ಕೈಬರಹವೆಂದರೆ ಬರಿ ಅಕ್ಷರವಲ್ಲ…

Share Button

               ‘ನೀನು ಕಾಪಿ ಬರೆಯುವುದು ಚೆಂದ ..ಅದರೆ ನಿನಗೆ  ಪೆನ್ನು ಹಿಡಿಯಲು ಗೊತ್ತಿಲ್ಲ’ ಇದು ನನ್ನ ಬರವಣಿಗೆಯ ಬಗ್ಗೆ ಪ್ರಾಥಮಿಕ ಶಾಲೆಯಲ್ಲಿ ಕೇಳಿದ ಪ್ರಶಂಸಾ ನಿಂದನೆ! ನನ್ನ ತಮ್ಮನೂ ನನ್ನ ಹಾಗೆಯೇ ಪೆನ್ನು ಹಿಡಿಯುವುದನ್ನು ಇತ್ತೀಚೆಗೆ ಗಮನಿಸಿದೆ! ನನ್ನ ತಂಗಿಯ ಕೈಬರಹವು ಸುಮಾರಾಗಿ  ನನ್ನ ಕೈಬರಹದಂತೆ ಇದೆ. ಹಾಗಾದರೆ,  ಪೆನ್ನನ್ನು ಹಿಡಿಯುವ ಶೈಲಿ ಹಾಗೂ ಕೈಬರಹದ ಸ್ವರೂಪ ಸ್ವಲ್ಪ ಮಟ್ಟಿಗೆ ಅನುವಂಶಿಕವೇ? ಇದ್ದರೂ ಇರಬಹುದು. ಸೂಕ್ತ ರೀತಿಯಲ್ಲಿ ಪೆನ್ನನ್ನು ಹಿಡಿದುಕೊಂಡು, ಅಕ್ಷರ ಹಾಗೂ ಗೆರೆಗಳ ನಡುವೆ ಸೂಕ್ತ ಅಂತರವನ್ನು ಕಾಯ್ದುಕೊಂಡು, ತಪ್ಪಿಲ್ಲದೆ, ಅಚ್ಚುಕಟ್ಟಾಗಿ ಬರೆಯುವುದು ಉತ್ತಮ ಕೌಶಲವೇ ಸರಿ. ಬರವಣಿಗೆಯ ಅಂದ, ಬರೆಯುವ ವೇಗ, ಅಕ್ಷರಗಳ ಗಾತ್ರ, ಗೆರೆಗಳ ನಡುವಿನ ಅಂತರ, ಏರುಮುಖ ಅಥವಾ ಇಳಿಮುಖ ಬರವಣಿಗೆ , ಸಾಲುಗಳು ಮಾರ್ಜಿನ್ ನಿಂದ ಎಡಕ್ಕೆ ಅಥವಾ ಬಲಕ್ಕೆ ವಾಲುವಿಕೆ….ಹೀಗೆ  ಕೈಬರಹವನ್ನು ಹಲವಾರು ಆಯಾಮಗಳಲ್ಲಿ ವಿಶ್ಲೇಷಿಸಿ  ಬರೆದವರ ಮನ:ಸ್ಥಿತಿ, ಭಾವನೆ, ವ್ಯಕ್ತಿತ್ವ, ಗುಣಾವಗುಣಗಳನ್ನು ಅರಿತುಕೊಂಡು ಸೂಕ್ತ ಸಲಹೆಗಳನ್ನು ಕೊಡುವುದು ಕೂಡ ಮನ:ಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರ.

ಮಾನವನ ವಿಕಾಸದ ವಿವಿಧ ಹಂತಗಳಲ್ಲಿ ತನ್ನ ಜ್ಞಾನ ಹಾಗೂ  ಭಾವನೆಗಳನ್ನು ವ್ಯಕ್ತಪಡಿಸುವ ವೈಖರಿಯೂ ಬದಲಾಗುತ್ತಾ, ಮುಂದುವರಿಯುತ್ತಾ ಇದೆ. ಶಿಲಾಯುಗದ ಮಾನವನು ಗುಹೆಗಳ ಗೋಡೆಯ ಮೇಲೆ, ಕಲ್ಲಿನ ಮೇಲೆ ಸಂಕೇತಗಳನ್ನೂ ಚಿತ್ರಗಳನ್ನೂ ಮೂಡಿಸಿ ಬರೆಯಲಾರಂಭಿದ. ಅಂದಿನಿಂದ ಇಂದಿನ ವರೆಗೂ, ವಿವಿಧ ರೀತಿಗಳಲ್ಲಿ, ಸಹಸ್ರಾರು ಭಾಷೆಗಳಲ್ಲಿ ಮನುಷ್ಯನು ಸಂವಹನ ಮಾಡುತ್ತಿದ್ದಾನೆ.  ಮನುಷ್ಯನು ಅಕ್ಷ್ರರಗಳ ಸಂಯೋಜನೆ ಮೂಲಕ ಪದಗಳನ್ನು ಸೃಷ್ಟಿಸಿ ಭಾಷೆಯ ಮೂಲಕ  ಸಂವಹನ ಮಾಡಲಾರಂಭಿಸಿದ ಮೇಲೆ ನಡೆಯುತ್ತಿರುವ  ಅಕ್ಷರ ಕ್ರಾಂತಿ ಅದ್ಭುತ. ಮಡಕೆಯ ಚೂರು,  ಪ್ರಾಣಿಗಳ ಚರ್ಮ, ಬಟ್ಟೆಗಳ ಮೇಲೆ ಮೂಡಿದ ಅಕ್ಷರಗಳು ಕಾಲಾನಂತರದಲ್ಲಿ  ಶಿಲಾಶಾಸನಗಳಲ್ಲಿಯೂ ಕಂಗೊಳಿಸಿದುವು. ತಾಳೆಗರಿಗಳ ಗ್ರಂಥಗಳಾಗಿ ಬದಲಾದುವು.  ಕಾಗದದ ಮೇಲೆ ಮುದ್ರಣ ಆರಂಭವಾದ ಮೇಲೆ ವಿವಿಧ ಶೈಲಿಯ  ಗ್ರಂಥಗಳು ಸೃಷ್ಟಿಯಾಗುತ್ತಿವೆ.

ಕ್ರಿಸ್ತ ಪೂರ್ವ ಕಾಲದಲ್ಲಿಯೇ ಲಿಪಿಗಳ ಬಳಕೆ ಆರಂಭವಾಗಿ, ಕಾಲಾನುಕ್ರಮದಲ್ಲಿ ಇವು ಬಹಳಷ್ಟು ಮಾರ್ಪಾಡಾಗುತ್ತಾ ಬಂದುವು. ಹತ್ತೊಂಭತ್ತನೇ ಶತಮಾನದ ಆದಿಯಲ್ಲಿ  ಶಾಲೆಗಳಲ್ಲಿ  ಮಕ್ಕಳಿಗೆ ಅಕ್ಷರ ವಿದ್ಯಾಭ್ಯಾಸ ಮಾಡುವ ಪದ್ಧತಿ ಆರಂಭವಾಯಿತು. ಮರಳಿನಲ್ಲಿ ಅಕ್ಷರ ಮೂಡಿಸಿ ಕಲಿಯುತ್ತಿದ್ದರಂತೆ.  ಕಾಲಾನುಕ್ರಮದಲ್ಲಿ  ಬಳಪ, ಸ್ಲೇಟಿನಲ್ಲಿ ಅಕ್ಷ್ರರ ತಿದ್ದಿಸುತ್ತಿದ್ದರು.  ಕಳೆದೆರಡು ದಶಕಗಳ ವರೆಗೂ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸ್ಲೇಟು-ಬಳಪದ ಮೂಲಕವೇ ಬರಹ ಆರಂಭವಾಗುತ್ತಿತ್ತು.  ದುಂಡಗೆ ಬರಿಯಿರಿ…. ಗೆರೆಗೆ ತಾಗಿಸಿ ಬರೆಯಿರಿ…  ಮುತ್ತಿನಂತಹ ಅಕ್ಷರ …ಕಾಗೆ ಕಾಲಿನಂತಹ ಅಕ್ಷರ……’  ಮೊದಲಾದ  ಆದೇಶ, ಪ್ರಶಂಸೆ , ನಿಂದನೆಗಳನ್ನು ಕೇಳುತ್ತಾ  ಪುಟಗಟ್ಟಲೆ ಕಾಪಿ ಬರೆಯುತ್ತಿದ್ದ ವಿದ್ಯಾರ್ಥಿಗಳು ನಾವಾಗಿದ್ದೆವು.

ಆದರೆ 2000 ರ ನಂತರದ ಮಕ್ಕಳಿಗೆ ಸ್ಲೇಟ್ ಬಳಪದ ಪರಿಚಯ  ಬಹುತೇಕ ಇಲ್ಲ. ಯಾಕೆಂದರೆ ಎಲ್. ಕೆ.ಜಿ ಯಿಂದಲೇ ಪುಸ್ತಕ-ಪೆನ್ಸಿಲ್ ನಲ್ಲಿ ಬರೆಸುವ ಪದ್ಧತಿ ಆರಂಭವಾಗುತ್ತದೆ.   ಮೊಬೈಲ್ ಫೋನ್, ಕಂಪ್ಯೂಟರ್ , ಟಾಬ್ಲೆಟ್ ನಂತಹ ವಿದ್ಯುನ್ಮಾನ ಉಪಕರಣಗಳ ಬಳಕೆ ಇರುವುದರಿಂದ ಕೈಬರಹದ ಪ್ರಾಮುಖ್ಯತೆ ಕಡಿಮೆಯಾಗಿದೆ. ಹೆಚ್ಚಿನ ತಂತ್ರಾಂಶಗಳಲ್ಲಿ  ಅಟೋ ಸ್ಪೆಲ್ಲಿಂಗ್ ಕರೆಕ್ಷನ್ , ಗ್ರ್ಯಾಮರ್ ಕರೆಕ್ಷನ್  ಇರುವುದರಿಂದ ಪದಜೋಡಣೆಗೂ ವಾಕ್ಯರಚನೆಗೂ  ಹೆಚ್ಚು ಚಿಂತಿಸಬೇಕಾಗಿಲ್ಲ.  ಇನ್ನು ಕಾರ್ಪೊರೇಟ್ ವಲಯದ ಹುದ್ದೆಗಳಲ್ಲಿ ಸಹಿ ಹಾಕುವುದನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಮಾಹಿತಿಯ ಪ್ರಸಾರ ಹಾಗೂ  ಸಂವಹನ ಕಂಪ್ಯೂಟರ್ ಮೂಲಕವೇ ನಡೆಯುತ್ತಿದೆ. ಪ್ರಾಮುಖ್ಯವಲ್ಲದ ಅಥವಾ   ಸಂವಹನದ ನಮೂನೆಗಳಿಗೆ  ಸಹಿ ಹಾಕುವುದನ್ನೂ ಕಡಿಮೆ ಗೊಳಿಸಿ  ಡಿಜಿಟಲ್  ಸಿಗ್ನೇಚರ್ ಕೂಡ ಬಳಕೆಯಲ್ಲಿವೆ.

ತಂತ್ರಜ್ಞಾನದ ಬಳಕೆಯಿಂದ  ಜರಗುವ ಡಿಜಿಟಲ್ ವ್ಯವಹಾರಗಳಿಗೆ ಬಹಳಷ್ಟು ಅನುಕೂಲತೆಗಳಿವೆ, ಪರಿಸರ ಸಂರಕ್ಷಣೆಯೂ ಸಾಧ್ಯ , ಆದರೂ ಕೈಬರಹಕ್ಕೆ ತನ್ನದೇ ಆದ ವೈಶಿಷ್ಟ್ಯಗಳಿವೆ ಎಂಬುದನ್ನು ಮನಗಾಣಬೇಕು.   ಮೊಬೈಲ್ ಫೋನ್ ನಲ್ಲಿ,  ವಾಟ್ಸಾಪ್, ಫೇಸ್ ಬುಕ್ಸ್ ನಲ್ಲಿ ಮಿಂಚಿನ ವೇಗದಲ್ಲಿ ಸಂದೇಶಗಳನ್ನು ರವಾನಿಸಲು ಸಾಧ್ಯವಾಗುತ್ತಿದ್ದರೂ,  ಅಂಚೆ ಕಚೇರಿಯ ಮೊಹರು ಹೊತ್ತು ಬರುವ ಪತ್ರದ ಆಪ್ತತೆಯ ಮುಂದೆ ಸಪ್ಪೆಯೆನಿಸುತ್ತವೆ.

ಬರವಣಿಗೆಯೆಂದರೆ ಕೇವಲ ಪೇಪರ್ ನಲ್ಲಿ ಅಕ್ಷ್ರರಗಳನ್ನು ಮೂಡಿಸುವ ಕ್ರಿಯೆಯಲ್ಲ.  ಮಗುವಿನ ಮನೋದೈಹಿಕ ಬೆಳವಣಿಗೆಯ ದಿಕ್ಸೂಚಿ.  ಬರೆದವರ ವಿಷಯದ ಗ್ರಹಿಕೆ, ಮನನ, ಅಕ್ಷರಗಳನ್ನು ನೋಡುವ  ಹಾಗೂ ಬರೆಯುವ ಕಣ್ಣು ಮತ್ತು ಕೈ ಬೆರಳುಗಳ ಸ್ನಾಯುಗಳ ಸಹಯೋಗದ  ಸಮಗ್ರ ಚಿತ್ರಣ.  ಬರವಣಿಗೆಯಲ್ಲಿ ಹಲವು ವಿಧಗಳಿವೆ. ಕ್ಲಾಸಿನಲ್ಲಿ, ವಿಷಯವನ್ನು ಕೇಳುತ್ತಾ ಬರೆಯುವುವಾಗ ನಮ್ಮ ಗಮನ ‘ಕೇಳುವುದರ’ ಮೇಲೆ ಕೇಂದ್ರೀಕೃತವಾಗಿರುತ್ತದೆ.   ಆಕರ ಗ್ರಂಥದಿಂದ  ನಕಲು ಮಾಡುವ ಸಂದರ್ಭದಲ್ಲಿ ‘ಓದುವಿಕೆ’ಗೆ ಗಮನವಿರುತ್ತದೆ. ಆದರೆ, ಸ್ವಂತವಾಗಿ ಏನನ್ನಾದರೂ ಬರೆಯುವಾಗ, ಏನನ್ನು ಬರೆಯಲಿ ಎಂಬ ಚಿಂತನೆ, ಹೇಗೆ ಬರೆಯಬೇಕೆಂಬ  ಸ್ಪಷ್ಟತೆ, ಎಷ್ಟು ಬರೆಯಬೇಕೆಂಬ ಮಾಪನ ,  ಎಲ್ಲಿ ಬರೆಯಬೇಕೆಂಬ ನಿಖರತೆ, ಯಾವಾಗ ಬರೆಯಬೇಕೆಂಬ ಆದ್ಯತೆ ಇವೆಲ್ಲವೂ ಮೇಳೈಸಿ ವಿಷಯದ ಸಮಗ್ರತೆ ಲಭಿಸುತ್ತದೆ. ಆದುದರಿಂದ ವಿದ್ಯಾರ್ಥಿಗಳಿಗೆ ‘ಬರೆದು ಕಲಿಯಿರಿ’ ಎಂದು ಸಲಹೆ ನೀಡುತ್ತಾರೆ.

ನಮ್ಮ ಮನಸ್ಸನ್ನು ಅರಿತುಕೊಳ್ಳಲು ಕೈಬರಹವು  ಉಪಕಾರಿಯಾಗಬಲ್ಲುದು. ಮಿದುಳಿನ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಕೈಬರಹವು ಸಹಕಾರಿ. ನಾವು ದು:ಖಿತರಾಗಿದ್ದರೆ ಅಥವಾ ಆಕ್ರೋಶಭರಿತರಾಗಿದ್ದರೆ, ಆ ಕ್ಷಣದಲ್ಲಿ ರಂಪ ಎಬ್ಬಿಸಿ ತನಗೂ ಒತ್ತಡ ಸೃಷ್ಟಿಸಿ ಇತರರಿಗೂ ತೊಂದರೆ ಕೊಡುವ ಬದಲು, ಮೌನವಾಗಿ ಕಾಗದದ ಮೇಲೆ ಕೋಪಕ್ಕೆ ಅಥವಾ ದು”ಖಕ್ಕೆ ಕಾರಣವಾದ ವಿಚಾರವನ್ನು ಬರೆದು, ಸ್ವಲ್ಪ ಸಮಯದ ನಂತರ ಅದನ್ನು ಓದಿದಾಗ  ನಮಗೇ ‘ಕ್ಷುಲ್ಲಕ ವಿಚಾರವಿದು’ ಅನಿಸಿ ಆ ಕಾಗದವನ್ನು ಹರಿದು ಹಾಕುತ್ತೇವೆ. ಅಲ್ಲಿಗೆ ಮನಸ್ಸಿನ ಒತ್ತಡ ಕಡಿಮೆ ಆಗುತ್ತದೆ.

ಬದಲಾದ ಕಾಲಘಟ್ಟದಲ್ಲಿ, ಬರಹಕ್ಕೆ   ಸಂಬಂಧಿಸಿದ ಪುಸ್ತಕ, ಪೆನ್ನು,ಪೆನ್ಸಿಲ್ ಮೊದಲಾದ ಪರಿಕರಗಳ ಮಾರಾಟಕ್ಕೆ ಧಕ್ಕೆ ಆಗುವಂತಹ ಪರಿಸ್ಥಿತಿ ಉಂಟಾಗಿರುವುದನ್ನು ಗುರುತಿಸಿ, ಅಮೇರಿಕಾದ Writing Instrument Manufacturer’s Association (WIMA), ಜನವರಿ 23  ರನ್ನುಕೈಬರಹದ ದಿನ ಎಂದು ಘೋಷಿಸಿತು. ಇದು ವಾಣಿಜ್ಯ ದೃಷ್ಟಿಯಿಂದ ಹಮ್ಮಿಕೊಂಡ ಯೋಜನೆಯಾದರೂ, ಕೈಬರಹವನ್ನು ಪ್ರೋತ್ಸಾಹಿಸುವ ಇಂಗಿತವನ್ನು ಹೊಂದಿರುವುದೂ ನಿಚ್ಚಳ.

– ಹೇಮಮಾಲಾ.ಬಿ

2 Responses

  1. ನಯನ ಬಜಕೂಡ್ಲು says:

    ಚಂದದ ಕೈ ಬರಹ ಹಾಗೂ ಅದರ ಕುರಿತಾದ ಲೇಖನ.
    ಎಷ್ಟೇ ತಂತ್ರಜ್ಞಾನ ಮುಂದುವರಿದಿದ್ದರೂ ಪ್ರತಿಯೊಂದು ವಿಚಾರಕ್ಕೂ ಅದರದ್ದೇ ಆದ ಮೂಲದ ಪ್ರಾಮುಖ್ಯತೆ ಇದ್ದೆ ಇರುತ್ತದೆ. ಈಗಂತೂ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಅಂದ್ರೆ ವಾಟ್ಸಪ್ಪ್, ಫೇಸ್ಬುಕ್, ಗಳಲ್ಲಿ ಟೈಪ್ ಮಾಡುವ ಅಗತ್ಯವೂ ಇಲ್ಲ. ವಾಯ್ಸ್ ಟೈಪಿಂಗ್ ಅನ್ನುವ app ಹಾಕಿಕೊಂಡರೆ ನಾವು ಹೇಳಿದ್ದು ಟೈಪ್ ಆಗ್ತಾ ಹೋಗ್ತದೆ. ಇದರಿಂದ ಸಾಕಷ್ಟು ಸಮಯವೂ ಉಳಿಯುತ್ತದೆ.

  2. Shankari Sharma says:

    ಅರ್ಥಪೂರ್ಣ, ಮಾಹಿತಿಯುಕ್ತ ಸುಂದರ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: