ತುಲನೆಯಿಲ್ಲದ ತುಲಸಿಮಾತೆ…
ಮಾನವನಿಗೆ ಆಹಾರದೊಂದಿಗೆ ಆರೋಗ್ಯವೂ ಮುಖ್ಯ. ಆಹಾರ, ಆರೋಗ್ಯ ಹದವಾಗಿದ್ದಾತ ಆಯುರಾರೋಗ್ಯದಿಂದಿರಬಲ್ಲ. ಹೀಗೆ ಆರೋಗ್ಯ, ಆಯುಸ್ಸು ಗಟ್ಯಾಗಿರಬೇಕಾದರೆ, ದೇವರ ಅನುಗ್ರಹವೂ ಅಗತ್ಯ. ನಮ್ಮ ವಾತಾವರಣ ಶುದ್ಧವಾಗಿರಬೇಕು, ನಾವು ಸೇವಿಸುವ ಗಾಳಿ, ನೀರು, ಪಾನೀಯ, ಎಲ್ಲವೂ ಮಾಲಿನ್ಯ ರಹಿತವಾಗಿರಬೇಕು, ಮಾಟ, ಮಾಯ, ಮಂತ್ರ ಮೊದಲಾದ ಕ್ಷುದ್ರ ಶಕ್ತಿಗಳು ನಮ್ಮ ಮೇಲೆ ಎರಗದಂತೆ ನಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು.. ಇದೆಲ್ಲ ಹೇಗೆ ಸಾಧ್ಯ? ಸಾಧ್ಯವಿದೆ. ನಮ್ಮ ಆಹಾರದ ಹೊಣೆಯನ್ನು ಅನ್ನಪೂರ್ಣೆ ಹೊರಬಲ್ಲವಳಾದರೆ ಮಿಕ್ಕೆಲ್ಲ ಜವಾಬ್ದಾರಿಗಳನ್ನು ತುಲಸಿಮಾತೆ ತುಂಬಿಸಬಲ್ಲಳು ಎಂದರೆ ಅಚ್ಹರಿಯಾಗುವುದಿಲ್ಲವೇ?! ಹೌದು . ತುಳಸೀಮಾತೆಯ ಸಂಪೂರ್ಣ ಸಹಕಾರವಿದ್ದರೆ ನಮಗೆ ಯಾತರ ಭಯವೂ ಇಲ್ಲ.ಸೇವೆ ಮಾಡಿದವರನ್ನು ಕಟ್ಟೆಚ್ಹರದಿಂದ ಕಾಯುವಳು ತುಳಸಿಯಮ್ಮ. ಪರಿಸರ ಶುದ್ಧ ಮಾಡುವಳು, ಜಲಶುದ್ಧ ಮಾಡುವಳು, ಯಾರ ಬಳಿ ಇರುವಳೋ ಅವರ ಸನಿಹ ವಾಮಾಚಾರ ಸುಳಿಯದಂತೆ ಕಟ್ಟೆಚ್ಹರ ವಹಿಸುವಳು! ಅಬ್ಬ…ಬ್ಬ! ಎಷ್ಟು ಶಕ್ತಿ!! ನಮ್ಮ ತುಲಸಿ ಮಾತೆಗೆ!!!
ಜಲಂಧರನೆಂಬ ರಾಕ್ಷಸನಿದ್ದ. ಅವನ ಧರ್ಮ ಪತ್ನಿ ವೃಂದೆ. ಅವರಿಬ್ಬರೂ ತಪಸ್ಸು ಮಾಡಿ ವಿಷ್ಣುವನ್ನು ಒಲಿಸಿಕೊಂಡು ಲಕ್ಷ್ಮೀನಾರಾಯಣರು ಸದಾಕಾಲ ತಮ್ಮ ಮನೆಯಲ್ಲೇ ಉಳಿಯುವಂತೆ ವರ ಪಡೆದರು. ಜಲಂಧರನು ದೇವತೆಗಳನ್ನು ಪೀಡಿಸಲು ಪ್ರಾರಂಭಿಸಲು ವಿಷ್ಣುವು ಉಪಾಯದಿಂದ ಅವನನ್ನು ಸಂಹರಿಸಿದನು. ಇದರಿಂದ ಅವನ ಪತ್ನಿ ಕೋಪಾವಿಷ್ಟಳಾಗಿ ಲಕ್ಷ್ಮಿಗೆ ದೂರು ನೀಡಿದಳು. ಆಗ ಲಕ್ಷ್ಮಿಯು ವೃಂದೆಗೆ ತಾನು ತುಳಸೀ ಗಿಡವಾಗಿಯೂ ವೃಂದೆಯು ತುಳಸಿಕಟ್ಟೆ ಯಾಗಿಯೂ ಎಲ್ಲರ ಮನೆ ಮುಂದೆ ಶೋಭಿಸಲಿ .ತಮ್ಮನ್ನು ಪೂಜಿಸುವವರು ಮೃತ್ಯುವಿನಿಂದ ಪಾರಾಗುವರು ಎಂದು ಅಭಯ ನೀಡುತ್ತಾಳೆ. ಅಂದಿನಿಂದ ಎಲ್ಲ ಹಿಂದುಗಳೂ ಮನೆ ಮುಂದೆ ತುಳಸೀಕಟ್ಟೆ ಕಟ್ಟಿ ಪೂಜಿಸುವ ಸಂಪ್ರದಾಯ ಬಂತು.ಎಂಬ ಕತೆ ಒಂದಾದರೆ, ಇನ್ನೊಂದು ಕಥಾನಕದ ಪ್ರಕಾರ ತುಳಸಿಯು ಲಕ್ಶ್ಮಿಯ ಅಂಶದಿಂದ ಹುಟ್ಟಿದವಳು. ವಿಷ್ಣುವು ಪತಿಯಾಗಬೇಕೆಂದು ಬ್ರಹ್ಮನಿಂದ ವರವನ್ನು ಬೇಡಿದ್ದಳು. ಬ್ರಹ್ಮನು , “ನೀನು ತುಲಸಿ ಗಿಡವಾಗಿ ವಿಷ್ಣುವಿನ ಸಾನ್ನಿಧ್ಯ ಪಡೆಯುವೆ” ಎಂದಿದ್ದನು. ಮುಂದೆ ಈಕೆ ನಾರದರ ಸೂಚನೆಯಂತೆ ಶಂಖಚೂಡನೆಂಬವನೊಡನೆ ವಿವಾಹ ಮಾಡಿಕೊಂಡಳು. ಶಂಖಚೂಡನು ದೇವತೆಗಳೊಡನೆ ಹೋರಾಡಿ ಮಡಿದನು. ಆಗವಿಷ್ಣುವು ತುಳಸಿಯ ಮುಂದೆ ಬಂದು ನಿಲ್ಲಲು ಬ್ರಹ್ಮನ ವರದಂತೆ ಆಕೆ ಗಿಡವಾದಳು. ತುಳಸಿಯು ಸ್ತ್ರೀಯರ ಗೆಳತಿ. ಆಕೆ ವಿಷೇಶವಾಗಿ ಸ್ತ್ರೀಯರಿಗೆ ಒಲಿಯುತ್ತಾಳೆ ಎಂಬುದು ಪ್ರಾಜ್ನರ ಮಾತು. ತುಳಸೀಮಾತೆಯ ಸೇವೆಮಾಡಿದರೆ ಕನ್ಯೆಯರಿಗೆ ವಿವಾಹ ಯೋಗ ಒದಗಿಬರುತ್ತದೆ, ಮುತ್ತೈದೆಯರು ಪೂಜಿಸಿದರೆ ದೀರ್ಘ ಸುಮಂಗಲಿಯರಾಗುತ್ತಾರೆ, ಪುರುಷರು ಉಪಾಸನೆ ಮಾಡಿದರೆ, ಅಶ್ವಮೇಧ ಯಾಗ ಮಾಡಿದ ಫಲ ಬರುತ್ತದೆ. ಹೀಗೆ ಅವರವರ ಅಭೀಷ್ಟದಂತೆ ಸ್ತುತಿಸಿ ಕೃತಾರ್ಥರಾಗಬಹುದು. ತುಳಸೀಪೂಜೆಯಿಂದ ವೇದಪಾರಾಯಣದ ಫಲ ಬರುತ್ತದೆ ಎಂಸು ಶಾಸ್ತ್ರಗಳು ಹೇಳುತ್ತವೆ. ವಿಷ್ಣುವಲ್ಲಭೆಯಾದ ತುಳಸಿಯಿಲ್ಲದೆ ವಿಷ್ಣುಪೂಜೆ ಸಂಪೂರ್ಣವಾಗದು. ಕೃಷ್ಣನಿಗೆ ತುಲಸೀಹಾರವೆಂದರೆ ಅತ್ಯಂತ ಪ್ರಿಯ. ದಾನ, ದಕ್ಷಿಣೆ ನೀಡುವಾಗ ತುಳಸೀದ ಳದೊಂದಿಗೆ ಗಂಗಾಜಲವನ್ನೂ ಬಿಟ್ಟು ದಾನ ಮಾಡುವುದು ಫಲಪ್ರದ.
ಉತ್ಹಾನದ್ವಾದಶಿಯಂದು ತುಳಸೀ ದೇವಿಯ ಮದುವೆ. ಅಂದು ನಿರ್ಮಲ ಚಿತ್ತರಾಗಿ ತುಳಸಿಗೆ ಪೂಜೆಮಾಡಿದವರಿಗೆ ಉತ್ತಮ ಭಾಗ್ಯ ದೊರಕುವುದೆಂಬ ನಂಬಿಕೆ. ಅಂದು ತುಲಸಿಯೊಂದಿಗೆ ಬೆಟ್ಟದ ನೆಲ್ಲಿಕಾಯಿ ಮರದ ಟೊಂಗೆಯನ್ನೂ ನೆಟ್ಟು ಪೂಜಿಸಿದ ಮೇಲೆಯೇ ನೆಲ್ಲಿಕಾಯಿ ತಿನ್ನಬೇಕೆಂಬ ಸಂಪ್ರದಾಯವಿದೆ. ಆ ತನಕ ನೆಲ್ಲಿಕಾಯಿಗೆ ಒಂದು ಪುರುಡು ಇದೆಯಾದ್ದರಿಂದ ಆರೋಗ್ಯ ದೃಷ್ಟಿಯಿಂದಲೂ ಈ ಕ್ರಮ ಸೂಕ್ತ.
ಶ್ರೀತುಲಸಿ ಮತ್ತು ಕೃಷ್ಣ ತುಳಸಿಗೆ ಬೇಧವಿಲ್ಲ. ತುಳಸೀ ಕಟ್ಟೆಯಲ್ಲಿ(ಪೂಜೆ ಮಾಡುತ್ತಿರುವ ತುಳಸಿ)ರುವ ಗಿಡದ ಮೃತ್ತಿಕೆಯೂ ಶ್ರೇಷ್ಠ ಎಂಬುದಾಗಿ ನಂಬಿಕೆ. ಈ ಮೃತ್ತಿಕೆ ಸಹಿತ ತುಲಸೀದಳ ಧಾರಣೆಯಿಂದ ಕ್ಷುದ್ರ ಶಕ್ತಿಯಾದ ಮಾಟ,ಮಂತ್ರದ ಉಪದ್ರವ ನಿವಾರಣೆ ಎನ್ನುವರು.ಅದಲ್ಲದೆ; ತುಳಸಿ ಕಫ ನಾಶಿನಿ, ಕ್ರಿಮಿದೋಶಹರಿ, ಅಗ್ನಿದೀಪಿನಿ, ದುರ್ಗಂಧನಾಶಿನಿ, ವಾತನಾಶಿನಿ, ಪಾರ್ಶ್ವಶೂಲಹರಿ, ಪಿತ್ತಕೃತ್, ವಿಷನಾಶಿನಿ. ಹೀಗೆ ಬಹುಮುಖ ವೈದ್ಯೆಯೂ ಹೌದು. ಅದರ ಸ್ವರಸವು ಲಸಿಕೆಗೆ ಸಮಾನ ಎಂದು ತುಳಸಿಯಮ್ಮನ ಕೊಂಡಾಡಿದ್ದಾರೆ ವೈದ್ಯರು. ಇಂತಹ ತುಲನೆ ಇಲ್ಲದ ಮಹಿಮೆ ನಮ್ಮ ತುಳಸಿಯಮ್ಮನದು. ಅಸದೃಶ ಗುಣಗಳನ್ನು ಹೊಂದಿದ ತುಳಸಿಯಮ್ಮನ ಸೇವೆ ಮಾಡೋಣ. ಮನೆ ಮುಂದೆ ತುಳಸಿ ವೃಂದಾವನ ಬೆಳೆಯೋಣ. ’ಕಲ್ಯಾಣಂ ತುಳಸಿ ಕಲ್ಯಾಣಂ” ಎಂದು ಪುರಂದರ ದಾಸರು ಹೃದಯ ತುಂಬಿ ಹಾಡಿದ್ದಾರೆ. ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೆ!
– ವಿಜಯಾ ಸುಬ್ರಹ್ಮಣ್ಯ, ಕುಂಬಳೆ
”ತುಲನೆ ಇಲ್ಲದ ತುಲಸಿ ಮಾತೆ’ ಪ್ರಕಟಿಸಿ ಸಹಕರಿಸಿದ ಹೇಮಮಾಲಾ ಹಾಗೂ ಓದಿ ಮೆಚ್ಚಿದ ಓದುಗ ಬಾಂಧವರಿಗೂ ಮನತುಂಬಿದ ಧನ್ಯವಾದಗಳು.
ತುಲಸಿಯ ಮಹಾತ್ಮೆಯನ್ನು ಎಷ್ಟು ಸೊಗಸಾಗಿ ತಿಳಿಯಪಡಿಸಿದ್ದೀರಿ…ಧನ್ಯವಾದಗಳು
ತುಳಸಿಯ ಮಹಿಮೆಯನ್ನು ಚೆನ್ನಾಗಿ ಬರೆದಿರುವಿರಿ .ಒಲ್ಲನೋ ಹರಿ ಕೊಳ್ಳನೋ ಎಲ್ಲ ಸಾಧನವಿದ್ದು ತುಳಸಿಯಿಲ್ಲದ ಪೂಜೆ ಒಲ್ಲನೋ ಹರಿ ಕೊಳ್ಳನೋ
ಪುರಂದರ ದಾಸರ ಹಾಡು ನೆನಪಾಯಿತು .
ಧನ್ಯವಾದ ಸಾವಿತ್ರಿಯವರೇ.ಓದುವವರೇ ಬರೆಯುವವರ ಜೀವಾಳ ಅಲ್ಲವೇ?
ಬರಹ ತುಂಬಾ ಚೆನ್ನಾಗಿದೆ.ತುಳಸೀಮಾತೆಗೆ ನಮೋ ನಮಃ…
ಓದಿ ಅಎರ್ಥ್ಯೆಸಿ ಮೆಚ್ಚುವವರೇ ಬರೆಯುವವರಿಗೆ ಸ್ಪೂರ್ತಿ. ಶಂಕರಿ ಶರ್ಮ, ಧನ್ಯವಾದಗಳು.
ಹೌ ಟು ಗ್ರೋ ಅ healthy ಪ್ಲಾಂಟ್ ಫ್ರಮ್ a ಬೇಸಿಲ್ ಸೀಡ್
ಶಾಂತಲಾ,ತುಲಸಿ ಗಿಡ ಬೆಳೆದಂತೆ ಅದರ ವಂಶಾಭಿವೃದ್ಧಿಯ ಬೀಜವುಳ್ಳ ಕಸ್ತ್ರಗಳು ಬರುತ್ತವೆ. ಅವು ಒಣಗಿದಾಗ ಬೇಕಷ್ಟು ಬೀಜಗಳು ಇರುತ್ತವೆ. ಅದರಿಂದ ಬಿತ್ತನೆ ಮಾಡಿದ ಗಿಡಗಳನ್ನು ತಂದು ತಮ್ಮ ಕೈತೋಟದಲ್ಲಿ ನಟ್ಟರೆ ; ಮುಂದೆ ಅದರ ವಂಶಾಭಿವೃದ್ಧಿಯಾಗುವುದು.
ತುಳಸಿಯ ಮಹಿಮೆಯನ್ನು ಚೆನ್ನಾಗಿ ತಿಳಿಸಿದಿರಿ ವಿಜಯತ್ತೆ
ತುಳಸಿ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ.