ಹಿಮಾಲಯದ ಸನ್ನಿಧಿಯಲ್ಲಿ – ಚಾರ್ಧಾಮ ಪ್ರವಾಸ-ಭಾಗ 5

Share Button

Rukminimala

ಗಂಗೋತ್ರಿಯೆಡೆಗೆ ಪಯಣ
ಬೆಳಗ್ಗೆ (೧೫-೯-೨೦೧೬) ೫.೩೦ಕ್ಕೆ ಎದ್ದು, ತಯಾರಾಗಿ ೬.೩೦ಕ್ಕೆ ಕೌಸಲ್ಯಳಿಗೆ ವಿದಾಯ ಹೇಳಿ ಬಾರ್ಕೋಟ್ ಬಿಟ್ಟೆವು. . ಕೌಸಲ್ಯಳ ಕಣ್ಣು ನಮ್ಮ ಹಿಂದೆಯೇ ಸುತ್ತುತ್ತಿತ್ತು. ಅಡುಗೆಮನೆಯಲ್ಲಿ ಅಡುಗೆಮಾಡುವಾಗ ಯಾವ ಪಾತ್ರೆ ಉಪಯೋಗಿಸಿದ್ದೇವೆ, ಏನು ಮಾಡುತ್ತಿದ್ದೇವೆ ಎಂದು ಹದ್ದಿನ ಕಣ್ಣಿಂದ ನೋಡುತ್ತಿದ್ದರು. ನಾವು ಮಾಡಿದ ಅಡುಗೆಯಲ್ಲಿ ಪಾಲು ಕೇಳುತ್ತಿದ್ದರು. ಶಶಿಕಲಾ ಅವರು ಉಟ್ಟ ಸೀರೆ ಕೌಸಲ್ಯಳಿಗೆ ಬಹಳ ಮೆಚ್ಚುಗೆಯಾಗಿ ಈಗಲೆ ಬಿಚ್ಚಿ ಕೊಡು ಎಂದು ಕೇಳಿದ್ದರಂತೆ!

ಮೆಹರ್ಗಾಂವ್ ಗುಹೆ- ಪ್ರಕಟೇಶ್ವರ ಮಹದೇವ
ಗಂಗೋತ್ರಿಗೆ ಹೋಗುವ ದಾರಿಯಲ್ಲಿ ಮೆಹರ್ಗಾಂವ್ ಗುಹೆ ಸಿಗುತ್ತದೆ. ಅಲ್ಲಿಗೆ ತೆರಳಲು ರಸ್ತೆಯಿಂದ ೬೦-೭೦ ಎತ್ತರದ ಮೆಟ್ಟಲು ಹತ್ತಬೇಕು. ಕೈಹಿಡಿದು ಹತ್ತಿಸುವೆವು ಎಂದು ಹತ್ಟಾರು ಮಂದಿ ಸುತ್ತುವರಿಯುತ್ತಾರೆ. ಅವರಲ್ಲಿ ೪-೫ ವರ್ಷದ ಮಕ್ಕಳೂ ನಮ್ಮ ಕೈಹಿಡಿದು ಹತ್ತಿಸಲು ಮುಂದೆ ಬರುತ್ತಾರೆ! ಮೇಲೆ ಹತ್ತಿ ಗುಹೆಯ ಬಳಿ ಬಂದೆವು. ಪ್ರಕಟೇಶ್ವರ ಮಹಾದೇವ ಗುಹೆ ಒಳಗೆ ಒಮ್ಮೆಲೆ ಐದು ಜನರಿಗಿಂತ ಹೆಚ್ಚು ಮಂದಿ ಹೋಗಲು ಸಾಧ್ಯವಿಲ್ಲ. ಒಳಗೆ ಪಂಚಲಿಂಗ ಅಡ್ಭುತವಾಗಿದೆ. ಗಣೇಶ, ಇಲಿ, ದುರ್ಗೆ, ಗಂಗೆ, ಕೈಲಾಸನಾಥ, ನಾಗನಂತೆ ಕಾಣುವ ಕಲ್ಲಿನಲ್ಲೇ ಉದ್ಭವವಾದ ಮೂರ್ತಿಗಳು. ಬಹಳ ಚೆನ್ನಾಗಿವೆ. ನೋಡಿ ಕೆಳಗೆ ಬಂದೆವು. ಬೆಳಗ್ಗೆ ಉಪ್ಪಿಟ್ಟು, ಮೊಸರನ್ನ ಬೆಂಡೆಗೊಜ್ಜು ಮಾಡಿ ತಂದಿದ್ದೆವು. ಬಸ್ಸಿನಲ್ಲಿ ಕೂತು ತಿಂದು, ೯.೩೦ಗೆ ಅಲ್ಲಿಂದ ಹೊರಟೆವು.

dscn1174

 

dscn1157

ಪೈಲೆಟ್ ಬಾಬಾ ಆಶ್ರಮ
ಗಂಗೋತ್ರಿಯೆಡೆಗಿನ ದಾರಿಯಲ್ಲಿ ಮುಂದೆ ಹೋಗುತ್ತ, ಪೈಲೆಟ್ ಬಾಬಾ ಆಶ್ರಮ ನೋಡಿದೆವು. ಸಿಮೆಂಟಿನಲ್ಲಿ ತಯಾರಿಸಿದ ಹತ್ತಾರು ಪ್ರತಿಮೆಗಳನ್ನು ಅಲ್ಲಲ್ಲಿ ಪ್ರತಿಷ್ಠಾಪಿಸಿದ್ದಾರೆ. ಶಿವನ ಬೃಹತ್ ಪ್ರತಿಮೆಯಿದೆ. ನದಿ ತೀರದಲ್ಲಿ ಆಶ್ರಮ ಬಲು ವಿಸ್ತಾರವಾಗಿದೆ. ಸಾಕಷ್ಟು ಖರ್ಚು ಮಾಡಿದ್ದಾರೆ. ನೋಡುವಾಗ ಯಾಕಾಗಿ ಇಂಥ ದುಂದುವೆಚ್ಚ ಮಾಡುತ್ತಾರಪ್ಪ ಎನಿಸುತ್ತದೆ. ನಾವು ಅಡ್ಡಾಡುವಾಗ ಅಲ್ಲಿ ನರಮನುಷ್ಯರಿರಲಿಲ್ಲ.

img_4728img_4727

ಜಲಪಾತ

ದಾರಿಯಲ್ಲಿ ಮುಂದೆ ಸಾಗುತ್ತಿರುವಾಗ ರಸ್ತೆಬದಿ ಬಲು ಸುಂದರ ಜಲಪಾತ ಎದುರಾಯಿತು. ಎಲ್ಲರೂ ಇಲ್ಲಿ ನಿಲ್ಲಿಸಿ ಎಂದು ಬೊಬ್ಬೆ ಹೊಡೆದರು. ಮಂಗಾರಾಮರೂ ಬಸ್ ನಿಲ್ಲಿಸಿದರು. ಬಸ್ ನಿಂತದ್ದೇ ಎಲ್ಲ ನೀರಿನೆಡೆ ಧಾವಿಸಿದರು. ಕೆಲವರು ನೀರಿನಾಡಿಗೆ ತಲೆಕೊಟ್ಟು ಆನಂದ ಅನುಭವಿಸಿದರು. ಮತ್ತೆ ದಿರಿಸು ಒದ್ದೆಯಾಗಿ ಕಷ್ಟ ಅನುಭವಿಸಿದರು. ಗಂಡಸರು ಹೋಗಿ ನೀರಿನಲ್ಲಿ ಸ್ನಾನ ಮಾಡಿದರು. ಮಂಗಾರಾಮ, ಸೋನು ಕೂಡ ಚೆನ್ನಾಗಿ ಸ್ನಾನ ಮಾಡಿದರು. ನಾವು ಕೆಲವರು ರಸ್ತೆಯಲ್ಲಿ ಹರಿಯುವ ನೀರಿಗೆ ಕಾಲಾಡಿಸಿ ಫೋಟೋ ತೆಗೆಯುತ್ತ ಖುಷಿ ಅನುಭವಿಸಿದೆವು.  ಸರಸ್ವತಿ, ಸೋಮಶೇಖರ್ ದಂಪತಿಗಳು ನಿನಗೆ ನಾನು ನನಗೆ ನೀನು, ಬಿಡಲಾರೆ ಂದೂ ನಿನ್ನ ಕೈ ಎಂದು ಹಾಡುತ್ತ ನೀರಲ್ಲಿ ಕೈ ಕೈ ಹಿಡಿದು ನಡೆದರು!

dscn1187

dscn1188

ಪರಾಶರ ದೇವಾಲಯ
ನೈನ್‌ಗಂಗಾ ಎಂಬಲ್ಲಿ ಪರಾಶರ ದೇವಾಲಯ ನೋಡಿದೆವು. ಸುಮಾರು ಮೆಟ್ಟಲು ಹತ್ತಬೇಕು. ಅಲ್ಲಿ ಬಿಸಿನೀರಿನಕುಂಡ ಇದೆ. ನೀರು ಅತ್ಯಂತ ಬಿಸಿಯಾಗಿತ್ತು. ಸ್ನಾನ ಮಾಡಲು ಸಾಧ್ಯವಿಲ್ಲ.

ಅದಾಗಲೇ ಗಂಟೆ ೩.೪೫ ಆಗಿತ್ತು. ಮಧ್ಯಾಹ್ನದ ಊಟಕ್ಕೆ ನಿಲ್ಲಿಸಲಿಲ್ಲವೆಂದು ಕೆಲವರಿಗೆ ಅಸಮಾಧಾನವಗಿತ್ತು. ಆದರೆ ವಿಠಲರಾಜು ಅವರ ಗುರಿ ಇದ್ದುದು ರಾತ್ರೆಯೊಳಗೆ ಗಂಗೋತ್ರಿ ತಲಪಬೇಕೆಂಬುದಾಗಿ. ಊಟಕ್ಕೆ ನಿಲ್ಲಿಸಿದರೆ ಹೊತ್ತು ಸರಿಯುವುದು ಗೊತ್ತಾಗುವುದಿಲ್ಲ. ಕಡಿಮೆ ಎಂದರೂ ಅರ್ಧ ಗಂಟೆ ವ್ಯರ್ಥವಾಗುತ್ತದೆ. ಅಸಮಧಾನಗೊಂಡವರೆಲ್ಲ ಅವರ ಉದ್ದೇಶವನ್ನು ತಡವಾಗಿ ಅರ್ಥಮಾಡಿಕೊಂಡರು. ಉದರದ ಉರಿಗೆ ಗೊಜ್ಜವಲಕ್ಕಿ, ರಾಗಿಹುರಿಹಿಟ್ಟು, ಬೆಳಗ್ಗೆಯ ಉಪ್ಪಿಟ್ಟು ಹಂಚಿ ಶಮನಗೊಳಿಸಿದರು!

ಭೈರವ ಮಂದಿರ
ಗಂಗೋತ್ರಿ ಪ್ರವೇಶಕ್ಕೆ ಮೊದಲು ಭೈರವ ಮಂದಿರ ಸಿಗುತ್ತದೆ. ಗಂಗೋತ್ರಿಗೆ ಕಾಲಿಡುವ ಮೊದಲು ಭೈರವನ ದರ್ಶನ ಮಾಡಿಯೇ ಮುಂದುವರಿಯಬೇಕೆಂಬುದು ಪ್ರತೀತಿಯಂತೆ. ಸಂಜೆ ಆರು ಗಂಟೆಗೆ ದೇವಾಲಯ ನೋಡಿ ಪ್ರದಕ್ಷಿಣೆ ಹಾಕಿದೆವು.

img_4796img_4794

ಗಂಗೋತ್ರಿ ದೇವಾಲಯಕ್ಕೆ ಭೇಟಿ
ಗಂಗೋತ್ರಿ ತಲಪಿ ವಸತಿಗೃಹದಲ್ಲಿ ಲಗೇಜು ಇಟ್ಟು ಸ್ವೆಟರ್ ತೊಟ್ಟೆವು. ಶೀತಲಗಾಳಿ ಕೊರೆಯುತ್ತಿತ್ತು. ಸಮುದ್ರಮಟ್ಟದಿಂದ ಗಂಗೋತ್ರಿ ೧೦೩೫೫ ಅಡಿ ಎತ್ತರದಲ್ಲಿದೆ. ಯಮುನೋತ್ರಿಯಿಂದ ಗಂಗೋತ್ರಿಗೆ ೨೨೮ಕಿಮೀ ಇದೆ. ಅತ್ಯಂತ ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ ಗಂಗೋತ್ರಿಯು ಸೇರಿದೆ. ಉತ್ತರಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿ ಇರುವ ಈ ದೇವಾಲಯ  ಹಿಮಾಲಯ ಪರ್ವತ ಶ್ರೇಣಿಗಳ ನಡುವೆ ಇದೆ. ಗಂಗೋತ್ರಿ ಕ್ಷೇತ್ರವು ಹಿಂದೂ ಧರ್ಮದವರ ಪಾಲಿಗೆ ಅತಿ ಮಹತ್ವ ಪಡೆದಿರುವ ಸ್ಥಳವಾಗಿದೆ. ಗಂಗಾನದಿಯ ಉಗಮ ಸ್ಥಳವೂ ಹೌದು.  ೧೮ನೆಯ ಶತಮಾನದಲ್ಲಿ ಗಂಗೆಯ ಈ ದೇವಾಲಯವನ್ನು ಗೋರ್ಖಾ ಜನರಲ್ ಆಗಿದ್ದ ಅಮರ ಸಿಂಗ್ ಥಾಪಾ ಎಂಬವರು ಕಟ್ಟಿಸಿದ್ದಾರೆ.

ರಾತ್ರಿಯಲ್ಲಿ ದೇವಾಲಯದ ಸೊಬಗನ್ನು ನೋಡುವುದೇ ಆನಂದ. ದೇವಾಲಯದೊಳಗೆ ಹೋದೆವು. ಗಂಗಾ. ಜಮುನಾ, ಸರಸ್ವತಿ, ಲಕ್ಷ್ಮೀ, ಪಾರ್ವತಿ ದೇವಿಯರ ಪ್ರತಿಮೆಗಳಿವೆ. ಗಂಗಾರತಿ ನೋಡಬೇಕೆಂಬ ನಮ್ಮ ಆಸೆ ಈಡೇರಲಿಲ್ಲ. ಅದಾಗಲೇ ಆಗಿತ್ತು.

 

ಭಗೀರಥ ತಪವನ್ನಾಚರಿಸಿದ ಸ್ಥಳ
ನದಿಯ ಪಕ್ಕ ಭಗೀರಥ ತಪಸ್ಸು ಮಾಡಿದ ಸ್ಥಳ ಎಂದು ಅಲ್ಲಿ ಭಗೀರಥನ ಪ್ರತಿಮೆ ಇದೆ. ಅದನ್ನು ನೋಡಿ ನದಿ ದಡಕ್ಕೆ ಹೋಗಿ ಮೇಲೆ ಬಂದೆವು. ರಾತ್ರಿ ನೀರು ಹರಿಯುವುದನ್ನು ನೋಡುವುದೇ ಸೊಗಸು.

ಪುರಾಣದ ಪ್ರಕಾರ, ರಾಜ ಭಗಿರಥನ ಪೂರ್ವಜರ ಪಾಪಕರ್ಮಗಳನ್ನು ತೊಳೆಯಲು ಗಂಗಾ ಮಾತೆಯು ಇಲ್ಲಿ ಭಾಗಿರಥಿಯಾಗಿ ಹರಿದಿದೆ. ಶಿವನು ಗಂಗೆಯನ್ನು ತನ್ನ ಮುಡಿಯಲ್ಲಿ ಧರಿಸುವ ಮೂಲಕ ಭೂಮಿಯು ಜಲಪ್ರಳಯವಾಗುವುದರಿಂದ ಕಾಪಾಡಿದ ಎಂದು ನಂಬಲಾಗುತ್ತದೆ.

ಬಿಸಿಬಿಸಿ ಸೂಪು
ವಾಪಾಸು ವಸತಿಗೃಹಕ್ಕೆ ಬರುತ್ತ ದಾರಿಯಲ್ಲಿ ಖಾನಾವಳಿಯಲ್ಲಿ ನಾವು ಕೆಲವರು ಚಳಿ ಹೊಡೆದೋಡಿಸಲು ಬಿಸಿಸೂಪು (ರೂ.೭೦) ಕುಡಿದೆವು, ಹಾಗೂ ಚೌಮಿನ್ (ನೂಡಲ್ಸ್) ಒಂದು ಪ್ಲೇಟ್ ತೆಗೆದುಕೊಂಡು ಹಂಚಿಕೊಂಡು ತಿಂದೆವು. ಅಲ್ಲಿ ರಾತ್ರೆ ಅಡುಗೆ ಮಾಡುವುದಾ ಅಲ್ಲ ಹೊಟೇಲಿಗೆ ಹೋಗುವುದಾ ಊಟ ಹೇಗೆ ಎಂದು ಚರ್ಚೆಯಾಗಿತ್ತು. ಮಾಡುವುದು ಶಶಿಕಲಾ, ಸರಸ್ವತಿ. ಆದರೆ ಅವ್ರು ಪ್ರಯಾಣದ ಆಯಾಸದಿಂದ ಬಳಲಿರುತ್ತಾರೆ. ಇವತ್ತು ಹೊತೇಲಿನಲ್ಲೆ ಮಾಡೋಣ ಎಂದು ನಮ್ಮಂಥ ಆಲಸಿ ಬಿಸಿರಕ್ತದವರ ಅಭಿಪ್ರಾಯ! ಅವರು ಮಾಡುವುದು ನಾವು ತಿನ್ನುವುದು ಎಂಬ ಸಂಕೋಚ ಬಾಧಿಸುತ್ತಲೇ ಇತ್ತು. ಆದರೆ ಅವರು ನಮ್ಮ ಮಾತಿಗೆ ಸೊಪ್ಪು ಹಾಕದೆ ಅಡುಗೆ ತಯಾರಿಸುವುದೆಂದೇ ತೀರ್ಮಾನಿಸಿ ಚಿತ್ರಾನ್ನ ಮಾಡಿದರು. ನಾವು ನಾಲ್ಕೈದು ಮಂದಿ ಬಿಸಿರಕ್ತದವರು ಸಣ್ಣಪುಟ್ಟ ಸಹಾಯ ಮಾಡಿದೆವು. ಚಿತ್ರಾನ್ನ ತಿಂದು ಕೋಣೆಗೆ ಬಂದರೆ ಚಳಿರಾಯ ಮೊದಲೇ ಬಂದು ನಮ್ಮ ಹಾಸಿಗೆ, ರಜಾಯಿ ಎಲ್ಲವನ್ನೂ ತಣ್ಣಗೆ ಮಾಡಿಟ್ಟಿದ್ದ.

ಮಗದೊಮ್ಮೆ ಗಂಗೋತ್ರಿದೇವಿ ದರ್ಶನ

ಬೆಳಗ್ಗೆ (೧೬-೯-೨೦೧೬) ಅದೂವರೆಗೆ ಎದ್ದೆವು. ಥೇಪನ್ ಖಾಂಡ್ಯಾಲ್ ಬಿಸಿನೀರು ಕಾಯಿಸಿ ಕೋಣೆಗೇ ಬಾಲ್ದಿಯಲ್ಲಿ ತಂದು ಕೊಟ್ಟರು. ರೂ. ೫೦ ಕೊಟ್ಟರೂ ಒಳ್ಳೆಯ ಸ್ನಾನವಾಯಿತು. ಸವಿತ, ನಾನು, ಹೇಮಮಾಲ ಒಂದು ಕೋಣೆಯಲ್ಲಿದ್ದುದು. ಸ್ನಾನ ಮುಗಿಸಿ ದೇವಾಲಯಕ್ಕೆ ಹೋದೆವು. ದೇವಸ್ಥಾನಕ್ಕೆ ಸುತ್ತು ಬರುವಾಗ ಒಳಗೆ ಗೋಡೆಯಲ್ಲಿ ಭಕ್ತರ ಕೈತುರಿಕೆ ಜಾಸ್ತಿಯಾಗಿ ಗೋಡೆ ತುಂಬ ಗೀಚಿದ್ದು ಕಂಡು ಮನ ರೋಸಿ ಹೋಯಿತು. ಮನುಷ್ಯರು ಕೆಟ್ಟಚಾಳಿ ಎಲ್ಲಿ ಹೋದರೂ ಬಿಡುವುದಿಲ್ಲವಲ್ಲ ಎನಿಸಿತು.
ಗಂಗಾ ನದಿಯ ಮೂಲ ಅಥವಾ ಗೋಮುಖವು ಗಂಗೋತ್ರಿಯಿಂದ ೨೧ ಕಿ.ಮೀ. ದೂರದಲ್ಲಿದೆ. ಈ ಸಂಧಿ ತಾಣದಿಂದ ಮುಂದೆ ಗಂಗಾ ನದಿಯ ಉಗಮಸ್ಥಾನವೇ ಗೋಮುಖ. ಗಂಗೋತ್ರಿಯಿಂದ ಗೋಮುಖಕ್ಕೆ ಹೋಗಲು ದಾರಿ ಅತ್ಯಂತ ಕ್ಲಿಷ್ಟಕರವಾಗಿದೆ. ೨೧ಕಿಮೀ. ದೂರ ನಡೆಯಬೇಕು. ಬೆಟ್ಟ ಹತ್ತಬೇಕು. ನಾವು ಹೋಗಲಿಲ್ಲ.
ಭಾಗಿರಥಿ ನದಿಯ ಮೇಲ್ಭಾಗದಲ್ಲಿ ದಟ್ಟಾರಣ್ಯ ಆವರಿಸಿದೆ. ಈ ಪ್ರದೇಶದ ಭೂಮಿಯನ್ನು ಗಮನಿಸಿದಾಗ ಹಿಮಾಚ್ಛಾದಿತ ಬೆಟ್ಟಗಳು, ಉದ್ದನೆ ಶಿಖರಗಳು, ಆಳವಾದ ಕಣಿವೆ, ನೇರವಾಗಿ ಕಣ್ಣು ಹಾಯಿಸಿದಷ್ಟೂ ಕಾಣುವ ಕಣಿವೆ ಪ್ರದೇಶ ಗಮನ ಸೆಳೆಯುತ್ತವೆ.

ಗಂಗೋತ್ರಿಗೆ ವಿದಾಯ
ದೇವಾಲಯದಿಂದ ಹೊರಟು ಅಲ್ಲೇ ಹತ್ತಿರವಿದ್ದ ಕಾರ್ಯಾಲಯದಲ್ಲಿ ಬಯೋಮೆಟ್ರಿಕ್ ಕಾರ್ಡನ್ನು ತೋರಿಸಿ ಎಂಟ್ರಿ ಹಾಕಿಸಿ, ಹತ್ತಿರವಿದ್ದ ಖಾನಾವಳಿಯಲ್ಲಿ ಪರೋಟ ತಿಂದು ವಸತಿಗೃಹಕ್ಕೆ ಬಂದು ಗಂಟುಮೂಟೆ ಕಟ್ಟಿ ಬೆಳಗ್ಗೆ ೯.೫೦ಕ್ಕೆ ಬಸ್ ಹತ್ತಿದೆವು.  ದಾರಿಯಲ್ಲಿ ಅಲ್ಲಲ್ಲಿ ಸ್ಪೀಡ್ ಬ್ರೇಕರುಗಳು ಸಿಕ್ಕಿದುವು. ಆ ದೃಶ್ಯ ಮಾತ್ರ ನಯನ ಮನೋಹರವಾಗಿತ್ತು. ಅದೆಷ್ಟೊಂದು ಕುರಿಗಳು,  ಆಡುಗಳು ಶಿಸ್ತಿನಿಂದ ಸಾಲಾಗಿ ಹೋಗುತ್ತಿರುವುದನ್ನು ನೋಡಿದೆವು.

20160916_103313

 

20160916_103136

ಪ್ರಾಚೀನ ಕಲ್ಪ ಕೇದಾರ

ಗಂಗೋತ್ರಿಯಿಂದ ಕೇದಾರದೆಡೆಗೆ ಸಾಗುವಾಗ ದಾರಿಯಲ್ಲಿ ಪ್ರಾಚೀನ ಕಲ್ಪಕೇದಾರ ದೇವಾಲಯ ನೋಡಿದೆವು. ಸ್ಥಳೀಯರು ಅಲ್ಲಿ ದೇವರಿಗೆ ನೈವೇದ್ಯವೆಂದು ಸೇಬು ಇಟ್ಟಿದ್ದರು. ಪ್ರಸಾದವೆಂದು ನಾವು ಸೇಬು ತೆಗೆದು ತಿಂದೆವು!

img_4857

ಸೇಬಿನ ತೋಟ
ದೇವಾಲಯದ ಪಕ್ಕದಲ್ಲೂ ಸೇಬಿನ ತೋಟ ಇತ್ತು. ಹತ್ತಿರದಿಂದ ಸೇಬು ನೋಡಿ ತೃಪ್ತಿಪಟ್ಟೆವು. ದಾರಿಯುದ್ದಕ್ಕೂ ಸೇಬಿನ ತೋಟಗಳು ನಮ್ಮ ಗಮನ ಸೆಳೆದುವು. ಅಬ್ಬ ಒಂದೊಂದು ಮರದಲ್ಲೂ ಸೇಬಿನ ರಾಶಿಗಳು. ಕೆಲವು ಮರಗಳಲ್ಲಿ ಎಲೆಯೇ ಇಲ್ಲ. ಕೆಂಪು ಸೇಬುಗಳೇ ತುಂಬಿ ಮರವೇ ಕಾಣುತ್ತಿರಲಿಲ್ಲ. ಆಹಾ ಇಂಥ ಒಂದು ಮರ ನಮ್ಮ ಹಿತ್ತಲಲ್ಲಿದ್ದರೆ ಸಾಕು ಎಂಬ ಭಾವ ಆ ಕ್ಷಣ ಅನಿಸಿತ್ತು! ರೂ. ೫೦ಕ್ಕೆ ಸೇಬು ಕೊಂಡು ಮನದಣಿಯೆ ತಿಂದೆವು.

img_4782dscn8636

ಉತ್ತರಕಾಶಿ
ಉತ್ತರಕಾಶಿಯಲ್ಲಿ ವಿಶ್ವನಾಥ ದೇವಾಲಯ ನೋಡಿದೆವು. ದೊಡ್ಡ ತ್ರಿಶೂಲವೂ ಇತ್ತು. ಉತ್ತರಾಖಂಡದಲ್ಲಿರುವ ಹೆಚ್ಚಿನ ದೇವಾಲಯವೂ ಗಡ್ವಾಲ್ ಶೈಲಿಯವು. ಭಾಗೀರಥೀ ನದಿಯ ಎಡದಂಡೆಯಮೇಲೆ ದೊಡ್ಡದಾದ ವಿದ್ಯುತ್ ಉತ್ಪಾದನಾ ಕೇಂದ್ರವಿದೆ. ಅಲ್ಲಿ ನೀರು ಜಲಪಾತದಂತೆ ಹರಿಯುವುದನ್ನು ನೋಡಿದೆವು.
ಅಲ್ಲಿ ಹೊಟೇಲಲ್ಲಿ ಚಪಾತಿ ತಿಂದು ೨.೪೫ಕ್ಕೆ ಹೊರಟೆವು.

img_4916

ಚೌರಂಗಿನಾಥ ಮಂದಿರ
ಮುಂದೆ ಸಾಗುತ್ತ ಚೈರಂಗಿಕಾಲ್ ಊರಿಗೆ ಸಂಜೆ ನಾಲ್ಕು ಗಂಟೆಗೆ ತಲಪಿದೆವು. ಅಲ್ಲಿ ಚೌರಂಗಿನಾಥ ಮಂದಿರವಿದೆ. ಒಂದೇ ಬಾಣದಲ್ಲಿ ಮೂರು ರಕ್ಕಸರನ್ನು ಕೊಂದದ್ದಂತೆ ಚೌರಂಗಿನಾಥ. ಅಲ್ಲಿ ದೇವಾಲಯ ನೋಡಿ ಮುಂದೆ ಹೋಗುವಾಗ ದಾರಿಯಲ್ಲಿ ರಸ್ತೆಯಲ್ಲಿ ಜೆ.ಸಿಬಿ ಲಾರಿ ಕೆಲಸ ಮಾಡುತ್ತಿತ್ತು. ರಸ್ತೆಗೆ ಬಿದ್ದಿದ್ದ ಕಲ್ಲುಬಂಡೆಗಳನ್ನು ತೆರವುಗೊಳಿಸುತ್ತಿತ್ತು. ಹಾಗೆ ಅರ್ಧ ಗಂಟೆ ದಾರಿಬದಿ ಕಾಯಬೇಕಾಯಿತು.

 

img_4890

ಚಮಿಯಾಲ
ರಾತ್ರೆ ೭.೩೦ಗೆ ಚಮಿಯಾಲದಲ್ಲಿ ಹಿಮ ಆನಂದ ಎಂಬ ವಸತಿಗೃಹದಲ್ಲಿ ನಮ್ಮ ವಾಸ್ತವ್ಯ. ಅಲ್ಲೆ ಹೋಟೇಲಲ್ಲಿ ಚಪಾತಿ, ಅನ್ನ ಸಾರು ಊಟ. ರೂ. ೩೦ ಕೊಟ್ಟು ಬಿಸಿನೀರು ಸ್ನಾನ ಮಾಡಿದೆ. ತಣ್ಣೀರು ಸ್ನಾನ ಮಾಡಿ ಸಾಕಾಗಿತ್ತು!

ವ್ಯಾಸ ಮಂದಿರ
ಚಮಿಯಾಲದಿಂದ ೧೭-೯-೨೦೧೬ರಂದು ಬೆಳಗ್ಗೆ ೫.೩೦ಗೆ ಹೊರಟೆವು. ಹಿಂದಿನ ದಿನವೇ ಇಂತಿಷ್ಟು ಗಂಟೆಗೆ ಹೊರಡಬೇಕೆಂದು ವಿಠಲರಾಜು ಹೇಳುತ್ತಿದ್ದರು. ಅವರು ಹೇಳಿದ ಸಮಯಕ್ಕೆ ಸರಿಯಾಗಿ ಎಲ್ಲರೂ ಹೊರಟು ಬಸ್ ಹತ್ತುತ್ತಿದ್ದೆವು. ನಮ್ಮ ತಂಡದ ಎಲ್ಲರೂ ಅಷ್ಟು ಶಿಸ್ತು ಪಾಲಿಸುತ್ತಿದ್ದೆವು. ವ್ಯಾಸಮಂದಿರ ನೋಡಿದೆವು. ವ್ಯಾಸಮಂದಿರದಲ್ಲಿ ಶಿವನ ದೇವಾಲಯ ಪುಟ್ಟದಾಗಿ ಚೆನ್ನಾಗಿದೆ. ಎದುರುಭಾಗದಲ್ಲಿ ಎತ್ತರಕ್ಕೆ ಕಲ್ಲಿನಚಪ್ಪಡಿ ಒಂದರಮೇಲೊಂದು ಪೇರಿಸಿ ನಿಲ್ಲಿಸಿದ್ದಾರೆ. ಅದು ಏಕೆಂದು ತಿಳಿಯಲಿಲ್ಲ.

img_4920img_4918

ಅಗಸ್ತ್ಯಮುನಿಮಂದಿರ

೯.೩೦ಗೆ ಅಗಸ್ತ್ಯಮುನಿ ಮಂದಿರಕ್ಕೆ ಹೋದೆವು.  ಅಗಸ್ತ್ಯರು ತಪಸ್ಸು ಮಾಡಿದ ಈ ಸ್ಥಳದಲ್ಲಿ ಪ್ರಾಚೀನವಾದ ಅಗಸ್ತ್ಯೇಶ್ವರ ಮಹಾದೇವ ದೇವಸ್ಥಾನವಿದೆ.

ಬೀಡಿನಾಥ ಯಾನೆ ಮಂಗಾರಾಮ
ನಮ್ಮ ಸಾರಥಿ ಬಲುಚೆನ್ನಾಗಿ ಬಸ್ ಚಾಲನೆ ಮಾಡುತ್ತಿದ್ದರು. ಎಲ್ಲೂ ವೇಗವಾಗಿ ಚಲಿಸದೆ ಅಷ್ಟೂ ಎಚ್ಚರದಿಂದಲೇ ಬಸ್ ಚಲಾಯಿಸಿದ್ದರು. ಆದರೆ ಒಂದೇ ಒಂದು ಕೆಟ್ಟಚಟದ ತೊಂದರೆ ಅಂದರೆ ಬೀಡಿ ಸೇದುವುದು. ಬಸ್ ಚಲಾಯಿಸಿಕೊಂಡೇ ಬೀಡಿ ಸೇದುತ್ತಿದ್ದರು. ಒಂದಾದಮೇಲೊಂದು ಬೀಡಿ. ಚೈನ್ ಸ್ಮೋಕರ್ ಅನ್ನುತ್ತಾರಲ್ಲ ಹಾಗೆ. ಧೂಮವೆಲ್ಲ ಹೊರಗೆ ಬಿಡುತ್ತಿದ್ದರು. ಆ ಧೂಮವನ್ನೆಲ್ಲ ನಾವು ಪಾನ ಮಾಡಬೇಕಾಗಿ ಬರುತ್ತಿದ್ದುದು ವಿಪರ್ಯಾಸವೇ ಸರಿ. ಅಬ್ಬ ಅಸಾಧ್ಯ ವಾಸನೆ. ಮೂಗು ಮುಚ್ಚಿಕೊಳ್ಳುತ್ತ ಅಯ್ಯೋ ಬೀಡಿನಾಥ ಎಂದು ಬೊಬ್ಬೆ ಹೊಡೆಯುತ್ತಿದ್ದೆವು. ಅದನ್ನು ಕಂಡು ಸೋನು (ಬಸ್ ಸಹಾಯಕ)ಗೆ ನಗುವೋ ನಗು. ಕೆಲವೆಡೆ ಸೋನು ಬೀಡಿಗೆ ಬೆಂಕಿ ಹಚ್ಚಿ ಕೊಡುತ್ತಿದ್ದುದು ಕಾಣುತ್ತಿತ್ತು. ಮಂಗಾರಾಮ ಎಂಬ ಹೆಸರನ್ನು ಕಿತ್ತಾಕಿ ಬೀಡಿನಾಥ ಎಂದು ಹೆಸರಿಟ್ಟಿದ್ದೆವು. ಬೀಡಿ ಸೇದಬೇಡಿ ಎನ್ನಲೂ ಭಯ. ಬೀಡಿ ಸೇದದೆ ಮನಸ್ಸು ಚಂಚಲಗೊಂಡು ಬೇರೆಡೆ ಹೋಗಿ ಬಸ್ ಪ್ರಪಾತಕ್ಕೆ ಇಳಿಸಿದರೆ ಎಂದು ವಾಸನೆ ತಡೆದು ಬಾಯಿಮುಚ್ಚಿ, ಮೂಗು ಮುಚ್ಚಿ ಕೂತಿದ್ದೆ! ನಾವು ಒಂದು ಬೀಡಿ ಕಾರ್ಖಾನೆ ತೆರೆದು ಮಂಗಾರಾಮನಿಗೆ ವಿತರಿಸಿದರೆ ಹೇಗೆ? ಅಷ್ಟು ಬೀಡಿ ಅವರೊಬ್ಬರಿಗೇ ಬೇಕು ಎಂದು ನಾನೂ ಪೂರ್ಣಿಮಳೂ ವಿಚಾರವಿನಿಮಯ ನಡೆಸಿದೆವು! ವಿರಾಮದಲ್ಲಿ ತಡೆಯಲಾರದೆ ಮಂಗಾರಾಮನಿಗೆ ಕೇಳಿದೆ. ‘ಹೀಗೊಂದು ಬೀಡಿ ಸೇದುತ್ತೀರಲ್ಲ. ಆರೋಗ್ಯ ಹಾಳಾಗುವುದಿಲ್ಲವೆ?’ ಅದಕ್ಕೆ ಮಂಗಾರಾಮ. ‘‘ಬೇರೆ ಯಾವ ಕೆಟ್ಟ ಚಾಳಿಯೂ ಇಲ್ಲ. ಸಣ್ಣ ವಯಸ್ಸಿನಿಂದಲೇ ಸೇದಲು ಪ್ರಾರಂಭಿಸಿದೆ. ಈಗ ನನಗೆ ೫೦ ವರ್ಷ. ಏನಾಗಿಲ್ಲ. ಸೇದದೆ ಇದ್ದರೆ ಬಸ್ ಚಾಲನೆ ಸಾಧ್ಯವಾಗುವುದಿಲ್ಲ. ಮೊದಲು ಸಣ್ಣ ಬೀಡಿ ಜಾಸ್ತಿ ಸೇದುತ್ತಿದ್ದೆ. ಈಗ ಸ್ವಲ್ಪ ದೊಡ್ಡ ಬೀಡಿ. ದಿನಕ್ಕೆ ಬರೀ ೨೫ ಮಾತ್ರ ಸೇದುವುದು” ಎಂದರು! ಪುಣ್ಯಕ್ಕೆ ಹದಿನಾರು ವರ್ಷದ ಸೋನು ಬೀಡಿ ಸೇದಲು ಕಲಿತಿಲ್ಲ. ಬಹುಶಃ ಅದರ ಹೊಗೆ ಪಾನವೇ ಅವನಿಗೆ ಸಾಕಾಗುತ್ತಿರಬಹುದೇನೋ.

ಬಸ್ ಚಾಲಕ ಮಂಗಾರಾಮನಿಗೆ ಇನಾಮಾಗಿ ತಂಡದ ವತಿಯಿಂದ ರೂ.೨೦೦೦, ಹಾಗೂ ಸಹಾಯಕ ಸೋನುಗೆ ರೂ. ೫೦೦ ಕೊಡುವುದು ಎಂದು ತೀರ್ಮಾನವಾಗಿತ್ತು. ರೂ. ಬದಲು ಬೀಡಿ ಸಿಗರೇಟನ್ನೇ ಕೊಟ್ಟರೆ ಹೇಗೆ ಎಂದೂ ನಾವು ತಮಾಷೆಯಾಗಿ ಮಾತಾಡಿಕೊಂಡೆವು. ಈ ಚಟಗಳೆಲ್ಲ ಒಮ್ಮೆ ಅಭ್ಯಾಸವಾದರೆ ಬಿಡುವುದು ಕಷ್ಟ. ಉದಾಹರಣೆಗೆ ನಮಗೆಲ್ಲ ಚಾರಣ ಚಟವಾಗಿ ಅಂಟಿದೆ. ಅದನ್ನು ಬಿಡಲಾಗುತ್ತಿಲ್ಲವಲ್ಲ ಹಾಗೆ ಎಂದು ಭಾವಿಸಿದೆ! ನಮ್ಮ ಚಟ ಒಳ್ಳೆಯ ಚಟ ಎಂಬುದು ಸಮಾಧಾನ ತರುವ ವಿಷಯ!

ದಾರಿಯುದ್ದಕ್ಕೂ ಒಮ್ಮೆ ಗುಡ್ಡ ಏರಿದರೆ ಮತ್ತೊಮ್ಮೆ ಇಳಿಯುತ್ತೇವೆ. ಒಂದು ಪರ್ವತ ಏರಿ ಇನ್ನೊಂದು ಪರ್ವತ ಇಳಿದು, ಸೇತುವೆ ದಾಟಿ ಇನ್ನೊಂದು ಭಾಗಕ್ಕೆ ಹೋಗುತ್ತಿರುತ್ತೇವೆ.  ರಸ್ತೆ ಬಲು ಕಿರಿದಾಗಿಯೇ ಸಾಗುತ್ತದೆ. ಅಲ್ಲಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಲೇ ಇರುವುದನ್ನು ಕಾಣುತ್ತೇವೆ. ಕೆಲವೆಡೆ ಗುಡ್ಡ ಜರಿದು ಕಲ್ಲುಬಂಡೆಗಳು ರಸ್ತೆಗೆ ಬೀಳುತ್ತಿರುತ್ತವೆ. ರಸ್ತೆ ಅಂಚಿನಲ್ಲಿ ಕೆಳಗೆ ನದಿ ಹರಿಯುತ್ತದೆ. ಅಂತ ಸ್ಥಳಗಳಲ್ಲಿ ಅಲ್ಲಲ್ಲಿ ರಸ್ತೆ ಜರಿದು ಕಿರಿದಾಗಿರುವುದು ಕಾಣುತ್ತದೆ. ಅಲ್ಲೆಲ್ಲ ರಿಪೇರಿ ಕೆಲಸ ನಡೆಯುತ್ತಿರುತ್ತದೆ. ಅಂಥ ಸ್ಥಳಗಳಲ್ಲಿ ಬಸ್ ಚಲಿಸುತ್ತಿರುವಾಗ ಹೊರಗೆ ಇಣುಕಿದರೆ ಜೀವ ಬಾಯಿಗೆ ಬರುವಂಥ ಅನುಭವವಾಗಿ ಒಂದುಕ್ಷಣ ಕಣ್ಣುಮುಚ್ಚುವಂತೆ ಪ್ರೇರೇಪಿಸುತ್ತದೆ. ಅಂಥ ಕಡೆ ಚಾಲಕರು ಎಷ್ಟು ಎಚ್ಚರದಿಂದ ಇದ್ದರೂ ಸಾಲದು. ಒಂದು ಸಲವಂತೂ ಪ್ರಪಾತದ ಅಂಚಿನಲ್ಲಿ ಬಸ್ ಕೂದಲೆಳೆಯ ಅಂತರದಲ್ಲಿ ಸಾಗಿದಾಗ ಅಬ್ಬಾ ಎಂಬ ಉದ್ಘಾರ ತೆಗೆದಿದ್ದೆ. ಇಂಥ ರಸ್ತೆಗಳಲ್ಲಿ ವಾಹನ ಚಲಾಯಿಸುವ ಚಾಲಕರನ್ನು ಎಷ್ಟು ಹೊಗಳಿದರೂ ಸಾಲದು.

img_4928

img_4930

………ಮುಂದುವರಿಯುವುದು

ಈ ಪ್ರವಾಸಕಥನದ ಹಿಂದಿನ ಭಾಗಗಳು ಇಲ್ಲಿವೆ :  ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 4

 

 – ರುಕ್ಮಿಣಿಮಾಲಾ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: