ಮನಸ್ಸು ಅಭಿಸಾರಿಕೆ
2016ರ ಛಂದ ಪುಸ್ತಕ ಪ್ರಶಸ್ತಿ ಪಡೆದ ಕೃತಿ ಶಾಂತಿ ಕೆ ಅಪ್ಪಣ್ಣರ ಚೊಚ್ಚಲ ಕಥಾ ಸಂಕಲನ ಮನಸ್ಸು ಅಭಿಸಾರಿಕೆ. ಹಾಗೆ ನೋಡಿದರೆ ಈ ಮೊದಲೇ ತಮ್ಮ ಕೃತಿಯನ್ನು ಲೋಕಾರ್ಪಣೆ ಮಾಡುವಂತಹ ಪ್ರತಿಭೆ ಮತ್ತು ಛಲ ಇವರಿಗಿತ್ತು.ಆದರೆ ದೂರದ ಚೆನ್ನೈ ಇದಕ್ಕೆ ಅನುಕೂಲ ಮಾಡಿಕೊಡಲಿಲ್ಲವೆನ್ನಿ! ಆಗುವುದೆಲ್ಲಾ ಒಳ್ಳೆಯದಕ್ಕೆ ಎಂಬಂತೆ ಇಲ್ಲಿಯವರೆಗೆ ಕಾದದ್ದು ವ್ಯರ್ಥ ವಾಗಲಿಲ್ಲ.ಚೊಚ್ಚಲ ಕಥಾಸಂಕಲನಕ್ಕೆ ನೀಡುವ ಪ್ರತಿಷ್ಠಿತ ಪ್ರಶಸ್ತಿಯೆ ಇವರಿಗೆ ದೊರಕಿತು.ಕಥೆಗಳ ಸುಪರ್ದಿಗೆ ಕಟ್ಟಿ ಹಾಕಿದ ಮನಸ್ಸು ಮತ್ತೆ ವಿಚಲಿತಗೊಳ್ಳಲು ಸಾಧ್ಯವಿಲ್ಲ. ವಿಚಲಿತಗೊಳ್ಳೋಣವೆಂದರೆ ಕತೆಗಳೆ ನಮ್ಮನ್ನು ಕಟ್ಟಿ ಹಾಕಿಬಿಡುತ್ತವೆ.ಇವರ ಕಥಾಕುಸುರಿಯನ್ನೋದಿದರೆ ಕತೆಗಳೆ ಇವರನ್ನು ಕಟ್ಟಿ ಹಾಕಿದೆ ಎಂಬುದಾಗಿ ಭಾಸವಾಗುತ್ತದೆ. ಇವರು ಸಾಹಿತ್ಯದ ಉಳಿದೆಲ್ಲಾ ಪ್ರಕಾರಗಳಿಂದಲೂ ಕಥೆಗೆ ಹೆಚ್ಚಿನ ಪ್ರಾತಿನಿಧ್ಯ. ನೀಡುತ್ತಾರೆ.ಮನಸ್ಸು ನಿಜಕ್ಕೂ ಅಭಿಸಾರಿಕೆ ಹೌದೋ ಅಲ್ಲವೋ ಅದು ಅವರವರ ಭಾವಕ್ಕೆ ಅವರವರ ಮನಸ್ಸಿಗೆ ಬಿಟ್ಟ ವಿಷಯ.ಆದರೆ ಇಲ್ಲಿರುವ ಕಥೆಗಳ ಎಳೆ ಎಳೆಯನ್ನು ಭೇದಿಸಿಕೊಂಡು ಓದಿದಾಗ ಮನಸ್ಸು ಅಭಿಸಾರಿಕೆ ಹೌದು ಎಂಬುದು ನಮಗನಿಸಿಬಿಡುತ್ತದೆ.
ಈ ನಿಟ್ಟಿನಲ್ಲಿ ಇವರೆಲ್ಲಾ ಕಥೆಗಳಿಗೆ ಈ ಹೆಸರು ಸೂಕ್ತವೆಂದೆನಿಸಿಬಿಡುತ್ತದೆ.ಮನಸ್ಸಿನ ಬಗ್ಗೆ ಬರೆಯುವುದು ಎಲ್ಲರಿಂದ ಸಾಧ್ಯವಿಲ್ಲದ ಮಾತು.ಮನಸ್ಸಿನ ಬಗ್ಗೆ ಬರೆಯಬೇಕೆಂದರೆ ಅತ್ಯಂತ ಸೂಕ್ಷ್ಮ ಮನಸ್ಸಿನವರಿಂದ ಮಾತ್ರ ಸಾಧ್ಯ. ಎಂಬುದನ್ನು ಲೇಖಕಿಯವರು ಸಾಬೀತು ಮಾಡಿದ್ದಾರೆ. ಮನಸ್ಸು ಅಭಿಸಾರಿಕೆ ಹೌದು ಎಂಬ ಲೇಖಕಿಯ ಭಾವವನ್ನು ನಮ್ಮೊಳಗು ಹಾಯಿಸಿಬಿಟ್ಟಿದ್ದಾರೆ.ಇದೇ ಬರಹದ ಶಕ್ತಿ ,ಬರೆಯುವವರ ಶಕ್ತಿ ಮತ್ತು ಬರಹಕ್ಕಿರುವ ಶಕ್ತಿ.ಯಾವಾಗಲೂ ಮನಸ್ಸು ಎಂದರೆ ಹೆಣ್ಣಿನ ಮನಸ್ಸು ಎಂಬ ಭಾವನೆಯೇ ನಮ್ಮ ಮನಸ್ಸಿಗೆ ಕೇಂದ್ರ. ಬಿಂದುವಾಗಿ ನಿಲ್ಲುತ್ತದೆ.ಹಾಗೆಯೇ ಸ್ತ್ರೀ ಯೊಬ್ಬರು ಬರೆದ ಇಲ್ಲಿನ ಎಲ್ಲಾ ಕಥೆಗಳು ಸ್ತ್ರೀ ಪರ ಧ್ವನಿಯಾಗಿ ಗುರುತಿಸಿಕೊಂಡಿದೆ ಎಂದರೆ ನಮಗೇ ಅಚ್ಚರಿಯಾಗುವಂತೆ ಸಮಾಜದ ಅಂತೆಯೇ ಗಂಡಸರ ಜೊತೆಗೆ ಎಲ್ಲಾ ಸ್ತರದ ಜನಜೀವನವು ಹಾಸು ಹೊಕ್ಕಾದಂತೆ ಮನಬಿಚ್ಚಿ ಬರೆದಿದ್ದಾರೆ. ಕಥಾವಸ್ತು ವಿನ ಎಳೆಯನ್ನು ಅರ್ಥೈಸಿಕೊಂಡು ಓದಿದಾಗ ಲೇಖಕಿಯ ಧೈರ್ಯ ,ಬಿಚ್ಚುಮನಸ್ಸು, ಪ್ರೀತಿ, ಕರುಣೆ, ಸಹಾಯಹಸ್ತ ಎಲ್ಲವು ನಮಗೆ ಕ್ಷಣಾರ್ಧದಲ್ಲಿ ಅರ್ಥ ವಾಗಿಬಿಡುತ್ತದೆ. ಏಕೆಂದರೆ ನಮ್ಮ ಭಾವನೆಯೆ ನಮ್ಮ. ಬರಹದ ಅಭಿವ್ಯಕ್ತಿ. ಇಲ್ಲಿರುವ ಕಥೆಗಳ ಆಳದಲ್ಲಿ ಹೆಣ್ಣಿನ ಪರವಾದ ಸ್ವರ ತಟ್ಟಿದರು ,ಹೊರಪದರದಂಚಿಗೆ ಬಂದಾಗ ವಾಸ್ತವದ ನೆಲೆಗಟ್ಟಿನ ಮೇಲೆ ನಿಂತು ನೋಡುತ್ತಾರೆ.ಹೆಣ್ಣು ಮನಸ್ಸೊಂದು ತನ್ನ. ಜೀವನಕ್ಕೆ ಸಂಬಂಧವೇ ಇಲ್ಲದ ಕೆಲವು ಘಟನೆಗಳನ್ನು ಕಥೆಯಾಗಿರಿಸಿರುವುದು ಇಲ್ಲಿರುವ ಕಥೆಗಳ ದಿಟ್ಟತನ, ಜಾಣತನ ಜೊತೆಗೆ ತಾಜಾತನವು ಹೌದು. ಮುಳ್ಳುಗಳು, ನೆರಳು, ನನ್ನ ಹಾಡು ನನ್ನದು ಮುಂತಾದ ಕಥೆಗಳನ್ನು ಓದಿದಾಗ ಈ ನಿಟ್ಟಿನಲ್ಲಿ ಹೌದೆನಿಸುತ್ತದೆ.
ಲೇಖಕಿಯವರಿಗೆ ಬದುಕಿನ ಬಗೆಗೆ ಅಪಾರ ಅಚ್ಚರಿ.ಪಯಣ ಕಥೆಯಲ್ಲಿ ಅವರೇ ಹೇಳುವಂತೆ ” ನಡೆದಷ್ಟು ಬೆಳೆಯುತ್ತಿರುವ ಬದುಕು ಎಂದಾದರೊಮ್ಮೆ ನಿಲುಗಡೆಗೆ ಬರುವುದೇ…ಅಲ್ಲಿಯ ತನಕ ಹೀಗೆ ನಡೆಯುವುದು.ಯಾರಿಗೆ ಗೊತ್ತು ಯಾವ ತಿರುವಿನಲ್ಲಿ ಯಾವ ಸೋಜಿಗ ಅಡಗಿದೆಯೋ…ಹಾಗಂದುಕೊಂಡೇ ನಡೆದುಬಿಟ್ಟಿದ್ದೇನೆ “.ಬದುಕಿನ ಒಳಹೊರಗು ಮೇಳೈಸಿದ ಕಥೆಗಳೇ ಇವರ ಮನಸ್ಸಿನ ರಾಯಭಾರಿ. ಹೀಗೆ ಬದುಕಿನ ಸಾಗಿಬಂದ ದಿನಗಳ ದಾರಿಗುಂಟ ನೆನಪುಗಳ, ಅದರೊಂದಿಗೆ ನಾವೀನ್ಯ. ಕಲ್ಪನೆಗಳ ತೊಯ್ದಾಟವೇ ಇವರ ಚಂದನೆಯ ಕಥೆಗಳ ದಿಕ್ಕು . ಬದುಕಿನ ಬಗೆಗೆ ಅಚ್ಚರಿಯಿಲ್ಲದವನು ಬರೆಯಲಾರ ಅಲ್ಲವೇ?
ಸಾಹಿತ್ಯದ ಇತರೆಲ್ಲಾ ಪ್ರಕಾರಗಳಿಂದಲೂ ಅತ್ಯಂತ ಪ್ರಖರವಾದದು ಕಥಾ ಪ್ರಕಾರ. ಆದರಿಂದ ಒಂದೊಂದು ಕಥೆಗಳು ಪ್ರತ್ಯೇಕವಾದ ಪ್ರಖರತೆಯಿಂದ ಕೂಡಿದ್ದರೆ ಮಾತ್ರ ಅವು ಉತ್ತಮ ಕಥೆಗಳೆನಿಸುವವು.ಇಲ್ಲಿರುವ ಎಲ್ಲಾ ಕಥೆಗಳು ಅಂತಹ ಪ್ರಖತರತೆಯ ಕಿರಣಗಳಿಂದ ಕೂಡಿದೆ. “ಅವನ ಜೊತೆ ಮಾತಾಡಿ ಲಾಭವಿರಲಿಲ್ಲ.ಅವನಿಗೆ ಸುಳ್ಳು ಹೇಳುವಂತಹ ಅಗತ್ಯ ಇರ್ಲಿಲ್ಲ.ಆದರು ಅವನನ್ನು ನಂಬುವಂತಿಲ್ಲ” ಸುಳಿ ಕಥೆಯ ಈ ಸಾಲುಗಳು ಎಷ್ಟು ಮಾರ್ಮಿಕವಾಗಿ ನಮ್ಮನ್ನು ತಟ್ಟುತ್ತವೆ.ಇಲ್ಲಿನ ಕಥೆಗಳ. ವಸ್ತು ,ಪರಿಕಲ್ಪನೆ, ಉದ್ದೇಶ ಹೀಗೆ ಯಾವ ಕೇಂದ್ರ ವನ್ನಿಟ್ಟು ನೋಡಿದರು ಅದು ಗಂಡು ಹೆಣ್ಣಿನ ಸಂಬಂಧದ ತೆಕ್ಕೆಗೆ ಬಂದು ನಿಲ್ಲುತ್ತದೆ.ಇದು ಜೀವನದ ಪರಮ ಸತ್ಯ ವು ಹೌದು. ಯಾವುದೇ ಪರಮ ಸತ್ಯ ದ ಅವಲೋಕನ ಮಾಡಿ ಬರೆಯುವುದು ಸಾಮಾಜಿಕ ಕಳಕಳಿಯು ಹೌದು. ಅದನ್ನು ಕಥೆಗಳ ಮೂಲಕ ಹೊರಹಾಕುವುದು ದಿಟ್ಟತನದ ವಿಚಾರ. ಈ ದಿಟ್ಟತನ ಇಲ್ಲಿನ ಕಥೆಗಳ ಹೆಗ್ಗಳಿಕೆಯೆ ಸರಿ.ಸುಳಿ ಕಥೆಯ ಸುಳಿ ಸುಳಿಯು ಸಂಬಂಧಗಳ ಸುಳಿಯಲ್ಲಿ ತೊಯ್ದಾಡುವ ಪರಿ ಅಭೂತಪೂರ್ವವಾಗಿದೆ. ಸುಳಿ ಕಥೆಯಲ್ಲಿ ಜೀವನದ ಒಳಹೊರಗನ್ನು ಜೊತೆಗೆ ನಡೆಯನ್ನು ವಾಸ್ತವದೊಡನೆ ಸಮೀಕರಿಸಿ ಅಲ್ಲಿರುವ ಸಂಬಂಧಗಳೆಲ್ಲಾ ನಮ್ಮ ನಮ್ಮ ಜೀವನದಲ್ಲೂ ಪಡಿಮೂಡಿದೆ ಎಂಬುದನ್ನು ಅವ್ಯಕ್ತವಾಗಿ ನಮಗೆ ತಿಳಿಹೇಳಿದ್ದಾರೆ. ಇಲ್ಲಿರುವ ‘ಪರಿಹಾರ ‘ ಕಥೆಯು ಭಾಷೆ, ಬರವಣಿಗೆ, ವಸ್ತು ಎಲ್ಲಾ ರೀತಿಯಲ್ಲು ವಿಶಿಷ್ಟ ವಾಗಿ ಮೂಡಿ ಬಂದಿದ್ದು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ.
ಹಳ್ಳಿ ಕೇರಿಯ ಚಿತ್ರಣವನ್ನು ಎಷ್ಟೊಂದು ನೈಜ್ಯವಾಗಿ ಚಿತ್ರಿಸಿದ್ದಾರೆಂದರೆ ಮನಮುಟ್ಟುವಂತಿದೆ. “ರೊಟ್ಟಿ ತಿಂದು ಮುಗಿಸಿ ತಟ್ಟೆ ಯನ್ನು ಹಿಂದಿನ ಜಗಲಿಯ ಮೇಲೆ ಮಳೆಯಲ್ಲಿ ನೆನೆಯಲಿಕ್ಕಿಟ್ಟ. ಅಲ್ಲೇ ಬಚ್ಚಲ ಒಲೆಯ ಬೂದಿಯೊಳಗೆ ಮಲಗಿದ್ದ ನಾಯಿ ತಟ್ಟೆಯಲ್ಲೇನಾದರು ಉಳಿದಿದೆಯೇ ಎಂದು ಕತ್ತೆತ್ತಿ ನೋಡಿ ಏನೂ ಕಾಣದಿರಲು ಮತ್ತೆ ಕಿವಿ ಝಾಡಿಸಿಕೊಂಡು ಬೂದಿಯೊಳಗೆ ತಲೆ ತೂರಿಸಿಕೊಂಡು ಮಲಗಿತು “ಹಳ್ಳಿ ಕೇರಿಯ ಸೂಕ್ಷ್ಮಗಳನ್ನು ತೆರೆದಿಟ್ಟ ಕಥೆಯನ್ನು ಓದುವಾಗ ತುಂಬಾ ಹಿತವೆನಿಸುತ್ತದೆ. ಆಧುನಿಕತೆಯ ಮಾಯಾಜಾಲದ ಬಾಹುಗಳು ಎಲ್ಲಾ ಮನುಷ್ಯರನ್ನು ಆಚರಿಸಿದರು ಈಗಲೂ ಇರುವ ಇಂಥಹ ಹಳ್ಳಿಯ ಕಥೆಗಳು ನಮ್ಮನ್ನು ಅಪ್ಯಾಯಮಾನಗೊಳಿಸುತ್ತದೆ.ಉಳಿದಂತೆ ಇವರ ಹೆಚ್ಚಿನ ಕಥೆಗಳು ಆಧುನಿಕತೆಯ ಹರಿವನ್ನು ಸುರಿಸಿ ಬರೆದರೂ, ಬದುಕಲು ಬೇಕಾದಷ್ಟು ಆಧುನಿಕತೆ ಸಾಕು ನಮಗೆ ಎಂಬ ಇಂಗಿತವನ್ನು ಕಂಡೂ ಕಾಣದಂತೆ ಕಥೆಗಳಲ್ಲಿ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಕಥೆಗಳಲ್ಲಿ ಲೇಖಕಿಯ ಮನೋಧರ್ಮ ಮತ್ತು ಕಥಾನಾಯಕಿಯ ಮನೋಧರ್ಮ ಕಥೆಗಳಲ್ಲಿ ಮಿಳಿತಗೊಂಡು ಓದುಗರಿಗೆ ಅಂದದ ಅನುಭೂತಿಯನ್ನು ನೀಡುತ್ತದೆ. ಪಯಣ ಕಥೆಯಲ್ಲಿ ಲೇಖಕಿಯೇ ಮನಸ್ಸಿನ ತುಮುಲಗಳು,ಭಾವೋದ್ವೇಗದ ಸನ್ನಿವೇಶದಲ್ಲಿ ಸಂಭಾಷಣೆ ಯೊಂದಿಗೆ ತಹಬದಿಗೆ ಬಂದರು ಮಾತು ಮಥಿಸಿದ ಕ್ಷಣ ಗಳು ಚಿಂತನಾರ್ಹವಾಗಿದೆ.ಪ್ರ ತಿ ಸಂಭಾಷಣೆಯಲ್ಲು ನಿರ್ಧರಿತ ಯೋಚನೆಗಳು ಸ್ವಾಗತಾರ್ಹ. “ಹಾಗಲ್ಲ ನೋಡಿ ನೀವು ಏನು ನೋಡೋದಿದ್ದರು ಫೋನು ಕೆಳಗೆ ಇಟ್ಕೊಂಡು ನೋಡಿ, ಅದೆಂತ ನನ್ನ ಮುಖದ ನೇರ ಇಟ್ಕೊಂಡು ನೋಡೋದು? ಆಮೇಲೆ ನೀವು ನನ್ನದು ಫೋಟೋ ತೆಗೆಯುದಿಲ್ಲಾಂತ ಎಂತ ಗ್ಯಾರಂಟಿ? ಮೇಡಂ ಇಲ್ದೆ ಇರೋ ಐಡಿಯಾ ಎಲ್ಲಾ ಕೊಡ್ಬೇಡಿ.ಇಷ್ಟೊತ್ತು ಹಾಗೆಲ್ಲ ಯೋಚನೆ ಮಾಡಿರ್ಲಿಲ್ಲ. ಇವಾಗನ್ನಿಸಿದೆ ಯಾಕ್ ಮಾಡಬಾರದು ಅಂತ. ಅವನು ಮೀಸೆಯಡಿ ನಗುತಿರುವುದು ಕಣ್ಣುಗಳು ಬಿಚ್ಚಿಡುತ್ತಿದ್ದವು. ಈ ಸಂಭಾಷಣೆಗೆ ಕೊನೆಯ ಉಪಸಂಹಾರದ ಒಂದು ಸಾಲು ಎಷ್ಟೊಂದು ಅದ್ಭುತವಾಗಿ ಹೋಲಿಕೆಯಾಗಿದೆ ಅಲ್ಲವೆ?
ಲೇಖಕಿಯು ಕಥೆಗಳಲ್ಲಿ ಬಳಸಿರುವ ಕನ್ನಡದ ಉಪಭಾಷೆಗಳ ಶಬ್ದಗಳು ಒಟ್ರಾಸಿ,ಉಚ್ಚೆ ಹೊಯ್ಯು, ನಿಟಾರಾದ, ತಲೆಬಿಸಿ ಮಾರಾಯ್ತಿ, ಬುಡ, ಹಟ್ಟಿ, ಮೋರಿಗುಂಡಿ,ಬಸುರಿ, ಕಣ್ಣೊಲೆ, ಹೊಟ್ಟೆಯುರಿ, ಕಕ್ಕಿಕೊಳ್ಳು, ಪಿತ್ತ ನೆತ್ತಿಗೇರು ಇತ್ಯಾದಿ ಶಬ್ದಗಳು ತೇಜೋಹಾರಿಯಾಗಿದ್ದು ಓದುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಶಾಂತಿಯವರ ಅವಲೋಕಿಸುವ ಗುಣ ಅತ್ಯಂತ ಪರಿಣಾಮಕಾರಿ.ಇಲ್ಲಿರುವ ಅಷ್ಟೂ ಕಥೆಗಳು ಒಂದರಂತೆ ಇನ್ನೊಂದು ಯಾವುದೂ ಇಲ್ಲ. ಸಾಮಾನ್ಯವಾಗಿ ಲೇಖಕರ ಬರವಣಿಗೆಗಳು ಅವರವರ ಭಾವಕ್ಕೆ ,ಭಕುತಿಗೆ ತಕ್ಕಂತೆ ಒಂದೇ ರೀತಿಯಾಗಿ ಸಾಗುತ್ತವೆ. ಆದರೆ ಶಾಂತಿಯವರು ಇದರಲ್ಲಿಯೂ ತಮ್ಮ ವಿಶಿಷ್ಟ ತೆಯನ್ನು ಮೆರೆದಿದ್ದಾರೆ.ಯಾವುದೋ ಊರಿನ ಲಾರಿ ಡ್ರೈವರ್ ನ ಕಥೆ ಒಂದು ಕಡೆಯಾದರೆ ,ಐಸಿಯು ಒಳಗಡೆ ಮಲಗಿದವನ ಕಥೆ ಇನ್ನೊಂದು ಕಡೆ, ಕಲ್ಪನೆಯಿಂದ ನೇಯ್ದ ಬಾಹುಗಳು ಇನ್ನೊಂದು ಕಡೆ. ಈ ರೀತಿ ಇರುವುದರಿಂದ ನಮ್ಮನ್ನು ಹೊಸ ಹುರುಪಿನಿಂದ ಓದುವಂತೆ ಮಾಡುತ್ತದೆ.
ಇವರ ಬರಹಗಳು ದೈನಂದಿನ ಬದುಕಿನ ಆಗುಹೋಗುಗಳೆಲ್ಲವು ಕಾಲು ಹಾದಿಯ ಮೂಲಕ ಸಾಗಿ ಹೋಗಿ ವಿಶಾಲವಾದ ಹಾದಿಯಲ್ಲಿ ನೆರಳು ಬಯಸಿ ಕುಳಿತು ಕಥೆಗಳಾಗಿವೆ.ನಮ್ಮ ಸಂವೇದನೆಗಳು ಕಥೆಗಳು ಸಾರುವ ಸೃಷ್ಟಿ ಯ ಮೋಹಕತೆಗೆ ಒಲಿಯುವ ಮುನ್ನ ಏನೋ ಒಂದು ತಾತ್ಪರ್ಯವನ್ನು ನಮಗೆ ಪಿಸುಗುಟ್ಟುತ್ತವೆ.ಒಂದು ಸಾಮಾಜಿಕ ಕಳಕಳಿಯೊಂದಿಗೆ, ನೈತಿಕ ಬೆಂಬಲವನ್ನು ಅರುಹಿ ಸಾಗುವ ಕಥೆಗಳು ಪ್ರ ತಿಯೊಬ್ಬರಿಗೆ ಮಾದರಿಯಾಗಿವೆ. ‘ದಾರಿ ‘ಕಥೆಯಲ್ಲಿರುವ ಮನೆಕೆಲಸದ ಚಂದ್ರ, ವಾರಿಜ ಇರಬಹುದು, ‘ಮುಳ್ಳುಗಳು ಕಥೆಯಲ್ಲಿ ಗಾರೆ ಕೆಲಸದ ಟಿಪ್ಪು, ‘ಪರಿಹಾರ ‘ ಕತೆಯ ಮುತ್ತಾ ಇರಬಹುದು, ಪರಶುವಿನ ದೇವರು ಕಥೆಯ ಪರಶು ಇರಬಹುದು ಈ ಪಾತ್ರಗಳೆಲ್ಲಾ ತಮ್ಮ ಜೀವಂತಿಕೆಯನ್ನು ದಶಕಗಳು ಕಳೆದರು ಹಾಗೆಯೇ ಇರಿಸಿಕೊಳ್ಳುತ್ತವೆ. ಏಕೆಂದರೆ ಇವರ ಸೃಜನಶೀಲ ಚಿಂತಿಸುವಿಕೆಯಲ್ಲಿ ಸೇರಿದ ಈ ಪಾತ್ರಗಳು ಲೋಕದ ಚಿತ್ರ. ಣ ಇನ್ನೂ ಬದಲಾದರು, ಬದಲಾವಣೆಯಿಲ್ಲದೆ ಪಾತ್ರಗಳಿವು. ಭಿನ್ನ ಕೋನಗಳಿಂದ ಆಲೋಚಿಸಿದರೆ ನಾವು ಇತರರಿಗಿಂತ ಭಿನ್ನವಾಗಿರುತ್ತೇವೆ ಅಲ್ಲವೇ? ಇದನ್ನು ಶಾಂತಿಯವರು ತಮ್ಮ ಕಥೆ ಗಳಲ್ಲಿ ತೋರ್ಪಡಿಸಿದ್ದಾರೆ. ಇವರಿಗೆ ಕಥೆ ಯೆಂದರೆ ಅಂತರಂಗದ ಅಲೆಗಳ ಜೀವನ ಯಾನ. ಕಥೆ ಸ್ಪುರಿಸಿದ ಕೂಡಲೇ ಒಂದೇ ಉಸಿರಿಗೆ ಮನ ಹಗುರಗೊಳಿಸುವ ಇವರ ಯಾನ ಸಾಹಿತ್ಯದ ಒಲವಿನ ಪ್ರತೀಕ. ಈ ಒಲವು ಗೆಲುವು ಇವರಿಗೆ ಶಾಶ್ವತವಾಗಿರಲಿ.
– ಸಂಗೀತ ರವಿರಾಜ್ , ಮಡಿಕೇರಿ
ವಿಮರ್ಶೆ ಚೆನ್ನಾಗಿ ಬಂದಿದೆ ಸಂಗೀತಾ.