ಚಾರ್ ಧಾಮ್ ಪ್ರವಾಸ ಕಥನ

Share Button

ಅನುಭವದ ರೂಪ ಕೊಡುವ ಅಭಿವ್ಯಕ್ತಿ

ಪ್ರಯಾಣ ಬೆಳೆಸಿ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಿ ಅನುಭವಗಳನ್ನು ದಕ್ಕಿಸಿಕೊಳ್ಳುವುದೇ ಪ್ರವಾಸ.ಆ ಅನುಭವಗಳನ್ನು ಬರವಣಿಗೆಯಲ್ಲಿ ದಾಖಲಿಸಿದಾಗ ಅದು ಪ್ರವಾಸ ಕಥನವಾಗುತ್ತದೆ.ಕೆಲವರು ಜೀವನಪೂರ್ತಿ ಪ್ರವಾಸಗಳಲ್ಲೇ ಕಳೆಯುತ್ತಾರೆ.ಆದರೆ ಕಥನ ಕಲೆ ಅವರಿಗೆ ಸಿದ್ಧಿಸಿರುವುದಿಲ್ಲ.ಇನ್ನು ಕೆಲವರು ತಾವು ದರ್ಶಿಸಿದ, ಸ್ಪರ್ಶಿಸಿದ ವಿಷಯಗಳನ್ನು ಯಾವುದೇ ಪ್ರಯಾಸವಿಲ್ಲದೆ ನಿರೂಪಿಸುತ್ತಾರೆ.ಅಂಥವರ ರೋಚಕ ಅನುಭವ ಸಾರ ಕೃತಿಗಳಾಗಿ ಹೊರಬರುತ್ತವೆ.ಅವುಗಳನ್ನು ಓದಿದಾಗ ಪ್ರವಾಸ ಕೈಗೊಳ್ಳುವ ಆಸಕ್ತಿ ಮೂಡದಿರದು.

ಪ್ರವಾಸದ ಬಗ್ಗೆ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗುತ್ತವೆ.ನಿಯತಕಾಲಿಕಗಳಲ್ಲಿ ಧಾರಾವಾಹಿಯಾಗಿ ಬರುತ್ತವೆ.ಪ್ರಬಂಧದ ಸ್ವರೂಪದಲ್ಲಿ ಪ್ರವಾಸ ಕಥನಗಳು ಕಾಣಿಸಿಕೊಳ್ಳುತ್ತದೆ.ಕಾವ್ಯದ ಮೂಲಕವೂ ರಸಲೋಕಯಾತ್ರೆಯನ್ನು ಸಾರ್ಥಕಗೊಳಿಸಿದವರಿದ್ದಾರೆ.ಏನಿದ್ದರೂ ಪ್ರವಾಸದ ಬಗ್ಗೆ ಬರೆದುದೆಲ್ಲವೂ ಪ್ರವಾಸ ಸಾಹಿತ್ಯವಾಗಿ ಪರಿಗಣಿಸಲ್ಪಡುತ್ತದೆ.

ಲೇಖಕಿ ಹೇಮಮಾಲಾ ಬಿ ಅವರು ‘ಚಾರ್ ಧಾಮ್’ ಎಂಬ ಪ್ರವಾಸ ಕಥನವನ್ನು ಹೊರತಂದಿದ್ದಾರೆ.2017ರಲ್ಲಿ ಈ ಕೃತಿ ಪ್ರಕಟವಾಗಿದ್ದರೂ ನನಗೆ ಓದುವ ಅವಕಾಶ ಲಭಿಸಿದ್ದು ಇತ್ತೀಚೆಗೆ – ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ ಬಂದ ಸಂದರ್ಭದಲ್ಲಿ.ದೇವಭೂಮಿಯೆಂದೇ ಕರೆಯಲಾಗುವ ಉತ್ತರಾಖಂಡದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದರೀನಾಥ-ಚತುರ್ಧಾಮಕ್ಕೆ ಭೇಟಿ ನೀಡಿದ ಲೇಖಕಿ ತಾನು ಕಣ್ಣಾರೆ ಕಂಡ ಮತ್ತು ಅನುಭವಿಸಿದ ವಿಷಯಗಳನ್ನು ರಸವತ್ತಾಗಿ ಈ ಕೃತಿಯಲ್ಲಿ ನಿರೂಪಿಸಿದ್ದಾರೆ.

ಚಾರಣ ಪ್ರಿಯರು ಮತ್ತು ಪರಿಸರ ಪ್ರೇಮಿಗಳಿರುವ ಮೈಸೂರಿನ ಯೂತ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ 2016ರಲ್ಲಿ ಚಾರ್ ಧಾಮ್ ಪ್ರವಾಸವನ್ನು ಆಯೋಜಿಸಲಾಗಿತ್ತು.ನಲುವತ್ತೈದರಿಂದ ಎಂಭತ್ತರ ಹರೆಯದ ವರೆಗಿನ ಹದಿನೇಳು ಮಂದಿಯ ತಂಡ ಪ್ರವಾಸ ಕೈಗೊಂಡಿತ್ತು. ಹೇಮಮಾಲಾ ಕೂಡಾ ಭಾಗವಹಿಸಿದ್ದರು.ನಲುವತ್ತಕ್ಕೂ ಹೆಚ್ಚು ಬಾರಿ ಹಿಮಾಲಯ ದರ್ಶನ ಮಾಡಿದ ವಿಠಲರಾಜು ಮೈಸೂರು ನೇತೃತ್ವ ನೀಡಿದ್ದರು.ತಂಡವು ಯಮುನೋತ್ರಿ, ಗಂಗೋತ್ರಿ, ಕೇದಾರ ,ಬದರಿ ಮಾತ್ರವಲ್ಲದೆ ಇನ್ನಿತರ ಕ್ಷೇತ್ರ ಹಾಗೂ ಪ್ರೇಕ್ಷಣೀಯ ಹಾಗು ಸ್ಥಳಗಳನ್ನು ಸಂದರ್ಶಿಸಿತ್ತು.

ಚಾರಣ ಮತ್ತು ತೀರ್ಥಯಾತ್ರೆಗೆ ಸಂಬಂಧಿಸಿದ ಹಲವು ಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗಿ ಪ್ರವಾಸ ಸಾಹಿತ್ಯವನ್ನು ಸಮೃದ್ಧಗೊಳಿಸಿವೆ.ಕೃಷ್ಣನಾರಾಯಣ ಗೊಸಾಮಿ ಅವರು ‘ಹಿಮಾಲಯ ದರ್ಶನ’, ‘ಕೈಲಾಸ ಮಾನಸ ಸರೋವರ ಯಾತ್ರೆ’, ‘ಬದರೀನಾಥ್ ಯಾತ್ರೆ’ ಎಂಬ ಮೂರು ಪುಸ್ತಕಗಳನ್ನು ಬರೆದಿದ್ದಾರೆ. ಭಾರದ್ವಾಜರ ‘ಸಚಿತ್ರ ಭಾರತ ಯಾತ್ರೆ’,ನ.ರಾ ಗಲಗಲಿಯವರ ‘ಬದರಿನಾರಾಯಣ ದರ್ಶನ’, ಸೋಮನಾಥಾನಂದರ ‘ಅಮರನಾಥ ಯಾತ್ರೆ’,’ಹೈಮಾಚಲ ಸಾನ್ನಿಧ್ಯ’, ಪಿ ಆರ್ ಜಯಲಕ್ಮಮ್ಮನವರ ‘ಬದರೀಯಾತ್ರೆ’, ಡಿ ವಿ ರಂಗಸ್ವಾಮಿಯವರ ‘ಭಾರತ ಯಾತ್ರೆ’, ಎಚ್ ಆರ್ ನಾಗರಾಜ ರ ಹಿಮಾಚಲ ಪ್ರದೇಶ,ಜೆ.ವಿ ನರಸಿಂಹ ಮೂರ್ತಿಯವರ ‘ಆಸೇತು ಹಿಮಾಲಯ ಯಾತ್ರೆ’, ಎಂ ವೆಂಕಟಾಚಲ ಭಟ್ಟರ ‘ಕಾಶ್ಮೀರ ಅಮರನಾಥ ಯಾತ್ರೆ’, ಶ್ರೀ ಕಂಠಶಾಸ್ತ್ರಿಯವರ ‘ಮಾನಸ ಸರೋವರ’ ಮತ್ತು ‘ಕೈಲಾಸ ಕ್ಷೇತ್ರ ಪ್ರಕರಣ’, ಶಾಂತಾದೇವಿ ಮಾಳವಾಡರ ‘ಶ್ರೀ ಗಿರಿಯಿಂದ ಹಿಮಗಿರಿಗೆ’, ಮಧೂರು ವೆಂಕಟಕೃಷ್ಣ ಅವರ ‘ತೀರ್ಥಕ್ಷೇತ್ರಗಳು’, ಶಾನ್ ಕಾಸರಗೋಡು ಅವರ ‘ಬದರೀ ಮಲ್ ಹಾರ್’ ಮೊದಲಾದ ಕೃತಿಗಳು ಪ್ರಮುಖವಾದವುಗಳು.

ಆದರೆ ಹೇಮಮಾಲಾ ಅವರ ಚಾರ್ ಧಾಮ್ ಅವುಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ.ತಾವು ಕಂಡ ಸ್ಥಳದ ವಿಶೇಷತೆ, ವೈವಿಧ್ಯತೆ, ಇತಿಹಾಸ, ನಾಗರಿಕತೆ, ಸಂಸ್ಕೃತಿ, ಪೌರಾಣಿಕ ಮಹತ್ವ ಮೊದಲಾದವುಗಳನ್ನು ಸಶಕ್ತವಾಗಿ ಕಟ್ಟಿ ಕೊಟ್ಟಿದ್ದಾರೆ.ಗ್ರಾಂಥಿಕವಲ್ಲದ ಸರಳವಾದ ಭಾಷೆ,ಓದಿದೊಡನೆ ಹೃದ್ಗತವಾಗುವ ವಾಕ್ಯಗಳು, ಘಟನೆಗಳನ್ನು ನಿರೂಪಿಸಿದ ರೀತಿ, ಕುತೂಹಲ ಕೆರಳಿಸುವ ಶೀರ್ಷಿಕೆ ಗಳು,ಕೆಲವು ಕಡೆ ಹಾಸ್ಯ ಮಿಶ್ರಿತ ಅಭಿವ್ಯಕ್ತಿ ವಿಧಾನ ಗಮನ ಸೆಳೆಯುತ್ತದೆ.ಪ್ರವಾಸ ಮಾಡುವವರಿಗೆ ಕಲಾವಿದನ ಕಣ್ಣು, ಕವಿಹೃದಯವಿರಬೇಕಂತೆ .ಈ ಮಾತಿಗೆ ಅನ್ವರ್ಥವಾಗುವಂತೆ ಚಾರ್ ಧಾಮ್ ರೂಪುಗೊಂಡಿದೆ.

ನಮ್ಮ ಉದಾತ್ತ ಸಂಸ್ಕೃತಿಯನ್ನು ಬೆಡಗಿನೊಳಗೆ ಬೆರಗು ಮೂಡಿಸುವ ಪ್ರಕೃತಿ,ಐತಿಹಾಸಿಕ- ಪೌರಾಣಿಕ ಅಂಶಗಳ ಕುರಿತಾದ ಲೇಖಕಿಯ ಕಾಳಜಿ ಈ ಕೃತಿಯ ಧನಾತ್ಮಕ ಅಂಶ.ಯೂತ್ ಹಾಸ್ಟೆಲ್ ಗಂಗೋತ್ರಿ ಘಟಕದ ಹಿರಿಯ ಸದಸ್ಯ ಎಂ.ವಿ ಪರಶಿವ ಮೂರ್ತಿಯವರು ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ-‘ಪುಸ್ತಕವನ್ನು ಪೂರ್ಣ ಓದಿ ಮುಗಿಸುವ ಹೊತ್ತಿಗೆ ಹಲವು ಐತಿಹ್ಯವಾದ ಘಟನೆಗಳು, ನೋಟಗಳು ಮನದಲ್ಲಿ ಸುಳಿದಾಡಿ ಬಿಡುತ್ತವೆ.ಮುಖ್ಯವಾಗಿ ಶ್ರೇಷ್ಠ ನದಿಗಳಾದ ಗಂಗಾ,ಯಮುನಾ,ಅಲಕಾನಂದ, ಭಾಗೀರಥಿ, ಮಂದಾಕಿನಿ, ಗುಪ್ತ ನದಿ ಸರಸ್ವತಿಯ ಉಗಮತಾಣ, ಪ್ರಯಾಗ, ಗಂಗೋತ್ರಿ ಬಳಿಯ ಪರಾಶರ ಮುನಿಗಳ ಆಶ್ರಮ, ಪ್ರಸಿದ್ಧ ಉತ್ತರ ಕಾಶಿ,ಬಿಸಿನೀರ ಬುಗ್ಗೆಗಳು, ಮಹಾಭಾರತದ ಪಾಂಡವರ ಹಲವು ವೃತ್ತಾಂತಗಳು,ದೇವಗಂಗೆಗಾಗಿ ಭಗೀರಥ ಪ್ರಯತ್ನ, ಮಹಾಭಾರತ ರಚಿಸಿದ ವ್ಯಾಸರ ಗುಹೆ ಮತ್ತು ಗಣೇಶನ ಗುಡಿ, ಜ್ಯೋತಿರ್ಲಿಂಗವಿರುವ ಕೇದಾರನಾಥ,ಭಾರತದ ಗಡಿಭಾಗಗಳು, ಸ್ಥಳೀಯ ಜನರ ಜೀವನ ಶೈಲಿ ಮತ್ತು ನಾಗರಿಕತೆ……. ಹೀಗೆ ನೂರಾರು ಅಂಶಗಳು…….’ಕೃತಿಯ ಘನತೆಯನ್ನು ಎತ್ತಿ ಹಿಡಿದಿವೆ.

ಮೂಲತಃ ಕಾಸರಗೋಡಿನವರಾದ ಹೇಮಮಾಲಾ ಬಿ ಅವರು ಕೆಲವು ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದಾರೆ. ಬರಹಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರು.ಸುರಗಿ-ಸುರಹೊನ್ನೆ ಬ್ಲಾಗ್ ಆರಂಭಿಸಿ ಉದಯೋನ್ಮುಖರ ಸಾಹಿತ್ಯ ಕೃತಿಗಳಿಗೆ ಅವಕಾಶ ಕಲ್ಪಿಸುತ್ತಿದ್ದಾರೆ.ಸುಮಾರು 130ಪುಟಗಳ ಚಾರ್ ಧಾಮ್ ಅವರ ಸಹಜ ಬರವಣಿಗೆಯ ಕೈಗನ್ನಡಿ. ಉತ್ಪ್ರೇಕ್ಷೆಯಿಲ್ಲದ ಪ್ರಾಮಾಣಿಕ ಅಭಿವ್ಯಕ್ತಿ ಅವರದು.ಸಾಂದರ್ಭಿಕ ಚಿತ್ರ ಗಳು,ಪುಟ ವಿನ್ಯಾಸ, ಆಕರ್ಷಕ ಮುದ್ರಣ ಗಮನ ಸೆಳೆಯುತ್ತದೆ.ಮುನ್ನುಡಿ, ಚೆನ್ನುಡಿ, ಬೆನ್ನುಡಿ, ಮಾತ್ರವಲ್ಲದೆ ಇಬ್ಬರು ಸಹ ಯಾತ್ರಿಗಳ ಅನುಭವಗಳನ್ನೂ ದಾಖಲಿಸಲಾಗಿದೆ.ಇಂತಹ ಒಂದು ಉತ್ತಮ ಕೃತಿಯನ್ನು ನೀಡಿದ ಲೇಖಕಿ ಹೇಮಮಾಲಾ ಅವರಿಗೆ ಆತ್ಮೀಯ ಅಭಿನಂದನೆಗಳು.

-ರಾಧಾಕೃಷ್ಣ ಕೆ ಉಳಿಯತ್ತಡ್ಕ

      

6 Responses

  1. ಉತ್ತಮ ವಿಚಾರಗಳನ್ನು ನೀಡುವ ಬರಹ ರಾಧಾಕೃಷ್ಣ.
    ಹೇಮಮಾಲಾ ಹಾಗೂ ರಾಧಾಕೃಷ್ಣ ಇವರುಗಳಿಗೆ ವಂದನೆಗಳು.

  2. Hema says:

    ಹಿರಿಯ ಸಾಹಿತಿಗಳಾದ ತಮ್ಮಿಂದ ಆರಂಭಿಕ ಬರಹಗಾರಳಾದ ನನಗೆ ಸಿಕ್ಕಿದ ಅತಿದೊಡ್ಡ ಗೌರವವಿದು. ‘ಚಾರ್ ಧಾಮ್ ‘ ಪ್ರವಾಸಕಥನವನ್ನು ಓದಿ, ಬಹಳ ಸೊಗಸಾಗಿ, ಆತ್ಮೀಯವಾಗಿ ವಿಮರ್ಶಿಸಿದ ತಮಗೆ ಚಿರಋಣಿ. ಧನ್ಯೋಸ್ಮಿ!

  3. ಹರ್ಷಿತಾ says:

    ಚಾರ್ ಧಾಮ್ ಯಾತ್ರಾ ದ ವೈಶಿಷ್ಟ್ಯಗಳನ್ನು ಲೇಖನದಲ್ಲಿ ಚೆನ್ನಾಗಿ ಉಲ್ಲೇಖಿಸಿದ್ದೀರಿ..ಧನ್ಯವಾದಗಳು ಸರ್

  4. ಶಂಕರಿ ಶರ್ಮ says:

    ಪ್ರವಾಸ ಕಥನಗಳಲ್ಲಿ ಅತ್ಯುತ್ತಮ ಸಾಲಿನಲ್ಲಿ ನಿಲ್ಲುವ, ಎಲ್ಲಾ ವಿವರಗಳನ್ನೂ ಮನಮುಟ್ಟುವಂತೆ ನಿರೂಪಿಸಿದ, ಮೈಸೂರಿನ ಹೇಮಮಾಲಾರ ಚಾರ್ ಧಾಮ್ ಪುಸ್ತಕವನ್ನು ಸಶಕ್ತವಾಗಿ ವಿಶ್ಲೇಷಿಸಿದ ತಮಗೆ ಅಭಿನಂದನೆಗಳು.

  5. ನಯನ ಬಜಕೂಡ್ಲು says:

    ಸೊಗಸಾದ ಕೃತಿ ಪರಿಚಯ. ನಿಮ್ಮ ಮಾತು ನಿಜ ಸರ್ ಪ್ರವಾಸ ಕೈಗೊಂಡವರೆಲ್ಲ ಅದನ್ನು ಅಕ್ಷರ ರೂಪದಲ್ಲಿ ಎಲ್ಲರೊಡನೆ ಹಂಚಿಕೊಳ್ಳುವುದು ಅಸಾಧ್ಯ. ಆದರೆ ಹೇಮಮಾಲಾ ಅವರ ಈ ಕೃತಿ ಓದಿದ ಮೇಲೆ ಒಮ್ಮೆಯಾದರೂ ಈ ಯಾತ್ರೆ ಕೈಗೊಳ್ಳುವ ಹಂಬಲ ಮೂಡುತ್ತದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: