ವೃಕ್ಷಕೋಟಿ‌ ಆಂದೋಲನ

Spread the love
Share Button

ಹಣವನ್ನು ನಾವು ಕೋಟಿಗಳಲ್ಲಿ ಎಣಿಸುವುದು ರೂಢಿಯಾದ ಮೇಲೆ ಕೋಟಿಗಿಂತ ಕಡಿಮೆ ಮಾತನ್ನು ನಾವು ಆಡುವುದೇ‌ ಇಲ್ಲ ; ಲೆಕ್ಕಕ್ಕೆ ಹಿಡಿಯುವುದೇ‌ ಇಲ್ಲ‌ ಎಂದು ಕಾಣುತ್ತದೆ. ಇದು ಗಿಡ ನೆಡುವ ಕಾರ್ಯಕ್ರಮಕ್ಕೂ‌ಅನ್ವಯಿಸುತ್ತದೆ. ಈ ವರ್ಷದ ವನಮಹೋತ್ಸವದ ‌ಆಚರಣೆ ಕೊರೊನಾ ಕಾರಣದಿಂದ ಪ್ರತಿವರ್ಷದಂತೆ ಸಾಧ್ಯವಾಗಿಲ್ಲ. ಆದರೆ ಪ್ರತಿ ವರ್ಷ ಈ ಆಚರಣೆಯ ಸಂದರ್ಭದಲ್ಲಿ ಸಸಿಗಳನ್ನು ನೆಡುವ ಆಲೋಚನೆಯ ಹಿಂದಿನ ಉದ್ದೇಶ ಬಹಳ ದೊಡ್ಡದೇನೋ ನಿಜ. ಆದರೆ‌ ಅದು ಜಾರಿಯಾದ ನಂತರ ನೆಟ್ಟ ಸಸಿಗಳ ಪಾಲನೆ-ಪೋಷಣೆ ಹೇಗೆ ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕಾದ ಅಗತ್ಯವಿದೆ.

ಭಾರತಾದ್ಯಂತ ಸುಮಾರು ನಾಲ್ಕು ದಶಕಗಳಿಂದಲೂ ವನಮಹೋತ್ಸವ ಕಾರ್ಯಕ್ರಮ ಪ್ರತಿವರ್ಷ ನಡೆಯುತ್ತದೆ.ಅಂದು ಸರ್ಕಾರಿ ಕಛೇರಿಗಳಿಂದ ಹಿಡಿದು ಶಾಲಾ ಆವರಣದ ವರೆಗಿನ ‌ಎಲ್ಲ ಖಾಲಿ ಜಾಗಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ವಿದ್ಯುಕ್ತವಾಗಿ ನಡೆಯುತ್ತದೆ. ಇದು ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿ ನಡೆಯುವುದಷ್ಟೇ‌ಅಲ್ಲ ಮಂತ್ರಿ ಮಹೋದಯರು, ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆಗಳಿಗೆ ಇದು ಮಹತ್ವಾಕಾಂಕ್ಷಿ ಯೋಜನೆ ಕೂಡ. ನಮ್ಮರಾಜ್ಯವನ್ನೇ ತೆಗೆದುಕೊಂಡರೆ‌ ಅಂದು ನೂರಾರು ಸಸಿಗಳನ್ನು ರಾಜ್ಯದಾದ್ಯಂತ ನೆಡಲಾಗುತ್ತದೆ.ಕಳೆದ ನಾಲ್ಕು ದಶಕಗಳ ಅವಧಿಯನ್ನು ಮಾತ್ರ ಪರಿಗಣಿಸಿದರೂ ಈಗಾಗಲೇ ಈ ಕಾರ್ಯಕ್ರಮದ‌ ಅಡಿಯಲ್ಲಿ ಕೆಲವಾರು ಲಕ್ಷ ಸಸಿಗಳನ್ನು ನೆಟ್ಟಿರಬಹುದು.ಈ ನಲವತ್ತು ವರ್ಷಗಳಲ್ಲಿ ವೃಕ್ಷದಟ್ಟಣೆ ಹೆಚ್ಚಿರಬೇಕಿತ್ತು .ಆದರೆ ನಗರಗಳು ಹಾಗಿರಲಿ, ಚಿಕ್ಕ ಪಟ್ಟಣಗಳ ಶಾಲಾ ಆವರಣಗಳಲ್ಲಿ ಕೂಡ ದೊಡ್ಡ ಮರಗಳು ಕಾಣ ಸಿಗುತ್ತಿಲ್ಲ. ಹಾಗಾದರೆ ಈ ನಲವತ್ತು ವರ್ಷಗಳಲ್ಲಿ ರಾಜ್ಯದಾದ್ಯಂತ‌ ಎಲ್ಲ ಶಾಲೆಗಳು, ಕಛೇರಿಗಳು, ರಸ್ತೆ ಬದಿಗಳು, ಹಳ್ಳಿಗಳು, ಹೆದ್ದಾರಿ ಬದಿಗಳಲ್ಲಿ ನೆಟ್ಟ ಸಸಿಗಳೆಲ್ಲ ಎಲ್ಲಿಕಾಣೆಯಾದವು ?ಎಷ್ಟೋ ಲಕ್ಷ ಎಕರೆಗಳಲ್ಲಿ ಬೆಳೆದು ನಳನಳಿಸಬೇಕೆದ್ದ ಕಾಡು ಬಟಾಬಯಲಾದದ್ದು ಹೇಗೆ?ಪ್ರತಿವರ್ಷ ಸಸಿ ನೆಡುವಾಗ ಇದ್ದ‌ ಉತ್ಸಾಹ ಅವುಗಳಿಗೆ ನೀರುಣಿಸುವಾಗ‌ ಇತ್ತೇ? ಕಳೆದ ಎರಡು ದಶಕಗಳಿಂದಂತೂ ಬರದ ಛಾಯೆ ಕರ್ನಾಟಕವನ್ನು ದಟ್ಟವಾಗಿ ಆಕ್ರಮಿಸಿಕೊಂಡಿದೆ. ಹಾಗಿರುವಾಗ ನೆಟ್ಟ ಸಸಿಗಳಿಗೆ ಸರಿಯಾಗಿ ನೀರುಣಿಸಲು ಸಾಧ್ಯವಾಯಿತೆ? ಇಂತಹ ಹತ್ತಾರು ಪ್ರಶ್ನೆಗಳನ್ನು ಎದುರು ಮಾಡಿಕೊಂಡು ಮುಂದಿನ ವರ್ಷಗಳ ವೃಕ್ಷ‌ ಆಂದೋಲನಕ್ಕೆ ನಾವು ಸಜ್ಜಾಗಬೇಕಿದೆ.

ಕಾಡಿನ ಬಗ್ಗೆ ನಾವು ಇಂದು ಮಾತಾಡುವಾಗ ‘ಒಂದಾಂನೊಂದು ಕಾಲದಲ್ಲಿ…’ ಎಂದು ಪ್ರಾರಂಭಿಸಬೇಕೇನೊ !ಹಿಂದೊಂದು ಕಾಲದಲ್ಲಿ ವನಭೋಜನಗಳು ಸಾಮಾನ್ಯವಾಗಿದ್ದವು. ಒಂದು‌ ಊರಿನ ಜನರೆಲ್ಲ ನಿರ್ದಿಷ್ಟ ದಿನದಂದು‌ ಊರಿನ ಹೊರಗೆ ಜನವಸತಿಯಿಂದ ದೂರವಾಗಿರುವ ಕಾಡಿನ ನಡುವೆ ‌ಅಡುಗೆ ಮಾಡಿ ಊಟ ಮಾಡುತ್ತಿದ್ದರು.ಇದು‌ ಊರ ಸೌಹಾರ್ದತೆಯ ಜೊತೆಗೆ ಗಿಡ-ಮರಗಳಿಗೆ ಅವರು ನೀಡುವ ಗೌರವವಾಗಿತ್ತು. ದಿನನಿತ್ಯದ ಜಂಜಾಟದಿಂದ ಬಿಡುಗಡೆಗೊಂಡು ನಿಸರ್ಗದ ನಡುವೆ ‌ಅದನ್ನು‌ ಆಸ್ವಾದಿಸುತ್ತ‌ ಅದರ ಬಗ್ಗೆ ಪ್ರೀತಿಯನ್ನು, ಕಾಳಜಿಯನ್ನು ಬೆಳೆಸಿಕೊಳ್ಳುವುದು ಈ ಊರಹಬ್ಬದ ‌ಉದ್ದೇಶವಾಗಿತ್ತು. ಬರುಬರುತ್ತ ಕಾಡಿಗೂ ನಾಡಿಗೂ ವ್ಯತ್ಯಾಸವೇ‌ ಇರದಂತಾದಾಗ‌ ಇಂತಹ ಊರಹಬ್ಬಗಳೂ ಕಡಿಮೆಯಾದವು. ಅದರೊಂದಿಗೆ ಕಾಡಿನ ಬಗ್ಗೆ ಜನರ ಪ್ರೀತ್ಯಾದರಗಳೂ ಕಡಿಮೆಯಾದವು. ತದನಂತರ ಜನರಲ್ಲಿ‌ ಅದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಊರಹಬ್ಬಗಳು ಸರ್ಕಾರಿ ಹಬ್ಬಗಳಾಗಿ ಮಾರ್ಪಟ್ಟವು. ಇದರ ಹಿಂದಿನ ಉದ್ದೇಶ ಒಳ್ಳೆಯದೇ. ಆದರೂ‌ ಅದರ‌ ಈಡೇರುವಿಕೆ ಫಲ ಕಾಣಲಿಲ್ಲ. ಇದಕ್ಕೆ‌ಉತ್ತಮ‌ ಉದಾಹರಣೆ ಈ ಮೇಲೆ ಹೇಳಿದಂತೆ ವನಮಹೋತ್ಸವ ನಡೆಯುತ್ತಿದ್ದರೂ ಹೆಚ್ಚಾಗದ ಮರ ಗಿಡಗಳು. ವನಮಹೋತ್ಸವದ ನಿಯಮಿತ ಅನುಷ್ಠಾನದ ನಡುವೆಯೂ ಹಳ್ಳಿ-ಪಟ್ಟಣಗಳಲ್ಲಿ ಶಾಲಾ ಆವರಣಗಳು ಆಟದ ಬಯಲಾದವು. ನಗರಗಳಲ್ಲಿ ಬಯಲುಗಳೂ ಕಟ್ಟಡಗಳಾದವು. ಇನ್ನು ಗಿಡ ನೆಡುವುದೆಲ್ಲಿ? ಇದು ವಾಸ್ತವ.

(ಸಾಂದರ್ಭಿಕ ಚಿತ್ರ, ಅಂತರ್ಜಾಲದಿಂದ)

ಕಳೆದ ಎರಡು ದಶಕಗಳಿಂದ ಹಳ್ಳಿ-ಪಟ್ಟಣಗಳಿಗಿಂತ ನಗರಗಳಲ್ಲಿ ಕಾಡಿನ, ಮರ ಗಿಡಗಳು ವ್ಯಾಮೋಹ ಹೆಚ್ಚಾಗಿದೆ. ನಗರದ ಜಂಜಾಟದಿಂದ ಬೇಸತ್ತು ವಾರಾಂತ್ಯಗಳನ್ನು ಕಳೆಯಲು ನಗರದ ಜನತೆ ಹಳ್ಳಿಗಳತ್ತ ಮುಖ ಮಾಡಿದ್ದರಿಂದ‌ ಇದನ್ನು ಲಾಭದಾಯಕ ವ್ಯಾಪಾರವಾಗಿ ಮಾಡಿಕೊಂಡ ಕೆಲ ಬುದ್ಧಿವಂತ ವ್ಯಾಪಾರಿಗಳು ಹಳ್ಳಿಗಳಲ್ಲಿ ಪ್ರವಾಸೋದ್ಯಮ‌ ಅಭಿವೃದ್ಧಿಗೆ ಮೊದಲಾದರು. ಹೋಂಸ್ಟೇಗಳನ್ನು ಮಾಡಿ ಸಾಕಷ್ಟು ಹಣ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ಸಣ್ಣ ಊರುಗಳಲ್ಲಿ ಮತ್ತೆ ಕಾಡಿನ ಮಹತ್ವ ‌ಅರಿವಿಗೆ ಬಂದರೆ ನಗರಗಳಲ್ಲಿ ಹೆಚ್ಚುತ್ತಿರುವ ತಾಪಮಾನ, ನೀರು, ವಿದ್ಯುತ್ ವ್ಯತ್ಯಯ ಮೊದಲಾದ ಮೂಲಭೂತ ಸೌಕರ್ಯಗಳ ಕೊರತೆ ನಗರಿಗರನ್ನು ಮರಗಿಡಗಳನ್ನು ಉಳಿಸಲು ಪ್ರೇರೇಪಿಸಿತು. ಶಹರಗಳ ಸುತ್ತ ಕೆಲ ರೆಸಾರ್ಟಗಳು ತಲೆ‌ಎತ್ತಿದವು. ಆದರೆ ಇವು ಅರಣ್ಯಾಭಿಮುಖವಾಗುವುದಕ್ಕಿಂತ ಲಾಭದಾಯಕ ವ್ಯಾಪಾರವಾಗಿದ್ದೇ ಹೆಚ್ಚು. ಆದರೂ ಕೆಲ ವ್ಯಕ್ತಿಗಳು, ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ‌ ಅರಣ್ಯವನ್ನು ಬೆಳೆಸುವಲ್ಲಿ ಆಸ್ಥೆ ವಹಿಸಿದರು.ಕೆಲವಾರು ಎಕರೆಗಳಲ್ಲಿ ಅನೇಕ ಜಾತಿಯ ಮರಗಳು ಒಂದೆಡೆ ಕಾಣುವಂತಾದವು.

ಕೆಲವರು‌ ಇನ್ನೂ‌ಒಂದು ಹೆಜ್ಜೆ ಮುಂದೆ ಹೋಗಿ ಹೀಗೆ ಬೆಳೆದು ನಿಂತ ಮರಗಳನ್ನು, ತಾವು ನೆಡುವ ಸಸಿಗಳನ್ನು ದತ್ತು ತೆಗೆದುಕೊಂಡು ಅವುಗಳ ಪೋಷಣೆಗೆ ತಾವೇ ಬಾಧ್ಯಸ್ಥರಾದರು.ತಮ್ಮ ಮಕ್ಕಳ ಹುಟ್ಟುಹಬ್ಬಗಳಿಗೆ, ವಿವಾಹದ ವಾರ್ಷಿಕೋತ್ಸವಕ್ಕೆ, ತಂದೆ ತಾಯಿಗಳ ನೆನಪಿಗೆ ಮೊದಲಾದತಮ್ಮಜೀವನದ ಮಹತ್ವದ ದಿನಗಳನ್ನು ಹೀಗೆ ಅರ್ಥಪೂರ್ಣವಾಗಿಸುವ ಸತ್ಸಂಪ್ರದಾಯವನ್ನು ಆರಂಭಿಸಿದರು.ಶಹರದ ಮಟ್ಟಿಗೆ‌ ಇದೊಂದು ‌ಆದರ್ಶವೇ ಸರಿ. ಒಟ್ಟಿನಲ್ಲಿ ಸ್ವಲ್ಪಕಾಡು ಈ ರೀತಿಯಲ್ಲಿ ಖಾಸಗಿಯಾಗಿ‌ ಅಭಿವೃದ್ಧಿಯಾದದ್ದೇ‌ ಇದರ ಹೆಗ್ಗಳಿಕೆ. ಹಣವಂತ ಯುವಕರು ಹೊರವಲಯದ ಕೃಷಿ ಜಮೀನುಗಳನ್ನು ಪಡೆದು ತೋಟ ಮಾಡಿಕೊಂಡರು. ಬೆಂಗಳೂರಿನ ಬನ್ನೇರುಘಟ್ಟಕ್ಕೆ ಹೊಂದಿಕೊಂಡಂತಿರುವ ಹಳ್ಳಿಯ ಆಶ್ರಮದ ಸ್ವಾಮೀಜಿಯೊಬ್ಬರು ಸ್ವಪ್ರಯತ್ನದಿಂದು ಸುಮಾರು 30 ಎಕರೆಕಾಡನ್ನು ಬೆಳೆಸಿದರು. ಇಂದಿಗೂ ಅಲ್ಲಿಗೆ ವಿದ್ಯಾರ್ಥಿಗಳು, ಆಸಕ್ತ ಯುವ ಉದ್ಯೋಗಿಗಳು ತಂಡತಂಡವಾಗಿ ಹೋಗಿ ಗಿಡ ನೆಟ್ಟು ಬರುತ್ತಾರೆ.ಈ ವಿವರವನ್ನು ಹೇಳುವ ಉದ್ದೇಶ ಇಷ್ಟೆ. ಖಾಸಗಿಯಾಗಿ ಆಸಕ್ತಿ ವಹಿಸಿ ಬೆಳೆಸಿದ ಕಾಡುಗಳಂತೆ ಉಳಿದ ಯೋಜನೆಗಳು ಯಶಸ್ವಿಯಾಗಲಿಲ್ಲ. ಸಸಿಗಳನ್ನು ನೆಡಲು ಮೊದಲಿಗೆ ಸೂಕ್ತ ಜಾಗವನ್ನು ಆರಿಸಿಕೊಳ್ಳಬೇಕಾಗುತ್ತದೆ. ಬೆಂಗಳೂರಿನ ಮೊಟುದ್ದರಸ್ತೆಯ ಬದಿಯಲ್ಲಿ ಸಸಿ ನೆಟ್ಟರೆ‌ಅದು ನೆಲಕಚ್ಚಿ ಬೆಳೆಯಲು ಜಾಗವಾದರೂ ಬೇಕಲ್ಲ !ಆದ್ದರಿಂದ‌ಊರ ಮಧ್ಯೆಯೇಗಿಡನೆಟ್ಟು ಪ್ರದರ್ಶಿಸಬೇಕು ಎಂಬ ಧೋರಣೆಗೆ ಬದಲಾಗಿ ಮುಂದಿನ 20-30 ವರ್ಷಗಳಲ್ಲಾದರೂ ಹೊರವಲಯದಟ್ಟ ಹಸಿರಾಗಿ ಕಾಣುವಂತ ಕಾಡನ್ನು ಬೆಳೆಸುವ ಸಂಕಲ್ಪ ಬೇಕಾಗಿದೆ. ನೂರಾರು ಕೋಟಿ ಖರ್ಚು ಮಾಡಿ ಸಸಿ ನೆಟ್ಟು, ಅದು ಮಾಯವಾದ ನಂತರ, ಐಷಾರಾಮಿ ಹವಾನಿಯಂತ್ರಿತ ಕಟ್ಟಡಗಳಲ್ಲಿ ಕಾಡನ್ನು ಉಳಿಸಿ, ಬೆಳೆಸುವ, ಪರಿಸರರಕ್ಷಿಸುವ ಬಗ್ಗೆ ವಿಚಾರ ಸಂಕಿರಣಗಳನ್ನು ಮಾಡುವುದು, ಪ್ರತಿವರ್ಷ ಪ್ರಶಸ್ತಿಗಳನ್ನು ನೀಡುವುದಕ್ಕೆ ಅರಣ್ಯಪ್ರೀತಿ ಮೀಸಲಾಗದಿರಲಿ.

ಕಾಡನ್ನು ಬೆಳೆಸಬೇಕಾದ ಅನಿವಾರ್ಯತೆ ಈಗ ತುರ್ತಾಗಿದೆ.ಅದಕ್ಕಾಗಿ ಕೋಟಿ ಸಸಿಗಳನ್ನು ಬೇಕಾದರೂ ನೆಡೋಣ. ಆದರೆ ನೆಟ್ಟ ಸಸಿಗಳು ಎಲ್ಲವೂ ಕಾಣೆಯಾಗದೇ ಕೆಲವು ಲಕ್ಷಗಳಷ್ಟಾದರೂ ಗಿಡಗಳಾಗಿ ಮರಗಳಾಗಿ ಬದುಕಿ ಬಾಳುವಂತಾಗಲಿ ಎಂಬ ಹಾರೈಕೆ ಮಾತ್ರ ಹಸಿರಾಗಿರಲಿ.

-ನೂತನ ಎಮ್.ದೋಶೆಟ್ಟಿ, ಸಿದ್ಧಾಪುರ

6 Responses

 1. ಬಿ.ಆರ್.ನಾಗರತ್ನ says:

  ವಾಸ್ತವಿಕ ನೆಲೆಗಟ್ಟಿಗೆ ಕನ್ನಡಿ ಹಿಡಿದಂತೆ ಲೇಖನ ಅಭಿನಂದನೆಗಳು ಮೇಡಂ.

 2. ನೂತನ says:

  ಧನ್ಯವಾದಗಳು

 3. ನಯನ ಬಜಕೂಡ್ಲು says:

  ಪರಿಸರ ಕಾಳಜಿ ತುಂಬಿದ ಉತ್ತಮ ಬರಹ. ನೀವು ಇಲ್ಲಿ ವನಭೋಜನದ ಒಂದು ವಿಚಾರ ಪ್ರಸ್ಥಾಪಿಸಿದ್ದೀರಿ, ಈ ವನಭೋಜನ ಇವತ್ತಿಗೂ ನಮ್ಮ ಊರಲ್ಲಿ ಇದೆ. ಪ್ರತಿ ವರ್ಷ ಮೇ 24 ರಂದು ಊರಿನ ಜನರೆಲ್ಲಾ ಸೇರಿ ಪ್ರಕೃತಿ ಯ ಮಡಿಲಲ್ಲಿ( ಕಾನಾ ಅಂತ ಒಂದು ರಮ್ಯ ಮನೋಹರ ತಾಣ ವಿದೆ ಅಲ್ಲಿ ) ದೇವರನ್ನು ಆರಾಧಿಸಿ ಮದ್ಯಾಹ್ನ ಎಲ್ಲರೂ ಜೊತೆಗೆ ಊಟ ಮಾಡುತ್ತೇವೆ. ಈ ವರ್ಷ ಮಾತ್ರ ಕೊರೋನಾ ದಿಂದಾಗಿ ವನ ಭೋಜನ ನಡೆಯಲಿಲ್ಲ

 4. ASHA nooji says:

  ಚಂದದ ಬರಹ

 5. Savithri bhat says:

  ಚೆನ್ನಾಗಿ ನಿರೂಪಿಸಿದ್ದೀರಿ

 6. ಶಂಕರಿ ಶರ್ಮ says:

  ವೃಕ್ಷ ನಿರ್ಮೂಲನದಿಂದ ಪ್ರಕೃತಿ ಮೇಲೆ ಯಾವ ರೀತಿಯಲ್ಲಿ ಅನಾಚಾರವಾಗುತ್ತಿದೆ..ಮನುಷ್ಯ ಅದರಿಂದ ಅನುಭವಿಸುತ್ತಿರುವ ಪ್ರಾಕೃತಿಕ ವಿಕೋಪದ ಸಂಕಷ್ಟಗಳು ಕಣ್ಣ ಮುಂದಿದ್ದರೂ ಬುದ್ಧಿ ಬಂದಿಲ್ಲ. ಇನ್ನಾದರೂ
  ಎಚ್ಚೆತ್ತುಕೊಳ್ಳದಿದ್ದರೆ ಅನಾಹುತಗಳ ಸರಮಾಲೆಗಳು ನಿಶ್ಚಿತ.. ಸವಿವರ, ಸಕಾಲಿಕ ಬರಹ..ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: