ಕವಿ ನೆನಪು 25: ಲಿಪಿಕಾರ ಎಂ ವಿ ವೆಂಕಟೇಶಮೂರ್ತಿ ಹಾಗೂ ಕೆ ಎಸ್ ನ

Share Button
 

ವಿ ಸೀ ಅವರ ನೆನಪಿನಲ್ಲಿ ಸ್ಥಾಪಿಸಲಾಗಿರುವ “ವಿ ಸೀ ಸಂಪದ” ಎಂಬ ಸಂಘಟನೆಯ ರೂವಾರಿ ಶ್ರೀ ಎಂ ವಿ ವೆಂಕಟೇಶಮೂರ್ತಿ ಅವರು, ನಮ್ಮ ತಂದೆಯವರ ನಿಕಟವರ್ತಿಗಳಲ್ಲಿ ಮುಂಚೂಣಿಯ ಸ್ಥಾನ ಪಡೆದಿದ್ದವರು. ವೆಂಕಟೇಶಮೂರ್ತಿ ಎಂಬ ನಿಜನಾಮಧೇಯ ಹೊಂದಿದ್ದರೂ ಪ್ರೇಮಕುಮಾರ್ ಅಥವಾ ಕುಮಾರ್ ಎಂದೇ ಚಿರಪರಿಚಿತರು. ಸುಮನಾ ಎಂಬ ಗುಪ್ತನಾಮದಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ‘ವಿ ಸೀ 75’ ಎಂಬ ಸಂಭಾವನಾ ಗ್ರಂಥದ ಪ್ರಕಟಣೆಯಲ್ಲೂ ಅವರ ಪಾತ್ರ ಹಿರಿದಾದದ್ದು.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಯಾಗಿದ್ದ ಮೂರ್ತಿಯವರು ಕಾರ್ಮಿಕ ಸಂಘಟನೆಯಲ್ಲಿ ಸಕ್ರಿಯವಾಗಿದ್ದರು.ಎ ಐ ಬಿ ಇ ಐ ಕಾರ್ಮಿಕ ಸಂಘದ ಅಖಿಲ ಭಾರತ ಮಟ್ಟದ ನಾಯಕರಾಗಿ ಸೇವೆ ಸಲ್ಲಿಸಿದ್ದವರು .ಇಷ್ಟೆಲ್ಲ ಬಿಡುವಿರದ ಕಾರ್ಯಭಾರದ ನಡುವೆಯೂ ದಿನಕ್ಕೆ ಎರಡು ಬಾರಿ ವಿಸೀ ಅವರ ಮನೆಗೆ ಭೇಟಿ ಇತ್ತು, ಅವರು ಉಕ್ತಲೇಖನ ನೀಡಿದ್ದನ್ನು ಬರೆದುಕೊಂಡು, ಲೇಖನದ ಅಂತಿಮರೂಪ ಸಿದ್ಧವಾಗಲು ನೆರವಾಗುತ್ತಿದ್ದವರು ಎಂ ವಿ ವಿ.

ನಮ್ಮ ತಂದೆಯವರಿಗೆ ಮೂರ್ತಿಯವರು ಪರಿಚಯವಾದದ್ದು ವಿ ಸೀ ಅವರ ಮನೆಯಲ್ಲೇ..ಸದಾ ಶ್ವೇತವಸ್ತ್ರಧಾರಿ, ನಗುಮುಖ, ಆಕರ್ಷಕ ಮಾತುಗಾರಿಕೆಗಳಿಂದ ಸೆಳೆದುಕೊಳ್ಳುವ ವ್ಯಕ್ತಿತ್ವ ಅವರದ್ದು. ನಮ್ಮ ತಂದೆಯವರು ಅವರನ್ನು ಕರೆಯುತ್ತಿದ್ದುದು ಕುಮಾರ್ ಎಂದೇ. 1993ರ ಹೊತ್ತಿಗೆ ನಮ್ಮ ತಂದೆಯವರ ದೃಷ್ಟಿ ಕ್ಷೀಣಿಸುತ್ತಾ ಬಂದು,ಸ್ವತಂತ್ರವಾಗಿ ಬರವಣಿಗೆ ಮಾಡುವುದು ಕಷ್ಟವಾಯಿತು. ಈ ಕಾರಣದಿಂದ ಅವರು ಕಾವ್ಯರಚನೆಗೆ ಇತಿಶ್ರೀ ಹಾಡಲೂ ತೀರ್ಮಾನಿಸಿದರು. ಅಷ್ಟು ಹೊತ್ತಿಗೆ ಮೂರ್ತಿಯವರು ಬ್ಯಾಂಕ್ ಸೇವೆಯಿಂದ ಸ್ವಯಂನಿವೃತ್ತಿ ಪಡೆದು, ನಮ್ಮ ಮನೆಯ ಹತ್ತಿರವೇ ರಾಜೀವನಗರದಲ್ಲಿ ಮನೆ ಮಾಡಿದ್ದರು.

ನಮ್ಮ ತಂದೆಯವರ ತೀರ್ಮಾನ ತಿಳಿದು ವಿಷಾದಪಟ್ಟ ಅವರು ಮನೆಗೆ ಬಂದು “ಬರವಣಿಗೆ ನಿಲ್ಲಿಸಬೇಡಿ.ನೀವು ಹೇಳಿದ್ದನ್ನು ನಾನು ಬರೆದುಕೊಂಡು ಅಂತಿಮ ರೂಪ ಸಿದ್ಧಪಡಿಸಿಕೊಡುತ್ತೇನೆ” ಎಂದು ಭರವಸೆ ನೀಡಿದರು. ಕವನಗಳು ಹೇಳಿ ಬರೆಸುವ ವಿಧಾನಕ್ಕೆ ಸರಿಹೊಂದುವುದಿಲ್ಲ ಎಂದು ನಮ್ಮ ತಂದೆ ಅವರಿಗೆ ಹೇಳಿದರೂ, ಅಂತಿಮವಾಗಿ ಈ ಪ್ರಸ್ತಾವಕ್ಕೆ ಒಪ್ಪಿಗೆ ಪಡೆಯುವಲ್ಲಿ  ಮೂರ್ತಿಯವರು ಯಶಸ್ವಿಯಾದರು.

ಶ್ರೀ ಎಂ ವಿ ವೆಂಕಟೇಶಮೂರ್ತಿ

ಆ ಕ್ರಮದಲ್ಲಿ 1993ರಿಂದ 2003ರವರೆಗೆ ಕನ್ನಡ ಕಾವ್ಯಲೋಕದಲ್ಲೇ ಕಂಡರಿಯದ, ಸದ್ದಿಲ್ಲದ ಪವಾಡವೊಂದು ನಡೆದುಹೋಯಿತು. ಕೆ ಎಸ್ ನ ಅವರು ಇನ್ನೂರ ಐವತ್ತಕ್ಕೂ ಹೆಚ್ಚು ಕವನಗಳನ್ನು ಮೂರ್ತಿಯವರಿಗೆ ಹೇಳಿ ಬರೆಸಿದರು. ಈ ಕವನಗಳು “ನವಿಲದನಿ, ಸಂಜೆಹಾಡು ಕೈಮರದ ನೆರಳಲ್ಲಿ, ಎದೆ ತುಂಬ ನಕ್ಷತ್ರ, ಮೌನದಲಿ ಮಾತ ಹುಡುಕುತ್ತ, ದೀಪ ಸಾಲಿನ ನಡುವೆ “ ಎಂಬ ಆರು ಸಂಕಲನಗಳಲ್ಲಿ ಪ್ರಕಟಗೊಂಡವು. (2004ರಲ್ಲಿ ಪ್ರಕಟವಾದ ಮಲ್ಲಿಗೆಯ ಮಾಲೆ ಸಮಗ್ರ ಕವನ ಸಂಕಲನದಲ್ಲಿ ಈ ಎಲ್ಲ ಕವನಗಳು ಲಭ್ಯ).

ಕೆಲವು ಸಾರಿ ,ಕವಿಯ ಮನಸ್ಸಿನಲ್ಲಿ ಕವನಗಳು ರೂಪುಗೊಂಡ ಲಹರಿಗಳಿಗೆ ಅನುಸಾರವಾಗಿ ಮೂರ್ತಿಯವರು ಪ್ರತಿದಿನ ಮನೆಗೆ ಭೇಟಿ ನೀಡುವುದು ಅನಿವಾರ್ಯವಾಗಿತ್ತು. ಅವರು ಇದಕ್ಕಾಗಿ ಎಂದೂ ಬೇಸರಿಸಲಿಲ್ಲ. ತಮ್ಮ ಸಂತೋಷದ ಕರ್ತವ್ಯವೆಂದೇ ಭಾವಿಸಿದ್ದರು.

ಒಂದು ಸಲ ಬ್ಯಾಂಕಿಗೆ ಹೋಗುವ ಮುಂಚೆ ತಂದೆಯವರನ್ನು ನೋಡಲು ನಾನು ಹೋದಾಗ “ಕುಮಾರ್ ಗೆ ಫೋನ್ ಮಾಡು “ ಎಂದರು.
ನಾನು “ಇನ್ನೂ ಎಂಟೂವರೆ ,ಒಂಬತ್ತಕ್ಕೆ ಬರ್ತಾರೆ ಸ್ವಲ್ಪ ತಾಳಿ”ಎಂದೆ .
“ಇಲ್ಲಯ್ಯ,ಈಗಲೇ ಮಾಡು “ಎಂದು ಅವಸರಿಸಿದರು ನಮ್ಮ ತಂದೆ.

ಆಗ ನಮ್ಮ ತಾಯಿ “ಯಾಕೆ ಅವರಿಗೆ ತೊಂದರೆ ಕೊಡ್ತೀರಾ. ಪಾಪ ಮನೇಲಿ ಏನು ಅನಾನುಕೂಲ ಇರತ್ತೋ ಏನೋ. ಗಿರಿಜಾ(ಮೂರ್ತಿಯವರ ಪತ್ನಿ) ಏನಂದು ಕೊಳ್ತಾರೆ, ಹೀಗೆ ಫೋನ್ ಮಾಡಿದ್ರೆ “ಎಂದು ಆಕ್ಷೇಪಿಸಿದಾಗ,
“ನೀ ಸುಮ್ನಿರೇ ನಿನಗೇನು ಗೊತ್ತು ಈ ವಿಷಯ” ಎಂದು ತಂದೆ ನಮ್ಮ ತಾಯಿಯವರಿಗೆ ಉತ್ತರಿಸಿದ್ದು ಮತ್ತಷ್ಟು ವಾಗ್ವಾದಕ್ಕೆ ದಾರಿಮಾಡಿಕೊಟ್ಟಿತು.

ಮೂರ್ತಿಯವರು ನಮ್ಮ ತಂದೆಯವರಿಗೆ ಅಷ್ಟು ನಿಕಟವಾಗಿದ್ದರೂ, ನಮ್ಮ ಮನೆಯ ಆಂತರಿಕ ವ್ಯವಹಾರದಲ್ಲಿ ಎಂದೂ ಪ್ರವೇಶಿಸಲಿಲ್ಲ. ನಮ್ಮ ಮನೆಯ ಪ್ರತಿಯೊಬ್ಬರೂ ಅವರನ್ನು ಇಂದೂ ನಮ್ಮ ಕುಟುಂಬದ ಸದಸ್ಯರೆಂದೇ ಭಾವಿಸಿದ್ದೇವೆ.

ಕೆ ಎಸ್ ನ ಕುಟುಂಬ ಟ್ರಸ್ಟ್ ವತಿಯಿಂದ ಶ್ರೀ ಎಂ ವಿ ವೆಂಕಟೇಶಮೂರ್ತಿ ಅವರಿಗೆ ಗೌರವಾರ್ಪಣೆ

ಇಂಥ ಅಪರೂಪದ ಕಾವ್ಯ ಪರಿಚಾರಕ ಮೂರ್ತಿಯವರನ್ನು ನಮ್ಮ ತಂದೆಯವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಕೆ ಎಸ್ ನ ಕುಟುಂಬ ಟ್ರಸ್ಟ್ ವತಿಯಿಂದ ಗೌರವಿಸಲು ತೀರ್ಮಾಸಿದಾಗ ಅವರನ್ನು ಒಪ್ಪಿಸುವುದೇ ಪ್ರಯಾಸವಾಯಿತು. ಅಷ್ಟು ಸಂಕೋಚಜೀವಿ ಅವರು.

ನಮ್ಮ ತಂದೆಯವರು ನಿಧನರಾದಾಗ ಅವರು ಹೇಳಿದ್ದು “ನಾಳೆಯಿಂದ ನಾನು ನಿರುದ್ಯೋಗಿ” . ಸದ್ದು ಮಾಡದ ಸಾಧಕ ಎಂ ವಿ ವಿಯವರು  ನಮ್ಮ ತಂದೆಯವರ ಆಪ್ತರಲ್ಲಿ ಆಪ್ತರು.

(ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=30610

-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)

2 Responses

  1. ನಯನ ಬಜಕೂಡ್ಲು says:

    ಸ್ನೇಹದ ತಂತು ಬೆಸೆಯುವ ರೀತಿ, ಆಪ್ತತೆಯ ಭಾವ ಆವರಿಸಿಕೊಳ್ಳುವ ಪರಿಯನ್ನು ನಾವಿಲ್ಲಿ ಕಾಣಬಹುದು.

  2. ಶಂಕರಿ ಶರ್ಮ, ಪುತ್ತೂರು says:

    ಆಹಾ..ಮೂರ್ತಿ ಸರ್ ಸದ್ದಿಲ್ಲದೆ ಮಾಡಿದ ಇಂತಹ ಅಪರೂಪದ ತ್ದಾಗದಿಂದಾಗಿ ಕೆ.ಎಸ್. ಎನ್ ಅವರ ಉತ್ಕೃಷ್ಟ ಕವನಗಳು ನಮಗೆ ಲಭಿಸುವಂತಾಯಿತು..ವಿಶೇಷ ಮಾಹಿತಿಪೂರ್ಣ ಅಪೂರ್ವ ಲೇಖನಕ್ಕಾಗಿ ಧನ್ಯವಾದಗಳು ಸರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: