ರಾಣಿಯಂತಿರುವ ‘ರಾಣಿಪುರಂ’…
ಜೂನ್ ತಿಂಗಳ ಕಾಲ. ಆಫೀಸ್ ಮುಗಿಸಿ ಬಂದು ಅಡುಗೆ ಕೆಲಸದಲ್ಲಿ ಮಗ್ನಳಾಗಿದ್ದೆ. ಪತಿರಾಯರ ಆಗಮನವಾಯಿತು. ಒಳಬರುತ್ತಿದ್ದಂತೆ ಕೇಳಲಾರಂಬಿಸಿದರು “ಏಯ್ , ನೀನು ರಾಣಿಪುರಂಗೆ ಹೋಗಿದ್ದಿಯಾ?”. ಧಿಡೀರನೆ ಇದೇನಪ್ಪ ಅಂದುಕೊಳ್ಳುತ್ತಾ ಉತ್ತರಿಸಿದೆ “ಇಲ್ಲ.. ಆದರೆ ಚೆನ್ನಾಗಿದೆಯಂತೆ. ಹೋಗಬೇಕು ಒಮ್ಮೆ”. ಹೂಮ್ ಎಂದು ದೀರ್ಘಶ್ವಾಸವನ್ನೆಳೆಯುತ್ತಾ ಮತ್ತೆ ಕೇಳಿದರು “ಈ ಬಾರಿ ಹೋದರೇನು? ಹೇಗೂ ೩-೪ ದಿನ ರಜವಿದೆಯಲ್ಲ”. ಈ ಪ್ರಶ್ನೆಗೆ ಬೇಡವೆಂದು ಉತ್ತರಿಸುವವಳು ಖಂಡಿತ ನಾನಲ್ಲ. ಆದರೆ ಇಬ್ಬರೇ ಹೋಗುವುದರಲ್ಲಿ ಮಜವಿಲ್ಲ ಎಂದನಿಸಿತು. “ಅದಕ್ಕೇನಂತೆ, ರಂಜಾನ್ ರಜೆ ಕಾಲೇಜು ಮಕ್ಕಳಿಗೂ ಇರುತ್ತದೆ. ತಮ್ಮತಂಗಿಯರು ಯಾರಾದರೂ ಬರುತ್ತಾರಾ ಕೇಳು” ಎಂದರು. ತತ್ಕ್ಷಣವೇ ಫೋನ್ ಕೈಗೆತ್ತಿ ಮೆಸೇಜು ಕುಟ್ಟಲಾರಂಭಿಸಿದೆ. ಬರೀ ಅರ್ಧ ಗಂಟೆಯಲ್ಲೇ 10 ಜನರ ಗುಂಪೊಂದು ತಯಾರಾಗಿ ಬಿಟ್ಟಿತು.
ನಮ್ಮೂರು ಕಾಸರಗೋಡು. ಗಡಿನಾಡ ಜಿಲ್ಲೆ. ದಕ್ಷಿಣಕನ್ನಡ(ಮಂಗಳೂರು) ಜಿಲ್ಲೆಯ ಸೆರಗಿನಂತಿರುವ ನಮ್ಮೂರು ಇಂದು ಕೇರಳ ರಾಜ್ಯದಲ್ಲಿದೆ. ಆದುದರಿಂದಲೇ ಕೇರಳ ಹಾಗು ಕರ್ನಾಟಕದ ಸಂಸ್ಕೃತಿಗಳ ಸಮ್ಮಿಲನವನ್ನು ಇಲ್ಲಿ ಕಾಣಬಹುದು. ಇನ್ನೂ ನಿಖರವಾಗಿ ಹೇಳುವುದಾದರೆ ನಮ್ಮೂರಿನ ಆಚಾರ-ವಿಚಾರಗಳು, ಕಲಾರೂಪಗಳು, ನಂಬಿಕೆಗಳು ಎಲ್ಲವೂ ತುಳುನಾಡಿನದ್ದೆ. ಇಂದು ಮಲಯಾಳಂ ಭಾಷೆಯ ಪ್ರಾಮುಖ್ಯತೆ ಹೆಚ್ಚಾಗುತ್ತಿದ್ದರೂ, ಕಾಸರಗೋಡಿಗರಿಗೆ ಕನ್ನಡ ಹಾಗು ತುಳು ಭಾಷೆಗಳು ಅಪರಿಚಿತವೇನಲ್ಲ. ಇನ್ನು ಪ್ರಾಕೃತಿಕವಾಗಿ ಹೇಳುವುದಾದರೆ ಒಂದೆಡೆ ಅರಬಿ ಸಮುದ್ರವಾದರೆ, ಇನ್ನೊಂದೆಡೆ ಪಶ್ಚಿಮ ಘಟ್ಟ. ನೀಲ ಸಮುದ್ರದ ಮಡಿಲಿನ ಹಸಿರು ಭೂಮಿ ಎಂದರೆ ತಪ್ಪಾಗದು. ಕೇರಳದ ಇನ್ನುಳಿದ ಜಿಲ್ಲೆಗಳಂತೆ ಇಲ್ಲಿಯೂ ಸಾಕಷ್ಟು ಪ್ರವಾಸಿ ತಾಣಗಳಿವೆ. ಅದರಲ್ಲೊಂದೇ “ರಾಣಿಪುರಂ”.
ಗುಂಪು ಗೂಡಿಸಿ, ತಯಾರಾಗುವಷ್ಟರಲ್ಲಿ “ರಾಣಿಪುರಂ” ಪ್ರವಾಸದ ದಿನ ಬಂದೇ ಬಿಟ್ಟಿತು. ಮುಂಜಾನೆ 4 ಗಂಟೆಯಾಗುತ್ತಲೇ ನಮ್ಮ ಅಲರಾಮುಗಳು ಬಡಿದುಕೊಳ್ಳತೊಡಗಿದವು. ಕಣ್ಣು ಬಿಟ್ಟು ನೋಡಿದರೆ ಧೋ ಎಂದು ಸುರಿಯುತ್ತಿರುವ ಮಳೆ. ನಮ್ಮೂರ ಭಾಷೆಯಲ್ಲಿ ಹೇಳುವುದಾದರೆ ಅದು “ಆಟಿ” ತಿಂಗಳ ಮಳೆ. ಬಿಡದೇ ಸುರಿಯುವ ಮಲೆನಾಡಿನ ಮಳೆಯ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಇದು ಕರಾವಳಿಯ ಮಳೆ. ಕರಾವಳಿಯ ಮಳೆಯೂ ಅಷ್ಟೇ ಸುಂದರ, ಅಷ್ಟೇ ಭಯಾನಕ. ಬೀಸುವ ಗಾಳಿಯ ಅಬ್ಬರಕ್ಕೆ ಕೊಡೆಯ ಕಡ್ಡಿಗಳು ತಿರುಗಿ ನಿಲ್ಲುತ್ತವೆ. ಇಂತಹ ಮಳೆಯಲ್ಲಿ ಚಾರಣವಂತು ದುಸ್ಸಾಹಸ ಎನ್ನ ತೊಡಗಿದರು ಮನೆಯ ಹಿರಿಯರೆಲ್ಲ. ಆದರೆ ಕೇಳುವ ಮನಸ್ಸು ನಮಗಿರಬೇಕಲ್ಲ. “ಅಣ್ಣ, ನೀ ಬರುದಾದ್ರೆ ನಾ ರೆಡಿ” ಅಂದ ಮೈದುನ. ಅಲ್ಲಿಗೆ ಕಿರಿಯರ ಸಂಘವಂತೂ ರೆಡಿಯಾಗಿ ನಿಂತಿತು. ಹಿರಿಯರೂ “ನೀವೆಲ್ಲ ಹೋಗಬೇಕಿದ್ದರೆ ನಮಗೇನು” ಎಂದು ತಯಾರಾದರು.
ನಿಗದಿ ಪಡಿಸಿದಂತೆ ಸುಮಾರು 6 ಗಂಟೆಗೆ ಕಾಸರಗೋಡು ನಗರದಿಂದ ನಮ್ಮ ಯಾತ್ರೆಯು ಪ್ರಾರಂಭವಾಯಿತು.ಕಾಸರಗೋಡು ನಗರದಿಂದ ಬೋವಿಕ್ಕಾನ-ಕಾನತ್ತೂರು ಮಾರ್ಗವಾಗಿ ಸಾಗುವುದಾದರೆ ರಾಣಿಪುರಂ ತಲುಪಲು ಸುಮಾರು 2 ಗಂಟೆಗಳ ಕಾಲ ಬೇಕಾಗುತ್ತದೆ (ಸುಮಾರು 55 ಕೀ.ಮೀ). ಉಪಹಾರಕ್ಕಾಗಿ ಬೋವಿಕ್ಕಾನ ಪೇಟೆಯಲ್ಲಿ ನಿಲ್ಲಿಸಲಾಯಿತು. ಕೇರಳ ಶೈಲಿಯ ಪುಟ್ಟುಮ್-ಕಡಲೆಯನ್ನು ತಿಂದು ನಮ್ಮ ಯಾತ್ರೆಯನ್ನು ಮುಂದುವರಿಸಿದೆವು. ಮಳೆಗಾಲವಾಗಿರುವುದರಿಂದ ಎಲ್ಲೆಂದರಲ್ಲಿ ಹಸಿರು ಹಾಸಿದಂತೆ ಕಾಣುತಿತ್ತು. ನದಿ,ತೋಡುಗಳೆಲ್ಲಾ ತುಂಬಿ ಹರಿಯುತ್ತಿದ್ದವು. ಅಲ್ಲಲ್ಲಿ ನಿಂದು ಆ ಸುಂದರ ದೃಶ್ಯಗಳನ್ನು ಕಣ್ಣುತುಂಬಾ ನೋಡುತ್ತಾ ನಮ್ಮ ಯಾತ್ರೆಯನ್ನು ಮುಂದುವರಿಸಿದೆವು.
ರಾಣಿಪುರಂ ಬೆಟ್ಟದ ಬುಡ ತಲುಪುವಷ್ಟರಲ್ಲಿ ಮಳೆರಾಯನ ಅಬ್ಬರ ಕಡಿಮೆಯಾಗಿತ್ತು. “ಅಬ್ಬಾ, ಸದ್ಯ ಇಷ್ಟಾದರೂ ಬಿಟ್ಟಿತಲ್ಲ ಮಳೆ” ಎಂದನಿಸಿತು ನಮಗೆಲ್ಲ. ಬೆಟ್ಟದ ಬುಡದಲ್ಲಿ ಒಂದು ಸಣ್ಣ ಅಂಗಡಿ (ಚಾಯಕಡ) ಹಾಗು ಅರಣ್ಯಾಧಿಕಾರಿ ಕಚೇರಿ ಅಷ್ಟೇ ಇದೆ. ತಲಾ 30 ರೂಪಾಯಿ ಚಾರಣ ಶುಲ್ಕವನ್ನು ಇಲ್ಲಿ ಪಾವತಿಸಬೇಕು. ಜೊತೆಗೆ ನಮ್ಮಲ್ಲಿರುವ ನೀರಿನ ಕುಪ್ಪಿಗಳ ಲೆಕ್ಕವನ್ನೂ ಕೊಡಬೇಕು. ಅಲ್ಲಿರುವ ಅಂಗಡಿಯಲ್ಲಿ ಜಿಗಣೆಯನ್ನು(ಉಂಬುಳು) ಬಿಡಿಸಲು ಸಹಕಾರಿಯಾಗುವ ಒಂದು ಪುಟ್ಟ ಮದ್ದಿನ ಕಟ್ಟು ಲಭ್ಯವಿತ್ತು. ಮಳೆಗಾಲವಾಗಿದ್ದುದರಿಂದ ಅದು ಉಪಯೋಗಕ್ಕೆ ಬರಬಹುದೆಂದೆನಿಸಿತು ನಮಗೆ. ಅತ್ಯಗತ್ಯದ ವಸ್ತುಗಳನ್ನಷ್ಟೆ ಹಿಡಿದುಕೊಂಡು ಬೆಟ್ಟವನ್ನೇರಲು ತೊಡಗಿದೆವು.
ಸಮುದ್ರ ಮಟ್ಟದಿಂದ ಸುಮಾರು 3500 ಮೀಟರುಗಳಷ್ಟು ಎತ್ತರದಲ್ಲಿರುವ ರಾಣಿಪುರಂ, ಕೇರಳದ ಊಟಿ ಎಂದು ಕರೆಸಿಕೊಂಡರೂ ಇನ್ನೂ ಬಹುತೇಕರಿಗೆ ಪರಿಚಿತ ಜಾಗವಲ್ಲ. ಹಾಗಾಗಿಯೇ ನಮ್ಮೊಂದಿಗೆ ಬೆಟ್ಟವೇರುತ್ತಿರುವ ಬೇರೆ ಗುಂಪುಗಳಿರಲಿಲ್ಲ. 5-6 ಸಣ್ಣ ಸಣ್ಣ ಬೆಟ್ಟಗಳನ್ನು ಒಳಗೊಂಡಿರುವ ಶ್ರೇಣಿಯೇ “ರಾಣಿಪುರಂ”. ಚಾರಣದ ಪ್ರಾರಂಭದಲ್ಲಿ ಕಾಡು ಮಾರ್ಗವಾಗಿ ಸಾಗ ಬೇಕು. ಅಲ್ಲಿ ಆನೆಗಳಿವೆ ಎಂದು ಹೇಳಲಾಗುತ್ತದೆ. ಮಳೆರಾಯನ ವಿಶ್ರಾಂತಿಯ ಸಮಯವು ಅದಾಗಿದ್ದುದರಿಂದ ಕಾಡು ಮಾರ್ಗವನ್ನು ದಾಟುವುದು ನಮಗೆ ಶ್ರಮವೆನಿಸಲಿಲ್ಲ. ಕಾಡು ಮುಗಿದಂತೆ ಹುಲ್ಲುಗಳಿಂದ ಮುಚ್ಚಿಕೊಂಡಿರುವ ಬೆಟ್ಟಗಳು ಕಾಣಸಿಗುತ್ತವೆ. ಎಲ್ಲಿ ನೋಡಿದರಲ್ಲಿ ಹಸಿರು ಬಣ್ಣ. ಸಂತೋಷವನ್ನು ಹುದುಗಿಟ್ಟುಕೊಳ್ಳಲಾರದೆ ಗಟ್ಟಿಯಾಗಿ ಕಿರುಚತೊಡಗಿದೆವು.
ಪಶಿಮಘಟ್ಟದ ಒಂದು ತುದಿಯಲ್ಲಿರುವ ಬೆಟ್ಟವೇ ರಾಣಿಪುರಂ. ಹಾಗಾಗಿಯೇ ಶೋಲಾ ಕಾಡುಗಳ ಎಲ್ಲಾ ವೈಶಿಷ್ಟ್ಯಗಳು ಇಲ್ಲಿಯೂ ಕಾಣಸಿಗುತ್ತದೆ. ಎತ್ತರೆತ್ತರಕ್ಕೆ ಬೆಳೆದ ಹುಲ್ಲುಗಾವಲಿನ ಮಧ್ಯ ಕಾಲ್ನಡಿಗೆಯಿಂದಾಗಿ ಸವೆದ ದಾರಿಯೊಂದು ಕಾಣಸಿಗುತ್ತದೆ. ಅದನ್ನೇ ನಂಬಿ ಮುಂದೆ ಸಾಗುತಿದ್ದ ನಮಗೆ ದೂರದಲ್ಲೊಂದು ಸಣ್ಣ ಗುಡಿಸಲು ಕಾಣತೊಡಗಿತು. ಪಕ್ಕಕೆ ಹೋದಂತೆ ಅದು ರಾತ್ರಿಯ ಗಸ್ತಿಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಟ್ಟಿಸಿಕೊಂಡ ಸೋಗೆಯ ಡೇರೆ ಎಂದರಿವಾಯಿತು. “ಸರಿ, ಆದಷ್ಟು ಮುಂದೆ ಹೋಗಿ ವಾಪಸು ಬರುತ್ತಾ ಇಲ್ಲಿ ವಿಶ್ರಾಂತಿ ಪಡೆಯೋಣ” ಅಂದರು ನಮ್ಮಲ್ಲರೋ. ಅದರಂತೆ ಮುಂದೆ ಸಾಗತೊಡಗಿತು ನಮ್ಮ ಗುಂಪು. ಅಷ್ಟರಲ್ಲಿ ಮತ್ತೆ ಹಿಂದಿನಿಂದ ಬೇರೆ ಗುಂಪುಗಳ ಗದ್ದಲ ಕೇಳ ತೊಡಗಿತು. ಸದ್ಯ ಇಲ್ಲಿ ನಾವಲ್ಲದೆ ಬೇರೆ ಗುಂಪುಗಳೂ ಇವೆ ಎಂದು ನೆಮ್ಮದಿಯೂ ಆಯಿತು.
ಮುಂದೆ ಸಾಗುತ್ತಿದ್ದಂತೆ ಒಂದು ಪುಟ್ಟ ಕೆರೆ ಕಾಣಸಿಕ್ಕಿತು. ಕೆರೆಯೋ ಅಥವಾ ಮಳೆ ನೀರು ಕಟ್ಟಿ ನಿಂತಿರುವ ಜಾಗವೋ ಎಂದು ನಮ್ಮಲಿ ಪುಟ್ಟ ತರ್ಕವೊಂದು ಶುರುವಾಯಿತು. “ಅದು ಏನೇ ಇರಲಿ ಮಂಜು,ಮೋಡ ಸ್ವಲ್ಪ ಕರಗುತ್ತಾ ಇದೆ. ಒಂದೆರಡು ಫೋಟೋಗಳು ಹೊಡೆದು ಬಿಡೋಣ” ಎಂದು ಕ್ಯಾಮೆರಾದ ಕೆಲಸ ಶುರು ಮಾಡಿದರು ಮನೆಯವರು. ಅಲ್ಲಿಂದ ಮುಂದೆ ಸಾಗುತ್ತಿದಂತೆ ಗುಡ್ಡದ ತುದಿಯಲ್ಲಿ ಕಲ್ಲು ಬಂಡೆಗಳು ಕಾಣ ಸಿಕ್ಕವು. ಗುಂಪಲ್ಲಿದ್ದ ಕಿರಿಯರೆಲ್ಲ ನಾ ಮುಂದು ತಾ ಮುಂದು ಎಂದು ಅಲ್ಲಿಗೆ ಓಡತೊಡಗಿದರು. ಅಲ್ಲಿ ತಲುಪುವುದಕ್ಕೂ ಮೊದಲು ವಾತಾವರಣ ತನ್ನ ದಿಶೆಯನ್ನು ಬದಲಾಯಿಸಿತು. ತಟ್ಟನೆ ಮಂಜು ಮುಸುಕತೊಡಗಿತು. ಕೆಲವೇ ನಿಮಿಷಗಳಲ್ಲಿ ಎಷ್ಟು ಮಂಜು ಮುಸುಕಿತೆಂದರೆ 5 .ಮೀ ಮುಂದೆ ಏನಿದೆ ಎಂದು ಕಾಣದಾಯಿತು. ಗಟ್ಟಿಯಾಗಿ ಗಾಳಿಯೂ ಬೀಸ ತೊಡಗಿತು. ಕ್ಯಾಮೆರಾ ಬ್ಯಾಗ್ ಒಳ ಸೇರಲೇ ಬೇಕಾಯಿತು. ಇನ್ನು ಮುಂದೆ ಸಾಗುವುದು ಅಸಾಧ್ಯವೆಂದು ಮನದಟ್ಟಾದಾಗ, ಹಿಂದೆ ಕಂಡಿದ್ದ ಗುಡಿಸಲು ನೆನಪಿಗೆ ಬಂತು.
ಮರಳಿ ಗುಡಿಸಲು ತಲುಪುವಷ್ಟರಲ್ಲಿ ಗಾಳಿಯ ತೀವ್ರತೆಯು ಇನ್ನೂ ಹೆಚ್ಚಿತ್ತು. ಹಾಗೆಯೇ ನಮ್ಮ ಹೊಟ್ಟೆಯೊಳಗಿನ ತಾಳದ ತೀವ್ರತೆಯೂ ಹೆಚ್ಚಾಗ ತೊಡಗಿತ್ತು. ಈ ಬೆಟ್ಟದ ಮೇಲೆ ಇನ್ನು ಏನು ಮಾಡುವುದಪ್ಪಾ ಎಂದು ಯೋಚಿಸುತ್ತಿರಬೇಕಾದರೆ ನಮ್ಮೊಂದಿಗೆ ಬಂದ ಗೆಳೆಯನೊಬ್ಬನು “ಟ-ಡಾ, ಇಲ್ಲಿದೆ ನೋಡಿ” ಎಂದು ಬ್ಯಾಗಿನಿಂದ ದೋಸೆಯ ಕಟ್ಟವೊಂದು ತೆಗೆಯುವುದೇ. ಬೆಳ್ಳಂಬೆಳಗ್ಗೆ ಮನೆಯಿಂದ ದೋಸೆ ಮಾಡಿಸಿ ತಂದಿರಬಹುದೆಂದು ನಾವ್ಯಾರು ಊಹಿಸಿರಲಿಲ್ಲ. ಮನಸಲ್ಲೇ ಅವನ ತಾಯಿಗೆ ಒಂದು “ಥ್ಯಾಂಕ್ಸ್” ಹೇಳಿ ಕಾಲಿ ದೋಸೆಯನ್ನು ಖಾಲಿ ಮಾಡುವ ಮಾಡುವ ಕೆಲಸಕ್ಕೆ ಕೈಹಾಕಿದೆವು. ದೋಸೆ ಖಾಲಿಯಾಗುವಷ್ಟರಲ್ಲಿ ಮಂಜಿನ ಪ್ರಭಾವವೇನಾದರು ಕಮ್ಮಿಯಾಗಬಹುದೇನೋ ಎಂಬ ಆಸೆಯೂ ನಮ್ಮಲ್ಲಿತ್ತು.
ದೋಸೆ-ಚಟ್ನಿಗಳೆಲ್ಲ ಖಾಲಿಯಾದವು. ಕಸಗಳನ್ನೆಲ್ಲಾ ಎತ್ತಿ ಬ್ಯಾಗ್ ಒಳಗೆ ತುಂಬಿಯೂ ಆಯಿತು. ಗಂಟೆ ಆಗಲೇ 10.30 ಆಗಿತ್ತು. ಆದರೆ ಮಂಜು ಮುಸಿಕಿದ ವಾತಾವರದಲ್ಲೇನು ಬದಲಾವಣೆ ಆಗಿರಲಿಲ್ಲ. ನಮ್ಮ ಹುಮ್ಮಸ್ಸಿಗೂ ಏನು ಕಮ್ಮಿ ಇರಲಿಲ್ಲ. ದಾರಿ ಕಾಣದಿದ್ದರೇನಂತೆ , ಇಲ್ಲೇ ಇದ್ದು ಪ್ರಕೃತಿಯನ್ನು ಸವಿಯೋಣ ಎಂದಾಯಿತು ನಮ್ಮ ನಿರ್ಧಾರ. ಹಾಗೆ ಇನ್ನೂ ಒಂದು ಅರ್ಧ ಗಂಟೆಕಾಲ ಪ್ರಕೃತಿಯನ್ನು ಸವಿಯುತ್ತಾ, ಆಡುತ್ತಾ, ಹರಟುತ್ತಾ ಕಳೆದೆವು. ಅಷ್ಟರಲ್ಲಿ ಮತ್ತೆ ವಾತಾವರಣ ಬದಲಾಯಿತು. ಮಳೆರಾಯನ ವಿಶ್ರಾಂತಿಯ ಸಮಯ ಮುಗಿದಿರಬೇಕು. ಶುರುವಾಯಿತು ಮಳೆ ಹಾಗು ಗಾಳಿಯ ರಭಸ. ಬೆಟ್ಟದ ತುದಿಯಲ್ಲಿದ್ದ ನಮಗೆ ಇನ್ನೇನೋ ನಾವು ಗಾಳಿಯಲ್ಲಿ ಹಾರಿ ಬಿಡುತ್ತೇವೆ ಎಂದನಿಸತೊಡಗಿತು. ನಮ್ಮಲ್ಲಿದ್ದ ಕೊಡೆ-ಜಾಕೆಟುಗಳಿಗೆಲ್ಲಾ ನಾಚಿಕೆಯಾಗಬೇಕೆಂದೆನಿಸಿವಂತಹ ಮಳೆ ಹೊಯ್ಯಲು ಶುರುವಾಯಿತು. “ಸಾಕು ನಿಮ್ಮ ಆಟ, ಇಳಿಯಿರಿ ಕೆಳಗೆ” ಎಂದು ಬೈಯುತ್ತಿದಂತೆ ಇತ್ತು ಮಳೆರಾಯನ ಆರ್ಭಟ.
ಮಳೆಯಲ್ಲಿ ನೆನೆಯುತ್ತಾ, ಕೈ-ಕೈ ಹಿಡಿಯುತ್ತಾ ಕೆಳಗಿಳಿಯ ತೊಡಗಿದೆವು. “ನಾ ಬರಲ್ಲ, ಇಲ್ಲೇ ಇರ್ತೆ” ಅನ್ನುತ್ತಾ ಮನಸಿಲ್ಲದ ಮನಸಿಂದ ಕೆಳಗೆ ಇಳಿಯುತ್ತಿದ್ದಳು ನನ್ನ ತಂಗಿ. ಹತ್ತಲು ಬೇಕಾಗಿದ್ದ ಸಮಯದ ಅರ್ಧ ಕೂಡ ಇಳಿಯಲು ಬೇಕಾಗಲಿಲ್ಲ. ಕೆಳ ತಲುಪುವಷ್ಟರಲ್ಲಿ ಎಲ್ಲರೂ ಚಳಿಯಿಂದ ನಡುಗುತ್ತಿದ್ದೆವು. ಸ್ವಲ್ಪ ಮಂಜು ಕಡಿಮಿ ಇದ್ದಿದ್ದರೆ , ಮಳೆ ಇನ್ನೂ ಸ್ವಲ್ಪ ತಡವಾಗಿ ಬಂದಿದ್ದರೆ ಎಂದೆಲ್ಲಾ ಪರಿತಪಿಸ ತೊಡಗಿದ್ದೆವು ನಾವೆಲ್ಲ. ಕೊನೆಯ ಪಕ್ಷ ಬೆಟ್ಟ ಹತ್ತಲಾದರೂ ಆಯಿತಲ್ಲ, ಒಂದರ್ಧ ದಿನ ಪ್ರಕೃತಿಯ ಮಡಿಲಲ್ಲಿ ಕಳೆಯಲಾಯಿತಲ್ಲ ಎಂದು ನಮ್ಮನ್ನು ನಾವೇ ಸಮಾಧಾನಿಸಿ ಕೊಳ್ಳಬೇಕಾಯಿತು. ಮುಂದಿನ ರಜೆಯಲ್ಲಿ ಮತ್ತೆ ಹತ್ತೋಣ ಎಂದು ಮಾತಾಡುತ್ತಾ ಕಾರುಗಳನ್ನು ಹತ್ತಿ ಮನೆ ಕಡೆಗೆ ಹೊರಟು ನಿಂತ ನಮ್ಮೆಲ್ಲರ ಮನಸ್ಸು ಒಮ್ಮತದಿಂದ ಹೇಳುತ್ತಿತ್ತು “ನಮ್ಮೂರ ಬೆಟ್ಟಗಳ ರಾಣಿಯೇ ರಾಣಿಪುರಂ” ಎಂದು.
-ಪಲ್ಲವಿ ಭಟ್, ಬೆಂಗಳೂರು
ಬಹಳ ಚೆನ್ನಾಗಿ ವರ್ಣಿಸಿದ್ದೀರಿ. ಬರಹ ಚಿತ್ರಕವಾಗಿದೆ. ತುಂಬಾ ದಿನಗಳಿಂದ ರಾಣಿಪುರಂ ಹೋಗಬೇಕೆಂದುಕೊಳ್ಳುತ್ತಿದ್ದೆ. ಇದಕ್ಕೆ ಇಂಬು ಕೊಟ್ಟಂತಾಯಿತು. ☺️
ಮುಂದಿನ ಬಾರಿ ತಪ್ಪದೆ ಭೇಟಿ ನೀಡಿ. 🙂
ನಾನೂ ಮೂಲತ: ಕೇರಳದ ಕಾಸರಗೋಡು ಜಿಲ್ಲೆಯವಳಾದರೂ ಈ ಬೆಟ್ಟದ ಬಗ್ಗೆ ಗೊತ್ತಿರಲಿಲ್ಲ..ಬರಹ ಇಷ್ಟವಾಯಿತು ..ಧನ್ಯವಾದಗಳು.
ರಾಣಿಪುರಂ ಅಷ್ಟೇನು ಪ್ರಸಿದ್ದಿ ಪಡೆದಿಲ್ಲ. ಆದರೆ ಖಂಡಿತ ನೋಡಬಹುದಾದ ಜಾಗ. 🙂
Bharathi ಪೆರಿಯ ನವೋದಯ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ರಾಣಿಪುರo ಬಗ್ಗೆ ಕೇಳಿದ್ದೆ . ಆದರೆ ಇಂದಿನ ವರೆಗೂ ಅಲ್ಲಿಗೆ ಹೋಗುವ ನನ್ನ ಆಸೆ ಕೈಗೂಡಲಿಲ್ಲ .
ನಿಮ್ಮ ಆಸೆಯು ಅತಿಶೀಘ್ರದಲ್ಲೇ ನೆರವೇರಲಿ. 🙂
Like to go to rasnipuram…nice pics and good information…..thank you pallavi….
Thank you 🙂
ನಿಮ್ಮ ಕಥೆಯನ್ನು ಓದುತ್ತಾ ಮಳೆಗಾಲದ ತಂಪು ಪರಿಸರ ನನ್ನ ಕಣ್ಣ ಮುಂದೆ ಬಂತು. ಒಮ್ಮೆ ಊರಿಗೆ ಹೋದಾಗ ಅತ್ತ ಚಾರಣ ಮಾಡಲು ಆಸಕ್ತಿ ಮೂಡಿದೆ.
ಧನ್ಯವಾದಗಳು. ಶೀಘ್ರದಲ್ಲೇ ಭೇಟಿ ನೀಡುವ ಅವಕಾಶ ನಿಮ್ಮದಾಗಲಿ.