ಬಾಲ್ಯದ ಕೋಡ್ ಭಾಷೆಗಳು
ಕಳೆದು ಹೋದ ದಿನಗಳು ನಮ್ಮ ಜೀವನದಲ್ಲಿ ಮತ್ತೆ ಮರುಕಳಿಸದು. ಬಾಲ್ಯದ ಆ ದಿನಗಳು, ಶಾಲೆಯಲ್ಲಿ ಸಹಪಾಠಿಗಳ ಜೊತೆ ಆಟ, ಪಾಠ, ಓಟ, ನಲಿವು, ಮುನಿಸು ಎಲ್ಲವುಗಳ ಜೊತೆ ಕಳೆದ ಮಧುರ ನೆನಪುಗಳು ಆಪ್ಯಾಯಮಾನ. ಕೆಲವೊಮ್ಮೆ ಯಾವುದೋ ಕ್ಷುಲ್ಲಕ ವಿಷಯಕ್ಕೆ ಜಗಳವಾಡಿ ಕೋಪ ಮಾಡುವುದು, ಸ್ವಲ್ಪ ಹೊತ್ತಿನ ನಂತರ ರಾಜಿಯಾಗುವುದು– ಬಹುಶಃ ಹುಡುಗಿಯರ ಮಧ್ಯೆ ಸ್ವಲ್ಪ ಜಾಸ್ತಿ ಅಂತ ನನ್ನ ಅಂಬೋಣ. “ನಿನ್ನ/ನಿಮ್ಮ ಹತ್ತಿರ ಮಾತನಾಡುವುದಿಲ್ಲ. ನಿನ್ನ/ನಿಮ್ಮ ಹತ್ತಿರ ಕೋಪ” ಅಂತ ಹೇಳಿ ಎಡಕೈ ಅಥವಾ ಬಲಕೈಯ ಕಿರುಬೆರಳನ್ನು ತುಟಿಯ ಮೇಲಿಟ್ಟು ಊದಿದರೆ ಅಲ್ಲಿ ಇಬ್ಬರ ಅಥವಾ ಗೆಳತಿಯರ ನಡುವೆ “ಕೋಪ” ಜಾರಿಗೆ ಬಂತು ಎಂದರ್ಥ. ಕೋಪ ಜಾಸ್ತಿಯಿದ್ದರೆ ಕೋಪ ಹೇಳುವ ಹುಡುಗಿ, ತನ್ನ ಬಾಯಿಯೊಳಗೆ ಗಾಳಿ ತುಂಬಿಕೊಂಡು ಎರಡೂ ಕೆನ್ನೆಯ ಮೇಲೆ ಮುಷ್ಟಿ ಕಟ್ಟಿದ ಕೈಗಳಿಂದ ಮೆಲ್ಲನೆ ಬಡಿದು, ನಂತರ ಕಣ್ಣ ರೆಪ್ಪೆಯಿಂದ ಕೂದಲು ತೆಗೆದು ಬಿಸಾಡುವುದು ಇತ್ತು. ಮತ್ತೆ ಮಾತನಾಡಲು ರಾಜಿಯಾಗಬೇಕು. ಯಾರ ಜೊತೆ ರಾಜಿಯಾಗಬೇಕೋ ಅವರೆದುರು, ತೋರುಬೆರಳು ಮತ್ತು ಕಿರುಬೆರಳು ಮುಂದೆ ಬರುವಂತೆ, ಬಲಕೈಯ ಅಂಗೈ ಮುಷ್ಟಿ ಹಿಡಿದು ಮುಂದೆ ಚಾಚಬೇಕು. ಆಗ ಎದುರಿನವಳು ತೋರುಬೆರಳು ಮುಟ್ಟಿದರೆ “ರಾಜಿ“, ಕಿರುಬೆರಳು ಮುಟ್ಟಿದರೆ “ಕೋಪ” ಎಂದರ್ಥ. ರಾಜಿ ಆಗುವ ಮನಸ್ಸಿದ್ದರೂ, ಕಿರುಬೆರಳು ಮುಟ್ಟಿದರೆ ರಾಜಿ ಆಗದಂತಹ ಪರಿಸ್ಥಿತಿ.
ಯಾರೊಡನೆಯೂ ಕೋಪ ಆಯಿತು (ಈಗದ ಭಾಷೆಯಲ್ಲಿ ಟೂ ಬಿಡುವುದು) ಅಂದರೆ ಅದು ತೋರಿಕೆಯ ಕೋಪ. ಮನಸ್ಸಿನೊಳಗೆ ಮಾತನಾಡಬೇಕು ಅಂತ ಇರುತ್ತದೆ. ಏನಾದರೂ ಹೊಸ ವಿಷಯ ಗೊತ್ತಾದರೆ, ಕೋಪ ಇರುವ ಸಹಪಾಠಿಗೂ ಅದನ್ನು ತಿಳಿಸದಿದ್ದರೆ ಮನಸ್ಸು ಒಪ್ಪುವುದಿಲ್ಲ. ಉಳಿದವರೆದುರು ಮಾತನಾಡಲು ಹಮ್ಮು ಅಡ್ಡ ಬರುತ್ತದೆ. ಇನ್ನು ಕೆಲವೊಮ್ಮೆ ಯಾರ ಹತ್ತಿರ ಕೋಪ ಇದೆಯೋ, ಅವಳಿಗೆ/ಅವರಿಗೆ ಈ ವಿಷಯ ಗೊತ್ತಾಗಬಾರದು ಅನ್ನುವ ಮೊಂಡು ಹಟ. ಗುಟ್ಟಿನಲ್ಲಿ ಹೇಳಿದರೆ, ಏನೋ ವಿಷಯ ಮುಚ್ಚಿಡುತ್ತಿದ್ದಾಳೆ ಅಂತ ಅನ್ನಿಸಬಾರದು. ಅಥವಾ ಕೆಲವೊಮ್ಮೆ ತರಗತಿಯ ಯಾವುದೋ ಹುಡುಗಿಯನ್ನು ಅವಳಿಗೆ ತಿಳಿಯದ ಹಾಗೆ ತಮಾಷೆ ಮಾಡಬೇಕೆಂಬ ಬಯಕೆ. ಅಂತಹ ಎಲ್ಲಾ ಸಂದರ್ಭಗಳಲ್ಲಿ ಬಳಕೆ ಆಗುತ್ತಿದ್ದ ಕೆಲವು ಕೋಡ್ ಭಾಷೆಗಳ ಬಗ್ಗೆ ಈ ಲೇಖನ.
ಈ ಕೋಡ್ ಭಾಷೆ ಕನ್ನಡದಲ್ಲಿ ಅಥವಾ ತುಳುವಿನಲ್ಲಿ ಇರುತ್ತಿತ್ತು. ಪದಗಳನ್ನು ತಿರುಗಾಮುರುಗಾ ಮಾಡಿ ಮಾತನಾಡುವುದು ಒಂದು ವಿಧ. ಅಂದರೆ ಕಡೆಯ ಅಕ್ಷರದಿಂದ ಆರಂಭಿಸಿ ಮೊದಲಿನ ಅಕ್ಷರಕ್ಕೆ ಬರುವುದು. ಉದಾಹರಣೆಗೆ “ನಾನು ಮನೆಗೆ ಹೋಗುತ್ತೇನೆ“ ಅನ್ನುವುದನ್ನು “ನುನಾ ಗೆನೆಮ ನೆತ್ತೇಗುಹೋ” ಅಂತ ಹೇಳುವುದು. ಈ ಕೋಡ್ ಭಾಷೆಯ ಪರಿಚಯ ಇಲ್ಲದಿದ್ದವರಿಗೆ ಏನೂ ಅರ್ಥವಾಗುವುದಿಲ್ಲ. ಕೆಲವೊಮ್ಮೆ ಎದುರಿನವರಿಗೆ ಈ ತರಹ ಮಾತನಾಡುವುದು ಗೊತ್ತಿಲ್ಲ ಅಂತ ತಿಳಿದು ಉಲ್ಟಾ ಪುಲ್ಟಾ ಮಾತನಾಡಿ ಬೇಸ್ತು ಬಿದ್ದವರು ಇರುತ್ತಿದ್ದರು. ಈ ತರದ ಕೋಡ್ ಭಾಷೆ ಬಳಸಿ ಸಹಪಾಠಿಯೊಬ್ಬಳನ್ನು ಗೇಲಿ ಮಾಡಿದ್ದಳು ಗೆಳತಿ. ಗೇಲಿ ಮಾಡಿಸಿಕೊಂಡಾಗ ಏನೂ ಅರ್ಥವಾಗದವರಂತೆ ಸುಮ್ಮನಿದ್ದವಳು ಮರುದಿನ ಬಂದು “ಳುಗಲೆಶಿ ವಾತಗೀಸಂ ವೇಡಿಹಾ, ರಲೂಬೇ ಲ್ಲಿಯಲೆಶಿ ಲ್ಲಿರದುನೆವಶಕೇ” (ಶಿಲೆಗಳು ಸಂಗೀತವಾ ಹಾಡಿವೆ, ಬೇಲೂರ ಶಿಲೆಯಲ್ಲಿ ಕೇಶವನೆದುರಲ್ಲಿ) ಅನ್ನುವ ಹಾಡನ್ನು ಪೂರ್ತಿಯಾಗಿ ಅದೇ ರಾಗದಲ್ಲಿ ಹಾಡಿದಾಗ ಗೆಳತಿಯ ಮುಖ ಇಂಗು ತಿಂದ ಮಂಗನ ಹಾಗೆ ಆಗಿತ್ತು.
ಪದಗಳನ್ನು ಪೂರ್ತಿಯಾಗಿ ತಿರುಗಾಮುರುಗಾ ಮಾಡಿ ಮಾತನಾಡುವುದು ಕಷ್ಟ ಅಂತ ಕೆಲವರು ಈ ವಿಧಾನದಲ್ಲಿ ಒಂದು ಬದಲಾವಣೆ ಮಾಡುತ್ತಿದ್ದರು. ಕೊನೆಯ ಅಕ್ಷರವನ್ನು ಮೊದಲು ಹೇಳಿ ನಂತರ ಮೊದಲಿನ ಅಕ್ಷರಗಳನ್ನು ಸೇರಿಸಿ ಮಾತನಾಡುವುದು. ಆಗ “ನಾನು ಮನೆಗೆ ಹೋಗುತ್ತೇನೆ“ ಅನ್ನುವುದನ್ನು “ನುನಾ ಗೆಮನೆ ನೆಹೋಗುತ್ತೇ“ ಅಂತ ಹೇಳುವುದು. ತುಂಬಾ ನಿಧಾನವಾಗಿ ಹೇಳಿದರೆ ಮಾತ್ರ ಎದುರಿನವರಿಗೆ ಗ್ರಹಿಸಲು ಸಾಧ್ಯ. ಈ ತರಹ ಮಾತನಾಡುವವರು ವೇಗವಾಗಿ ಮಾತನಾಡಿ ಎಲ್ಲರಿಗೂ ಅರ್ಥವಾಗದಂತೆ ಜಾಗ್ರತೆ ವಹಿಸುತ್ತಿದ್ದರು. ನೆನಪಿಗೆ ಬರುವ ಇನ್ನೊಂದು ಕೋಡ್ ಭಾಷೆ- ಮಲ್ಲಿಗೆ ಭಾಷೆ. ಏನಪ್ಪಾ ಇದು ಮಲ್ಲಿಗೆ ಭಾಷೆ ಅಂದ್ಕೊಂಡ್ರಾ? ಒಂದು ವಾಕ್ಯ ಹೇಳುವಾಗ ಆ ವಾಕ್ಯದಲ್ಲಿನ ಪ್ರತಿ ಪದದ ನಂತರ ಮಲ್ಲಿಗೆ ಅಂತ ಸೇರಿಸಿಕೊಳ್ಳುವುದು. ಉದಾಹರಣೆಗೆ “ನಾನು ಮನೆಗೆ ಹೋಗುತ್ತೇನೆ“ ಅನ್ನುವುದನ್ನು “ನಾನು ಮಲ್ಲಿಗೆ ಮನೆಗೆ ಮಲ್ಲಿಗೆ ಹೋಗುತ್ತೇನೆ ಮಲ್ಲಿಗೆ“ ಅನ್ನುವುದು. ಈ ಕೋಡ್ ಭಾಷೆ ಅರ್ಥ ಆಗಬೇಕಾದರೆ ಮಲ್ಲಿಗೆ ಪದವನ್ನು ಬಿಟ್ಟು ಉಳಿದ ಪದಗಳನ್ನು ಮಾತ್ರ ಕೇಳಿಸಿಕೊಳ್ಳಬೇಕು. ಮಲ್ಲಿಗೆ ಪದದ ಬದಲು ಬೇರೆ ಪದಬಳಕೆಯೂ ಮಾಡಬಹುದು. ಬಳಸಿಕೊಂಡ ಪದದ ಹೆಸರು ಆ ಕೋಡ್ ಭಾಷೆಗೆ ಇರುತ್ತಿತ್ತು. ಸೂಜಿ ಭಾಷೆ, ನಾಯಿ ಭಾಷೆ, ಅಂಗಿ ಭಾಷೆ… ಇತ್ಯಾದಿ. ನೆನಪಿಗೆ ಬರುತ್ತಿರುವ ಇನ್ನೊಂದು ಕೋಡ್ ಭಾಷೆ ಅಂದರೆ ನೀರ್ ಭಾಷೆ. “ನಾನು ಮನೆಗೆ ಹೋಗುತ್ತೇನೆ ಎಂಬ ವಾಕ್ಯವನ್ನು “ನಾರ್ ನಾನು ಮಾರ್ ಮನೆಗೆ ಹೋರ್ ಹೋಗುತ್ತೇನೆ“ ಅನ್ನುವುದು. ವಾಕ್ಯದ ಪ್ರತಿ ಪದಗಳ ಮೊದಲಿನ ಅಕ್ಷ್ರರದ ಜೊತೆ “ರ್” ಸೇರಿಸಿ ಅನಂತರ ಆ ಪದವನ್ನು ಹೇಳುವುದು.
ಹದಿಹರೆಯದಲ್ಲಿ ಕೆಲವು ಹುಡುಗರಿಗೆ/ಹುಡುಗಿಯರಿಗೆ ಕ್ರಶ್ ಆಗಿಬಿಡುವಂತಹ ಸನ್ನ್ನಿವೇಶಗಳು ಆಗಲೂ ಇರುತ್ತಿತ್ತು. ತನ್ನ ಪ್ರೀತಿ ವ್ಯಕ್ತಪಡಿಸಲು ಬುದ್ಧಿ ಉಪಯೋಗಿಸಿ ಕಂಡುಕೊಂಡ ಭಾಷೆಯೇ ಇಂಗ್ಲೀಷ್ ಅಕ್ಷರಗಳಿಗೆ ಸಂಖ್ಯೆ ಕೊಟ್ಟು ಬರೆಯುತ್ತಿದ್ದ ಕೋಡ್ ಭಾಷೆ (A-1, B-2, C-3,…..Y-25, Z-26).
I LOVE YOU ಅನ್ನುವುದನ್ನು 9 12 15 22 5 25 15 21 ಅಂತ ಸಂಖ್ಯೆಗಳ ಮೂಲಕ ಬರೆದಿದ್ದ ಪತ್ರವೊಂದನ್ನು ಅರ್ಥ ಮಾಡಿಕೊಳ್ಳಲಾಗದೆ ಪೇಚಾಡಿದ ಗೆಳತಿಯೊಬ್ಬಳು, ಕಾಲೇಜು ಓದುತ್ತಿದ್ದ ತನ್ನ ಅಕ್ಕನಲ್ಲಿ ಕೇಳಿದಾಗ “ಆ ಹುಡುಗನ ಜೊತೆ ಇನ್ನು ಮುಂದೆ ಮಾತನಾಡಬೇಡ” ಅಂತ ಹೇಳಿದ್ದನ್ನು ಹಂಚಿಕೊಂಡ ವಿಷಯವೂ ನೆನಪಿಗೆ ಬಂತು. ಒಟ್ಟಿನಲ್ಲಿ ಸುಂದರ ಬಾಲ್ಯದ ನೆನಪುಗಳು. ಈ ಲೇಖನ ಓದುತ್ತಿರುವ ಕೆಲವರಾದರೂ ಇಂತಹ ಕೋಡ್ ಭಾಷೆಗಳ ಉಪಯೋಗ ಮಾಡಿರಬಹುದು. ಯಾರೂ ಹೇಳಿ ಕೊಡದಿದ್ದರೂ ಇಂತಹ ಭಾಷೆಗಳು ಚಾಲ್ತಿಯಲ್ಲಿದ್ದವು. ನೀವೇನಾದರೂ ಬೇರೆ ರೀತಿಯ ಕೋಡ್ ಭಾಷಎಗಳನ್ನು ಬಳಸಿದ್ದರೆ ಹಂಚಿಕೊಳ್ಳುವಿರಲ್ಲಾ?
-ಡಾ.ಕೃಷ್ಣಪ್ರಭಾ ಎಮ್, ಮಂಗಳೂರು
ತುಂಬಾ ಚೆನ್ನಾಗಿ ಬರೆದಿದ್ದೀರಿ. ಬಾಲ್ಯ ಮರುಕಳಿಸಿತು..
ತುಂಬಾಬರೆದಿದ್ದೀರಿ. ಬಾಲ್ಯ ಮರುಕಳಿಸಿತು.
ಮೆಚ್ಚುಗೆಗೆ ಧನ್ಯವಾದಗಳು
ಚೆನ್ನಾಗಿದೆ ಲೇಖನ ಮೇಡಮ್. ಇನ್ನೂ ಹತ್ತು ಹಲವು ಕೋಡ್ ಭಾಷೆ ಇದ್ದವು. ಅರ್ಧಕ್ಕರ್ಧ ಮರೆತೇ ಹೋಗಿದೆ ಈಗ.
ಇಂತಹ ಕೋಡ್ ಭಾಷೆಗಳು ಎಲ್ಲಾ ಕಡೆಗಳಲ್ಲಿ ಚಾಲ್ತಿಯಲ್ಲಿತ್ತು ಅನ್ನುವುದೇ ಸೋಜಿಗದ ಸಂಗತಿ
Nice article madam.
ಅನಿಸಿಕೆಗೆ ಧನ್ಯವಾದಗಳು
ನೀರ್ ನಿಮ್ಮ ಲೇರ್ಲೇಖನ ಚಾರ್ ಚೆಂದ ಈರ್ ಇತ್ತು…..
ಗೆಳತಿ ಓರ್ವರ ಪ್ರತಿಕ್ರಿಯೆ
ಸೂಪರ್
ಇಂತಾ ಆಸಕ್ತಿಯ ವಿಷಯಗಳನ್ನು ಯಾರಿಗೂ ನೆನಪಾಗುವುದಿಲ್ಲ.ನೀವು ನೆನಪು ಮಾಡಿ ಬರೆದಿದ್ದೀರಿ.ನಮಗೂ ಇಂತಹ “ಕನಾಕನು ಕಮಕನೆಕಗೆ ಕಹೋಕಗುಕತ್ತೇಕನೆ” ಭಾಷೆ ಮಾತಾಡುವ ಅಭ್ಯಾಸ ಇತ್ತು.ಮಲ್ಲಿಗೆ ಭಾಷೆ ,ಉಲ್ಟಾ ಭಾಷೆ ಇದೆಲ್ಲ ನನಗೆ ಹಳೆ ಬಾಲ್ಯವನ್ನು ರಿವೈಂಡ್ ಮಾಡಿತು.ಧನ್ಯವಾದಗಳು, ಶುಭಾಶಯಗಳು
ಇಂತಹ ಪ್ರತಿಕ್ರಿಯೆಗಳು ಬರುವಾಗ ಲೇಖನ ಬರೆದದ್ದಕ್ಕೂ ಸಾರ್ಥಕ ಭಾವ
ಬಾಲ್ಯವನ್ನು ಮರುಕಳಿಸಿದ ನಮ್ಮೆಲ್ಲರ ಈ ಭಾಷೆಗಳಿಗೆ ಸೂಕ್ತ ಸ್ಥಾನ ಒದಗಿಸಿ ಕೊಟ್ಟಿರುವಿರಿ ಮೇಡಂ..ಧನ್ಯವಾದಗಳು.
ಆತ್ಮೀಯ ಪ್ರತಿಕ್ರಿಯೆ ನೀಡಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು
ವಾಹ್. ಸೂಪರ್. ಚಂದ ಚಂದದ, ಮರೆತಿದ್ದ ಘಟನೆಗಳನ್ನು ನೆನಪು ಮಾಡಿತು ಮೇಡಂ ನಿಮ್ಮ ಬರಹ. ನಾನಂತೂ ಸಕತ್ ತುಂಟಿಯಾಗಿದ್ದೆ ಬಾಲ್ಯ ಹಾಗೂ ಟೀನೇಜಲ್ಲಿ. ಗೆಳತಿಯರ ದಂಡೇ ಇರುತಿತ್ತು ಜೊತೆಯಲ್ಲಿ, ಆಗಿನ ಘಟನೆಗಳೆಲ್ಲ ನಿಮ್ಮ ಬರಹ ಓದಿ ಮತ್ತೆ ನೆನಪಾಗುತ್ತಿದೆ..
ಓದಿದವರೆಲ್ಲರದೂ ಇದೇ ಪ್ರತಿಕ್ರಿಯೆ. ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು ನಯನಾ
ಸುಂದರವಾಗಿ ಬರೆದಿರುವಿರಿ. ರಾಜಿ, ಕೋಪ, ಕೋಡ್ ಭಾಷೆ ಎಲ್ಲ ನೆನಪಾಯ್ತು. ಖುಷಿಯಾಯಿತು. ಅಭಿನಂದನೆಗಳು
ಲೇಖನ ಮೆಚ್ಚಿ ಪ್ರತಿಕ್ರಿಯೆ ನೀಡಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಮೇಡಂ