ಸಂತಸಗಳನ್ನು ಎಣಿಸೋಣ..
ಇತ್ತೀಚೆಗೆ ಒಂದು ವಾರ ಆಸ್ಪತ್ರೆಯಲ್ಲಿ ಇರಬೇಕಾಗಿ ಬಂತು. ಕೇವಲ ಒಂದು ಪಾತ್ರೆ ಕುದಿವ ಬಿಸಿನೀರು, ಅದು ಬಿದ್ದ ಪಾದ, ಅದನ್ನು ಹೊತ್ತ ಜೀವವನ್ನು ಒಂದು ತಿಂಗಳು ಅಲ್ಲಾಡದೆ ಕುಳ್ಳಿರಿಸಿತು. ನಿಯತವಾದ ಔಷಧೋಪಚಾರ, ಬ್ಯಾಂಡೇಜು ಹೀಗೆ ಒಂದು ತಿಂಗಳಲ್ಲಿ ತಹಬಂದಿಗೆ ಬಂದಿತೆನ್ನಿ. ನಮ್ಮ ಧಾವಂತದ ಬದುಕಿನಲ್ಲಿ ದೇಹ, ಮನಸ್ಸು , ಆರೋಗ್ಯಕ್ಕೆ ನಾವು ಕೊಡುವ ಸಮಯ ತುಂಬ ಕಡಿಮೆ. ನಮ್ಮ ಓದು, ಕೆಲಸ ಹೀಗೆಲ್ಲ ನಾಗಲೋಟದಲ್ಲಿ ನಮ್ಮನ್ನು ಪೊರೆವ ದೇಹದ ಬಗ್ಗೆ, ಅದರ ಅವಯವಗಳ, ಪಂಚೇಂದ್ರಿಯಗಳ ಬಗ್ಗೆ ನಾವು ಯೋಚಿಸುವುದು ಕೂಡ ಇಲ್ಲ. ‘ಮಾನವ ಮೂಳೆ ಮಾಂಸದ ತಡಿಕೆ’ ಎಂದು ಒಂದು ರೀತಿಯ ನಿಕೃಷ್ಟ ಭಾವನೆಯೇ ಹೆಚ್ಚಿನವರಲ್ಲೂ ಇರುವುದನ್ನು ನಾನು ಗಮನಿಸಿದ್ದೇನೆ. ಇನ್ನು ವಯಸ್ಸಾದಂತೆಲ್ಲ ದೈಹಿಕ ಆಕರ್ಷಣೆ, ಅಂದ ಚಂದಕ್ಕೆ ಸ್ವಲ್ಪ ನಿರ್ಲಕ್ಶ್ಯ ಮನೋಭಾವ ಬೆಳೆಸಿಕೊಳ್ಳುತ್ತೇವೆ. ಈ ಎಲ್ಲ ಕಾರಣಗಳಿಂದ ಪಲ್ಲಟಗೊಳ್ಳುವುದು ನಮ್ಮ ಆರೋಗ್ಯ. ನನ್ನ ಹಾಸ್ಪಿಟಲ್ ವಾಸ ನನಗೆ ಹೊಸದೊಂದು ಆಲೋಚನಾ ಕ್ರಮವನ್ನೇ ಒದಗಿಸಿತೆನ್ನಬಹುದು. ‘ಶರೀರಮಾದ್ಯಂ ಖಲು ಧರ್ಮ ಸಾಧನಂ’ ‘ದೇಹ ಆತ್ಮನ ದೇಗುಲ’ ಈ ಎಲ್ಲ ಮಾತುಗಳ ನೈಜ ಅರ್ಥ ನನಗೆ ಕೈಯೆಲ್ಲ ಸೂಜಿ ಚುಚ್ಚಿಸಿಕೊಂಡು ನರಳುವಾಗ, ಪೈನ್ ಕಿಲ್ಲರ್ ಗಳನ್ನು ಅವಲಂಬಿಸಿ ಯಾತನೆ ಪಡುವಾಗ ಬಹಳ ಸ್ಪಷ್ಟವಾಗಿ ಅರಿವಾಯಿತು.
ಈ ಸೃಷ್ಟಿಕರ್ತ ಮಾನವ ಶರೀರವನ್ನು ಅದೆಷ್ಟು ಜತನದಿಂದ ಸೃಷ್ಟಿಸಿದ್ದಾನೆ ಹಾಗೂ ಅದು ಎಷ್ಟು ತಾಳ್ಮೆಯಿಂದ ನಮ್ಮನ್ನು ಪೊರೆಯುತ್ತಿದೆ! ನಮ್ಮ ಗಡಿಬಿಡಿ, ಶಿಸ್ತಿಲ್ಲದ ಜೀವನಶೈಲಿಯಿಂದ ಅದನ್ನು ಬೇಕಾಬಿಟ್ಟಿ ಬಳಸಿಕೊಳ್ಳುವ ಕಾರಣವೇ ಹೆಚ್ಚಿನವರಿಗೆ ಅಕಾಲದಲ್ಲಿ ಅನಾರೋಗ್ಯ, ಕೆಲವೊಮ್ಮೆ ಮಾರಣಾಂತಿಕ ಕಾಯಿಲೆಗಳೂ ಬಂದೊದಗುತ್ತವೆ. ಅದೇನೇ ಇರಲಿ, ನಾನೀಗ ಮಾತನಾಡುತ್ತಿರುವುದು ಈ ದೇಹ ನಮಗೆ ಕೊಡುವ ಅವಕಾಶಗಳ ಬಗ್ಗೆ, ಸಂತಸಗಳ ಬಗ್ಗೆ.
ಕಣ್ಣು, ಮೂಗು, ಬಾಯಿ, ಚರ್ಮ, ಕಿವಿ ಈ ಪಂಚ ಬೇಸಿಕ್ ಇಂದ್ರಿಯಗಳಲ್ಲದೆ ಹೃದಯ, ಲಿವರ್, ಕಿಡ್ನಿ.. ಇನ್ನೆಷ್ಟೋ ಆಂತರಿಕ ಗ್ರಂಥಿಗಳು. ‘ಬದುಕ ಮನ್ನಿಸು ಪ್ರಭುವೆ’ ಎನ್ನುವ ಯಾತನೆ ಅನುಭವಿಸಿದಾಗ ಮಾತ್ರ ನಮಗೀ ದೇಹದ ಬೆಲೆ ಅರಿವಾಗುತ್ತದೆ ಅಲ್ಲವೇ? ಅದೋ ಅಲ್ಲೊಬ್ಬ ರೋಗಿ ಎದೆ ಹಿಡಿದುಕೊಂಡು ನರಳುತಿದ್ದಾಳೆ. ಪಕ್ಕದ ರೂಮಿನಲ್ಲಿ ವೆಂಟಿಲೇಟರ್ ಕೊಟ್ಟು ಉಸಿರಾಡುವ ರೋಗಿ. ಇನ್ನೊಂದೆಡೆ ವಾಕರ್ ನಲ್ಲಿ ನಡೆಯಲು ಕಲಿಯುವ ವೃದ್ಧ ಮಹಿಳೆ. ಮಗದೊಬ್ಬಳ ಪಾದ ಅದೇಕೋ ಬಾತುಕೊಂಡಿದೆ. ಆ ಕಡೆಯ ರೂಮಿನ ಟೀನೇಜರ್ ಅದು ಹೇಗೋ ಒಂದು ಬೈಕ್ ಆಕ್ಸಿಡೆಂಟ್ ಮಾಡಿಕೊಂಡು ಹ್ಯಾಪು ಮೋರೆ ಮಾಡಿಕೊಂಡು ಕುಳಿತಿದ್ದಾನೆ. ಪಕ್ಕದ ರೂಮಿನ ಎಳೆ ತಾಯಿಯ ಮಗುವಿನ ಬೆರಳುಗಳಲ್ಲೆಲ್ಲ ಸೂಜಿ ಚುಚ್ಚಿದ ಗುರುತುಗಳು..
ಈ ಕಣ್ಣು, ಮೂಗು, ಬಾಯಿ, ತುಟಿ, ಚರ್ಮದ ಬಣ್ಣ, ಎತ್ತರ, ದಪ್ಪ, ಗಿಡ್ಡ,ತೆಳ್ಳಗೆ ಎಂದೆಲ್ಲ ಹಳಹಳಿಸುವ ನಾವು ಅವು ಹೇಗೆಯೇ ಇದ್ದರೂ ‘ಬದುಕಲು’ ಬಿಟ್ಟಿವೆ ಎನ್ನುವುದನ್ನೇ ನಿರ್ಲಕ್ಷಿಸುತ್ತೇವಲ್ಲ? ಕಣ್ಣಿಗೆ ಕಪ್ಪು ಹಚ್ಚಿ, ನೀಟಾಗಿ ಐಬ್ರೋ ಶೇಪ್ ಮಾಡಿಸಿದ ಮಿಂಚುಗಣ್ಣಿನ ತರಳೆಯನ್ನು ಇನ್ನೇನು ಆಪರೇಶನ್ ಮಾಡಿಸಬೇಕಾದ ಮುದಿಗಣ್ಣುಗಳು ನಿಸ್ತೇಜವಾಗಿ ನೋಡುತ್ತಿರುತ್ತವೆ. ಆಕಾಶದ ನೀಲಿ, ಹೂವಿನ ಬಿಳಿ ಕೆಂಪು ನೇರಿಲ ವರ್ಣ, ಸೂರ್ಯೋದಯ ಸೂರ್ಯಾಸ್ತಗಳ ವಿಹಂಗಮ ನೋಟ, ತುಂಟ ಹೈದನೊಬ್ಬನ ತರಲೆ ನೋಟ, ಮಗುವಿನ ಮಮತೆಯ ದೃಷ್ಟಿ, ಕೆಂಬಣ್ಣದ ಡ್ರೆಸ್ ನಲ್ಲಿನ ನಾಜೂಕಾದ ಕಸೂತಿ.. ಈ ಕಣ್ಣುಗಳು ನಮ್ಮನ್ನೆಷ್ಟು ಪೊರೆಯುತ್ತವೆ? ಓದಲು, ಬರೆಯಲು, ಕಂಪ್ಯೂಟರ್, ಫ಼ೇಸ್ ಬುಕ್ ನೋಡಲು ನಮಗೆ ಸಾಧ್ಯವಿದೆ.(ಕಣ್ಣೇ ಇಂಗಿ ಹೋಗಿರುವ, ಪರೆ ಬಂದಿರುವ, ಆಪರೇಶನ್ ಮಾಡಿಯೂ ಕಣ್ಣು ಕಳೆದುಕೊಂಡಿರುವವರನ್ನೆಲ್ಲ ನೋಡಿ ಮರುಗಿ ಈ ಮಾತು).
‘ಅದ್ಯಾಕೆ ಗಬಗಬನೆ ಮುಕ್ಕುತ್ತೀಯ’ ಎಂದು ಯಾರಾದರೂ ಅಂದಿದ್ದರೆ ಮುಖ ಸಣ್ಣಗಾಗಿಸಲೇ ಬೇಡಿ. ಗಂಟಲಿನಲ್ಲಿ, ಅನ್ನ ನಾಳದಲ್ಲಿ ಸಮಸ್ಯೆಯಿದ್ದು ಗಟ್ಟಿ ಆಹಾರವನ್ನು ತಿನ್ನಲೇ ಸಾಧ್ಯವಿಲ್ಲದವರನ್ನೊಮ್ಮೆ ನೆನಪಿಸಿಕೊಳ್ಳಿ. ಕಟುಂ ಕಟುಂ ಎಂದು ಬೇಕಾದ್ದನ್ನು ರುಚಿ ರುಚಿಯಾಗಿ ತಿನ್ನುವ, ಮನಸೋ ಇಚ್ಛೆ ಬೇಕಾದ್ದನ್ನು ಮಾತಾಡುವ, ಗಟ್ಟಿಯಾಗಿ ಎತ್ತರಿಸುವ ಧ್ವನಿ ತಂತಿ ಇರುವ ಬಗ್ಗೆ ಸಂತಸ ಪಡೋಣ.
ಇನ್ನು ನಮ್ಮ ಚರ್ಮ. ಅದೆಷ್ಟು ಇನ್ ಫ಼ೆಕ್ಷನ್ ಗಳಿಂದ, ನೋವಿನಿಂದ ನಮ್ಮನ್ನು ಕಾಪಾಡುತ್ತದೆ ಅಂದರೆ ಭಾರತದ ಅರ್ಧಕ್ಕಿಂತ ಹೆಚ್ಚಿನ ಜನ ಫ಼ೇರ್ ನೆಸ್ ಕ್ರೀಂ ಬಳಸಿಕೊಂಡು ತಮ್ಮ ಚರ್ಮದ ಬಗೆ ಕೀಳರಿಮೆ ಬೆಳೆಸಿಕೊಳ್ಳುವುದನ್ನು ಯಾಮಾರಿಸಿಬಿಡಬೇಕು. (ಮುಖವಿಡೀ ಜೋತಾಡುವ ಗಂಟುಗಳಿರುವ, ಅಲ್ಲಲ್ಲಿ ಬಿಳೀ ಪ್ಯಾಚ್ ಗಳಿರುವ, ತಲೆಕೂದಲೆಲ್ಲ ಉದುರಿ ಹೋಗಿರುವ, ಆಸಿಡ್ ನಿಂದಾಗಿ ಚರ್ಮವೆಲ್ಲ ಕಿತ್ತು ಹೋಗಿ ವಿರೂಪವಾಗಿರುವವರನ್ನು ನೋಡಿ ಮರುಗಿ ಈ ಮಾತು. ) ಮೇಕಪ್ ಮಾಡಿ ಮುದ್ದಾಗಿ ಕುಳಿತ ಹದಿ ಹರಯದ ಯುವತಿಯ ಅಂದ, ಆಗ ತಾನೇ ಸ್ನಾನ ಮುಗಿಸಿ ದೃಷ್ಟಿ ಬೊಟ್ಟು ಹಚ್ಚಿಸಿಕೊಂಡಿರುವ ಕಂದ.. ಹೀಗೆ ಚರ್ಮ, ಸ್ಪರ್ಷದ ಸಂವೇದನೆ ನಮಗೊಂದು ವರ.
ನನಗೀಗ ದಪ್ಪ ಲಿಪ್ ಸ್ಟಿಕ್ ಹಾಕಿಕೊಂಡಾಅಗ ಸೀಳು ತುಟಿಯವರು ನೆನಪಾಗು ತ್ತಾರೆ. ಧಡ ದಢನೆ ಮೆಟ್ಟಿಲು ಹತ್ತಿ ಇಳಿಯುವಾಗ, ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುವ ಲಲನೆಯರನ್ನು ನೋಡುವಾಗ ಕಾಲಿಡೀ ಗ್ಯಾಂಗ್ರಿನ್ ಹಬ್ಬಿರುವವರು . ಕಿಲಾಡಿ ಪಡ್ಡೆ ಹುಡುಗರು, ವಿದ್ಯಾರ್ಥಿಗಳನ್ನು ‘ಸಾಕು ನಿಮ್ಮ ಹರಟೆ’ ಎಂದು ಗದರಿಸಬೇಕೆನಿಸುವಾಗ ಮೂಗರು, ಕಿವಿಗೆ ಶ್ರವಣ ಸಾಧನ ಸಿಕ್ಕಿಸಿಕೊಂಡವರು ನೆನಪಾಗುತ್ತರೆ. ಒಂದು ಸಬ್ಜೆಕ್ಟ್ ನಲ್ಲಿ ಫ಼ೇಲ್ ಆದೆ ಎಂದೋ ರ್ಯಾಂಕ್ ತಪ್ಪಿತು ಎಂದೋ ಗೋಳಾಡುವವರನ್ನು ಕಂಡಾಗ, ಪ್ರಾಥಮಿಕ ಅಗತ್ಯಗಳನ್ನೂ ಕೂಡ ಪೂರೈಸಿಕೊಳ್ಳಲಾಗದ ಬುದ್ಧಿ ಮಾಂದ್ಯರು ನೆನಪಾಗುತ್ತಾರೆ. ಈ ದೇಹ ದೇವರಿತ್ತ ವರ. ಅದನ್ನು ಕಾಪಿಟ್ಟುಕೊಳ್ಳುವುದು ನಮ್ಮ ಧರ್ಮ .
ಲೆಟ್ ಅಸ್ ಕೌಂಟ್ ಅವರ್ ಬ್ಲೆಸ್ಸಿಂಗ್ಸ್!
– ಜಯಶ್ರೀ ಬಿ ಕದ್ರಿ
ತುಂಬಾ ಚೆನ್ನಾಗಿದೆ ಬರಹ…
ನಿಜ. ಹೆಚ್ಚಿನ ಸಂದರ್ಭಗಳಲ್ಲಿ ನಾವು ನಮ್ಮ ಜೀವನದ ‘ಅರ್ಧ ಗ್ಲಾಸ್ ಖಾಲಿ’ ಎಂದು ಅತಿಯಾಗಿ ಪರಿತಪಿಸುತ್ತಾ ಅದೇ ಗ್ಲಾಸ್ ನ ಇನ್ನರ್ಧ ಭಾಗವು ತುಂಬಿದೆ ಎಂಬುದನ್ನು ಗಮನಿಸದಷ್ಟು ಋಣಾತ್ಮಕ ದೃಷ್ಟಿಕೋನ ಹೊಂದಿರುತ್ತೇವೆ. ಹಾಗಾಗಿ ನಮಗೆ ಲಭಿಸಿದ ಸಂತಸಗಳನ್ನು ಎಣಿಸುವುದು ಅತ್ಯಗತ್ಯ. ಉತ್ತಮ ಬರಹ.