಳ ಕಾಟವಿಲ್ಲ. ಅದೂಇದೂ ಕೊಡಿಸುವುದು ತಪ್ಪಿತು.
ಮಕ್ಕಳ ಗೆಳೆಯರಿಗೆ….. ಮೂರೂ ಹೊತ್ತೂ ಆಡುತ್ತಿದ್ದೆವು. ತಪ್ಪಿಹೋಯ್ತಲ್ಲಾ..
ನೆರೆಹೊರೆಯವರಿಗೆ…..ನೆಮ್ಮದಿಯಾಗಿ ಮಧ್ಯಾಹ್ನ ಮಲಗಬಹುದು, ಗಲಾಟೆ ತಪ್ಪಿತು.
ಮರ ಗಿಡ-ಕಿಟಕಿ ಬಾಗಿಲುಗಳು…. ಇವರಿಗೆ ಹಾಗೇ ಆಗಬೇಕು. ಚೆಂಡಿನೇಟು ಎಷ್ಟು ಕೊಟ್ಟರು!
ನಿಜ! ಎಲ್ಲರೂ ಹೀಗೆ ಯೋಚಿಸಿದ್ದು ಮೇಲ್ನೋಟಕ್ಕೆ ನಿಜ. ಆದರೆ ಮಗುವಿಗೆ? ಪ್ರತಿದಿನ ಟ್ಯಾಬ್ ನಲ್ಲೋ, ಮೊಬೈಲ್ ನಲ್ಲೋ, ಸಿಸ್ಟಮ್ ನಲ್ಲೋ ಆನ್ ಲೈನ್ ಪಾಠ ಕೇಳಿಕೊಂಡು, ಅದು ಮುಗಿದಾಗ ಅಲ್ಲೇ ಗೇಮ್ ಆಡಿಕೊಂಡು, ಅಪ್ಪ ಅಮ್ಮ ಕೇಳಿದರೆ, ಇಲ್ಲಾ ಬರೀತಿದೀನಿ ಅಂದುಕೊಂಡೋ , ಇನ್ನೂ ಮುಗಿದಿಲ್ಲ ಎಂದು ನೆಪ ಹೇಳುತ್ತಾ ಕಾಲ ತಳ್ಳುತ್ತಿತ್ತು. ಸುಮಾರು ತಿಂಗಳು ಅಂದರೆ ಏಳೆಂಟು ತಿಂಗಳು ಮನೆಯಲ್ಲೇ ಕೂತು, ಕ್ಲಾಸ್ ರೂಮ್ ಮರೆತುಹೋಗಿ, ಶಾಲಾ ವಾತಾವರಣವೇ ದೂರ ಉಳಿದು ಈಗ ಮತ್ತೆ ಶಾಲೆ ಶುರುವಾಯಿತೆಂದರೆ, ಮನಸ್ಸು ರಗಳೆ ಮಾಡುತ್ತದೆ. ಆದರೂ ಶಾಲೆಯ ಸೆಳೆತ ಮನಸಿನೊಳಗೆ ಶಾಲೆಗೆ ಹೋಗು, ರೆಡಿಯಾಗು, ಎಂದು ದಬ್ಬುತ್ತದೆ. ಅಂತೂ ಇಂತೂ ಅನಿವಾರ್ಯವಾಗಿಯಾದರೂ ಶಾಲೆಗೆ ಕಾಲಿಟ್ಟ ಮಗು ತಕ್ಷಣವೇ ಶಾಲೆಗೆ, ಹೊಂದಿಕೊಂಡು ಬಿಡುತ್ತದೆ. ಇಷ್ಟು ದಿನ ಹಿಡಿದ ಜಡತೆ ಬಿಟ್ಟು ಹೋಗಿ ಎಷ್ಟು ದಿನವಾಗಿತ್ತು ನನಗೆ ಈ ಸಂತೋಷವಿಲ್ಲದೆ ಎಂದು ಹಕ್ಕಿಯಾಗಿಬಿಡುತ್ತದೆ. ಮನೆಯಲ್ಲಿ ಕರೋನಾ ಬಗ್ಗೆ ಕೊಟ್ಟಿರುವ ಎಚ್ಚರಿಕೆಗಳನ್ನು ಗಾಳಿಗೆ ತೂರಿ ಹಾಯಾಗಿದ್ದು ಬಿಡುತ್ತದೆ. ಇದು ದೊಡ್ಡ ಮಕ್ಕಳಿಗೂ ಸಣ್ಣ ಮಕ್ಕಳಿಗೂ, ಎಲ್ಲರಿಗೂ ಅನ್ವಯವೇ!
ಇನ್ನು ಶಿಕ್ಷಕರ ಕತೆ ಹೇಗೆ ಹೇಳುವುದು? ಸಾಮಾನ್ಯ ಎಲ್ಲ ಶಿಕ್ಷಕರೂ ಊರಿಂದೂರಿಗೆ ಪ್ರಯಾಣಿಸುವವರೇ. ಕೊರೋನಾ ಭಯವಿದ್ದಾಗ್ಯೂ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು, ನಿಧಾನವಾಗಿ ಮಾಡುತ್ತಿದ್ದ ಮನೆಯ ಕೆಲಸಕಾರ್ಯಗಳನ್ನು ಬೇಗ ಬೇಗ ಮುಗಿಸಿ ಶಾಲೆಗೆ ಹೊರಡಲು ಸಜ್ಜಾಗುತ್ತಾರೆ. ಮಕ್ಕಳನ್ನು ನೋಡಿದ ಆನಂದ ಅವರಿಗೆ ಖಂಡಿತ ಅನನ್ಯವಾದುದು. ಹಾಗೇ ಮಕ್ಕಳಿಗೂ ತಮ್ಮ ಶಿಕ್ಷಕರ ಮುಖದರ್ಶನ ಅಷ್ಟೇ ಆಪ್ಯಾಯಮಾನವಾದುದು.
ಶಾಲೆಯಲ್ಲಿ ತುಂಬಿದ ಧೂಳನ್ನು, ಅಷ್ಟು ದಿನ ಬಿಟ್ಟುಹೋಗಿ ಕಾಂಪೌಂಡಿನೊಳಗೆ ಬೆಳೆದ ಮೆಳೆಯನ್ನು ಸವರಿ ಸಾವರಿಸಿ, ಎರಡು ದಿನ ಪೂರ್ತಿ ಶಾಲಾ ಸ್ವಚ್ಛತೆ ಕೈಗೊಂಡು ಬಿಸಿಯೂಟಕ್ಕೆ ತಯಾರಿ, ಇನ್ನು ಪಾಠ ಪ್ರವಚನಗಳಿಗೆ ತಯಾರಿ ನಡೆಸಿಕೊಂಡು ಸಜ್ಜಾಗುವುದರೊಳಗೆ, ಶಾಲೆಗೆ ಎಂದಿನಂತೆ ಹೊಂದಿಕೊಂಡಂತೆಯೇ ಸರಿ. ಯಾವುದೇ ಭಯ ಆತಂಕಗಳು ಶಿಕ್ಷಕರಿಗೆ ಒಳಗೊಳಗೇ ಕಾಡುತ್ತಿದ್ದರೂ, ಮಕ್ಕಳ ಮುಖ, ಅವರ ಪ್ರೀತಿ, ನಗು, ಎಲ್ಲವನ್ನೂ ಮರೆಸಿ ಶಾಲೆಯಲ್ಲಿರುವಷ್ಟು ಅವಧಿಯನ್ನು ನಿರಾತಂಕವಾಗಿ ಕಳೆದು, ಮನೆಗೆ ವಾಪಸ್ಸಾಗಲು ಬಸ್ಸು ಹತ್ತುತ್ತಾರಲ್ಲಾ , ಆಗ ಕರೋನಾ ಭೀತಿ ತಂತಾನೇ ಆವರಿಸಿಕೊಂಡು ಎದೆಯೊಳಗೊಂದು ಛಳಕು ಉಂಟಾಗುವುದು ಸಹಜವಾಗೇ ಇದೆ.
ಕೊರೋನಾ ಭೀತಿಯಿಂದ ಶಾಲೆ ಆರಂಭಗೊಳ್ಳದಿದ್ದುದು ಗ್ರಾಮದ ಮಕ್ಕಳಿಗೆ ಬಹಳ ಅನ್ಯಾಯವೇ ಸರಿ. ತಂದೆ ತಾಯಿ ಕೂಲಿ ಕೆಲಸಕ್ಕೋ, ಅಥವಾ ಸ್ವಂತ ಗದ್ದೆ ಹೊಲಗಳ ಕೆಲಸಕ್ಕೋ ತೆರಳಿಬಿಟ್ಟರೆ, ಮಕ್ಕಳು ಶಾಲೆಯಿಂದ ಬರುವ ಹೊತ್ತಿಗೆ ನಿರಾತಂಕವಾಗಿ ವಾಪಸ್ಸಾಗುತ್ತಿದ್ದರು. ಆದರೆ ಲಾಕ್ ಡೌನ್ ನಲ್ಲಿ? ಸ್ವಂತ ಜಮೀನಿನವರು ಹೇಗೋ ಕರೆದುಕೊಂಡು ಹೋಗುತ್ತಾರೆ. ಆದರೆ ಕೂಲಿನಾಲಿಯವರ ಕತೆ? ಪಾಪ, ಮಕ್ಕಳು ಬೀದಿಬೀದಿ ಅಲೆದುಕೊಂಡು ಪರದೇಶಿಗಳಂತೆ ಯಾರೋ ಕರುಣೆಯಿಂದ ಕೊಟ್ಟ ತುತ್ತು ಅನ್ನವನ್ನು ತಿಂದು, ಹೆತ್ತವರ ದಾರಿ ಕಾಯುವುದು ಅವರ ನಿತ್ಯಕರ್ಮವಾಗಿ ಹೋಗಿತ್ತು. ಶಾಲೆಯಲ್ಲಿ ಕೊಡುವ ದಾಸೋಹ, ತಂದೆ ತಾಯಿಯರಿಗೆ ನೆಮ್ಮದಿ ತರುತ್ತಿತ್ತು. ಲಾಕ್ ಡೌನ್ ಸಮಯದ ಈ ಸ್ಥಿತಿ ಮಾತ್ರ ನಮ್ಮ ಶತ್ರುವಿಗೂ ಬೇಡ. ಶಾಲೆಯಲ್ಲಿ ಮಕ್ಕಳಿಗಿದ್ದಷ್ಟು ಸುರಕ್ಷತೆ ಹೊರಗಡೆ ಸಿಗಲಾರದು.
ಸಧ್ಯ! ಈಗ ಮತ್ತೆ ಶಾಲೆಗೆ ಹೋಗುವ ಕಾಲ ಬಂದು, ಇಂತಹ ಪೋಷಕರಿಗೆ ನೆಮ್ಮದಿ ತಂದಿದೆ. ಮಕ್ಕಳಿಗೆ ಸಂಭ್ರಮ ತಂದಿದೆ. ಮಕ್ಕಳು ಶಾಲೆಗೆ ಬರುತ್ತಾರಲ್ಲಾ ಎಂಬುದೇ ಶಿಕ್ಷಕರಿಗೆ ಸಮಾಧಾನವಾದರೆ, ಪೋಷಕರಿಗೆ, `ಈ ಆನ್ ಲೈನೆಲ್ಲ ಯಾತಕ್ಕೂ ಆಗ್ತಿರ್‍ಲಿಲ್ಲ. ಏನೇ ಆದ್ರೂ ಸ್ಕೂಲ್ ನಲ್ಲಿ ಪಾಠ ಕಲಿತಂಗ್ ಆಗುತ್ತಾ? ಮಕ್ಕಳು ಹೋಗಿ ಕ್ಲಾಸ್ ನಲ್ಲಿ ಕೂತ್ಕೊಳ್ಳಿ. ಟೀಚರ್ ಎದುರಾಗಿ ಕೂತು ಪಾಠ ಕೇಳುದ್ರೇನೇ ಮಕ್ಕಳಿಗೆ ತಲೆಗೋಗೋದು’ ಇದು ಪೋಷಕರ ಆಂಬೋಣ.
ಅಂತೂ ಇಂತೂ ಶಾಲೆ ಶುರುವಾಗುತ್ತಿದೆ. ವಿದ್ಯಾಗಮದ ಮೂಲಕವೂ ಕಲಿಕೆಯಾಗುತ್ತಿದ್ದು, ಮಕ್ಕಳ ಗೈರುಹಾಜರಿ ತಪ್ಪಿಸಲು, ಮಕ್ಕಳ ಮನವೊಲಿಸಿ ಶಾಲೆಗೆ ಕರೆತರುವುದು ಕಷ್ಟಸಾಧ್ಯದ ಕೆಲಸವೇನಲ್ಲ. ಕಷ್ಟವಾದರೂ ಸಾಧ್ಯಗೊಳಿಸುವುದು ಶಿಕ್ಷಕರಿಗೆ ಕಷ್ಟಸಾಧ್ಯವಲ್ಲ. ಕೊರೋನಾ ಭೀತಿ ಒಂದು ಕಡೆಗೆ ಬಿಸಾಕಿ, ಆತ್ಮವಿಶ್ವಾಸದಿಂದ ಮಕ್ಕಳ ಕೈ ಹಿಡಿದು ಶಿಕ್ಷಕರು ಶಾಲೆಗೆ ಬರುವುದು ಮುಖ್ಯವಾಗಿದೆ. ಇದರಿಂದಮಕ್ಕಳಲ್ಲೂ ಶಿಸ್ತು ಮೂಡುತ್ತದೆ. ಪೋಷಕರಿಗೂ ಜವಾಬ್ದಾರಿ ಹೆಚ್ಚುತ್ತದೆ. ಶಿಕ್ಷಕರು ಹೊಸ ಚೈತನ್ಯ- ಹರ್ಷದಿಂದ ಪಾಠ ಪ್ರಾರಂಭಿಸುತ್ತಾರೆ . ಅದಕ್ಕೆ ಬೇಕಾದ ಸಹಕಾರ; ಸರಕಾರದಿಂದ, ಪೋಷಕರಿಂದ ಮತ್ತು ಸಮಾಜದಿಂದ ಒದಗಿಬಂದರೆ ಸಾಕು, ಶಾಲೆ ಎಂದಿನಂತೆ ನಡೆಯತೊಡಗುತ್ತದೆ. ಇದು ನಮ್ಮೆಲ್ಲರ ಆಶಾಭಾವವಾಗಿದೆ.
– ಬಿ.ಕೆ.ಮೀನಾಕ್ಷಿ, ಮೈಸೂರು.
ಕರೋನಾ ಎಂಬ ಪಿಡುಗಿನಿಂದಾದ ಅನುಕೂಲ ಅನಾನುಕೂಲಗಳು ಮನಸ್ಥಿತಿ ಪರಿಸ್ಥಿತಿಗಳ ಬಗ್ಗೆ ಶಾಲೆಗಳು ಶಿಕ್ಷಕರು.ಮಕ್ಕಳು.ಪೋಷಕರುಗಳ ನಿಲುವಿನ ಅನಾವರಣ ಗಳಿಸಿರುವ ಮೀನಾಕ್ಷಿಯವರ ಲೇಖನ ಚೆನ್ನಾಗಿದೆ ಮೂಡಿ ಬಂದಿದೆ.ಒಳಿತಾಗಲೆಂಬ ಹಾರೈಕೆಯೂ ಶುಭ ಸೂಚನೆ ನೀಡಿದೆ.ಅಭಿನಂದನೆಗಳು ಮೀನಾಕ್ಷಿ.
Thank you madam
ಚೆಂದದ ಬರಹ…ನಿಮ್ಮ ಅಭಿಪ್ರಾಯವೇ ನನ್ನ ಅನಿಸಿಕೆ ಕೂಡ. ಎಲ್ಲರೂ ಆಶಾಭಾವನೆಯಿಂದ ಮುಂದುವರಿಯಬೇಕು.
ಧನ್ಯವಾದ ಮೇಡಂ.
ಹೌದು, ಕೊರೋನಾ ದಿಂದ ಎಲ್ಲರೂ ಕಳೆದುಕೊಂಡದ್ದು ಬಹಳ. ಲಾಕ್ ಡೌನ್ ಪರಿಣಾಮ ಮಕ್ಕಳ ಮೇಲೆ ವಿಪರೀತವಾಗಿ ಆಗಿದೆ, ಓಡಾಡಿಕೊಂಡಿದ್ದವರನ್ನು ಕೂಡಿ ಹಾಕಿದಂತಾಗಿದೆ. ಮುಂದೆ ಬರುವ ದಿನಗಳಾದರೂ ಸರಿಯಾಗಿರಲಿ ಅನ್ನುವ ನಿರೀಕ್ಷೆ ಈಗ ಎಲ್ಲರಲ್ಲೂ.
ಧನ್ಯವಾದ ನಯನಾ
ಧನ್ಯವಾದ ಮೇಡಂ
ಜಗತ್ತಿನಾದ್ಯಂತ ಜನರನ್ನು ಭಯಭೀತಿಗೊಳಿಸಿರುವ ಕೊರೊನಾವು ಮಕ್ಕಳ ಭವಿಷ್ಯದ ಮೇಲೆ ಆತಂಕಕಾರಿ ಪರಿಣಾಮವನ್ನು ಬೀರಿದೆ. ಈಗ ಪಾಠಗಳು ಆಂಶಿಕವಾಗಿ ಪ್ರಾರಂಭವಾದರೂ ಭಯದ ಹಿಡಿತದಿಂದ ಇನ್ನೂ ಪಾರಾಗಿಲ್ಲ.. ಆಶಾದಾಯಕ ಭವಿಷ್ಯಕ್ಕಾಗಿ ಕಾಯೋಣ..ಸೊಗಸಾದ ಸಕಾಲಿಕ ಲೇಖನ..ಧನ್ಯವಾದಗಳು ಮೇಡಂ.