ನಾಗಂದಿಗೆಯೊಳಗಿನಿಂದ – ಬಿ.ಎಂ. ರೋಹಿಣಿ ಆತ್ಮಕಥನ

Share Button

ಇತ್ತೀಚೆಗೆ ನಾನು ನನ್ನ ಅಚ್ಚುಮೆಚ್ಚಿನ ಲೇಖಕಿ ಬಿ.ಎಂ.ರೋಹಿಣಿಯವರ ‘ನಾಗಂದಿಗೆಯೊಳಗಿನಿಂದ’ ಕೃತಿ ಓದಿದೆ. ಅಶೋಕವರ್ಧನ ಅವರ ಬ್ಲಾಗ್ ನಲ್ಲಿ ‘ದೀಪದಡಿ ಕತ್ತಲು’ ಎನ್ನುವ ಹೆಸರಿನಲ್ಲಿ ಈ ಮೊದಲು ಈ ಆತ್ಮಕತೆ ಪ್ರಸಾರವಾಗುತ್ತಿತ್ತು. ಅದರಲ್ಲಿ ‘ಒಬ್ಬಳೇ ಕುಳಿತು ಅಳಲಿಕ್ಕಾದರೂ ನನಗೆ ನನ್ನದೇ ಆದ ಕೋಣೆ ಬೇಕು’ ಎನ್ನುವ ವಾಕ್ಯ ನನ್ನನ್ನು ಇನ್ನಿಲ್ಲದಂತೆ ಅಲುಗಾಡಿಸಿತು. ನಾನು ಓದಿಕೊಂಡ ಅಷ್ಟಿಷ್ಟು ಫೆಮಿನಿಸಂನ ಸಾರವೇ ಅದರಲ್ಲಿ ಅಡಗಿರುವಂತೆ, ಅಸಂಖ್ಯ ಹೆಣ್ಣುಮಕ್ಕಳ ಹೇಳಿಕೊಳ್ಳಲಾರದ ತಳಮಳಗಳನ್ನು ಮೂಕ ರೋದನವನ್ನು ಈ ಸಾಲುಗಳು ಹೇಳಿಕೊಳ್ಳತ್ತವೆ ಎನಿಸಿತು. ಹೀಗಾಗಿಯೇ ನಾನು ನನ್ನ ಕೃತಿ ‘ತೆರೆದಂತೆ ಹಾದಿ’ ಗೆ ಮುನ್ನುಡಿ ಬರೆಯಲು ಕೇಳಿಕೊಂಡೆ ಹಾಗೂ ಅವರು ಒಪ್ಪಿದರು.

ತಮ್ಮ ಜೀವನದಲ್ಲಿ ತಾವು ಕಂಡುಂಡ ಅನುಭವಗಳನ್ನು ‘ನಾಗಂದಿಗೆಯೊಳಗಿನಿಂದ’ ಕೃತಿಯಲ್ಲಿ ಅವರು ದಾಖಲಿಸಿದ್ದಾರೆ ಹಾಗೂ ಈ ಮೂಲಕ ಓದುಗರಾದ ನಮ್ಮಲ್ಲೂ ಗೋಡೆಗಳನ್ನು ಮೀರುವ, ನಮ್ಮ ಆಕಾಶಗಳನ್ನು ನಾವೇ ವಿಸ್ತರಿಸಿಕೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ದಾರಿ ತೋರಿದ್ದಾರೆ.

ಬಿ.ಎಂ. ರೋಹಿಣಿಯವರ ಕಥನ ಶೈಲಿಯಲ್ಲಿ ಗಮನ ಸೆಳೆಯುವುದು ಅವರು ತಮ್ಮ ನೋವಿನ, ಯಾತನೆಯ ಕ್ಷಣಗಳನ್ನು ದಾಖಲಿಸುವ ಬಗೆ. ಒಂದೂವರೆ ವರ್ಷದ ಎಳೆ ಮಗುವಿದ್ದಾಗ ಅವರ ಕೈಗೆ ಕೊತಕೊತ ಕುದಿದ ಕಷಾಯದ ಪಾತ್ರೆ ಬಿದ್ದು ಅವರ ಎಡಗೈ ಬೆ ಂದು ಹೋಯಿತಂತೆ. ಇಲ್ಲಿನ ವಾಕ್ಯವನ್ನು ಗಮನಿಸಿ ‘ನನ್ನನ್ನು ನಾನು ಸುಟ್ಟುಕೊಂಡು ಬದುಕುವುದಕ್ಕೆ ಶಿಶುವಿನ ಹಂತದಲ್ಲೇ ವಿಧಿ ತರಬೇತಿ ನೀಡಿತ್ತೇ? ಗೊತ್ತಿಲ್ಲ’.

ಜೀವನದಲ್ಲಿ ತಾಪ, ಕೋಪ, ಅಸಹಾಯಕತೆ ಅನುಭವಕ್ಕೆ ಬಂದವರಿಗೆ, ಅದರಲ್ಲೂ ಹಂಗಿನ ಜೀವನ ಅನುಭವಿಸಬೇಕಾಗಿ ಬಂದವರಿಗೆ ರೋಹಿಣಿಯವರ ಬರಹ ಜೀವಕ್ಕೆ ತಾಕಿ ಬಿಡುತ್ತವೆ. ತಮ್ಮ ತಂದೆಯವರ ಅಸ್ತವ್ಯಸ್ತ ಜೀವನ ಶೈಲಿಯಿಂದಾಗಿ ತಮ್ಮ ಆಸ್ತಿಯನ್ನು ಕಳೆದುಕೊಂಡು ತಮ್ಮ ಸೋದರ ಮಾವನ ಮನೆಯಲ್ಲಿ ಬದುಕಬೇಕಾಗಿ ಬಂದುದನ್ನು ಆಕೆ ಕಣ್ಣು ತೇವವಾಗುವಂತೆ ಬರೆಯುತ್ತಾರೆ. ‘ನನ್ನ ಜೀವನದ ಮೊದಲ ವಲಸೆ ಪ್ರಾರಂಭವಾದುದು ಬಂಗ್ರ ಮಂಜೇಶ್ವರದ ಗೋಳಿಳಿದಡಿಯ ಅಜ್ಜಿ ಮನೆಗೆ. ಸೋತು ಕೈ ಖಾಲಿಯಾದ ಸ್ಥಿತಿಯಲ್ಲಿ ಎಂದೂ ಬಂಧುಗಳ ಆಶ್ರಯ ಅರಸಿ ಹೋಗಬಾರದು ಎಂಬ ಸತ್ಯದ ಅರಿವಾಗಿ ನನ್ನಮ್ಮ ಕುಗ್ಗಿ ಹೋದರು’ ಈ ರೀತಿಯ ಕಟು ಸತ್ಯಗಳನ್ನು ನಾವು ನೀವು ಅನುಭವಿಸಿರಬಹುದಾದ ದೈನ್ಯದ, ಗಂಟಲಿನಲ್ಲೇ ಹುದುಗಿ ಹೋಗುವ ಬಿಕ್ಕಳಿಕೆಯ, ಅಸಹಾಯಕ ದೈನ್ಯದ ಚಿತ್ರಣ ನೀಡುತ್ತಾರೆ.

ಬಿ.ಎಂ. ರೋಹಿಣಿ ಅವರ ಮಾಗಿದ ವ್ಯಕ್ತಿತ್ವಕ್ಕೆ ಪೂರಕವಾಗಿ ಕೆಲವು ವಾಕ್ಯಗಳು ನಮ್ಮನ್ನು ಗಕ್ಕನೆ ಹಿಡಿದು ನಿಲ್ಲಿಸುತ್ತವೆ’ ಉದಾಹರಣೆಗೆ ‘ಅತಿ ಹೆಚ್ಚಿನ ಸೇಡೆಂದರೆ ಕ್ಷಮೆಯೇ’.

ಇನ್ನು ಆಗಿನ ಕಾಲದ ಮಂಗಳೂರಿನ ಚಿತ್ರಣ ಈ ಕೃತಿಯಲ್ಲಿ ಹೇರಳವಾಗಿ ಇದೆ. ಮುಸ್ಲಿಂ, ಕ್ರೈಸ್ತ, ಹಿಂದೂ ಸಮುದಾಯದ ನಡುವಣ ಸಾಮರಸ್ಯದ ಬದುಕು, ಕೆಚ್ಚಿನಿಂದ ಬದುಕುತ್ತಿದ್ದ ವಿವಿಧ ಸ್ತರದ ಮಹಿಳೆಯರು. ಹೀಗೆ ನಾನಿರುವ ಕದ್ರಿ ಪ್ರದೇಶ ಎಲ್ಲ ವಾಹನಗಳ ಸದ್ದಿರದ ಹಳ್ಳಿಯಂತಿತ್ತು ಎಂದು ನೆನೆಸಿಕೊಂಡರೆ ಆಶ್ಚರ್ಯವಾಗಿತ್ತದೆ. ರೋಹಿಣಿಯವರ ರೋಚಕ ಕಥನ ಶೈಲಿಯಲ್ಲಿ ಆಗಿನ ಕಾಲದ (ಅಂದರೆ ಸುಮಾರು 50-60  ವರ್ಷ ಹಿಂದಿನ ) ಜನರ ಬದುಕು ಹೇಗಿದ್ದಿರಬಹುದು ಎನ್ನುವ ಕಲ್ಪನೆ
ಹುಟ್ಟಿಕೊಳ್ಳುತ್ತದೆ. ಅವರು ಚಿತ್ರಿಸುವ ಅನೇಕ ಕಥಾ ಪಾತ್ರಗಳು ರೋಚಕವಾಗಿವೆ. ಉದಾ:- ಡ್ಯಾನ್ಸರ್ ಸೀತಾ, ಕೆ.ಲೀಲಾವತಿ ಹೀಗೆ. ಇನ್ನು ರೋಹಿಣಿ ಅವರು ಟೌನ್‌ಹಾಲಿನಲ್ಲಿ ಬಿಸ್ಮಿಲ್ಲಾ ಖಾನ್ ಅವರ ಶೆಹನಾಯ್ ವಾದನದ ಕಚೇರಿ ಮುಗಿದು ಗೆಳತಿಯೊಂದಿಗೆ ರಾತ್ರಿ 11 ಗಂಟೆಯ ಹೊತ್ತಿಗೆ ನಡೆದುಕೊಂಡೇ ಮನೆ ತಲುಪಿದ್ದು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ. ಈಗಿನ ಮಂಗಳೂರಿನಲ್ಲಿ ಅದನ್ನು ಊಹಿಸಲೂ ಸಾಧ್ಯವಿಲ್ಲ.

ಈ ಕೃತಿಯ ಉದ್ದಕ್ಕೂ ಹಾಸುಹೊಕ್ಕಾಗಿರುವ ಒಂದು ರೀತಿಯ ವಿಷಣ್ಣತೆ ಖಿನ್ನತೆಯ ದಾರುಣತೆಯ ಸತ್ಯವೇ ಆಗಿವೆ. ಕೇವಲ ಮೂವತ್ತು ವರ್ಷಗಳ ಹಿಂದೆಯೂ ಬಹುಶ: ಈ ಹೊತ್ತಿಗೂ ಇರಬಹುದಾದ ದುರಂತಗಳಿವು. ಕೇವಲ ತಮ್ಮ ಪ್ರತಿಷ್ಠೆಗೋಸ್ಕರ ಪ್ರೇಮಿಸಿದವರನ್ನು ಮದುವೆಯಾಗಲು ಬಿಡದ ಹೆತ್ತವರು, ಸ್ವಂತ ಮಕ್ಕಳನ್ನೇ ಎರಡನೆಯ ಸಂಬಂಧಕ್ಕೆ ಒತ್ತಾಯದಿಂದ ಮದುವೆ ಮಾಡಿಕೊಡುವವರು, ಹೊಡೆದು ಬಡಿದು ಆತ್ಮಹತ್ಯೆಯ ಸ್ಥಿತಿಗೆ ತಂದಿಡುವವರು, ತುತ್ತು ಅನ್ನಕ್ಕೆ ಅವಮಾನಿಸುವ ಸಂಬಂಧಿಕರು ಹೀಗೆ ಇವಲ್ಲದೆ ‘ಜೆಂಡರ್’ ಕಾರಣದಿಂದ ತಾವು ಅನುಭವಿಸಿದ ಬವಣೆಗಳನ್ನೂ, ತಮ್ಮ ಶಿಕ್ಷಕಿ ವೃತ್ತಿಯಿಂದ ತಾವೇ ಕುಟುಂಬಕ್ಕೆ ಆಸರೆಯಾಗಿದ್ದರೂ ಹೆಣ್ಣೆಂಬ ಕಾರಣಕ್ಕೆ ಅನುಭವಿಸಿದ ತಾರತಮ್ಯಗಳನ್ನೂ, ಕಾರಣಾಂತರಗಳಿಂದ ತಾವು ಮದುವೆಯಾಗದೆ ಉಳಿಯಬೇಕಾದುದನ್ನೂ ಓದುಗರು ನಿಟ್ಟುಸಿರಾಗುವಂತೆ ಬರೆಯುತ್ತಾರೆ. ವೃತ್ತಿಜೀವನ, ವೈಯಕ್ತಿಕ ಜೀವನಗಳಲ್ಲಿ ಕಂಡ ಅನೇಕ ಏರುಪೇರುಗಳನ್ನು ಅವರು ದಾಖಲಿಸಿದ್ದಾರೆ.

ಖ್ಯಾತ ಸಾಹಿತಿಗಳಾದ ಡಾ.ಸಾರಾ ಅಬೂಬಕ್ಕರ್ ಮತ್ತಿ ಶ್ರೀಮತಿ.ಬಿ.ಎಂ.ರೋಹಿಣಿ ಅವರೊಂದಿಗೆ ಲೇಖಕಿ

ತಮ್ಮ ಜೀವನದ ಖಿನ್ನತೆಯನ್ನು ಮೀರುವ ಸಲುವಾಗಿ ರೋಹಿಣಿಯವರು ಓರ್ವ ಶಿಕ್ಷಕಿಯಾಗಿ ಸಾಹಿತ್ಯ ಪ್ರೇಮಿಯಾಗಿ ಬಿಡುವಿಲ್ಲದಂತೆ ತಮ್ಮನ್ನು ತಾವು ತೊಡಗಿಸಿಕೊಂಡರು. ಸ್ವತ: ಅವಿವಾಹಿತೆ ಆಗಿದ್ದು ಆ ನೋವಿನ ಅರಿವಿದ್ದ ಕಾರಣದಿಂದಲೇ ಅವರು ಅವಿವಾಹಿತೆಯರ ಬಗೆಗಿನ ಸಂಶೋಧನೆ ಕ್ಷೇತ್ರ ಅಧ್ಯಯನದ ನಿಖರತೆಯೊಂದಿಗೆ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಇದಲ್ಲದೆ ದಕ್ಷಿಣಕನ್ನಡ ಮಾಸ್ತಿ ಕಲ್ಲುಗಳ ಬಗ್ಗೆ ಹಾಗೂ ವೇಶ್ಯೆಯರ ಸಮಸ್ಯೆಯ ಬಗ್ಗೆ ಮಂಗಳೂರು ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ಅಬ್ಬಕ್ಕ ಪ್ರಶಸ್ತಿಯೂ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ, ಸಂಘಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ಕರಾವಳಿ ಲೇಖಕಿಯರ ಸಂಘದಲ್ಲಿ ಅವರು ಸದಾ ಚಟುವಟಿಕೆಯಿಂದ, ಲವಲವಿಕೆಯಿಂದ, ಜೀವನ್ಮುಖಿಯಾಗಿ ಬಾಳುತ್ತಿದ್ದಾರೆ, ನಮ್ಮಂತಹ ಕಿರಿಯರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಅವರ ಈ ಜೀವನ್ಮುಖಿ ವಾಕ್ಯಗಳನ್ನು ಗಮನಿಸಿ. ‘ನನ್ನನ್ನು ಯಾರೂ ಗಮನಿಸುವವರಿಲ್ಲವೆಂದು ಕೊರಗುವುದಕ್ಕಿಂತ ನಾನೇ ಎಲ್ಲವನ್ನೂ, ಎಲ್ಲರನ್ನೂ ಗಮನಿಸುತ್ತೇನೆಂಬ ಧೈರ್ಯ ಮತ್ತು ಸ್ಫೂರ್ತಿ ತುಂಬಿಕೊಂಡರೆ ನಾನು ಬದುಕಿದ್ದು ಸಾರ್ಥಕ’.

