ಗುಬ್ಬಿಗೂಡು
ಅದೊಂದು ದಿನ ನನ್ನೊಂದಿಗೆ ಹೊಲಕ್ಕೆ ಬಂದಿದ್ದ ಜಾಣೆ ಮಗಳು ಮರಳಿನಲ್ಲಿ ಆಟವಾಡುತ್ತಿದ್ದಳು. ಮನೆಯಲ್ಲಿದ್ದರೆ ಈ ಅವಕಾಶ ದೊರೆಯುವುದಿಲ್ಲ. ಮನೆಯಿಂದಾಚೆ ಆಡಲು ಹೋದರೆ ನನ್ನವಳು ‘ಮಣ್ಣಿನಲ್ಲೆಲ್ಲ ಆಡಬೇಡ. ಬಟ್ಟೆ, ಕೈಕಾಲುಗಳೆಲ್ಲ ಕೊಳೆಯಾಗುತ್ತೆ’ ಎಂದು ಗದರುತ್ತಾಳೆ. ಆದ್ದರಿಂದ ಹೀಗೆ ಅಪ್ಪನ ಜೊತೆ ಆಗಾಗ ಹೊಲಕ್ಕೆ ಬರುವ ಜಾಣೆ ಕಂದಮ್ಮ ಮಣ್ಣಿನಲ್ಲಿ ಸಾಕಾಗುವಷ್ಟು ಆಟವಾಡಿ ತನ್ನಾಸೆಯನ್ನ ಪೂರೈಸಿಕೊಳ್ಳುವುದು. ಮಕ್ಕಳು ಮಣ್ಣಿನಲ್ಲಿ ಆಟವಾಡುವುದರಿಂದ ಅವರಲ್ಲಿ ಕ್ರಿಯಾಶೀಲತೆ ಬೆಳೆಯುವುದು, ಮತ್ತು ಮನಸ್ಸಿನ ಒತ್ತಡವು ಕಡಿಮೆಯಾಗುವುದೆಂದು ಇತ್ತೀಚೆಗೆ ಓದಿ ತಿಳಿದಿದ್ದರ ಪರಿಣಾಮ ಮಗಳನ್ನು ಪ್ರಶ್ನಿಸುವುದರೊಂದಿಗೆ ಮಣ್ಣಿನಲ್ಲಿ ಆಡುತ್ತಿದ್ದ ಮಗಳನ್ನು ಉತ್ತೇಜಿಸುತ್ತಿದ್ದೆ.
‘ಜಾಣೆ ಮಗಳೆ ಏನ್ಮಾಡ್ತಿದ್ದೀಯ?’
‘ಆಟ ಆಡ್ತಿದ್ದೀನಿ’
‘ಮಣ್ಣಲ್ಲಿ ಯಾವ್ ಆಟ ಆಡ್ತಿದ್ದೀಯ?’
‘ಗುಬ್ಬಚ್ಚಿ ಗೂಡಿನ ಆಟ’
‘ಗುಬ್ಬಚ್ಚಿ ಅಂದ್ರೆ ನಿಂಗಿಷ್ಟನ?’
‘ಇಷ್ಟ’
‘ಗುಬ್ಬಚ್ಚಿ ಗೂಡಿನ ಆಟ ಹೇಗಾಡೋದು?’
‘ಇಲ್ಲೆಲ್ಲ ಇರೋ ಮಣ್ಣಲ್ಲಿ ಗೂಡು ಮಾಡೋದು’ ತನ್ನ ಸುತ್ತಲ ಮಣ್ಣನ್ನೆಲ್ಲ ಗುಡಿಸಿ ಮಾಡಿದ್ದ ತನ್ನೆದುರಿದ್ದ, ಅವಳ ಬೊಗಸೆಯಷ್ಟೇ ಪುಟ್ಟ ಮಣ್ಣಿನ ಗುಡ್ಡೆಯನ್ನ ತೋರಿಸಿದಳು.
‘ಗೂಡು ಮಾಡಿದ್ಮೇಲೆ?’ ನನ್ನ ಪ್ರಶ್ನೆ ಮುಂದುವರಿದವು.
‘ಆಮೇಲೆ ನಾವು ಮನೆಗ್ ಹೋಗ್ತೀವಲ್ಲ, ಸಾಯಂಕಾಲ ಆಗುತ್ತಲ್ಲ, ಮಳೆ ಬರುತ್ತಲ್ಲ, ಆಗ ಗುಬ್ಬಚ್ಚಿ ಬಂದು ಇದರೊಳಗೆ ಇರುತ್ತೆ. ಅದು ಮಳೆಯಲ್ಲಿ ನೆನೆಯೋದಿಲ್ಲ.’ ಮಗಳ ಉತ್ತರ ಕೇಳಿ ಏನು ಹೇಳಬೇಕೆಂದು ತಿಳಿಯಲಿಲ್ಲ.
ಮಳೆ ಬಂದಾಗ ಗುಬ್ಬಚ್ಚಿ ತಾನು ಮಾಡಿದ ಗೂಡಿನಲ್ಲಿ ಬೆಚ್ಚಗೆ ಮಲಗುವುದೆನ್ನುವ ಮುಗ್ಧ ನಂಬಿಕೆ. ಗುಬ್ಬಚ್ಚಿ ಮಳೆಯಲ್ಲಿ ನೆನೆಯಬಾರದೆನ್ನುವ ಉದಾರ ಮನಸ್ಸಿನ ಕಾಳಜಿ..
ಕೈಕಾಲು ತೊಳೆದು ಮನೆಗೆ ಹೋಗುವಾಗಲೂ ಮಗಳಿಗೆ ಗುಬ್ಬಚ್ಚಿಗಳದ್ದೇ ಚಿಂತೆ ‘ಅಪ್ಪಾ ನಾಳೆನೂ ಮತ್ತೆ ಬರೋಣ, ಮತ್ತಷ್ಟು ಗುಬ್ಬಚ್ಚಿಗೂಡು ಮಾಡೋಣ. ಜಾಸ್ತಿ ಗುಬ್ಬಚ್ಚಿ ಇದ್ದಾವಲ್ಲ, ಅವುಗಳಿಗೆಲ್ಲ ಮನೆ ಬೇಕಲ್ಲ..
ಬಾಲ್ಯದ ನೆನಪುಗಳು ನನ್ನ ಮನಸ್ಸಿಗೆ ಮುತ್ತಿದವು. ನಾವು ಸಹ ಹೀಗೆ ನಮ್ಮಿಷ್ಟ ಬಂದಷ್ಟು ಹೊತ್ತು ಮಣ್ಣಿನಲ್ಲಿ ಆಡುತ್ತಿದ್ದೆವು. ಈಗಿನ ಮಕ್ಕಳಿಗಿರುವಷ್ಟು ಒಳ್ಳೆಯ ಊಟ, ಬಟ್ಟೆ, ಆಟಿಕೆಗಳ ಸವಲತ್ತುಗಳು ನಮಗಿರಲಿಲ್ಲ. ಜೊತೆಗೆ ಮಣ್ಣಿನಲ್ಲಿ ಆಡಬೇಡ ಎಂಬ ಯಾವ ಕಟ್ಟಳೆಗಳಂತು ಇರಲೇ ಇಲ್ಲ. ಈಗ ಮಗಳ ಬಳಿ ಮೂಟೆ ಕಟ್ಟಿಡುವಷ್ಟು ಆಟಿಕೆಗಳಿವೆ. ನನ್ನವಳು ಅದನ್ನೇ ಮಾಡಿದ್ದಾಳೆ. ಮನೆಯ ತುಂಬಾ ಹರಡಿಡ್ತೀಯ, ನಾನು ಸಹ ಎಷ್ಟುಸಲ ಅಂತ ಅಚ್ಚುಕಟ್ಟು ಮಾಡೋದೆಂದು ಗದರಿ ಆಟಿಕೆಗಳನ್ನೆಲ್ಲ ಗಂಟುಮೂಟೆ ಕಟ್ಟಿಟ್ಟಿದ್ದಾಳೆ. ಆಗೀಗ ಮಗಳು ಕೇಳಿದಾಗ ಒಂದೆರಡು ಆಟಿಕೆಗಳನ್ನ ತೆಗೆದುಕೊಡುವುದು, ಮತ್ತೆ ಮೂಟೆಗೆ ಸೇರಿಸುವುದು ನನ್ನ ಜವಾಬ್ದಾರಿ..
ನಮ್ಮ ಬಾಲ್ಯದಲ್ಲಿ ನಮ್ಮ ಬಳಿ ಆಟಿಕೆಗಳೇ ಇರಲಿಲ್ಲ. ಕೈಗೊಂದು ಸಣ್ಣ ಕಡ್ಡಿಯ ತುಣುಕು ಸಿಕ್ಕರೆ ಅದರಲ್ಲೇ; ಮಣ್ಣಿನಲ್ಲಿ ಬಚ್ಚಿಟ್ಟು ಹುಡುಕುವ ಉಪ್ಪುಪ್ಪು ಮೂಟೆಯ ಆಟ ಆಡುತ್ತಿದ್ದೆವು. ಇಟ್ಟಿಗೆಯನ್ನೆ ಬಸ್ಸು ಕಾರೆಂದು ಬೀದಿಯ ತುಂಬಾ ತಳ್ಳಾಡುತ್ತ ಬೆಳೆದೆವು. ತೆಂಗಿನಕಾಯಿ ಚಿಪ್ಪು, ಕಲ್ಲು, ಯಾವುದೋ ಹಣ್ಣಿನ ಬೀಜಗಳು, ಕಡ್ಡಿಯ ತುಣುಕುಗಳು, ಹಳೆಯ ಬಟ್ಟೆಗಳು, ಪೇಪರಿನ ತುಣುಕುಗಳು, ಕೊನೆಗೆ ಖಾಲಿಯಾದ ಬೆಂಕಿಪೆಟ್ಟಿಗೆಯೂ ನಮ್ಮ ಆಟಿಕೆಯ ವಸ್ತುವಾಗಿತ್ತು. ಬಾಲ್ಯದ ಪೊರೆ ಕಳಚುವ ಹೊತ್ತಿಗೆ ಗೋಲಿ ಬುಗುರಿ ನಮ್ಮ ಕೈ ಸೇರಿದ್ದು..
ಆಟಿಕೆಗಳು ಇಲ್ಲದೆಯೂ ನಾವು ಬಚ್ಚಿಟ್ಟು ಹುಡುಕುವ ಆಟ ಆಡುತ್ತಿದ್ದೆವು. ನಮಗೆ ಕೊಡುವ ಯಾವುದೋ ಒಂದು ವಸ್ತುವನ್ನ ನಾವು ಬಚ್ಚಿಡಬೇಕು. ಆ ವಸ್ತುವನ್ನ ಇಂತಿಷ್ಟು ಸಮಯದೊಳಗೆ ಹುಡುಕಿದರೆ ಎದುರಾಳಿ ಗೆದ್ದಂತೆ. ಅಕಸ್ಮಾತ್ ಹುಡುಕಲಾಗದಿದ್ದರೆ ಎದುರಾಳಿ ಸೋತು, ನಾವು ಗೆದ್ದಂತೆ. ಬಾಲ್ಯದಲ್ಲಿ ನಾವುಗಳು ಆಡಿ ಬಿಟ್ಟ ಆಟಗಳೇ ಈಗ ಕೆಲವು ರಿಯಾಲಿಟಿ ಶೋಗಳ ಕಾನ್ಸೆಪ್ಟುಗಳು! ಬಾಲ್ಯದಲೇ ನಾವೆಷ್ಟು ದೊಡ್ಡ ಸೆಲಬ್ರೆಟಿಗಳಾಗಿದ್ವಿ ಅಲ್ವಾ?
ಬಾಲ್ಯದ ಇನ್ನೊಂದು ಬಲು ಇಷ್ಟದ ಆಟವೆಂದರೆ ಕಣ್ಣಾಮುಚ್ಚಾಲೆ. ನಮ್ಮತ್ತೆಯವರದ್ದೊಂದು ದೊಡ್ಡ ಮನೆಯಿತ್ತು. ಎಷ್ಟು ದೊಡ್ಡದೆಂದರೆ ಅದನ್ನು ವಿವರಿಸುತ್ತೇನೆ ಓದಿ. ಮೊದಲ ಹೆಜ್ಜೆ ಸಗಣಿ ಸಾರಿಸಿದ ಮನೆಯ ಅಂಗಳಕ್ಕಿಟ್ಟರೆ, ಅಲ್ಲಿಂದ ನಾಲ್ಕೆಜ್ಜೆ ಮುಂದಿಟ್ಟರೆ ನೆಲಕ್ಕೆ ಬಂಡೆಹಾಸಿನ ಹಜಾರ ಸಿಗುತ್ತಿತ್ತು. ಅದರ ಬಲ ಬದಿಗೆ ಒಂದು ಕೋಣೆ, ಎಡಬದಿಗೆ ಇನ್ನೊಂದು ಕೋಣೆ. ಬಲಬದಿಯ ಕೋಣೆಯಲ್ಲೇ ಸ್ನಾನದ ಮನೆಯಿತ್ತು. ತಲೆಬಾಗಿಲಿನಿಂದ ಒಳಗಡಿಯಿಟ್ಟರೆ ಮೊದಲಿಗೆ ಸಿಗುತ್ತಿದ್ದುದು ಕೆಳಗಿನ ಪಡಸಾಲೆ, ಅದರ ಮುಂದೆ ಮೇಗಲ ಮಡಸಾಲೆ, ಅದರ ಎಡ ಬದಿಗೆ ಮಗ್ಗಲು ಪಡಸಾಲೆ. ಈ ಪಡಸಾಲೆಗಳ ಎಡಬದಿಗೆ ಹುಲ್ಲಿನ ಕೊಟ್ಟಿಗೆ, ಬಲಬದಿಗೆ ದನದ ಕೊಟ್ಟಿಗೆಗಳಿದ್ದವು. ಪಡಸಾಲೆಯಿಂದ ಒಳನಡೆದರೆ ಅಡುಗೆಮನೆ, ಅಡುಗೆಮನೆಯ ಬಲಬದಿಗೆ ಚಿಕ್ಮನೆ, ಎಡಬದಿಗೆ ಕತ್ತಲಕೋಣೆ. ಮನೆಯೆಷ್ಟು ವಿಶಾಲವಿತ್ತೆಂದರೆ, ನಾವು ಕಣ್ಣಾಮುಚ್ಚಾಲೆ ಆಟ, ಬಚ್ಚಿಡುವ ಆಟ ಆಡಲು ಹೇಳಿ ಕಟ್ಟಿಸಿದಂತಿತ್ತು.
ಆಗಿನ ಮನೆಗಳು ಸಹ ಹೇಗಿದ್ದವೆಂದರೆ, ಈಗಿನಂತಲ್ಲ! ಮಣ್ಣಿನ ಮಾಳಿಗೆಯ ಮನೆಗಳು ಬಹಳ ವಿಶಾಲವಿದ್ದವು. ಈಗಿನಂತೆ ಸಿಮೆಂಟು ಇಟ್ಟಿಗೆಗಳನ್ನ ಬಳಸದೇ ಬರೀ ಕಲ್ಲು, ಮಣ್ಣು, ಕಡ್ಡಿಗಳನ್ನು ಬಳಸಿಯೇ ಎಷ್ಟೊಂದು ಬಂದೋಬಸ್ತ್ ಮನೆಗಳನ್ನ ಕಟ್ಟಿದ್ದರು! ಚಳಿಗಾಲದಲ್ಲಿ ಚಳಿಯಾಗುತ್ತಿರಲಿಲ್ಲ, ಬೇಸಿಗೆಯಲ್ಲಿ ಸೆಕೆಯಾಗುತ್ತಿರಲಿಲ್ಲ. ಮಳೆಗಾಲದಲ್ಲಿ ಸೋರುತ್ತಿತ್ತೆಂಬ ಕೊರತೆಯೊಂದು ಬಿಟ್ಟರೆ ವಿದ್ಯಭ್ಯಾಸವಿಲ್ಲದ ಹಿರಿಯರು ಆಗಲೇ ಎಷ್ಟು ವೈಜ್ಞಾನಿಕವಾಗಿ ಮನೆ ಕಟ್ಟಿದ್ದರೆಂದು ಅಚ್ಚರಿಯಾಗುವುದು..
ಅದೊಂದು ಕಾಲದಲ್ಲಿ ಮಲೆನಾಡಿನ ಕಡೆ ಬರೀ ಹೆಂಚಿನ ಮನೆಗಳು ಕಾಣುವಂತೆ ನಮ್ಮೂರ ಕಡೆ ಬರೀ ಮಣ್ಣಿನ ಮಾಳಿಗೆಯ ಮನೆಗಳೇ! ಮಳೆಗಾಲದಲ್ಲಿ ಮನೆಯ ಜಂತೆ ಸೋರುವಾಗೆಲ್ಲ ನಮ್ಮ ಮಾವನವರೊಬ್ಬರು ಹೀಗೆ ಹೇಳುತ್ತಿದ್ದರು. ‘ಇಂಥಾ ಮಳೆಗಾಲಕ್ಕೆಲ್ಲ ಹೆಂಚಿನ ಮನೆಯೇ ಸರಿ. ಇರುವೆ ಗೂಡಿಡಲ್ಲ, ಇಲಿ ದೊಗರಿಡಲ್ಲ. ಮಲೆನಾಡ ಕಡೆಯೆಲ್ಲ ಬರೀ ಹೆಂಚಿನ ಮನೆಗಳೆ. ಮಳೆಗಾಲ ಪೂರ್ತಿ ಸದಾ ಮಳೆ ಬರುತ್ತಿರುತ್ತೆ. ಅದಕ್ಕೆ ಅಲ್ಲೆಲ್ಲ, ಮನೆ ಸೋರಬಾರದಂತ ಬರೀ ಹೆಂಚಿನಲ್ಲೆ ಕಟ್ಟಿರೋದು. ಅಲ್ಲೇನಾದ್ರು ಇಂಥಾ ಮಣ್ಣಿನ ಮಾಳಿಗೆ ಮನೆಗಳಿದ್ರೆ ಒಂದು ಮಳೆಗಾಲವು ಬಾಳಿಕೆ ಬರಲ್ಲ. ಸುಮ್ನೆ ನಾವು ಅತ್ಲಾಗ್ ಹೆಂಚಿನ ಮನೆ ಕಟ್ಟಿಕೊಳ್ಳಬೇಕು’ ಹೀಗೆ ಹೇಳುತ್ತಿದ್ದ ಮಾವನವರೆ ಚಳಿಗಾಲ ಶುರುವಾದಾಗ, ಹೆಂಚಿನ ಮನೆಗೆ ಜನ ಅದೆಂಗ್ ಇರುತ್ತಾರೋ? ಇಬ್ಬನಿ ಮೇಲೆ ಸುರುದು ಮನೆಪೂರ್ತಿ ಥಂಡಿಯಾಗಿ ತಣ್ಣಗೆ ಕೊರೆಯುತ್ತೆ. ಈ ಮಣ್ಣಿನ ಮನೆಗಳೆ ಸರಿ’ ಅನ್ನುತ್ತಿದ್ದರು. ಪ್ರಕೃತಿಯಲ್ಲಿ ಹವಾಮಾನ ಬದಲಾದಂತೆ ಮಾವನವರ ನಂಬಿಕೆ ನಿರ್ಧಾರ, ಆಲೋಚನೆ ಅಭಿಪ್ರಾಯಗಳು ಆಗಾಗ ಹೀಗೆ ಬದಲಾಗುತ್ತಿದ್ದವು.
ನಮ್ಮ ಕಡೆಯಲ್ಲಿ ಆಗ ಊರೆಲ್ಲ ಹುಡುಕಿದರು ಒಂದೋ ಎರಡೋ ಹೆಂಚಿನಮನೆಗಳು ಕಾಣಸಿಗುತ್ತಿದ್ದವಷ್ಟೇ. ಕೆಲವೊಂದು ಊರುಗಳಲ್ಲಿ ಒಂದೂ ಇರುತ್ತಿರಲಿಲ್ಲ. ಈಗಂತೂ ಬಿಡಿ ಎಲ್ಲಾ ಊರು ದೇಶಗಳಲ್ಲೂ ಸಿಮೆಂಟ್ ತಾರಸಿಯ ಮನೆಗಳೇ. ಆಗಿನ ನಮ್ಮ ಮಣ್ಣಿನ ಮಾಳಿಗೆ ಮನೆಯ ಕೊರತೆಯೆಂದರೆ ಗಾಳಿ ಬೆಳಕು ಬರಲು ಈಗಿನ ಮನೆಗಳಿಗಿರುವಂತೆ ದೊಡ್ಡ ದೊಡ್ಡ ಕಿಟಕಿಗಳಿರಲಿಲ್ಲ. ಗಾಳಿ ಬೆಳಕು ಎಲ್ಲದಕ್ಕೂ ಒಂದೇ ಪರಿಹಾರ ಎಂಬಂತೆ ಒಂದು ಮನೆಗೆ ನಾಲ್ಕಾರು, ದೊಡ್ಡ ಮನೆಯಾದರೆ ಹತ್ತಾರು ಗವಾಕ್ಷಿಗಳಿರುತ್ತಿದ್ದವು.
ಆಗಿನ ಮನೆಗಳ ಹಜಾರದ ಜಂತೆಯಲ್ಲಿ, ಕಲ್ಲುಗೋಡೆಗಳ ಸಂದುಗಳಲ್ಲಿ ಗುಬ್ಬಚ್ಚಿ ಗೂಡುಕಟ್ಟಿ ಚಿಲಿಪಿಲಿ ಅನ್ನುತ್ತಿದ್ದವು. ನಮ್ಮ ಗಮನಕ್ಕೆ ಬರದಂತೆ, ಮನಸ್ಸಿಗೆ ಆ ಚಿಲಿಪಿಲಿ ಸಂಗೀತ ಮುದನೀಡುತ್ತಿತ್ತು. ನಿಧಾನವಾಗಿ ಮಣ್ಣಿನ ಮನೆಗಳು ಖಾಲಿಯಾಗಿ, ಸಿಮೆಂಟು ತಾರಸಿಯ ಮನೆಗಳು ಹುಟ್ಟಿಕೊಂಡಂತೆ ಒಂದಷ್ಟು ವರುಷಗಳ ಕಾಲ ಕಣ್ಮರೆಯಾಗಿದ್ದ ಗುಬ್ಬಚ್ಚಿಗಳು ಮತ್ತೆ ಕಾಣಸಿಗುತ್ತಿವೆ. ಆ ಸಂತತಿ ಅದು ಎಲ್ಲಿಗೆ ಹೋಗಿದ್ದವೋ? ಮತ್ತೆ ಹೇಗೆ ಬಂದವೋ? ಗೊತ್ತಿಲ್ಲ. ಮನೆ ತಾರಸಿಯ ಮೇಲೆ ಪ್ರತಿದಿನ ಮಗಳ ಕೈಯಿಂದ ಗುಬ್ಬಚ್ಚಿಗಳಿಗೆ ಆಹಾರ ನೀರು ಇಡಿಸುತ್ತೇನೆ. ಅದೇ ಕಾಳಜಿಯಿಂದ ಮಗಳು ಗುಬ್ಬಿಗಾಗಿ ಗೂಡು ಮಾಡಿರಬಹುದು.
ಬಾಲ್ಯದಲ್ಲಿ ನಾವು ಮರಳಿನಲ್ಲಿ ಗುಬ್ಬಿಗೂಡು ಮಾಡಿ ಆಡುತ್ತಿದ್ದೆವು. ಮಣ್ಣಿನಲ್ಲೇ ಗುಬ್ಬಚ್ಚಿಗೆಂದು ಮನೆ ಕಟ್ಟುತ್ತಿದ್ದೆವು. ಮಣ್ಣಿನಲ್ಲಿ ಹೊರಗೆ ಆಡಲು ಬಿಡದೆ ಈಗಿನ ಮಕ್ಕಳು ಕಾಗದದ ಮೇಲೆ ಮನೆಯ ಚಿತ್ರವನ್ನ, ಗುಬ್ಬಿಯ ಚಿತ್ರವನ್ನ ಬರೆಯುತ್ತಿದ್ದಾರೆ. ಅವರೊಳಗೊಂದು ಮನೆಯಂಗಳಕ್ಕೆ ಗುಬ್ಬಿ ಹಾರುವಂತೆ ಹಾರುವ ಕನಸಿರಬಹುದು..
ಮೊನ್ನೆ ಮಗಳು ಬರೆದ ಮನೆಯ ಚಿತ್ರವನ್ನ ಮುಂದಿಟ್ಟುಕೊಂಡು ಹೀಗೆ ಯೋಚಿಸುತ್ತಿದ್ದಾಗಲೇ ನಾನೇ ಬರೆದ ಕಿರುಗವಿತೆಯೊಂದು ನೆನಪಾಗುತ್ತಿದೆ.
ಇಟ್ಟಿಗೆ, ಸಿಮೆಂಟು, ಮರಳಿಲ್ಲದೆ
ಮಗು ಮನೆ ಕಟ್ಟಿದೆ
ಖಾಲಿ ಹಾಳೆಯ ಮೇಲೆ
ಹನ್ನೊಂದು ಗೆರೆ
– ನವೀನ್ ಮಧುಗಿರಿ
ನಿಮ್ಮ ನೆನಪುಗಳು ತುಂಬಿದ ಬುತ್ತಿ ತುಂಬಾ ಸೊಗಸಾಗಿದೆ.
ತುಂಬಾ ಆಪ್ತವಾಗಿದೆ ನಿಮ್ಮ ಬರಹ.ಇದನ್ನು ಓದುತ್ತಾ ಹೋದಂತೆ ಲ್ಲಾ ನನ್ನ ಬಾಲ್ಯದ ನೆನಪುಗಳು ಕಣ್ಮುಂದೆ ಬಂದವು.ಅಭಿನಂದನೆಗಳು.
ನಮ್ಮನ್ನು ಬಾಲ್ಯಕ್ಕೊಯ್ಯುವ ಈ ಲೇಖನವು ತುಂಬಾ ಇಷ್ಟವಾಯಿತು.,