ಮೇರಿ ಕ್ಯೂರಿ-ಮಹಿಳಾ ವಿಜ್ಞಾನಿ

Share Button


ಮೇರಿ ಕ್ಯೂರಿ – ಹಲವಾರು ಪ್ರಥಮಗಳ ಧೀಮಂತ ಮಹಿಳೆ!

“ಪ್ರತಿಭಾನ್ವಿತ ಮಹಿಳೆಯರು ತೀರಾ ವಿರಳ ಮತ್ತು ಒಬ್ಬ ಸಾಮಾನ್ಯ ಮಹಿಳೆ, ವಿಜ್ಞಾನಿಯೊಬ್ಬನ ಸಾಧನೆಗಳಿಗೆ ಅಡ್ಡಿಮಾತ್ರವಾಗಬಲ್ಲಳಷ್ಟೇ”. ಹೀಗಂದವರು ಖ್ಯಾತ ವಿಜ್ಞಾನಿಯಾದ ಪ್ರೊಫೆಸರ್ ಪಿಯರಿ ಕ್ಯೂರಿ. ತಮ್ಮ ಇಪ್ಪತ್ತೆರಡನೇ ವಯಸ್ಸಿನಲ್ಲಿ ತಾವು ಹೇಳಿದ ಮಾತುಗಳಿಗೆ ತದ್ವಿರುದ್ದವಾದ ಅನುಭವವನ್ನು ಮಿಸ್ಟರ್ ಪಿಯರೀ ಕ್ಯೂರಿಯವರು  ತನ್ನ ಜೀವಮಾನವಿಡೀ ಅನುಭವಿಸಬೇಕಾಗಿ ಬಂದುದು ಸಂತೋಷದ ವಿಚಾರ. ಅವರ  ಬಾಳಸಂಗಾತಿಯಾಗಿ ಬಂದಂತಹ ಮೇರಿ ಕ್ಯೂರಿಯವರು ಅವರಿಗೊಲಿದ ನೋಬೆಲ್ ಪ್ರಶಸ್ತಿಗಿಂತಲೂ ಎಷ್ಟೋಪಟ್ಟು ಹೆಚ್ಚು ಘನತೆಯುಳ್ಳ  ಪಾರಿತೋಷಕವಾಗಿದ್ದರು.

ಎರಡುಬಾರಿ ನೋಬೆಲ್ ಪ್ರಶಸ್ತಿಯನ್ನು ಗಳಿಸಿದ ಏಕೈಕ ಮಹಿಳೆ,  ಮೇರಿ ಸ್ಕ್ಲೋಡೋಸ್ಕ ಕ್ಯೂರಿ. ಇಂದಿಗೂ ವಿಜ್ಞಾನ ಜಗತ್ತಿನಲ್ಲಿ ಮಿನುಗುತ್ತಿರುವ ತಾರೆಯಾಗಿರುವ ಮೇರಿ ಸ್ಕ್ಲೋಡೋಸ್ಕ ಕ್ಯೂರಿಯವರ ಜೀವನಚರಿತ್ರೆ ಹಾಗೂ ಆವಿಷ್ಕಾರಗಳನ್ನು ತಿಳಿಯುವುದೆಂದರೆ, ಅದೊಂದುದು ರೋಚಕ ಅನುಭವೇ ಸರಿ.  ಹಲವಾರು ಪ್ರಶಸ್ತಿಗಳನ್ನು ಪಡೆದಿರುವ  ಮೇರಿ ಕ್ಯೂರಿಯವರು, ಹಲವಾರು ಪ್ರಥಮಗಳಿಗೂ ಸಾಕ್ಷಿಯಾಗಿದ್ದರು. ನೋಬೆಲ್ ಪಾರಿತೋಷಕ ಪಡೆದ ಪ್ರಥಮ ಮಹಿಳೆ, ಅದರಲ್ಲೂ ಎರಡುಬಾರಿ ನೋಬೆಲ್ ಪಡೆದ ಪ್ರಥಮ ಮಹಿಳೆ, ಪ್ಯಾರಿಸ್ ವಿಶ್ವ ವಿದ್ಯಾಲಯದಲ್ಲಿ ಪ್ರೊಫೆಸ್ಸರ್ ಆಗಿ ಆಯ್ಕೆಯಾದ ಪ್ರಥಮ ಮಹಿಳೆ, ವಿಜ್ಞಾನದಲ್ಲಿ ಮಾತ್ರವಾಗಿ ಎರಡು ಬಾರಿ ನೋಬೆಲ್ ಪುರಸ್ಕೃತ ಏಕೈಕ ವ್ಯಕ್ತಿ, ಇನ್ನೂ ಹಲವಾರು…

ಮೇರಿಯವರು 1867 ರ ನವೆಂಬೆರ್ 7 ರಂದು ಪೋಲೆಂಡ್ ದೇಶದ ವಾರ್ಸಾದಲ್ಲಿ ಒಳ್ಳೆಯ ವಿದ್ಯಾಭ್ಯಾಸವಿರುವ ಸುಸಂಸ್ಕೃತ, ಆದರೆ ಆರ್ಥಿಕವಾಗಿ ಅಷ್ಟೇನೂ ಶ್ರೀಮಂತರಲ್ಲದ ಕುಟುಂಬದಲ್ಲಿ ಐದನೆಯ ಹಾಗೂ ಕೊನೆಯ ಮಗುವಾಗಿ ಜನಿಸಿದರು. ಮೇರಿಯ ತಂದೆ ವ್ಲಾಡಿಸ್ಲಾ ಸ್ಕ್ಲೋಡೋಸ್ಕಿ ವಾರ್ಸಾದ ಹೈಸ್ಕೂಲೊಂದರಲ್ಲಿ ಭೌತಶಾಸ್ತ್ರ ಮತ್ತು ಗಣಿತದ ಅಧ್ಯಾಪಕರಾಗಿದ್ದರು, ಮತ್ತು ತಾಯಿ ಬ್ರೋನಿಸ್ಲವ ಸ್ಕ್ಲೋಡೋಸ್ಕ ಚೆನ್ನಾಗಿ ಪಿಯಾನೋ ಕಲಿಸುತ್ತಿದ್ದರು. ಮೇರಿಗೆ ಹತ್ತು ವರ್ಷವಿದ್ದಾಗಲೇ ಜೀವನದಲ್ಲಿ ಆಘಾತಗಳು ಆರಂಭವಾದುವು. ತಾಯಿ ಟೈಫಾಯಿಡ್ ಜ್ವರದಲ್ಲಿ ತೀರಿಹೋದರು, ತಂದೆಯವರು ಕೆಲಸ ಕಳೆದುಕೊಂಡರು. ಏಕೆಂದರೆ, ಆದಿನಗಳಲ್ಲಿ ಪೋಲೆಂಡ್ ರಷ್ಯಾದ ಒಂದು ಭಾಗವಾಗಿತ್ತಲ್ಲದೆ, ಜ್ಹಾರ್ ರಾಜರ ಆಡಳಿತೆಗೆ ಒಳಪಟ್ಟಿತ್ತು. ಮೇರಿಯ ತಂದೆ ಸ್ವತಂತ್ರ ರಾಷ್ಟ್ರ ಮತ್ತು ಪೋಲೆಂಡ್ ನ ಸ್ವಾತಂತ್ರ್ಯದ ಪರವಾಗಿ ಸಭೆಗಳಲ್ಲಿ ಮಾತನಾಡುತ್ತಿದ್ದರು. ಮೇರಿಯ ವಿದ್ಯಾಭ್ಯಾಸ ಕುಂಠಿತವಾಯಿತು. ಪೋಲೆಂಡ್ ಸಮಾಜದಲ್ಲಿ ಆ ಕಾಲದಲ್ಲಿ ಹುಡುಗಿಯರಿಗೆ ಮುಕ್ತ ವಿದ್ಯಾಭ್ಯಾಸದ ಹೆಚ್ಚು ಅವಕಾಶ ನೀಡುತ್ತಿರಲಿಲ್ಲ. ಆದರೂ, ಛಲಗಾತಿ ಮೇರಿ ಸ್ವಂತ ಅಭ್ಯಾಸಗಳಲ್ಲಿ ತೊಡಗಿದ್ದರು. ತನ್ನ ಅಕ್ಕ ಬ್ರೋನ್ಯಾಳ ಹೆಚ್ಚಿನ ವ್ಯಾಸಂಗಕ್ಕಾಗಿ ತಂಗಿ ಮೇರಿ ಕೆಲಸಕ್ಕೆ ಸೇರಿ ಹಣ ಹೊಂದಿಸಿದರು. ಮತ್ತು ಮುಂದಕ್ಕೆ ಅಕ್ಕನೇ ಮೇರಿಯ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊರುವ ಒಪ್ಪಂದ ಸಹೋದರಿಯರಲ್ಲಿ ಆಗಿತ್ತಂತೆ. ರಾಜಮನೆತನವೊಂದಕ್ಕೆ ಮೇರಿ  ಕೆಲಸಕ್ಕೆ ಹೋಗುತ್ತಿದ್ದರು. ಆಗ ಆ ಮನೆಯ ಶ್ರೀಮಂತ ಹುಡುಗನೊಡನೆ ಪ್ರೇಮಾಂಕುರವಾದರೂ, ಅದು ಮುದುಡಿಹೋಯಿತು. ಪ್ರೇಮಿಗಳಿಗೆ ಮನಸಿದ್ದರೂ ಮೇರಿಯಂತಹ ‘ಕೆಳದರ್ಜೆಯ’ ಹುಡುಗಿಯೊಡನೆ ಸಂಬಂಧವೇರ್ಪಡಲು ‘ಘನತೆ’ ಅಡ್ಡಿಬರುವುದಿಲ್ಲವೇ? ಒಳ್ಳೆಯದೇ ಆಯಿತು ಬಿಡಿ. ಮುಂದೆ ಏನು ದೊಡ್ಡ ನಿಧಿಯೇ ಕಾಯುತ್ತಿತ್ತು ಎನ್ನುವುದು ಯಾರಿಗೆ ತಿಳಿದಿದೆ!

ಪತಿ ಪಿಯರೀ ಕ್ಯೂರಿಯೊಂದಿಗೆ ಪ್ರಯೋಗ ನಿರತ ಮೇರಿ ಕ್ಯೂರಿ

ಮೇರಿಯವರ  ಅಕ್ಕ ವೈದ್ಯಶಾಸ್ತ್ರದ ಅಧ್ಯಯನಮಾಡಿ ಕೆಲಸಕ್ಕೆ ಸೇರಿದೊಡನೆಯೇ, ಮೇರಿಯವರ ವಿದ್ಯಾಭ್ಯಾಸ 22 ರ ಹರಯದಲ್ಲಿ ಮತ್ತೆ ಪ್ರಾರಂಭವಾಯಿತು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ, ಸಮಯ ಸಿಕ್ಕಾಗ ರಸಾಯನಶಾಸ್ತ್ರದ ಪ್ರಯೋಗಾಲಯದಲ್ಲಿ ಸೀಸೆಗಳನ್ನು ತೊಳೆಯುವ ಕಾಯಕವನ್ನು ಮಾಡುತ್ತಾ, ನಾಲ್ಕು ವರ್ಷಗಳಲ್ಲಿ ಪದವಿಗಳಿಸುವ ಮೂಲಕ ಯಶಸ್ಸನ್ನು ಸಾಧಿಸಿದರು. ಈ ನಾಲ್ಕು ವರ್ಷಗಳಲ್ಲಿ ಮೇರಿ ತನ್ನೆಲ್ಲಾ ಸಾಮರ್ಥ್ಯಗಳಿಂದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಖಗೋಳಶಾಸ್ತ್ರ, ಸಾಹಿತ್ಯ ಮತ್ತು ಸಂಗೀತದಲ್ಲಿ ಪ್ಯಾರಿಸ್ ವಿಶ್ವವಿದ್ಯಾಲಯದ ಅತ್ಯುತ್ತಮ ವಿದ್ಯಾರ್ಥಿನಿ ಎಂಬ ಕೀರ್ತಿಗೆ ಭಾಜನರಾಗಿದ್ದರು. ಹೀಗಿರುತ್ತಾ ಮೇರಿ ತನ್ನ ಪ್ರಾಧ್ಯಾಪಕರ ಮನೆಯಲ್ಲಿ ಪಿಯರೀ ಕ್ಯೂರಿಯವರನ್ನು ಭೇಟಿಯಾದರು; ಮತ್ತು ಒಂದು ವರ್ಷದಲ್ಲಿ ಪಿಯರೀ ಕ್ಯೂರಿ ಅವರ ಬಾಳಸಂಗಾತಿಯಾದರು. ಆಗ ಅವರಿಗೆ 27 ವರ್ಷ. ಅದುವರೆಗೆ ಮೇರಿ ಸ್ಕ್ಲೋಡೋಸ್ಕ ಆಗಿದ್ದವರು, ಮೇರಿ ಸ್ಕ್ಲೋಡೋಸ್ಕ ಕ್ಯೂರಿ ಆದರು. ತಾನು ಹುಟ್ಟಿದ ಪೋಲೆಂಡ್ ಮತ್ತು ತಾನು ವಾಸವಾಗಿರುವ ಫ್ರಾನ್ಸ್ ದೇಶಗಳೆರಡರಲ್ಲೂ ಅಭಿಮಾನವನ್ನಿಟ್ಟು, ಎರಡು ಪೌರತ್ವ ಮತ್ತು ಎರಡೂ ಉಪನಾಮೆ ಇರಿಸಿಕೊಂಡಿದ್ದರು.

ವಿಲ್ ಹೆಲ್ಮ್ ರೊಂಜ್ಯನ್ ಎಂಬ ವಿಜ್ಞಾನಿಯೋರ್ವರು 1896 ರಲ್ಲಿ, ಸಾಮಾನ್ಯ ಘನ ವಸ್ತುಗಳಲ್ಲಿ ಹಾದುಹೋಗುವ ಒಂದು ಶಕ್ತಿಶಾಲಿ ಕಿರಣವನ್ನು ಕಂಡುಹುಡುಕಿದರು. ಇದನ್ನವರು ‘X-Ray ವಿಕಿರಣಗಳು’ ಎಂದು ಕರೆದರು. ಮುಂದೆ ಈ ಆವಿಷ್ಕಾರಕ್ಕೆ ರೊಂಜ್ಯನ್ ಅವರಿಗೆ ಮೊತ್ತ ಮೊದಲ ನೋಬೆಲ್ ಪ್ರಶಸ್ತಿ ಬಂದಿತೆನ್ನುವುದು ಇನ್ನೊಂದು ರೋಚಕ ಸಂಗತಿ. ಯುರೇನಿಯಂ ಅದಿರು, ‘ಪಿಚ್ ಬ್ಲೆಂಡ್’’ ನಲ್ಲಿ ಒಂದು ವಿಶೇಷ ಘಟಕವಿದೆ ಮತ್ತು ಅದು ಅತಿ ಶಕ್ತಿಶಾಲಿ ಕಿರಣವೊಂದನ್ನು ಹೊರಸೂಸುತ್ತದೆ ಎನ್ನುವ ವಿಚಾರವನ್ನವರು ಪ್ರಸ್ತಾಪಿಸಿದ್ದರು. ಈ ಕಿರಣಗಳು, X-Ray ವಿಕಿರಣಗಳಿಂದ ವಿಭಿನ್ನ ಎನ್ನುವುದನ್ನೂ ಗುರುತಿಸಿದ್ದರು. ಮೇರಿ ಕ್ಯೂರಿ ತನ್ನ ಪತಿ ಪಿಯರೀ ಕ್ಯೂರಿಯೊಂದಿಗೆ ಸಂಶೋಧನೆ ನಡೆಸುತ್ತಾ, ಪಿಚ್ ಬ್ಲೆಂಡ್ (ಯುರೇನಿಯಂ ಲೋಹದ ಅದಿರು), ಶುದ್ಧ ಲೋಹದಿಂದ ಎಷ್ಟೋ ಪಟ್ಟು ಹೆಚ್ಚು ವಿಕಿರಣಶೀಲವಾಗಿದೆ ಎಂದು ಕಂಡುಕೊಂಡರು. ಈ “ಅಡಗಿರುವ ವಿಶೇಷ ಘಟಕ” ಈವರೆಗೆ ಜಗತ್ತಿಗೆ ಗೊತ್ತಿರುವ ದ್ರವ್ಯವೇ ಅಲ್ಲ, ಹೊಸ “ಧಾತು” ಇರಬೇಕೆಂದು ಮೇರಿ ಶಂಕಿಸಿದರು.

ಪಿಚ್ ಬ್ಲೆಂಡ್ ಅದಿರು

ಅತಿ ದುಬಾರಿ ಅದಿರಾದ ಪಿಚ್ ಬ್ಲೆಂಡ್ ನ್ನು ಆಸ್ಟ್ರಿಯಾ ಸರಕಾರದ ಸಹಾಯದಿಂದ ಟನ್ನುಗಟ್ಟಲೆ ಆಮದು ಮಾಡಿ, ಪ್ರಯಾಸದಿಂದ ಶುದ್ಧೀಕರಿಸಿ, ಕೊನೆಗೂ 1898 ರಲ್ಲಿ ಹೊಸ ವಿಕಿರಣಶೀಲ ಮೂಲವಸ್ತುವನ್ನು ಜಗತ್ತಿಗೆ ಪರಿಚಯಿಸಿದವರು, ಕ್ಯೂರಿ ದಂಪತಿಗಳು. ತನ್ನ ತಾಯ್ನಾಡು ಪೋಲೆಂಡಿನ ಗೌರವಾರ್ಥ ಈ ವಸ್ತುವಿಗೆ ಮೇರಿ “ಪೊಲೋನಿಯಂ” ಎಂಬ ನಾಮಕರಣ ಮಾಡಿದರು. ಆದರೆ, ಕತೆ ಇನ್ನೂ ಮುಗಿಯಲಿಲ್ಲ! ಅದಿರಿನಿಂದ ಇನ್ನಷ್ಟು ವಿಕಿರಣಗಳು ಬರುತ್ತಿದ್ದವು. ಅದಿರಿನ ಶುದ್ಧೀಕರಣ ಮತ್ತು ಸ್ಪಟಕೀಕರಣ ( Crystallisation ) ಮುಂದುವರಿಯಿತು. ಮೇರಿ ಆಯಾಸಗೊಂಡರು. ಆದರೆ ಉತ್ಸಾಹಹೀನರಾಗಲಿಲ್ಲ. ಟೈಫಾಯಿಡ್ ಜ್ವರದಿಂದ ಬಳಲಿ, ಚಿಕಿತ್ಸೆ ಪಡೆದು, ತಕ್ಕಮಟ್ಟಿಗೆ ಸುಧಾರಿಸಿ, ಪ್ರಯೋಗಾಲಯಕ್ಕೆ ಹಿಂದಿರುಗಿದರು. ಈಗ ಗರ್ಭಿಣಿಯಾದರು, ಮೊದಲ ಮಗುವಿಗೆ ( ಐರೇನ್ ಕ್ಯೂರಿ) ಜನ್ಮವಿತ್ತು, ಹದಿನೈದು ದಿನದೊಳಗೆ  ಪ್ರಯೋಗಾಲಯದಲ್ಲಿ ಮತ್ತೆ ಹಾಜರಾದರು. ಆದರೆ ನಿರರ್ಥಕವಾಗಲಿಲ್ಲ. ಅದಿರಿನಿಂದ ರೇಡಿಯಂ” ಎನ್ನುವ ಅದ್ಭುತ ಮೂಲವಸ್ತುವನ್ನು ಹೊರತೆಗೆದರು. ನೋಬೆಲ್ ಪ್ರಶಸ್ತಿಗೆ ತನ್ನ ಪತಿ ಪಿಯರೀ ಮತ್ತು ಈ ಹಿಂದೆ ರೇಡಿಯೋ ವಿಕಿರಣಗಳ ಬಗ್ಗೆ ಸಂಶೋಧನೆ ಮಾಡಿದ ವಿಜ್ಞಾನಿ  ‘ಬೆಕ್ವಿರೋಲ್’ರೊಂದಿಗೆ ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿಗೆ 1903 ರಲ್ಲಿ ಭಾಜನರಾದರು.

ಮೇರಿ ತನ್ನ 37 ರ ಪ್ರಾಯದಲ್ಲಿ ಇನ್ನೊಂದು ಮಗುವಿಗೆ (ಈವ್ ಕ್ಯೂರಿ) ಜನ್ಮ ನೀಡಿದರು. 39 ರ ಪ್ರಾಯದಲ್ಲಿ ಪಿಯರೀ ಕ್ಯೂರಿಯವರು ದುರದೃಷ್ಟವಶಾತ್ ರಸ್ತೆ ಅಪಘಾತದಲ್ಲಿ ವಿಧಿವಶವಾದರು. ತನ್ನ ಒಡೆದ ಹೃದಯಕ್ಕೆ ಅವರು ಸಮಾಧಾನವನ್ನು ಹೆಚ್ಚು-ಹೆಚ್ಚು ಪ್ರಯೋಗಗಳನ್ನು ಮಾಡುತ್ತಾ, ಪ್ರಯೋಗಾಲಯದಲ್ಲೇ ಸಾಂತ್ವನ ಪಡೆಯಬೇಕಾಯಿತು. ರಾತ್ರಿಯ ಸಮಯ ತನ್ನ ಮೃತ ಗಂಡನಿಗೆ ಸಂಶೋಧನೆಗಳಲ್ಲಿ ಕಂಡ ಯಾವೊತ್ತೂ ವಿಚಾರಗಳನ್ನು ಪತ್ರಗಳ ಮೂಲಕ ಬರೆದು, ದಾಖಲು ಮಾಡಿಗೊಂಡರು. ಪಿಯರೀ ಅವರ ನಿಧನದಿಂದ ತೆರವುಗೊಂಡಿದ್ದ ‘ಪ್ರೊಫೆಸರ್’ ಸ್ಥಾನವನ್ನು ಮಹಿಳೆಯೋಬ್ಬರಿಗೆ ನೀಡಲು, ವಿದ್ಯಾರ್ಹತೆ ಮತ್ತು ಅನುಭವ ಇದ್ದರೂ ವಿಶ್ವವಿದ್ಯಾಲಯದಲ್ಲಿ ವಿರೋಧವಿತ್ತು. ಕೊನೆಗಾದರೂ ಅಂಗೀಕಾರವಾಯಿತು. ಸಂಶೋಧನೆಯನ್ನು ಮುಂದುವರಿಸುತ್ತಾ ಮೇರಿಯವರು, ರೇಡಿಯಂ ಬಗ್ಗೆ ಇನ್ನಷ್ಟು ರಾಸಾಯನಿಕ ಮತ್ತು ಜೈವಿಕ ಗುಣವಿಶೇಷಗಳನ್ನು ಆವಿಷ್ಕರಿಸಿ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿಕಿರಣದ ಉಪಯೋಗವನ್ನು ಖಾತರಿ ಪಡಿಸಿದರು. ಈ ಕಾರಣಕ್ಕೆ 1911 ರಲ್ಲಿ ಅವರಿಗೆ ಎರಡನೇಬಾರಿ ರಸಾಯನಶಾಸ್ತ್ರದಲ್ಲಿ  ನೋಬೆಲ್ ಪ್ರಶಸ್ತಿ ಲಭ್ಯವಾಯಿತು.


ಮೇರಿ ಕ್ಯೂರಿಯವರ ಜೀವನಚರಿತ್ರೆಯೇ ಒಂದು ಸಂದೇಶವನ್ನು ಜಗತ್ತಿನಾದ್ಯಂತ ಸಾರುತ್ತದೆ. ಅವರು ಅದ್ಭುತ ಸಂಶೋಧನೆಗಳನ್ನು ಮಾಡಿ ಎರಡುಬಾರಿ ನೋಬೆಲ್ ಪ್ರಶಸ್ತಿ ವಿಜೇತ ಮೊದಲ ವಿಜ್ಞಾನಿ. ಮಾತ್ರವಲ್ಲ, ಶತಮಾನಗಳಿಂದ ಬಂದ ಲಿಂಗತಾರತಮ್ಯದ ಅಢಚಣಿಗಳನ್ನು ಮುರಿದು ಸಾಗಿದವರು. ಹಾಗೆಂದು ಅದನ್ನು ಎಂದೂ ಹೇಳಿಕೊಂಡವರಲ್ಲ. ಸಂಘಗಳನ್ನು ಕಟ್ಟಿಕೊಂಡವರಲ್ಲ. ಫ್ರಾನ್ಸ್ ವಿಶ್ವವಿದ್ಯಾಲಯದಲ್ಲಿ Ph. D. ಗಳಿಸಿದ ಮೊದಲ ಮಹಿಳೆ, ವಿಶ್ವವಿದ್ಯಾಲಯದಲ್ಲಿ ಪ್ರೊಫೆಸ್ಸರ್ ಹುದ್ದೆ ಹೊಂದಿದ ಮೊದಲ ಮಹಿಳೆ.

ಮೊದಲನೇ ಮಹಾಯುದ್ಧದಲ್ಲಿ ಫ್ರೆಂಚ್ ಸೈನ್ಯದ ಯೋಧರಿಗೆ ಮೇರಿ ನೀಡಿದ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ, ಆಗಿನ ಸರಕಾರ ಉನ್ನತ ಗೌರವದ ಹುದ್ದೆಯನ್ನು ನೀಡುವ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದ್ದರು. ಪೇಟೆಂಟ್ ಹಕ್ಕುಗಳನ್ನು ಸ್ವೀಕರಿಸಲು ಒತ್ತಡವಿದ್ದರೂ, ಒಪ್ಪಿಕೊಳ್ಳಲಿಲ್ಲ. ‘ವಿಜ್ಞಾನ ಮಹಿಳೆಯರಿಗಲ್ಲ’ ಎನ್ನುವ ಕಾಲದಲ್ಲಿ ತನ್ನ ಕುಟುಂಬದ ತುಂಬಾ ವಿಜ್ಞಾನದ ಒಂದು ‘ಹೊಸ ಸಂಸ್ಕೃತಿ’ಯನ್ನೇ ಸೃಷ್ಟಿಸಲು ಪಣತೊಟ್ಟಂತೆ ಆಗಿನ ಸಮಾಜಕ್ಕೆ ಭಾಸವಾದರೂ, ಮೇರಿ ನಿರ್ಲಿಪ್ತರಾಗಿ ಸಂಶೋಧನೆಗಳಲ್ಲಿ ತೊಡಗಿದ್ದರು. ಇಡೀ ಕುಟುಂಬಕ್ಕೆ ಮುಂದೆ ಒಟ್ಟು ಐದು ನೋಬೆಲ್ ಪ್ರಶಸ್ತಿಗಳು ಬಂದಿವೆ!

ಮೊದಲನೇಯ ಮಹಾಯುದ್ಧದ ಸಮಯ. ಮೇರಿ ತನ್ನ ಪ್ರಯೋಗಾಲಯದಿಂದ ಹೊರಬಂದರು. ತನ್ನ ಮಗಳು, ಐರೇನ್ ನೊಂದಿಗೆ, ಅಮ್ಮ-ಮಗಳು ‘ಸಂಚಾರಿ X-ಕಿರಣದ ಅಂಬುಲೆನ್ಸ್’ಗಳೊಂದಿಗೆ ಸಾವಿರಾರು ಸೈನಿಕರ ಶುಶ್ರೂಷೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹಲವಾರು ಸ್ವಯಂಸೇವಕರು ಅವರನ್ನು ಸೇರಿಗೊಂಡರು. ಅಪಾಯಕಾರಿ ಕಿರಣಗಳಿಗೆ ತಮ್ಮನ್ನೊಡ್ಡಿಕೊಳ್ಳುತ್ತಾ ಎಷ್ಟೋ ಸೈನಿಕರ ಜೀವ ಉಳಿಸಿದರು. ಎಲುಬು ಮುರಿತದ ಗಾಯಾಳುಗಳಿಗೆ ಸಂಜೀವಿನಿಯಾದರು. ಯುದ್ಧ ಮುಗಿದಮೇಲೆ ಮತ್ತೆ ‘ರೇಡಿಯಂ ಇನ್ಸ್ಟಿಟ್ಯೂಟ್’ಗೆ ಮರಳಿದರು. ಮಗಳು ಐರೇನ್ ಮತ್ತು ಅಳಿಯ ಫ್ರೆಡೆರಿಕ್ ಜ್ಯೂಲಿಯಟ್ ಮೇರಿಯವರ ಜೊತೆ ಇದ್ದುದು ಒಂದು ಅಪೂರ್ವ “ವಿಜ್ಞಾನಿಗಳ ತಂಡ”ವೇ ಆಯಿತು. ಐರೇನ್ ಮತ್ತು ಫ್ರೆಡೆರಿಕ್ ಜ್ಯೂಲಿಯಟ್ ಗೆ 1935 ರಲ್ಲಿ ರಸಾಯನಶಾಸ್ತ್ರದ ಸಂಶೋಧನೆಗಾಗಿ  ನೋಬೆಲ್ ಪ್ರಶಸ್ತಿಯಿಂದ ಗೌರವಿಸಲಾಯಿತು.

ಇನ್ನೊಂದು ವಿಶೇಷವೆಂದರೆ, ಮೇರಿಯವರು ತನ್ನ ಯಾವೊತ್ತೂ ಸಂಶೋಧನೆಗಳಿಗೆ ಯಾ ಆವಿಷ್ಕಾರಗಳಿಗೆ ಹಕ್ಕುದಾರಳಾಗಿ ಪೇಟೆಂಟ್ ಅರ್ಜಿಯನ್ನೇ ಸಲ್ಲಿಸಲಿಲ್ಲ. ಅವುಗಳು ಸಮಾಜಕ್ಕೆ ಮುಕ್ತವಾಗಿದ್ದವು. ತನ್ನ ಎಲ್ಲಾ ಕೆಲಸಗಳು ಮಾನವಕುಲದ ಒಳಿತಿಗಾಗಿ, ತನಗೇನೂ ಬೇಡ ಎಂದಂತಹ  ಮಹಾನ್ ವಿಜ್ಞಾನಿ  ‘ಮೇಡಂ ಮೇರಿ ಕ್ಯೂರಿ’.

ಜುಲಾಯಿ 4, 1934 ತನ್ನ 66 ರ ವಯಸ್ಸಿನಲ್ಲಿ ವಿಜ್ಞಾನಲೋಕದ ಈ ತಾರೆ ಅಸ್ತಂಗತವಾಯಿತು. ಮೃತ್ಯುವಾದರೂ ಎಂತಹುದು? ಯಾವ ಮಾರಕ ಕ್ಯಾನ್ಸರ್ ಗುಣಮುಖವಾಗಲೆಂದು ರೇಡಿಯಂ ಕಂಡುಹುಡುಕಿ ಕ್ಯಾನ್ಸರ್ ಚಿಕಿತ್ಸೆಯನ್ನು ವಿಕಿರಣ ಮೂಲಕ ಸಾಧಿಸಿದರೋ, ಅದೇ ವಿಕಿರಣದಲ್ಲಿ ತನ್ನನ್ನು ವಿಪರೀತವಾಗಿ ಒಡ್ಡಿದ ಪರಿಣಾಮವಾಗಿ  ಕ್ಯಾನ್ಸರ್ ನಿಂದಲೇ ಸಾವು ಸಮೀಪಿಸಿತು. ಕೊನೆಗಾಲದಲ್ಲಿ ಅವರ ದೇಹ ಜರ್ಜರಿತವಾಗಿತ್ತು.  ಮನುಕುಲಕ್ಕೆ ಅಪೂರ್ವ ಕೊಡುಗೆ ನೀಡಿ,  ಅಮರರಾದರು.

 

-ಡಾ. ಬಡೆಕ್ಕಿಲ ಶ್ರೀಧರ ಭಟ್ , ಪುತ್ತೂರು.

2 Responses

  1. Hema says:

    ಮಹಿಳಾ ದಿನದಂದು, ಮಹಾ ಸಾಧಕಿಯಾದ ಮೇರಿ ಕ್ಯೂರಿಯ ಪರಿಚಯ ಬಹಳ ಪ್ರಸ್ತುತ, ಮಹಿಳೆಯರಿಗೆಲ್ಲಾ ಹೆಮ್ಮೆಯ ವಿಚಾರ.

  2. Shruthi Sharma says:

    ಬಹಳವೇ ಮಾಹಿತಿಪೂರ್ಣ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: