ಮಳೆಯ ಸ್ವಾಗತಿಸು ಮಗುವೆ….
ಅಂಗಡಿಯೊಂದರಲ್ಲಿ ವ್ಯಾಪಾರ ಮಾಡಿ ಹೊರಡುವಷ್ಟರಲ್ಲಿ ಸುಮಾರು ಕಾಲು ಗಂಟೆ ಕಾಲ ಧೋ ಎಂದು ಮಳೆ ಸುರಿಯಿತು. ಮಳೆ ಸ್ವಲ್ಪ ಕಡಿಮೆಯಾಗಲಿ ಎಂದು ಅಲ್ಲಿ ಬಂದಿದ್ದ ಗ್ರಾಹಕರು ಕುಶಲೋಪರಿ ಹರಟುತ್ತಿದ್ದರು. ತನ್ನ ತಾಯಿಯೊಂದಿಗೆ ಅಲ್ಲಿಗೆ ಬಂದಿದ್ದ ಸುಮಾರು 6 ವರುಷದ ಪುಟ್ಟ ಬಾಲಕಿಯೊಬ್ಬಳು ಹೊರಗಡೆ ನೋಡುತ್ತಾ ‘ಈಗ್ಯಾಕೆ ಬಂದೆ ನೀನು, ನಂಗೆಷ್ಟು ಕಷ್ಟ… ಸ್ಕೂಟರಲ್ಲಿ ಹೋಗೋಕಾಗುತ್ತಾ…ಯಾಕೆ ಬಂದೆ ನೀನು…..’ ಇತ್ಯಾದಿ ಯಾರನ್ನೋ ಉದ್ದೇಶಿಸಿ ಬಯ್ಯುವಂತೆ ಮಾತನಾಡುತ್ತಿದ್ದಳು. ಪದೇ ಪದೇ ಹೀಗೆ ಹರಟುತ್ತಿದ್ದುದರಿಂದ ಒಂದಿಬ್ಬರು , ನೀನು ಯಾರ ಬಳಿ ಮಾತನಾಡುವುದು ಅಂದರು. ಆ ಬಾಲಕಿ ‘ ನಂಗೆ ಮನೆಗೆ ಹೋಗಕಾಗಲ್ಲ..ಅದ್ಕೆ ಮಳೇಗೆ ಬಯ್ತಾ ಇದ್ದೀನೆ…’ ಎಂದಳು ನಗುತ್ತಾ . ಅಲ್ಲಿದ್ದ ಕೆಲವರು ನಕ್ಕರು, ಆಕೆಯ ತಾಯಿ ಸುಮ್ನಿರು ಅಂತ ಗದರಿಸಿದರು, ಆದರೂ ಬಾಲಕಿ ಅವ್ಯಾಹತವಾಗಿ ಮಳೆಯನ್ನು ಬಯ್ಯುತ್ತಿದ್ದಳು. ಇದು ತಮಾಷೆಯಾಗಿ ಕಂಡರೂ, ಮಳೆಯ ಸೊಬಗನ್ನು ಆನಂದಿಸುವ ಮುಗ್ಧತೆ ಮತ್ತು ಪ್ರಕೃತಿಯೊಂದಿಗೆ ಬೆರೆಯುವ ಕಲ್ಪನೆ ಇಲ್ಲದಿರುವುದು ಆ ಮಗು ಮಳೆಗೆ ಬಯ್ದುದರ ಮೂಲ ಕಾರಣ ಎನಿಸಿತು .
ನಮ್ಮ ಬಾಲ್ಯದಲ್ಲಿ ‘ಹುಯ್ಯೋ ಹುಯ್ಯೋ ಮಳೆರಾಯ..ಹೂವಿನ ತೋಟಕೆ ನೀರಿಲ್ಲ’ ಎಂದು ರಾಗವಾಗಿ ಹಾಡುತ್ತಿದ್ದೆವು. ಸಾಮಾನ್ಯವಾಗಿ ಮೇ ಕೊನೆಯ ವಾರದಲ್ಲಿ ಬಿಸಿಲಿನಿಂದ ಬಳಲಿದ ಭೂಮಿಗೆ ಪ್ರಥಮ ಮಳೆ ಬಿದ್ದಾಗ ಪಸರಿಸುವ ಮಣ್ಣಿನ ಕಂಪಿಗೆ ಮೂಗು ಅರಳುತ್ತಿತ್ತು.. ಒಂದೆರಡು ಮಳೆ ಬಿದ್ದೊಡನೆ, ನೆಲದಿಂದ ಪುತಪುತನೆ ಮೇಲೆದ್ದು ಬರುವ ಗೆದ್ದಲು ಹುಳಗಳನ್ನು ಬೆರಗುಗಣ್ಣಿನಿಂದ ನೋಡುತ್ತಾ, ಆತ್ತಿತ್ತ ಹಾರಾಡಿ ಕೆಲವೇ ಗಂಟೆಗಳಲ್ಲಿ ರೆಕ್ಕೆ ಮುರಿದು ಸಾಯುವ ಆ ಹುಳಗಳನ್ನು ತಿನ್ನಲು, ಇದ್ದಕ್ಕಿದ್ದಂತೆ ಎಲ್ಲಿಂದಲೋ ಬರುವ ಕೊಕ್ಕರೆ, ಕಾಗೆಯಂತಹ ಪಕ್ಷಿಗಳನ್ನು ನೋಡಿ ಚಕಿತರಾಗುತ್ತಿದ್ದೆವು.
ಮಳೆಗಾಲ ಸೃಷ್ಟಿಸುವ ವಿವಿಧ ಶಬ್ದಗಳಿಗೆ ಕಿವಿಗೊಡುವುದರಲ್ಲಿ ಅದೆಷ್ಟು ಸಂತಸ!. ಹೆಂಚಿನ ಮನೆಯ ಮಾಡಿನ ಮೇಲೆ ಬೀಳುವ ಮಳೆ ಹನಿಗಳ ತಟಪಟ ನಾದ, ಜೋರಾಗಿ ಬೀಸುವ ಗಾಳಿಗೆ ಓಲಾಡುವ ಮರಗಳ ಸದ್ದು, ತೋಟದಲ್ಲಿ ಮುರಿದು ಬಿದ್ದ ಅಡಿಕೆ ಮರಗಳ ದಡಾರ್ ಶಬ್ದ, ಮನೆಯ ಸುತ್ತುಮುತ್ತಲು ಸೃಷ್ಟಿಯಾದ ದಿಢೀರ್ ಜಲಪಾತಗಳ ಮೊರೆತ , ಮನೆಯ ಮಾಡಿನಿಂದಿಳಿದ ನೀರು ಅಂಗಳದಲ್ಲಿ ಕೆರೆಯನ್ನು ಸೃಷ್ಟಿಸಿ ಜಾಗ ಇರುವಲ್ಲಿಗೆ ನೀರು ಹರಿಯುವ ಜುಳುಜುಳು ನಾದ, ಮಳೆ ನಿಂತ ಮೇಲೆ ಮರದ ಎಲೆಗಳಿಂದ ತೊಟ್ಟಿಕ್ಕುವ ಹನಿಗಳ ಲಯ, ಮಳೆಗಾಲಕ್ಕೆ ಸಂಭ್ರಮಿಸುವ ಕಪ್ಪೆಯ ವಟರುಗುಟ್ಟುವಿಕೆ, ಜೀರುಂಡೆಗಳ ಝೇಂಕಾರ, ವಿವಿಧ ಕೀಟಗಳ ಸಂಗೀತ…..ಪಟ್ಟಿ ಮಾಡಿದಷ್ಟೂ ಮುಗಿಯದು. ಬೆಚ್ಚಗೆ ಬಟ್ಟೆ ಧರಿಸಿ, ಕೆಂಡದಲ್ಲಿ ಸುಟ್ಟ ಹಲಸಿನ ಬೀಜ, ಹಪ್ಪಳಗಳನ್ನು ಮೆಲ್ಲುತ್ತಾ, ಕಿಟಿಕಿಯ ಮೂಲಕ ಮಳೆಯ ಜಲಧಾರೆ ನೋಡುತ್ತಾ ಇದ್ದರೆ ಸ್ವರ್ಗೀಯ ಆನಂದ.
ಶಾಲೆಗೆ ಹೋಗಲು ಕನಿಷ್ಟ ಒಂದು ಮೈಲಿಯಾದರೂ ನಡೆಯಲೇ ಬೇಕಿತ್ತು. ಜೂನ್ ತಿಂಗಳಲ್ಲಿ, ಸುರಿಯುತ್ತಿರುವ ಮಳೆಯಲ್ಲಿಯೇ ದೊಡ್ಡದಾದ ಕೊಡೆಯನ್ನು ಹಿಡಿದುಕೊಂಡು, ಚಪ್ಪಲಿ ಹಾಕದೆ ನಡೆದು ಮನೆಯಂಗಳ, ಅಡಿಕೆ ತೋಟ ದಾಟಿ, ಗದ್ದೆಯ ಏರಿ ಮೇಲೆ ನಡೆದು ಶಾಲೆ ತಲಪುವಷ್ಟರಲ್ಲಿ ಪುಸ್ತಕಗಳೂ ನಮ್ಮ ಬಟ್ಟೆಯೂ ಒದ್ದೆ. ಮಳೆಗಾಲದಲ್ಲಿ ಚಪ್ಪಲಿ ಇಲ್ಲದೇ ನಡೆಯುವುದು ಸುಲಭವಾಗಿತ್ತು. ಶಾಲೆಯಿಂದ ಮನೆಗೆ ಬರುವ ಸಮಯದಲ್ಲಿ ಮಳೆ ಬಂದರೆ ನೀರಿನಲ್ಲಿ ಆಟವಾಡುತ್ತಾ ಬರಲು ಇನ್ನಷ್ಟು ಖುಷಿ. ಒದ್ದೆಯಾದ ಪುಸ್ತಕಗಳನ್ನು, ರಾತ್ರಿಯ ಅಡುಗೆಯಾದ ಮೇಲೆ ಬೆಚ್ಚಗಿರುವ ಒಲೆಯ ಪಕ್ಕದ ಕಟ್ಟೆಯಲ್ಲಿ ಇರಿಸಿ ಒಣಗಿಸುವುದೂ ನಮ್ಮ ಮಳೆಗಾಲದ ಮುಖ್ಯ ಕೆಲಸವಾಗಿತ್ತು. ಅತಿಯಾಗಿ ಮಳೆ ಬಂದಾಗ ಶಾಲೆಗೆ ರಜೆಯನ್ನೂ ಘೋಷಿಸುತ್ತಿದ್ದರು. ಅಡುಗೆಮನೆಯಲ್ಲಿ ಮಳೆಗಾಲದ ವಿಶೇಷ ಹಲಸಿನಕಾಯಿಯ ವಿವಿಧ ಅಡುಗೆಗಳು, ಕೆಸುವಿನ ಪತ್ರೊಡೆ, ಹಪ್ಪಳ ಇತ್ಯಾದಿ ಮೇಳೈಸುತಿತ್ತು. ಒಟ್ಟಿನಲ್ಲಿ ಮಳೆಯ ಅಡಿಯಲ್ಲಿ ಸಂಭ್ರಮಿಸುತ್ತಾ ವರ್ಷವಿಡೀ ಮಳೆಗಾಲವಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಹಾರೈಸುತ್ತಿದ್ದೆವು.
ಕಂಪ್ಯೂಟರ್, ಮೊಬೈಲ್ , ವೀಡಿಯೋ ಗೇಮ್ಸ್, ಕಾರ್ಟೂನ್ ಗಳಿಲ್ಲದ ಆ ಕಾಲದಲ್ಲಿ ನಮಗೆ ಪ್ರಕೃತಿಯೇ ಆಟ-ಪಾಠಗಳ ಮೂಲ. ಮಳೆ, ಬಿಸಿಲು, ಚಳಿ, ಮರ, ಗಿಡ, ಮಣ್ಣು, ಮರಳು ಹೀಗೆ ಪ್ರತಿಯೊಂದೂ ಆಟಿಕೆಗಳಾಗಿದ್ದುವು. ಈಗ ನಗರದಲ್ಲಿ ಹುಟ್ಟಿ ಬೆಳೆದ, ಪ್ರಕೃತಿ, ಪರಿಸರದ ಪರಿಚಯವಿಲ್ಲದೆ ಬೆಳೆದ ಮಕ್ಕಳಿಗೆ ಕಾಡು ಪ್ರದೇಶಗಳ ಜನಜೀವನವನ್ನು ಪರಿಚಯಿಸಿ ಅವರು ಪ್ರಕೃತಿ ಸೊಬಗನ್ನು ಆಸ್ವಾದಿಸುವಂತೆ ಮಾಡಿ ‘ಮಳೆಯ ಸ್ವಾಗತಿಸು ಮಗುವೇ’ ಎನ್ನುವ ಕಾಲ ಬಂದಿದೆ.
,
– ಹೇಮಮಾಲಾ.ಬಿ
ಶುಭೋದಯ ಮೇಡಂ.ಲೇಖನ ಸೊಗಸಾಗಿದೆ. ನನಗೂ ಬಾಲ್ಯದ ನೆನಪಾಯ್ತು.ಮಳೆ ಬಂದರೆ ಒಂದೆರೆಡು ರಜೆ ಹೆಚ್ಚು.ನೀರಾಟ ಮತ್ತೂ ಹೆಚ್ಚು.ಮೂಗು ಸೋರೋದು,ಜ್ವರ,ಏನೇ ಆದರೂ ತುಂಬಿದ ಹೊಳೆ ನೋಡಲು ಓಡುವುದು,ನೀರಿನ ಝರಿಗೆ ನೆನೆಯವುದು ಸರ್ವೇ ಸಾಮಾನ್ಯ. ಈಗ ಆ ಸೊಗಸಿಲ್ಲ
ನಮ್ಮೂರಿನ ಮಳೆಗಾಲದ ನೆನಪಾಯಿತು. ಮನೆಯಂಗಳವೇ ಕೆರೆಯಂತಾದಾಗ, ಕಾಗದದ ದೋಣಿಗಳನ್ನು ಆ ನೀರಿಗೆ ಬಿಟ್ಟು ಸಂಭ್ರಮಿಸುತ್ತಿದ್ದೆವು.
ಧನ್ಯವಾದಗಳು. 🙂
ಲೇಖನ ಸೊಗಸಾಗಿದೆ. ಮಳೆಗಾಲ , ಶಾಲಾ ದಿನಗಳ, ಹಲಸಿನ ಹಪ್ಪಳ ಎಲ್ಲವೂ ನೆನಪಾಯಿತು.
ಧನ್ಯವಾದಗಳು 🙂
ಈಗಿನ ಮಳೆಗೆ ಮೊದಲಿನ ರಭಸವೇ ಇಲ್ಲ ಅಲ್ವಾ…ಮನೆ ಹತ್ತಿರದ ತೋಡಿನಲ್ಲಿ ಹರಿಯುವ ಕೆಂಪು ನೀರು..ಅದರಲ್ಲಿ ತೇಲುತ್ತಾ ಹೋಗುವ ತೆಂಗು,ಕೊಂಬೆ,ರೆಂಬೆಗಳು..ಅದನ್ನೇ ನೋಡುತ್ತಾ ಅಲ್ಲೇ ಬಾಕಿ..!!.ಶಾಲೆಗೆ ಹೋಗುವ ದಾರಿಯಲ್ಲಿ ಸಿಗುವ ಕೆಂಪು ವೆಲ್ವೆಟ್ ಹುಳಗಳು(ಈಗ ಅವುಗಳು ಅಳಿದೇ ಹೋಗಿವೆ!!)..ಇಂದ್ರ ತಾಂಬೂಲ ತಿಂದು ಉಗುಳಿದ್ದು ಎಂದು ಹೇಳುತ್ತಿದ್ದರು ಅದನ್ನು!! ಎಲ್ಲಾ ಈಗ ಕನಸು ಮಾತ್ರ
ಹೌದು..ಧನ್ಯವಾದಗಳು