ಜರಾ ಆಂಖ್ ಮೆ ಭರ್ ಲೋ ಪಾನಿ…

Share Button

ಪ್ರವಾಸದ ಕೆಲವು ಸಂದರ್ಭಗಳಲ್ಲಿ, ದುರ್ಗಮವಾದ ಹಿಮಾಲಯದ ಗಿರಿಕಂದರಗಳಲ್ಲಿ ಅಹರ್ನಿಶಿ ಪಹರೆ ಕಾಯುವ ಗಡಿಭದ್ರತಾ ಪಡೆಯ ಯೋಧರನ್ನು ಕಂಡು  ಮಾತನಾಡಿಸಿದ್ದೇನೆ. ಅಕಸ್ಮಾತ್ ಅವರಲ್ಲಿ ಕರ್ನಾಟಕದವರು ಯಾರಾದರೂ ಇದ್ದರೆ, ನಮ್ಮ ಕನ್ನಡ ಮಾತುಗಳನ್ನು ಕೇಳಿದಾಗ ಕಣ್ಣರಳಿಸಿ ಸಂತೋಷದಿಂದ ಕನ್ನಡದಲ್ಲಿ ಮಾತನಾಡುತ್ತಾರೆ.

ಒಂದು ಕಡೆಯಿಂದ ಕಾಲು ಕೆದರಿ ಕದನಕ್ಕೆ ಬರುವ ಪಾಕಿಸ್ತಾನ, ಇನ್ನೊಂದು ಕಡೆ ಸದ್ದಿಲ್ಲದೆ ಕಬಳಿಸಲು  ಹೊಂಚು ಹಾಕುತ್ತಿರುವ ಚೀನಾ. ಈ ಎರಡೂ  ದೇಶಗಳ ಅತಿಕ್ರಮಣವನ್ನು ಹತ್ತಿಕ್ಕುವ ನಮ್ಮ ಗಡಿಭದ್ರತಾ ಯೋಧರಿಗೆ ಹಿಮಾಲಯದ ಚಳಿಯೂ ಅತಿದೊಡ್ಡ ವೈರಿ. ನಾಲ್ಕೈದು ಪದರದ ದಿರಿಸನ್ನು ತೊಟ್ಟು, ಮೇಲೆ ಉಲ್ಲನ್ ಸ್ವೆಟರ್ , ಶಾಲುಗಳನ್ನು ಹೊದ್ದಿದ್ದರೂ, ಜಮ್ಮು-ಕಾಶ್ಮೀರ ರಾಜ್ಯದ ಸುರಕ್ಷಿತ ತಾಣಗಳಿಗೆ ಪ್ರವಾಸಿಗರಾಗಿ ಹೋದ ನಾವು  ಚಳಿಗೆ ನಡುಗುತ್ತಿದ್ದೆವು.  ಹೀಗಿರುವಾಗ, ಚಳಿಗಾಲದಲ್ಲಿ ಮೈನಸ್ 60 ಡಿಗ್ರಿ ಸೆಲ್ಸಿಯಸ್  ತಾಪಮಾನಕ್ಕಿಳಿಯುವ  ಸಿಯಾಚಿನ್ ಸೇನಾನೆಲೆಯ ಯೋಧರ ದೈನಂದಿನ ಬದುಕನ್ನು ಊಹಿಸಿ ಖೇದವಾಗುತ್ತದೆ. ‘ಬಗಲಿನಲ್ಲಿಯೇ ಇರುವ ದುಶ್ಮನ್’  ಆಗಿಂದಾಗ್ಗೆ ಆಕ್ರಮಣ ಮಾಡದೇ   ಸಭ್ಯ ನೆರೆರಾಷ್ಟ್ರವಾಗಿರುತ್ತಿದ್ದರೆ, ಯಾವುದೇ ಸಂಪನ್ಮೂಲಗಳನ್ನು ಹುಟ್ಟು ಹಾಕದ ಸಿಯಾಚಿನ್ ಗ್ಲೇಸಿಯರ್ ಅನ್ನು ಅಪಾರ ಸೇನಾ ವೆಚ್ಚದೊಂದಿಗೆ ಕಾಯುವ ಕೆಲಸ ಉಭಯ ದೇಶಗಳಿಗೆ ಬೇಕಾಗಿಯೇ ಇಲ್ಲ. ಎಲ್ಲಕ್ಕೂ ಮಿಗಿಲಾಗಿ ನಮ್ಮ ತರುಣ ಯೋಧರು ಅನ್ಯಾಯವಾಗಿ ತಮ್ಮ ಪ್ರಾಣಾರ್ಪಣೆ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ.

ಜಮ್ಮು ಕಾಶ್ಮೀರ ರಾಜ್ಯದ , ಲಡಾಕ್ ಜಿಲ್ಲೆಯಲ್ಲಿರುವ ಪ್ರಮುಖ ನಗರಿಯಾದ ‘ಲೇಹ್’ ನಲ್ಲಿ ಹಾಲ್ ಆಫ್ ಫ಼ೇಮ್ ಎಂಬ ಹೆಸರಿನ ಸೇನೆಯ ವಸ್ತು ಸಂಗ್ರಹಾಲಯ ಇದೆ. 1999 ರಲ್ಲಿ, ಕಾರ್ಗಿಲ್ ನಲ್ಲಿ ನಡೆದ  ಭಾರತ-ಪಾಕಿಸ್ಥಾನ ಯುದ್ದದಲ್ಲಿ ಹುತಾತ್ಮರಾದ ಯೋಧರ ಬಗ್ಗೆ ವಿವರಣೆಗಳು ಇಲ್ಲಿ ಲಭ್ಯ. ಯುದ್ಧಕ್ಕೆ ಸಂಬಂಧಿಸಿದ ಪರಿಕರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಹುತಾತ್ಮರಾದ ಎಳೆ ವಯಸ್ಸಿನ ಯೋಧರ ಭಾವಚಿತ್ರದ ಮುಂದೆ ನಿಂತು, ಅವರ ಸಾಧನೆ ಮತ್ತು ತ್ಯಾಗದ ವಿವರಗಳನ್ನು ಓದುವಾಗ ಗೌರವ, ಹೆಮ್ಮೆ ಹಾಗೂ ದು:ಖ ಏಕಕಾಲಕ್ಕೆ ಉಂಟಾಗುತ್ತದೆ.

‘ಹುಟ್ಟುಗುಣ ಸುಟ್ಟರೂ ಬಿಡದು’  ಎಂಬಂತೆ, ಪಾಕಿಸ್ತಾನವು ಮರುಭೂಮಿಯಲ್ಲಿಯೂ ಭಾರತದೊಂದಿಗಿನ ತನ್ನ ಗಡಿಯುದ್ದಕ್ಕೂ ತೊಂದರೆ ಕೊಡುತ್ತಾ ಬಂದಿದೆ.  1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದ ಸಂಭವಿಸಿ ಭಾರತವು ವಿಜಯಿಯಾದ ಸ್ಥಳವು ರಾಜಸ್ಥಾನದ ಜೈಸಲ್ಮೇರ್ ನ ಸಮೀಪದ ‘ಲೊಂಗ್ ವಾಲ್’ . ಅಂದಿನ ಯುದ್ಧದಲ್ಲಿ ವಶಪಡಿಸಿಕೊಂಡ ಪಾಕಿಸ್ತಾನದ ಟಾಂಕರ್ ಒಂದನ್ನು ಇಲ್ಲಿ ಸ್ಮಾರಕವಾಗಿ ಇರಿಸಿದ್ದಾರೆ. ಪಂಜಾಬ್ ರೆಜಿಮೆಂಟ್ 23 ರ ಸಾಹಸಗಾಥೆಯ ವಿವರವನ್ನು ಅಲ್ಲಿನ ಫಲಕದಲ್ಲಿ ಬರೆದಿದ್ದಾರೆ. ಈ ಯುದ್ಧದ ವಿಶೇಷತೆ ಏನೆಂದರೆ, ಬೆರಳೆಣಿಕೆಯಷ್ಟಿದ್ದ ನಮ್ಮ ಯೋಧರು ತಮ್ಮ ಸಮಯಸ್ಫೂರ್ತಿ, ಚಾಕಚಕ್ಯತೆ ಹಾಗೂ ವಾಯುದಳದ ಸಹಕಾರದಿಂದ 300 ಕ್ಕೂ ಹೆಚ್ಚಿದ್ದ ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸಿದರು, ಕೆಲವರನ್ನು ಕೊಂದರು ಹಾಗೂ ಹಲವಾರು ಪಾಕಿಸ್ತಾನಿ ಟಾಂಕರ್ ಗಳನ್ನು ವಶಪಡಿಸಿಕೊಂಡರು.

‘ಲೊಂಗ್ ವಾಲ್’ ಯುದ್ಧದಲ್ಲಿ ವಶಪಡಿಸಿಕೊಂಡ ಪಾಕಿಸ್ತಾನದ ಟಾಂಕರ್

ಪದೇ ಪದೇ ಸೋಲುಂಡರೂ, ಆಗಾಗ ಪ್ರಚೋದಕ ದಾಳಿ ನಡೆಸುತ್ತಾ, ಉಗ್ರರ ಅಟ್ಟಹಾಸಕ್ಕೆ ಕುಮ್ಮಕ್ಕು ಕೊಡುವ ಮೂಲಕ ಜಾಗತಿಕವಾಗಿ ಭಯೋತ್ಪಾದನೆಯನ್ನು ಪೋಷಿಸುವ ನಮ್ಮ ‘ನೆರೆ’ರಾಷ್ಟ್ರವು ನಿಜಕ್ಕೂ ‘ಹೊರೆ’ರಾಷ್ಟ್ರವಾಗಿದೆ ಎಂದುದಕ್ಕೆ ಫೆಬ್ರವರಿ 14,2019 ರಂದು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯೇ ಸಾಕ್ಷಿ.

ನಿಜವಾದ ಸೇನಾನೆಲೆಗಳಿಗೆ ಜನಸಾಮಾನ್ಯರಿಗೆ ಪ್ರವೇಶವಿಲ್ಲವಾದರೂ, 1997 ರಲ್ಲಿ ಬಿಡುಗಡೆಯಾದ ಪ್ರಖ್ಯಾತ ಚಲನಚಿತ್ರ ‘ಬಾರ್ಡರ್’ ಮತ್ತು  2019 ರಲ್ಲಿ ಬಿಡುಗಡೆಯಾದ ‘ಉರಿ-ದಿ ಸರ್ಜಿಕಲ್ ಸ್ಟ್ರೈಕ್ ‘ ಸಿನೆಮಾಗಳ ಮೂಲಕ ಸೈನಿಕರ ಜೀವನದ ಕೆಲವು ಮಜಲುಗಳು ಸ್ವಲ್ಪಮಟ್ಟಿಗೆ ಅರ್ಥವಾಗುತ್ತವೆ. ಇವೆರಡೂ ಚಲನಚಿತ್ರಗಳನ್ನು ಯುದ್ಧದ ನೈಜ ಘಟನೆಗಳ ಆಧಾರದ ಮೇಲೆ ನಿರ್ಮಿಸಿಲಾಗಿದೆ.  ಸೇನೆಯ ಕಾಯಕದ ಜವಾಬ್ದಾರಿ, ದೇಶಭಕ್ತಿ, ಶಿಸ್ತು, ಕಠಿಣ ಸನ್ನಿವೇಶಗಳು, ತುರ್ತು ಅವಶ್ಯಕತೆಗಳು, ಮರಣಕ್ಕೆ ಅಂಜದ ಪ್ರವೃತ್ತಿ, ಸೇವಾ ಮನೋಭಾವ …..ಇವೆಲ್ಲದರ ನಡುವೆ ಆಗೊಮ್ಮೆ ಈಗೊಮ್ಮೆ ಕಾಡುವ ಭಾವುಕತೆಯ ಪರಿಚಯವಾಗುತ್ತದೆ. ಬಾರ್ಡರ್ ಚಿತ್ರದಲ್ಲಿ ರಾಜಸ್ಥಾನದ   ‘ಲೋಂಗೋವಾಲ್ ‘ ನ ಮರುಭೂಮಿಯಲ್ಲಿ ಯೋಧರು ಯಾವುದೇ ಕ್ಷಣದಲ್ಲಿ ಯುದ್ಧಕ್ಕೆ ಆದೇಶ ಬರಬಹುದೆಂಬ ನಿರೀಕ್ಷೆಯೊಂದಿಗೆ ತಮ್ಮ ಕುಟುಂಬದವರನ್ನು ನೆನೆಯುತ್ತಾ  ಹಾಡುವ ‘ಸಂದೇಶೆ ಆತೇ ಹೇಂ….ಹಮೇ ಲಡಪಾತೇ ಹೇಂ….ತೋ ಚಿಟ್ಟೀ ಆತೀ ಹೆ….ವೋ ಪೂಛ್  ಜಾತೀ ಹೆ….ಕೆ ಘರ್ ಕಬ್ ಆವೋಗೆ..”  ಹಾಡಿನ ದೃಶ್ಯಗಳನ್ನು ನೋಡಿದಾಗ ಗದ್ಗದಿತರಾಗುತ್ತೇವೆ. ಗಾನಕೋಗಿಲೆ ಲತಾ ಮಂಗೇಶ್ಕರ್  ಅವರ ಸಿರಿಕಂಠದಲ್ಲಿ ಮೂಡಿ ಬಂದ ‘ಯೇ ಮೆರೆ ವತನ್ ಕೆ ಲೋಗೋಂ…ಜರ ಆಂಖ್ ಮೆ ಭರ್ ಲೋ ಪಾನಿ’ ಹಾಡನ್ನು ಆಲಿಸುವಾಗ ಕಣ್ಣಾಲಿಗಳು ತುಂಬಿ ಬರುತ್ತವೆ.

ತಮ್ಮ ಕುಟುಂಬದಿಂದ ದೂರವಾಗಿ ಕೆಲಸ ಮಾಡುವ  ಯೋಧರು ಭಾರತದ ಎಲ್ಲೆಡೆಯೂ ಎಲ್ಲಾ ಕಾಲದಲ್ಲಿಯೂ ಇರುತ್ತಾರೆ.  ನೆಲ-ಜಲ-ವಾಯು ಮಾರ್ಗಗಳಲ್ಲಿ ಕಟ್ಟೆಚ್ಚರದಿಂದ ಪಹರೆ ಕಾಯುತ್ತಾ ದೇಶವನ್ನು ರಕ್ಷಿಸುವ ಸೇನೆಯು ಸದಾ ಎಚ್ಚರವಾಗಿರುವುದರಿಂದ ನಾವು ಸುಖವಾಗಿ ನಿದ್ರಿಸಲು ಸಾಧ್ಯವಾಗುತ್ತಿದೆ.  ಲಕ್ಷಾಂತರ ಜನರು ಒಂದೆಡೆ ಸೇರುವ ದಸರಾ, ಕುಂಭಮೇಳದಂತಹ ಹಬ್ಬಗಳ ಸಂದರ್ಭದಲ್ಲಿ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡಿಕೊಳ್ಳಲು  ಸೇನೆಯೇ ಬರಬೇಕು. ದೇಶದ ಯಾವುದೇ ಭಾಗದಲ್ಲಿ ಪ್ರಾಕೃತಿಕ ವಿಕೋಪಗಳಾದ ಭೂಕುಸಿತ, ಪ್ರಳಯ, ಭೂಕಂಪ, ಚಂಡಮಾರುತಗಳುಂಟಾದಾಗ ಜನರನ್ನು ಸುರಕ್ಷಿತ ತಾಣಗಳಿಗೆ ತಲಪಿಸಲು ಸೇನೆ ಧಾವಿಸುತ್ತದೆ.

ಹಿಮಾಲಯದ ಕೊರೆಯುವ ಚಳಿಯ ಗಡಿಭಾಗಗಳಲ್ಲಿ, ರಾಜಸ್ಥಾನದ ನೀರಿಲ್ಲದ ಸುಡು ಮರುಭೂಮಿಯಲ್ಲಿ,   ಮುಸಲಧಾರೆಯ  ಅಸ್ಸಾಂನ ಕಾಡುಗಳಲ್ಲಿ,  ಕಡಲ ಕಿನಾರೆಯ ದ್ವೀಪಗಳಲ್ಲಿ ಹೀಗೆ ಎಲ್ಲೆಡೆಯೂ ಸೇವಾನಿರತ ಯೋಧರನ್ನು ನಾವು ಕಾಣುತ್ತೇವೆ. ಅವರ ಸೇವೆಗೆ  ಪ್ರತ್ಯುಪಕಾರವಾಗಿ ನಾವು ಏನೂ ಮಾಡುವುದಿಲ್ಲ. ಕನಿಷ್ಟ ಜವಾಬ್ದಾರಿಯುತ ನಾಗರಿಕರಾಗಿ, ಯೋಧರ ಬಗ್ಗೆ ಗೌರವಯುತವಾಗಿ ವರ್ತಿಸಿ, ಸಂದರ್ಭ ಸಿಕ್ಕಿದರೆ ಒಂದೆರಡು ಒಳ್ಳೆಯ ಮಾತುಗಳನ್ನಾಡಿದರೂ ಸಾಕು, ಅದು ಭಾರತೀಯರ ಕರ್ತವ್ಯ ಕೂಡ.

ಜೈ ಜವಾನ್ !
ಜೈ ಹಿಂದ್ !


‘ಸಂದೇಶೆ ಆತೇ ಹೇಂ’ 
ಹಾಡನ್ನು ಆಲಿಸಲು ಈ ಯೂ-ಟ್ಯೂಬ್ ಕೊಂಡಿಯನ್ನು ಕ್ಲಿಕ್ಕಿಸಿ :

.

-ಹೇಮಮಾಲಾ.ಬಿ, ಮೈಸೂರು

3 Responses

  1. Shiva Prasad says:

    Zara yaad karo kurbani Jai hind

  2. Nayana Bajakudlu says:

    ನಮ್ಮ ವೀರ ಯೋಧರು ಎಂತಹ ಪರಿಸ್ಥಿತಿಯಲ್ಲಿ ನಮ್ಮನ್ನೂ , ನಮ್ಮ ದೇಶವನ್ನು ಕಾಯುತ್ತಾರೆ ಅನ್ನುವುದನ್ನು ಮನದಟ್ಟಾಗುವಂತೆ ವಿವರಿಸಿದ್ದೀರಿ ಮೇಡಂ.
    ಮೇರಾ ದೇಶ್ ಮಹಾನ್, ವೀರ್ ಜವಾನ್ ಅಮರ್ ರಹೇ .

  3. Shrinivas Panchamukhi says:

    ನಮ್ಮ ದೇಶದ ಸೈನಿಕರಿಗೆ ಸೂಕ್ತ ಶೃದ್ಧಾಂಜಲಿ. ನಾನು ಇತ್ತೀಚೆಗೆ ಭೇಟಿ ಇತ್ತಾಗ ಜೈಸಲಾಮರ್ ವಾರ್ ಮ್ಯೂಸಿಯಂ ನಲ್ಲಿ ಲೋಂಗೇವಾಲಾ ಯುದ್ಧದ ಕುರಿತ ಲೈಟ್ ಸೌಂಡ್ ಷೋ ..ಅದು ಲೋಂಗೇವಾಲಾ ವಾರ್ ದಿನದಂದು ನೋಡಿದಾಗ ರೋಮಾಂಚನವಾಗಿತ್ತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: