ಅಂಗರಚನಾ ಶಾಸ್ತ್ರ(Anatomy)ದ ಉಪನ್ಯಾಸಕಿಯಾಗಿ ನನ್ನ ಪಯಣ

Share Button

ಸುಮಾರು 10 ವರ್ಷಗಳ ಹಿಂದೆ ಆಯುರ್ವೇದ ಸ್ನಾತಕೋತ್ತರ ವೈದ್ಯಕೀಯ ಪದವಿಯ ಪ್ರವೇಶ ಪ್ರಕ್ರಿಯೆಯ ಭಾಗವಾಗಿ ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಪತಿಯೊಂದಿಗೆ ಭಾಗವಹಿಸಿದ್ದ ನಾನು ಅಳುವುದೊಂದೇ ಬಾಕಿ. ಯಾಕೆಂದರೆ, ವೈದ್ಯರಾಗಿದ್ದ ಹಾಗೂ ಅದಾಗಲೇ ವೈದ್ಯಕೀಯ ಕ್ಷೇತ್ರದ ಆಗುಹೋಗುಗಳನ್ನು ಚೆನ್ನಾಗಿ ಅರಿತಿದ್ದ ಪತಿಯ ಸಲಹೆ(ಒತ್ತಾಯ ಕೂಡ)ಯ ಮೇರೆಯಂತೆ ನನ್ನ ಸ್ನಾತಕೋತ್ತರ ವಿಭಾಗವಾಗಿ ಅಂಗರಚನಾ ಶಾಸ್ತ್ರ(Anatomy)ವನ್ನು ನಾನು ಆರಿಸಬೇಕಾಯಿತು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಎಂದೇ ಹೆಸರುವಾಸಿಯಾಗಿರುವ ಅಂಗರಚನಾ ಶಾಸ್ತ್ರವನ್ನು ನಾನು ನನ್ನ ಉನ್ನತ ಶಿಕ್ಷಣದ ಮೂರು ವರ್ಷಗಳಲ್ಲಿ ಅಭ್ಯಸಿಸಬೇಕಾಗಿತ್ತು. ನನ್ನ ಮುಂದಿನ ಔದ್ಯೋಗಿಕ ಜೀವನವನ್ನು ಮೃತದೇಹಗಳನ್ನು ಛೇದಿಸುತ್ತಾ ಫೋರ್ಮಾಲಿನ್‌ನ ಘಾಟು ವಾಸನೆಯೊಂದಿಗೆ ಕಳೆಯಬೇಕು ಎಂಬುದನ್ನು ಅರಗಿಸಿಕೊಳ್ಳಲು ನನಗೆ ಹಲವಾರು ದಿನಗಳೇ ಬೇಕಾದವು. ಆದರೆ ಕಾಲೇಜು ಆರಂಭವಾಗಿ ದಿನಗಳುರುಳುತ್ತಿದ್ದಂತೆಯೇ ಓದುತ್ತಾ ಓದುತ್ತಾ ಅಂಗರಚನಾ ಶಾಸ್ತ್ರದಲ್ಲಿ ನನ್ನ ಆಸಕ್ತಿಯು ಚಿಗುರತೊಡಗಿತು. ಹಾಗೆಯೇ ನಾನು ನನ್ನ ವಿಭಾಗವನ್ನು ಇಷ್ಟಪಡತೊಡಗಿದೆ.
ಅಂಗರಚನಾ ಶಾಸ್ತ್ರದ ಕಿರುಪರಿಚಯವನ್ನು ನಿಮ್ಮ ಮುಂದಿಡುತ್ತೇನೆ.

ಶರೀರದ ಅಂಗಾಂಗಗಳ ರಚನೆಯ ಕುರಿತಾದ ವಿಸ್ತೃತ ವಿವರಣೆಯನ್ನು ನೀಡುವ ಅಧ್ಯಯನ ಶಾಖೆಗೆ ಅಂಗರಚನಾ ಶಾಸ್ತ್ರ ಎನ್ನುತ್ತಾರೆ. ಇದು ಯಾವುದೇ ವೈದ್ಯಕೀಯ ಪದ್ಧತಿಯ ಪ್ರಥಮ ವರ್ಷದ ಅಧ್ಯಯನ ವಿಷಯವಾಗಿರುತ್ತದೆ. ಯಾಕೆಂದರೆ ಶರೀರದ ಅಂಗಾಂಗಗಳ ಬಗೆಗೆ ಸರಿಯಾದ ತಿಳುವಳಿಕೆ ಇಲ್ಲದೆ ರೋಗಿ ಪರೀಕ್ಷೆ ಹಾಗೂ ಚಿಕಿತ್ಸಾಕ್ರಮವನ್ನು ಕಲಿಯಲು ಸಾಧ್ಯವೇ ಇಲ್ಲ. ಇದರಲ್ಲಿ ಹಲವಾರು ವಿಷಯಗಳ ಅಧ್ಯಯನ ಮಾಡಬೇಕಾಗುತ್ತದೆ. ಉದಾ: ಅಸ್ಥಿಗಳ ಅಧ್ಯಯನ(Osteology), ಮಾಂಸ ಪೇಶಿಗಳ ಅಧ್ಯಯನ(Myology), ನರವ್ಯೂಹದ ಅಧ್ಯಯನ(Neuroanatomy), ರಕ್ತನಾಳಗಳ ಅಧ್ಯಯನ (Angiology), ಮಾನವ ದೇಹದ ಬೆಳವಣಿಗೆಯ ಅಧ್ಯಯನ(Developmental anatomy), ಹೃದಯ ಮತ್ತಿತರ ಅಂಗಾಂಗ ವ್ಯೂಹಗಳ ಅಧ್ಯಯನ(Systemic anatomy) ಮೊದಲಾದವುಗಳು. ಜೊತೆಗೆ ಆಯುರ್ವೇದ ಪದ್ಧತಿಯಾದುದರಿಂದ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಿರುವಂತಹ ಅಂಗರಚನಾ ಶಾಸ್ತ್ರದ ವಿಷಯಗಳನ್ನೂ ಕಲಿಯಬೇಕಾಗುತ್ತದೆ. ಗರ್ಭಸ್ಥ ಶಿಶುವಿನ ಮಾಸಾನುಮಾಸಿಕ ಬೆಳವಣಿಗೆ, ವರ್ಣತಂತುಗಳು, ವಂಶವಾಹಿ ಕಾಯಿಲೆಗಳು, ಆಂತರಿಕ ಅಂಗಾಂಗಗಳು ಮೊದಲಾದ ವಿಷಯಗಳ ಬಗೆಗೆ ಶ್ಲೋಕಾಧಾರ ಸಹಿತವಾಗಿ ಗ್ರಂಥಗಳಲ್ಲಿ ವಿವರಿಸಲಾಗಿದೆ. ಸಹಸ್ರಾರು ವರ್ಷಗಳ ಹಿಂದೆಯೇ ಯಾವುದೇ ಆಧುನಿಕ ಉಪಕರಣಗಳ ಸಹಾಯವಿಲ್ಲದೆಯೇ ಹೇಗೆ ಇವನ್ನೆಲ್ಲಾ ಹೇಗೆ ಸಂಶೋಧಿಸಿದರು ಎಂಬುದು ಅತ್ಯಂತ ಆಶ್ಚರ್ಯಕರವಾದ ವಿಷಯವಾಗಿದೆ.

ಇವುಗಳ ಜೊತೆಗೆ ಪ್ರಾಯೋಗಿಕ ಅಧ್ಯಯನ(Practical study)ಕ್ಕಾಗಿ ಶವಛೇದನ(Dissection) ತರಗತಿಗಳಿರುತ್ತವೆ. ನಿಮಗೆಲ್ಲಾ ತಿಳಿದಿರುವಂತೆಯೇ ವಿದಾರ್ಥಿಗಳ ಅಧ್ಯಯನಕ್ಕಾಗಿ ಸರಕಾರಿ ಆಸ್ಪತ್ರೆಗಳಿಂದ ವಾರಸುದಾರರಿಲ್ಲದ ವ್ಯಕ್ತಿಗಳ ಮೃತದೇಹವನ್ನು ವೈದ್ಯಕೀಯ ಕಾಲೇಜುಗಳಿಗೆ ನೀಡಲಾಗುತ್ತದೆ. ಈಗೀಗ ದೇಹದಾನದ ಕುರಿತು ಜಾಗೃತಿ ಮೂಡುತ್ತಿರುವುದರಿಂದ ಸ್ವ ಇಚ್ಛೆಯಿಂದ ದೇಹದಾನ ಮಾಡುವವರೂ ಇರುತ್ತಾರೆ. ಇಂತಹ ಮೃತದೇಹಗಳಿಗೆ ಫೋರ್ಮಾಲಿನ್ ಎಂಬ ರಾಸಾಯನಿಕ ದ್ರಾವಣವನ್ನು ವಿಶೇಷ ವಿಧಾನದ ಮೂಲಕ ಸೇರಿಸಿ, ಅದೇ ದ್ರಾವಣವಿರುವ ಟ್ಯಾಂಕ್ ನಲ್ಲಿ ಮುಳುಗಿಸಿ ಸಂರಕ್ಷಿಸಿ ಇರಿಸಲಾಗುತ್ತದೆ. ನಂತರ ತರಗತಿಗಳಿಗೆ ಅಗತ್ಯವಿರುವಾಗ ಹೊರತೆಗೆದು ಉಪಕರಣಗಳ (ಬ್ಲೇಡ್, ಫೋರ್ಸೆಪ್, ಕತ್ತರಿ ಮೊದಲಾದ) ಸಹಾಯದಿಂದ ಛೇದನವನ್ನು ನಡೆಸಿ ಅಧ್ಯಯನ ಮಾಡಲಾಗುತ್ತದೆ. ಫೋರ್ಮಾಲಿನ್ ದ್ರಾವಣವು ಅತ್ಯಂತ ತೀಕ್ಷ್ಣವಾದ ಘಾಟನ್ನು ಹೊಂದಿದ್ದು ಕಣ್ಣುರಿ, ತಲೆಸುತ್ತು, ವಾಂತಿ, ಉಸಿರಾಟದ ಸಮಸ್ಯೆ, ಚರ್ಮದ ಅಲರ್ಜಿ ಮೊದಲಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆದುದರಿಂದ ಗ್ಲೌಸ್, ಮಾಸ್ಕ್, ಏಪ್ರನ್ ಗಳನ್ನು ಧರಿಸಿಯೇ ಶವಛೇದನ ಮಾಡಬೇಕು.

ನಾವು ಸ್ನಾತಕೋತ್ತರ ವಿದ್ಯಾರ್ಥಿಗಳಾದುದರಿಂದ ಕೆಲವೊಮ್ಮೆ ದಿನಪೂರ್ತಿ ಶವಛೇದನಾಗಾರ(Dissection hall)ದಲ್ಲೇ ಕಳೆಯಬೇಕಾಗುತ್ತಿತ್ತು. ಇದರ ಜೊತೆಗೆ ದ್ವಿತೀಯ ವರ್ಷದಲ್ಲಿರುವಾಗ ನಮ್ಮ ಅಧ್ಯಯನದ ಭಾಗವಾಗಿ ಒಂದು ವರ್ಷದವರೆಗೆ ಪದವಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ತರಗತಿಗಳನ್ನು ನಡೆಸಬೇಕಾಗಿತ್ತು. ಇದನ್ನು ನಾನು ನನ್ನ ಸುಯೋಗವೆಂದೇ ಭಾವಿಸುತ್ತೇನೆ. ಯಾಕೆಂದರೆ ಇದು ನನ್ನಲ್ಲಿ ಬೋಧಕ ವೃತ್ತಿಯ ಕುರಿತು ಆಸಕ್ತಿಯನ್ನು ಹೆಚ್ಚಿಸಿದ್ದಲ್ಲದೆ ನನ್ನ ಅಧ್ಯಾಪನ ವೃತ್ತಿಗೆ ಉತ್ತಮ ಅಡಿಪಾಯವನ್ನೇ ಹಾಕಿತು. ಹೀಗೆ ಮೂರು ವರ್ಷದ ಉನ್ನತ ಶಿಕ್ಷಣವನ್ನು ಗಳಿಸಿ ಎಂ.ಡಿ ಪದವಿಯೊಂದಿಗೆ ಹೊರಬರುವಾಗ ಅಂಗರಚನಾ ಶಾಸ್ತ್ರವು ನನಗೆ ಅತ್ಯಂತ ಆಪ್ತವಾಗಿಬಿಟ್ಟಿತ್ತು.

ಹಾಗೆಯೇ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ನನ್ನ ವೃತ್ತಿ ಜೀವನವನ್ನು ಆರಂಭಿಸಿದೆನು. ಅಂಗರಚನಾ ಶಾಸ್ತ್ರವು ಆಯುರ್ವೇದ ಪದವಿಯ ಪ್ರಥಮ ವರ್ಷದ ಹಾಗೂ ಕಷ್ಟದ ವಿಷಯವಾದುದರಿಂದ ವಿದ್ಯಾರ್ಥಿಗಳಲ್ಲಿ ಅದರ ಕುರಿತು ಆಸಕ್ತಿಯನ್ನು ಬೆಳೆಸುವುದು ಹಾಗೂ ಅವರಿಗೆ ಮನದಟ್ಟಾಗುವಂತೆ ಮಾಡುವುದು ಸವಾಲಿನ ಸಂಗತಿಯಾಗಿತ್ತು. ವಿಷಯದ ಬಗೆಗಿನ ಅಳುಕು ಅವರ ಮುಖದಲ್ಲೇ ಕಾಣಿಸುತ್ತಿರುತ್ತದೆ. ನಾನು ಅವರಿಗೆ ಮೊದಲ ಕ್ಲಾಸ್‌ನಲ್ಲಿ ಹೇಳುತ್ತೇನೆ ಯಾವುದೇ ವಿಷಯವನ್ನು ಕಷ್ಟ ಎಂದುಕೊಂಡು ಓದಬೇಡಿ, ಇಷ್ಟಪಟ್ಟು ಓದಿ, ನೀವು ಸಬ್ಜೆಕ್ಟ್ ಅನ್ನು ಇಷ್ಟಪಟ್ಟರೆ ಅದು ನಿಮ್ಮ ಕೈ ಹಿಡಿಯುತ್ತದೆ ಎಂದು. ಇನ್ನು ಮೊದಮೊದಲ ಪ್ರಯೋಗಿಕ ತರಗತಿಗಳಿಗಂತೂ ಅವರು ಭಯ ಹಾಗೂ ಕುತೂಹಲ ಮಿಶ್ರಿತ ಮುಖದೊಂದಿಗೆ ಬರುತ್ತಾರೆ. ಕೆಲವರು ಶವಛೇದನಾಗಾರದ ಒಳ ಬರುತ್ತಿದ್ದಂತೆಯೇ ಘಾಟನ್ನು ಎದುರಿಸಲಾರದೆಯೇ ಹೊರಗೋಡುತ್ತಾರೆ. ನಾವು ಪಾಠಮಾಡುವಾಗಲಂತೂ ಅವರ ಮುಖವನ್ನೇ ಗಮನಿಸುತ್ತಿರಬೇಕಾಗುತ್ತದೆ. ಯಾಕೆಂದರೆ ಯಾರೂ ಯಾವುದೇ ಕ್ಷಣದಲ್ಲೂ ಧೊಪ್ಪನೆ ಬೀಳುವ ಸಂಭವವಿರುತ್ತದೆ. ಅಂತಹವರಿಗೆ ಪ್ರಥಮ ಚಿಕಿತ್ಸೆಯನ್ನು ಕೊಟ್ಟು ತರಗತಿ ಮುಂದುವರೆಯುತ್ತದೆ. ಸಾಧಾರಣ ಒಂದು ತಿಂಗಳವರೆಗೆ ಈ ರೀತಿಯಾಗಿ ನಂತರ ತರಗತಿಗೆ ಹೊಂದಿಕೊಳ್ಳುತ್ತಾರೆ.

ಮೊದಲ ಬಾರಿಗೆ ಶವಛೇದನ ಮಾಡುವುದೆಂದರೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಆಸಕ್ತಿ. ಆ ಅನುಭವವನ್ನು ತಮ್ಮ ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಹುಮ್ಮಸ್ಸಿನ್ನಲ್ಲಿರುತ್ತಾರೆ. ನಡುಗುವ ಕೈಗಳಿಂದ, ಹಣೆಯಿಂದ ಒಸರುವ ಬೆವರನ್ನು ಒರೆಸಿಕೊಳ್ಳುತ್ತಾ ಕೊಯ್ಯಲು ತೊಡಗುತ್ತಾರೆ. ಕೆಲವೊಮ್ಮೆ ಕೈ ನಡುಗಿ ಬ್ಲೇಡ್ ಜಾರಿ ಬೀಳುವುದು.ಅಥವಾ ತಮ್ಮ ಕೈಗೋ ಕಾಲಿಗೋ ಗಾಯ ಮಾಡಿಕೊಳ್ಳುವುದೂ ಉಂಟು. ಒಬ್ಬಳು ವಿದ್ಯಾರ್ಥಿನಿಯಂತೂ ಛೇದಿಸಲು ತೊಡಗುತ್ತಿದ್ದಂತೆಯೇ ಅಳತೊಡಗಿದಳು. ಕಾರಣ ಕೇಳಿದರೆ ‘ಮೇಡಮ್, ನಂಗೆ ಈ ರೀತಿ ಗಾಯ ಮಾಡಲು ಬೇಜಾರಾಗುತ್ತಿದೆ, ಇದು ನನ್ ಕೈಲಾಗೋಲ್ಲ’ ಎಂದು ನಿಲ್ಲಿಸಿಯೇ ಬಿಟ್ಟಳು. ಅವಳಿಗೆ ವೈದ್ಯರಾಗಲು ಈ ರೀತಿಯ ಅಧ್ಯಯನ ಅನಿವಾರ್ಯ ಎಂದು ಮನವರಿಕೆ ಮಾಡಿ ಪುನ: ಶುರು ಮಾಡಲು ಸೂಚಿಸಬೇಕಾಯಿತು. ಇನ್ನು ಶರೀರದ ಆಂತರಿಕ ಅಂಗಗಳಾದ ಹೃದಯ, ಶ್ವಾಸಕೋಶ, ಜಠರ, ಕರುಳು, ಪಿತ್ತಕೋಶ, ಕಿಡ್ನಿ ಮೊದಲಾದವುಗಳನ್ನು ಹೊರತೆಗೆದು ಅವರ ಕೈಯಲ್ಲಿ ಕೊಟ್ಟಾಗಲಂತೂ ಅವರ ಆಶ್ಚರ್ಯ ಮಿತಿಮೀರಿರುತ್ತದೆ. ಆ ತರಗತಿಗಳಲ್ಲಿಮುಂದೆ ನಿಲ್ಲಲು ನೂಕುನುಗ್ಗಲು ಆಗಿ ಕೊನೆಗೆ ಕೆಲವರು ಕಾಣುವುದಿಲ್ಲವೆಂದು ಸ್ಟೂಲ್ ಮೇಲೆ ನಿಂತು ನೋಡಬೇಕಾಗುತ್ತದೆ. ಮಧ್ಯ ಮಧ್ಯದಲ್ಲಿ ಆಹ್, ಓಹ್ ಎಂಬ ಉದ್ಗಾರಗಳೂ ಕೇಳಿಬರುತ್ತವೆ. ಇನ್ನೊಂದು ಪ್ರಮುಖ ತರಗತಿಯೆಂದರೆ ತಲೆಬುರುಡೆ ಹಾಗೂ ಬೆನ್ನು ಮೂಳೆಯನ್ನು ಛೇದಿಸಿ ಮೆದುಳು ಮತ್ತು ಮೆದುಳುಬಳ್ಳಿಯನ್ನು ಹೊರತೆಗೆಯುವುದು. ಇದು ಸ್ವಲ್ಪ ಸಂಕೀರ್ಣ ಹಾಗೂ ಕಠಿಣವಾದ ಕೆಲಸವಾಗಿರುತ್ತದೆ. ಇದನ್ನು ಮಾಡಲು ಅವರೊಳಗೆ ಭಾರಿ ಪೈಪೋಟಿಯಿರುತ್ತದೆ. ಆ ದಿನವಂತೂ ಅವರ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿರುವುದರಿಂದ  100% ಹಾಜರಿಯಿರುತ್ತದೆ.

ಶವಛೇದನಾಗಾರವು ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಂದು ದೇಗುಲಕ್ಕೆ ಸಮನಾಗಿರುತ್ತದೆ. ಹಾಗೆಯೇ ಒಂದೊಂದು ಮೃತದೇಹವನ್ನೂ ನಾವು ಅತ್ಯಂತ ಗೌರವದಿಂದ ಕಾಣುತ್ತೇವೆ. ಆದುದರಿಂದ ಅಲ್ಲಿ ಶಿಸ್ತಿಗೆ ಪ್ರಾಮುಖ್ಯತೆಯನ್ನು ಕೊಡುತ್ತೇವೆ.ಅಶಿಸ್ತಿನ ವರ್ತನೆ ಕಂಡುಬಂದಲ್ಲಿ ಅಂತಹ ವಿದ್ಯಾರ್ಥಿಗಳು ಶಿಕ್ಷೆಗೆ ಗುರಿಯಾಗುತ್ತಾರೆ. ಯಾಕೆಂದರೆ ಮುಂದೆ ವೈದ್ಯರಾಗುವ ವಿದ್ಯಾರ್ಥಿಗಳು ಶಿಸ್ತು, ತಾಳ್ಮೆ, ಉತ್ತಮ ನಡತೆ ಮೊದಲಾದ ಗುಣಗಳನ್ನು ಕಲಿಕೆಯ ಸಂದರ್ಭದಲ್ಲಿಯೇ ಮೈಗೂಡಿಸಿಕೊಳ್ಳಬೇಕು.

ಪ್ರಾಯೋಗಿಕ ಕ್ಲಾಸ್‌ಗಳೆಂದರೆ ನನಗೆ ಬಹಳ ಇಷ್ಟ. ಯಾಕೆಂದರೆ ವಿದ್ಯಾರ್ಥಿಗಳ ಜೊತೆ ಮುಕ್ತವಾಗಿ ಮಾತಾಡಲು ಹಾಗೂ ಚರ್ಚಿಸಲು ಇಲ್ಲಿ ಅವಕಾಶ ಸಿಗಿತ್ತದೆ. 2 ಗಂಟೆಯ ತರಗತಿಯಾದುದರಿಂದ ಮಧ್ಯದಲ್ಲಿ ವಿರಾಮದ ಅವಶ್ಯಕತೆಯಿರುತ್ತದೆ. ಈ ಸಮಯದಲ್ಲಿ‌ ಅವರಿಗೆ ಹಲವಾರು ಸಂಶಯಗಳನ್ನು ಪರಿಹರಿಸಲು ಅವಕಾಶವಾಗುತ್ತಿತ್ತು. ಕೆಲವೊಮ್ಮೆ ನನ್ನ ಪಾಠದಲ್ಲಿನ ತಪ್ಪನ್ನು ಹುಡುಕಿ ಸೂಚಿಸಿದಾಗ ನಾನು ಅದಕ್ಕೆ ನಾಚಿಕೊಂಡದ್ದೂ ಇದೆ. ನಾನೂ ವಿರಾಮದ ಸಮಯದಲ್ಲಿ ಅವರನ್ನು ಮಾತಿಗೆಳೆಯುತ್ತಿದ್ದೆ. ವೈದ್ಯಕೀಯ ಕಾಲೇಜಾದುದರಿಂದ ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ತರಗತಿಯಲ್ಲಿರುತ್ತಾರೆ. ಮುಖ್ಯವಾಗಿ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಹರಿಯಾಣ, ಗುಜರಾತ್, ಹಿಮಾಚಲ ಪ್ರದೇಶ, ಛತ್ತೀಸ್ ಘಡ, ಅಸ್ಸಾಂ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಕೇರಳ ,ಲಕ್ಷದ್ವೀಪ ಮೊದಲಾದ ಕಡೆಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಭಾರತದ ನೆರೆಯ ದೇಶಗಳಾದ ಭೂತಾನ್ ಮತ್ತು ನೇಪಾಳದ ವಿದ್ಯಾರ್ಥಿಗಳೂ ಇರುತ್ತಾರೆ. ನಾನು ಅವರ ನಾಡು, ಭಾಷೆ, ಸಂಸ್ಕೃತಿ, ಆಹಾರ ಮೊದಲಾದ ವಿಷಯಗಳನ್ನು ಕೇಳುತ್ತಿದ್ದರೆ ತಮ್ಮ ಊರು ಹಾಗೂ ಕುಟುಂಬದಿಂದ ದೂರವಿರುತ್ತಿದ್ದ ಅವರೂ ಬಹಳ ಉತ್ಸಾಹದಿಂದಲೇ ವಿವರಿಸುತ್ತಾ ‘ನೀವೂ ನಮ್ಮ ಊರಿಗೆ ಬನ್ನಿ’ ಎಂದು ಪ್ರೀತಿಯಿಂದ ಆಹ್ವಾನಿಸುತ್ತಾರೆ. ಜೊತೆಗೆ ಇಲ್ಲಿನ ಆಹಾರ, ಹವಾಮಾನ, ಭಾಷೆಗೆ ಹೊಂದಿಕೊಳ್ಳಲಾಗದಿರುವುದು, ಆರೋಗ್ಯದಲ್ಲಿನ ಏರುಪೇರು ಮೊದಲಾದ ಸಮಸ್ಯೆಗಳನ್ನು ನನ್ನ ಜೊತೆಗೆ ಹೇಳಿಕೊಳ್ಳುತ್ತಾರೆ. ಅವರನ್ನು ಸಮಾಧಾನಿಸಿ ನನ್ನಿಂದಾದ ರೀತಿಯಲ್ಲಿ ಸಲಹೆಗಳನ್ನು ಕೊಡುತ್ತೇನೆ. ಅವರೊಂದಿಗೆ ಸಂಭಾಷಿಸುತ್ತಾ ನನ್ನ ಭಾಷಾ ಜ್ಞಾನವೂ ತಕ್ಕ ಮಟ್ಟಿಗೆ ವೃದ್ಧಿಯಾಯಿತು.

ನನ್ನ ವೃತ್ತಿಜೀವನದ ಮೊದಲನೇ ಬ್ಯಾಚ್‌ನಲ್ಲಿ ವಯಸ್ಸಿನಲ್ಲಿ ನನಗಿಂತ ಹಿರಿಯರಾದ ಉತ್ತರಭಾರತದ ಇಬ್ಬರು ವಿದ್ಯಾರ್ಥಿಗಳಿದ್ದರು. ನನ್ನನ್ನು ಕೊಂಡೊಡನೆಯೇ ಮೇಡಮ್ ಜೀ, ನಮಶ್ಕಾರ್ ಎಂದು ಕೈಜೋಡಿಸಿ ನಮಸ್ಕರಿಸುತ್ತಿದ್ದರು. ಆಗ ಗುರುವಿನ ಸ್ಥಾನಕ್ಕೆ ಎಷ್ಟು ಮಹತ್ವವಿದೆ ಎಂದು ನಾನು ಆಲೋಚಿಸುತ್ತಿದ್ದೆ.

ವೈದ್ಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಬರವಣಿಗೆಯ ಜೊತೆಗೆ ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆ(Viva Voce)ಗಳಿರುತ್ತವೆ. ತರಗತಿಗಳಲ್ಲಿ ತರಲೆ ಮಾಡುವ ವಿದ್ಯಾರ್ಥಿಗಳು ಮೌಖಿಕ ಪರೀಕ್ಷೆಯಲ್ಲಿ ನಮ್ಮ ಮುಂದೆ ಕೂತು ಚಡಪಡಿಸುವುದನ್ನು ನೋಡುವಾಗ ಒಳಗೊಳಗೇ ನಗುಬರುತ್ತದೆ. ಕೆಲವು ವಿದ್ಯಾರ್ಥಿನಿಯರಂತೂ ಗಂಗಾ ಪ್ರವಾಹವನ್ನೇ ಹರಿಸುತ್ತಾರೆ. ಅಂಗರಚನಾ ಶಾಸ್ತ್ರವು ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಕೆಲವೊಮ್ಮೆ ಕಷ್ಟ ಎನಿಸುವುದುಂಟು. ಓರ್ವ ವಿದ್ಯಾರ್ಥಿನಿಯು ಕಾಲೇಜಿನಿಂದ ನಡೆಸಲ್ಪಡುವ ಆಂತರಿಕ ಪರೀಕ್ಷೆಯಲ್ಲಿ ನಮ್ಮ ವಿಷಯದಲ್ಲಿ ಫೇಲಾಗಿದ್ದಳು. ನನ್ನ ಬಳಿ ಬಂದು ಮೇಡಮ್, ನಾನು ಇದುವರೆಗೆ ಯಾವುದೇ ಪರೀಕ್ಷೆಗಳಲ್ಲಿ ಫೇಲಾಗಿರಲಿಲ್ಲ, ಮೊದಲ ಬಾರಿಗೆ ಫೇಲಾಗಿದ್ದೇನೆ. ನನ್ನ ಹೆತ್ತವರಿಗೆ ಹೇಗೆ ಮುಖ ತೋರಿಸಲಿ ಎಂದು ಅಳತೊಡಗಿದಳು. ಅವಳಿಗೆ ಈ ಫಲಿತಾಂಶವನ್ನು ಛಲದಿಂದ ಸ್ವೀಕರಿಸಿ ವಾರ್ಷಿಕ ಪರೀಕ್ಷೆಗೆ ಚೆನ್ನಾಗಿ ತಯಾರಿ ನಡೆಸು ಎಂದು ಅವಳ ಓದುವ ವಿಧಾನದಲ್ಲಿ ಮಾರ್ಪಾಡನ್ನು ಮಾಡಲು ಹೇಳಿ ಸಮಾಧಾನಿಸಿ ಕಳುಹಿಸಿಕೊಟ್ಟೆನು. ಆ ವಿದ್ಯಾರ್ಥಿನಿ ಅದೇ ವರ್ಷದ ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ಅಂಗರಚನಾ ಶಾಸ್ತ್ರದಲ್ಲಿ ರಾಂಕ್ ಪಡೆದಿದ್ದಳು. ಸಿಹಿಯೊಂದಿಗೆ ನನ್ನ ಬಳಿ ಬಂದು ನನ್ನ ಈ ಸಾಧನೆಗೆ ನಿಮ್ಮ ಪ್ರೋತ್ಸಾಹವೇ ಕಾರಣ ಎಂದಾಗ ಸಾರ್ಥಕತೆಯಿಂದ ನನ್ನ ಮನಸ್ಸು ತುಂಬಿಬಂದಿತ್ತು.

ಶವಛೇದನದ ಮೇಜಿನ ಮೇಲೆ ಬರಿ ಮೈಯಲ್ಲಿ ಮಲಗಿಸಿರುವ ಮೃತದೇಹವನ್ನು ನೋಡುತ್ತಾ ಎಷ್ಟೋ ಬಾರಿ ಹಿರಿಯರ ಈ ಮಾತು ನೆನೆಪಿಗೆ ಬರುತ್ತದೆ. ಆಸ್ತಿ-ಅಂತಸ್ತು,ಸ್ಥಾನ-ಮಾನ ಯಾವುದೂ ಶಾಶ್ವತವಲ್ಲ. ಮರಣಾನಂತರ ನಾವು ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ ಎಂದು. ಈ ಮಾತುಗಳು ಅಕ್ಷರಶ: ಸತ್ಯ ಎಂದು ನನಗನಿಸುತ್ತದೆ. ಆ ಅಪರಿಚಿತ ವ್ಯಕ್ತಿಗಳ ಬದುಕು ಹೇಗಿದ್ದಿರಬಹುದು ಎಂದೆಲ್ಲಾ ಯೋಚಿಸುತ್ತಾ ನನ್ನ ಮನಸ್ಸು ಕೆಲವೊಮ್ಮೆ ಕ್ಷೋಭೆಗೊಳಗಾಗುತ್ತದೆ. ಹಾಗೆಯೇ ಮೊದಲ ಬಾರಿಗೆ ಓರ್ವ ಮಹಿಳೆಯ ಶವ ಛೇದಿಸುವಾಗಲೂ ನಾನು ಸ್ವಲ್ಪ ವಿಚಲಿತಳಾಗಿದ್ದೆ. ಆದರೆ ಕೂಡಲೇ ನನ್ನ ಕರ್ತವ್ಯ ಪ್ರಜ್ಞೆ ನನ್ನನ್ನು ಎಚ್ಚರಿಸಿ ನನ್ನ ಮನಸ್ಸನ್ನು ಹತೋಟಿಗೆ ತರುತ್ತದೆ.

ಈ ರೀತಿ ಕಳೆದ 6 ವರ್ಷಗಳಿಂದ ನನ್ನ ಪಯಣವು ಸಾಗುತ್ತಲೇ ಇದೆ. ವೈದ್ಯಕೀಯ ಶಾಸ್ತ್ರದ ಕುರಿತು ನನ್ನ ಜ್ಞಾನವನ್ನು ಹೆಚ್ಚಿಸಿದ, ಹಲವಾರು ರೀತಿಯಲ್ಲಿ ನನ್ನನ್ನು ತಿದ್ದಿದ, ನನ್ನ ಮನಸ್ಸನ್ನು ಧೃಢಗೊಳಿಸಿದ ಹಾಗೆಯೇ ನೂರಾರು ವಿದ್ಯಾರ್ಥಿಗಳ ಪ್ರೀತಿಯನ್ನು ಗಳಿಸುವಂತೆ ಮಾಡಿದ ಅಂಗರಚನಾ ಶಾಸ್ತ್ರದ ಉಪನ್ಯಾಸಕ ವೃತ್ತಿಯನ್ನು ನಾನು ಈಗ ಅತ್ಯಂತ ಇಷ್ಟಪಡುತ್ತೇನೆ.

– ಡಾ.ಹರ್ಷಿತಾ ಎಂ.ಎಸ್ ,ಬಳ್ಳಾರಿ

52 Responses

  1. Shruthi Sharma says:

    ಇದೊಂದು ಅತ್ಯಂತ ವೈಶಿಷ್ಟ್ಯಮಯವಾದ ಬರಹವೆನಿಸಿತು. All the best to you!!

  2. Hema says:

    ಡಾಕ್ಟರ್ ಅಲ್ಲದವರಿಗೆ ಬಹಳ ಅಪರೂಪದ, ಕೌತುಕಮಯವಾದ ವಿಷಯವಿದು. ನನಗಂತೂ ‘ಹೀಗೂ ಉಂಟೆ’ ಎನಿಸಿತು. ಸರಳ ಸುಂದರ ನಿರೂಪಣೆಯೊಂದಿಗೆ ಲೇಖನವು ಬಹಳ ಸೊಗಸಾಗಿ ಮೂಡಿ ಬಂದಿದೆ. ನಿಮ್ಮ ‘ಪಯಣದ’ ಹಾದಿಯಲ್ಲಿ ಹಲವಾರು ಪ್ರಮುಖ ‘ಮೈಲಿಗಲ್ಲು’ಗಳನ್ನು ಸೃಷ್ಟಿಸಿ ಮುಂದುವರಿಯಿರಿ ಹಾಗೂ ಪ್ರಯಾಣ ಸುಗಮವಾಗಲಿ ಎಂದು ಹಾರೈಸುವೆ.

  3. km vasundhara says:

    ಶವಛೇದನಾಗಾರ= ದೇವಾಲಯಕ್ಕೆ ಸಮಾನ..! ನಿಮ್ಮ ಬರಹ ಅತ್ಯುತ್ತಮವಾಗಿದೆ.. ವೈದ್ಯರನ್ನು ದೇವರಿಗೆ ಹೋಲಿಸಿರುವುದು ಸುಮ್ಮನಲ್ಲ.. ಹೀಗೆಯೇ ನಿಮ್ಮ ವಿಶಿಷ್ಟಾನುಭವಗಳನ್ನು ಬರೆಯುತ್ತಿರಿ..

  4. Krishnaprabha says:

    ವೈದ್ಯೋ ನಾರಾಯಣೋ ಹರಿ ಅರ್ಥಾತ್ ವೈದ್ಯರು ಭಗವಂತ ಸ್ವರೂಪಿಗಳು…ಹಾಗೆಯೇ ವಿದ್ಯೆ ಕಲಿಸುವ ಗುರುಗಳು ದೇವರಿಗೆ ಸಮಾನ. ವೈದ್ಯಕೀಯ ಶಿಕ್ಷಕರಾಗಿರುವ ತಮ್ಮ ಅನುಭವಗಳನ್ನು ಸರಳ ಸುಂದರ ಭಾಷೆಯಲ್ಲಿ ಸುಲಲಿತವಾಗಿ ನಿರೂಪಿಸಿದ್ದೀರಿ. ಧನ್ಯವಾದಗಳು ಡಾಕ್ಟರ್

  5. Dr Raghavendra Prasad bangaradka says:

    ಉತ್ತಮ, ಸ್ವಾನುಭವಯುಕ್ತ ಲೇಖನ

  6. Savithri bhat says:

    ವೈದ್ಯ ವೃತ್ತಿ ಯನ್ನು ಕಲಿಯುವಾಗಿನ ಅನುಭವ,ಕಲಿಸುವ ಅನುಭವ,ಅದರಲ್ಲಿರುವ ನೋವು,ನಲಿವು,ಅಂಗರಚನಾ ಶಾಸ್ತ್ರದ ಪರಿಚಯ,ಬಹಳ ಸರಳ,ಸುಂದರ,ಸ್ಪಷ್ಟ ಅಚ್ಚ ಕನ್ನಡ ನಿರೂಪಣೆ ಅತ್ಯಂತ ಚೆನ್ನಾಗಿ ಮೂಡಿ ಬಂದಿದೆ.. ಧನ್ಯವಾದಗಳು..ಇನ್ನಷ್ಟು ಬರಲಿ

  7. ಸುಮನ ಚಿನ್ಮಯ ಸೊರಬ says:

    ಎಲ್ಲರಿಗೂ ಗೊತ್ತಿರದ ವಿಷಯ ತಿಳಿಸಿಕೊಟ್ಟಂತಾಯಿತು,,ಧನ್ಯವಾದಗಳು ,,,

  8. Shankara Narayana Bhat says:

    ಒಳ್ಳೆಯ ಲೇಖನ. ವೈದ್ಯಕೀಯ ಶಿಕ್ಷಣವನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ಮಾಹಿತಿ ಸಿಗುತ್ತದೆ.

  9. Krishnaveni Kidoor says:

    ಬದುಕಿನ ಅಂತ್ಯದ ಒಂದು ಭಾಗವನ್ನು ಉತ್ತಮವಾಗಿ ಎದುರಿಗಿರಿಸಿದ್ದೀರಿ. ಈ ರೀತಿಯ ಮಾಹಿತಿ ಸಿಗುವುದು ಅಪರೂಪ. ಒಳ್ಳೆಯ ವಿಷಯ ಮುಂದಿಟ್ಟಿದ್ದಕ್ಕಾಗಿ ಅಭಿನಂದನೆಗಳು.

  10. Manjula Chandrashekar says:

    Tumbha Chennai vivarisiddira

  11. Shridhara Bhat Badekkila says:

    ಅಭ್ಯಾಸದ ಮೊದಲ ದಿನಗಳಲ್ಲಿ ಅಂಗರಚನಾ ಶಾಸ್ತ್ರವನ್ನು ಅನಾಸಕ್ತಿಯಿಂದ ನೋಡಿ, ಮುಂದಿನ ದಿನಗಳಲ್ಲಿ ಇಷ್ಟಪಡಲು ಪ್ರಾರಂಭಿಸಿದ ವಿವರಣೆ ಒಂದು ರೀತಿಯಲ್ಲಿ ನವಿರಾದ ತಿರುವೇ ಸರಿ. ಹಲವು ವಿಷಯಗಳ ವೈದ್ಯಕೀಯ ಪಾರಿಭಾಷಿಕ ಶಬ್ದಗಳಲ್ಲಿ ವಿವರಣೆ ಸಾಮಾನ್ಯ ಓದುಗನಿಗೆ ವಿಷಯವನ್ನು ತಲುಪಿಸುತ್ತದೆ.
    ವರ್ಣತಂತುಗಳು ಅಂದರೆ chromosome ಅಲ್ಲವೇ? ಉಳಿದ ವಿಚಾರಗಳು ಸರಿ. ಆದರೆ ಇದು ಎಲ್ಲಿಂದ ನುಸುಳಿ ಬಂತು?
    ವೈದ್ಯಕೀಯ ಅಭ್ಯಾಸ ಮಾಡಲಿಚ್ಚಿಸುವವರಿಗೆ ಈ ಬರಹ ಪ್ರೇರೇಪಕ ಲೇಖನ.
    ಸ್ಟೂಲಿನ ಮೇಲೆ ನಿಂತು ನೋಡಲು ನಿಮ್ಮ ವಿವರಣೆಯೇ ಮುಖ್ಯ ಕಾರಣವಿರಬಹುದು.

    ಶವಛೇದನಾಗಾರವನ್ನು ದೇಗುಲಕ್ಕೆ ಹೋಲಿಸಿದುದು, ಅದರಲ್ಲಿಯ ನಿಮ್ಮ ಆಸ್ಥೆಯನ್ನು ಸೂಚಿಸುತ್ತದೆ. ಶವಾಗಾರದಲ್ಲಿ ನಿಮ್ಮ ತತ್ತ್ವ ಶಾಸ್ತ್ರ ಜಾಗೃತವಾಯಿತಲ್ಲವೇ? Death is a great leveller ಎನ್ನುವ ಮಾತಿದೆ.
    ನಿಮ್ಮ ಭಾಷೆ ಮತ್ತು ಅದರ ಸರಳತೆ ಲೇಖನದ ಉದ್ದಕ್ಕೂ ನಿರಾಯಾಸವಾಗಿ ಓದಲು ಸಹಕಾರಿಯಾಗಿದೆ. ವೃತ್ತಿಯನ್ನು ಇಷ್ಟಪಡದೇ ಹೀಗೆ ಬರೆಯಲು ಕಷ್ಟ.
    ನಿಮ್ಮ ಉಪನ್ಯಾಸಕ ವೃತ್ತಿ ಮುಂದುವರಿಯಲಿ. ಮತ್ತು ನಿಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭ ದೊರೆಯಲಿ.

    • Harshitha says:

      ಧನ್ಯವಾದಗಳು ಸರ್..ಆಯುರ್ವೇವೇದ ಗ್ರ ಂಥಗಳಲ್ಲಿ ಬೀಜ ಭಾಗ ಎಂಬ ಉಲ್ಲೇಖವಿದೆ,ಇದಕ್ಕೆ ಸಂಬಂಧಿಸಿದ ವ್ಯಾಧಿಗಳನ್ನೂ ತಿಳಿಸಲಾಗಿದೆ.ಇವು ವರ್ಣತಂತು ಹಾಗೂ ಅವುಗಳಿಗೆ ಸಂಬಂಧಪಟ್ಟ ವ್ಯಾಧಿಗಳನ್ನು ಹೋಲುತ್ತವೆ. ವಾಚಕರಿಗೆ ಅನುಕೂಲವಾಗಲಿ ಎಂದು ವರ್ಣತಂತು ಶಬ್ದವನ್ನು ಲೇಖನದಲ್ಲಿ ಬಳಸಲಾಗಿದೆ.

  12. ನಯನ ಬಜಕೂಡ್ಲು says:

    ವೈದ್ಯಕೀಯ ಜಗತ್ತಿನ ಕಲಿಕಾ ಹಂತದ ಹಾಗು ವೃತ್ತಿಯ ಒಳ ಹೊರಗಿನ ಚಿತ್ರಣ ಸೊಗಸಾಗಿದೆ. ವಿದ್ಯಾರ್ಥಿಗಳಿಗೆ ನಿಮ್ಮಿಂದ ದೊರೆವ ಪ್ರೋತ್ಸಾಹ, ಮಾರ್ಗದರ್ಶನದ ಕುರಿತಾಗಿ ಓದುವಾಗ ನಿಮ್ಮ ಬಗ್ಗೆ ಹೆಮ್ಮೆ ಮೂಡುತ್ತದೆ. ಇವೆಲ್ಲದರ ಜೊತೆ ಮಾನವ ಜನ್ಮದಲ್ಲಿ ಐಶ್ವರ್ಯ , ಸಿರಿವಂತಿಕೆ ಎಷ್ಟು ನಶ್ವರ ಅನ್ನುವ ಅಂಶವನ್ನು ಮನದಟ್ಟಾಗಿಸಿದ ರೀತಿ ಬಹಳ ಚೆನ್ನಾಗಿದೆ . ಬಹಳ ಉತ್ತಮವಾದ ಲೇಖನ .

  13. Asha Nooji says:

    ಚೆನ್ನಾಗಿದೆ ನಿಮ್ಮ ವೈದ್ಯಕೀಯ ಕಲಿಕೆ ಮತ್ತು ಸಾಧನೆ ..ಒಳ್ಳೆಯ ಲೇಖನ ,ಹೀಗೆ ಮುಂದುವರಿಯಲಿ ವೈದ್ಯಕೀಯ ಪಯಣ

  14. Jayashree B Kadri says:

    Wow Harshita. Very nice article. Wonderful narration

  15. Balachandra Bhat says:

    ಮಾಹಿತಿ ಮನಮುಟ್ಟುವಂತೆ ಸರಳವಾಗಿ ತಿಳಿಸಿದ್ದಾರೆ.

  16. Shankari Sharma says:

    ವೈದ್ಯ ವಿದ್ಯೆಯನ್ನು ಕಲಿಯುವಾಗ ಮೊದ ಮೊದಲು ಎದುರಾಗುವ ತೊಂದರೆಗಳ ಜೊತೆಗೆ ನಿಮ್ಮ ಅನುಭವಗಳ ಸರಳ ಸುಂದರ ನಿರೂಪಣೆ ತುಂಬಾ ಚೆನ್ನಾಗಿದೆ..ಆಸಕ್ತಿಕರವಾಗಿದೆ ಮೇಡಂ.

  17. ಭೀಮಸೇನ ಆರ್. says:

    ಮೇಡಂ, ಲೇಖನ ಉತ್ತಮ ಬೋಧಪ್ರದ ಹಾಗೂ ಸುಲಲಿತವಾಗಿದೆ. ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಅನುಭವ ಪಾಕ ಬೆರೆಸಿ ಬಡಿಸಿದ್ದು ಗಮನಾರ್ಹ. ಮುನ್ನಡೆಯಿರಿ. ಮಕ್ಕಳ ಬಗೆಗಿನ ನಿಮ್ಮ ಪ್ರೀತಿ ಕಳಕಳಿಗೆ ವಂದನೆ. ಶುಭಮಸ್ತು.

  18. Dr Likhita D N says:

    Really loved the article ma’am. The article took me to my pg days and our days together…

  19. Anonymous says:

    Yavude kelasavadaru naavu adannu istapattare enannadaru sadisalu saadya. Lekh

  20. Anju B Uppin says:

    Really penned very nicely mam

  21. Pundarikaksha.k.I says:

    ಡಾ. ಹರ್ಷಿತ ನಾನು ಕು೦ಬಳೆ ಪಂಚಾಯತ್ ಅಧ್ಯಕ್ಷ ಪುಂಡರೀಕಾಕ್ಷ.ಕೆ.ಎಲ್.ಇಚ್ಲOಪಾಡಿ ಶಾಲೆಯ ಹಳೆ ವಿದ್ಯಾಥಿ೯. ನಿಮ್ಮ ಸಾಧನೆ ಕಂಡು ತುಂಬಾ ಸಂತೋಷವಾಗಿದೆ. ಕಳೆದ ಶಾಲಾ ವಾಷಿ೯ಕೋತ್ಸವ ಕಾಯ೯ಕ್ರಮಕ್ಕೆ ಬಂದು ಬಹಳ ಉತ್ತಮ ರೀತಿಯಲ್ಲಿ ಮಾತನಾಡಿದ್ದಿರಿ. ನೀವು ನಮ್ಮ ಊರಿಗೆ ಹೆಮ್ಮೆ ತರುವ೦ತೆ ಮಾಡಿದ್ದಿರಿ. ಈಗ ಉಪನ್ಯಾಸಕಿ ಆಗಿ ನಿಮ್ಮ ಜವಾಬ್ದಾರಿ ಹಾಗೂ ಮಕ್ಕಳನ್ನು ವೈದ್ಯರಾಗಿ ರೂಪಿಸುವಲ್ಲಿ ನಿಮ್ಮ ಪಾತ್ರ ಏನು ಎಂಬುದನ್ನು ನಮಗೆ ಅಥ೯ವಾಗುವ ರೀತಿಯಲ್ಲಿ ವಿವರಿಸಿದ್ದರಿ. ಇನ್ನು ಹೆಚ್ಚಿನ ಸೇವೆಗಳು ನಿಮ್ಮಿ೦ದ ಆಗಲಿ, ನಿಮಗೆ ದೇವರು ಆಯುರ್ ಆರೋಗ್ಯ ಸುಖ ಸಂಪತ್ತುಗಳನ್ನು ಕರುಣಿಸಲಿ, ಸಮಾಜಕ್ಕೆ ನಿಮ್ಮಿOದ ಉತ್ತಮವಾದ ಕೊಡುಗೆಗಳು ಲಭಿಸಲಿ ಎಂದು ಹಾರೈಸುತ್ತೆನೆ.
    -ಪುOಡರೀಕಾಕ್ಷ.ಕೆ.ಎಲ್.
    ಅಧ್ಯಕ್ಷರು ಕುಂಬಳೆ ಗ್ರಾಮ ಪಂಚಾಯತು.

  22. ಶ್ರೀನಿವಾಸ ಆಳ್ಟ ಕಳತ್ತೂರು says:

    ಉತ್ತಮವಾದ ಬರಹ ಅಂತರಾಳದ ಭಾವನೆಗಳುಮಾತಿನಮೂಲಕ ಹೊರಬಂದು ಲೇಖನವಾಗಿದೆ

  23. BALAKRISHNA ACHARY PUTHIGE says:

    Very good. All the best.

  24. Raju Kidoor says:

    ಅಭಿನಂದನೆಗಳು. ಅಂಗರಚನಾ ಶಾಸ್ತ್ರದ ಬಗ್ಗೆ ಸಾಮಾನ್ಯರಿಗೂ ಮನ ಮುಟ್ಟುವಂತ ಬರೆದಿದ್ದೀರಾ..
    ಶುಭಾಶಯಗಳು.

  25. Thulasi jogi kidoor .. says:

    Hi …harshitha ninna vrithige shubhavagali ….

  26. ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಬಹಳ ಅರ್ಥ ಪೂರ್ಣವಾಗಿದೆ.

  27. Praveenreddy says:

    Excellent

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: