ಲಾಕ್ ಡೌನ್ ದಿನಗಳು.
ಕೊರೋನ ಪ್ರಯುಕ್ತ ಲಾಕ್ ಡೌನ್ ಆದಾಗ ನೆಮ್ಮದಿಯಿಂದ ಉಸಿರು ಬಿಟ್ಟಿದ್ದು ನಿಜಾ.ಜೀವ ಕೈಯಲ್ಲಿ ಇಟ್ಟುಕೊಂಡು ಕರ್ತವ್ಯಕ್ಕೆ ಹೋಗುವಂತಿಲ್ಲ ಅನ್ನೋ ಬಹು ದೊಡ್ಡ ಸಮಾಧಾನವಾಗಿ ನೆಮ್ಮದಿಯಾಯಿತು. ಬೆಳಗ್ಗೆ ಗಡಬಡಿಸಿ ಏಳುವಂತೆ ಇಲ್ಲ, ಒಂದೇ ಉಸಿರಿನಲ್ಲಿ ಮನೆ ಕೆಲಸ ಮಾಡಿ,ಅಡುಗೆ ತಿಂಡಿ ತಯಾರಿಸಿ,ಗಬಗಬನೆ ಒಂದಿಷ್ಟು ತಿಂದು ಓಡುವಂತೆ ಇಲ್ಲ, ಬಸ್ಸಿಗಾಗಿ ಕಾಯುವ ಒತ್ತಡವಿಲ್ಲ, ಸಂಜೆ ಸೋತು ಸೊಪ್ಪಾಗಿ ಬಂದು ಆ ಸುಸ್ತಿನಲ್ಲಿಯೂ ರಾತ್ರಿ ಅಡುಗೆ ಮಾಡುವಂತಿಲ್ಲ, ಇಷ್ಟ ಬಂದಾಗ ಏಳಬಹುದು, ಅಡುಗೆ ತಿಂಡಿ ನಿಧಾನವಾದರೂ ಕೇಳುವವರಿಲ್ಲ, ಓದಲು, ಬರೆಯಲು ಬೇಕಾದಷ್ಟು ಸಮಯವಿದೆ ಅಂತ ಕೊರೋನದ ಆತಂಕದ ನಡುವೆಯೂ ಖುಷಿಯಾಗಿದ್ದು ಸುಳ್ಳಲ್ಲ.
ರಜೆ ನಮ್ಮ ಇಲಾಖೆಯಲ್ಲಿ ಹೊಸದೇನೂ ಅಲ್ಲ. ಪ್ರತಿವರ್ಷ ಎರಡೆರಡು ಸಲ ರಜೆ ಸಿಗುತ್ತಿದ್ದರೂ, ಇಂತಹ ಹೊರಗಡಿ ಇಡದ ಈ ರಜೆ ಹೊಸದು ನಮಗೆ.ಅಂಗಡಿ, ಮಾರುಕಟ್ಟೆ, ಆಸ್ಪತ್ರೆ ಇವ್ವಾವುದು ಇರುವುದಿಲ್ಲ ಎಂದು ಗೊತ್ತಾದ ಕೂಡಲೇ ಮನೆಗೆ ಬೇಕಾದ ಸಾಮಾನುಗಳು, ತರಕಾರಿಗಳು, ತುರ್ತು ಸಂದರ್ಭದಲ್ಲಿ ಬೇಕಾಗಬಹುದಾದ ಕೆಲವು ಔಷಧಿಗಳು ಮಾತ್ರೆಗಳು ಹೀಗೆ ಏನೇನೋ ಶೇಖರಿಸಿ ಕೊಂಡು ಲಾಕ್ ಡೌನ್ ಗೆ ಯುದ್ದೋಪಾದಿಯಲ್ಲಿ ಸಿದ್ಧವಾದೆವು.
ಬೆಳಿಗ್ಗೆ ಆರಾಮವಾಗಿ ತಡವಾಗಿ ಏಳೋಣ ಅಂತ ಎಚ್ಚರವಿದ್ದರೂ ಮುಸುಕಿಕ್ಕಿ ಹಾಸಿಗೆ ಮೇಲೆ ಮಲಗಿಯೇ ಕೊಂಡಿದ್ದೆ. ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ನಿಧಾನವಾಗಿ ಏಳುವ ಸೂರ್ಯ ವಂಶಿಗಳು ನಾನು ಮತ್ತು ನನ್ನ ಮಗಳು.ನಮ್ಮ ಸ್ವಭಾವಕ್ಕೆ ವಿರುದ್ಧ ಸ್ವಭಾವ ಇರುವ , ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಇರುವ ಪತಿ ರಾಯರು ಆರು ಗಂಟೆಗೆ ಎದ್ದು ಬಿಡುತ್ತಾರೆ. ಬೇಗ ಎದ್ದಿರುವ ಯಜಮಾನರು ವಾಕಿಂಗ್, ಪೇಪರ್ ರೀಡಿಂಗ್, ಕಾಫಿ ಡ್ರಿಂಕಿಂಗ್ ಈ ಎಲ್ಲಾ ಮುಗಿಸಿ ಈಟೀಂಗಿಗೊಸ್ಕರ ಹೊಂಚು ಹಾಕುತ್ತಿರುವುದು ಅರಿವಿಗೆ ಬರುತ್ತಿತ್ತು.ಇನ್ನೂ ಮಲಗಿಯೇ ಇದ್ದ ನನ್ನನ್ನು ಏಳಿಸಲು ಮನಸ್ಸು ಬಾರದೆ, ಅರ್ಧಗಂಟೆಗೊಮ್ಮೆ ರೂಮಿಗೆ ಬಂದು, ಆರು ಗಂಟೆ, ಆರುವರೆ ಆಯ್ತು, ಏಳು ಗಂಟೆ ಈಗ ಅಂತ ಬಹು ಮೆಲ್ಲಗೆ ತಮಗೆ ಹೇಳಿಕೊಳ್ಳುತ್ತಿರುವಂತೆ ಹೇಳುತ್ತಾ ಆಚೆ ಈಚೆ ಓಡಾಡುತ್ತಿರುವುದನ್ನು ನೋಡಲಾರದೆ ಏಳಲೇ ಬೇಕಾಯಿತು. ಪಾಪ ರಾತ್ರಿ ಬೇಗ ಊಟ ಮುಗಿಸಿ ಮಲಗಿರುತ್ತಾರೆ, ಬೆಳಿಗ್ಗೆ ಅವರಿಗೆ ಬೇಗ ತಿಂಡಿ ಆಗಲೇ ಬೇಕು. ನಿಧಾನವಾಗಿ ಏಳೋಣ ಅಂತ ಅಂದುಕೊಂಡಿದ್ದ ನನ್ನ ನಿರ್ಧಾರ ಬದಲಿಸಿ ಬೇಗ ಏಳುವಂತೆ ಆಯಿತು. ಹಾಗಾಗಿ ಎದ್ದು ಮೊದಲು ಅವರಿಗೆ ತಿಂಡಿ ಮಾಡಿಕೊಟ್ಟು, ನಂತರ ಮಿಕ್ಕ ಕೆಲಸ ಅಂದುಕೊಂಡು ಕೆಲಸ ಮಾಡಿ ಕೊಳ್ಳುತ್ತಾ ಇರುವಾಗಲೇ, ಅಮ್ಮ ನನಗೂ ತಿಂಡಿ ಅಂತ ಮಗಳಿಂದ ಬೇಡಿಕೆ. ಸರಿ ಅವಳಿಗೆ ತಿಂಡಿ ಕೊಟ್ಟು ನಾನೂ ತಿನ್ನುವಾಗ ಮಾಮೂಲಿಯ ಸಮಯವೇ ಆಗಿತ್ತು. ಹೀಗೆ ರಜೆಯ ಮಜಾ ಸಿಗದೆ, ಮನೆಯಲ್ಲಿಯೇ ಇದ್ದರೂ ಪ್ರತಿನಿತ್ಯ ಆಗುತ್ತಿದ್ದಂತೆಯೇ ಅದೇ ಸಮಯಕ್ಕೆ ಊಟ ತಿಂಡಿ ಆಗುತ್ತಿದೆ.ಮೊದಲಾದರೆ ಬೆಳಿಗ್ಗೆ ಮತ್ತು ರಾತ್ರಿ ಮಾತ್ರ ಸೇರಿ ಎರಡು ಹೊತ್ತು ಅಡುಗೆ ಮಾಡುತ್ತಿದ್ದರೆ , ಈಗ ಮಧ್ಯಾಹ್ನವೂ ಸೇರಿ ಮೂರು ಹೊತ್ತು ಅಡುಗೆ.
ನಾನು ಮನೆಯಲ್ಲಿಯೇ ಇದ್ದೀನಿ ಅಂತ ಮಗಳಿಂದ ಒಂದೊಂದೇ ತಿಂಡಿ ತಿನಿಸಿನ ಬೇಡಿಕೆ. ಅದಕ್ಕೆ ಪತಿರಾಯರಿಂದಲೂ ಒತ್ತಾಸೆ. ನನಗೂ ಅಡುಗೆ ಮಾಡುವ ಹುಮ್ಮಸ್ಸು. ಹಾಗಾಗಿ ಈ ಲಾಕ್ ಡೌನ್ ಸಮಯದಲ್ಲಿ ನಾನು ಹೆಚ್ಚು ಕಡಿಮೆ ನಾನು ಅಡುಗೆ ಮನೆಯಲ್ಲಿ ಬಂಧಿ.ನಡುವೆ ಒಂದಿಷ್ಟು ಓದು ಮತ್ತು ಬರಹ.ಇನ್ನು ವಾಟ್ಸ್ ಆ್ಯಪ್, ಫೇಸ್ಬುಕ್, ರೇಡಿಯೋ ಕೇಳುವಿಕೆ ಇದ್ದೆ ಇತ್ತು.ಸಂಜೆ ಹಳೆಯ ಹಾಡು ಕೇಳುತ್ತಾ ಸಿಟ್ ಔಟ್ ನಲ್ಲಿಯೇ ಅರ್ಧ, ಮುಕ್ಕಾಲು ಗಂಟೆ ವಾಕಿಂಗ್.ರಾತ್ರಿಗೆ ಪ್ರತಿನಿತ್ಯ ರೊಟ್ಟಿ ಯ ಸಮಾರಾಧನೆ ಇರಲೇ ಬೇಕು ಮಲೆನಾಡಿನ ಪತಿ ಮಹಾಶಯರಿಗೆ.ಇನ್ನು ರಜೆ ಅಂತ ಅನ್ನಿಸುವುದು ಹೇಗೆ.ಹೊರಗಿನ ಕೆಲಸಕ್ಕೆ ರಜೆ ಅಷ್ಟೇ, ಮನೆಕೆಲಸಕ್ಕೆ ಓವರ್ ಟೈಂ ಕೆಲಸ. ಆ ಕೆಲಸ ಮಾಡುವುದರಲ್ಲೂ ಒಂದು ಸಾರ್ಥಕ ಭಾವ.ಅದೆಷ್ಟೋ ವರ್ಷಗಳ ನಂತರ ಸಂಪೂರ್ಣ ಗೃಹಿಣಿ ಪಾತ್ರ. ಮನೆಯಲ್ಲಿಯೇ ಇರುವುದರಿಂದ ದಿನಕ್ಕೊಂದು ಬಗೆಯ ತಿಂಡಿ ತಯಾರಿಸಿ ಅದರ ಫೋಟೋ ತೆಗೆದು ಸ್ಟೇಟಸ್, ಫೇಸ್ ಬುಕ್ ಗೆ ಹಾಕುವುದು,ನಂತರ ಅಪಾರ ಮೆಚ್ಚುಗೆ ಬಂದಾಗ ಖುಷಿಯೊ ಖುಷಿ. ಮನೆಯಲ್ಲಿ ಇರುವ ನಾಲ್ಕಾರು ಕುಂಡಗಳಲ್ಲಿ ಹಾಕಿರುವ ಗಿಡಗಳ ಕ್ಲೋಸಪ್ ಫೋಟೋ ತೆಗೆದು ಕೈತೋಟ ಗ್ರೂಪ್ ಗೆ ಹಾಕಿ,ನೂರಾರು ಕಾಮೆಂಟ್ಸ್,ಲೈಕುಗಳ ನೋಡಿ ಹಿಗ್ಗೋ ಹಿಗ್ಗು.
ಹಳೇ ಫೋಟೋ ಆಲ್ಬಂ ತೆಗೆದು ಬಾಲ್ಯದಲ್ಲಿ ತೆಗಿಸಿದ ಫೋಟೋಗಳು,ಕಾಲೇಜು ದಿನಗಳಲ್ಲಿ ತೆಗೆಸಿದ ಫೋಟೋಗಳ ನೋಡಿ ಸಂಭ್ರಮಿಸಿ, ಅವುಗಳ ಸವಿನೆನಪುಗಳು ಮರುಕಳಿಸಿ ಆ ದಿನಗಳಿಗೆ ಹೋಗಿ ಗಳಿಗೆಗಳು ಮೈಮರೆತು ಖುಷಿಪಟ್ಟಿದ್ದೂ ಆಯಿತು.ನಿಶ್ಚಿತಾರ್ಥದ, ಮದುವೆಯ ಫೋಟೊ ನೋಡಿ ಆಗ ಹೇಗಿದ್ದರು,ಈಗ ಹೇಗಾಗಿದ್ದಾರೆ ಅಂತ ಹೋಲಿಸಿ ನಕ್ಕಿದ್ದೇ ನಕ್ಕಿದ್ದು. ಆಗ ಇದ್ದು ಈಗ ನಮ್ಮ ಬಿಟ್ಟು ಅಗಲಿ ಹೋದವರನ್ನೂ, ಅವರು ಸದ್ಗುಣಗಳನ್ನು ನೆನೆಸಿಕೊಂಡು ಸಂಕಟ ಪಟ್ಟುಕೊಂಡು ಆಲ್ಬಂ ಮುಚ್ಚಿ ಬಿಡುವಂತಾಯಿತು.
ನನ್ನ ಇಡೀ ಬದುಕಿನಲ್ಲಿ ಹೀಗೆ ತಿಂಗಳು ಗಟ್ಟಲೆ ಮನೆಯಿಂದ ಹೊರಗೆ ಹೋಗದೆ ಇರುವುದು ಇದೇ ಮೊದಲ ಬಾರಿ.ಹೀಗೆ ಇರಲು ಸಾಧ್ಯವೇ ಅಂತ ಹಿಂದೆ ಯಾರಾದರೂ ಹೇಳಿದ್ದರೆ ನಾನು ಖಂಡಿತ ಸಾಧ್ಯವೇ ಇಲ್ಲವೆಂದೇ ಖಡಾಖಂಡಿತವಾಗಿ ಹೇಳಿಬಿಡುತ್ತಿದ್ದೆ. ಹೊರಗೆ ಹೋಗದೆ ತಿಂಗಳು ಗಟ್ಟಲೆ ಮನೆಯಲ್ಲಿ ಇರಲು ಸಾಧ್ಯವೇ. ಶಾಪಿಂಗ್, ಸಿನಿಮಾ, ಹೋಟೆಲ್, ಪ್ರವಾಸ, ಕಾರ್ಯಕ್ರಮಗಳು, ಮದುವೆ, ಗೃಹಪ್ರವೇಶ,ನಾಮಕರಣ ಮುಂತಾದ ಸಮಾರಂಭಗಳಿಗೆ ಹಾಜರಾಗದೆ ಇರಲು ಸಾಧ್ಯವೇ, ಬಂಧು ಬಳಗ, ಸ್ನೇಹಿತರ, ಆತ್ಮೀಯರ ಮನೆಗಳಿಗೆ ಹೋಗದೆ, ಅವರು ನಮ್ಮ ಮನೆಗೆ ಬಾರದೆ ಇರಲು ಸಾಧ್ಯವೇ, ಖಂಡಿತ ಅಸಾಧ್ಯ ಅನ್ನೋ ಭ್ರಮೆಯಲ್ಲಿ ಇದ್ದದ್ದು ನಿಜಾ. ಆದರೆ ಸಂದರ್ಭ, ಸನ್ನಿವೇಶ, ಏನೆಲ್ಲವನ್ನೂ ಸಾಧ್ಯವಾಗಿಸಿದೆ. ಮನೆಯಲ್ಲಿಯೆ ಇಷ್ಟೋಂದು ದಿನಗಳಿದ್ದರೂ ಮನಸ್ಸು ಅದಕ್ಕೂ ಒಗ್ಗಿ ಹೋಗಿದೆ. ಅದು ಬೇಕು ಇದು ಬೇಕು ಅನ್ನುತ್ತಿದ್ದವರೆಲ್ಲರಿಗೂ ಈಗ ಏನು ಇದೆಯೋ ಅದೆಷ್ಟಕೆ ಹೊಂದಿಕೊಳ್ಳುವ ಹೊಂದಾಣಿಕೆ ಬದುಕು ಅನಿವಾರ್ಯವಾಗಿದೆ. ಇದೇ ಅಲ್ಲವೇ ಬದುಕು?
ಇಂತಹ ಬದುಕನ್ನೂ ಊಹಿಸಿಯೇ ವಿಶ್ವ ದಾರ್ಶನಿಕ ನಮ್ಮ ಡಿವಿಜಿಯವರಿಂದ ಈ ಮಂಕುತಿಮ್ಮನ ಕಗ್ಗ ಹುಟ್ಟಿರಬಹುದೆ?
ನಿನ್ನ ಹೆಣವನು ನೀನೆ ಹೊತ್ತು ಸಾಗಿಸಬೇಕೋ
ಅಣ್ಣ ಬಾ ತಮ್ಮ ಬಾ ಎಂದಳುವುದೇಕೋ?
ನಿನ್ನೊಡಲೆ ಚಿತೆ ಜಗದ ತಂಟೆಗಳೆ ಸವುದೆಯುರಿ
ಮಣ್ಣೆ ತರ್ಪಣ ನಿನಗೆ – ಮಂಕುತಿಮ್ಮ
-ಎನ್ . ಶೈಲಜಾ ಹಾಸನ
ಲವಲವಿಕೆಯ ಬರಹ. ಚೆನ್ನಾಗಿದೆ.
ಧನ್ಯವಾದಗಳು ಮೇಡಂ
super
ಧನ್ಯವಾದಗಳು
ಸುಂದರ ಬರಹ ಮೇಡಮ್..
ಧನ್ಯವಾದಗಳು
ಚಂದದ ಲೇಖನ. ಎಂದಿಗೆ ಈ ಪರಿಸ್ಥಿತಿ ಬದಲಾಗುವುದೋ ಎಂಬ ನಿರೀಕ್ಷೆಯಲ್ಲಿ
ಧನ್ಯವಾದಗಳು
Super madam. ಈ ಲಾಕ್ ಡೌನ್ ಕಲಿಸಿದ ಪಾಠ ಗಳು ಒಂದೆರಡಲ್ಲ. ನಿಮಗಾದ ಅನುಭವಗಳನ್ನು ಬಹಳ ಚೆನ್ನಾಗಿ ಬರ್ದಿದ್ದೀರಿ.
ಧನ್ಯವಾದಗಳು