ಶಿಕ್ಷಕ ಹಾಗೂ ಶಿಷ್ಯ ( ಭಾಗ-2)
ಭಕ್ತರಲ್ಲಿ ಗುರುವನ್ನು ಕಾಣು, ಗುರುವಿನಲ್ಲಿ ದೇವರನ್ನು ಕಾಣು, ದೇವರಲ್ಲಿ ಎಲ್ಲವನ್ನೂ ಕಾಣು. ಎಂಬುದಾಗಿ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದ ಶ್ರೀಸೂಕ್ತಿ ನೆನಪಾಗುವುದು. ಹಾಗೆಯೇ ಯಾವುದೇ ಕಾರ್‍ಯದಲ್ಲಿ ಹಿಂದೆ ಮುನ್ನಡೆಸುವವನಾಗಿ ಗುರುವಿದ್ದು; ಮುಂದೆ ಶಿಷ್ಯನಿರಬೇಕಂತೆ. ಹಾಗೊಂದು ಪುರಾಣಕತೆ ನಿಮ್ಮ ಮುಂದೆ.
ಗುರುವಿನ ಉದರದೊಳಗೆ ಹೊಕ್ಕು ಹೊರಬಂದ ಕಚ:-
ಪೂರ್ವಕಾಲದಲ್ಲಿ ದೇವತೆಗಳಿಗೂ ಅಸುರರಿಗೂ ಆಗಾಗ ಯುದ್ಧಗಳಾಗುತ್ತಿದ್ದುವು.ಮೂರು ಲೋಕಗಳ ಅಧಿಕಾರ ತಮಗೇ ಸಿಗಬೇಕೆಂದು ದಾನವರು ದೇವತೆಗಳೊಂದಿಗೆ ಯುದ್ಧಕ್ಕೆ ಬರುತ್ತಿದ್ದರು. ಯುದ್ಧದ ನಿಮಿತ್ತ ಯಾಗ-ಯಜ್ಞಾದಿಗಳನ್ನು ಮಾಡಲು ದೇವತೆಗಳಿಗೆ ‘ಬೃಹಸ್ಪತಿ’ಯು ಪುರೋಹಿತರಾಗಿದ್ದರೆ ದಾನವರಿಗೆ ‘ಶುಕ್ರಾಚಾರ್‍ಯ’ರು ಗುರುಗಳಾಗಿದ್ದರು. ಅವರು ಎರಡು ಬಣಗಳ ಪುರೋಹಿತರಾದರೂಅವರೊಳಗೆ ವೈಯಕ್ತಿಕ ದ್ವೇಶವಿರಲಿಲ್ಲ.ಬೃಹಸ್ಪತಿಯ ಕೈಯೇಮೇಲಾಗಿ ದಾನವರು ಹೆಚ್ಚಿನ ಸಂಖ್ಯೆಯಲ್ಲಿ ಹತರಾಗುತ್ತಿದ್ದರು. ಆದರೆ ಹತರಾದ ರಾಕ್ಷಸರನ್ನು ಬದುಕಿಸುವ ‘ಮೃತಸಂಜೀವಿನಿ’ ವಿದ್ಯೆ ಶುಕ್ರಾಚಾರ್‍ಯರರಿಗೆ ತಿಳಿದಿತ್ತು. ಬೃಹಸ್ಪತಿಗೆ ತಿಳಿದಿರಲಿಲ್ಲ. ಇದರಿಂದಾಗಿ ದೇವತೆಗಳಿಗೆ ಬಹಳ ಪೇಚಾಟಕ್ಕಿಟ್ಟುಕೊಂಡಿತು. ಅವರೆಲ್ಲೊಂದೆಡೆ ಸಮಾಲೋಚನೆ ನಡೆಸಿ ನಮ್ಮವರಲ್ಲಿ ಯಾರಾದರೊಬ್ಬರು ಶುಕ್ರರಲ್ಲಿಗೆ ಹೋಗಿ ಆ ಮಹಾವಿದ್ಯೆಯನ್ನು ಕಲಿತುಕೊಂಡುಬರಬೇಕೆಂದೂ ಇದಕ್ಕೆ ತಕ್ಕುದಾದವನು ಬೃಹಸ್ಪತಾಚಾರ್ಯರ ಮಗ ‘ಕಚ’ನೆಂದೂ ತೀರ್ಮಾನಿಸಿದರಲ್ಲದೆ ಅವನನ್ನು ಕರೆದು ಹೀಗೆ ಹೇಳಿದರು. ಶುಕ್ರಾರ್ಚಾರು ರಾಕ್ಷಸರಾಜನಾದ ವೃಷಪರ್ವನ ರಾಜಧಾನಿಯಲ್ಲಿ ವಾಸಿಸುತ್ತಾರೆ.ಶುಕ್ರರಿಗೆ ದೇವಯಾನಿ ಎಂಬೊಬ್ಬ ಮಗಳಿದ್ದಾಳೆ.ಅವರಿಗೆ ಅವಳಲ್ಲಿ ಅಪಾರ ಪ್ರೀತಿ.ನೀನು ಆಕೆಯ ಒಲುಮೆಯನ್ನು ಪಡೆದರೆ ಆ ವಿದ್ಯೆಯನ್ನು ಸುಲಭದಲ್ಲಿ ಕಲಿಯಬಹುದು ಎಂದರು.
ಕಚನು ದೇವತೆಗಳ ಪ್ರಾರ್ಥನೆಯನ್ನು ಮನ್ನಿಸಿ ವೃಷಪರ್ವನ ರಾಜಧಾನಿಗೆ ಹೊರಟನು. ಅಲ್ಲಿ ಶುಕ್ರರನ್ನು ಕಂಡು ಉದ್ದಂಡ ನಮಸ್ಕಾರಮಾಡಿ ತನ್ನ ಪರಿಚಯ ಹೇಳಿಕೊಂಡು ದಯಮಾಡಿ ತಾವು ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದೂ ತಾನು ತಮ್ಮ ಆಶ್ರಮದಲ್ಲಿ ಬ್ರಹ್ಮಚರ್ಯೆವ್ರತದಲ್ಲಿದ್ದು ಮೃತಸಂಜೀವಿನಿ ವಿದ್ಯೆ ಕಲಿಯುತ್ತೇನೆ ಎಂದನು. ಶುಕ್ರಾಚಾರ್ಯರಿಗೆ ಬೃಹಸ್ಪತಾಚಾರ್ಯರಲ್ಲಿ ವೈಯಕ್ತಿಕ ದ್ವೇಷವಿಲ್ಲದುದರಿಂದ ಕಚನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ಕಚನು ಗುರುಗಳ ಆದೇಶದಂತೆ ಗುರುಗಳನ್ನೂ ಅವರ ಮಗಳಾದ ದೇವಯಾನಿಯ ಶುಶ್ರೂಷೆಯನ್ನೂ ಮಾಡತೊಡಗಿದನು. ಸ್ವಲ್ಪಕಾಲದಲ್ಲಿ ಅವರು ಪರಸ್ಪರ ಪ್ರೀತಿಸಲಾರಂಭಿಸಿದರು. ಅದು ಬೆಳೆ ಬೆಳೆದು ದೇವಯಾನಿ ಕಚನನ್ನೇ ಮದುವೆಯಾಗಬೇಕೆಂದು ನಿರ್ಧರಿಸಿದಳು.ಆದರೆ ಕಚನು ಗುರುಗಳಿಗೆ ನೀಡಿದ ವಚನದಂತೆ ಬ್ರಹ್ಮಚರ್ಯೆವ್ರತಕ್ಕೆ ಭಂಗಬಾರದಂತೆ ಎಚ್ಚರವಹಿಸಿದ್ದನು.
ಶುಕ್ರಾಚಾರ್ಯರು ಕಚನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ್ದು ದೇವತೆಗಳವೈರಿಗಳಾದ ರಾಕ್ಷಸರಿಗೆ ಸಹಿಸಲಾಗಲಿಲ್ಲ. ಆದರೆ ಈ ಸಂಗತಿಯನ್ನು ಶುಕ್ರರಲ್ಲಿ ಬಾಯಿಬಿಡುವುದಕ್ಕೂ ಅವರಿಗೆ ಧೈರ್ಯವಿಲ್ಲ.ಇನ್ನು ಕಚನನ್ನು ಕೊಲೆಮಾಡುವುದೇ ಸೂಕ್ತವೆಂಬ ನಿರ್ಣಯಕ್ಕೆ ಬಂದರವರು.
ಒಮ್ಮೆ ಕಚನು ಬಯಲಿನಲ್ಲಿ ದನಗಳನ್ನು ಮೇಯಿಸುತ್ತಿರುವಾಗ ಅವನನ್ನು ಹಗ್ಗದಿಂದ ಬಿಗಿದುಕಟ್ಟಿಕೊಂಡು ಹೋಗಿ ಕೊಂದು; ಚೂರುಚೂರುಮಾಡಿ ಅರಣ್ಯದಲ್ಲಿ ಬಿಸಾಡಿದರು.ಸಂಜೆ ಆಕಳುಗಳೆಲ್ಲಾ ಬಂದರೂ ಕಚನು ಬಾರದಿರುವುದನ್ನು ಗಮನಿಸಿದ ದೇವಯಾನಿ ತಂದೆಯಲ್ಲಿ ಹೇಳಿ ಮೊರೆಯಿಟ್ಟಳು. ನಿಮ್ಮ ಶಿಷ್ಯನ ಪ್ರಾಣ ಉಳಿಸುವುದು ನಿಮ್ಮ ಕರ್ತವ್ಯವಲ್ಲವೇ ಎಂದಳು. ಹೌದು, ಮಗಳು ಹೇಳುವುದರಲ್ಲಿ ಸತ್ಯಾಂಶವಿದೆ. ಮಗಳಿಗೆ ಕಚನ ಮೇಲೆ ಅಪಾರ ಪ್ರೀತಿಯಿರುವುದು ಶುಕ್ರರಿಗೂ ತಿಳಿದಿತ್ತು.ಮೃತಸಂಜೀವಿನಿ ವಿದ್ಯೆಯಿಂದ ಕಚನನ್ನು ಬದುಕಿಸಿದರು. ಅವನು ಮನೆಗೆ ಬಂದನು.ಅವನನ್ನು ನೋಡಿದ ದೇವಯಾನಿಯ ಮುಖ ಅರಳಿತು. ಇದನ್ನರಿತ ರಾಕ್ಷಸರು ಮತ್ತಷ್ಟು ಕೋಪಗೊಂಡರು.
ಇನ್ನೊಮ್ಮೆ ಕಚನು ದೇವಯಾನಿಗೆ ಸುಗಂಧಭರಿತವಾದ ಸುಂದರ ಹೂಗಳನ್ನು ತರುವುದಕ್ಕಾಗಿ ಕಾಡಿಗೆ ಹೋಗಿದ್ದನು. ಆತನೊಬ್ಬನನ್ನೇ ಕಂಡ ರಾಕ್ಷಸರು ಅವನನ್ನು ಹಿಡಿದೆಳೆದು ತಂದು ಕೊಚ್ಚಿ ಸಮುದ್ರಕ್ಕೆಸೆದರು.ಈಗಲೂ ಕಚನು ಬಾರದಿರುವುದನ್ನು ದೇವಯಾನಿ ತಂದೆಗೆ ತಿಳಿಸಿದಾಗ ಮೃತಸಂಜೀವಿನಿ ವಿದ್ಯೆಯಿಂದ ಅವನನ್ನು ಬದುಕಿಸಿದರು. ನಡೆದುದೆಲ್ಲವನ್ನೂ ಕಚನು ದೇವಯಾನಿಗೆ ಹೇಳಿದನು.ಇದು ಮರುಕಳಿಸುತ್ತಾ ಹೋಯಿತು. ಮತ್ತೊಮ್ಮೆ ಕಚನು ಕಟ್ಟಿಗೆ ಸಮಿತ್ತುಗಳನ್ನು ತರುವುದಕ್ಕಾಗಿ ಕಾಡಿಗೆ ಹೋಗಿದ್ದಾಗ ರಾಕ್ಷಸರು ಅವನನ್ನು ಕೊಂದು ಸುಟ್ಟುಬೂದಿಮಾಡಿ ಅದನ್ನು ಅರೆದು ಮದ್ಯದಲ್ಲಿ ಬೆರೆಸಿ ಶುಕ್ರರಿಗೆ ಕುಡಿಯಲು ಕೊಡುವ ಪಾತ್ರೆಯಲ್ಲಿಟ್ಟರು.ಶುಕ್ರರು ತಿಳಿಯದೆ ಕುಡಿದುಬಿಟ್ಟರು.ಈಗ ಕಚನು ಶುಕ್ರರ ಜಠರ ಸೇರಿದನು. ಕಚನನ್ನು ಎಂದಿನಂತೆ ಕಾಣದಿರಲು ದೇವಯಾನಿ ತಂದೆಯ ಬಳಿಗೆಹೋಗಿ ಅಪ್ಪಾ ಶಿಷ್ಯರು ಅವನನ್ನು ಕೊಂದಿರಲೇಬೇಕು. ಅವನಿಲ್ಲದೆ ನಾನಿರಲಾರೆ.ನಿಮ್ಮಶಿಷ್ಯನ ಪ್ರಾಣ ಉಳಿಸುವುದು ನಿಮ್ಮ ಕರ್ತವ್ಯವಲ್ಲವೇ ಎಂದಳು.
ಕಚನ ಪ್ರಾಣ ಉಳಿಸುವುದು ತನ್ನ ಕರ್ತವ್ಯ ಎಂದು ಬಗೆದ ಶುಕ್ರಾಚಾರ್ಯರು ಮೃತಸಂಜೀವಿನಿ ಮಂತ್ರ ಪುರಸ್ಸರರಾಗಿ ಕಚನನ್ನು ಆಹ್ವಾನಿಸಿದರು. ಕಚನು ಬರಲೇ ಇಲ್ಲ!. ದೇವಯಾನಿ ಕಚನಿಗಾಗಿ ಕಾಯುತ್ತಲೇ ಇದ್ದಳು. ಸ್ವಲ್ಪ ಹೊತ್ತಿನಲ್ಲಿ ಶುಕ್ರರಿಗೆ ತನ್ನ ಜಠರದಲ್ಲಿ ಏನೋ ಸದ್ದು ಉಂಟಾದಂತಾಯ್ತು. ಅವರು ಸೂಕ್ಷ್ಮವಾಗಿ ಆಲಿಸಿದರು. ‘ಗುರುದೇವ,ಗುರುದೇವ’ ಎಂಬಮೊರೆ ತನ್ನ ಹೊಟ್ಟೆಯೊಳಗಿಂದ ಕೇಳಿತು. ನೀನು ಹೇಗೆ ನನ್ನ ಉದರದೊಳಗೆ ಬಂದೆ?. ಎಂದಾಗ ಗರುಗಳೇ ನಿಮ್ಮ ಅನುಗ್ರಹದಿಂದ ನನಗೆ ಎಲ್ಲವೂ ಸ್ಮರಣೆಯಲ್ಲಿದೆ. ನಾನು ಹೇಳುತ್ತೇನೆ.ನಾನು ಕಟ್ಟಿಗೆ ಸಮಿತ್ತುಗಳನ್ನು ತರಲು ಕಾಡಿಗೆಹೋಗಿದ್ದಾಗ ಅಸುರರು ನನ್ನನ್ನು ಕೊಂದು ಭಸ್ಮಮಾಡಿ ನಿಮಗೆ ಅರ್ಪಿಸಲಿದ್ದ ಸುರೆಯಲ್ಲಿ ಬೆರೆಸಿಟ್ಟರು.ಅದನ್ನು ನೀವು ಕುಡಿದಿರಿ. ಈ ರೀತಿಯಾಗಿ ನಾನು ನಿಮ್ಮ ಉದರವನ್ನು ಸೇರಿದ್ದೇನೆ. ಇಲ್ಲಿಂದ ನಿಮ್ಮ ಹೊಟ್ಟೆಸೀಳಿಕೊಂಡು ಹೊರಗೆ ಬಂದರೆ ನನಗೆ ಗುರುಗಳ ವಧೆಮಾಡಿದ ಪಾಪ ತಟ್ಟುವುದಿಲ್ಲವೇ,ನಾನು ಇಲ್ಲಿಯತನಕ ಮಾಡಿದ ತಪಸ್ಸಿನ ಫಲವೆಲ್ಲವೂ ನಾಶವಾಗಿಬಿಡುವುದಿಲ್ಲವೇ ?ಎಂದಾಗ.., ಶುಕ್ರಾಚಾರ್ಯರಿಗೆ ಬಹಳ ಸಂದಿಗ್ಧ ಪರಿಸ್ಥಿತಿ ಉಂಟಾಯ್ತು. ಕಚನು ಹೊರಬರಬೇಕಾದರೆ ನನ್ನ ಹೊಟ್ಟೆಯನ್ನು ಸೀಳಿಯೇ ಬರಬೇಕು. ಆಗ ನನ್ನ ಮರಣವುಂಟಾಗಿ ಮೃತಸಂಜೀವಿನಿ ವಿದ್ಯೆಯೂ ನಾಶವಾಗುವುದು, ದೇವಯಾನಿಯೂ ಅನಾಥಳಾಗುವಳು.ಒಂದೊಮ್ಮೆ ಕಚನನ್ನು ಅಲ್ಲಿಯೇ ಕೊನೆಗೊಳಿಸಿದರೆ ದೇವಯಾನಿ ಪ್ರಾಣಕಳೆದುಕೊಳ್ಳುತ್ತಾಳೆ.
ಇದಕ್ಕೆಲ್ಲ ಪರಿಹಾರವೆಂದರೆ ನನ್ನ ಉದರದೊಳಗಿರುವ ಕಚನಿಗೆ; ಅಲ್ಲಿಗೇ ಮೃತಸಂಜೀವಿನಿ ವಿದ್ಯೆ ಹೇಳಿಕೊಡುವುದು, ಆಮೇಲೆ ಅವನು ಹೊರಗೆ ಬಂದಕೂಡಲೇ ಆ ವಿದ್ಯಾಬಲದಿಂದ ನನ್ನನ್ನು ರಕ್ಷಿಸಬೇಕೆಂದು ಈಗಲೇ ಅಪ್ಪಣೆಮಾಡುವುದು.ಹಾಗಾದಾಗ ಎಲ್ಲವೂ ಸುಸೂತ್ರವಾಗಿ ಆಗುವುದು ಎಂದು ಯೋಚಿಸಿದ ಶುಕ್ರಾಚಾರ್ಯರು ಪ್ರಿಯ ಶಿಷ್ಯಾ ನೀನು ಬಂದಕಾರ್ಯ ಈಗ ಸಿದ್ಧಿಯಾಗುವುದು, ನೀನು ಕಚನರೂಪದಲ್ಲಿ ಬಂದ ಇಂದ್ರನಲ್ಲ ತಾನೇ? ಇದು ಬ್ರಾಹ್ಮಣೋತ್ತಮನಿಗೇ ಸಿದ್ಧಿಯಾಗುವುದು. ನನ್ನ ಹೊಟ್ಟೆಯನ್ನು ಸೀಳಿ ನೀನು ಹೊರಗೆಬಂದಮೇಲೆ ನನ್ನನ್ನು ನಿನ್ನ ತಂದೆಯೆಂದೇ ಬಾವಿಸಿ; ಕೂಡಲೇ ಬದುಕಿಸುವುದು ನಿನ್ನ ಪರಮ ಕರ್ತವ್ಯವಾಗುವುದು ಎಂದರು ಶುಕ್ರರು. ಅವರ ಶರತ್ತಿಗೆ ಒಪ್ಪಿದ ಕಚನಿಗೆ ಶುಕ್ರರು ಆ ಮಹಾವಿದ್ಯೆಯನ್ನು ಹೇಳಿಕೊಟ್ಟರು. ಕಚನು ಶುಕ್ರರ ಉದರದೊಳಗಿದ್ದೇ ಅದನ್ನು ಮನನಮಾಡಿದನು.ಮತ್ತೆ ಅವರ ಹೊಟ್ಟೆಯನ್ನು ಸೀಳಿಕೊಂಡುಹೊರಬಂದು ಆಗತಾನೇ ಕಲಿತ ವಿದ್ಯೆಯಿಂದ ಅವರನ್ನು ಬದುಕಿಸಿದಾಗ ಅವರು ಎದ್ದುಕುಳಿತರು. ಕೂಡಲೇ ಅವರಿಗೆ ಸಾಷ್ಟಾಂಗ ಪ್ರಣಾಮ ಮಾಡಿ; ಗುರುದೇವ ನಿಮ್ಮನ್ನೇ ತಂದೆ ಹಾಗೂ ತಾಯಿಯೆಂದು ಭಾವಿಸಿರುವೆನು. ನಿಮಗೆ ಕಾಯಾ-ವಾಚಾ ದ್ರೋಹವೆಸಗಲಾರೆ ಎಂದನು. ಆ ಮೇಲೆ ಸುರಾಪಾನ ಎಷ್ಟೊಂದು ಅನರ್ಥಕ್ಕೆಡೆಮಾಡುತ್ತದೆ! ಎಂದು ತನ್ನಲ್ಲೇ ಯೋಚಿಸಿ ಅದಕ್ಕೆ ಬಹಿಷ್ಕಾರ ಹಾಕಿದರು.ಅಂದಿನಿಂದ ಬ್ರಾಹ್ಮಣರಿಗೆ ಸುರಾಪಾನ ನಿಷಿದ್ಧವಾಯ್ತು.
ಇದರಿಂದಾಗಿ ಕಚನು ಯಾವ ವಿದ್ಯೆಗಾಗಿ ಬಂದಿದ್ದನೋ ಅದು ಸಿದ್ಧಿಸಿತು. ಒಂದು ದಿನ ಕಚನು ಗುರುಗಳ ಅನುಮತಿ ಪಡೆದು ಅವರ ಆಶೀರ್ವಾದದೊಂದಿಗೆ ದೇವಲೋಕಕ್ಕೆ ಹಿಂತಿರುಗಲು ಸಿದ್ಧನಾದನು. ಆಗ ದೇವಯಾನಿ ಬಂದು ನೀನು ಹಿಂತಿರುಗಿ ಹೋಗಬಾರದೆಂದೂ ತನ್ನನ್ನೇ ವಿವಾಹವಾಗಬೇಕೆಂದೂ ಕೇಳಿಕೊಂಡಳು. ಆಗ ಕಚನು ದೇವಯಾನಿಗೆ-ಗುರುಗಳಿಂದ ಮರುಜನ್ಮ ಪಡೆದ ನನಗೆ ಅವರು ತಂದೆಯ ಸಮಾನ. ನೀನೀಗ ನನಗೆ ತಂಗಿಯಾಗಿರುವೆ. ನಿನ್ನನ್ನು ಮದುವೆಯಾಗುವುದು ಧರ್ಮಸಮ್ಮತವಲ್ಲ ಎಂದನು. ಕಚನನ್ನು ಪ್ರೀತಿಸಿ ಅವನನ್ನೇ ಮದುವೆಯಾಗಬೇಕೆಂದು ಬಯಸಿದ್ದ ದೇವಯಾನಿಗೆ ಅಸಾಧ್ಯ ಸಿಟ್ಟುಬಂತು. ನನ್ನ ತಂದೆಯಿಂದ ಕಲಿತವಿದ್ಯೆಯು ನಿನಗೆ ಫಲಿಸದಿರಲಿ ಎಂದಳು. ಆಗ ಕಚನು ನೀನು ವೇದಶಾಸ್ತ್ರಪಾರಂಗತನಾದ ವಿಪ್ರೋತ್ತಮನ ಮಗಳಾಗಿ ಹೀಗೆ ಹೇಳುವುದೇ? ನಿನ್ನನ್ನು ಯಾವನೊಬ್ಬ ಬ್ರಾಹ್ಮಣನೂ ಮದುವೆಯಾಗದಿರಲಿ ನಿನಗೆ ಕ್ಷತ್ರಿಯನೇ ದೊರಕಲಿಎಂದು ಮರುಶಾಪವಿತ್ತನು.{ಮುಂದೆ ದೇವಯಾನಿಯು ಕ್ಷತ್ರಿಯರಾಜನಾದ ಯಯಾತಿಯನ್ನು ಮದುವೆಯಾಗುತ್ತಾಳೆ}.ಕಚನು ಅಲ್ಲಿಂದ ಬೀಳ್ಕೊಂಡು ಸ್ವರ್ಗಲೋಕಕ್ಕೆ ಪ್ರಯಾಣ ಬೆಳೆಸಿದನು. ಕಚನು ಮೃತಸಂಜೀವಿನಿ ಮಹಾವಿದ್ಯೆಯನ್ನು ಸಿದ್ಧಿಸಿಬಂದನೆಂದು ದೇವತೆಗಳು ಸಂತೋಷಪಟ್ಟರು. ಕಚನನ್ನು ಕೊಲ್ಲಬೇಕೆಂದು ಅಸುರರು ಎಷ್ಟೇ ಪ್ರಯತ್ನಿಸಿದರೂ ಅವನು ಸಾಯಲಿಲ್ಲ ಬದಲಾಗಿ ಆತನು ಕಲಿಯಬೇಕಾದ ವಿದ್ಯೆಗೆ ಅವರು ಹಾಕಿದ ಕುತಂತ್ರ ಪೂರಕವಾಯ್ತು.
ಈ ಲೇಖನದ ಹಿಂದಿನ ಭಾಗ ಇಲ್ಲಿದೆ : ಶಿಕ್ಷಕ ಹಾಗೂ ಶಿಷ್ಯ(ಭಾಗ-1)
– ವಿಜಯಾಸುಬ್ರಹ್ಮಣ್ಯ,ಕುಂಬಳೆ.
ಬಾಲ್ಯದಲ್ಲಿ ‘ಕಚ-ದೇವಯಾನಿ’ ಎಂಬ ಕಥೆಯನ್ನು ಶಾಲಾ ಲೈಬ್ರರಿಯ ‘ಭಾರತ-ಭಾರತಿ’ ಪುಸ್ತಕ ಸರಣಿಯಲ್ಲಿ ಓದಿದ್ದೆ. ಮರೆತಿದ್ದೆ ಕೂಡ. ಈಗ ಪುನ” ಓದಲು ಬಹಳ ಖುಷಿಯಾಯಿತು. ಸೊಗಸಾದ ನಿರೂಪಣೆ. ಧನ್ಯವಾದಗಳು
ಉತ್ತಮ ಬರಹ ಮೇಡಮ್..ಕಥೆ ಓದಿದ ನೆನಪಾಯಿತು.
ಧನ್ಯವಾದಗಳು ವಿಜಯಕ್ಕ…ಬಾಲ್ಯದಲ್ಲಿ ಓದಿದ ಕತೆಯನ್ನು ನಮ್ಮ ಕೈಯಲ್ಲಿರಿಸಿದ್ದೀರಿ.
ಹೇಮಮಾಲಾ ಮತ್ತು ಹರ್ಷಿತಾ+ಕೃಷ್ಣಪ್ರಭಾ ಎಲ್ಲರಿಗೂ ಧನ್ಯವಾದಗಳು
ಗುರು- ಶಿಷ್ಯ ಸಂಬಂಧಕ್ಕೆ ಪೂರಕವಾಗಿ ಕಚ-ದೇವಯಾನಿ ಕತೆ ನೆನಪಿಸಿದ್ದೀರಿ ವಿಜಯಕ್ಕ..ಲೇಖನ ಚೆನ್ನಾಗಿದೆ, ಧನ್ಯವಾದಗಳು.
ಶ್ರೀರಂಗರ ಇದೆ ಹೆಸರಿನ ನಾಟಕ ಇದೆ