ಬಹೂಪಯೋಗಿ ಜಾಂಬು ಹಣ್ಣು
“ವಾವ್, ಯಾರು ತಂದದ್ದು ಈ ಹಣ್ಣುಗಳನ್ನು? ಓ.. ನೀವಾ ಮ್ಯಾಡಮ್” ಬಿಚ್ಚು ಮನಸ್ಸಿನ ಉದ್ಗಾರ ನಮ್ಮ ಕಾಲೇಜು ಕಛೇರಿಯ ರಮ್ಯಾಳದ್ದು. “ಇಷ್ಟು ತರ್ತೀರಾ ದಿನಾಲೂ. ನೀವು ಹಣ್ಣು ತರ್ತಿದ್ದದ್ದು ಅಂತ ನಂಗೆ ಗೊತ್ತಿರ್ಲಿಲ್ಲ. ನನಗೆ ತಿನ್ನಲು ಒಂದೆರಡು ಹಣ್ಣು ಮಾತ್ರ ಸಿಗ್ತಿತ್ತು” ಅಂದಳು ಮತ್ತೆ. ನಾನು ನಸು ನಕ್ಕೆ.
ಹೊಳೆಯುವ ಗಾಢ ಕೆಂಪು ಮಿಶ್ರಿತ ಗುಲಾಬಿ ಬಣ್ಣದ ಜಾಂಬು ಹಣ್ಣುಗಳು ತಿನ್ನಲು ಎಲ್ಲರಿಗೂ ಇಷ್ಟವೇ. ನುಣುಪು ಮೈ, ರಸಭರಿತ, ಸಿಹಿ-ಹುಳಿ-ಒಗರು ಸೇರಿದ ರುಚಿ. ಜಂಬು ಹಣ್ಣು, ಪನ್ನೇರಳೆ ಹಣ್ಣು, ಇಂಗ್ಲಿಷ್ನಲ್ಲಿ Wax apple, java apple, rose apple ಎಂದು ಕರೆಯಲ್ಪಡುವ ಈ ಹಣ್ಣಿನ ಗಿಡದ ವೈಜ್ಞಾನಿಕ ಹೆಸರು Syzygium samarangense. Myrtacea ಕುಟುಂಬಕ್ಕೆ ಸೇರಿದೆ. ಬಣ್ಣ, ಆಕಾರ, ರುಚಿಯಲ್ಲಿ ವ್ಯತ್ಯಾಸವಿರುವ ಇದೇ ಹಣ್ಣಿನ ಹಲವು ಪ್ರಭೇದಗಳು ಕಾಣಸಿಗುತ್ತವೆ. ಗಾಢ ಗುಲಾಬಿ, ಹಸಿರು, ಬಿಳಿ ಬಣ್ಣದ ಹಣ್ಣುಗಳು ಹೆಚ್ಚಾಗಿ ಸಿಹಿಯಾಗಿರುತ್ತವೆ ಅಲ್ಲದೆ ಸುವಾಸನಾಯುಕ್ತ ರಸವನ್ನು ಕೂಡಾ ಹೊಂದಿರುತ್ತವೆ. ಕೆಲವರಿಗೆ ಸಿಹಿ ಇರುವ ಹಣ್ಣು ಇಷ್ಟವಾದರೆ ಹೆಚ್ಚಿನವರಿಗೆ ಹುಳಿಮಿಶ್ರಿತವಾದ ಈ ಹಣ್ಣು ಬಲು ಪ್ರಿಯ.
ನನ್ನ ಸಹೋದ್ಯೋಗಿ ಗಣಿತದ ಉಪನ್ಯಾಸಕರೊಬ್ಬರಿಗೆ ಈ ಹಣ್ಣುಗಳೆಂದರೆ ಬಲು ಪ್ರೀತಿ. ನೆನಪಾದಾಗಲೆಲ್ಲಾ “ಮ್ಯಾಡಂ, ನಿಮ್ಮನೆ ಗಿಡದಲ್ಲಿ ಹಣ್ಣುಗಳಿವೆ ಅಂತ ನನ್ನ ದಿವ್ಯ ದೃಷ್ಟಿಗೆ ಗೋಚರಿಸುತ್ತಿದೆ. ನಾನು ಹೇಳಿದ್ದು ಸರಿಯಲ್ವಾ?” ಅಂತ ಕೇಳುತ್ತಾ ಮುಂದುವರೆದು “ಹಣ್ಣು ತಂದ್ಕೊಡಿ ಮ್ಯಾಡಂ, ನೀರುಳ್ಳಿ ಜೊತೆ ಹಚ್ಚಿ ಕಚ್ಚಂಬಾರು (Salad) ಮಾಡಿದ್ರೆ ಅದ್ಭುತವಾಗಿರುತ್ತೆ. ಟೊಮ್ಯಾಟೊ ಹಣ್ಣಿನ ಬದಲು ಈ ಹಣ್ಣುಗಳನ್ನು ಬಳಸಬೇಕು” ಅಂದಾಗಲೆಲ್ಲಾ ಹಲವು ಬಾರಿ ಅವರಿಗೆ ತಂದು ಕೊಟ್ಟದ್ದಿದೆ. ಇನ್ನು ನಮ್ಮ ಪ್ರಾಂಶುಪಾಲರಿಗಂತೂ ಈ ಹಣ್ಣುಗಳೆಂದರೆ ಪಂಚಪ್ರಾಣ. ಮಧುಮೇಹ ಇರುವವರಿಗೆ ಬಹಳ ಒಳ್ಳೆದಂತೆ ಅಂತ ಪ್ರೀತಿಯಿಂದ ತಿಂತಿದ್ರು. ನಮ್ಮ ಅತ್ತೆಯವರು ಒಂದು ಸಲ ಈ ಹಣ್ಣಿನ ಮೆಣಸ್ಕಾಯಿ (ಕರಾವಳಿ ಕಡೆ ಎಳ್ಳು ಉಪಯೋಗಿಸಿ ಮಾಡುವ ಪದಾರ್ಥ) ಒಳ್ಳೆದಾಗ್ತದೆ ಅಂದ್ರು. ನಮ್ಮನೆಯಲ್ಲಿ ವರ್ಷಕ್ಕೆ ಐದಾರು ಬಾರಿಯಾದ್ರೂ ಈ ಹಣ್ಣಿನ ಮೆಣಸ್ಕಾಯಿ ಗ್ಯಾರಂಟಿ. ಈ ಹಣ್ಣುಗಳನ್ನು ಉಪ್ಪಿನಕಾಯಿ, ವೈನ್, ಜ್ಯೂಸ್, ಜ್ಯಾಮ್ ತಯಾರಿಯಲ್ಲೂ ಬಳಸುತ್ತಾರೆ ಎಂದು ಹಲವರು ನನ್ನಲ್ಲಿ ಹೇಳಿದ್ದುಂಟು.
ಒಟ್ಟಿನಲ್ಲಿ ಬಹೂಪಯೋಗಿಯಾದ ಈ ಹಣ್ಣುಗಳಲ್ಲಿ ಔಷಧೀಯ ಗುಣಗಳ ಭಂಡಾರವೇ ಅಡಗಿದೆ. ಪ್ರೋಟೀನ್, ವಿಟಮಿನ್ ‘ಎ’, ವಿಟಮಿನ್ ‘ಸಿ’, ಕಬ್ಬಿಣ ಸತ್ವ, ಕ್ಯಾಲ್ಸಿಯಂ, ನಾರಿನಂಶ ಹೇರಳವಾಗಿದೆ. ನಾರಿನಂಶದಿಂದಾಗಿ ಮಲಬದ್ಡತೆಯನ್ನು ತಡೆಯುತ್ತದೆ ಹಾಗೆಯೇ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ವಿಟಮಿನ್ ‘ಸಿ’ ಅಂಶ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೀರಿನ ಅಂಶ ಹೇರಳವಾಗಿರುವುದರಿಂದ ಬೇಸಿಗೆ ಕಾಲದಲ್ಲಿ ಈ ಹಣ್ಣುಗಳ ಸೇವನೆಯು ದೇಹದ ಉಷ್ಣಾಂಶವನ್ನು ತಗ್ಗಿಸಲು ಸಹಕಾರಿಯಾಗಿದೆ. ಮಾರಕ ರೋಗ ಕ್ಯಾನ್ಸರ್ ಕಡಿಮೆ ಮಾಡುವ ಅಂಶಗಳು ಕೂಡಾ ಈ ಹಣ್ಣಿನಲ್ಲಿವೆ ಎಂದು ಹೇಳಲಾಗಿದೆ.
ನಿಜವಾಗಿಯಾದ್ರೂ ಈ ಹಣ್ಣಿನ ಗಿಡ ನಾನು ಬೇಕೆಂದು ನೆಟ್ಟಿದ್ದಲ್ಲ. ಕೆಲವು ವರ್ಷಗಳ ಹಿಂದೆ ನನ್ನ ಗಂಡನ ಮಾವನ ಮನೆಯವರು ನಮ್ಮಲ್ಲಿಗೆ ಬರುವಾಗ ಈ ಹಣ್ಣುಗಳನ್ನು ತಂದಿದ್ದರು. ಹಣ್ಣು ತಿಂದು ಬಿಸಾಡಿದ ಬೀಜ ಮೊಳೆತು ಸಣ್ಣ ಗಿಡವಾಗಿತ್ತು. ವರ್ಷಕ್ಕೊಮ್ಮೆ ಹಿತ್ತಲಲ್ಲಿ ಬೆಳೆದ ಕಳೆ ಗಿಡ, ಹುಲ್ಲು ತೆಗೆಯುವಾಗ ಕೆಲಸದಾಳು “ಇದು ಜಾಂಬು ಹಣ್ಣಿನ ಗಿಡ. ಇರ್ಲಿ ಅಲ್ವಾ” ಅಂತ ಬಿಟ್ಟಿದ್ದು ಈಗ ದೊಡ್ಡದಾಗಿದೆ. ಹೆಚ್ಚೇನೂ ನೀರು ಗೊಬ್ಬರ ಬೇಡದ ಈ ಹಣ್ಣಿನ ಗಿಡ ಸುಮಾರು ವರ್ಷಗಳಿಂದ ನಿರಂತರ ಹಣ್ಣುಗಳನ್ನು ನೀಡುತ್ತಲೇ ಇದೆ. ಎಪ್ರಿಲ್- ಮೇ ತಿಂಗಳಲ್ಲಿ ಬೀಜಗಳೇ ಇಲ್ಲದ ಹಣ್ಣುಗಳು ಸಿಕ್ಕಿದರೆ, ಸೆಪ್ಟಂಬರ್- ಅಕ್ಟೋಬರ್ ತಿಂಗಳಲ್ಲಿ ಒಳಗಡೆ ಬೀಜ ಇಲ್ಲದೇ ಇರುವ ಹಣ್ಣುಗಳೇ ಕಾಣ ಸಿಗುವುದಿಲ್ಲ. ಈ ವಿಚಿತ್ರಕ್ಕೆ ತುಂಬಾ ಸಲ ತಲೆ ಕೆಡಿಸಿಕೊಂಡದ್ದುಂಟು. ನಮ್ಮ ಮನೆಗೆ ಬರುವ ನೆಂಟರಿಗೆ, ನನ್ನ ಸಹೋದ್ಯೋಗಿಗಳಿಗೆ, ನೆರೆಹೊರೆಯವರಿಗೆ, ವಿದ್ಯಾರ್ಥಿಗಳಿಗೆ ಹಣ್ಣುಗಳನ್ನು ಕೊಟ್ಟು ಅವರು ಇಷ್ಟಪಟ್ಟು ತಿನ್ನುವಾಗ ನೋಡಿ ಸಂಭ್ರಮಿಸಿದ್ದೇನೆ. ನೆಂಟರ ಮನೆಗೆ ಹೋಗುವಾಗ ಹಣ್ಣುಗಳನ್ನು ನೀಡಿ ಖುಷಿಪಟ್ಟಿದ್ದೇನೆ. ರಸ್ತೆಯ ಪಕ್ಕವೇ ಹಣ್ಣಿನ ಗಿಡ ಇರುವುದರಿಂದ ಶಾಲೆಗೆ ಹೋಗುವ ಅದೆಷ್ಟೋ ಪುಟ್ಟ ಮಕ್ಕಳು, ಅದೆಷ್ಟೋ ದಾರಿಹೋಕರು ಕೂಡಾ ನಮ್ಮಲ್ಲಿ ಕೇಳದೆಯೂ ಹಣ್ಣು ಕಿತ್ತು ತಿಂದದ್ದನ್ನು ಎಷ್ಟೋ ಬಾರಿ ಕಂಡಿದ್ದೇನೆ. “ಹಣ್ಣು ಕೊಯ್ಯಬಹುದೇ?” ಎಂದು ಕೇಳಿ ತಿಂದವರೂ ಅನೇಕರಿದ್ದಾರೆ. ಹೆಚ್ಚೇಕೆ? ತುಳುವಿನಲ್ಲಿ ‘ಕುಪ್ಪುಳು” (ಕನ್ನಡ- ಕೆಂಬೂತ) ಅನ್ನುವ ಹಕ್ಕಿಗೆ ಮಾಗಿದ ಜಾಂಬು ಹಣ್ಣುಗಳು ಬಲು ಇಷ್ಟ.
ಒಮ್ಮೆಯಂತೂ ನನಗೆ ಚೆನ್ನಾಗಿ ನೆನಪಿದೆ. ಮಂಗಳೂರಿನಲ್ಲಿ ಉದ್ಯೋಗಿಯಾಗಿರುವ ತಮಿಳು ಮೂಲದ ಯುವಕನೋರ್ವ “ಮ್ಯಾಡಂ, ನನಗೆ ಈ ಹಣ್ಣುಗಳನ್ನು ಕೊಡಬಹುದೇ? ಹಣ ಎಷ್ಟಾಗ್ತದೆ ಹೇಳಿ. ನನ್ನ ತಂಗಿ ಗರ್ಭಿಣಿ. ಅವಳಿಗೆ ಈ ಹಣ್ಣುಗಳು ತುಂಬಾ ಇಷ್ಟ. ನಾನು ನಾಳೆ ಚೆನ್ನೈಗೆ ಹೋಗ್ತಿದ್ದೇನೆ” ಅಂದಾಗ ಹಣ್ಣಿಗೋಸ್ಕರ ಹಂಬಲಿಸುವ ಗರ್ಭಿಣಿ ತಂಗಿಯ ಆಸೆ ಪೂರೈಸುವ ಅಣ್ಣನ ಪ್ರೀತಿ ಕಂಡು ಖುಷಿ ಆಯ್ತು. “ಹಣವೇನೂ ಕೊಡುವುದು ಬೇಡ. ನಿಮಗೆ ಬೇಕಾದಷ್ಟು ತೆಗೆದುಕೊಂಡು ಹೋಗಿ” ಅಂದೆ. ಆ ತಂಗಿಯ ಕಣ್ಣಲ್ಲಿ ಅರಳುವ ಪ್ರೀತಿಯ ಪುಳಕ ನನ್ನ ಕಣ್ಣ ಮುಂದಿತ್ತು.
ಕಳೆದ ಹಲವು ವರ್ಷಗಳಿಂದ ನನ್ನ ಒಡನಾಡಿಯಾಗಿರುವ ಈ ಹಣ್ಣುಗಳನ್ನು ನನ್ನ ಸಂಶೋಧನೆಯಲ್ಲಿಯೂ ಉಪಯೋಗಿಸಿಕೊಂಡಿದ್ದೇನೆ. ಬಂಗಾರ, ಬೆಳ್ಳಿ, ತಾಮ್ರ, ಪಲ್ಲಾಡಿಯಮ್, Zinc Oxide ನ್ಯಾನೋ ಕಣಗಳ ತಯಾರಿಯಲ್ಲಿ ಜಾಂಬು ಹಣ್ಣಿನ ರಸವನ್ನು ಅಪಕರ್ಷಕವಾಗಿ ಬಳಸಿದಾಗ ಒಳ್ಳೊಳ್ಳೆ ಫಲಿತಾಂಶಗಳು ಸಿಕ್ಕಿವೆ. 3 ವರ್ಷದ ಹಿಂದೆ ಈ ಹಣ್ಣಿನ ರಸವನ್ನು ಬಳಸಿ ನಡೆಸಿದ ಬಂಗಾರದ ನ್ಯಾನೋ ಕಣಗಳ ತಯಾರಿಯ ಸಂಶೋಧನಾ ಫಲಿತಾಂಶ ಮಂಡಿಸಿದಾಗ “Best Poster Presentation” ಪ್ರಶಸ್ತಿ ನನಗೆ ಸಿಕ್ಕಿದಾಗ ಸಂತಸಪಟ್ಟ ನೆನಪು ಕೂಡಾ ಹಸಿರಾಗಿದೆ.
ಇಷ್ಟೆಲ್ಲಾ ಹೇಳಿದ ಮೇಲೆ ಬಹೂಪಯೋಗಿ ಜಾಂಬು ಹಣ್ಣು ಸಿಕ್ಕಿದ್ರೆ ನೀವು ತಿನ್ತೀರಲ್ವಾ?
-ಕೃಷ್ಣಪ್ರಭಾ, ಮಂಗಳೂರು
ಒಳ್ನಳೆಯ ಮಾಹಿತಿ.
ನನ್ನ ತವರಲ್ಲಿಈ ಹಣ್ಣಿನ ಗಿಡ ಇದೆ. ಬೇಸಿಗೆಯಲ್ಲಿ ದಾಹ ಹಾಗು ಹಸಿವಡಗಿಸುವ ಫಲ!
ನಾವು ಅದನ್ನು ನಕ್ಷತ್ರ ನೇರಳೆ ಎನ್ನುತ್ತೇವೆ.
ಮೊನ್ನೆ ಮೊನ್ನೆ ಊರಿಗೆ ಹೋದಾಗ ತಿಂದು ಬಂದೆ.ನಮ್ಮನೆಯಲ್ಲೆ ಈ ಹಣ್ಣಿನ ಗಿಡವಿದೆ.ನಮ್ಮ ಕೈಯ್ಯಾರೆ ಹಣ್ಣನ್ನು ಕಿತ್ತು ತಾಜಾ ತಾಜಾ ಹಣ್ಣನ್ನು ಸವಿಯುವುದೇ ಒಂದು ಸಂಭ್ರಮ! ಈ ಹಣ್ಣಿನ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಒದಗಿಸಿದ್ದಕ್ಕೆ ಧನ್ಯವಾದಗಳು.
ನೋಡೋಕೆ ಒಂದು ಸಣ್ಣ ವಿಚಾರ , ಆದರೆ ಅದರೊಳಗೆ ಅವಿತಿರೋ ವಿಷಯ ಭಂಡಾರ ಅಗಾಧ. ಸಾಕಷ್ಟು ಹೊಸ ವಿಚಾರಗಳನ್ನೊಳಗೊಂಡಂತಹ ಬರಹ .
ಒಳ್ಳೆಯ ಅಭಿಪ್ರಾಯಗಳಿಗಾಗಿ ಧನ್ಯವಾದಗಳು
ಸುರಹೊನ್ನೆ- ಧನ್ಯವಾದಗಳು
ಬಾಲ್ಯದಲ್ಲಿ ಸಾಕಷ್ಟು ತಿಂದಿದ್ದೇವೆ..ಮೈಸೂರಿನಲ್ಲಿ ಅಷ್ಟಾಗಿ ಕಾಣಸಿಗುವುದಿಲ್ಲ..ಅಪರೂಪಕ್ಕೆ ಸಿಕ್ಕರೂ ದುಬಾರಿ. ಚೆಂದದ ಬರಹ.
ಧನ್ಯವಾದಗಳು
ಸಾಕಷ್ಟು ಉಪಯುಕ್ತ ಮಾಹಿತಿಗಳನ್ನೊಳಗೊಂಡ ಸೊಗಸಾದ ಬರವಣಿಗೆ.
ಸಿಕ್ಕಿದ್ರೆ ತಿಂತೇನೆ. ಆದರೆ ನಿನ್ನ ಹಾಗೆ ಕೊಡುವವರು ಬೇಕಲ್ಲಾ!!? ಇಲ್ಲಿ ಇರುವ ಫೋಟೋಗಳ ಪೈಕಿ , ನಮ್ಮಲ್ಲಿ ನಕ್ಷತ್ರ ನೇರಳೆ ಯಾ ಕೆಂಪು ಜಂಬುನೇರಳೆ ಮತ್ತು ಬಿಳಿಯದು ಉಂಟು. ಆದರೆ ಫಲ ಯಥೇಚ್ಛ ಇಲ್ಲ. ಕೊದಿಗೆ ತಕ್ಕಷ್ಟು ಮಾತ್ರ.
ತವರಿಗೆ ಹೋದಾಗೆಲ್ಲಾ ಈ ಹಣ್ಣಿಗಾಗಿ ಹುಡುಕಾಡುವುದುಂಟು. ಆದರೆ ಇಷ್ಟೊಂದು ಮಾಹಿತಿಗಳು ತಿಳಿದಿರಲಿಲ್ಲ. ಧನ್ಯವಾದಗಳು.
ಲೇಖನ ಓದಿ ಮೆಚ್ಚುಗೆ ವ್ಯಕ್ತ ಪಡಿಸಿದ, ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು
ನಕ್ಷತ್ರ ಹಣ್ಣಿನ ಗುಣ ಬಣ್ಣನೆ ಸೊಗಸಾಗಿದೆ. ಈ ಹೆಣ್ಣು ಮಧುಮೇಹಿಗಳಿಗೆ ಒಳ್ಳೆಯದು. ಆದರೆ ಉಷ್ಣ ಹಣ್ಣು ಅಂತ ನಮ್ಮವರೋರ್ವರು ಈ ಹಣ್ಣನ್ನು ಪರಿಚಯಿಸಿದ್ದರು.
ಏನಾದರೂ ,
ರಾಸಾಯನಿಕ ವಿಷ ರಹಿತ ಹಣ್ಣು ಪರಿಚಯಿಸಿದ ತಮಗೆ ನಮನ.
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು
ಬಹಳ ಭಾವನಾತ್ಮಕ ಬೆಸುಗೆ ನಿಮ್ಮ ಬರಹದಲ್ಲಿ ತೋರಿತು.ಆತ್ಮೀಯತೆ,ಸಲುಗೆ,ಹಂಬಲ,…ಹೀಗೆ ನಾನಾ ರೀತಿಯಲ್ಲಿ ಎಳೆ ಎಳೆಯಾಗಿ ಬರಹದ ಮೂಲಕ ಹಣ್ಣಿನ ರುಚಿ ಹಂಚಿದಿರಿ.ಧನ್ಯವಾದಗಳು ಮ್ಯಾಡಂ