‘ಟಿ‌ಎಲ್‌ಆರ್’ ಎಂಬ ಕ್ಲಾಸಿಕ್ ಕೆಮರಾ…

Share Button

 

 

‘ಟಿ‌ಎಲ್‌ಆರ್’ ಎಂದರೆ ಈಗಿನ ಫೇಸ್‌ಬುಕ್ ಜನರೇಶನ್ ಜನರು ಸ್ವಲ್ಪ ತಲೆಕೆಡಿಸಿಕೊಳ್ಳಬೇಕಾಗಬಹುದು. ಆದರೆ ಕೆಲವೇ ವರ್ಷಗಳ ಹಿಂದೆ ಛಾಯಾಗ್ರಹಣ ಮಾಡುತ್ತಿದ್ದವರಿಗಂತೂ ಕಿವಿ ನಿಮಿರುತ್ತದೆ. ಹೌದು! ಟಿ‌ಎಲ್‌ಆರ್ ಕೆಮರಾಗಳ ಆಕರ್ಷಣೆಯೇ ಅಂಥದ್ದು!

ಈಗಿನ ಫೇಸ್‌ಬುಕ್ ಯುಗದಲ್ಲಿ ಸ್ವಲ್ಪ ಒಳ್ಳೆಯ ಸಂಬಳ ಬರುವಂತಹ ನೌಕರಿ ಹಿಡಿದಾತ ತನಗೊಂದು ಉತ್ತಮ ಕೆಮರಾ ಬೇಕು ಎಂಬುದನ್ನೇ ಅಪೇಕ್ಷಿಸುತ್ತಾನೆ. ಫೇಸ್‌ಬುಕ್‌ನಲ್ಲಿ ಸಲಹೆ ಕೊಡಲು ನನ್ನಂತಹ ಗೆಳೆಯರೂ ಇರುತ್ತಾರೆ. ಹಾಗಾಗಿ ಕಡಿಮೆ ಬೆಲೆಗೆ ಸಿಗುವ ಕಾಂಪ್ಯಾಕ್ಟ್ ಅಥವಾ ಪಾಯಿಂಟ್ & ಶೂಟ್ ಕೆಮರಾ ಇಂಥವರಿಗೆ ಬೇಕಾಗುವುದಿಲ್ಲ. `ಡಿ‌ಎಸ್‌ಎಲ್‌ಆರ್ ಕೆಮರಾ ತಗೊಳ್ಳೋ… ಚೆನ್ನಾಗಿರುತ್ತೆ…’ ಅಂತ ಗೆಳೆಯರ ಸಲಹೆ ಬಂದಾಕ್ಷಣ ಅದೇ ತಾನೇ ನೌಕರಿಗೆ ಸೇರಿದ ಹುಮ್ಮಸ್ಸಿನಲ್ಲಿ ಯಾವ ಗ್ಯಾಜೆಟ್ ಶಾಪಿಂಗ್ ಮಾಡಬೇಕೆಂಬುದನ್ನು ಯೋಚಿಸುತ್ತಾ `ಹಾಂ, ಹೌದು, ನನಗೆ ಡಿ‌ಎಸ್‌ಎಲ್‌ಆರ್ ಕೆಮರಾನೇ ಸರಿ…’ ಅಂತ ಡಿಸೈಡ್ ಮಾಡಿಕೊಂಡುಬಿಡುತ್ತಾರೆ. ಡಿ‌ಎಸ್‌ಎಲ್‌ಆರ್ ಕೆಮರಾ ಬರುವುದಕ್ಕಿಂತ ಅದೆಷ್ಟೋ ವರ್ಷಗಳ ಹಿಂದೆ ಬಂದ ಕ್ಲಾಸಿಕ್ ಅಂತ ಅನಿಸಿಕೊಂಡ ಟಿ‌ಎಲ್‌ಆರ್ ಕೆಮರಾ ಬಗ್ಗೆ ಗೊತ್ತೇ?

ಟಿ‌ಎಲ್‌ಆರ್ ಹೆಸರು ಎಸ್‌ಎಲ್‌ಆರ್ ಥರಾನೇ ಇದೆಯಲ್ಲವೇ? ಹೌದು, ಅದು ಸಿಂಗಲ್ ಲೆನ್ಸ್ ರಿಫ್ಲೆಕ್ಸ್, ಇದು ಟ್ವಿನ್ ಲೆನ್ಸ್ ರಿಫ್ಲೆಕ್ಸ್ – ಅಷ್ಟೇ ವ್ಯತ್ಯಾಸ. ಇದು ಈಗ ನಾವು ಬಳಸುವ ಡಿ‌ಎಸ್‌ಎಲ್‌ಆರ್ ಕೆಮರಾದ ಮೊದಲ ರೂಪ ಎನ್ನಬಹುದು. ಡಿ‌ಎಸ್‌ಎಲ್‌ಆರ್ ಬಳಸುವ ಕೆಲವರಾದರೂ ಫಿಲ್ಮ್ ಹಾಕಿ ಚಿತ್ರ ತೆಗೆಯುತ್ತಿದ್ದ ಎಸ್‌ಎಲ್‌ಆರ್ ಕೆಮರಾ ನೋಡಿರುವಿರಿ. ಅದರಲ್ಲಿ ಬಳಸುತ್ತಿದ್ದ ಫಿಲ್ಮ್ 35  ಎಂ.ಎಂ. ನದ್ದು. ಹಾಗಿದ್ದರೆ ಟಿ‌ಎಲ್‌ಆರ್?

ಮೊದಲೇ ಹೇಳಿದಂತೆ ಟಿ‌ಎಲ್‌ಆರ್ ಅಂದರೆ ಟ್ವಿನ್ ಲೆನ್ಸ್ ರಿಫ್ಲೆಕ್ಸ್ ಕೆಮರಾ ಎಂಬುದರ ಹೃಸ್ವರೂಪ. ಇದರಲ್ಲಿ ಎರಡು ಲೆನ್ಸ್ ಅಥವಾ ಮಸೂರಗಳು. ಮೇಲೊಂದು, ಕೆಳಗೊಂದು. ಮೇಲಿನ ಲೆನ್ಸ್‌ನ ಮೇಲ್ಭಾಗವನ್ನು ಒಂದು ಸಣ್ಣ ಮುಚ್ಚಳ ಮುಚ್ಚಿರುತ್ತದೆ. ಅದನ್ನು ಮೆಲ್ಲಗೆ ತೆರೆದು ನಮಗೆ ಬೇಕಾದ ದೃಶ್ಯವನ್ನು ಕಂಪೋಸ್ ಮಾಡಬಹುದು. ಓಹೋ, ಗೊತ್ತಾಯಿತು ಬಿಡಿ. ಹಳೆಯ ಕಾಲದ ಸಿನಿಮಾಗಳಲ್ಲಿ ಇದೇ ರೀತಿಯ ಕೆಮರಾ ಬಹಳಷ್ಟು ಸಲ ನೋಡಿದ್ದೇವೆ ಅಂದಿರಾ? ಹೌದು. ಆ ಕಾಲದಲ್ಲಿ ಇದೇ ಮಾದರಿ ಬಹಳ ಜನಪ್ರಿಯವಾಗಿತ್ತು. `ಸಾಗರ ಸಂಗಮಂ’ ತೆಲುಗು ಚಿತ್ರದಲ್ಲಿ ಜಯಪ್ರದಾ ಕೈಯಲ್ಲಿದ್ದದ್ದೂ ಇದೇ ಕೆಮರಾ. ಇವು ಮುಂದೆ 35 ಎಂ. ಎಂ.ನ ಮಾದರಿಗಳು ಬಂದೊಡನೆ ನಿಧಾನವಾಗಿ ಮರೆಯಾಗತೊಡಗಿದವು.

ಈ ಕೆಮರಾಗಳಲ್ಲಿ 2 `ಒಬ್ಜೆಕ್ಟಿವ್’ ಲೆನ್ಸ್ ಇರುತ್ತವೆ. ಇವೆರಡರದ್ದೂ `ನಾಭಿದೂರ’ ಅಥವಾ `ಫೋಕಲ್ ಲೆಂತ್’ ಒಂದೇ ಆಗಿರುತ್ತದೆ. ಇದರಲ್ಲಿ ಒಂದು ನಿಜವಾಗಿ ಛಾಯಾಚಿತ್ರವನ್ನು ತೆಗೆಯಲು ಬಳಸುವಂಥದ್ದು, ಇನ್ನೊಂದು `ವ್ಯೂಫೈಂಡರ್’ ಮೂಲಕ ದೃಶ್ಯವನ್ನು ನೋಡಲು ಹಾಗೂ ಕಂಪೋಸ್ ಮಾಡಲು ಬಳಸುವಂಥದ್ದು. ಈ ಕೆಮರಾವನ್ನು ನಮ್ಮ ಎದೆಯ ಮಟ್ಟಕ್ಕೆ ಸರಿಯಾಗಿ ಹಿಡಿದೇ ಚಿತ್ರ ತೆಗೆಯಬೇಕು. ಮೇಲ್ಭಾಗದ ಮಸೂರದ ಮೇಲೆ 45 ಡಿಗ್ರಿ ಕೋನದಲ್ಲಿ ಒಂದು ಕನ್ನಡಿ ಇರುತ್ತದೆ. ಅದರ ಮೂಲಕ ಎದುರಿನ ಬಿಂಬಗಳು ಒಂದು ಅರೆಪಾರದರ್ಶಕ ಪರದೆಯಲ್ಲಿ ಕಾಣಿಸಿಕೊಳ್ಳುತ್ತದೆ. ಫೋಕಸ್ ರಿಂಗ್‌ನ್ನು ತಿರುಗಿಸಿದಾಗ ಇವೆರಡೂ ಲೆನ್ಸ್‌ಗಳೂ ಒಟ್ಟಿಗೇ ಚಲಿಸಬೇಕಾಗುತ್ತದೆ. ಎದೆಯ ಮಟ್ಟದಲ್ಲಿ ಛಾಯಾಚಿತ್ರ ಸೆರೆಹಿಡಿಯುವುದರಿಂದಾಗಿ `ಕ್ಯಾಂಡಿಡ್’ ಮಾದರಿಯ ಚಿತ್ರಗಳು ಇದರಲ್ಲಿ ಸುಲಭವಾಗಿ ತೆಗೆಯಲು ಸಾಧ್ಯವಾಗುತ್ತಿತ್ತು.

ಹಿಂದಿನ ಮಾದರಿಗಳಿಗೆ ಹೋಲಿಸಿದಾಗ ಹಲವಾರು ಅನುಕೂಲತೆಗಳು ಈ ಮಾದರಿಯಲ್ಲಿದ್ದವು. ಹಾಗಾಗಿ ಟಿ‌ಎಲ್‌ಆರ್ ಕೆಮರಾಗಳು ಬಹುಬೇಗನೆ ಜನಪ್ರಿಯವಾಗುತ್ತ ಬಂದವು. ವಿವಿಧ ಕಂಪೆನಿಗಳು ಈ ಮಾದರಿಯ ಕೆಮರಾ ತಯಾರಿಸಿ ಬಿಡುಗಡೆಗೊಳಿಸಿದವು. ಇವುಗಳಲ್ಲಿ ರೋಲೀ, ಮಾಮಿಯಾ, ಮಿನೋಲ್ಟಾ, ಯಾಷಿಕಾ, ಒಲಿಂಪಸ್ ಮುಂತಾದವುಗಳು ಪ್ರಮುಖವಾದವುಗಳು. ಇವುಗಳಲ್ಲಿ ಹೆಚ್ಚಿನವೂ 120 ಫಿಲ್ಮ್ ರೋಲ್‌ಗಳನ್ನು ಬಳಸುವ ಮಾದರಿಗಳು. ತೀರಾ ಇತ್ತೀಚೆಗೆ ಅಂದರೆ ಡಿಜಿಟಲ್ ಕೆಮರಾಗಳು ಧಾರಾಳವಾಗಿ ಬರುವುದಕ್ಕಿಂತ ಸ್ವಲ್ಪವೇ ಮೊದಲು ಕೂಡ ಈ ಮಾದರಿಗಳು ಚಲಾವಣೆಯಲ್ಲಿದ್ದವು ಅನ್ನುವುದು ಒಂದು ವಿಶೇಷ. ಸ್ಟುಡಿಯೋ ಛಾಯಾಗ್ರಾಹಕರು 120 ಫಿಲ್ಮ್ ರೋಲ್ ಬಳಸುತ್ತಿದ್ದ ಈ ಕೆಮರಾಗಳನ್ನೇ ಸ್ವಲ್ಪ ಬದಲಾವಣೆ ಮಾಡಿ ಶೀಟ್ ಫಿಲ್ಮ್ ಬಳಸುವಂತೆ ಮಾಡಿ ಪಾಸ್‌ಪೋರ್ಟ್ ಗಾತ್ರದ ಫೊಟೋ ತೆಗೆಯಲು ಬಳಸುತ್ತಿದ್ದರು. ಒಂದು ಶೀಟ್ ಫಿಲ್ಮ್‌ನಲ್ಲಿ 2 ಪಾಸ್‌ಪೋರ್ಟ್ ಚಿತ್ರಗಳು. ರೋಲ್ ಫಿಲ್ಮ್ ಮುಗಿಯುವಲ್ಲಿಯವರೆಗೆ ಹೆಚ್ಚು ಕಾಯಬೇಕಿಲ್ಲ.

ಈ ಮಾದರಿಯ ಕೆಮರಾಗಳು ಎಷ್ಟು ಜನಪ್ರಿಯವಾಗಿದ್ದವೆಂದರೆ ಇವುಗಳಿಗೆಂದೇ ಬಳಸುವ ಫಿಲ್ಟರ್‌ಗಳು, ಕ್ಲೋಸ್‌ಅಪ್ ಲೆನ್ಸ್‌ಗಳು ಮುಂತಾದವು ಬಹಳ ಬೇಡಿಕೆಯನ್ನು ಹೊಂದಿದ್ದವು. ಮುಂದೆ 35 ಎಂ. ಎಂ. ಕೆಮರಾಗಳು (ಎಸ್‌ಎಲ್‌ಆರ್, ರೇಂಜ್‌ಫೈಂಡರ್‌ಗಳು) ಮಾರುಕಟ್ಟೆಗೆ ಬರುವುದು ಶುರುವಾದನಂತರ ಇವುಗಳ ಬೇಡಿಕೆ ಹೆಚ್ಚುಕಡಿಮೆ ಇಳಿದೇಹೋಯಿತು. ಆದರೂ ಹೆಚ್ಚು ದುಬಾರಿಯಲ್ಲದ ಕಾರಣ 80 ರ ದಶಕದ ನಂತರವೂ ಇವುಗಳನ್ನು ಅಲ್ಲಲ್ಲಿ ಕಾಣಬಹುದಾಗಿತ್ತು. ಸ್ಟುಡಿಯೋಗಳಲ್ಲಂತೂ ಪಾಸ್‌ಪೋರ್ಟ್ ಚಿತ್ರಗಳನ್ನು ತೆಗೆಯಲೆಂದೇ ಟಿ‌ಎಲ್‌ಆರ್ ಕೆಮರಾಗಳಿರುತ್ತಿದ್ದವು.

ವಿವಿಧ ಕಂಪೆನಿಗಳು ಈ ಮಾದರಿಯ ಕೆಮರಾ ತಯಾರಿಸುತ್ತಿದ್ದವೆಂದು ಮೊದಲೇ ಬರೆದೆನಷ್ಟೇ. ಅವುಗಳಲ್ಲಿ ದುಬಾರಿಯಾದವುಗಳೆಂದರೆ ಮಾಮಿಯಾ ಹಾಗೂ ರೋಲೀಫ್ಲೆಕ್ಸ್ ಕೆಮರಾಗಳು. ಉತ್ತಮ ಸ್ಥಿತಿಯಲ್ಲಿರುವ ಈ ಬಗೆಯ ಕೆಮರಾಗಳಿಗೆ ವಿದೇಶಗಳಲ್ಲಿ ಈಗಲೂ ಬೇಡಿಕೆಯಿದೆ. ಚಿತ್ರ ತೆಗೆಯಬಹುದೆಂದೇನೂ ಅಲ್ಲ, ಸಂಗ್ರಹ ವಸ್ತುವಾಗಿ ಮಾತ್ರ. ಹೆಚ್ಚಿನ ಮಾಹಿತಿಗಳು ಅಂತರ್ಜಾಲದಲ್ಲಿ ಗೂಗಲಿಸಿದರೆ ಲಭ್ಯ.

ಟಿ‌ಎಲ್‌ಆರ್ ಕೆಮರಾ ಮಾದರಿಗಳಲ್ಲಿ ಅನುಕೂಲಗಳಿದ್ದಂತೆಯೇ ಅನನುಕೂಲಗಳೂ ಇದ್ದವು. ಎಸ್‌ಎಲ್‌ಆರ್ ಕೆಮರಾಗಳ ಆಗಮನದೊಂದಿಗೆ ಈ ಅನನುಕೂಲಗಳು ಜನರಿಗೆ ಹೆಚ್ಚು ಹೆಚ್ಚು ಅರಿವಾಗತೊಡಗಿದವು. ಇವುಗಳಲ್ಲಿ ಬಳಸುತ್ತಿದ್ದ 120 ಮಾದರಿಯ ಫಿಲ್ಮ್‌ನ ಕೊರತೆಯೂ ಈ ಮಾದರಿ ನಿಧಾನವಾಗಿ ಮಾಯವಾಗಲು ಕಾರಣವಾಯಿತು. ಹಾಗಾಗಿ ಟಿ‌ಎಲ್‌ಆರ್ ಕೆಮರಾಗಳು ಇದೀಗ ಮ್ಯೂಸಿಯಂ ಅಥವಾ ಸಂಗ್ರಹಕಾರರ ಬಳಿಯಷ್ಟೇ ಉಳಿದುಬಿಟ್ಟಿವೆ. ಸಂಗ್ರಾಹಕರಿಗೆಂದೇ `ರೋಲೀ’ ಕಂಪೆನಿಯು 2004 ರಲ್ಲಿ `ರೋಲೀ ಮಿನಿ-ಡಿಜಿ’ ಎಂಬ ಡಿಜಿಟಲ್ ಟಿ‌ಎಲ್‌ಆರ್ ಮಾದರಿಯ ಕೆಮರಾಗಳ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು.

–  ಹರೀಶ್ ಹಳೆಮನೆ
(ಛಾಯಾಗ್ರಾಹಕ/ಲೇಖಕ)

4 Responses

  1. Hema says:

    Nice article, not many are aware of such topics!

  2. Ghouse says:

    Very informative article….

  3. Shruthi Sharma says:

    Very nice and informative! Keep writing! 🙂

  4. keshava prasad says:

    ಲೇಖನ ಚೆನ್ನಾಗಿದೆ. ಸುರಹೊನ್ನೆಗೆ ಸ್ವಾಗತ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: