ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 9
ಕೇದಾರ ಗೌರಿ ದೇವಸ್ಥಾನದಿಂದ ಖುಷಿಯಿಂದಲೇ ಹೊರಟು ನಮ್ಮ ಬಸ್ಸನ್ನೇರಿ ಪುರಿ ಕಡೆಗೆ ಹೊರಟಾಗ ಅಲ್ಲಿದ್ದ ಧ್ವನಿವರ್ಧಕಕ್ಕೆ ಕೆಲಸ ಕೊಟ್ಟವರು ಮಹೇಶಣ್ಣ. ಮುಂದಿನ 80ಕಿ.ಮೀ.ದೂರ ಪಯಣದ ಎರಡು ಗಂಟೆಗಳು ನಮಗಾಗಿ ಕಾದಿದ್ದವು. ಬಸ್ಸಿನಲ್ಲಿ ನಮ್ಮೆಲ್ಲರ ಪಯಣ ಅದೇ ಕೊನೆಯ ದಿನ. ಜೊತೆ ಜೊತೆಯಾಗಿ ಸಂಭ್ರಮ ಪಡಲು ಕೊನೆಯ ಅವಕಾಶ. ಮುಂದಿನ ನಮ್ಮ ಪಯಣವು ರೈಲು ಹಾಗೂ ಕಾರುಗಳಲ್ಲಿ ಮುಂದುವರಿಯುವುದಿತ್ತು. ವಿವಿಧ ವಿನೋದಾವಳಿಗಳು ಪ್ರಾರಂಭಗೊಂಡುವು. ಮಕ್ಕಳೆಲ್ಲರೂ ನಡೆಸಿಕೊಟ್ಟ, ಹಿಂದಿ,ಕನ್ನಡ ಭಕ್ತಿಗೀತೆ, ಭಾವಗೀತೆ, ಚಿತ್ರಗೀತೆ, ಸಂಗೀತ ಹೀಗೆ ವೈವಿಧ್ಯಮಯ ಹಾಡುಗಳ ಸುಧೆಯಲ್ಲಿ ಕೊಚ್ಚಿ ಹೋದೆವು. ಗೋಪಾಲಣ್ಣನವರ, ನಮ್ಮೆಲ್ಲರ ತಲೆಯನ್ನು ಉಲ್ಟಾಪಲ್ಟಾ ಮಾಡುವ ಲೆಕ್ಕಗಳ ಕಸರತ್ತು, ಜ್ಯೋತಿ ಅಕ್ಕನ ಸುಶ್ರಾವ್ಯ ಹಾಡು, ಕೇಶವಣ್ಣನವರ ಪಾಂಡಿತ್ಯ ಪೂರ್ಣ ಮಾತುಗಳು, ಶರ್ಮರ ಚಿರಪರಿಚಿತ ಕಂಠದಿಂದ ಹಲವಾರು ಪದ್ಯಗಳು..ಜೋಕ್ಸ್ ಗಳು, ಬಾಲಣ್ಣನವರ, ಬಹುಮಾನ ಸಹಿತದ ಕ್ವಿಝ್.. ಏನುಂಟು..ಏನಿಲ್ಲ? ನಡು ನಡುವೆ ಗಣೇಶಣ್ಣ ಎಲ್ಲರ ಬಾಯಿಗೆ, ನಾಲಗೆಗೆ ಸಖತ್ ಕೆಲಸವನ್ನು ಕೊಟ್ಟು ಹೊಟ್ಟೆ ತುಂಬಿಸುತ್ತಿದ್ದುದು ಮರೆಯುವಂತೆಯೇ ಇಲ್ಲ. ಅಂತೂ ಎರಡು ಗಂಟೆಯ ಸಾಮೂಹಿಕ ಪಯಣವನ್ನು ಸಾರ್ಥಕ ಪಡಿಸುಕೊಳ್ಳುವ ಆತುರ ಪ್ರತಿಯೊಬ್ಬರಲ್ಲೂ ಎದ್ದುಕಾಣುತ್ತಿತ್ತು.
ಮಧ್ಯಾಹ್ನ ಒಂದು ಗಂಟೆಗೆ ನಮ್ಮ “ಜಗತ್ಜನನೀ” ಬಸ್ ಪುರಿ ಶ್ರೀಜಗನ್ನಾಥ ದೇಗುಲದ ಬಳಿ ತಲಪಿತ್ತು.
ಪುರಿ ಎಂದೊಡನೆಯೇ ಮನದಾಗಸದಲ್ಲಿ ಪ್ರಥಮವಾಗಿ ಮೂಡುವುದು ಶ್ರೀ ಜಗನ್ನಾಥ ದೇವರು. ಟಿ.ವಿ.ಯಲ್ಲಿ ವರುಷಕ್ಕೊಮ್ಮೆ ಪುರಿ ದೇವಸ್ಥಾನದ ರಥೋತ್ಸವದ ಪ್ರಸಾರವಾಗುವಾಗ, ಎಲ್ಲೂ ಕಾಣದಂತಹ ಅಪರೂಪದ, ಬೃಹದಾಕಾರದ ಮೂರು ರಥಗಳು ಅತ್ಯಂತ ವಿಶಾಲವಾದ ರಸ್ತೆಯಲ್ಲಿ ಲಕ್ಷಾಂತರ ಜನರ ನಡುವೆ ಎಳೆಯಲ್ಪಡುವುದನ್ನು ನೋಡುತ್ತೇವೆ. ನಮ್ಮ ಬಸ್ ಅಲ್ಲಿ ತಲಪಿದಾಗ, ಮೊತ್ತ ಮೊದಲಾಗಿ ನಾವೆಲ್ಲರೂ ಅಲ್ಲಿಯ ರಸ್ತೆಯನ್ನು ಕಂಡು ಆಶ್ಚರ್ಯ, ಕುತೂಹಲಗಳಿಂದ ಬಾಲಣ್ಣನವರಲ್ಲಿ ಕೇಳಿದ ಪ್ರಶ್ನೆ, “ಆ ದೊಡ್ಡ ರಥ ಎಳೆಯುವ ರಸ್ತೆ ಇದುವೇ?!”.
ಅದಾಗಲೇ ಮಧ್ಯಾಹ್ನ ಒಂದು ಗಂಟೆಯಾಗಿತ್ತು. ಚಂಡಮಾರುತದಿಂದಾಗಿ ಅತ್ಯಂತ ಹೆಚ್ಚು ಹಾನಿಗೊಳಗಾದ ಜಾಗಗಳಲ್ಲಿ ಇದೂ ಒಂದು. ಅದಾಗಲೇ ಆಪತ್ತು ಒದಗಿ ಹತ್ತು ದಿನಗಳ ಮೇಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಹೆಚ್ಚಿನ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು. ಜನಜೀವನ ತಹಬಂದಿಗೆ ಬರಲು ಪ್ರಾರಂಭವಾಗಿತ್ತು. ಭಕ್ತರ ಸಂಖ್ಯೆಯಂತೂ ತುಂಬಾ ವಿರಳ. ಆಯೋಜಿಸಲ್ಪಟ್ಟಿದ್ದ ಕಾರ್ಯಕ್ರಮದಂತೆ ಪುರಿಯಲ್ಲಿಯೇ ಎರಡು ದಿನಗಳಿಗೆ ನಮಗಾಗಿ ಒಳ್ಳೆಯ ಲಗ್ಸುರಿ ಹೋಟೆಲ್ (Modern Hotel) ನಲ್ಲಿ ರೂಮುಗಳನ್ನು ಕಾದಿರಿಸಲ್ಪಟ್ಟಿತ್ತಾದರೂ ಆ ಕಟ್ಟಡವೂ ಹಾನಿಗೊಳಗಾಗಿ ಅಲ್ಲಿಯ ಮಾಲಕರು, ಕಾರ್ಮಿಕರೆಲ್ಲ ಅತಂತ್ರ ಸ್ಥಿತಿಯಲ್ಲಿದ್ದರು. ಅದೇ ಸಮಯದಲ್ಲೇ ನಮ್ಮ ಪುರಿ ಶ್ರೀ ಜಗನ್ನಾಥ ದೇವರ ದರ್ಶನದ ದಿನವೂ ನಿಗದಿಯಾಗಿತ್ತು. ಆಮೇಲೆ ನಡೆದ ದುರಂತದಿಂದಾಗಿ, ನಮ್ಮ ಟೂರ್ ಮೆನೇಜರ್, ದೇವರ ದರ್ಶನ ಭಾಗ್ಯ ಸಿಗುವುದು ದುಸ್ತರವೆಂದು ಮನವರಿಕೆಯಾಗಿದ್ದರೂ ಅಲ್ಲಿಯ ಅರ್ಚಕರಿಗೆ ಕಷ್ಟಪಟ್ಟು ಫೋನಾಯಿಸಿದಾಗ ಸಿಕ್ಕಿದ ಉತ್ತರ, “ಈಗ ನೀವಿಲ್ಲಿಗೆ ಬರಲೇ ಬೇಡಿ”. ಆದರೂ ದೇವರ ಅನುಗ್ರಹವಿದ್ದರೆ ಅವರ ದರ್ಶನ ಸಿಗಬಹುದು ಎಂಬ ನಂಬಿಕೆಯೊಂದಿಗೆ ನಮ್ಮನ್ನು ಕರೆತಂದಿದ್ದರು..ಹಾಗೆಯೇ ಆಯಿತು.
ಬಸ್ಸಿನಿಂದಿಳಿದಾಗ ಧಗ ಧಗ ಬೇಸಿಗೆಯ ಕಾವು ಸಹಜವಾಗಿಯೇ ನಮಗೆಲ್ಲ ತಟ್ಟಿದ್ದರೂ, ಉತ್ಸಾಹ ಮಾತ್ರ ಒಂದಿನಿತೂ ಕುಂದಿರಲಿಲ್ಲ. ವಿದ್ಯುತ್ ಮತ್ತು ನೀರಿನ ಕೊರತೆಯಿಂದಾಗಿ, ಪ್ರಯಾಣದ ಆಯಾಸವನ್ನು ಪರಿಹರಿಸುವ, ಸುವ್ಯವಸ್ಥಿತ ಶೌಚಾಲಯದ ಕೊರತೆಯಿತ್ತು. ಆದರೂ ಬಾಲಣ್ಣನವರು ಅವರ ಪರಿಚಯದವರಲ್ಲಿ ಮಾತಾಡಿ, ಹೇಗೋ ನಮಗೆ ತುರ್ತು
ವ್ಯವಸ್ಥೆಯನ್ನು ಏರ್ಪಡಿಸಿದರು. ಚಪ್ಪಲಿಗಳು, ಮೊಬೈಲ್ ಗಳನ್ನೆಲ್ಲ ಒಂದು ಕೋಣೆಯಲ್ಲಿಟ್ಟು ಸ್ವಲ್ಪ ಬಾಳೆಹಣ್ಣುಗಳನ್ನು ಹೊಟ್ಟೆಗೆ ಸೇರಿಸಿ ಬಳಿಯಲ್ಲೇ ಇದ್ದ ದೇಗುಲದೆಡೆಗೆ ತೆರಳಿದರೆ, ರಸ್ತೆಯಲ್ಲಿ ಹೆಜ್ಜೆ ಇಡಲೇ ಕಷ್ಟ.. ಕಾದ ಕಾವಲಿಯಂತೆ ಸುಡುತ್ತಿತ್ತು. ಗಣೇಶಣ್ಣ ನಮಗೆಲ್ಲಾ, ರಸ್ತೆ ದಾಟುವುದು ಹೇಗೆಂದು ಜೋರಾಗಿ ಓಡಿ ತೋರಿಸಿಕೊಟ್ಟರು! ರಸ್ತೆಯ ಬದಿಯಲ್ಲಿ ಒಂದು ಕಡೆಗೆ, ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ಪೇರಿಸಿಟ್ಟರೆ, ಅಲ್ಲೇ ಪಕ್ಕದಲ್ಲಿ ಕೆಲವರು, ಪೋಲೀಸ್ ಕಾವಲಿನಲ್ಲಿ ಅವುಗಳನ್ನು ಹದವಾಗಿ ಕೆತ್ತುತ್ತಿದ್ದರು. ನನಗೆ ಅದನ್ನು ನೋಡುವಾಗ, ಚಂಡಮಾರುತಕ್ಕೆ ಸಿಕ್ಕಿ ಉರುಳಿ ಬಿದ್ದ ಮರಗಳನ್ನು ಏನೋ ಮಾಡುತ್ತಿರುವಂತೆನಿಸಿತು. ಆದರೂ ಏನೆಂದು ವಿಚಾರಿಸಿದಾಗ ನಿಜವಾಗಿಯೂ ಆಶ್ಚರ್ಯಗೊಂಡೆ. ದೇವಾಲಯದ ಜಾತ್ರೋತ್ಸವದಲ್ಲಿ ಎಳೆಯಲ್ಪಡುವ ಮೂರೂ ರಥಗಳನ್ನು ಮರು ವರುಷ ಮರುಬಳಕೆ ಮಾಡುವಂತಿಲ್ಲ. ಅದರ ಕಟ್ಟಿಗೆಯನ್ನೆಲ್ಲಾ ದೇವರ ನೈವೇದ್ಯ ತಯಾರಿಸುವ ಪಾಕ ಶಾಲೆಯಲ್ಲಿ ಉಪಯೋಗಿಸಲ್ಪಡುತ್ತದೆ. ಮುಂದಿನ ವರುಷದ ಜಾತ್ರಾ ರಥದ ತಯಾರಿ ಆರಂಭಗೊಂಡಿತ್ತು…ಕಹಿಬೇವಿನ ಮರದ ದಿಮ್ಮಿಗಳಿಂದ. ಅದಾಗಲೇ ಮಧ್ಯಾಹ್ನ ಒಂದು ಗಂಟೆಯಾದ್ದರಿಂದ ದರ್ಶನವು ಅಸಾಧ್ಯವೇನೋ ಅಂದುಕೊಂಡೆವು. ನಮ್ಮ ಊಟವು ಭುಬನೇಶ್ವರದಲ್ಲಿ ನಾವು ಉಳಕೊಂಡಿದ್ದ ಹೋಟೆಲ್ ನಲ್ಲಿ ತಯಾರಿಸಿ ತರಬೇಕಿತ್ತು..ಅದಕ್ಕಾಗಿ ಸ್ವಲ್ಪ ಸಮಯಾವಕಾಶವಿತ್ತು. ಆದ್ದರಿಂದ ದೇಗುಲದ ಮುಂಭಾಗದಲ್ಲಿ ಸ್ವಲ್ಪ ಅಡ್ಡಾಡಿದಾಗ, ಅಲ್ಲಲ್ಲಿ ಪುಟ್ಟ ಪುಟ್ಟ ಮಡಿಕೆಗಳಲ್ಲಿ ತುಂಬಾ ಅನ್ನ ಇರಿಸಿದ್ದು ಗಮನಕ್ಕೆ ಬಂತು. ಯಾರೂ ಅದನ್ನು ತಿನ್ನುವುದಾಗಲೀ, ಪ್ರಸಾದದಂತೆ ವಿತರಿಸುವುದಾಗಲೀ ಕಾಣಲಿಲ್ಲ. ದೇವರ ದರ್ಶನಕ್ಕೋಸ್ಕರ ಹಾಗೂ ದೇಗುಲದ ಶಿಖರದಲ್ಲಿರುವ ಪತಾಕೆಗಳನ್ನು ಬದಲಾಯಿಸುವ ವಿಶೇಷ ಆಕರ್ಷಕ, ಕುತೂಹಲಕಾರಿ ಕಾರ್ಯಕ್ರಮ ವೀಕ್ಷಣೆಗೆ ನಾಲ್ಕೂವರೆ ಗಂಟೆ ವರೆಗೆ ಕಾಯಬೇಕಿತ್ತು.
ದೇಗುಲದೊಳಗೆ ದೇವರ ದರುಶನ ಸಿಗಲಾರದೇನೋ ಎಂದುಕೊಳ್ಳುತ್ತಿರುವಾಗಲೇ ಬಾಲಣ್ಣನವರು ಪ್ರಯತ್ನಪಟ್ಟು ಅರ್ಚಕರೊಬ್ಬರನ್ನು(ಪಂಡಾ) ಕರೆತಂದರು. ಅವರೇ ಮುಂದೆ ನಮ್ಮ ಗೈಡ್.ಜಗನ್ನಾಥ ದೇವರ ದರುಶನದ ಜೊತೆಗೆ ಅಲ್ಲಿಯ ಇತಿಹಾಸ, ಸ್ಥಳ ಪುರಾಣ ಇತ್ಯಾದಿಗಳನ್ನು ತಿಳಿಯುವ ಕುತೂಹಲ ಎಲ್ಲರಲ್ಲೂ. ಆಕಡೆ ಈಕಡೆ ನೋಡಲು ಹೋದವರನ್ನೆಲ್ಲಾ ಒಗ್ಗೂಡಿಸಿ ಅವರೊಡನೆ ಹೊರಟಾಗ,ಅವರು ನಮ್ಮನ್ನೆಲ್ಲ ಮೊತ್ತ ಮೊದಲಾಗಿ ದೇವಸ್ಥಾನದ ಮುಂಭಾಗಕ್ಕೆ ಕರೆದೊಯ್ದುರು. ಅಗಲವಾದ ಮೆಟ್ಟಲುಗಳು, ಒಟ್ಟು ಇಪ್ಪತ್ತೆರಡು. ಪ್ರತೀ ಮೆಟ್ಟಲು ಏರುವಾಗಲೂ, ತುಂಬಾ ಮಹತ್ವವುಳ್ಳ ಇಪ್ಪತ್ತೆರಡು ಅಕ್ಷರಗಳ “ಶ್ರೀ ಕೃಷ್ಣ ಗೋವಿಂದ ಹರೇ ಮುರಾರೇ, ಹೇ ನಾಥ ನಾರಾಯಣ ವಾಸುದೇವ” ಎಂಬ ಶ್ಲೋಕವನ್ನು ಪಠಿಸುತ್ತಾ ಏರಲು ನಮಗೆಲ್ಲಾ ಮಾರ್ಗದರ್ಶನವನ್ನಿತ್ತರು.. ಹಾಗೆಯೇ ನಾವೆಲ್ಲರೂ ಶ್ಲೋಕ ಪಠಿಸುತ್ತಾ ಮೆಟ್ಟಲೇರತೊಡಗಿದೆವು..
(ಮುಂದುವರಿಯುವುದು..)
ಹಿಂದಿನ ಪುಟ ಇಲ್ಲಿದೆ : ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 8
-ಶಂಕರಿ ಶರ್ಮ, ಪುತ್ತೂರು.
ವಾರದಿಂದ ವಾರಕ್ಕೆ ಪ್ರವಾಸ ಕಥನ ಕುತೂಹಲ ಹೆಚ್ಚಿಸುತ್ತಾ ಹೋಗುತ್ತಿದೆ. ತುಂಬಾ ಚೆನ್ನಾಗಿದೆ .
ಧನ್ಯವಾದಗಳು ನಯನ ಮೇಡಂ.
ಪ್ರತಿಯೊಂದು ಕಂತನ್ನೂ ಬಹಳ ಸುಂದರವಾಗಿ ನಿರೂಪಿಸುತ್ತೀರಿ ಮೇಡಮ್..
ಧನ್ಯವಾದಗಳು ಮೇಡಂ.