ಸಿಂಧೂ-ಜಂಸ್ಕರ್ ಸಂಗಮ

Share Button

ಕಣ್ಣು ಹಾಯಿಸಿದಷ್ಟೂ ದೂರ ಕಾಣಿಸುವ ಹಿಮವಿಲ್ಲದ ಒಣಬೆಟ್ಟಗಳು ಅಥವಾ ಹಿಮದ ಚಾದರ ಹೊದ್ದ ಬೆಟ್ಟಗಳು, ಇವುಗಳ ಮಧ್ಯೆ ಹೆಬ್ಬಾವಿನಂತೆ ಬಳಸಿ ಹಾದುಹೋಗುತ್ತಿರುವ ರಸ್ತೆಯ ಇಕ್ಕೆಲದಲ್ಲಿ ಆಗಾಗ  ಕಾಣಿಸುವ ಬೌದ್ಧರ ಸ್ತೂಪಗಳು,  ಅಪರೂಪವಾಗಿ ಕಂಗೊಳಿಸುವ  ಹಸಿರು ಹೊಲದಲ್ಲಿ ಅರಳಿದ ಹಳದಿ ಸಾಸಿವೆ ಹೂಗಳು, ಬಾರ್ಲಿಯ ತೆನೆಗಳು…ಹೀಗೆ  ಪ್ರತಿ ನೋಟವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯೋಣ ಎನಿಸುವ ಭೂಚಿತ್ರಣಗಳನ್ನು ನೋಡುತ್ತಾ ಲೇಹ್ ನಗರದಿಂದ ಒಂದೂವರೆ ಗಂಟೆಗಳ ಕಾಲ    ಕಾರಿನಲ್ಲಿ  ಅಂದಾಜು 40 ಕಿ.ಮೀ    ಕ್ರಮಿಸಿದಾಗ ನಾವು  ಜಂಸ್ಕರ್ ಕಣಿವೆಯ  ‘ ನಿಮೊ ‘ ಎಂಬ ಹಳ್ಳಿಯನ್ನು ತಲಪಿರುತ್ತೇವೆ..

‘ನಿಮೋ’ ನಲ್ಲಿ  ರಸ್ತೆಯ ಎಡಗಡೆಯಲ್ಲಿ  ಎರಡು ನದಿಗಳ ಸಂಗಮವು ಕಾಣಿಸುತ್ತದೆ. ಈ ಸಂಗಮದಲ್ಲಿ ಸೃಷ್ಟಿಯಾಗಿರುವ  ವರ್ಣವೈವಿಧ್ಯವು ಕ್ಯಾಮೆರಾದ ಕಣ್ಣಿಗೂ ನಮ್ಮ ಮನಸ್ಸಿಗೂ ದೃಶ್ಯಕಾವ್ಯ. ಯಾಕೆಂದರೆ, ಈ ಸಂಗಮದಲ್ಲಿ, ಅಚ್ಚ ನೀಲಿ ಬಣ್ಣದಿಂದ ಕಂಗೊಳಿಸುವ ನದಿಯು ಭಾರತದ ಪ್ರಾಚೀನ ಇತಿಹಾಸದಲ್ಲಿ ‘ಸಿಂಧೂ ನದಿ ಕಣಿವೆ  ಸಂಸ್ಕೃತಿ’ಯ ಸ್ಮೃತಿಗೆ ಕಾರಣವಾದ ಚಾರಿತ್ರಿಕ ನದಿ.  ಆಸ್ತಿಕರು   ‘ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತೀ ನಮ೯ದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು’  ಎಂದು ಪಠಿಸುವ ಪುಣ್ಯನದಿ. ಸಿಂಧೂನದಿಯೊಂದಿಗೆ ಕಂದು-ಹಳದಿ ಕೆಸರುರಾಡಿಯ ಬಣ್ಣದ, ಜಂಸ್ಕರ್ ನದಿಯು ಸೇರುವ ಈ ಜಾಗದಲ್ಲಿ , ಮಿಶ್ರವಾದ ನದಿನೀರಿನ ಬಣ್ಣಬದಲಾವಣೆಯ ಹಂತಗಳು ಸ್ಪಷ್ಟವಾಗಿ ಕಾಣಿಸುತ್ತವೆ.

ಜಂಸ್ಕರ್  ನದಿ ಕಣಿವೆಯಲ್ಲಿ ಚಳಿಗಾಲದಲ್ಲಿ ನದಿಯ ನೀರು ಮಂಜುಗಡ್ಡೆಯಾಗುತ್ತದೆ. ಆ ಸಮಯದಲ್ಲಿ,  ನದಿಯ ಮೇಲೆ  ಹಲವಾರು ಸಾಹಸ ಕ್ರೀಡೆಗಳನ್ನು ಆಡಲು ಅವಕಾಶವಿರುತ್ತದೆ. ಇಲ್ಲಿ ಜನವಸತಿ ಅತಿ ಕಡಿಮೆ,    ಶೀತವುಳ್ಳ   ಅರೆ ಮರುಭೂಮಿಯಂತಹ ಜಾಗವಿದು . ಸಮುದ್ರ ಮಟ್ಟದಿಂದ 11000 ಅಡಿ ಮೇಲೆ ಇದೆ.  ವರ್ಷದ  ಹೆಚ್ಚಿನ ತಿಂಗಳೂ ಹಿಮಪಾತವಾಗಿ, ಮೈನಸ್ 30 ಡಿಗ್ರಿ ಸೆಲ್ಶಿಯಸ್  ವರೆಗೂ ಉಷ್ಣಾಂಶವಿರುವ ಜಾಗದಲ್ಲಿ ಅದು ಹೇಗೆ ಜನರು ಬದುಕುತ್ತಾರೋ ಎಂದು ಅಚ್ಚರಿಯಾಗುತ್ತದೆ.  ಇತ್ತೀಚಿನ ವರೆಗೂ ತಲಪಲಾಗದ ಹಲವಾರು ಸ್ಥಳಗಳನ್ನು ಹೊಂದಿರುವ  ಜಂಸ್ಕರ್ ಕಣಿವೆಯಲ್ಲಿರುವ   ಹೆಚ್ಚಿನವರು ಟಿಬೆಟಿಯನ್ ಮೂಲದ ಬೌದ್ಧರು. ಅವರ ಜನಜೀವನ ಮತ್ತು ಸಂಸ್ಕೃತಿ ಲಡಾಕ್ ನ ಇತರರಿಗಿಂತ ಸ್ವಲ್ಪ ಭಿನ್ನ. ತಮ್ಮದೇ ಆದ ಜ಼ಂಸ್ಕರ್ ಭಾಷೆಯನ್ನು ಮಾತನಾಡುತ್ತಾರೆ.

ಜೂನ್ ನಿಂದ ಅಕ್ಟೋಬರ್ ವರೆಗಿನ ಸಮಯದಲ್ಲಿ, ಜಂಸ್ಕರ್ ಕಣಿವೆಯಲ್ಲಿದ್ದು ಕೃಷಿಯೋಗ್ಯ ಭೂಮಿಯಲ್ಲಿ ಗೋಧಿ, ಬಾರ್ಲಿ, ಸಾಸಿವೆ ಇತ್ಯಾದಿ ಬೆಳೆಯುವ  ಈ ಜನರು  ಪರಸ್ಪರ ಸಹಕಾರ ಮತ್ತು ಅವಲಂಬನೆಯಿಂದ ಕೃಷಿ ಕೆಲಸಗಳನ್ನು ಮಾಡುತ್ತಾರೆ. ಯಾಕ್ ಮೃಗಗಳನ್ನು ಮೇಯಿಸುತ್ತಾ, ಯಾಕ್ ಹಾಲಿನಿಂದ ವಿವಿಧ ಹೈನುಗಾರಿಕೆಯ  ಉತ್ಪನ್ನಗಳನ್ನು ತಯಾರಿಸುತ್ತಾ, ಸಾಮೂಹಿಕವಾಗಿ ಹಾಡು, ನೃತ್ಯ ಮಾಡುತ್ತಾ ನೆಮ್ಮದಿಯಿಂದ ಇರುವ ಈ ಜನರು  ಚಳಿಗಾಲ ಆರಂಭವಾಗುತ್ತಿದ್ದಂತೆ,  ತಮಗೆ ಹಾಗೂ ಸಾಕುಪ್ರಾಣಿಗಳಿಗೆ ಆಹಾರ ವಸ್ತುಗಳು ದೊರೆಯುವ  ತಗ್ಗಿನಲ್ಲಿರುವ ಪ್ರದೇಶಗಳಿಗೆ ವಲಸೆ  ಹೋಗುತ್ತಾರೆ.

 

ಸಿಂಧೂ-ಜಂಸ್ಕರ್ ಸಂಗಮವನ್ನು ತಲಪುವುದು ಹೀಗೆ:

ಲಡಾಕ್ ಗೆ ಹೋದವರು ನೋಡಲೇಬೇಕಾದ  ಸ್ಥಳವಿದು . ಅಲ್ಲಿಗೆ ತಲಪಲು ದಿಲ್ಲಿಯಿಂದ ವಿಮಾನದ ಅಥವಾ ರಸ್ತೆ ಮೂಲಕ ಲೇಹ್ ತಲಪಿ ಅಲ್ಲಿಂದ  ಟ್ಯಾಕ್ಸಿಯ ಮೂಲಕ  ಜಂಸ್ಕರ್ ಕಣಿವೆಯನ್ನು ತಲಪಬಹುದು. ಮನಾಲಿ-ಶ್ರೀನಗರ ಮಾರ್ಗವಾಗಿಯೂ ರಸ್ತೆಯ ಮೂಲಕ ಹೋಗಬಹುದು. ಮುಂಗಡ ಕಾಯ್ದಿರಿಸುವಿಕೆಯ ಮೂಲಕ ಲೇಹ್ ನಲ್ಲಿ  ವಸತಿ ಸೌಲಭ್ಯ ದೊರಕುತ್ತದೆ. ಲೇಹ್ ಹಿಮಾಲಯದ ಎತ್ತರದ ಪರ್ವತಪ್ರದೇಶವಾದುದರಿಂದ, ನಮ್ಮ ಶರೀರವು ಅಲ್ಲಿಯ ಕಡಿಮೆ ಆಮ್ಲಜನಕದ ವಾತಾವರಣಕ್ಕೆ ಹಾಗೂ ಮೌಂಟೇನ್ ಸಿಕ್ನೆಸ್  ಗೆ ಹೊಂದಿಕೊಳ್ಳಲು ಕನಿಷ್ಟ ಒಂದು ದಿನವಾದರೂ ಬೇಕಾಗುತ್ತದೆ. ಲೇಹ್ ತಲಪಿದ ಪ್ರಥಮ ದಿನ ಯಾವ ಪ್ರಯಾಣವನ್ನೂ ಮಾಡದೆ, ಸಾಕಷ್ಟು ವಿಶ್ರಾಂತಿ ಪಡೆದು ಮರುದಿನ ಸ್ಥಳೀಯ ಪ್ರಯಾಣ ಕೈಗೊಳ್ಳುವುದು ಸೂಕ್ತ.

– ಹೇಮಮಾಲಾ.ಬಿ, ಮೈಸೂರು

(18 ಸೆಪ್ಟೆಂಬರ್ 2018 ರ ಪ್ರಜಾವಾಣಿ ಪತ್ರಿಕೆಯ ‘ಮುಕ್ತಛಂದ’ ವಿಭಾಗದಲ್ಲಿ ಪ್ರಕಟವಾದ ಬರಹ)

4 Responses

  1. Veerendra Angadi says:

    ಜಂಸ್ಕರ್ ನದಿ ಕಣಿವೆಗೆ ಹೋಗಿ ಬಂದಂತಾಯ್ತು ಒಂದೊಳ್ಳೆ ಬರವಣಿಗೆ ಮತ್ತು ಮಾಹಿತಿ.

  2. Ramesh Y says:

    ಹೇಮ ಮೆಡಮ್ ನೀವೆ ಧನ್ಯರು ಭಾರತದ ಭೂಪಟದಿ ಇರುವ ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಪುಣ್ಯವಂತರು ನೀವೂ

  3. Pushpalatha Mudalamane says:

    ನಿಮ್ಮ ಜೊತೇನೇ ಹೋಗಬೇಕಿತ್ತು!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: