‘ಗಾಯಗೊಂಡಿದೆ ಗರಿಕೆ ಗಾನ’: ಕೃಷ್ಣ ಮೂರ್ತಿ ಬಿಳಿಗೆರೆ ಕವನ ಸಂಕಲನ
ಕೃಷ್ಣಮೂರ್ತಿ ಬಿಳಿಗೆರೆ ಹಲವಾರು ಸೃಜನ ಶೀಲ ಆಸಕ್ತಿಗಳನ್ನು ತನ್ನ ವ್ಯಕ್ತಿತ್ವದೊಂದಿಗೆ ಬೆರೆಸಿಕೊಂಡಿರುವ ಕುತೂಹಲದ ವ್ಯಕ್ತಿ. ತತ್ವ ಪದ ಗಾಯನ, ಕಾವ್ಯ, ನಾಟಕ ರಚನೆ ಇವುಗಳ ಜೊತೆಗೆ ಸಾವಯವ ಕೃಷಿ, ನಾಟಿ ಬೀಜ, ಮಳೆ ನೀರು ಸಂಗ್ರಹದ ಬಗೆಗೆ ಅತೀವ ಕಾಳಜಿಯುಳ್ಳವರು. ಆಧುನಿಕೋತ್ತರ ಸಮಾಜ ಮರೆತಿರುವ ನಮ್ಮ ಪರಂಪರೆಯ ವಿವೇಕವನ್ನು ಮತ್ತೆ ಪುನರುತ್ಥಾನಗೊಳಿಸುವ ಪ್ರಯತ್ನದಲ್ಲಿ ತನ್ನನ್ನು ಇಡಿಯಾಗಿ ತೊಡಗಿಸಿಕೊಂಡಿರುವ ಮಾತುಗಾರ ಕವಿ. ತಾನು ಆಳವಾಗಿ ಪ್ರೀತಿಸುವ ಬೇಸಾಯ ಮತ್ತು ಕಾವ್ಯದ ಬಗ್ಗೆ ಧ್ಯಾನಿಸಿ ಮಾತನಾಡುವ ಕೃಷ್ಣಮೂರ್ತಿ ಸದಾ ಕಾವ್ಯ ಸಂಭ್ರಮದಲ್ಲಿರುವ ಕವಿ- ಡಾ. ಜಿ. ವಿ. ಆನಂದ ಮೂರ್ತಿಯವರು ‘ಗಾಯಗೊಂಡಿದೆ ಗರಿಕೆ ಗಾನ’ ಕವನ ಸಂಕಲನಕ್ಕೆ ಬರೆದ ಮುನ್ನುಡಿ ಸಾಲುಗಳು ಇವು. ಬಿಳಿಗೆರೆ ಸರ್ ಅವರ ಪರಿಚಯ ಇರುವ ಎಲ್ಲರ ಅರಿವಿಗೆ ಬಂದಿರುವ ವಿಚಾರ ಇದು. ಈ ಸಂಕಲನದಲ್ಲಿ 22 ಅತ್ಯುತ್ಕೃಷ್ಟ ಕವಿತೆಗಳಿವೆ. ಅತ್ಯಂತ ಜನಪರವಾದ, ಕೋಮಲ ಅಂತ:ಕರಣದ ಕವಿತೆಗಳಿವು.
ಲಾಲಿತ್ಯದಿಂದ, ಪ್ರಕೃತಿಯ ಸೊಬಗಿನ ಬಣ್ಣನೆಯಿಂದ ಆರಂಭವಾಗುವ
ಸೊಗದೆ ಸುವ್ವಿ ಸೊಗದೆ
‘ಹೊಲದ ಹೊಂಗನಸ ಅಮಲಿನಂತೆ
ಕಣ್ಣಿಗೆ ಕಾಣದ ಹಸಿರು ಕಮ್ಮನೆ ಕಡ್ಡಿ’ ಎಂದು ಹೇಳುತ್ತಲೇ
ಓಲ್ವೋ ಲಾರಿಯ ತುಂಬಿದ ಭೂ ಹೆಣದ ಭಾರಕ್ಕೆ
ಹೊಲ ಬಿಕ್ಕಿದೆ’
ಎಂದು ನಗರೀಕರಣದ ದುಷ್ಪರಿಣಾಮಗಳನ್ನು, ಮನುಷ್ಯನ ದುರಾಸೆಯಿಂದ ಪ್ರಕೃತಿಯ ಮೇಲಾಗುವ ದೌರ್ಜನ್ಯವನ್ನು ನಿರೂಪಿಸುತ್ತದೆ. ಬಿಳಿಗೆರಯವರ ಹೆಚ್ಚಿನ ಕವನಗಳಲ್ಲಿ ನೆಲಮೂಲದ ರೂಪಕಗಳು, ಪ್ರತಿಮೆಗಳು, ಅಂತೆಯೇ ಹಾಡಿನ ಲಯದಿಂದ ಸಮೃದ್ಧವಾಗಿರುವ, ಒಂದು ಕನಸುಗಾರಿಕೆಯನ್ನು, ಆಶಾವಾದವನ್ನು ತಮ್ಮೊಡಲಲ್ಲಿ ಹಸಿರಾಗಿ ಕಾಪಿಟ್ಟುಕೊಂಡಿರುವ ಮನೋಧರ್ಮವನ್ನು ಕಾಣಬಹುದು.
ತಮ್ಮ ‘ಬೀಜ ದೀಪದ ಬೆಳಕಾಗಿ’ ಕವನದಲ್ಲಿ ಅವರು
ಫ಼ುಕುವೋಕಾ ಎಂಬ ಹಾಡು ಬೆಳೆಗಾರ
ಕಣ್ಣು ಮನಗಳ ಬೆಳಕಲ್ಲಿ ಹಾಡಿ ನರ್ತಿಸಿದ್ದಕ್ಕೆ
ಭೂಮಿಯಿನ್ನೂ ಅನ್ನದ ತಟ್ಟೆಯಾಗಿ ಉಳಿದಿದೆ’
ಎಂದು ಬರೆಯುತ್ತಾರೆ.
ಈ ಸಂಕಲನದ ಅತಿ ಮನೋಜ್ನ ಕವಿತೆ ‘ಅವ್ವನ ಸ್ವಗತ‘. ‘ಕಂದಾ ಆಗ ನನಗೂ ಆಕಾಶದಲ್ಲಿ
ಅ ಆ ಬರೆಯುವ ಆಸೆಯಿತ್ತು . ‘ಎಂದು ಶುರುವಾಗುವ ಈ ಕವಿತೆ ತಾಯಿ ಹೃದಯದ ಮರುಗುವಿಕೆ, ತನ್ನ ಕಂದಮ್ಮನಲ್ಲಿ ಅದನ್ನು ಹೇಳಿಕೊಳ್ಲುವ ಆರ್ತತೆಯಿಂದ ಕಣ್ಣೀರು ಜಿನುಗಿಸುವಷ್ಟು ಆರ್ದ್ರವಾಗಿದೆ. ಎಳೆ ವಯಸ್ಸಿನಲ್ಲಿನ ವಿವಾಹ, ಕೌಟುಂಬಿಕ ದೌರ್ಜನ್ಯ, ಕೂಡು ಕುಟುಂಬದಲ್ಲಿನ ಹಂಗಿಸುವಿಕೆ, ದೈಹಿಕ ಹಿಂಸೆ, ಇವನ್ನೆಲ್ಲ ಕಣ್ಣಿಗೆ ಕಟ್ಟುವಂತೆ ಈ ಕವಿತೆ ಚಿತ್ರಿಸುತ್ತದೆ.
ಕಂದಾ ನನಗೆ ಅ ಆ ಬರದಿದ್ದರೂ ಬೇಕಾದಷ್ಟು
ಕಾಳು ಬಾಳು, ಮೂತಿ ಹುಳು
ಹೂಜಿ ನೊಣಗಳ ರಾಗಗಳು ಗೊತ್ತಿದ್ದವು
ಹುಳಿಯದಂತೆ ಕಾಳ ಕಟ್ಟಿಟ್ಟೆ
ಬರಗೆಡದಂತೆ ಬಾಳ ಕಟ್ಟಿಟ್ಟೆ
ಗಂಡು ಕಲ್ಲುಗಳು ಮಾತ್ರ ಸದಾ ನನ್ನ ಅರೆಯುವುದನ್ನು ನಿಲ್ಲಿಸುತ್ತಿರಲಿಲ್ಲ .
ಈ ಪ್ಯಾರಾ ಇಡೀ ಕವನದ ಸಾರವನ್ನು ಹೇಳಿ ಬಿಡುತ್ತದೆ. ಲಂಕೇಶರ ‘ಅವ್ವ’ ಕವನದಂತೆ ಈ ಕವಿತೆಯ ಅವ್ವ ಕೂಡ ಕೊನೆ ಕೊನೆಗೆ ತನ್ನ ಅಸ್ಮಿತೆಯನ್ನು ಕಂಡುಕೊಳ್ಳುತ್ತಾಳೆ: ‘ಬದುಕ ಸಾರ ಹಳಸದಂತೆ ಬೆಂಕಿಯ ಜೊತೆಗೆ ಸಾಗಿದವಳು’ , ‘ಕಣ್ಣೊಳಗೆ ಬೆಂಕಿಯ ಮುಡಿದುಕೊಂಡವಳು’. ಹಾಗಿದ್ದರೂ ಈ ಕವಿತೆಯಲ್ಲಿನ ಅಮ್ಮ ಪಿತೃ ಪ್ರಾಧಾನ್ಯ ಪದ್ಧತಿಯಲ್ಲಿ ನಲುಗಿ, ಕರುಳ ಕುಡಿಗಳ ಪ್ರೀತಿಯಿಂದಲೂ ವಂಚಿತಳಾದವಳು ಎನ್ನುವ ಭಾವವೇ ಬಲವಾಗಿದೆ.
ಬುದ್ಧನ ಕುರಿತಾದ ‘ ಅರಳಿ ಮರಕ್ಕೆ ಅವನೂ ಒಬ್ಬ ಮನುಷ್ಯನೇ‘ ಎಂಬ ಕವಿತೆಯಲ್ಲಿನ
ಮನುಷ್ಯರು ಯಾಕೆ ಗಾಯ ಪ್ರಿಯರು ನೋವು ಪ್ರಿಯರು
ಪೂಜಿಸುತ್ತಲೇ ಯಾಕೆ ಬೆಂಕಿ ಇಕ್ಕುತ್ತಾರೆ
ಪ್ರಾರ್ಥಿಸುತ್ತಲೇ ಪ್ರಾಣ ತೆಗೆಯುತ್ತಾರೆ
ನಮ್ಮ ನಿಮ್ಮೆಲ್ಲರ ವೈಯಕ್ತಿಕ, ಸಾರ್ವತ್ರಿಕ ಅನುಭವವೇ ಆಗಿದೆ.
ಧಾರ್ಮಿಕ ಸೋಗಲಾಡಿತನ, ಯುಧ್ಧದಿಂದ ಸಂಭವಿಸುವ ಅರ್ಥಹೀನ ವಿನಾಶ, ಸೃಜನಶೀಲತೆಯ ವೈರುಧ್ಯಗಳು, ಕೃಷಿ ಲೋಕದ ತಲ್ಲಣಗಳು ಇವೆಲ್ಲ ಕವಿಯ ಆಸಕ್ತಿಯ ವಿಷಯಗಳು. ಕವಿ ಉತ್ಕಂಠೆಯಿಂದ ಗಮನಿಸಿದಂತೆ ಆಧುನಿಕತೆ, ಅಭಿವೃದ್ಧಿಯ ಭರದಲ್ಲಿ
ಅಜ್ಜ ಅಜ್ಜಿಯರ ಎದೆಗೂಡುಗಳಿಂದ ಎಂದೋ ಹಾರಿ ಹೋಗಿದೆ
ಬೀಜದ ಕಾಳು
ಲೂಟಿಕೋರರೆ ಈಗ ರಕ್ತ ಬೀಜರು ( ಕೊರಳ ದಾರಿಗಳಲ್ಲಿ ) .
ಪರಂಪರೆಯ ಒಳದನಿಗಳಿಗೆ, ಅಂತ ಸತ್ವ ಭರಿತ ಹಳ್ಳಿಗಾಡಿನ ವಿವೇಕಕ್ಕೆ ಕಿವಿಗೊಡದಿದ್ದರೆ ಬಲು ಕಷ್ಟ ಎನ್ನುವ ಧ್ವನಿ ಈ ಸಾಲುಗಳಲ್ಲಿದೆ.
‘ಗಾಳಿ ನೀರು ಅನ್ನ’ ಕವಿತೆಯಲ್ಲಿ ಕವಿ ನಗರ ಜೀವನದ ಯಾಂತ್ರಿಕತೆಯನ್ನು, ಯಶಸ್ಸಿನ ಭರದಲ್ಲಿ ಮಣ್ಣು ಬೇರಿನ ಸಂಸರ್ಗ ಕಳೆದುಕೊಂಡವರನ್ನು
ಆಕಾಶಕ್ಕೆ ಹಾರಿದವರು
ಪಾತಾಳಕ್ಕೆ ಇಳಿದವರು
ಎ ಸಿಯೊಳಗೆ ಬಂಧಿತರು
ಎಂದು ಬಣ್ಣಿಸುತ್ತಾರೆ.
ಕೃಷ್ಣ ಮೂರ್ತಿಯವರು ಜನಪರ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವವರು. ಅವರ ಜನಪರ ಕಾಳಜಿ ಇಲ್ಲಿದೆ:
ಕುರುಡರು ಹೇಗೆ ಆಗುತ್ತಾರೆ ಅವರ ತಪ್ಪು ಏನು
ಹೆಳವರು ಹೇಗೆ ಆಗುತ್ತಾರೆ ಅವರ ತಪ್ಪು ಏನು
ಹೋಗಲಿ ಕಪ್ಪು ಜನ ಹೇಗೆ ಆಗುತ್ತಾರೆ ಅವರ ತಪ್ಪು ಏನು
ಬಡವರು ಹೇಗೆ ಆಗುತ್ತಾರೆ ಅವರ ತಪ್ಪು ಏನು
ಹೆಂಗಸರು ಹೇಗೆ ಆಗುತಾರೆ ಅವರ ತಪ್ಪು ಏನು
ಆದಿವಾಸಿಗಳು ಹೇಗೆ ಆಗುತ್ತಾರೆ ಮತ್ತು ಅವರ ತಪ್ಪು ಏನು ( ಇವರೆಲ್ಲ ಹೇಗೆ ಆಗುತ್ತಾರೆ).
‘ತತ್ವ ಪದದ ಜಾಡಿನಲ್ಲಿ’ ಕವಿತೆಯ ‘ಬೆಳಕಿನ ಒಳಗೆ ಕತ್ತಾಲೆ ಕರಗಿದರೆ
ಕತಲೆ ಕಣ್ಣೊಳಗೆ ನಾವೂನು ಕರಗೋಣ’ ಸಾಲಿನ ಅನುಭಾವವನ್ನು ಗಮನಿಸಿ. ಅದೇ ರೀತಿ
‘ಗೆಲ್ಲುವುದು ಗೆಲುವೆ ಅಲ್ಲ
ಗೆಲುವ ಗೆಲ್ಲುವುದು ಗೆಲುವು’ ಸಾಲಿನ ವಿರಕ್ತತೆಯನ್ನು ಕೂಡ. ಅದ್ಭುತವೆನಿಸುವ ಈ ಕವಿತೆಯಲ್ಲಿ
ಯಾಕೆ ಸುಡುತ್ತೀರಾ ಸುಮ್ಮನೆ
ಅಂತರಂಗದ ಒಳಗೆ ನಿಮ್ಮನ್ನು
ಎಂದು ಎಚ್ಚರಿಸುತ್ತಲೇ
ಬೆಳಕಿನ ಹೂವ ಸುಡಬ್ಯಾಡಿರೋ
ಮಣ್ಣ ಕಣ್ಣಿಗೆ ಕೊಳ್ಳಿ ಇಡಬ್ಯಾಡಿರೋ’ ಎಂದು ವಿನಂತಿಸಿಕೊಳ್ಳುತ್ತಾರೆ.
‘ಯಾಕೆ ಬೇಕಿತ್ತು ಗುರುವೆ’ , ‘ಮಾತು ಸೋತರೆ ನೀವು ಗೆಲ್ಲುವಿರಿ’ ಕವನಗಳ ವಿಡಂಬನೆ, ‘ ಶರಣಾಗುವುದು ಬೇಡ’ ಕವಿತೆಯ ಸ್ರೀ ಪರ ಕಾಳಜಿ, ಕವಿಯ ಸಾಮಾಜಿಕ ಕಳಕಳಿಗೆ ಹಿಡಿದ ಕನ್ನಡಿಯಾಗಿದೆ. ಒಂದು ರೀತಿಯ ಗೇಯತೆ, ಲಯ ಬಧ್ಧತೆ ಇರುವ ಹಾಡಿನಂತಹ ಕವಿತೆಗಳೂ ಇಲ್ಲಿವೆ. ಉದಾಹರಣೆಗೆ ‘ ಬುದ್ಧಿ ಮತಕ್ಕೆ ಕಿಚ್ಚನಿಟ್ಟು ‘ ಕವಿತೆಯ ಲಯಬದ್ಧ ಸಾಲುಗಳು.
ಹದಿನೆಂಟಕ್ಕೂ ಹೆಚ್ಚು ವಿವಿಧ ಆಯಾಮದ ಪುಸ್ತಕಗಳನ್ನು ಈಗಾಗಲೇ ಪ್ರಕಟಿಸಿರುವ ಬಿಳಿಗೆರೆ ಸರ್ ಅವರ ಸಾಹಿತ್ಯ ಕೃಷಿಯನ್ನು ಗಮನಿಸಿ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ . ಆರ್ಯಭಟ ಸಾಹಿತ್ಯ ಪ್ರಶಸ್ತಿ, ಜಿ ಎಸ್ ಎಸ್ ಕಾವ್ಯ ಪಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಪ್ರಶಸ್ತಿ ಇತ್ಯಾದಿ. ವೈಯಕ್ತಿಕವಾಗಿಯೂ ಸಜ್ಜನಿಕೆಯ, ಕಾಳಜಿಯ, ಲವಲವಿಕೆಯ ವ್ಯಕ್ತಿತ್ವವುಳ್ಳ ಕೃಷ್ಣ ಮೂರ್ತಿ ಬಿಳಿಗೆರೆ ಅವರು ನಾನು ಕೆಲಸ ಮಾಡುವ ಸಂಸ್ಥೆಯಲ್ಲಿ ಎಲ್ಲರ ನೆಚ್ಚಿನ ಪ್ರಾಂಶು ಪಾಲರೂ ಹೌದು. ಅವರಿಗೆ ನಮ್ಮೆಲ್ಲರ ಶುಭ ಹಾರೈಕೆಗಳು.
-ಜಯಶ್ರೀ ಬಿ.ಕದ್ರಿ
ಜನಪರ ಕಾಳಜಿಯ ಕವನಗಳು ಮನಮುಟ್ಟಿದುವು… ಈ ಕವನ ಸಂಕಲನವನ್ನು ಓದಬೇಕು .
ಚೆಂದದ ಬರಹ, ಜಯಶ್ರೀ ಮೇಡಂ
ಥಾಂಕ್ ಯು ಮೇಡಂ, ನಿಮ್ಮ ಓದಿನ pritige ಧನ್ಯವಾದಗಳು
ಪುಸ್ತಕ ಪರಿಚಯ ಓದಿದಾಗ ಶ್ರೀ ಕೃಷ್ಣಮೂರ್ತಿ ಬಿಳಿಗೆರೆಯವರ ಕವನ ಸಂಕಲನವು ಅಪಾರ ಸಾಮಾಜಿಕ ಕಳಕಳಿಯನ್ನೂ, ಕಾಳಜಿಯನ್ನೂ ಹೊಂದಿದೆಯೆಂದು ಮನದಟ್ಟಾಗುತ್ತದೆ. ಉತ್ತಮ ಬರಹ.