ಈ ಪುಸ್ತಕವನ್ನು ನಾನು ಕೇವಲ ಒಂದೂವರೆ ದಿನದಲ್ಲಿ ಓದಿ ಮುಗಿಸಿದೆ. ಆ ರೀತಿ ಓದಿಸಿಕೊಂಡು ಹೋಗುವ ಶೈಲಿ, ಅದ್ಭುತ ಕಥನ ಕಲೆ, ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಆತ್ಮವನ್ನು ಹಿಡಿದು ಅಲುಗಾಡಿಸುವ, ಗಂಟಲು ಕಟ್ಟುವಂತೆ ಮಾಡುವ ಪ್ರಾಮಾಣಿಕತೆಯ ಶಕ್ತಿ ಈ ಕೃತಿಗಿದೆ. ಬಿ.ಎಂ. ರೋಹಿಣಿ ಅವರಿಗೆ ನಲ್ಮೆಯ, ಅಕ್ಕರೆಯ ಶುಭಾಶಯಗಳು.

– ಜಯಶ್ರೀ.ಬಿ. ಕದ್ರಿ

5 Responses

  1. ಬಿ.ಎಂ.ರೋಹಿಣಿಯ ಬಗ್ಗೆ ಒಳ್ಳೆಯ ಲೇಖನ. ಅವರನ್ನು ನಾನೂ ಬಲ್ಲೆ.ನಾನು ಕಂಡಂತೆ ಅವರು ತುಂಬಿದ ಕೊಡ. ಮಗುವಿನ ಮನಸ್ಸಿನ ಹೃದಯ. ಅವರ ಈ ಪುಸ್ತಕ ಮಾತ್ರ ಓದಿಲ್ಲ!!. ಧನ್ಯವಾದಗಳು ಜಯಶ್ರೀಯವರಿಗೆ.

  2. ನಯನ ಬಜಕೂಡ್ಲು says:

    ಪುಸ್ತಕದೆಡೆಗೆ ಆಕರ್ಷಿಸುವಂತಹ ವಿಮರ್ಶೆ. ನೈಸ್

  3. Anonymous says:

    Thank you Vijaya Subrahmanya avare

  4. Shankari Sharma says:

    ಸೊಗಸಾದ ವಿಮರ್ಶೆ, ಜಯಶ್ರೀ.

  5. SmithaAmrithraj. says:

    ಪುಸ್ತಕದ ಕುರಿತು ಒಳ್ಳೆಯ ಒಳನೋಟ ಕೊಟ್ಟಿರುವಿರಿ ಜಯಶ್ರೀ ಮೇಡಂ.ನಾನು ಈಗ ಪುಸ್ತಕ ಕೈಗೆತ್ತಿಕೊಂಡಿರುವೆ. ತಮ್ಮ ಕಡು ಕಷ್ಟಗಳನ್ನು ಸಂಯಮದಿಂದ ಹೇಳುವ ರೋಹಿಣಿ ಮೇಡಂ ರವರ ಸಮಚಿತ್ತದ ಪರಿಗೆ ಬೆರಗಾಗಿರುವೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: