ಎಲ್ಲಿ ಮರೆಯಾದವು?
ಜೂನ್ ಜುಲೈ ತಿಂಗಳು ಇನ್ನೆನು ಮಳೆ ಕರಾವಳಿಗೆ ಕಾಲಿಡುವ ಅವಧಿ, ಭತ್ತದ ಗದ್ದೆಯನ್ನು ಹಸನು ಮಾಡಿ ಗೊಬ್ಬರ ಹಾಕಿ, ಬೀಜ ಬಿತ್ತನೆ ಮಾಡುವ ಸಮಯ. ಗದ್ದೆಗೆ ಇಳಿಯುವ ಕೂಲಿ ಆಳುಗಳಿಗೆ ಸಂಭ್ರಮದ ಕ್ಷಣ. ಸುಗ್ಗಿಗೆ ಸಂಗ್ರಹಿಸಿದ ಧಾನ್ಯವೆಲ್ಲ ಮುಗಿಯುತ್ತದೆ ಎನ್ನುವಷ್ಟರಲ್ಲಿಯೇ, ಮತ್ತೆ ಬೀಜಬಿತ್ತನೆಯಲ್ಲಿ ತೊಡಗುವ ಸಂಭ್ರಮ ಒಂದೆಡೆ ಆದರೆ ಬೀಜ ಬಿತ್ತನೆಯಾಗಿ, ಸಸಿ ನಾಟಿಯಾಗುವ ಕಾಲದವರೆಗೆ ಮನೆಯಲ್ಲಿ ಸಾರಿನ ಚಿಂತೆ ಇಲ್ಲ ಎಂಬುದು ಹೆಂಗಳೆಯರ ಬಯಕೆ. ಈ ಹಿಂದೆ ಗುಳ್ಯ ಎಂಬುದು ಮೃದ್ವಂಗಿ ಜಾತಿಗೆ ಸೇರಿದ್ದು, ತನ್ನ ವರ್ಗಕ್ಕೆ ಸೇರಿದ ಇತರ ಜೀವಿಗಳಂತೆ ಈ ಜೀವಿ ತನ್ನ ಮೃದು ದೇಹದ ಸುತ್ತ ವೈರಿಯ ರಕ್ಷಣೆಗೋ ಎಂಬಂತೆ ಗಟ್ಟಿಯಾದ ಹೊರಕವಚವನ್ನು ಹೊಂದಿರುತ್ತದೆ.
ಜೂನ್ ತಿಂಗಳ ಆರಂಭದಲ್ಲಿ ಮೊದಲ ಮಳೆಯಾಯಿತು ಎಂದ ಕೂಡಲೇ ಮನೆಯಲ್ಲಿರು ಮಕ್ಕಳು ಹೆಂಗಸರಾದಿಯಾಗಿ ಗದ್ದೆಯ ಬಯಲಿಗೆ ಇಳಿಯುತ್ತಿದ್ದರು, ಕಾರಣ ಎಲ್ಲೆಂದರಲ್ಲಿ ಅದರಲ್ಲು ಕೆರೆಯ ಭಾಗದಲ್ಲಿ ಸ್ವಲ್ಪ ಜಾಸ್ತಿಯಾಗಿಯೇ ದೊರೆಯುವ ಗುಳ್ಯವನ್ನು ಮಡಿಲು ಅಥವಾ ಕೈಯಲ್ಲಿರು ಚೀಲದಲ್ಲಿ ತುಂಬಿಸಿಕೊಂಡು ಬರಲು. ಕೂಲಿ ಆಳುಗಳು ಸಸಿ ಕೀಳಲು ಅಥವಾ ನೇಡಲು ಹೋಗುವಾಗಲು ಒಂದೊಂದು ಚೀಲವನ್ನು ಸೊಂಟಕ್ಕೆ ಸಿಕ್ಕಿಸಿಕೊಂಡೆ ಹೋಗುತ್ತಿದ್ದರು ಕಾರಣ ಸಸಿಯ ಬುಡದಲ್ಲಿ ಅಥವಾ ಕೆಸರಲ್ಲಿ ಅವಿತಿದ್ದ ಗುಳ್ಯವನ್ನು ತುಂಬಿಸಿಕೊಳ್ಳಲು. ಇವರೆಲ್ಲ ದಿನದ ಕೆಲಸವ ಮುಗಿಸಿ ಅಕ್ಕಿ ಪಡೆಯಲು ಯಜಮಾನನ ಮನೆಗೆ ಬರುವಾಗ ಆ ಮನೆಯ ಮಕ್ಕಳೆಲ್ಲರ ಕಣ್ಣು ಸೊಂಟಕ್ಕೆ ಕಟ್ಟಿದ ಗುಳ್ಯದ ಮೇಲೆಯೇ ಇರುತಿತ್ತು.
ಇಷ್ಟು ದಿನ ಪಾದದವರೆಗಿನ ನೀರಲ್ಲಿ ಇಳಿದಿದ್ದ ಮಕ್ಕಳು, ಸೊಂಟದವರೆಗಿನ ನೀರಿರು ಕೆರೆ ಹೊಂಡಗಳಿಗೆ ಹೋಗಿ ಗುಳ್ಯ ಸಂಗ್ರಹಿಸುತ್ತಿದ್ದರು. ಇಲ್ಲೆಲ್ಲ ಗುಳ್ಯ ಸಂಗ್ರಹಿಸುವ ಜಾಗ ಕಣ್ಣಿಗೆ ಕಾಣುತ್ತಿರಲಿಲ್ಲ, ಅದಕ್ಕೆಂದೆ ವಿಶೇಷ ತರಭೇತಿ ಪಡೆದಿದ್ದಾರೋ ಏನೋ ಎಂಬಂತೆ ಹೆಂಗಸರು ತಮ್ಮ ಕಾಲಿನ ಹೆಬ್ಬೆರಳುಗಳ ಮೂಲಕವೇ ‘ಗುಳ್ಯ’ ಇರುವ ಜಾಗವನ್ನು ಪತ್ತೆ ಹಚ್ಚಿ, ಕಾಲಿನಿಂದಲೇ ತೆಗೆದು ಮಡಿಲಿಗೆ ಅಥವಾ ಸೊಂಟಕ್ಕೆ ಕಟ್ಟಿದ ಚೀಲಕ್ಕೆ ತುಂಬಿಸಿಕೊಳ್ಳುತ್ತಿದ್ದರು. ಗುಳ್ಯವನ್ನು ಆಯ್ದು ತಂದು, ನೀರು ತುಂಬಿರುವ ದೊಡ್ಡ ಪಾತ್ರೆಯಲ್ಲಿ ಇಡುತ್ತಿದ್ದರು. ಕಾರಣ ಗುಳ್ಯದ ಆಹಾರ ಕೆಸರು, ಪಾಚಿ, ಕೊಳೆ ಇವುಗಳು ಅದರ ಚಿಪ್ಪಿನಲ್ಲಿ ಇರುವುದರಿಂದ ಅದು ಹೊರಗೆ ಹೋಗಲೇಂದು ಈ ವ್ಯವಸ್ಥೆ ಮಾಡಲಾಗುತಿತ್ತು. ಇದಾದ ಮೇಲಿನ ಇನ್ನೊಂದು ಪ್ರಯಾಸದ ಕೆಲಸವೆಂದರೆ ಚಿಪ್ಪಿನಿಂದ ಮಾಂಸವನ್ನು ಬೇರ್ಪಡಿಸುವುದು. ‘ಗುಳ್ಯದ’ ಕಡ್ಡಿಯನ್ನು ಮೀಟಿ ಅಥವಾ ಕಲ್ಲಿನಿಂದ ಒಡೆದು ತೆಗೆಯಲಾಗುತಿತ್ತು. ಬಿತ್ತನೆ ಪ್ರಾರಂಭವಾಗಿ ನಾಟಿ ಆಗುವವರೆಗೆ ಸಾಮಾನ್ಯವಾಗಿ ಊಟಕ್ಕೆ ‘ಗುಳ್ಯೆ’ಯ ಸಾರು, ಇಡ್ಡಲಿ ಅಥವಾ ದೊಸೆಗೆ ‘ಗುಳ್ಯೆಯ ಸುಖ್ಕ ಇದ್ದೆ ಇರುತಿತ್ತು.
ಉದ್ಯೋಗದ ನಿಮಿತ್ತ ಉದ್ಯೋಗದಲಿದ್ದು, ಕೆಲವೊಮ್ಮೆ ಅಮ್ಮನರಮನೆಯ ಸವಿರುಚಿ ನೆನಪಾಗಿ ಊರಿಗೆ ಹೋದಾಗ ಅಮ್ಮನಿಗೆ ಹಳೆಯ ಸಂಪ್ರದಾಯದ ಅಡುಗೆ ಮಾಡಲು ಹೇಳಿದರೆ, ಅಮ್ಮನದು ಒಂದೇ ಉತ್ತರ ಈಗೆಲ್ಲಿ ಚಿಪ್ಪೆಕಲ್ಲು, ನಿಲೆಕಲ್ಲು, ಗುಳ್ಯ ಯಾವುದು ಸಿಗೋದೆ ಇಲ್ಲ,ನಿನಗೆ ಬೇಕಾದ ಬೆರಕೆ ಸಾರು ಎಲ್ಲಿ ಮಾಡೋದು? ಅಂತಾ ಈ ಮೃದ್ವಂಗಿಗಳನ್ನು ಬಸಳೆ ಸೊಪ್ಪು, ಬದನೆ ಜೊತೆಗೆ ಬೆರಕೆ ಹಾಕಿದರಂತು ಅದರ ಪರಿಮಳ ಊರಿನ ಕೆನೆಯ ಬೀದಿಯವರೆಗು ತಲುಪಿ, ಆಸ್ವದಿಸಿದವರ ಬಾಯಲ್ಲಿ ನೀರು ಬರುತಿತ್ತು. ಚಿಕ್ಕವರಿರುವಾಗ ಗದ್ದೆಹಾಳೆಯ ಅಂಚಿನಲ್ಲಿ ಬಿಳಿಯ ಚಿಕ್ಕ ಚಿಕ್ಕ ಮೊಟ್ಟೆಯನ್ನಿಟ್ಟುಕೊಂಡು ಬೆಣ್ಣೆಉಂಡೆಯಂತೆ ಬಿದ್ದಿರುತಿದ್ದ ಹಾಗೂ ತಿಳಿಯಾದ ನೀರಿರುವಲ್ಲಿ ಸಾಲು ಸಾಲಾಗಿ ತೆವಳುತ್ತ ಪಹರೆ ಕಾಯುವ ಸೈನಿಕರಂತೆ ಸಾಗುತಿದ್ದ ಈ ಜೀವಿಗಳು ಎಲ್ಲಿ ಮರೆಯಾದವು?
ಗದ್ದೆಗಳಿಗೆ ಸುಡುಬೂದಿ, ಕೋಳಿಪಿಕ್ಕಿ, ಕೊಟ್ಟಿಗೆ ಗೊಬ್ಬರ, ಸೊಪ್ಪು, ತರಗೆಲೆ(ಒಣಗಿದ ಎಲೆ) ಹಾಕಿ ಸಂಪ್ರದಾಯಿಕವಾಗಿ ಬೆಳೆ ತೆಗೆಯುತ್ತಿದ್ದ ಕಾಲದವರೆಗೆ ಪ್ರಕೃತಿಯಲ್ಲಿರುವ ಕ್ರೀಮಿ-ಕೀಟ, ಪ್ರಾಣಿ-ಪಕ್ಷಿ ಸಂಕುಲಗಳು ಸಮತೋಲನದಲ್ಲಿದ್ದವು. ಪರಿಸರದ ಬಗೆಗಿನ ಕಾಳಜಿ ಹಳೆಯ ತಲೆಮಾರಿನ ಜನರಲ್ಲಿತ್ತು, ಆ ಅರಿವು ನಮ್ಮಲ್ಲಿ ಇರದೇ ಇರುವುದು ಸ್ಪರ್ಧಾತ್ಮಕ ಯುಗದಲ್ಲಿ ಜೀವಿಸುತ್ತಿರುವ ನಾವುಗಳು ನಾಚೀಕೆ ಪಡುವಂತಾಗಿದೆ. ಕೈಗಾರೀಕರಣ ,ನಗರೀಕರಣ, ಆಧುನಿಕರಣದ ಭರಾಟೆಯಲ್ಲಿ ಸಸ್ಯ-ಪ್ರಾಣಿ ಸಂಕುಲವನ್ನು ನಾಶ ಮಾಡಿದಲ್ಲದೇ ಕೃಷಿ ಭೂಮಿಯನ್ನು ನಿರ್ನಾಮ ಮಾಡುತ್ತಿದ್ದೇವೆ. ಅಳಿದುಳಿದ ಸಾಗುವಳಿ ಭೂಮಿಗೆ ರಾಸಾಯನಿಕ ಗೊಬ್ಬರ ಬಳಸಿ ಇಳುವರಿ ಕಡಿಮೆಯಾಗುವುದರ ಜೊತೆಗೆ ಫಲವತ್ತತೆಯ ನಾಶವಾಗಿ ಒಕ್ಕಲುತನ ಮಾಯವಾಗುತ್ತ ಬಂತು. ಗದ್ದೆಗಳು ಸೈಟುಗಳಾದವು, ಕೊಟ್ಟಿಗೆಗಳು ಬಾಡಿಗೆ ಮನೆಗಳಾದವು, ಅಳ್ಳ, ಸೋಲಿಗೆ ,ಲೀಟರ ಲೆಕ್ಕದಲ್ಲಿ ಮನೆಯ ಆಸು ಪಾಸಿನಲ್ಲೆ ಸೀಗುವ ಹಾಲು ಉಪಯೋಗಿಸುತ್ತಿದ್ದ ಜನ ಪ್ಯಾಕೆಟ್ ಹಾಲಿನ ದಾಸರಾದರು.
,
– ರೇಷ್ಮಾ ಉಮೇಶ ಭಟ್ಕಳ
ಲೇಖನ ಉತ್ತಮವಾಗಿ ಮೂಡಿ ಬಂದಿದೆ