ನೆನಪು 9: ಕೆ ಎಸ್ ನ ಹಾಗೂ ನಿತ್ಯೋತ್ಸವದ ಕವಿ ನಿಸಾರ್ ಅಹಮದ್
ನಮ್ಮ ತಂದೆಯವರು ನಿಸಾರ್ ಅಹಮದ್ ಅವರೊಡನೆ ಒಂದು ವಿಶಿಷ್ಟವಾದ ಸ್ನೇಹಸಂಬಂಧವನ್ನು ಹೊಂದಿದ್ದರು.ಇಬ್ಬರೂ ಯಾವುದೇ ಪಂಥವಾದ,ಗುಂಪುಗಾರಿಕೆಗಳಿಂದ ದೂರವಾದ, ಆದರೆ ಭಿನ್ನವಾದ ಕಾವ್ಯಮಾರ್ಗ ಅನುಸರಿಸಿದರು.ಅಭಿಮಾನಿಗಳು ಅಥವಾ ಕಾವ್ಯಾಸ್ವಾದಕರು ಇದ್ದರೇ ಹೊರತು ಆರಾಧಕರಿರಲಿಲ್ಲ, ಅವರದೆಂದೇ ಆದ ವಿಶೇಷ ವಿಮರ್ಶಾಗಣವಿರಲಿಲ್ಲ. ಮತ್ತೊಂದು ವಿಷಯವೆಂದರೆ ನಿಸಾರರ ಸ್ನೇಹಜಾಲ ನಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರೊಂದಿಗೂ ಬೆಸೆದುಕೊಂಡಿದ್ದುದು.
ನಾನು ಮೊದಲ ಬಾರಿ ನಿಸಾರ್ ಅವರನ್ನು ನಮ್ಮ ಮನೆಯಲ್ಲಿ ಕಂಡಿದ್ದು ನಾನು ಹತ್ತು ವರುಷದ ಬಾಲಕನಾಗಿದ್ದಾಗ ಅವರ ‘ಮನಸು ಗಾಂಧಿಬಜಾರು‘ ಕವನಸಂಕಲನ {1960} ಆಗಲೇ ಪ್ರಕಟವಾಗಿತ್ತು. ಆ ಕೃತಿಗೆ ನಮ್ಮ ತಂದೆಯವರು ಮುನ್ನುಡಿ ಬರೆದುಕೊಟ್ಟಿದ್ದರು.
ನಿಸಾರ್ ಅಹಮದ್ ನಮ್ಮ ಕುಟುಂಬಕ್ಕೆ ನಿಕಟವಾಗಲು ಮತ್ತೊಂದು ಕಾರಣವೂ ಇದೆ. ನಾವು ಬೆಂಗಳೂರಿನ ಜಯನಗರ ಮೊದಲನೆಯ ಬ್ಲಾಕ್ ನಲ್ಲಿ ವಾಸವಾಗಿದ್ದಾಗ ನಮ್ಮ ಮನೆಯ ಎದುರಿಗೆ ಆರೋಗ್ಯ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಅಬ್ದುಲ್ ರಷೀದ್ ಎನ್ನುವವರ ಮನೆ ಇತ್ತು.ಅವರು ನಿಸಾರರ ಚಿಕ್ಕಪ್ಪ. ಅವರ ಮನೆಗೆ ಆಗಾಗ್ಗೆ ಬರುತ್ತಿದ್ದರು.ಆದರೆ ಅವರ ಮನೆಗೆ ಹೋಗುವ ಮೊದಲು ನಮ್ಮ ಮನೆಗೆ ಭೇಟಿ ನೀಡುತ್ತಿದ್ದರು.
ಒಮ್ಮೆ ನಿಸಾರರು ಬಂದಾಗ ಗೇಟಿನ ಬಳಿ ನಿಂತಿದ್ದ ರಷೀದ್ ಅವರು “ಬಾರಯ್ಯ ನಿಸಾರ್ “ ಎಂದು ಆಹ್ವಾನಿಸಿದಾಗ ಅದಕ್ಕೆ ನಿಸಾರ್ ಅವರು “ಮೊದಲು ನಮ್ಮ ಗುರುಗಳ ಮನೆ,ಆಮೇಲೆ ನೆಂಟರ ಮನೆ” .ಎಂದಿದ್ದರು.
ಮನೆಯೊಳಗೆ ಬಂದು ಆಸೀನರಾಗಿ ಅವರು ಕೈಯಲ್ಲಿ ಸಿಗರೇಟ್ ಪ್ಯಾಕ್ ಹಿಡಿದು ನಮ್ಮತಂದೆಯವರ ಅನುಮತಿ ಕೇಳಿ ಧೂಮಪಾನ ಮಾಡುತ್ತಿದ್ದರು.ನಾನೋ ನಮ್ಮಣ್ಣನೋ ಕಾಫಿ ನೀಡಿದಾಗ “ಹೇಗಿದ್ದೀಯಾ ದೊರೆ,ಅಮ್ಮ ಇದ್ದಾರಾ? ಎಂದು ಕೇಳುತ್ತಿದ್ದರು.
“ಏನಾದರೂ ಬರೆದಿದ್ದೀಯೋ?” ಎಂದು ನಮ್ಮ ತಂದೆ ಕೇಳಿದಾಗ ಹೌದೆನ್ನುತ್ತ ತಮ್ಮ ಕೋಟಿನ ಜೇಬಿನಿಂದ ಮಡಿಸಿದ ಹಾಳೆಯೊಂದನ್ನು ತೆರೆದು ಬಿಡಿಸಿ ಕವನವನ್ನು ತಮ್ಮ ವಿಶಿಷ್ಟ ಕೈಚಲನೆ,ಹಾವಭಾವಗಳೊಂದಿಗೆ, ಧ್ವನಿಪೂರ್ಣವಾಗಿ ವಾಚಿಸುತ್ತ ಏಕಪ್ರೇಕ್ಷಕ ಕವಿಗೋಷ್ಠಿ ನಡೆಸುತ್ತಿದ್ದರು.
ಏನೂ ಪ್ರತಿಕ್ರಿಯೆ ಇಲ್ಲದೆ ಆಲಿಸುತ್ತಿದ್ದ ನಮ್ಮ ತಂದೆ ವಾಚನ ಮುಗಿದಾಗ ಉದ್ಗಾರಗಳಿಂದಲೋ ,ಚುಟುಕು ಪದಗಳಿಂದಲೋ ತಮ್ಮ ಅಭಿಮತ ತಿಳಿಸುತ್ತಿದ್ದರು. ಮುಂದೆ ಅವರಿಬ್ಬರ ನಡುವೆ ಮತ್ತಷ್ಟು ಲೋಕಾಭಿರಾಮದ ಮಾತುಗಳು ವಿಶೇಷವಾಗಿ ಸಾಹಿತ್ಯದ ವಲಯದ ಗುಂಪುಗಾರಿಕೆ, ವಿಮರ್ಶಕಗಣ ಇತ್ಯಾದಿಗಳ ಬಗ್ಗೆ ಇರುತ್ತಿತ್ತು.
ಈ ನಡುವೆ ಭೇಟಿಯಾದ ನಮ್ಮ ತಾಯಿ ಹಾಗೂ ಕುಟುಂಬದ ಇತರರ ಯೋಗಕ್ಷೇಮ ವಿಚಾರಿಸಿ ತಮ್ಮ ಚಿಕ್ಕಪ್ಪನವರ ಮನೆಗೆ ಹೋಗುತ್ತಿದ್ದರು.
ನಮ್ಮ ಮನೆಯ ಎಲ್ಲ ಸಮಾರಂಭಗಳಿಗೆ ನಿಸಾರ್ ಅವರು ಖಾಯಂ ಅತಿಥಿ. ನಿಸಾರರ ಭೇಟಿ ತುಂಬಾ ದಿನ ಆಗದಿದ್ದಾಗ ನಮ್ಮ ತಂದೆ “ಏನಾಯ್ತು ಇವನಿಗೆ ?.ನಮ್ಮ ಮನೆಯ ದಾರಿ ಮರತೇ ಬಿಟ್ಟನಲ್ಲ” ಎಂದು ಹತ್ತಿರದ ನೆಂಟರು ಬರದಿದ್ದಾಗ ಕೊರಗುವಂತೆ ಕೊರಗುತ್ತಿದ್ದರು.
ಸಂತಸದ ವಿಷಯವೆಂದರೆ ನಮ್ಮ ತಂದೆ ತಾಯಿ ಇಬ್ಬರೂ ಗತಿಸಿದ ಅನಂತರವೂ ನಿಸಾರರು ನಮ್ಮ ಕುಟುಂಬದ ಬಗ್ಗೆ ಅದೇ ತರನಾದ ವಿಶ್ವಾಸವನ್ನು ಇರಿಸಿಕೊಂಡಿದ್ದರು. ದಾರಿಯಲ್ಲಿ ಸಿಕ್ಕಾಗ ಬಹಳ ವಿಶ್ವಾಸದಿಂದ ಮಾತನಾಡಿಸಿ , ಮನೆಯ ಪ್ರತಿಯೊಬ್ಬರ ಬಗೆಗೂ ವಿಚಾರಿಸುತ್ತಿದ್ದರು. ನಮ್ಮ ತಾಯಿಯವರು ನಿಧನರಾದಾಗ ಪಾರ್ಥಿವ ಶರೀರಕ್ಕೆ ಗೌರವದಿಂದ ನಮಸ್ಕರಿಸಿ, ನಮ್ಮ ಹೆಗಲ ಮೇಲೆ ಕೈ ಇರಿಸಿ “ಅಮ್ಮ ಅವರ ಕರ್ತವ್ಯ ಮುಗಿಸಿಹೋಗಿದ್ದಾರೆ. ನಿಮ್ಮ ದುಃಖದಲ್ಲಿ ನಾನೂ ಭಾಗಿ ಕಣ್ರಯ್ಯ“ ಎಂದದ್ದು ಇನ್ನೂ ಮನಸ್ಸಿನಲ್ಲಿ ಅನುರಣಿಸುತ್ತಿದೆ.
ನಿಸಾರ್ ಅಹಮದ್ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಒಂದು ರಾತ್ರಿ ಹತ್ತು ಗಂಟೆಗೆ ಬಂದು ಮಲಗಿದ್ದ ನಮ್ಮ ತಂದೆಯವರನ್ನು ಎಚ್ಚರಗೊಳಿಸಿ “ಸಾರ್ ನಿಮ್ಮ ಅನುಮತಿ ಇಲ್ಲದೆ ಒಂದು ಕೆಲಸ ಮಾಡಿದ್ದೇನೆ ಒಂದು ವಿಚಾರ ಸಂಕಿರಣದ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿಬಿಟ್ಟಿದ್ದೇನೆ .ಇಲ್ಲಾ ಅನ್ನಬಾರದು” ಎಂದರು .
“ಇದೇನಯ್ಯಾ ಈ ಅವಾಂತರ, ಹೋಗಲಿ ಅದರ ವಿವರಾನಾದ್ರೂ ತಿಳಿಸು” ಎನ್ನುತ್ತ ನಮ್ಮ ತಂದೆ ಅನುಮತಿ ಕೊಟ್ಟರು.
ಬಹುಶಃ ನಿಸಾರ್ ಅಹಮದ್ ಅವರೊಬ್ಬರಿಗೆ ಮಾತ್ರ ,ನಮ್ಮ ತಂದೆಯವರ ಜತೆ ಈ ರೀತಿ ಒಪ್ಪಿಗೆ ಪಡೆಯಲು ಸಾಮರ್ಥ್ಯವಿದ್ದುದು. ಆ ಸಾಮರ್ಥ್ಯಕ್ಕೆ ನಲವತ್ತು ವರ್ಷದ ಹೊಂದಾಣಿಕೆಯ ಆತ್ಮೀಯ ಬಾಂಧವ್ಯ ಇತ್ತೆಂಬುದೂ ಅಷ್ಟೇ ಸತ್ಯ.
ನಮ್ಮ ತಂದೆಯವರು ನಿಧನರಾದಾಗ ಬಂದಿದ್ದ ನಿಸಾರರ ಮುಂದೆ ವಾರ್ತಾವಾಹಿನಿಯವನೊಬ್ಬ ಮೈಕ್ ಹಿಡಿದು “ಸಾರ್ ನಿಮ್ಮ ಅನಿಸಿಕೆ” ಎಂದು ಕೇಳಿದ.
ಅದಕ್ಕೆ “ಏನು ಅನಿಸಿಕೇನಯ್ಯ. ಕನ್ನಡ ಕಾವ್ಯಲೋಕದ ಒಂದು ದೊಡ್ಡ ಆಲದಮರ ಬಿದ್ದುಹೋಗಿದೆ.ಮತ್ತೊಂದು ಹುಟ್ಟಿಬರಲು ಇನ್ನಷ್ಟು ಕಾಲ ಬೇಕೋ?”ಎಂದಿದ್ದರು ನಿಸಾರ್.
(ಮುಂದುವರಿಯುವುದು….)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=29157
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು )
ಧನ್ಯವಾದ
ಸೊಗಸಾದ ಲೇಖನ ಮಾಲೆ. ಕೆ. ಎಸ್ ಅವರ ಜೊತೆ ಬರುವ ಬೇರೆ ಬೇರೆ ದಿಗ್ಗಜರ ಪರಿಚಯ ಬಲು ಅಪ್ಯಾಯಮಾನ.
ಸಾಹಿತ್ಯಲೋಕದ ದಿಗ್ಗಜರ ಜೀವನ ಚರಿತ್ರೆಯೇ ನಮಗೊಂದು ಅಚ್ಚರಿಯ ಮೂಟೆ. ಈ ಲೇಖನ ಮಾಲೆಯನ್ನು ಅಭಿಮಾನದಿಂದ ಓದುವ ಸಂತಸವೇ ಅನನ್ಯ..ಧನ್ಯವಾದಗಳು ಸರ್.
ಕನ್ನಡದಲ್ಲಿ ಚೆಂದಾಗಿ ಬರೆದ ಇಬ್ಬರು ಚೆಂದದ ಕವಿಗಳ ಮನಸ್ಸು ಎಷ್ಟು ಚೆಂದ…