ಹಿಮಗಿರಿಯ ಒಡಲು..ಮುಕ್ತಿನಾಥದ ಮಡಿಲು..ಭಾಗ 3
ನನ್ನೊಂದಿಗೆ ಬಂದಿದ್ದ ನನ್ನ ತಾಯಿಗೆ ಪ್ರಯಾಣದಿಂದ ಸುಸ್ತಾಗಿತ್ತು. ತಲೆನೋವು, ಊಟವೂ ರುಚಿಸಲಿಲ್ಲ ಎಂದು ಆಗಲೇ ವಿಶ್ರಮಿಸಿದ್ದರು. ಹಾಗಾದರೆ ಮುಕ್ತಿನಾಥಕ್ಕೆ ಇಬ್ಬರ ಸಲುವಾಗಿ ಮುಂಗಡ ಕೊಡುವುದೋ ಬೇಡವೋ, ಆ ರಸ್ತೆಯ ಪ್ರಯಾಣ ಬಹಳ ಕಷ್ಟಕರವಂತೆ, ಅಂದೆ. ‘ಸುಸ್ತು ಅಷ್ಟೆ, ನಿದ್ರೆ ಮಾಡಿದರೆ ಸರಿ ಹೋಗಬಹುದು, ಬುಕ್ ಮಾಡು , ಕಡಿಮೆ ಆಗದಿದ್ದರೆ ನಾಳೆ ಹೋಗದಿದ್ದರಾಯಿತು’ ಅಂದರು ಅಮ್ಮ .
ನಾವು ನಗದು ರೂಪದಲ್ಲಿ ಸ್ವಲ್ಪ ಹಣ ಮಾತ್ರ ಇಟ್ಟುಕೊಂಡಿದ್ದೆವು. . ಅಗತ್ಯವಿದ್ದರೆ ಕಾರ್ಡ್ ಸ್ವೈಪ್ ಮಾಡಿದರಾಯಿತು ಅಥವಾ ಎ.ಟಿ.ಎಂ ನಿಂದ ದುಡ್ಡು ಪಡೆದರಾಯಿತು ಅಂತ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ ಇಟ್ಟುಕೊಂಡಿದ್ದೆ. ಏಜಂಟ್ ನ ಬಳಿ ಕಾರ್ಡ್ ಸ್ವೈಪಿಂಗ್ ಮೆಶಿನ್ ಇರಲಿಲ್ಲ. ನಮಗೆ ಮುಕ್ತಿನಾಥಕ್ಕೆ ಹೋಗುವ ಪೂರ್ವತಯಾರಿ ಇರದ ಕಾರಣ , ಇಬ್ಬರ ಟಿಕೆಟ್ ಗೆ ಸಾಲುವಷ್ಟು ನಗದು ಹಣ ಆ ಸಮಯದಲ್ಲಿ ಇರಲಿಲ್ಲ. ಇದೊಳ್ಳೆ ಫಜೀತಿ ಆಯಿತಲ್ಲ ಅಂದುಕೊಳ್ಳುತ್ತಿರುವಾಗ , ಮೈಸೂರಿನ ಗೆಳತಿ ಭಾರತಿ, ತನ್ನ ಬಳಿ ಇದ್ದ ಹಣವನ್ನು ಕೊಟ್ಟರು. ಆ ಹಣದಲ್ಲಿ ಎರಡು ಸೀಟು ಮುಂಗಡ ಕಾಯ್ದಿರಿಸಿದೆ. ಎರಡು ದಿನಗಳ ಪ್ರಯಾಣಕ್ಕೆ ಬೇಕಾಗುವಷ್ಟು ಬಟ್ಟೆ, ಇತರ ಸಾಮಗ್ರಿಗಳನ್ನು ಸಣ್ಣ ಬ್ಯಾಗ್ ಒಂದರಲ್ಲಿ ತುಂಬಿಸಿ, ನಾಲ್ಕು ಗಂಟೆಗೆ ಅಲಾರ್ಮ್ ಇಟ್ಟು ಮಲಗಿದೆ. ಒಟ್ಟಿನಲ್ಲಿ, ಮುಕ್ತಿನಾಥ ತನ್ನೆಡೆಗೆ ನನ್ನನ್ನು ಕರೆಸಿಕೊಳ್ಳಬೇಕೆಂದು ನಿರ್ಧರಿಸಿದ್ದಾನೆಂದಾದರೆ ಎದುರಾಗುವ ಅಡಚಣೆಗಳನ್ನೂ ಅವನೇ ನಿವಾರಿಸುತ್ತಾನೆ ಎಂದು ನಿಶ್ಚಿಂತಳಾದೆ.
ಮರುದಿನ (21 ಫೆಬ್ರವರಿ 2017) ಬೆಳಗ್ಗೆ ನಾಲ್ಕುಗಂಟೆಗೆ ಅಲಾರ್ಮ್ ಎಚ್ಚರಿಸಿತು. ಅಮ್ಮನ ಆರೋಗ್ಯ ಈಗ ಹೇಗಿದೆ ಎಂದು ಕೇಳಿದಾಗ, ‘ ಹೊಟ್ಟೆ ತೊಳೆಸಿದಂತಾಗುತ್ತಿದೆ, ನಾನು ಈವತ್ತು ಮುಕ್ತಿನಾಥಕ್ಕೂ ಬರುವುದಿಲ್ಲ, ಪೋಖ್ರಾ ನಗರ ವೀಕ್ಷಣೆಗೂ ಹೋಗುವುದಿಲ್ಲ. ಲಘು ಆಹಾರ ತೆಗೆದುಕೊಂಡು ದಿನವಿಡೀ ವಿಶ್ರಾಂತಿ ತೆಗೆದುಕೊಂಡರೆ, ನಾಳೆಗೆ ಸರಿಯಾಗಬಹುದು. ನನಗೆ ಕಾಶಿ, ಪ್ರಯಾಗಕ್ಕೆ ಹೋಗಲು ಸಿಕ್ಕಿದರೆ ಧಾರಾಳ ಸಾಕು. ನನ್ನ ವಯಸ್ಸಿಗೆ ತಕ್ಕಂತೆ, ನನ್ನ ಕೈಲಾಗುವಷ್ಟೇ ಪ್ರಯಾಣಿಸಿದರೆ ಎಲ್ಲರಿಗೂ ಅನುಕೂಲ’ ಅಂದರು !
ಈಗ ನನಗೆ ಇಕ್ಕಟ್ಟಿಗೆ ಸಿಲುಕಿದಂತಾಯಿತು. ಇಬ್ಬರಿಗಾಗಿ ಟಿಕೆಟ್ ಕಾಯ್ದಿರಿಸಿ ಆಗಿದೆ. ಅಮ್ಮನನ್ನು ಬಿಟ್ಟು ಹೋಗಲು ಮನಸ್ಸೊಪ್ಪದು, ನಾವಿಬ್ಬರು ಬರುವುದಿಲ್ಲ ಎಂದು ಈ ಕೊನೆಯ ಹಂತದಲ್ಲಿ ಆಯೋಜಕರಿಗೆ ತಿಳಿಸಿದರೂ ಪ್ರಯೋಜನವಾಗದು, ಯಾಕೆಂದರೆ ಇನ್ನು ಒಂದು ಗಂಟೆಯಲ್ಲಿ ನಾವು ಪ್ರಯಾಣಿಸಬೇಕಾದ ಮಿನಿಬಸ್ ಬರಲಿದೆ. ಹಾಗಾಗಿ ಮುಕ್ತಿನಾಥಕ್ಕೆ ಹೋಗಲಾಗಲಿಲ್ಲ ಎಂದು ಬೆಳಕಾದ ಮೇಲೆ ತಿಳಿಸಿದರಾಯಿತು ಎಂದು ಪುನ: ನಿದ್ರಿಸಿದೆ. ಮುಂಜಾನೆ ಐದು ಗಂಟೆಗೆ ಟ್ರಾವೆಲ್ಸ್ ನ ಶಾಂತಕುಮಾರ್ ಅವರು ‘ಮುಕ್ತಿನಾಥಕ್ಕೆ ಹೋಗುವವರು ಕೆಳಗೆ ಬನ್ನಿ, ಬಸ್ ಬಂದಿದೆ‘ ಎಂದು ಕೂಗುತ್ತಾ ಬಂದರು. ನಾನು, ಅಮ್ಮನಿಗೆ ಬರಲಾಗುವುದಿಲ್ಲವೆಂದೂ, ಅವರನ್ನು ಬಿಟ್ಟು ನಾನು ಬರುವುದಿಲ್ಲವೆಂದೂ, ನಮ್ಮಿಬ್ಬ್ರರ ಟಿಕೆಟ್ ರದ್ದು ಮಾಡಿರೆಂದೂ ಕೇಳಿಕೊಂಡೆ.
‘ಇನ್ನು ಕ್ಯಾನ್ಸಲ್ ಮಾಡಕಾಗಲ್ಲಾ…. ಜುಮ್ ಸಮ್ ನಿಂದ ಎರಡು ಜೀಪಿನ ಬಾಡಿಗೆ ತೆಕ್ಕೋಳ್ತಾರೆ, ಹೋಗಿಲ್ಲಾಂದ್ರೆ ಆಡ್ವಾನ್ಸ್ ಕೊಟ್ಟಿದ್ದು ವಾಪಸ್ ಸಿಗಲ್ಲ….ನೀವು ಒಬ್ಬರಾದರೂ ಹೊರಡಿ, ಅಮ್ಮನನ್ನು ನಾವು ನೋಡ್ಕೋತೀವಿ…. ಬೇಗ ರೆಡಿ ಆಗ್ಬಿಡಿ’ ‘ ಅಂದರು ಶಾಂತಕುಮಾರ್. ಅಮ್ಮನಿಗೆ ಈ ವಿಷಯ ತಿಳಿಸಿದಾಗ ‘ನೀನು ಹೋಗಿ ಬಾ, ಜ್ವರದ ಮಾತ್ರೆ, ವಾಂತಿ ಮಾತ್ರೆ ಇದ್ದರೆ ಕೊಡು, ನನಗೆ ಏನೂ ತೊಂದರೆಯಾಗದು, ಸಹಪ್ರಯಾಣಿಕರು ಕಾಳಜಿ ವಹಿಸುತ್ತಾರೆ‘ ಅಂದರು.
ಹೀಗೆ ಅನಿಶ್ಚಿತತೆಯ ನಡುವೆ, ಕೊನೆಗೂ ಹೊರಡುವ ನಿರ್ಧಾರ ಮಾಡಿ ತರಾತುರಿಯಿಂದ ಸಿದ್ಧಳಾದೆ. ಅಮ್ಮನಿಗೆ ಕೆಲವು ಮಾತ್ರೆಗಳನ್ನು ತೋರಿಸಿಕೊಟ್ಟು, ಪಕ್ಕದ ರೂಮಿನಲ್ಲಿದ್ದ ಸಹಯಾತ್ರಿಗಳಾದ ವೇದಾ ಮತ್ತು ಪದ್ಮಜಾ ಅವರಿಗೂ ವಿಷಯ ತಿಳಿಸಿ, ಬಸ್ಸನ್ನೇರಿದೆ. ಮಿನಿ ಬಸ್ಸಿನಲ್ಲಿ 15 ಜನ ಮಾತ್ರ ಇದ್ದೆವು. 22 ಮಂದಿ ಕೂರಬಹುದಾಗಿದ್ದ ಬಸ್ಸು ಅದು. ಅದರ ಸಾರಥಿ ‘ರಾಜಕುಮಾರ’ ಎಂಬ ಎಳೆಯ ವಯಸ್ಸಿನ ನಗುಮುಖದ ಯುವಕ. ಆತ ತಲೆಗೂದಲನ್ನು ಗಂಟು ಹಾಕಿ ಜಟೆಯಂತೆ ಬಿಟ್ಟುಕೊಂಡಿದ್ದ. ಬಸ್ಸು ತುಂಬ ಪ್ರಯಾಣಿಕರಿಲ್ಲವೆಂದು ಅವನಿಗೆ ಅಸಮಾಧಾನವಾಗಿತ್ತು. ನಾವೆಲ್ಲಾ ಬಂದಿದ್ದರೂ ಬಸ್ ಹೊರಡಲಿಲ್ಲ.
ಆಮೇಲೆ 7-8 ಕಾಲೇಜು ವಿದ್ಯಾರ್ಥಿಗಳ ತಂಡವನ್ನು ನಮ್ಮ ಬಸ್ಸಿಗೆ ಹತ್ತಿಸಿಕೊಂಡ. ಇನ್ನೂ ಸ್ವಲ್ಪ ಮುಂದೆ ಹೋಗುವಾಗ, ಬೇರೆ ಪ್ರಯಾಣಿಕರನ್ನೂ ಬಸ್ಸಿಗೆ ಹತ್ತಿಸಿಕೊಂಡ. ಅವರ ಜೊತೆಗೆ ಸುಮಾರು ಅಕ್ಕಿಮೂಟೆಗಳೂ ಬಸ್ಸನ್ನೇರಿದುವು. ಬಸ್ಸಿನಲ್ಲಿ ನಡೆದಾಡಲು ಇರುವ ಪ್ಯಾಸೇಜ್ ಉದ್ದಕ್ಕೂ ಅಕ್ಕಿಮೂಟೆಗಳನ್ನಿರಿಸಿದ ಕಾರಣ, ಅನಿವಾರ್ಯವಾಗಿ ನಾವುu ಅಕ್ಕಿಮೂಟೆಗಳ ಮೇಲೆ ಕಾಲಿಟ್ಟು ನಡೆಯುವಂತಾಯಿತು. ‘ನಾವು ಬಸ್ ಬುಕ್ ಮಾಡಿದ್ರೂ, ಇದೊಳ್ಳೆ ಸಿಟಿ ಬಸ್ ಆಗೋಯ್ತು ’ ಅಂತ ಕೆಲವರು ಅಸಹನೆ ಪ್ರದರ್ಶಿಸಿದರು. ಕಾಲೇಜು ವಿದ್ಯಾರ್ಥಿಗಳ ಸಂಭ್ರಮ, ಗಲಾಟೆ , ನೇಪಾಳಿ ಹಾಡುಗಳ ಅಂತಾಕ್ಷರಿ ಆರಂಭವಾಯಿತು. ಅರ್ಥವಾಗದಿದ್ದರೂ ಅವರು ಹಾಡುತ್ತಿದ್ದ ಹಾಡುಗಳು ಕೇಳಲು ನಮ್ಮ ಹಳೆಯ ಹಿಂದಿ ಸಿನೆಮಾ ಹಾಡುಗಳಂತೆ ಇಂಪಾಗಿದ್ದುವು. ಕಿಟಿಕಿ ತೆರೆದರೆ ಬಿರುಗಾಳಿಯಂತೆ ಧೂಳು ಆವರಿಸುತ್ತಿತ್ತು. ನಮ್ಮ ಬಸ್ಸಿನಲ್ಲಿದ್ದ ಕಾಲೇಜು ವಿದ್ಯಾರ್ಥಿಗಳು ಬಸ್ಸಿನ ಒಳಗಡೆಯೂ ಮುಖ-ಬಾಯಿ ಮುಚ್ಚುವ ಮಾಸ್ಕ್ ಧರಿಸಿ ಕುಳಿತಿದ್ದರು. ಅವರು ನೇಪಾಳದ ಯಾವುದೋ ಬೇರೆ ಜಿಲ್ಲೆಯವರು. ಪ್ರಥಮ ಬಾರಿಗೆ ಮುಕ್ತಿನಾಥಕ್ಕೆ ಹೋಗುತ್ತಿರುವವರು. ಒಟ್ಟಾರೆಯಾಗಿ ಕಾಲೇಜು ವಿದ್ಯಾರ್ಥಿಗಳು ಆಗಮನದಿಂದಾಗಿ ಬಸ್ಸಿನಲ್ಲಿ ಲವಲವಿಕೆ ತುಂಬಿತ್ತು.
……ಮುಂದುವರಿಯುವುದು
ಹಿಮಗಿರಿಯ ಒಡಲು..ಮುಕ್ತಿನಾಥದ ಮಡಿಲು ….ಭಾಗ 2 : http://52.55.167.220/?p=13700
– ಹೇಮಮಾಲಾ.ಬಿ
ತುಂಬಾ ಚೆನ್ನಾಗಿದೆ