‘ಲಾಲುಗಂಧ’
ಮಹಿಳೆಯರ ಹಣೆಗೆ ಶೋಭೆ ಕೊಡುವ ಕುಂಕುಮವನ್ನು ಅರಸಿನ ಪುಡಿ ಮತ್ತು ಸುಣ್ಣವನ್ನು ಸೇರಿಸಿ ತಯಾರಿಸುತ್ತಿದ್ದ ಕಾಲವೊಂದಿತ್ತು. ಬೊಟ್ಟಿಡುವ ಮೊದಲು ಜೇನುಮೇಣವನ್ನು ಲೇಪಿಸಿ, ತೋರುಬೆರಳಿನಲ್ಲಿ ಕುಂಕುಮವನ್ನು ದುಂಡಾಕಾರದಲ್ಲಿ ತೆಗೆದುಕೊಂಡು ನಮ್ಮಜ್ಜಿ ಕುಂಕುಮವಿಡುತ್ತಿದ್ದರು. ಇದರ ಮುಂದುವರಿದ ಅವಿಷ್ಕಾರವಾಗಿ ದ್ರವರೂಪದ ‘ಲಾಲುಗಂಧ’ ಬಂತು.
ಅಪರೂಪಕ್ಕೆ ಎಲ್ಲಾದರು ಸಂಪ್ರದಾಯಸ್ಥರ ಮನೆಗಳಲ್ಲಿ ‘ಲಾಲುಗಂಧ’ ಈಗಲೂ ಕಾಣಲು ಸಿಗುತ್ತದೆ. ಲಾಲುಗಂಧದ ಬೊಟ್ಟು ಹಾಕುವವರಿಗೆ ಮಾತ್ರ ಅದರ ವಿಶಿಷ್ಟ ಪರಿಮಳ ಗೊತ್ತು. ಹಣೆಯಲ್ಲಿ ನಾಜೂಕಿನಿಂದ ವೃತ್ತಾಕಾರ ಮೂಡಿಸುವುದು ಜಾಣ್ಮೆಯ ಕೆಲಸ. ಮುಖ ತೊಳೆದುಕೊಂಡಾಗ ಅಥವಾ ಬೆವರಿದ್ದಾಗ ಬಿಂದಿ ಕದಡುವ ಸಮಸ್ಯೆ ಇದ್ದೇ ಇದೆ. ವ್ಯಾನಿಟಿ ಬ್ಯಾಗ್ ನಲ್ಲಿ ಲಾಲುಗಂಧದ ಬಾಟಲ್ ಒಯ್ಯುವವರು ಅಕಸ್ಮಾತ್ ಮುಚ್ಚಳ ಸರಿಯಾಗಿ ಹಾಕಿಲ್ಲದಿದ್ದಲ್ಲಿ ಅದು ಚೆಲ್ಲಿ ಸೃಷ್ಟಿಸುವ ರಾದ್ಧಾಂತವನ್ನೂ ನಿಭಾಯಿಸಬೇಕು.
ಅಪರೂಪಕ್ಕೆ ಕೆಲವರಿಗೆ ಇದು ಚರ್ಮಕ್ಕೆ ಅಲರ್ಜಿಯಾಗುವುದು ಇದೆ. ನಮ್ಮಜ್ಜಿ, ಯಾವುದೋ ಮರದ (ಹೆಸರು ನೆನಪಿಲ್ಲ) ತೊಗಟೆಯನ್ನು ನೀರಿನಲ್ಲಿ ಕುದಿಸಿ, ಕಾಯಿಸಿ, ಲಾಲುಗಂಧದ ಹದಕ್ಕೆ ತಂದು ಶೇಖರಿಸಿಟ್ಟು ಬಳಕೆ ಮಾಡುತ್ತಿದ್ದುದು ನೆನಪಿದೆ. ಇದಕ್ಕೆ ‘ಕುಳ’ ಎಂಬ ಹೆಸರಿತ್ತು.
ಇವೆಲ್ಲಾ ನೇಪಥ್ಯಕ್ಕೆ ಸರಿದ ವಿಚಾರಗಳು.ವಿವಿಧ ಬಣ್ಣದ ವಿಶಿಷ್ಟ ವಿನ್ಯಾಸಗಳ ಅಂಟಿಸುವ ಸ್ಟಿಕ್ಕರ್ ಬಿಂದಿಗಳು ಮಹಿಳೆಯರ ಹಣೆಯನ್ನು ಅಲಂಕರಿಸಲು ಆರಂಭಿಸಿ ದಶಕಗಳೇ ಸಂದುವು.
– ಹೇಮಮಾಲಾ.ಬಿ
ನನ್ನಮ್ಮ ಕೂಡ ಅದೇ ಕುಂಕುಮ ಉಪಯೋಗಿಸುತ್ತಿದ್ದರು.ಅಮ್ಮ ಸಾಕ್ಷಾತ್ ದೇವತೆ ಹಂಗೆ ಕಾಣ್ತಾರೆ
ಹೆಣ್ಣು ಮಕ್ಕಳಿಗೆ ಅತೀ ಮುಖ್ಯವಾದ ವಸ್ತು
ಲಾಲುಗಂಧದ ಜೊತೆ ನೂರು ನೆನಪುಗಳು ಸುತ್ತುವರಿದುವು.. ನೀವೆಂದಂತೆ, ಅಜ್ಜಿಯ ‘ಜೇನು ಮಣ’ ದ ದಬ್ಬಿಯೂ.. 🙂