ಕುಟುಂಬದಲ್ಲಿ ಅಕ್ಕನ ಸ್ಥಾನ ಹಾಗೂ ಮಹತ್ವ

Share Button

ಅಕ್ಕ ಎಂದರೆ “ಮಮತೆಯ ಖನಿ”, “ಪ್ರೀತಿಯ ಹೊನಲ ಹರಿಸುವ ವಾತ್ಸಲ್ಯಮಯಿ”, “ನನ್ನ ಮೊದಲ ಗೆಳತಿ”,  “ತನ್ನೆಲ್ಲಾ ಆಶೆಗಳನ್ನು ಅದುಮಿಟ್ಟು ನನಗೆ ಜೀವನ ಕೊಟ್ಟ ತ್ಯಾಗಮಯಿ”, “ನನ್ನ ಪಾಲಿನ ಎರಡನೇ ತಾಯಿ”, “ನೋವ ಮರೆತು ಮುಖದಲ್ಲಿ ನಗುವರಳಿಸುವ  ದೇವತೆ”, “ಸಮಸ್ಯೆಗಳಿಗೆ ಸಮಂಜಸ ಪರಿಹಾರ ತೋರಬಲ್ಲ ಚತುರೆ”, “ನನ್ನಕ್ಕನೇ ನನ್ನ ರೋಲ್ ಮಾಡೆಲ್”, ಇಂತಹ ಮಾತುಗಳನ್ನು ನಿಜಜೀವನದಲ್ಲಿ ಖಂಡಿತಾ ಕೇಳಿರುತ್ತೀರಿ. ಇಲ್ಲವೆಂದಾದರೆ ಕಥೆ ಕಾದಂಬರಿಗಳಲ್ಲಿ ಅಥವಾ ಚಲನಚಿತ್ರಗಳಲ್ಲಿ ಕಂಡಿರುತ್ತೀರಿ. ಖಂಡಿತಾ ಇವೆಲ್ಲವೂ ಉತ್ಪ್ರೇಕ್ಷೆಯ ಮಾತುಗಳಂತೂ ಅಲ್ಲವೇ ಅಲ್ಲ. ಅಕ್ಕನೆಂದರೆ ಹಾಗೆ. ಕುಟುಂಬ ವ್ಯವಸ್ಥೆಯಲ್ಲಿ ಅಕ್ಕ ಎಂದರೆ ಒಡಹುಟ್ಟಿದ ಹಿರಿಯ ಸಹೋದರಿ. ಮನೆಯ ಮೊದಲ ಮಗಳು. ಮನೆಯ ಭಾಗ್ಯಲಕ್ಷ್ಮಿ. ಅವಳ ನಂತರ ಜನಿಸಿದರವರೆಲ್ಲರಿಗೂ ಆಕೆ ಅಕ್ಕ.  ವಯಸ್ಸಿನಲ್ಲಿ ಎಷ್ಟೇ ದೊಡ್ಡವಳಾಗಿದ್ದರೂ  ಅಕ್ಕನ ಜೊತೆ ಸಲುಗೆಯಿಂದ “ಹೋಗು ಅಕ್ಕಾ” “ಬಾ ಅಕ್ಕ” ಅಂತ ಏಕವಚನದಲ್ಲಿ ಕರೆಯುವ ಆತ್ಮೀಯತೆ ಒಡಹುಟ್ಟಿದವರಿಗೆ.  ಒಡಹುಟ್ಟಿದ ಅಕ್ಕನಿಲ್ಲದಿದ್ದರೂ, ಭಾವನಾತ್ಮಕವಾಗಿ ಸ್ಪಂದಿಸಿ ಹಲವರಿಗೆ ಅಕ್ಕನಾದವರು ನಮ್ಮೆಲ್ಲರ ಮಧ್ಯೆ ಇದ್ದಾರೆ. ರಾಖಿ ಸಹೋದರರು ಸ್ವಂತ ಅಣ್ಣ-ತಮ್ಮಂದಿರಂತೆ ಇರುತ್ತಾರೆ.

ಅಕ್ಕ ಅನ್ನುವ ಪದದ ಜೊತೆಗೆ ಅಕ್ಕನಾದವಳಿಗೆ ಹಲವು ಅಲಿಖಿತ ಜವಾಬ್ದಾರಿಗಳು. ಅಕ್ಕನ ಸ್ಥಾನಕ್ಕೆ ಕುಂದು ಬರದಂತೆ ನಡೆದುಕೊಳ್ಳುವ ಜವಾಬ್ದಾರಿ ಅವಳ ಮೇಲಿರುತ್ತದೆ. ಹಿಂದಿನ ಕಾಲದಲ್ಲಂತೂ ಕುಟುಂಬಯೋಜನೆಯೂ ಇರಲಿಲ್ಲ. ಒಂದೊಂದು ಮನೆಯಲ್ಲೂ ಏನಿಲ್ಲವೆಂದರೂ ಕನಿಷ್ಟ ನಾಲ್ಕರಿಂದ ಒಂದು ಡಜನ್ ಮಕ್ಕಳು ಗ್ಯಾರಂಟಿ. ಅಂತಹ ಮನೆಯಲ್ಲಿ ಹುಟ್ಟಿದ ಹಿರಿಮಗಳು ಎಲ್ಲರ ದೊಡ್ಡಕ್ಕ. ತಮ್ಮ ತಂಗಿಯರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ, ದೊಡ್ಡಕ್ಕನ ಹೆಗಲಿಗೆ ತಮ್ಮ ತಂಗಿಯರನ್ನು ನೋಡಿಕೊಳ್ಳುವ/ ಸಂಭಾಳಿಸುವ ಹೊಣೆ. ಅದಕ್ಕೆ ಕೆಲವರು ಅನ್ನುವುದು “ಅಕ್ಕ ನನ್ನ ಎರಡನೆಯ ತಾಯಿಯಂತೆ”. ತಮ್ಮ ಅಥವಾ ತಂಗಿ ಮಲ ಮೂತ್ರ ಮಾಡಿದಾಗ ಅವರನ್ನು ಶುಚಿಗೊಳಿಸುವುದು, ಅವರ ಸ್ನಾನ ಮಾಡಿಸುವುದು, ಹಸಿವಾದಾಗ ಉಣ್ಣಿಸುವುದು, ನಿದ್ರೆ ಬಂದಾಗ ಜೋಗುಳ ಹಾಡಿ ಮಲಗಿಸುವುದು ಇವೆಲ್ಲವೂ ಅಕ್ಕನ ದಿನಚರಿಗಳಲ್ಲಿ ಸೇರಿರುತ್ತಿತ್ತು. ಅತ್ತಾಗ ರಮಿಸುವ, ಹಟ ಮಾಡಿದಾಗ ಸಂಭಾಳಿಸುವ, ತಂಟೆ ಮಾಡಿದಾಗ ಎರಡೇಟು ಬಿಗಿಯುವ ಅಕ್ಕನನ್ನು ಕಂಡಾಗ ತಮ್ಮ ತಂಗಿಯರಿಗೆ ಒಂದು ರೀತಿಯ ಹೆದರಿಕೆಯೂ ಇದ್ದದ್ದು ಸುಳ್ಳಲ್ಲ. ದೊಡ್ಡಕ್ಕನಿಗೆ ಮದುವೆ ಆಗುವಾಗಲೂ ಅವಳಮ್ಮನ ಕಂಕುಳಲ್ಲಿ ಮಗು ಇರುವುದು ಸರ್ವೇಸಾಮಾನ್ಯವಾಗಿತ್ತ್ತು. ಹೆಚ್ಚೇಕೆ? ಮಗಳಿಗೂ ಅಮ್ಮನಿಗೂ ಬಾಣಂತನ ಒಟ್ಟಿಗೆ ನಡೆದ ಮನೆಗಳೆಷ್ಟೋ.

ಅಕ್ಕ ಅನಿಸಿಕೊಂಡರೆ ಸಾಕೇ? ತಮ್ಮ ತಂಗಿಯರೊಡನೆ ಆಕೆ ಜಗಳ ಮಾಡಬಾರದು, ತಮ್ಮ ತಂಗಿಯರ ಮನ ನೋಯಿಸಬಾರದು ಅಂತೆಲ್ಲಾ ಅನ್ನುವ ಹೆತ್ತವರು ಮನೆಯ ಮೊದಲ ಮಗಳು ಹಟ ಮಾಡಿದರೆ ಅಥವಾ ತಪ್ಪು ಮಾಡಿದರೆ ಹೇಳುವ ಮಾತು “ನೀನೇ ಹೀಗೆ ಮಾಡಿದರೆ ಹೇಗೆ? ನೀನು ಸರಿ ಇದ್ದರೆ ನಿನ್ನ ತಮ್ಮ ತಂಗಿಯರೂ ಸರಿ ಇರುತ್ತಾರೆ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಅನ್ನುವ ಗಾದೆಯೇ ಇದೆ. ಆದುದರಿಂದ ನೀನು ಉಳಿದವರಿಗೆ ಮೇಲ್ಪಂಕ್ತಿಯಾಗಿರಬೇಕು”. ಇಂತಹ ಮಾತುಗಳು ನಿಜವೂ ಅನ್ನಿಸುವಂತಹ ಎಷ್ಟೋ ಉದಾಹರಣೆಗಳಿವೆ. ಅಕ್ಕನನ್ನೇ ಅನುಸರಿಸುವ ಒಡಹುಟ್ಟಿದವರಿಗೆ ಅಕ್ಕ ಹೇಳಿದ್ದು ವೇದವಾಕ್ಯ. ಅಕ್ಕನ ಸಾಧನೆಗಳು ಒಡಹುಟ್ಟಿದವರಿಗೆ ಸ್ಪೂರ್ತಿಯ ಸೆಲೆಗಳು.  ಅಕ್ಕನ ಸಹಾಯ ಮತ್ತು ಮಾರ್ಗದರ್ಶನದ ಜೊತೆಗೆ ಅಕ್ಕ ನಡೆದ ದಾರಿಯಲ್ಲಿಯೇ ಸಾಗಿ ಬದುಕಿನಲ್ಲಿ ನೆಲೆ ಕಂಡುಕೊಳ್ಳುವರು. ಅಕ್ಕ ತನ್ನ ನೋವನ್ನು ನುಂಗಿಕೊಂಡು, ತಮ್ಮ ತಂಗಿಯರ ನೋವಿಗೆ ಸಾಂತ್ವನ ನೀಡುವವಳು. ತನ್ನ ಸಮಸ್ಯೆಯನ್ನು ಬದಿಗಿಟ್ಟು, ಒಡಹುಟ್ಟಿದವರ ಸಮಸ್ಯೆಯನ್ನು ಪರಿಹರಿಸಲು ಯತ್ನಿಸುವಳು.

ಹೆತ್ತವರ, ಒಡಹುಟ್ಟಿದವರ, ಗೆಳೆಯರ, ಹಿತೈಷಿಗಳ ಸಹಕಾರದಿಂದ ಸೋಲನ್ನು ಮೆಟ್ಟಿ ನಿಂತು ಬದುಕಿನಲ್ಲಿ ಸಾಧಿಸಿದ ನಾಗನರೇಶ ಎಂಬ ಯುವಕನ ಕಥೆಯನ್ನು ಎ ಆರ್ ಮಣಿಕಾಂತ್ ಅವರು ಬರೆದ “ಅಮ್ಮ ಹೇಳಿದ ಎಂಟು ಸುಳ್ಳುಗಳು” ಅನ್ನುವ ಪುಸ್ತಕದಲ್ಲಿ ಓದಿದ್ದೆ. ಟ್ರಕ್ ಅಪಘಾತದಲ್ಲಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡ ನಾಗನರೇಶನಷ್ಟೇ  ನನ್ನನ್ನು ಕಾಡಿದ್ದು ಅವನ ಅಕ್ಕ.  ತಮ್ಮನ ಬೇಕುಬೇಡಗಳನ್ನು ಗಮನಿಸಲೆಂದು, ಪುನಃ ತಾನು ಕಲಿತ ತರಗತಿಗೇ ಮತ್ತೆ ಸೇರಿಕೊಂಡು ತಮ್ಮನನ್ನು ನೋಡಿಕೊಂಡು ಅವನ ವಿದ್ಯಾಭ್ಯಾಸಕ್ಕೆ ನೆರವಿತ್ತ ಅಕ್ಕನ ತ್ಯಾಗದ ಬಗ್ಗೆ ಓದಿದಾಗ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಹೆತ್ತವರು ಅಕಾಲದಲ್ಲಿ ಕುಟುಂಬವನ್ನು ಅಗಲಿದಾಗ, ಕುಟುಂಬದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು, ತಮ್ಮ ತಂಗಿಯರ ಬಾಳು ರೂಪಿಸಲೆಂದು ತನ್ನ ವೈಯಕ್ತಿಕ ಜೀವನವನ್ನು ಕಡೆಗಣಿಸಿ, ಮದುವೆಯಾಗದೆ ಉಳಿದ ಅದೆಷ್ಟೋ ಅಕ್ಕಂದಿರನ್ನು ನಾನು ಕಂಡಿದ್ದೇನೆ. ತಮ್ಮ ತಂಗಿಯರ ಸಂತೋಷದಲ್ಲಿಯೇ ಸಂತೃಪ್ತಿ ಕಾಣುವ ವಿಶಾಲ ಮನೋಭಾವ ಆ ಅಕ್ಕಂದಿರದು.

ನನಗೂ ಮನೆಯಲ್ಲಿ ಅಕ್ಕನಾಗಿ ಜನಿಸುವ ಭಾಗ್ಯ. ಮನೆಯ ಮೊದಲ ಮಗು. ತಮ್ಮ ತಂಗಿಯರು ಮಾತ್ರವಲ್ಲ, ಅಪ್ಪ ಅಮ್ಮ ಕೂಡಾ ನನ್ನನ್ನು ಅಕ್ಕ ಎಂದೇ ಕರೆಯುವ ರೂಢಿ. ಸಣ್ಣವರು ತಂಟೆ ಮಾಡಿದರೂ, ಜಗಳ ಮಾಡಿ ಅತ್ತರೂ ಅಮ್ಮ ಜೋರು ಮಾಡುತ್ತಿದ್ದದ್ದು ನನಗೇ. ಸಣ್ಣ ತಮ್ಮ ನನಗಿಂತ ಆರುವರೆ ವರ್ಷ ಸಣ್ಣವನಿದ್ದರೆ, ಸಣ್ಣ ತಂಗಿಗೂ ನನಗೂ ಹತ್ತು ವರ್ಷಗಳ ಅಂತರ. ಶಾಲೆಯಲ್ಲಿ ಕೊಟ್ಟ ಮನೆಗೆಲಸಗಳನ್ನು ಮಾಡಲು ಕುಳಿತಾಗ “ನನ್ನ ಜೊತೆ ಆಡಲು ಬಾ” ಅಂತ ಶುರುವಾಗುತ್ತಿತ್ತು ತಂಗಿಯ ವರಾತ. ಸಣ್ಣ ಸಣ್ಣ ವಿಷಯಕ್ಕೂ ಜೋರಾಗಿ ದನಿ ತೆಗೆದು ಅಳುತ್ತಿದ್ದ ತಂಗಿಯ ಕಣ್ಣಲ್ಲಿ ಏನೋ ಸಮಸ್ಯೆ ಬಂತೆಂದು ಡಾಕ್ಟರ್ ಬಳಿ ಹೋದಾಗ ಅವರು “ಕಣ್ಣೀರು ಕಡಿಮೆಯಾಗಿದೆ. ಅವಳು ಅಳದಂತೆ ನೋಡಿಕೊಳ್ಳಬೇಕು” ಅಂದಿದ್ದರು. ಸಣ್ಣ ತಂಗಿ ಅಳದಂತೆ ನೋಡಿಕೊಳ್ಳಬೇಕು ಅನ್ನುವ ಕಟ್ಟಾಜ್ಞೆ ಅಮ್ಮನಿಂದ. ಅಕ್ಕನಾಗಿದ್ದರಿಂದ ನಾನು ಬೈಗುಳಗಳನ್ನು ತಿಂದದ್ದೂ ಜಾಸ್ತಿ, ಹಾಗೆಯೇ ಅಪ್ಪ ಪೇಟೆಗೆ ಹೋದಾಗ  ಮಕ್ಕಳು ತಿನ್ನಲೆಂದು  ತರುತ್ತಿದ್ದ ರಸ್ಕ್, ಬಿಸ್ಕೆಟ್ ತಿಂದದ್ದೂ ಜಾಸ್ತಿ.

ಅಕ್ಕನಾಗಿ ಮನೆಯಲ್ಲಿ ಜವಾಬ್ದಾರಿ ತುಂಬಾನೇ ಇತ್ತು. ಮನೆಯಲ್ಲಿ ಬಡತನವಿದ್ದರೂ ಪ್ರೀತಿಗೆ ಬಡತನ ಇರಲಿಲ್ಲ. ಹಣದ ಅಡಚಣೆಯಿದ್ದರೂ ನನ್ನ ಹೆತ್ತವರು ಪದವಿ ತನಕ ವಿದ್ಯಾಭ್ಯಾಸ ಕೊಡಿಸಿದರು. “ಇನ್ನು ಓದಿದ್ದು ಸಾಕು” ಅನ್ನುವ ಅಮ್ಮನ ಮಾತನ್ನು ಕೇಳದೆ ಬ್ಯಾಂಕ್ ಸಾಲ ಪಡೆದು ಸ್ನಾತಕೋತ್ತರ ಪದವಿ ಪಡೆದ ನಂತರ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇರಿದೆ. ನನ್ನ ದಾರಿಯನ್ನೇ ಅನುಸರಿಸಿದ ಇಬ್ಬರೂ ತಂಗಿಯರು ಸಹಾ ಸ್ನಾತಕೋತ್ತರ ಪದವೀಧರರಾದುದು ಅಕ್ಕನಾಗಿ ನನಗೆ ಸಂತೋಷದ ಸಂಗತಿ. ನಾನು ಉನ್ನತ ಶಿಕ್ಷಣ ಪಡೆಯದಿದ್ದರೆ, ಅವರನ್ನೂ ಕೂಡಾ ಉನ್ನತ ಶಿಕ್ಷಣಕ್ಕಾಗಿ ಕಳಿಸುತ್ತಿರಲಿಲ್ಲ. ತಂಗಿಯರಿಬ್ಬರೂ ನನ್ನನ್ನು ಅನುಕರಿಸುತ್ತಿದ್ದರು. ಎಷ್ಟೆಂದರೆ, ನಮ್ಮ ಮೂವರ ಕೈಬರಹವೂ ಸೇಮ್ ಟು ಸೇಮ್- ಕೆಲವೊಮ್ಮೆ ನನ್ನ ಅಕ್ಷರ ನನಗೇ ಗುರುತಿಸಲಾಗದಷ್ಟು. ಆದರೂ ಈಗ ನನಗನಿಸುತ್ತಿದೆ “ತಂಗಿಯರೊಡನೆ ಸ್ವಲ್ಪ ಬಿಗುವಾಗಿಯೇ ಇದ್ದ ಕಾರಣ ತಂಗಿಯಂದಿರು ನನ್ನ ಜೊತೆ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುತ್ತಿರಲಿಲ್ಲವೆಂದು”.

ಮದುವೆಯ ಸಮಯದಲ್ಲಿ ಅಕ್ಕ ನಮ್ಮನ್ನು ಬಿಟ್ಟು ಹೋಗುತ್ತಾಳೆನ್ನುವ ಬೇಸರವಿದ್ದರೂ, ಅಕ್ಕನ ಮದುವೆಯ ಸಂಭ್ರಮವನ್ನು ಅವರ ಕಣ್ಣಲ್ಲಿ ಕಂಡಿದ್ದೆ. ಅಕ್ಕನ ಮನೆಗೆ ಹೋಗಲು ತಮ್ಮ ತಂಗಿಯರಲ್ಲಿ ಪೈಪೋಟಿ. ಅಕ್ಕನಿಗೊಂದು ಮಗುವಾಗಲಿದೆ ಎಂದು ತಿಳಿದಾಗ ಅವರು ಸಂಭ್ರಮಿಸಿದ ನೆನಪುಗಳು, ಮಗು ಹುಟ್ಟಿದ ನಂತರ ಮಗುವನ್ನು ಮುದ್ದಿಸುವ, ಮಗುವಿಗೆ ಏನು ಹೆಸರಿಡಲಿ ಅಂತ ಹೆಸರು ಹುಡುಕಿದ ನನ್ನ ತಂಗಿಯರ ಖುಷಿಯ ಕ್ಷಣಗಳು ಅಕ್ಕನಾದ ನನ್ನ ಕಣ್ಣ ಮುಂದಿದೆ. ಅಕ್ಕನ ಜೋಗುಳ ಹಾಡು ಕೇಳಿ ನಿದ್ರಿಸುತ್ತಿದ್ದ ತಂಗಿಗೆ ಅಕ್ಕನ ಮಗುವನ್ನು ಜೋಗುಳ ಹಾಡಿ ಮಲಗಿಸುವ ಸಂಭ್ರಮ.

ಕೆಲವು ಕಡೆಗಳಲ್ಲಿ ನಾನು ಗಮನಿಸಿದ ಅಕ್ಕ ತಮ್ಮ ನಡುವಿನ ಪ್ರೀತಿ ಹೇಗಿರುತ್ತದೆ ಎಂದರೆ ತಮ್ಮ ಮದುವೆಯಾದ ನಂತರವೂ ಆಗಾಗ ಅಕ್ಕನ ಸಂಸಾರದ ಬಗ್ಗೆ ಅಪಾರ ಪ್ರೀತಿ ತೋರುವ ತಮ್ಮ. ಅಕ್ಕನಿಗೇನೂ ಸಮಸ್ಯೆಯಾದರೂ, ಅದನ್ನು ಪರಿಹರಿಸಲು ಪ್ರಯತ್ನಿಸುವ ತಮ್ಮ. ಸೇರಿದ ಮನೆಯಲ್ಲಿ ಬಡತನವಿದ್ದಾಗ, ಅಕ್ಕನ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಅವರನ್ನು ಜೀವನದಲ್ಲಿ ಮೇಲೆ ಬರುವಂತೆ ಮಾಡಿದ ಅನೇಕ ಸಹೋದರರನ್ನು ಕಂಡಿದ್ದೇನೆ. ಅಕ್ಕನ ಮೇಲೆ ಅತೀವ ಭರವಸೆ.  ಕೆಲವೊಮ್ಮೆ ತನ್ನ ಮಾತು ಕೇಳದಿರುವ ಗಂಡನ ಬಗ್ಗೆ, ಅತ್ತಿಗೆಯ ಹತ್ತಿರ (ಅಂದರೆ ತನ್ನ ಗಂಡನ ಅಕ್ಕನ ಬಳಿ) “ಅತ್ತಿಗೆ ನೀವಾದರೂ ಹೇಳಿ ನಿಮ್ಮ ತಮ್ಮನಿಗೆ. ನೀವು ಹೇಳಿದರೆ ಇಲ್ಲವೆನ್ನುವುದಿಲ್ಲ. ಅಕ್ಕನ ಮಾತು ಅಂದರೆ ವೇದವಾಕ್ಯ ಇವರಿಗೆ. ನಿಮ್ಮ ಮಾತನ್ನು ಅವರು ಖಂಡಿತಾ ಕೇಳುತ್ತಾರೆ” ಅಂತ ದುಂಬಾಲು ಬೀಳುವ ನಾದಿನಿಯರ ಸಂಖ್ಯೆಯೂ ಕಡಿಮೆ ಏನಲ್ಲ.

“ನನಗೂ, ನನ್ನ ಕುಟುಂಬಕ್ಕೂ ಈ ಮನೆಯ ಋಣ ತೀರಿತು. ಇನ್ನು ತಪ್ಪಿಯೂ ಈ ಮನೆಯ ಹೊಸ್ತಿಲನ್ನು ದಾಟುವುದಿಲ್ಲ. ನನ್ನ ಕುಟುಂಬ ಹಾಗೂ ಇಲ್ಲಿರುವವರ ಕುಟುಂಬದ ಮಧ್ಯೆ ಅನ್ನ ನೀರು ಸೇವನೆ ಕೂಡಾ ಇಲ್ಲ” ಅಂತ ಶಪಥ ಮಾಡಿ, ಊರು ಬಿಟ್ಟು ಹೋಗಿ ಬೇರೆಡೆಯಲ್ಲಿ ನೆಲೆಸಿದ ದೊಡ್ಡಜ್ಜನ ಮಗನ ಮಗನ (ಅಂದರೆ ತಮ್ಮ) ಭೇಟಿಯಾದಾಗಿನ ಸಂದರ್ಭ ನೆನಪಿಗೆ ಬರುತ್ತಿದೆ.  ಹುಟ್ಟಿದಂದಿನಿಂದಲೂ ನೋಡಿಯೇ ಇರದ ಆ ತಮ್ಮನನ್ನು ಕಂಡಾಗ “ಕಣ್ಣರಿಯದಿದ್ದರೂ ಕರುಳರಿಯದೆ?” ಅನ್ನುವುದು ಸುಳ್ಳಲ್ಲವೆಂದು ಗೊತ್ತಾದ ದಿನವದು. ಅಕ್ಕನನ್ನು ಕಂಡ ಸಂಭ್ರಮ ಅವನಿಗೆ.  ಅವನದು ಒಂದೇ ಒತ್ತಾಯ. “ಆಕ್ಕಾ, ನಿಮಗೆ ಮದುವೆಯಾದ ಕಾರಣ ನಮ್ಮಜ್ಜ ಮಾಡಿದ ಆಣೆ ಪ್ರಮಾಣಗಳು ನಿಮಗೆ ಅನ್ವಯಿಸುವುದಿಲ್ಲ. ನಿಮ್ಮ ತಮ್ಮನ ಮನೆಗೆ ಖಂಡಿತಾ ಬರಲೇ ಬೇಕು” ಅಂದ ಅವನ ಮಾತಿಗೆ ಮಣಿದು ಅವನ ಮನೆಗೆ ಹೋಗಿದ್ದೆ. ಅಲ್ಲಿಂದ ಹೊರಡುವಾಗ, ತಮ್ಮನ ಹೆಂಡತಿ ದೇವರ ಕೋಣೆಯಲ್ಲಿ ನನ್ನನ್ನು ಕುಳ್ಳಿರಿಸಿ, ಮಲ್ಲಿಗೆಯ ಹೂದಂಡೆ ಮುಡಿಸಿ, ಅರಿಷಿಣ ಕುಂಕುಮ ಹಚ್ಚಿ, ಸೀರೆ-ರವಿಕೆ ಕಣ ನೀಡಿದಳು. ಆ ಬಳಿಕ ತಮ್ಮ, ಅವನ ಹೆಂಡತಿ, ಹಾಗೂ ಮಕ್ಕಳೆಲ್ಲಾ ಒಟ್ಟಿಗೆ ಸೇರಿ ಕಾಲಿಗೆ ನಮಸ್ಕರಿಸಿದಾಗ, ಮನ ತುಂಬಿ ಹಾರೈಸಿದ ಆ ದಿನ ಮರೆಯಲುಂಟೇ? ಎಲ್ಲಾ ಕುಟುಂಬದಲ್ಲೂ  ಅಕ್ಕನ ಸ್ಥಾನ ಮಧುರ ಬಂಧುರ.

ಆದರೆ ಇತ್ತೀಚಿನ ದಿನಗಳಲ್ಲಿ ಮನೆಗೊಂದು ಮಗು ಎಂಬಂತಾಗಿದೆ. ಅಕ್ಕ, ಅಣ್ಣ ಅನ್ನುವ ಪದಗಳನ್ನು ಪದಕೋಶದಲ್ಲಿ ಮಾತ್ರ ನೋಡುವ ದಿನಗಳು ಎದುರಾಗಿವೆ. ಸ್ವಂತ ಅಕ್ಕ ಇಲ್ಲದಿದ್ದರೆ, ಬೇರೆಯವರನ್ನೇ ಅಕ್ಕ ಅನ್ನಬಹುದು. ಒಟ್ಟಿನಲ್ಲಿ ಅಕ್ಕ ಅನ್ನುವ ನುಡಿಯೇ ಅದ್ಭುತ. ಅಕ್ಕ ತಮ್ಮನ ನಡುವೆ, ಅಕ್ಕ ತಂಗಿಯ ನಡುವೆ ಇರುವ ಭಾವಬಂಧವನ್ನು ಹೇಗೆ ವರ್ಣಿಸಲಿ? ಪರಸ್ಪರ ಎಷ್ಟೇ ಕಚ್ಚಾಡಿದರೂ ಬೇರೆಯವರ ಎದುರಲ್ಲಿ ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ. ಅಕ್ಕನಾಗಲು ಅನುಗ್ರಹಿಸಿದ ಆ ಭಗವಂತನಿಗೆ ಶರಣು.

-ಕೃಷ್ಣಪ್ರಭಾ ಎಂ. ಮಂಗಳೂರು

27 Responses

  1. ASHA nooji says:

    ಲೇಖನ ಓದಿ ತುಂಬಾಖುಷಿ ಕೊಟ್ಟಿತು. ಅಕ್ಕ,ತಂಗಿ ತಮ್ಮರಿಗೆ ಎರಡನೇ ಅಮ್ಮ ಎಂದು ಹೇಳಬಹುದು.ಚಂದದ ಬರಹ .ಸಹೋದರಿ

    • Krishnaprabha says:

      ಮೆಚ್ಚುಗೆಯ ಪ್ರತಿಕ್ರಿಯೆ ನೀಡಿ ಹರಸಿದ ನಿಮಗೆ ಅನಂತ ಧನ್ಯವಾದಗಳು

  2. Sunanda k says:

    ನೀವು ಹೇಳಿದಂತೆ ಹಿಂದಿನ ಕಾಲದಲ್ಲಿ ಅಕ್ಕನಿಗರ ಜವಾಬ್ದ್ದಾರಿ ಹೆಚ್ಚು. ನಾನೂ ಕೂಡಾ ನಿಮ್ಮಸಾಲಿಗೆ ಅಕ್ಕನಾಗಿ ಸೇರಿದ್ದೇನೆ.ನನ್ನ ತಂದೆಯವರು ತೀರಿ ಹೋಗುವಾಗ ನನಗೆ ಮಾತ್ರ ಮದುವೆಯಾಗಿತ್ತು.ಉಳಿದತಮ್ಮ ತಂಗಿಯರು ಹಾಗೂ ತಾಯಿಯ ಜವಾಬ್ದ್ಅರಿಯು ನನಗೆ ಬಿತ್ತು. ಹಾಗೆ ಎಲ್ಲರಿಗೂ ಹಿರಿಯಕ್ಕನಾಗಿ ಜವಾಬ್ದಾರಿ ಚೆನ್ನಾಗಿ ನಿರ್ವಹಿಸಿದೆ.ಈಗ ಅವರೆಲ್ಲರ ಮಕ್ಕಳಿಗೆ ದೊಡ್ಡತ್ತೆ ಹಾಗೂ ದೊಡ್ಡಮ್ಮನಾಗಿ ಎಲ್ಲರ ಪ್ರೀತಿ ನನಗೆ ಸಿಕ್ಕಿದೆ ನಿಮ್ಮ ಬರಹ ಓದಿ ನನಗೆ ಖುಷಿ ಆಯಿತು .ಅಕ್ಕಂದಿರೂ ಎರಡನೇ ಅಮ್ಮನಂತೆ ಎಂದು.

    • Krishnaprabha says:

      ನಿಮ್ಮ ಅನುಭವಗಳನ್ನು ಓದಿ, ತಿಳಿದು ಸಂತಸವಾಯಿತು. ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು ಅಕ್ಕ

  3. Hema says:

    ಸೊಗಸಾದ ಬರಹ..ಹೌದು, ಹಿರಿಯಕ್ಕನಿಗೆ ಹಲವಾರು ಅಲಿಖಿತ ಜವಾಬ್ದಾರಿಗಳಿರುತ್ತವೆ.ಇನ್ನು ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದೆ, ಪೋಷಕರು ಅಸಹಾಯಕರಾಗಿದ್ದರೆ, ಅಕ್ಕನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗುತ್ತದೆ. ನಾನೂ ನಿಮ್ಮಂತಯೇ ಹಿರಿಯಕ್ಕ.

    • Krishnaprabha says:

      ಹಿರಿಯಕ್ಕನಿಗೆ ಜವಾಬ್ದಾರಿಗಳು ಅಧಿಕವೇ…. ಮೆಚ್ಚುಗೆಯ ನುಡಿಗಳಿಗೆ ಹಾಗೂ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ ನಿಮಗೆ ಧನ್ಯವಾದಗಳು

  4. ✍️ತುಷಾರ್ ಕೆ ಕೋಟೆಕಾರ್ says:

    ಅನುಭವದ ನೆನಪುಗಳನ್ನು ಭಾವ ಪರವಶತೆಯಿಂದ ಒಡಹುಟ್ಟಿದ ಬಾಂಧವ್ಯಗಳ ಸಿಹಿ-ಕಹಿ ಮೆಲುಕು ಹಾಕುತ್ತಾ ಅಕ್ಷರ ಚಿತ್ರಗಳಲ್ಲಿ ಓದುಗನ ಭಾವಕ್ಕೆ ಇಳಿಯುವಂತೆ ವಿವರಿಸಿದ ಲೇಖನ ಅವಿಸ್ಮರಣೀಯ….

    • Krishnaprabha says:

      ಚಂದದ ಶಬ್ದಗಳಲ್ಲಿ ಲೇಖನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕಾಗಿ ಅನಂತ ಧನ್ಯವಾದಗಳು ತುಷಾರ್

  5. Swathi says:

    ಅದ್ಭುತ ಬರಹ…ಬಾಂಧವ್ಯಗಳ ಕೊಂಡಿ ಸಡಿಲಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಬರಹ ಎಲ್ಲರಿಗೂ ಸ್ಪೂರ್ತಿ ನೀಡುವಂತದ್ದು…

    • Krishnaprabha says:

      ಈಗಿನ ಮಕ್ಕಳಿಗೆ ಸ್ವಲ್ಪ ಅಪರೂಪವೇ ಈ ತರಹದ ಅನುಭವಗಳು. ಮೆಚ್ಚುಗೆ ವ್ಯಕ್ತಪಡಿಸಿದ ನಿಮಗೆ ಧನ್ಯವಾದಗಳು

  6. Anonymous says:

    ಬಹಳ ಮಾರ್ಮಿಕ ಬರಹ ಕೃಷ್ಣಪ್ರಭಾ. ಆಪ್ತತೆಯಿಂದ ಕಣ್ಣಲ್ಲಿ ನೀರು ತರಿಸಿತು. ಎಂಟು ಮಕ್ಕಳ ಕುಟುಂಬದಲ್ಲಿ ನಾನು ಕೊನೆಯವಳಾಗಿದ್ದರಿಂದ ನನಗೆ ಅಕ್ಕನಾಗುವ ಭಾಗ್ಯ ದೊರೆತಿಲ್ಲ. ಆದರೂ, ಎಷ್ಟೋ ಮಂದಿಯ ಬಾಯಲ್ಲಿ ಅಕ್ಕನೆಂದು ಕರೆಯಲ್ಪಡುವಾಗ ಸಿಗುವ ಖುಷಿಯೇ ಬೇರೆ. ನಾನು ನನ್ನ ಹಿರಿಯಕ್ಕ ಶಕುವಕ್ಕನ ಬಗ್ಗೆ ಒಂದು ಲೇಖನ ಸಿದ್ಧಪಡಿಸುತ್ತಿರುವ ಈ ಹೊತ್ತಲ್ಲೇ ನಿಮ್ಮ ಬರಹ ಕಾಣಿಸಿಕೊಂಡದ್ದು ಮುದ ನೀಡಿತು. ಹೀಗೇ ಬರೆಯುತ್ತಿರಿ.. ಶುಭವಾಗಲಿ.

    • Roopakala Alva says:

      ಕೃಷ್ಣಪ್ರಭಾ…ಅದು ನನ್ನ ಅನಿಸಿಕೆ.

      • Krishnaprabha says:

        ನಿಮ್ಮಂತಹ ಲೇಖಕರಿಂದ ಸಿಗುವ ಪ್ರಶಂಸೆಯ ನುಡಿಗಳಿಂದ ನಿಜವಾಗಿಯೂ ಮನಸ್ಸಿಗೆ ಆನಂದವಾಗುವುದು. ನಿಮ್ಮ ಮೆಚ್ಚುಗೆಯ ನುಡಿಗಳಿಗೆ ತುಂಬು ಹೃದಯದ ಧನ್ಯವಾದಗಳು ರೂಪಕಲಾ ಮೇಡಂ

  7. ಧೀರಜ್ says:

    ಅದ್ಭುತ ಬರಹ.. ಕೆಲವೊಮ್ಮೆ ನೈಜತೆಯ ಅನಾವರಣ ಮಾಡುವ ಅವಕಾಶ ಅಂದರೆ ಹಳೆಯ ಮಧುರ ನೆನಪುಗಳ ಮೆಲುಕು ಹಾಕುತ್ತಾ ಸಾಗಿದಾಗ.., ಸಂಬಂಧಗಳ ಬಂಧ ಅನುರಾಗದ ಅನುಬಂಧ ಮತ್ತೊಂದಿಲ್ಲ ..

    • Krishnaprabha says:

      ಧೀರಜ್ ಅವರೇ, ಬಹಳ ಚೆನ್ನಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿರುವಿರಿ. ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು

  8. ಬಿ.ಆರ್.ನಾಗರತ್ನ says:

    ವಾವ್ ಸುಂದರ ಬರಹ ನಾನು ಸಹ ಹೆತ್ತವರು ಮನೆಯಲ್ಲಿ ಇಂಜಿನ್ ನನ್ನ ಹಿಂದೆ ಆರು ಬೋಗಿಗಳು.ಆ ಒಡನಾಟದ ಬಾಂಧವ್ಯ ಈಗಲೂ ಮುಂದುವರಿದಿದೆ.ಅದೇ ನನ್ನ ಪುಣ್ಯ ಸಿಹಿ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ ನಿಮ್ಮ ಬರಹಕ್ಕೆ ನನ್ನ ದೊಂದು ನಮಸ್ಕಾರ ಮೇಡಂ..

    • Krishnaprabha says:

      ಇಂಜಿನ್ ಹಿಂದೆ ಆರು ಬೋಗಿಗಳು. ಆಹಾ.. ತುಂಬಾ ಚೆನ್ನಾಗಿದೆ. ಮೆಚ್ಚುಗೆ ವ್ಯಕ್ತಪಡಿಸಿದ ನಿಮಗೆ ಧನ್ಯವಾದಗಳು ನಾಗರತ್ನ ಮೇಡಂ

  9. ನಯನ ಬಜಕೂಡ್ಲು says:

    ಚಂದದ, ಆಪ್ತ ಬರಹ ಮೇಡಂ, ಅಕ್ಕ ಆದವಳಿಗೆ ಜವಾಬ್ದಾರಿಗಳು ಯಾರೂ ನೀಡದೆಯೇ ಹೆಗಲೇರುತ್ತವೆ, ಕಾರಣ ಅವಳಿರುವ ಸ್ಥಾನವೇ ಅರ್ಥ ಮಾಡಿಸುವ ತಾನು ಹಿರಿಯಳು ಎನ್ನುವ ಭಾವ.

    • Krishnaprabha says:

      ಎಲ್ಲಾ ಲೇಖನಗಳಿಗೂ, ಎಲ್ಲಾ ಲೇಖಕರಿಗೂ ಚಂದದ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸುವ ನಯನಾಗೆ ತಲೆ ಬಾಗಿ ಸಲಾಂ.

  10. ಶಂಕರಿ ಶರ್ಮ says:

    ನನ್ನ ಅಕ್ಕನ ಪುಟ್ಟ ತಂಗಿಯಾಗಿರುವ ನನಗೆ ಅಕ್ಕನೇ ಹೀರೋ! ನನಗಾಗಿ ಅವಳು ಮಾಡಿದ ತ್ಯಾಗಗಳು ಹಲವಾರು.. ಅಕ್ಕನೆಂಬ ತ್ಯಾಗಮೂರ್ತಿಗೆ ಅತ್ಯಂತ ಆದರಪೂರ್ವಕ ಸಲ್ಲುವ ನಿಮ್ಮ ಲೇಖನ ಬಹಳ ಸೊಗಸಾಗಿದೆ ಮೇಡಂ.

  11. Anonymous says:

    ನಿಜಕ್ಕೂ ಅರ್ಥಪೂರ್ಣ ಬರಹ… ಅಕ್ಕನ ವಿಶೇಷತೆ , ಜವಾಬ್ದಾರಿ ಬಗ್ಗೆ ತುಂಬಾ ಚಂದ ಬರೆದಿದ್ದೀರಿ

  12. ರಾಜೇಶ್ವರಿ ಕೆಂಭಾವಿ says:

    ಒಡಹುಟ್ಟಿದವರ ಸುಖವನ್ನು ನಾನೆಂದೂ ಅನುಭವಿಸಿಲ್ಲ.. ತಾಯಿಯೇ ನನಗೆಲ್ಲಾ… ಎಲ್ಲಾ ಪಾತ್ರವನ್ನು ನಿರ್ವಹಿಸುತ್ತಿರುವು ನನ್ನ ತಾಯಿಯೇ ನನಗೆಲ್ಲಾ, ಇಂದಿಗೂ ಜೀವನದಲ್ಲಿ ಪ್ರತಿ ಹೆಜ್ಜೆಗೂ ಸೋಲುತ್ತಿರುವ ನನಗೆ ಸಮಾಧಾನ ಮಾಡಿ ಗೆಲ್ಲುವ ಮಹಾನ್ ಉತ್ಸಾಹ ತುಂಬುವ 72 ವರ್ಷದಲ್ಲೂ ಚೈತನ್ಯದ ಚಿಲುಮೆ ನನ್ನ ತಾಯಿ, ಇಂತಹ ಅಮ್ಮನನ್ನು ಪಡೆದ ನಾನೇ ಧನ್ಯ..

  13. Rajeshwari says:

    ಅಕ್ಕ ಎಂಬ ಒಡನಾಟದ ಸೋದರತ್ವದ ಸವಿರುಚಿ ನಾನೆಂದೂ ಕಂಡಿಲ್ಲ, ಆದರೆ ಬದುಕಿನ ಪ್ರತಿ ಹೆಜ್ಜೆಯಲ್ಲೂ ಸೋಲು ಕಂಡ ನನಗೆ ಅಮ್ಮನೇ ಸರ್ವಸ್ವ ಅವರೇ ನನಗೆ ಸ್ಪೋರ್ತಿ, ತನ್ನ 72ನೇ ವಯಸ್ಸಿನಲ್ಲಿಯೂ ಮಗಳ ಪ್ರತಿ ಸೋಲಿಗೂ ಹೆಗಲು ಕೊಡುವ ಆ ಮಹಾನ ಚೈತನ್ಯ… ನಿಮ್ಮ ಬರಹ ಸೂಪರ್ ಆಗಿದೆ…

  14. ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ says:

    ಅಕ್ಕ ಇದ್ದರೂ ಆ ಭಾವನಾತ್ಮಕ ಸಂಬಂಧದಿಂದ ವಂಚಿತನಾದ ನತದೃಷ್ಟ ನಾನು.
    ಅಕ್ಕ ..ಎನ್ನುವ ಆ ಪದದಲ್ಲಿಯೇ ಅಮ್ಮನ ಜವಾಬ್ದಾರಿ ಇರಲಿ ಅನ್ನುವ ಕಾರಣಕ್ಕೊ ಏನೋ….ಪದದ ಸೃಷ್ಟಿ ಹಾಗಿರಿಸಿದ್ದರು, ಅಂದಿನ ಭಾಷಾ ಶಾಸ್ತ್ರಜ್ಞರು.
    ಓಹ್…….ಒಂದು ಕ್ಷಣ ….ಆ ವಿಶಿಷ್ಟ ಸಂಬಂಧದ ಮಾಧುರ್ಯದಲ್ಲಿ ಕಳೆದು ಹೋದೆ – ಹಾಗಿತ್ತು ತಮ್ಮ ಸುಂದರ ಬರಹ.

    ಲೇಖನ ಓದಿದ ನನಗೆ ಅಕ್ಕ ತಂಗಿ (ಮ್ಮ)ಯರ ಸಂಬಂಧ ಹೀಗಿರಬೇಕು ಅನ್ನಿಸಿತು.

    ಆದರೂ…..
    ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ತಮ್ಮದೇ ಆದ ಸಂಸಾರದ ಸುಖ-ಸಂತೋಷದಲ್ಲಿ ಆ ಸಂಬಂಧ ಬರಿಯ ಮೆಲುಕು ಹಾಕಬಹುದಾದ ಒಂದು ಸುಂದರ ನೆನಪು..ಹಲವರ ಜೀವನದಲ್ಲಿ!

    ತಮ್ಮ ಲೇಖನ ಓದಿದರೆ… ಪ್ರಾಯಶಃ..ಅವರೂ ಬದಲಾಗಬಹುದು.

  15. Krishnaprabha says:

    ನನಗೂ ಒಬ್ಬ ಅಕ್ಕ ಇದ್ದಳು ಮೊನ್ನೆಮೊನ್ನೆ ವರೆಗೆ. ನೀವು‌ ವಿವರಿಸಿದ ಗುಣಗಳೆಲ್ಲಾ ಅವಳಲ್ಲಿದ್ದುವು.
    ಗಝಲ್

    ಮುದ್ದು ಮಗಳಾದರೂ ಹಿರಿಯಳಂತೆ ಬೆಳೆದೆಯ ನೀನು ಅಕ್ಕ
    ಸದ್ದು ಮಾಡದೆಯೇ ನಮ್ಮನೆಲ್ಲ
    ಪೊರೆದೆಯ ನೀನು ಅಕ್ಕ

    ತಂದೆಯ ಹೆಮ್ಮೆಯ ಜ್ಯೋತಿಯಾಗಿ ಬದುಕಿದ ಪುತ್ರಿ ಅಲ್ಲವೆ
    ತಂಗಿಯರ ಒಡನಾಟದಲಿ
    ಖುಷಿಯ ಪಡೆದೆಯ ನೀನು ಅಕ್ಕ

    ಒಡಹುಟ್ಟಿಗೆ ಸ್ನೇಹ ಮಮತೆಯ ಧಾರೆಯೆರೆದು ಪೋಷಿಸಿದ ಮಾತೆ ಕೊಟ್ಟ ಕಷ್ಟವ ಸಹಿಸಿ ನಗುವ ತೋರಿದೆಯ ನೀನು ಅಕ್ಕ

    ಬಂಧು ಬಳಗವ ಆದರದಿ ಸತ್ಕರಿಸಿ ಬಾಳಿದೆ ಅಂದು
    ತಂದು ಅಭಿಮಾನವ ಮನದುಂಬಿ
    ಮೆರೆದೆಯ ನೀನು ಅಕ್ಕ

    ಭಾರತಿಗೆ ಅಚ್ಚುಮೆಚ್ಚಿನ ಗೆಳತಿಯಾಗಿ ಸಂತಸ ತಂದೆಯಲ್ಲ
    ದಾರಿಯಲಿ ಕೈಕೊಡವಿ ನಮ್ಮನ್ನೀಗ ತೊರೆದೆಯ ನೀನು ಅಕ್ಕ

    ಭಾರತಿ ಸುರತ್ಕಲ್ ಅವರ ಪ್ರತಿಕ್ರಿಯೆ

  16. ಪಾರ್ವತಿಕೃಷ್ಣ. says:

    ದೊಡ್ಡಕ್ಕನಾದ ನಾನು ಈ ವಯಸ್ಸಲ್ಲಿ ಪುನ: ನಿಮ್ಮ ಲೇಖನವನ್ನೋದಿ ಬಾಲ್ಯಕಾಲಕ್ಕೆ ಹೋದೆ. ತಮ್ಮತಂಗಿಯರ ಜತೆಗೆ ಆಡಿದ ದಿನಗಳ ನೆನಪು ಮಾಡಿ ಆ ನನ್ನ ಪ್ರೀತಿಯ ಪಟಾಲಂ ಜತೆ ಹಂಚಿಕೊಂಡೆ. ಧನ್ಯವಾದಗಳು.

  17. Praveen says:

    ಒಡಹುಟ್ಟಿದ ಅಕ್ಕ ಇಲ್ಲ ಆದ್ರೆ ಒಬ್ರು ಪರಿಚಯ ಆದರೂ ಆದ್ರೆ ಅವರು ಅರ್ಧದಲ್ಲಿ ಕೈ ಕೊಟ್ಟರು ನಾನೇನು ತಪ್ಪು ಮಾಡಿಲ್ಲ ಆದ್ರೆ ಅವಳು ಹಾಗೆ ಏಕೆ ಮಾಡಿದಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: