ನವರಾತ್ರಿ-ನಾಡಹಬ್ಬ ದಸರಾ.

Share Button

ಭಾರತೀಯ ಸಂಸ್ಕೃತಿ ವಿಶಿಷ್ಟತೆಗಳ ತವರೂರು. ಅದರ ತಾಯಿಬೇರಿನ ಒಂದು ಭಾಗವೇ ಹಬ್ಬಗಳು. ಇವುಗಳು ಸಂಸ್ಕೃತಿಯ ದ್ಯೋತಕವೂ ಹೌದು. ಸಂಪ್ರದಾಯಗಳ ಪ್ರತೀಕವೂ ಹೌದು. ಸಂಪ್ರದಾಯಗಳೆಂಬ ಒಪ್ಪಿಕೊಂಡ ತತ್ವಗಳನ್ನು ನಂಬಿಕೆಗಳೆಂಬ ಅಡಿಗಲ್ಲ ಮೇಲೆ ನೆಟ್ಟು ಆಚರಣೆಯೆಂಬ ಹಾಸನ್ನು ಸಿದ್ಧಗೊಳಿಸಿದ ರೀತಿಯೇ ಹಬ್ಬಹರಿದಿನಗಳು.

ಈ ಹಬ್ಬಗಳು ಎಂದಿನಿಂದ ಹೇಗೆ ಪ್ರಾರಂಭವಾದವು ಎಂದು ನಿಖರವಾಗಿ ಹೇಳಲು ಬಾರದಿದ್ದರೂ ವೇದಗಳ ಕಾಲದಿಂದಲೇ ಇವುಗಳ ಆಚರಣೆಯಿತ್ತು ಎಂದು ಹೇಳಬಹುದು. ಆದರೆ ಆಗ ಹಬ್ಬಗಳು ‘ಪರ್ವ’ ಎಂಬ ಹೆಸರಿನಿಂದ ಪ್ರಚಲಿತವಾಗಿದ್ದವೆಂದು ಕೆಲವು ಮಾಹಿತಿಗಳಿಂದ ತಿಳಿದು ಬರುತ್ತದೆ. ‘ಪರ್ವ’ ಎಂದರೆ ಪಡೆದುಕೊಳ್ಳುವುದು ಎಂದರ್ಥ. ಅಂದರೆ ಯಾರಿಂದ ಏನನ್ನು ಪಡೆಯುವುದು ಎಂಬ ಪ್ರಶ್ನೆ ನಮ್ಮಲ್ಲಿ ಸಹಜವಾಗಿಯೇ ಉದ್ಭವಿಸುತ್ತದೆ. ನಮಗೆ ಬೇಕಾದ ಆಯುಸ್ಸು, ಆರೋಗ್ಯ, ಸಂಪತ್ತುಗಳನ್ನು ದೇವರನ್ನು ಆರಾಧಿಸುವ ಮೂಲಕ ಕೇಳಿ ಪಡೆಯುವುದು. ಅದಕ್ಕಾಗಿಯೇ ಪುರಾಣ, ಪುಣ್ಯಕಥೆಗಳು ಹುಟ್ಟಿಕೊಂಡವು. ಕಾವ್ಯಗಳು ರಚನೆಯಾದವು. ಈ ಹಿನ್ನೆಲೆಯಲ್ಲಿ ಬೌದ್ಧಿಕ, ಅಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವಿಕಸನಕ್ಕೆ ಅನುವು ಮಾಡಿಕೊಡುವಂತಹ ಸಂಪ್ರದಾಯಬದ್ಧವಾದ ಆಚರಣೆಗಳು ಪ್ರಾರಂಭವಾದವು. ಹಾಗೆಯೇ ನಡೆದುಬಂದಂತಹ ಹಬ್ಬಗಳು ಜನಜೀವನದಲ್ಲಿ ಹಾಸುಹೊಕ್ಕಾದವು. ನಾವು ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ವಿಶೇಷ ಹಿನ್ನೆಲೆಯಿದೆ. ಆಚರಿಸುವ ವಿಧಾನವಿದೆ. ಈ ಹಬ್ಬಗಳನ್ನು ನಾವು ನಮಗೆ ಬೇಕಾದಂತೆ ಯಾವಾಗ ಬೇಕಾದರೂ ಆಚರಿಸಲು ಬರುವುದಿಲ್ಲ. ಪ್ರಕೃತಿಯ ಬದಲಾವಣೆಗಳಿಗೆ ಅನುಸಾರವಾಗಿ ಹಬ್ಬಗಳು ರೂಪುಗೊಂಡಿವೆ.

ಈಗ ನವರಾತ್ರಿ ಅಥವಾ ನಾಡಹಬ್ಬ ದಸರಾ ಬಗ್ಗೆ ಕೆಲವು ವಿಷಯಗಳನ್ನು ಗಮನಿಸೋಣ. ಆಶ್ವಯುಜ ಮಾಸದ ಮೊದಲ ದಿನದಿಂದಲೇ ನವರಾತ್ರಿ ಹಬ್ಬದ ಶುಭಾರಂಭ. ಕಾರ್ಮೋಡಗಳು ಕರಗಿ ಶುಭ್ರವಾಗಿ ಶೋಭಿಸುವ ನೀಲಾಕಾಶ. ವರುಣನ ದೆಸೆಯಿಂದ ಎಲ್ಲೆಲ್ಲಿಯೂ ಹಚ್ಚಹಸಿರು ಪೈರಿನ ತೊನೆದಾಟ, ನೋಡಲು ಸೊಂಪಾದ ದೃಶ್ಯ ಕಣ್ಮನ ತಣಿಸುತ್ತದೆ. ಚಳಿಗಾಲದ ಮುನ್ಸೂಚನೆಯೊಂದಿಗೆ ಬರುವುದೇ ಈ ಹಬ್ಬ. ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಇದೂ ಒಂದು. ಒಂಬತ್ತು ದಿನಗಳಕಾಲ ದೀಪಗಳ ಬೆಳಕಿನಲ್ಲಿ ದೇವಿಯನ್ನು ಪೂಜಿಸುವುದರಿಂದ ಇದನ್ನು ನವರಾತ್ರಿ ಹಬ್ಬವೆಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳ ನಡುವೆ ಬರುವುದರಿಂದ ಇದನ್ನು ಶರತ್ಕಾಲದ ‘ಶರನ್ನವರಾತ್ರಿ’ ಎಂದೂ ಕರೆಯುವುದುಂಟು.

ಪುರಾಣಗಳ ಪ್ರಕಾರ ಆ ಕಾಲದಲ್ಲಿ ರಕ್ತಬೀಜಾಸುರ, ಚಂಡ, ಮುಂಡ, ಮಹಿಷ ಮುಂತಾದ ಅನೇಕಮಂದಿ ದುಷ್ಟರೂ, ಬಲಿಷ್ಟರೂ ಆಗಿದ್ದ ರಾಕ್ಷಸರಿದ್ದರು. ಅವರಿಂದ ಮೂರುಲೋಕಗಳಿಗೂ ಗಂಡಾಂತರ ಒದಗುತ್ತಿತ್ತು. ಆದ್ದರಿಂದ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಕೂಡಿ ದೇವಿಯರಾದ ಸರಸ್ವತಿ, ಲಕ್ಷ್ಮಿ, ಪಾರ್ವತಿಯರಿಗೆ ಒಟ್ಟಾರೆ ಶಕ್ತಿಯನ್ನು ಕ್ರೋಢೀಕರಿಸಿ ಒಂದು ಮಹಾಶಕ್ತಿಯ ಅವತಾರಕ್ಕೆ ಕಾರಣರಾದರು. ಆ ದೇವಿ ದುರ್ಗೆಯು ದುರುಳ ರಕ್ಕಸರನ್ನು ಕೊಂದು ಲೋಕದ ವಿಪತ್ತನ್ನು ನಿವಾರಿಸಿದರು. ಅದರ ಸವಿನೆನಪಾಗಿಯೇ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ.


ನವರಾತ್ರಿಯ ಅಧಿದೇವತೆ ದುರ್ಗೆ ಮನೆಮನೆಗಳಲ್ಲಿ ಸಡಗರ ಸಂಭ್ರಮದಿಂದ ಪೂಜೆಗೊಳ್ಳುತ್ತಾಳೆ. ಈಕೆಯನ್ನು ಮಹಾಕಾಳಿ, ಮಹಿಷಮರ್ದಿನಿ, ಚಂಡಿ, ಚಾಮುಂಡಿ, ದುರ್ಗಾ, ರಕ್ತದಂತಿ, ವಾಗ್ದೇವಿ, ಶಾಖಾಂಬರಿ, ಪರಾಶಕ್ತಿ ಮುಂತಾದ ಒಂಬತ್ತು ಅವತಾರಗಳಲ್ಲಿ ಪೂಜೆಗೈಯುತ್ತಾರೆ. ಸೃಷ್ಠಿಯಲ್ಲಿರುವ ಸಕಲ ಚರಾಚರ ವಸ್ತುಗಳಿಗೂ ಆಶ್ರಯದಾತಳಾಗಿರುವ ಭೂದೇವಿಯನ್ನು ಜಗನ್ಮಾತೆಗೆ ಹೋಲಿಸಲಾಗಿದೆ. ಮಾತೃತ್ವದ ಸ್ತ್ರೀಶಕ್ತಿಯನ್ನು ಪೂಜೆಮಾಡುವುದೇ ಈ ಹಬ್ಬದ ಮೂಲ ಉದ್ದೇಶ. ಶಕ್ತಿಯ ಪ್ರತೀಕವಾದ ದುರ್ಗೆ ನವರಾತ್ರಿಯ ಮೊದಲ ಮೂರು ದಿನಗಳು ಮಹಾಲಕ್ಷ್ಮಿಯಾಗಿಯೂ, ನಂತರದ ಮೂರು ದಿನಗಳು ಸರಸ್ವತಿಯಾಗಿಯೂ, ಕಡೆಯ ಮೂರುದಿನಗಳು ಮಹಾಕಾಳಿಯಾಗಿಯೂ ಮೂರು ಸ್ವರೂಪಗಳಲ್ಲಿ ಪೂಜಿಸಲ್ಪಡುತ್ತಾಳೆ. ತ್ರಿದೇವಿಯರನ್ನು ಆರಾಧಿಸುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ನವರಾತ್ರಿಯ ನಂತರದ ದಿನವನ್ನು ವಿಜಯೋತ್ಸವದ ದಿನವೆಂದು ‘ವಿಜಯದಶಮಿ’ ಎಂದು ಕರೆಯುತ್ತಾರೆ. ಈ ರೀತಿ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ದಸರಾ ಹಬ್ಬವನ್ನು ಆಚರಿಸುವುದುಂಟು.

ಈ ಹಬ್ಬವನ್ನು ಗೊಂಬೆಗಳ ಹಬ್ಬವೆಂದೂ ಕರೆಯುತ್ತಾರೆ. ಆಶ್ವಯುಜ ಶುದ್ಧ ಪಾಡ್ಯದಂದು ನವರಾತ್ರಿಯ ಆರಂಭದ ದಿನ ಶಕ್ತಿಸ್ವರೂಪಿಣಿಯಾದ ಆದಿದೇವತೆಯನ್ನು ಪೂಜಿಸಲು ಪ್ರಾರಂಭಿಸುವರು. ಅಂದೇ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುವ ಸಂಪ್ರದಾಯವಿದೆ. ಒಂಬತ್ತು ಮೆಟ್ಟಿಲುಗಳಿರುವ ಪೀಠ ತಯಾರಿಸಿ ದೇವದೇವಿಯರ ನಾನಾ ರೂಪಗಳು, ಅವತಾರಗಳು, ಪುರಾಣದ ಹಲವು ಸನ್ನಿವೇಶಗಳನ್ನು ಪ್ರತಿರೂಪಿಸಿ ಬೊಂಬೆಗಳ ಜೋಡಣೆಮಾಡಿ ಪೀಠದಲ್ಲಿ ಅಲಂಕರಿಸಿಡುತ್ತಾರೆ. ಪಟ್ಟದ ಗೊಂಬೆಗಳಿಗೆ ಇಲ್ಲಿ ವಿಶೇಷ ಪ್ರಾಶಸ್ತ್ಯವದೆ. ಒಂದು ಮಾಹಿತಿಯ ಪ್ರಕಾರ ಇದೊಂದು ಸಾಂಕೇತಿಕ ಒಡ್ಡೋಲಗ. ಜಗನ್ಮಾತೆಯು ಮಹಿಷಾಸುರನನ್ನು ಕೊಂದು ಇಲ್ಲಿ ವಿರಾಜಮಾನಳಾಗುವುದರಿಂದ ಆಕೆಯ ಸ್ವಾಗತಕ್ಕೆ ಈ ದರ್ಬಾರಿನ ಜೋಡಣೆ. ಮತ್ತೊಂದು ಪೌರಾಣಿಕ ಹಿನ್ನೆಲೆಯ ಪ್ರಕಾರ ದುಷ್ಟರ ಸಂಹಾರಕ್ಕಾಗಿ ತ್ರಿಮೂರ್ತಿಗಳು, ಅನ್ಯ ದೇವತೆಗಳು ತಮ್ಮತಮ್ಮ ಆಯುಧಗಳನ್ನು ದೇವಿಗೆ ನೀಡಿ ಆಯಾ ಶಕ್ತಿಗಳನ್ನೂ ಧಾರೆಯೆರೆದಿದ್ದರಿಂದ ಅವರೆಲ್ಲರೂ ನಿಸ್ತೇಜರಾಗಿ ಗೊಂಬೆಗಳಂತಾಗಿಬಿಟ್ಟಿರುತ್ತಾರೆ. ಅವರುಗಳನ್ನು ಕೂಡಿಸಿ ದೇವಿಯನ್ನು ಆರಾಧಿಸಿ ಅವರವರ ಶಕ್ತಿಗಳನ್ನು ಅವರವರಿಗೆ ಹಿಂದಕ್ಕೆ ನೀಡಿಸುತ್ತಾರೆಂಬ ನಂಬಿಕೆ.

ಸಾರ್ವಜನಿಕವಾಗಿ ಗಣಪತಿಯ ಉತ್ಸವವನ್ನು ಆಚರಿಸಿದಂತೆ ಬಂಗಾಳದಲ್ಲಿ ದುರ್ಗಾದೇವಿಯ ಮೂರ್ತಿಯನ್ನು ಆಕೆಯ ಮಕ್ಕಳಾದ ಕಾರ್ತಿಕೇಯ, ಗಣಪತಿಯರೊಟ್ಟಿಗೆ ಪೆಂಡಾಲುಗಳಲ್ಲಿ ಪ್ರತಿಷ್ಠಾಪಿಸಿ, ಅಲಂಕರಿಸಿ ವಿಶೇಷವಾಗಿ ಪೂಜಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಸಾಮೂಹಿಕ ಭಜನೆಗಳನ್ನು ಏರ್ಪಡಿಸಿ ಹತ್ತನೆಯ ದಿನ ಅದನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಸಮುದ್ರದಲ್ಲಿ ವಿಸರ್ಜಿಸುತ್ತಾರೆ.

ದಸರಾ ಹಬ್ಬದ ಅಷ್ಟೂ ದಿನಗಳು ಮನೆಗಳಲ್ಲಿ ಲಲಿತಾ ಸಹಸ್ರನಾಮ, ದೇವಿ ಮಹಾತ್ಮೆ, ದುರ್ಗಾಸಪ್ತಶತಿ ಮತ್ತು ರಾಮಾಯಣ, ಮಹಾಭಾರತದ ಪಾರಾಯಣಗಳು ಅವಿರತವಾಗಿ ನಡೆಯುತ್ತದೆ. ನವಧಾನ್ಯಗಳಿಂದ ತಯಾರಿಸಿದ ವಿವಿಧ ಖಾದ್ಯಗಳನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಮೊದಲ ಆರು ದಿನಗಳು ಒಂದೊಂದು ಬಗೆಯ ಸಿಹಿಖಾದ್ಯ, ಸಪ್ತಮಿಯ ದಿನ ಮೂಲಾನಕ್ಷತ್ರದಂದು ಸರಸ್ವತಿಯ ಪೂಜೆಮಾಡುತ್ತಾರೆ. ಪೀಠದಲ್ಲಿ ಪುಸ್ತಕಗಳು, ಸಂಗೀತವಾದ್ಯಗಳು, ಮುಂತಾದುವನ್ನು ಪೂಜೆಗೆ ಇಡುತ್ತಾರೆ. ಎರೆಯಪ್ಪ ಎಂಬ ಸಿಹಿಭಕ್ಷ್ಯವನ್ನು ಮತ್ತು ಕರಿದ ತಿನಿಸುಗಳನ್ನು ತಯಾರಿಸಿ ನೈವೇದ್ಯಕ್ಕಿಡುತ್ತಾರೆ. ಎಂಟನೆಯ ದಿನ ದುರ್ಗಾಷ್ಟಮಿಯದಿನ. ಶಕ್ತಿಯ ಅಧಿದೇವತೆಯಾದ ಕಾಳಿ, ದುರ್ಗೆ, ಚಾಮುಂಡಿಯರ ಆರಾಧನೆ ನಡೆಯುತ್ತದೆ. ಅಸುರರ ಸಂಹಾರಕ್ಕಾಗಿ ಉಗ್ರ ಸ್ವರೂಪ ತಾಳಿದ ಜಗನ್ಮಾತೆಯನ್ನು ಶಾಂತಗೊಳಿಸುವಂತೆ ಆದಿನ ಪಾನಕ, ಕೋಸಂಬರಿಗಳನ್ನು ನೈವೇದ್ಯ ಮಾಡುತ್ತಾರೆ. ರಾಹುಕಾಲದಲ್ಲಿ ದುರ್ಗೆಯನ್ನು ಪೂಜಿಸುವುದರಿಂದ ರಾಹುದೋಷವನ್ನು ನಿವಾರಿಸಿಕೊಳ್ಳಬಹುದೆಂಬ ನಂಬಿಕೆ ಜನರಲ್ಲಿದೆ. ದುರ್ಗಾದೇವಿಯು ಜಲದುರ್ಗೆಯಾಗಿ ಉಡುಪಿ ಜಿಲ್ಲೆಯ ಕಟೀಲಿನಲ್ಲಿ, ಗಿರಿದುರ್ಗೆಯಾಗಿ ವೈಷ್ಣವಿಯಲ್ಲಿ, ಶಾರದಾಂಬೆಯಾಗಿ ಶೃಂಗೇರಿಯಲ್ಲಿ, ಮೂಕಾಂಬಿಕೆಯಾಗಿ ಕೊಲ್ಲೂರಿನಲ್ಲಿ ಸ್ಥಿತಳಾಗಿ ಪೂಜನೀಯಳಾಗಿದ್ದಾಳೆ. ಒಂಬತ್ತನೆಯ ದಿನ ಮಹಾನವಮಿ ಅಥವಾ ಆಡುಭಾಷೆಯಲ್ಲಿ ಮಾರ್ನೋಮಿ ಹಬ್ಬ. ಅಂದು ಆಯುಧಗಳ ಪೂಜೆ ನಡೆಯುತ್ತದೆ. ಜನಸಾಮಾನ್ಯರು ತಮ್ಮ ದಿನನಿತ್ಯ ಕಸುಬುಗಳಿಗೆ ನೆರವಾಗುವ ಎಲ್ಲ ಉಪಕರಣಗಳು, ಗೃಹೋಪಯೋಗಿ ವಸ್ತುಗಳು, ವಾಣಿಜ್ಯ ಪರಿಕರಗಳು, ಕೈಗಾರಿಕಾ ಸಾಧನಗಳು, ಸಂಚಾರ ಸಾಧನಗಳು, ಇವೆಲ್ಲವನ್ನೂ ಪೂಜಿಸುತ್ತಾರೆ. ಇವೆಲ್ಲಕ್ಕೂ ಆದಿನ ಈ ಮೂಲಕ ವಿಶೇಷ ನಮನಗಳು ಸಲ್ಲುತ್ತವೆ.

ಹತ್ತನೆಯ ದಿನವೇ ವಿಜಯೋತ್ಸವದ ವಿಜಯ ದಶಮಿ. ಇದು ಅತ್ಯಂತ ಮಹತ್ವದ ಮಂಗಳಕರವಾದ ದಿನ. ಆ ದಿನ ದೇವಿಗೆ ವಿಶೇಷ ಪೂಜೆ, ಶಮೀವೃಕ್ಷಕ್ಕೆ ಪೂಜೆ,(ಬನ್ನೀಮರ) ದೇವಿಯ ಉತ್ಸವ ಮೂರ್ತಿಗೆ ಅಲಂಕಾರದೊಡನೆ ಮೆರವಣಿಗೆ. ರಾತ್ರಿ ಪುರಾಣ ಪುಣ್ಯಕಥೆಗಳ ವಾಚನ, ಪ್ರವಚನಗಳು, ಶ್ರವಣ, ಸಂಗೀತಗೋಷ್ಠಿ, ಸತ್ಸಂಗಭಜನೆ, ನಡೆಯುತ್ತವೆ. ಪಾಂಡವರು ಹನ್ನೆರಡು ವರ್ಷ ವನವಾಸ ಕಳೆದು ಒಂದು ವರ್ಷ ಅಜ್ಞಾತವಾಸಕ್ಕೆ ತೆರಳುವ ಮೊದಲು ತಮ್ಮ ನಿಜವಾದ ಗುರುತನ್ನು ಮರೆಮಾಚಲು ತಮ್ಮಲ್ಲಿದ್ದ ಆಯುಧಗಳನ್ನು ಶಮೀವೃಕ್ಷವೊಂದರಲ್ಲಿ ಅನುಮಾನ ಬಾರದ ರೀತಿಯಲ್ಲಿ ಅಡಗಿಸಿಟ್ಟು ಹೋಗಿದ್ದರಂತೆ. ಉತ್ತರ ಗೋಗ್ರಹಣ ಸಮಯದಲ್ಲಿ ಬೃಹನ್ನಳೆಯಾಗಿದ್ದ ಅರ್ಜುನನು ಅದನ್ನು ಪಡೆದುಕೊಂಡು ಏಕಾಂಗಿಯಾಗಿ ಕೌರವ ಸೇನೆಯನ್ನು ಸೋಲಿಸಿದ ದಿನವೇ ವಿಜಯದಶಮಿ ಎಂದು ಹೇಳುತ್ತಾರೆ. ಅದಕ್ಕಾಗಿ ಶಮೀವೃಕ್ಷಕ್ಕೆ ಪೂಜೆ. ರಾಮಾಯಣದಲ್ಲಿ ಶ್ರೀರಾಮನು ರಾವಣನ ವಿರುದ್ಧ ಜಯಶಾಲಿಯಾಗಿ ಅಯೋಧ್ಯೆಗೆ ಹಿಂದಿರುಗಿದ ದಿನವನ್ನು ವಿಜಯದಶಮಿಯೆಂದು ಕರೆಯುತ್ತಾರೆ. ಚಾಮುಂಡೇಶ್ವರಿದೇವಿ ಒಂಬತ್ತು ದಿನಗಳು ಸತತವಾಗಿ ಮಹಿಷಾಸುರನೊಂದಿಗೆ ಕಾದಾಡಿದಮೇಲೆ ಹತ್ತನೆಯ ದಿನ ಅವನನ್ನು ಸಂಹರಿಸಿ ವಿಜಯಿಯಾದಳಂತೆ. ಇವೆಲ್ಲದರ ಜೊತೆಗೆ ಇತಿಹಾಸದಲ್ಲಿ ರಾಜರುಗಳು ಅದಿನ ತಮ್ಮ ಸೀಮೆಯ ಗಡಿದಾಟಿ ಶತೃರಾಜರುಗಳ ವಿರುದ್ಧ ಯುದ್ಧಕ್ಕೆ ಹೊರಡುವ ಶುಭಘಳಿಗೆಯೆಂದು, ಹಾಗೂ ಜಯಶಾಲಿಯಾಗಿ ಹಿಂದಿರುಗಿದ ದಿನವೇ ವಿಜಯದಶಮಿ. ಅಧ್ಯಾತ್ಮ್ಮಿಕ ಹಿನ್ನೆಲೆಯಂತೆ ಮನುಷ್ಯನು ತಾನು ಅನುಭವಿಸುವ ಸುಖಭೋಗ, ಐಶಾರಾಮಗಳು ನಶ್ವರ, ಇವುಗಳಿಂದ ಆತ್ಮೋನ್ನತಿ ಸಾಧ್ಯವಿಲ್ಲ, ಆದ್ದರಿಂದ ಅರ್ಥವಿಲ್ಲದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ತ್ಯಜಿಸಿ ಅಂದರೆ ಅವುಗಳ ವ್ಯಾಪ್ತಿಯಿಂದ ಹೊರಬಂದು ಪರಮಾರ್ಥದ ಕಡೆಗೆ ದಿಕ್ಕು ಬದಲಿಸುವುದನ್ನು ‘ಸೀಮೋಲ್ಲಂಘನ’ವೆನ್ನುತ್ತಾರೆ.

ಪವಿತ್ರ ಶಮೀವೃಕ್ಷವನ್ನು ಪೂಜಿಸಿ ಅದರ ಎಲೆಗಳನ್ನು ಸಂಗ್ರಹಿಸಿ ಉತ್ತರ ಕರ್ನಾಟಕದ ಕೆಲವು ಭಾಗದ ಜನರು ತಮ್ಮ ಪರಿಚಿತರುಗಳು, ಬಂಧು ಬಾಂಧವರುಗಳಿಗೆ ಇದನ್ನು ಭಂಗಾರವೆಂದು ಕರೆಯುತ್ತಾ ಹಂಚುತ್ತಾರೆ. ‘ಭಂಗಾರ ತೊಗೊಂಡು ಬಂಗಾರದಂಥ ಮಾತಾಡ್ರೀ’ ಎಂದು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಪದ್ಧತಿಯಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬನ್ನಿಯ ಬದಲಾಗಿ ಮಂದಾರದ ಎಲೆಗಳನ್ನು ಹಂಚುವುದುಂಟು. ಹಿರಿಯರಿಗೆ ಭಂಗಾರ ಕೊಟ್ಟು ಅವರಿಗೆ ನಮಸ್ಕರಿಸಿ ಅವರ ಆಶೀರ್ವಾದ ಬೇಡುವ ಆಚರಣೆಯಿದೆ. ಇದೊಂದು ಸತ್ಸಂಪ್ರದಾಯ.

ನವರಾತ್ರಿ ಅಥವ ದಸರಾ ಹಬ್ಬವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರವು ನಾಡಹಬ್ಬವೆಂದು ಘೋಷಿಸಿ ಆಚರಿಸಲಾಗುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಸಂದರ್ಭದಲ್ಲಿ ನಡೆಸಲಾಗುವ ದಸರಾ ಉತ್ಸವ ವಿಶ್ವವಿಖ್ಯಾತವಾಗಿದೆ. ವಿಜಯನಗರದ ಕಾಲದಲ್ಲಿ ನಡೆಯುತ್ತಿದ್ದ ಈ ಉತ್ಸವವನ್ನು ಮೈಸೂರಿನ ಅರಸರು ಮುಂದುವರೆಸಿಕೊಂಡು ಬಂದರು. ಈ ಸಂಪ್ರದಾಯಕ್ಕೆ ನಾಲ್ಕುನೂರು ವರ್ಷದ ಇತಿಹಾಸವಿದೆ. ವಿಜಯದಶಮಿಯ ದಿನ ನಡೆಯುವ ಜಂಬೂಸವಾರಿಯಲ್ಲಿ ಆನೆಯಮೇಲೆ ಕಟ್ಟಿದ ಸ್ವರ್ಣಖಚಿತ ಅಂಬಾರಿಯಲ್ಲಿ ಕೂಡಿಸಿದ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಯ ಉತ್ಸವಮೂರ್ತಿಯನ್ನು ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಗುತ್ತದೆ. ಹಾಗೆಯೇ ಬೆಟ್ಟದಮೇಲೆ ಚಾಮುಂಡಿದೇವಿಯ ಜಾತ್ರೆಯನ್ನು ಮತ್ತು ದೇವಿಯ ತೆಪ್ಪೋತ್ಸವವನ್ನು ನಡೆಸುತ್ತಾರೆ.

ಆಯಾ ಪ್ರದೇಶಕ್ಕನುಸಾರವಾಗಿ ದಸರಾ ಆಚರಣೆಗಳು ವೈವಿಧ್ಯಮಯವಾಗಿ ನಡೆಯುತ್ತವೆ. ಭಾರತದಲ್ಲಷ್ಟೇ ಅಲ್ಲದೆ ಪೂರ್ವದೇಶಗಳಾದ ಜಾವಾ, ಸುಮಾತ್ರಾ, ಜಪಾನುಗಳಲ್ಲಿ ಕೂಡ ಇದನ್ನು ಆಚರಿಸುವರಂತೆ. ಒಟ್ಟಾರೆಯಾಗಿ ದಸರಾ ಅಥವಾ ನವರಾತ್ರಿ ಹಬ್ಬದ ಆಚರಣೆಯ ಮೂಲ ಉದ್ದೇಶ ದುಷ್ಟಶಕ್ತಿಯ ಸಂಹಾರ, ಶಿಷ್ಟರರಕ್ಷಣೆಯ ವಿಜಯೋತ್ಸವ. ಇದು ಸಾಂಕೇತಿಕವಾಗಿ ವಿಜೃಂಭಣೆಯಿಂದ ಆಚರಿಸಲ್ಪಡುತ್ತಾ ಸ್ನೇಹ ಬಾಂಧವ್ಯಕ್ಕೊಂದು ಸೇತುವೆ ಕಲ್ಪಿಸಿಕೊಟ್ಟಿದೆ.

-ಬಿ ಆರ್ ನಾಗರತ್ನ, ಮೈಸೂರು

5 Responses

  1. ಪದ್ಮ ಆನಂದ್ says:

    ಸುಂದರ, ಮಾಹಿತಿ ಪೂರ್ಣ ಲೇಖನ. ಸೊಗಸಾಗಿದೆ.

  2. Hema says:

    ಸೊಗಸಾದ, ಸಕಾಲಿಕವಾದ ಬಹಳಷ್ಟು ವಿಶಿಷ್ಟ ಮಾಹಿತಿಗಳನ್ನೊಳಗೊಂಡ ಬರಹ .

  3. ನಯನ ಬಜಕೂಡ್ಲು says:

    ತುಂಬಾ ಸೊಗಸಾಗಿದೆ ಲೇಖನ. ಸಾಕಷ್ಟು ಮಾಹಿತಿಗಳನ್ನು ಒಳಗೊಂಡ ಬರಹ. ಮೈಸೂರು ದಸರಾ… ಎಷ್ಟೊಂದು ಸುಂದರ….

  4. ಶಂಕರಿ ಶರ್ಮ, ಪುತ್ತೂರು says:

    ಉತ್ತಮ ಮಾಹಿತಿಗಳನ್ನೊಳಗೊಂಡ ಸಕಾಲಿಕ ಲೇಖನ.. ಧನ್ಯವಾದಗಳು ಮೇಡಂ.

  5. ಪದ್ಮಾ ವೆಂಕಟೇಶ್ says:

    ಲೇಖನ ಸಾಂದರ್ಭಿಕವಾಗಿ ವಿಶಿಷ್ಟ ರೀತಿಯಲ್ಲಿ ಹಬ್ಬಗಳು ನಿರೂಪಣೆ ತುಂಬಾ ಚೆನ್ನಾಗಿ ಬರೆದಿದ್ದೀರಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: