ಕೊಡಸಿಗೆ ಹೂವಿನ ತಂಬುಳಿ
ಈಗ ತಾನೇ ಮಾರ್ಚ್ ಕಾಲಿರಿಸಿದೆ. ಆದರೂ ಈಗಲೇ ಸೆಕೆ, ಧಗೆ ಆರಂಭವಾಗಿದೆ. ಮೊನ್ನೆ ಭಾನುವಾರ, ಚನ್ನಪಟ್ಟಣದ ಸಮೀಪದಲ್ಲಿರುವ ‘ವಾಡೆ ಮಲ್ಲೇಶ್ವರ ಬೆಟ್ಟ’ಕ್ಕೆ ಚಾರಣ ಕೈಗೊಂಡಿದ್ದೆವು. ಕಲ್ಲು ಬಂಡೆಗಳಿಂದ ಕೂಡಿದ್ದ ಆ ಬೆಟ್ಟದಲ್ಲಿ ಗಿಡಮರಗಳು ಒಣಗಿ ಕಾಡು ಭಣಗುಡುತಿತ್ತು. ಹೀಗಿದ್ದರೂ, ಅಲ್ಲಲ್ಲಿ ಬಿಳಿಮಲ್ಲಿಗೆಯಂತೆ ಕಂಗೊಳಿಸುತ್ತಿದ್ದ ಸುವಾಸನಾಭರಿತವಾದ ‘ಕೊಡಸಿಗೆ’ ಹೂ ಆಕರ್ಷಿಸಿತು. ಇದನ್ನು ಕೊಡಗಾಸನ (Holarrhena Antidysenterica )ಎಂತಲೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಕುಟಜಾ ಎಂದು ಕರೆಯಲ್ಪಡುತ್ತದೆ.
ಬೇಸಗೆಯಲ್ಲಿ ಕಾಡುಗಳಲ್ಲಿ, ಬೇಲಿಗಳಲ್ಲಿ ಕಾಣಸಿಗುವ ಕೊಡಸಿಗೆ ಹೂ ತನ್ನ ವಿಶಿಷ್ಟ ಪರಿಮಳದಿಂದ ಗಮನ ಸೆಳೆಯುತ್ತದೆ. ಚಾರಣಕ್ಕೆ ಹೋಗಿ ಬರುವಾಗ ಏನಾದರೊಂದು ತಂಬುಳಿ ಮಾಡುವ ಎಲೆಗಳು-ಹೂಗಳು ಸಿಕ್ಕೇ ಸಿಗುತ್ತವೆ.
ಕೊಡಸಿಗೆ ಮರದ ತೊಗಟೆ, ಎಲೆ ಎಲ್ಲವೂ ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಉಪಯುಕ್ತ. ಸಾಮಾನ್ಯವಾಗಿ ಮನೆಗಳಲ್ಲಿ ‘ಕುಟಜಾರಿಷ್ಟ’ವನ್ನು ತಂದಿರಿಸಿಕೊಳ್ಳುತ್ತಾರೆ. ಅಜೀರ್ಣದಿಂದ ಬರುವ ಹೊಟ್ಟೆನೋವಿಗೆ ಇದು ಉತ್ತಮ ಔಷಧಿ.
ಅರಳಿದ ಕೊಡಸಿಗೆ ಹೂಗಳನ್ನು ಕಿತ್ತು (ಮೊಗ್ಗುಗಳನ್ನೂ ಸೇರಿಸಬಹುದು), ತೊಳೆದು, ಬಿಸಿಲಿನಲ್ಲಿ ಒಣಗಿಸಿಟ್ಟುಕೊಂಡರೆ ಬೇಕಾದಾಗ ರುಚಿಕರವಾದ ತಂಬುಳಿ ಮಾಡಿ ಉಣ್ಣಬಹುದು. ತಂಬುಳಿ ಮಾಡುವುದು ಬಲು ಸುಲಭ. ಅರ್ಧ ಹಿಡಿಯಷ್ಟು ಒಣಗಿದ ಹೂಗಳನ್ನು ತುಪ್ಪದಲ್ಲಿ ಹುರಿದು, ತುರಿದ ತೆಂಗಿನಕಾಯಿ ಒಂದು ಹಿಡಿ, ಒಂದು ಚಮಚ ಜೀರಿಗೆ, ಬೇಕಿದ್ದರೆ ಹಸಿರುಮೆಣಸು ಅಥವಾ ಕಾಳುಮೆಣಸು ಸೇರಿಸಿ ರುಬ್ಬಬೇಕು. ಇದಕ್ಕೆ 4 ಸೌಟು ಮಜ್ಜಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಸಾಸಿವೆ-ಕರಿಬೇವಿನ ಒಗ್ಗರಣೆ ಕೊಟ್ಟರಾಯಿತು. ಕೊಡಸಿಗೆ ತಂಬುಳಿಗೆ ಸ್ವಲ್ಪ ಒಗರು/ಕಹಿ ರುಚಿಯಿರುತ್ತದೆ. ಇದು ಬೇಡವೆನಿಸಿದರೆ ಒಂದು ಚಿಕ್ಕ ಚೂರು ಬೆಲ್ಲವನ್ನು ಸೇರಿಸಬಹುದು. ‘ಕೊಡಸಿಗೆ ಹೂವಿನ ತಂಬುಳಿ’ ಯು ಅನ್ನದೊಂದಿಗೆ ಉಣ್ಣಲು ಚೆನ್ನಾಗಿರುತ್ತದೆ.
ಹೆಚ್ಚು ಪ್ರಮಾಣದಲ್ಲಿ ಕೊಡಗಾಸನ ಹೂಗಳು ಲಭ್ಯವಿದ್ದರೆ, ಅವುಗಳನ್ನು ಉಪ್ಪು ಸೇರಿಸಿ ಒಣಗಿಸಿ ಶೇಖರಿಸಿಟ್ಟುಕೊಂಡು, ಬೇಕೆನಿಸಿದಾಗ, ಎಣ್ಣೆ ಅಥವಾ ತುಪ್ಪದಲ್ಲಿ ಕರಿದು, ಊಟಕ್ಕೆ ಸಂಡಿಗೆಯಂತೆಯೂ ಬಳಸಬಹುದು.
– ಹೇಮಮಾಲಾ.ಬಿ
ಹೌದು, ಇದು ಉಪಯುಕ್ತ ಸಲಹೆ. ಕೊಡಗಸನ ಅಡುಗೆಯಲ್ಲಿ ಬಳಸುವುದರೊಂದಿಗೆ ವಿಶಿಷ್ಟ ಮನೆಮದ್ದೂ ಆಗಿದೆ.ಅಜೀರ್ಣಕ್ಕೆ ಪ್ರಯೋಜನಕಾರಿ. ನಾವೂ ಅದನ್ನು ಶೇಖರಿಸಿಟ್ಟುಕೊಳ್ಳುತ್ತೇವೆ.ಹೇಮಾ ಹೇಳಿದಂತೆ ಒಣಗಿಸಿಟ್ಟ ಕೊಡಗಸನ ಹೂ ಎರಡು ವರ್ಷಕ್ಕೂ ಕೆಡುವುದಿಲ್ಲ.ಮಳೆಗಾಲದಲ್ಲಿ ತುಪ್ಪದ ಪಸೆ ಒಂದಿಷ್ಟು ಹಾಕಿ ಕರಿದರೆ [ ಇದು ೨ನಿಮಿಷದಲ್ಲಿ ಆಗುವ ಪಾಕ] ಊಟಕ್ಕೆ ನೆಂಜಿಕೊಳ್ಳಲು ಬಹು ಸೊಗಸು.
ವಿವರಣೆ ಚೆನ್ನಾಗಿದೆ.ನಮ್ಮ ಬಜಪೆಗುಡ್ಡೆಯಲ್ಲಿ ಹೋದಸಲ ಏಪ್ರಿಲ್ಗೆ ಹೋದಾಗ ಸ್ವಲ್ಪ ಸಿಕ್ಕಿತು,ಮತ್ತೆ ಅಮ್ಮನೂಸ್ವಲ್ಪ ಒಣಗಿಸಿ ತಂದು ಕೊಂಡರು. ಅದನ್ನು ತುಳುವಲ್ಲಿ ಕೊಡಂಚಿ ಹೂ ಅಂತಾರೆ.ಮಕ್ಕಳಿಗೆ ತಿನ್ನಿಸಲು ಕಷ್ಟ,!ಬೆಲ್ಲ ಹಾಕಿ ನೋಡುತ್ತೇನೆ