ಹೋಂ  ನರ್ಸ್  ವೃತ್ತಿ; ಬದುಕು-ಬವಣೆ

Share Button
  Krishnaveni K
ಸೀತಾಳ ತಾಯಿ ಕಾಯಿಲೆಯಿಂದ ಮಲಗಿದಲ್ಲೇ ಆಗಿ  ತಿಂಗಳಾಗಿತ್ತು.  ಎದ್ದು ಕೂರಲೂ ಶಕ್ತಿ ಇಲ್ಲದ ಆ ವೃದ್ಧ ಜೀವಕ್ಕೆ  ಮಲಗಿದ ಕಡೆಯಲ್ಲೇ ಎಲ್ಲ ನೋಡಿಕೊಳ್ಳಬೇಕಾದ ಅವಸ್ಥೆ. ಆಕೆ  ಅಧ್ಯಾಪಕಿ. ಇದ್ದ ರಜಾ ಖಾಲಿ ಆಗಿತ್ತು. ತನ್ನ ಕಷ್ಟದ ಕಾಲದಲ್ಲಿ  ಕೈ ಹಿಡಿದು ತಾಯಿ   ಅವಲಂಬನೆ ಕೊಟ್ಟ ಕಾರಣದಿಂದ ಆಕೆ ಶಾಲಾ ಶಿಕ್ಷಕಿಯಾಗಿ ಆರ್ಥಿಕವಾಗಿ ಸ್ವತಂತ್ರವಾಗಿ ಬದುಕುವ ಹಾಗಾಗಿದ್ದು. ಇದ್ದೊಬ್ಬ ಅಣ್ಣ ತಿರುಗಿಯೂ ನೋಡದವ.ತನಗೆ ರಜೆ ಇಲ್ಲ; ಶಾಲೆಗೆ ಹೋಗಲೇಬೇಕು. ಹಾಗೆ ಹೋದಲ್ಲಿ  ಅಮ್ಮನ ನಿಗಾ,  ಹೊತ್ತು ಹೊತ್ತಿಗೆ  ಆಹಾರ , ಆರೈಕೆ , ಸ್ವಚ್ಚತೆ  ಮಾಡಲು ಯಾರು ಎಂಬ   ಕೊರಗು.  ಅದಕ್ಕೆ ಉತ್ತರವಾಗಿ ದೊರೆತಿದ್ದು   ನೀತಾ ಎಂಬ ಹೋಂ ನರ್ಸ್. ವಾರದ ತನಕ ಮನೆಯಲ್ಲಿದ್ದು  ಅಮ್ಮನ ಆರೈಕೆ ಹೇಗೆ ಮಾಡುತ್ತಾಳೆ ಎಂಬುದನ್ನು ಗಮನಿಸಿ ನಂತರ ನೆಮ್ಮದಿಯಾಗಿ ಕೆಲಸಕ್ಕೆ ಹೋಗಿದ್ದಳು. ರಾತ್ರಿ   ನಿದ್ದೆ ಕೆಟ್ಟು ಎಚ್ಚರವಾಗಿದ್ದು ನೋಡಿಕೊಳ್ಳುವುದು, ಹಗಲೂ ವಿಶ್ರಾಂತಿ ರಹಿತ ದುಡಿತ,  ಅದರ ಜೊತೆಗೆ ಕುಸಿದ ಮಾನಸಿಕ ನೆಮ್ಮದಿ ಎಲ್ಲದರಿಂದ ಬಿಡುಗಡೆಯಾಗಿತ್ತು.
.
ವಿನಾಯಕನಿಗೆ ತನ್ನ  ವೃದ್ಧ ತಂದೆಯ ಅನಾರೋಗ್ಯ  ಅತೀವ ತೊಂದರೆ ಕೊಟ್ಟಿತ್ತು. ಇದ್ದ ದುಡ್ಡೆಲ್ಲ ಸುರಿದು ಮಗನಿಗೆ ಓದಿಸಿದ್ದ ಅವರು   ಮಗನ ಜೊತೆ ನೆಮ್ಮದಿಯಾಗಿದ್ದರು. ಇದ್ದಕ್ಕಿದ್ದ ಹಾಗೆ  ಆದ ಪೆರಾಲಿಸಿಸ್ ಸ್ಟ್ರೋಕ್  ಹಾಸಿಗೆ   ಹಿಡಿಸಿತ್ತು. ಅವರ ಆರೈಕೆ, ಆಹಾರ, ಶುಚಿತ್ವ  ಮನೆಯಲ್ಲಿದ್ದಷ್ಟು ಕಾಲ ಮಹೇಶ ಮಾಡುತ್ತಿದ್ದ. ಆದರೆ ಆತ ಉದ್ಯೋಗಕ್ಕೆ ಹೋದಾಗ ಅಪ್ಪನ ನಿಗಾ ನೋಡಲು  ನೇಮಿಸಿದ್ದು ಕೆಲಸದವರನ್ನು. ಕೇಳಿದ ಸಂಬಳ ಕೊಟ್ಟರೂ  ತಾನು ಮನೆಗೆ ಹಿಂದಿರುಗುವ ಹೊತ್ತಿಗೆ   ಅಪ್ಪ  ಮೈಯೆಲ್ಲ  ಗಲೀಜು ಮೆತ್ತಿಕೊಂಡು, ದುರ್ವಾಸನೆಯ ಮಧ್ಯೆ  ಮಲಗಿರುತ್ತಿದ್ದರು. ಆಹಾರ ಅವರ ತನಕ  ಬರುತ್ತಿಲ್ಲವೆಂಬ ಗಾಢ ಸಂದೇಹ  ಸತ್ಯವಾದಾಗ  ವಿನಾಯಕನಿಗೆ ವರವಾಗಿ ದೊರೆತದ್ದು ಹೋಂ ನರ್ಸ್.  ಅಪ್ಪನ  ಆಹಾರ, ಸ್ವಚ್ಚತೆ, ನೋಡಿಕೊಳ್ಳುತ್ತ  ಅವರ ಏಕಾಂಗಿತನ ಹೋಗಲಾಡಿಸಿದ್ದು ಕಂಡ ಅವನು   ಅವರನ್ನು ಒದಗಿಸಿ ಕೊಟ್ಟ ಸಂಸ್ಥೆಗೆ  ಅಭಾರಿಯಾಗಿದ್ದ.
 .
ಮನೆಯ ಹಿರಿಯ ಜೀವವಾಗಿದ್ದ ಅತ್ತೆ  ಮಲಗಿದ ಸ್ಥಿತಿಗೆ ಇಳಿದಾಗ ಲೀಲಾ  ಹಗಲಿರುಳೂ   ದುಡಿದು ಹೈರಾಣಾಗಿದ್ದಳು. ಮನೆಯ ಇತರ ಸದಸ್ಯರ   ಆಹಾರ , ಉಸ್ತುವಾರಿ, ಮನೆಯ ದೈನಂದಿನ ಕೆಲಸ ಕಾರ್ಯದ ಜೊತೆಗೇ  ಕಾಯಿಲೆಯಿಂದ ಮೇಲೇಳಲಾಗದೆ ಅಸಹಾಯಕವಾಗಿ ಕುಸಿದ ಅತ್ತೆಯನ್ನು ಎಳೆಮಗುವಿನ ಪರಿ ಆರೈಕೆ ಮಾಡಬೇಕು. ಏಳಲು ಪ್ರಯತ್ನಿಸಿ ಬಿದ್ದು ಬಿಡುವ ಅವರ ಬಳಿ  ಸದಾ ಕಾವಲಿರಬೇಕಾದ  ಅಗತ್ಯ. ಅಲ್ಲದೆ  ನಿತ್ಯ ನಿತ್ಯ ಅವರನ್ನು ಕಾಣಲು ಬರುವ ಬಂಧುಗಳ ಊಟ, ಉಪಚಾರ ಕೊರತೆ ಕಾಣದ ರೀತಿ ನಡೆಸಬೇಕು. ರಾತ್ರೆ  ನಿದ್ದೆ ಇಲ್ಲ; ಹಗಲು ವಿರಾಮವಿಲ್ಲದ  ಜೀವನ. ಸೋತು ಸುಣ್ಣವಾದ ಪತ್ನಿಯ  ಸ್ಥಿತಿ ಕಂಡ ಆಕೆಯ ಪತಿ  ಕಾಯಿಲೆಯ  ತಾಯಿಯ ಆರೈಕೆಗಾಗಿ ಗೊತ್ತು ಮಾಡಿದ್ದು  ಹೋಂ ನರ್ಸ್ ನ್ನು. ಆಕೆ ಬಂದ ಮೇಲೆ  ಲೀಲಾ ತುಸು  ನಿರಾಳವಾಗಿದ್ದಂತು ಸತ್ಯ.
 ,
ಕಾಯಿಲೆ ಯಾರಿಗೆ ಯಾವಾಗ ಬರಬಹುದು, ಅದು ಯಾವ ಪರಿಯಲ್ಲಿ ಜೀವವನ್ನು ಇನ್ನಿಲ್ಲದ ಹಾಗೆ ಕಾಡಬಹುದು ಎಂದು  ಮೊದಲೇ ತಿಳಿಯದು. ಬಂದ ಮೇಲೆ ರೋಗಿಯ ಸ್ಥಿತಿ ಯಾವ ಮಟ್ಟಕ್ಕಿಳಿಯಬಹುದು ಎಂದು ಕಂಡವರಿಲ್ಲ. ಹಾಸಿಗೆಯಿಂದ ಮೇಲೇಳಲಾಗದ  ರೋಗಿಗೆ  ಜಲಮಲ ವಿಸರ್ಜನೆ  ಮಲಗಿದ ಕಡೆ ಆಗುವುದು   ಸಹಜ. ರೋಗಿಯ ಕೈಲಿ ದುಡ್ಡು, ಶಕ್ತಿ  ಎರಡೂ  ಇದ್ದಾಗ ಮುತ್ತಿಕೊಳ್ಳುವ ಬಂಧುವರ್ಗ   ಅವರು  ಮಲಗಿದಲ್ಲೇ ಆಗಿಹೋದರೆ ಅತ್ತ ಸುಳಿಯುವುದಿಲ್ಲ.ಕ್ರಮೇಣ   ನಿತ್ಯ ನಿತ್ಯದ  ಈ  ಚಾಕರಿ ಅನಿವಾರ್ಯವಾದಾಗ ತಿರುಗಿ ಕೂಡಾ ನೋಡದೆ ಇರುವ ಮಕ್ಕಳು ಸಾಕಷ್ಟು ಕಾಣಬಹುದು. ಮಲಗಿದ ರೋಗಿ  ತೀರದ ಸಹಾಯಕತೆಯಿಂದಾಗಿ ಈ ಎಲ್ಲ  ಸ್ವಚ್ಚತೆ ಅನ್ಯರ ಕೈಲಿ ಮಾಡಿಸಿಕೊಳ್ಳುವುದೇ ವಿನಾ  ಶಾರೀರಿಕ ಶಕ್ತಿ ಇದ್ದು ಅಲ್ಲ. ಕ್ರಮೇಣ  ಮನೆಯವರ  ಅನಾಸ್ಥೆಯನ್ನು ಅನುಭವಿಸಿ ಕಣ್ಣೀರಿಳಿಸಬಹುದು. ತಿಂದ ಆಹಾರ ದಕ್ಕದೆ ಸೋತು ಸೊರಗುವ ಪರಿಯಲ್ಲಿ ಕಾಯಿಲೆ ಹಿಂಡಿ ಹಿಪ್ಪೆ ಮಾಡಬಹುದು. ಮಲಗಿದ  ಹಿರಿಯರ  ಹೆಸರಿನಲ್ಲಿ ಸೊತ್ತು ಇರುವುದೇ ಆದಲ್ಲಿ   ಅದನ್ನು ಪಡೆದುಕೊಳ್ಳುವ ಉತ್ಸಾಹ , ಹುಮ್ಮಸ್ಸು  ಏರುತ್ತದೇ ಹೊರತು ದಿನಕ್ಕೊಮ್ಮೆ  ಅವರ ಬಳಿ ಕೂತು  ಸಾಂತ್ವನ ಕೊಡುವ  ಮಾನವೀಯತೆ  ಬಹುತೇಕರಲ್ಲಿ ಕಾಣದು. ಹಾಗೆಂದು  ಎಲ್ಲರೂ ಹಾಗೆ ಎನ್ನಲಾಗುವುದಿಲ್ಲ. ನಿರಂತರ  ಆರೈಕೆ,  ಸ್ವಚ್ಚತೆ ಮಾಡಿ ಹಿರಿಯರಿಗೆ ಬದುಕು ಅಸಹನೀಯವಾಗದ ಪರಿಯಲ್ಲಿ  ಪ್ರೀತಿ, ವಿಶ್ವಾಸದಿಂದ  ಕೊನೆಯುಸಿರ ತನಕ ನಿಸ್ವಾರ್ಥತೆಯಿಂದ  ನೋಡಿ ಬದುಕು  ಭಾರವಾಗದ ಹಾಗೆ ನೋಡಿಕೊಳ್ಳುವ   ಕುಟುಂಬದವರೂ ಇಲ್ಲದೆ ಇಲ್ಲ.
.
home nurse
.
ಇಂಥ  ಪರಿಯಲ್ಲಿ ಹಾಸಿಗೆಯಲ್ಲಿ ಅಸಹಾಯಕರಾಗಿ  ಎರಡು ತಿಂಗಳ ಮಗುವಿನ ರೀತಿಯಲ್ಲಿ ಸಕಲ  ಚಾಕರಿಯನ್ನು ಕೂಡಾ ಮಾಡಬೇಕಾದ  ಕಠಿಣ ಸ್ಥಿತಿಯಲ್ಲಿ ಅಂಥ ವರಿಗೆ ವರದಾನವಾಗಿ ಲಭ್ಯವಾಗುವವರು ಹೋಂ ನರ್ಸ್ ಗಳು. ಅವರಿಗೆ ಅದೇ  ಕ್ಷೇತ್ರದಲ್ಲಿ ತರಬೇತಿ ನೀಡಲಾಗುತ್ತದೆ. ಜೊತೆಗೇ ಸ್ವಲ್ಪ ಮಟ್ಟಿಗೆ ಫಿಸಿಯೋಥೆರಪಿ ಕೂಡಾ.  ಸಾಧಾರಣವಾಗಿ  ಹೀಗೆ  ಕೈಕಾಲಿನ ಬಲ ಕಳೆದುಕೊಂಡು ಹಾಸಿಗೆ ಹಿಡಿದ ರೋಗಿಗಳಿಗೆ  ತಾಳ್ಮೆ ಕಡಿಮೆ, ಅಲ್ಲದೆ  ಮನೆಯವರು ತಮ್ಮನ್ನೆಲ್ಲಿ ಕಡೆಗಣಿಸುತ್ತಾರೋ ಎನ್ನುವ ಭೀತಿ. ಇದು  ಸಿಟ್ಟಿನ ರೂಪದಲ್ಲಿ  ಹೊರಹಾಕುವುದು  ಕಾಣಬಹುದು. ಇಂಥ ಹೋಂ ನರ್ಸ್ ಗಳಿಗೆ  ರೋಗಿಯ ಶಾರೀರಿಕ, ಮಾನಸಿಕ ಪರಿಸ್ಥಿತಿಯ ಪೂರ್ಣ ಅರಿವು ಇರುವ ಕಾರಣ ಅವರು ಅತೀವ ತಾಳ್ಮೆ, ಸಹನೆಯಿಂದ ವರ್ತಿಸಿ  ಅವರನ್ನುಉಪಚರಿಸುವುದು ಗಮನಿಸಬಹುದು.  ಹಗಲು, ಇರುಳು ಎನ್ನುವ ಭೇದವಿಲ್ಲದೆ ಇಪ್ಪತ್ತನಾಲ್ಕು ಗಂಟೆಗಳ ಪೂರ್ತಿ ಕಾಯಿಲೆಯವರ  ಕೋಣೆಯಲ್ಲಿ, ಅವರ ಜೊತೆಗೇ  ಇರಬೇಕು ಕೂಡಾ. ಇರುತ್ತಾರೆ. ಹೋಂ ನರ್ಸ್ ಗಳಿಗೆ   ಟ್ರೈನಿಂಗ್ ಕೊಟ್ಟು  ಅವರನ್ನು  ಕಾಯಿಲೆಯವರ  ಆರೈಕೆಗೆ ಸಜ್ಜುಗೊಳಿಸುವಾಗ  ಮೊದಲ ಆದ್ಯತೆ  ತಾಳ್ಮೆ, ಸಹನೆ ಹಾಗೂ  ಪ್ರಾಮಾಣಿಕತೆ ಅಲ್ಲದೆ  ಮುಖ್ಯವಾಗಿ ಸೇವಾ ಮನೋಭಾವ.ಯುವತಿಯರಿಂದ ಹಿಡಿದು ಮಧ್ಯವಯಸ್ಸಿನವರ ತನಕ   ಆ ಮಾಡಿ  ಸೂಕ್ತ ತರಬೇತಿ ನೀಡುತ್ತಾರೆ. ಇಲ್ಲಿ ವಿದ್ಯಾರ್ಹತೆಗೆ   ಪ್ರಾಧಾನ್ಯತೆ ಕಮ್ಮಿ ಎನ್ನಬಹುದು.  ಏಕೆಂದರೆ   ಅವರ ಉದ್ಯೋಗವೇ  ರೋಗಿಗಳ   ಚಾಕರಿ, ಅನುಪಾನ.  ಅಲಂಕಾರ,   ಕೂದಲ   ಸಿಂಗಾರ,  ನಾನಾ  ಮಾದರಿಯ  ಫ್ಯಾಷನೇಬಲ್ ಉಡುಪು ಧಾರಣೆ,  ಆಹಾರ, ವಿಹಾರ,  ಮನರಂಜನೆಯೇ ಪ್ರಾಮುಖ್ಯವಾಗಿ  ಬದುಕು  ಅನುಭವಿಸುವವರು  ಇಲ್ಲಿ  ಉಪಯೋಗವಿಲ್ಲ. ವಾರವಿಡೀ ರಜಾ ಇಲ್ಲದೆ ಸೇವೆ ಮಾಡುವ ಇವರು  ಒಟ್ಟಿಗೆ ಆ ರಜೆಗಳನ್ನು  ತೆಗೆದುಕೊಳ್ಳಬಹುದು. ವೃದ್ಧರು, ಕಾಯಿಲೆಯವರ ಜೊತೆಗೆ ಇರಬೇಕಾದ ಹೋಂ ನರ್ಸ್  ಇರುವ ಜಾಗ ಸಿಟಿಯೇ ಆಗಿರದು. ಹಳ್ಳಿಯ ಮೂಲೆಯಲ್ಲೂ ದುಡಿಯಬೇಕಾಗುತ್ತದೆ. ಮನರಂಜನೆಗೆ ಅವಕಾಶ ಕಮ್ಮಿ. ಮೂರು ತಿಂಗಳ ಕಾಲದ ಅವಧಿಯಲ್ಲಿ  ಮನೆಯವರಿಗೆ ಹಿಡಿಸಿದ್ದೇ ಆದರೆ ಮುಂದುವರೆಸಬಹುದು; ಬೇಡವಾದರೆ ಬದಲಾಯಿಸಬಹುದು.
 
 .
ರೆಡ್ ಕ್ರಾಸ್ ಆಗಲೀ  ಇತರ ಖಾಸಗಿ ಸಂಸ್ಥೆಗಳಾಗಲೀ  ತಮ್ಮಲ್ಲಿನ ನರ್ಸ್ ಗಳನ್ನು ಬೇಡಿಕೆ ಬಂದೆಡೆ ಕಳಿಸುವಾಗ ಅನೇಕ  ನಿಬಂಧನೆಗಳನ್ನು ಹಾಕುವುದಿದೆ.   ಮಹಿಳಾ ರೋಗಿಗಳಾದರೆ   ತಮ್ಮಲ್ಲಿನ  ಲೇಡಿ ನರ್ಸ್ ನ್ನು ಕರೆದೊಯ್ಯುವಾಗ   ಆ ಮನೆಯ ಮಹಿಳೆ ಜೊತೆಗೆ ಇರಬೇಕು. ಕಡ್ಡಾಯವಾಗಿ   ಅಂಥ ಮನೆಗಳಲ್ಲಿ ಮಹಿಳೆಯರು ವಾಸ್ತವ್ಯವಿರಬೇಕು.  ಆಹಾರ, ಮನೆಯವರು ಸೇವಿಸುವುದನ್ನೇ  ಕೊಡತಕ್ಕದ್ದು. ದೈಹಿಕ, ಮಾನಸಿಕ  ದೌರ್ಜನ್ಯ ಸಲ್ಲದು.ಕಾಯಿಲೆಯವರ ಜೊತೆಗೆ ಹಗಲು, ರಾತ್ರೆ  ನರ್ಸ್  ಇರತಕ್ಕದ್ದು.ಎಲ್ಲಕ್ಕೂ ಮಿಗಿಲಾಗಿ ರೋಗಿಯ ಸೇವೆ ಹೊರತಾಗಿ ಇತರ ಯಾವುದೇ ಚಾಕರಿ  ಆಕೆಯ ಕೈಲಿ ಮಾಡಿಸಕೂಡದು.ಅದಲ್ಲದೆ   ಆಕೆಯ ಸಂಬಳ  ಆಕೆಯ ಕೈಲಿ ಕೊಡುವಂತಿಲ್ಲ. ಅದು ಸಂಸ್ಥೆಯ ಮೂಲಕ  ಸಂದಾಯವಾಗುತ್ತದೆ.
 .
ಗರ್ಭಿಣಿ ಸ್ತ್ರೀಯರ ಆರೈಕೆ,  ಬಾಣಂತನಕ್ಕೆ   ಜನಸಿಗದೆ ಪರದಾಡುವ ವರಿಗೆ  ಆ ಕಾರ್ಯಕ್ಕೆ ಚೆನ್ನಾಗಿ ತರಬೇತಾದ ನರ್ಸ್ ಗಳು ದೊರೆಯುತ್ತಾರೆ.  ಆ ಸಂದರ್ಭದಲ್ಲಿ ಹಿರಿಯ ಮಹಿಳೆಯರು ಮನೆಯಲ್ಲಿ ಇಲ್ಲದೆ ಅತೀವ ತೊಂದರೆ ಅನುಭವಿಸುವವರಿಗೆ  ಇದು ವರದಾನವೇ ಸೈ. ಹಗಲು, ರಾತ್ರೆ  ಬಸುರಿಯ ಜೊತೆಗೆ ಉಳಿದುಕೊಳ್ಳಲು  ಹೊರಗಿನವರು   ಸಿಗುತ್ತಾರೆನ್ನುವ ಹಾಗಿಲ್ಲ. ಗರ್ಭಿಣಿಗೆ  ಆರೈಕೆ, ಮುಂದೆ ಹೆರಿಗೆಯ ಸಮಯದ  ಅನುಪಾನ,  ಬಾಣಂತಿಯ  ನಿಗಾ ,ಎಳೆ ಶಿಶುವಿನ ಮಸಾಜ್, ಎಣ್ಣೆಸ್ನಾನ ,  ಆಹಾರ ತಯಾರಿ ಎಲ್ಲ  ನೋಡಿಕೊಂಡು ಎಳೆ ಬಾಣಂತಿಗೆ ಅಗತ್ಯವಾದ ವಿಶ್ರಾಂತಿ  ಲಭ್ಯವಾಗುವಂತೆ   ಆರೈಕೆ ಮಾಡುತ್ತಾರೆ. ಸಾಮಾನ್ಯವಾಗಿ  ಗರ್ಭಿಣಿಯರ  ಆರೈಕೆ, ಬಾಣಂತನಕ್ಕೆ ಒದಗುವ ದಾದಿಯರು  ಹಿರಿಯ ಮಹಿಳೆಯರು.   ಸೂಕ್ತ ತರಬೇತಿ ನೀಡಿ ಅವರನ್ನು  ಬೇಡಿಕೆ ಬಂದೆಡೆ ಕಳುಹಿಸುತ್ತಾರೆ.  ಅದೆಷ್ಟು ಚೆನ್ನಾಗಿ ಇವರುಗಳು ಬಾಣಂತನ ನಡೆಸುತ್ತಾರೆಂದರೆ  ಮುಂದೆ ಅವರನ್ನು  ಬೀಳ್ಕೊಡುವಾಗ ಮನೆಯವರಿಗೆ  ಕಣ್ಣಲ್ಲಿ ನೀರು ಬರುವ ಮಟ್ಟಕ್ಕೆ ಅವರ ಸೇವೆ ಇರುತ್ತದೆ. ಹೊರಗಿನವರು ಮನೆಯಲ್ಲಿ ಶಿಶು , ಬಾಣಂತಿಯ   ಅನುಪಾನ  ಕಾಳಜಿಯಿಂದ  ನಡೆಸುವ ಇವರನ್ನು ಅತ್ತೆಯೋ, ಅಥವಾ ತಾಯಿ ಎಂದೇ ತಿಳಿದುಕೊಳ್ಳುವ ಪರಿಯಲ್ಲಿ  ಮನೆಯಲ್ಲಿ ಒಬ್ಬರಾಗಿರುತ್ತಾರೆ. .
.
ಹಲವಾರು ಕುಟುಂಬಗಳಲ್ಲಿ  ಊರಿನಲ್ಲಿ  ವೃದ್ಧ  ತಾಯ್ತಂದೆ ಮಾತ್ರಾ ಇರುವುದನ್ನು ಗಮನಿಸಬಹುದು. ಅಕಸ್ಮಾತ್  ಅವರಲ್ಲೊಬ್ಬರು ತೀರಿಕೊಂಡಾಗ  ವಿದೇಶದಲ್ಲಿ ವಾಸ್ತವ್ಯ ಹೂಡಿರುವ  ಮಕ್ಕಳಿಗೆ  ನೆರವಿಗೆ ಬರುವಲ್ಲಿ  ಹೋಂ ನರ್ಸ್ ಗಳಿಗೆ  ಮೊದಲ ಆದ್ಯತೆ. ಈ ಹಿರಿಯರ ಜೊತೆಗೆ   ಹಗಲಿರುಳು  ಸಂಗಾತಿಯಾಗಿ  ಅವರು ಇರುತ್ತಾರೆ. ಅವರ  ಸ್ವಭಾವ, ನಡವಳಿಕೆ  ಹಿಡಿಸದೆ ಹೋದಲ್ಲಿ  ಉತ್ತಮ  ನಡವಳಿಕೆಯ  ಸೇವಾ ಭಾವದ  ಬೇರೆ  ನರ್ಸ್ ನ್ನು ಕರೆತರಬಹುದು. ಒಂಟಿತನದಲ್ಲಿ ಬೇಯುವ ಬದಲಿಗೆ ಈ ವ್ಯವಸ್ಥೆಯನ್ನು ಹಿರಿಯ ಜೀವಗಳು ಒಪ್ಪಿ ಅಪ್ಪಿಕೊಳ್ಳಲೇ ಬೇಕಾಗುತ್ತದೆ.
.
Home nurse 2
 .
ಹೋಂ ನರ್ಸ್  ಆಗಿ ತರಬೇತಾಗುವವರ ಬಗ್ಗೆ ಹೇಳಬೇಕಾದರೆ  ಹೆಚ್ಚಿನ ವಿದ್ಯಾರ್ಹತೆ ಬೇಡದ  ಈ ಉದ್ಯೋಗ ಪ್ರಾಥಮಿಕ ವಿದ್ಯಾಭ್ಯಾಸವೂ ಪೂರ್ತಿಗೊಳಿಸದವರಿಗೂ  ಸ್ವಾಗತಿಸುತ್ತದೆ.  ತರಬೇತಿ,  ಜೊತೆಗೆ ಉಚಿತ  ವಸತಿಯ  ವ್ಯವಸ್ಥೆ ಹೆಚ್ಚಿನ ಕಡೆ ಒದಗಿಸುವ ಕಾರಣ  ಹೆಣ್ಣುಮಕ್ಕಳಿಗೆ   ಭದ್ರತೆ ಸಿಗುತ್ತದೆ.ಅವರ ವಿದ್ಯಾರ್ಹತೆಗೆ  ಸುಲಭವಾಗಿ ಈ ಉದ್ಯೋಗ ದೊರೆಯುವ ಕಾರಣ  ಅಲ್ಲದೆ  ಸಂಬಳ ಸರಿಸುಮಾರು ಐದಂಕಿ ದಾಟುವ  ಮೊತ್ತದಲ್ಲಿರುತ್ತದೆ. ಊಟ,ತಿಂಡಿ  ಎಲ್ಲಿ ಸೇವೆಗೆ ನಿಂತರೂ ಅಲ್ಲಿ ಉಚಿತ, ಅಲ್ಲದೆ ಮನೆಯವರು ತಿನ್ನುವ ಆಹಾರವನ್ನು ಅವರಿಗೆ ಕೊಡಬೇಕೇ ವಿನಾ ಭೇದ ಕೂಡದು. ಮನೆಯಲ್ಲಿ ಇರಬೇಕಾದ್ದರಿಂದ  ಹೊರಗಿನ ಖರ್ಚು ಇಲ್ಲ.  ಸಂಬಳದ ಮೊತ್ತ  ಆಕರ್ಷಕ.  ಹೊರಗಿಂದ ಕಾಣುವಾಗ ಎಲ್ಲ  ಚೆನ್ನಾಗಿದೆ;  ಆದರೆ  ಹಾಸಿಗೆ ಹಿಡಿದ ರೋಗಿಗಳು, ಅವರ ಮನೆಯವರು  ಕ್ರೂರ ಸ್ವಭಾವದವರಾದರೆ ಅಲ್ಲಿ ದಿನ ಕಳೆಯಲು ಕಷ್ಟ.  ರೋಗಿಯ ವರ್ತನೆ  ಯಾವ ಮಟ್ಟಕ್ಕೆ ಹೋಗಬಹುದು ಅನ್ನುವುದಕ್ಕೆ ಉದಾಹರಣೆ   ಕೊಟ್ಟಿದ್ದರೊಬ್ಬರು.  ರಾತ್ರೆ ನಿದ್ರೆ ತಡೆಯದೆ ಮಲಗಿದ ಬಡಪಾಯಿ  ಹುಡುಗಿಯ ಮೈಮೇಲೆ  ಆ ರೋಗಿ ಉಚ್ಚೆ ಮಾಡುವ  ವಿಕೃತಿ! ಹೊಟ್ಟೆಪಾಡಿಗೆ ಈ ಉದ್ಯೋಗಕ್ಕೆ ಬಂದ ಯುವತಿಯ ಮೈಮುಖ ಪೂರಾ ಮೂತ್ರಾಭಿಷೇಕ!  ಆಹಾರದಲ್ಲಿ ವಂಚನೆ, ಲೈಂಗಿಕವಾಗಿ ದುರ್ಬಳಕೆ ಮಾಡಲು ಹೊಂಚು ಹಾಕುವ   ಜನರು,   ಮನುಷ್ಯರೆಂದು  ಪರಿಗಣಿಸದಿರುವ  ಮನೆಯವರು, ಈ ಎಲ್ಲವನ್ನು  ಸಹಿಸಬೇಕಾಗು್ತ್ತದೆ  ತೀರಾ ಮಿತಿ ಮೀರುವ ತನಕ. ಅಲ್ಲದೆ ಇವರ ಸಂಬಳ  ಅವರ ಮುಂದಿನ ಜೀವನಕ್ಕಾಗಿ  ಕೂಡಿ ಹಾಕಲಾಗದೆ  ಮನೆಗೆ  ಕಳಿಸಬೇಕಾಗುತ್ತದೆ. ಸ್ವಂತಕ್ಕೆ ಅಲ್ಪ;  ಸಮಾಜಕ್ಕೆ  ಸರ್ವಸ್ವ  ಅಂದರೆ   ಹೀಗೆ ತಾನೆ?   ತೀರಾ  ಪ್ರಾಥಮಿಕ  ಶಾಲಾ ವಿದ್ಯಾಭ್ಯಾಸ  ಹೊಂದಿರುವ  ಯುವತಿಯರು  ಸಹಾ  ಈ ಕಾಯಕದಲ್ಲಿ  ಹಗಲಿರುಳು   ಏನೇ  ತೊಂದರೆಗಳಿದ್ದರೂ  ಮೂಕವಾಗಿ  ನುಂಗಿಕೊಂಡು    ಕರೆಬಂದ ಮನೆಗಳಲ್ಲಿ  ಸೇವೆಗೆ ನಿಲ್ಲುತ್ತಾರೆ.  ರಜೆ, ಮನರಂಜನೆ,  ವಿರಾಮ,  ಜೊತೆಗಾರರ ಒಡನಾಟ  ಊಹೆಗೆ  ನಿಲುಕದ್ದು.  ಎಲ್ಲರ ಸ್ವಭಾವವೂ  ಸರಳ, ನೇರ, ಸೇವಾ   ಮನೋಭಾವದ್ದು ಆಗಿರುತ್ತದೆ ಎನ್ನುವ ಹಾಗೆ  ಇಲ್ಲ ಎನ್ನುವುದೂ  ಮರೆಯಬಾರದು.
 .
ಅದೇನೇ ಇದ್ದರೂ   ಆಪತ್ತಿನ  ಸಮಯದಲ್ಲಿ   ಕಾಯಿಲೆಯವರ  ಆರೈಕೆಗೆ  ಲಭ್ಯವಿರುವ   ಹೋಂ   ನರ್ಸ್  ಗಳು  ಮನೆಯವರಿಗೆ  ಬಲವಾದ  ನೆರವು ನೀಡುತ್ತಾರೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.
.
 – ಕೃಷ್ಣವೇಣಿ ಕಿದೂರು
.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: